ಸಾವಿರಾರು ವರ್ಷಗಳ ಮನುಕುಲದ ಇತಿಹಾಸವಿರುವ ಈ ದೇಶದಲ್ಲಿ ಅನೇಕ ಸಮುದಾಯಗಳು ಇಂದಿಗೂ ತಮ್ಮ ಪರಂಪರಾಗತ ಬದುಕಿನ ವ್ಯವಸ್ಥೆಯಲ್ಲಿಯೇ ಮುಂದುವರೆದಿರುವುದೊಂದು ವಿಶೇಷ. ಆದರೆ ಕಳೆದ ಒಂದೆರಡು ಶತಮಾನಗಳಲ್ಲಿ ಆದ ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳು ಬುಡಕಟ್ಟು ಬದುಕಿನ ಮೇಲೆ ಅಪಾರವಾದ ಪರಿಣಾಮವನ್ನು ಬೀರಿವೆ. ವಸಾಹತು ಸಂದರ್ಭದಲ್ಲಿ ಹೇಗೆ ಅರಣ್ಯಗಳು ವಾಣಿಜ್ಯ ಉದ್ದೇಶಗಳಿಗಾಗಿ ಬದಲಾದವು ಮತ್ತು ಅಂಥ ಆರ್ಥಿಕ ಬದಲಾವಣೆಗಳಿಂದ ಕಾಡನ್ನೇ ಅವಲಂಬಿಸಿ ಬದುಕುತ್ತಿದ್ದ ಸಮುದಾಯಗಳ ಮೇಲೆ ಆದ ಪರಿಣಾಮವೇನು ಎಂಬುದನ್ನು ಈ ಹಿಂದೆಯೇ ಕ್ವಚಿತ್ತಾಗಿ ಚರ್ಚಿಸಿದ್ದೇನೆ.

ಈ ಹಿನ್ನೆಲೆಯಲ್ಲಿಯೇ ಕುಣಬಿಯರ ಆರ್ಥಿಕ ಸ್ಥಿತ್ಯಂತರಗಳನ್ನು ನಾವು ಗಮನಿಸಬೇಕಾಗಿದೆ. ಕುಣಬಿಯರು ಶತಸತಮಾನಗಳಿಂದ ಅರಣ್ಯವನ್ನು ನಂಬಿ ಬದುಕಿದವರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಅರಣ್ಯಾಧಾರಿತ ಜೀವನದಲ್ಲಿ ಮೂರು ಹಂತಗಳನ್ನು ಗಮನಿಸಬಹುದು.

. ಆಹಾರ ಸಂಗ್ರಹಣೆ (Food Gathering)
೨. ಬೇಟೆ (Hunting)
೩. ಕುಮರಿ ಬೇಸಾಯ (Shifting cultivation)

ಒಂದಾನೊಂದು ಕಾಲಕ್ಕೆ ಅರಣ್ಯದಲ್ಲಿ ನೈಸರ್ಗಿಕವಾಗಿ ಸಿಗುವ ಗೆಡ್ಡೆ – ಗೆಣಸು, ಹಣ್ಣು – ಹಂಪಲು, ನಾರು – ಬೇರು, ಜೇನು – ಜಂತು ಇತ್ಯಾದಿಗಳನ್ನು ಮಾತ್ರ ಸಂಗ್ರಹಿಸಿ ಬದುಕು ಸಾಗಿಸಿದ ಸಮುದಾಯವಿದು. ಸಾವಿರಾರು ವರ್ಷಗಳ ಅಂತರದಲ್ಲಿ ಆಹಾರ ಸಂಗ್ರಹಣೆ ಜೊತೆಗೆ ಬೇಟೆಯೂ ಸೇರಿಕೊಂಡಿತು. ಬೇಟೆ ಅಂದರೆ ಅದೊಂದು ಉಪ ಜೀವನ ಪದ್ಧತಿ ಮಾತ್ರ. ಆಹಾರ ಸಂಗ್ರಹ ಲಭ್ಯವಿಲ್ಲದಿದ್ದಾಗ ಸಂಗ್ರಹಿಸಿದ ಆಹಾರ ಪದಾರ್ಥಗಳ ಕೊರತೆ ಬಿದ್ದಾಗ ಬೇಟೆ ಅನಿವಾರ್ಯವಾಗಿತ್ತು. ಕುಣಬಿಯರು ಇಂದು ಕೂಡ ಮಿತವಾದ ಬೇಟೆ ಪದ್ಧತಿಯನ್ನು ಅನುಸರಿಸುತ್ತಾರೆಯೇ ಹೊರತು ಬೇಟೆ ಅವರ ಅನಿವಾರ್ಯ ಜೀವನ ಕ್ರಮವಲ್ಲ. ಕಾಡಿನಲ್ಲಿ ಯಥೇಚ್ಛವಾಗಿ ಕಂಡುಬರುತ್ತಿದ್ದ ಪ್ರಾಣಿಗಳನ್ನು ಒಂದು ಕಾಲಕ್ಕೆ ಬೇಟೆಮಾಡಿ ಆಹಾರದ ಒಂದು ಭಾಗವಾಗಿ ಸೇವಿಸುತ್ತಿದ್ದರು.

ಕುಮರಿ ಬೇಸಾಯ

ಕಾಲಕಳೆದಂತೆ ಆಹಾರ ಸಂಗ್ರಹಣೆ ಮತ್ತು ಬೇಟೆಯ ಹಂತ ಸಡಿಲಗೊಂಡು ಕೃಷಿಯ ಕಡೆಗೆ ಗಮನ ಹೊರಳಿತು. ಅಂದರೆ ಕೃಷಿಯ ಅನ್ವೇಷಣೆ ಆರಂಭವಾಯಿತು. ಗಂಡಸು ಆಹಾರ ಸಂಗ್ರಹಕ್ಕಾಗಿ ಹಾಗೂ ಬೇಟೆಗಾಗಿ ಹೊರ ಹೋದಾಗ ಮಕ್ಕಳ ಪಾಲನೆಗಾಗಿ ಮನೆಯಲ್ಲಿರುತ್ತಿದ್ದ ಸ್ತ್ರೀ ತನ್ನ ಬಿಡುವಿನ ಕಾಲದಲ್ಲಿ ಕ್ರಿಯಾಶೀಲಳಾಗಿ ಕೃಷಿಯ ಅನ್ವೇಷಣೆಗೆ ಕಾರಣಳಾದಳು ಎಂಬುದು ಪ್ರಚಲಿತದಲ್ಲಿರುವ ವಾದ. ಅದು ಏನೇ ಇರಲಿ, ಬಹುಶಃ ಕೃಷಿ ಜಾರಿಗೆ ಬಂದ ಪ್ರಥಮದಲ್ಲಿ ಯಾವ ರೀತಿಯ ಪದ್ಧತಿ ಇತ್ತೋ ಅಂಥ ಪಾರಂಪರಿಕ ಪದ್ಧತಿ ಕುಣಬಿಯರಲ್ಲಿ ಈಗಲೂ ಜಾರಿಯಲ್ಲಿದೆ ಎಂಬುದೇ ಒಂದು ವಿಶೇಷ. ಅದೇ ‘ಕುಮರಿ ಬೇಸಾಯ’ ಅಥವಾ ‘ಕೆತ್ತು ಬೇಸಾಯ’ ಅಥವಾ ‘ಸ್ಥಳಾಂತರ ಕೃಷಿ’ (Shifting cultivation).

ಈ ಕುಮರಿ ಕೃಷಿ ಅಥವಾ ಕೆತ್ತು ಬೇಸಾಯ ಅತ್ಯಂತ ಪ್ರಾಚೀನ ಕಾಲದಿಂದ ಮನುಷ್ಯ ಅನುಸರಿಸಿಕೊಂಡು ಬಂದಿರುವ ಒಂದು ತಾಂತ್ರಿಕ ಪದ್ಧತಿ ಹಾಗೂ ಇಂದಿಗೂ ಒಂದು ವೈಜ್ಞಾನಿಕ ಪದ್ಧತಿ. ಈ ನೈಸರ್ಗಿಕ ಕೃಷಿ ಭೂಮಿಯ ಸವಕಳಿಯನ್ನು ತಪ್ಪಿಸುತ್ತದೆ. ಅರಣ್ಯ ನಾಶವನ್ನು ತಡೆಯುತ್ತದೆ. ಮನುಷ್ಯನ ಮಣ್ಣಿನ ಮೋಹಕ್ಕೆ ಕಡಿವಾಣ ಹಾಕುತ್ತದೆ. ನಾನು, ನನ್ನದು ಮತ್ತು ನನ್ನ ಆಸ್ತಿ ಎಂಬ ಒಡೆತನದ ಅಹಂಕಾರಕ್ಕೆ ಆಸ್ಪದವಿಲ್ಲದ ಪದ್ಧತಿ ಇದು. ಮನುಷ್ಯನ ಅಂದಂದಿನ, ಹೆಚ್ಚೆಂದರೆ ಆಯಾ ವರ್ಷದ ಬೇಡಿಕೆಯನ್ನು ಮಾತ್ರ ಪೂರೈಸಬಲ್ಲ ಈ ಪದ್ಧತಿ ಆಸೆಬುರುಕತನಕ್ಕೆ ಪ್ರೇರೇಪಿಸುವುದಿಲ್ಲ.

ನೇಗಿಲು-ನೊಗ-ಎತ್ತುಗಳು ಮುಂತಾದ ಭೂಮಾಲೀಕತ್ವದ ಸೊಂಕಿನಿಂದ ಇಂದಿಗೂ ದೂರವಿರುವ ಕುಣಬಿಗಳು ಕೇವಲ ಗುದ್ದಲಿ ಅಥವಾ ಪಿಕಾಸಿಯ ಸಹಾಯದಿಂದ ತಮ್ಮ ಅಗತ್ಯಕ್ಕೆ ತಕ್ಕಷ್ಟು ಭೂಮಿಯನ್ನು ಮಾತ್ರ ಕೆತ್ತಿ ಅಥವಾ ಅಗೆದು ಅತ್ಯಂತ ಮಿತವಾದ ಜಾಗದಲ್ಲಿ ತಮಗೆ ಬೇಕಾದ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದರು. ಬೆಟ್ಟದ ಇಳಿಜಾರುಗಳಲ್ಲಿ ಲಭ್ಯವಿರುವ ಖಾಲಿ ಭೂಮಿಯನ್ನು ಹಸನು ಮಾಡಿ, ಅಡ್ಡ ತೆವರಿಗಳನ್ನು ನಿರ್ಮಿಸಿ, ಹಂತಹಂತಗಳಲ್ಲಿ ಸಮತಟ್ಟುಗೊಳಿಸಿ ಬೀಜಗಳನ್ನು ಚೆಲ್ಲುವುದು ಇವರ ಪದ್ಧತಿ. ಇದರಿಂದಾಗಿ ಖಾಲಿಬಿದ್ದ ಭೂಮಿ ಸದುಪಯೋಗವಾಗುತ್ತಿತ್ತು. ಅಲ್ಲದೆ ನೀಳವಾದ ಇಳಿಜಾರಿನಿಂದ ಸವಕಲಾಗುತ್ತಿದ್ದ ಅಥವಾ ಕರಗಿ ಹೋಗುತ್ತಿದ್ದ ಮಣ್ಣು ಇವರು ಹಾಕುತ್ತಿದ್ದ ಅಡ್ಡ ತೆವರಿಗಳಿಂದ ಕೊಚ್ಚಿ ಹೋಗದೆ ನಿಲ್ಲುತ್ತಿತ್ತು. ತಲೆತಲಾಂತರದಿಂದ ಇಂಥ ಪದ್ಧತಿಯನ್ನು ಅನುಸರಿಸಿಕೊಂಡು ಕೃಷಿ ಮಾಡುತ್ತಿದ್ದ ಕುಣಬಿಯರು ಒಂದೇ ಜಾಗವನ್ನು ಸತತವಾಗಿ ಬಳಸಿ ಭೂಮಿಯನ್ನು ಬಂಜರುಗೊಳಿಸುತ್ತಿರಲಿಲ್ಲ. ಒಂದೆರಡು ವರ್ಷಗಳಲ್ಲಿ ಅಥವಾ ಕೆಲವು ವರ್ಷಗಳಲ್ಲಿ ಬೇರೊಂದು ಜಾಗಕ್ಕೆ ತಮ್ಮ ಚಟುವಟಿಕೆಗಳನ್ನು ವರ್ಗಾಯಿಸಿಕೊಳ್ಳುತ್ತಿದ್ದರು. ಈ ಸ್ಥಳಾಂತರ ಕೃಷಿ ನಿಸರ್ಗವನ್ನು ಎಲ್ಲಿಯೂ ಘಾಸಿಗೊಳಿಸುತ್ತಿರಲಿಲ್ಲ. ಮನುಷ್ಯ ಖಾಯಂ ಆಗಿ ನೆಲೆನಿಂತಲ್ಲಿ ಮಾತ್ರ ಅರಣ್ಯ ನಾಶವಾಗಿ ಪರಿಸರದ ಅಸಮತೋಲನ ಜರುಗುತ್ತಿತ್ತು. ಕುಣಬಿಯರ ಈ ಸ್ಥಳಾಂತರ ಬೇಸಾಯ ಪರಿಸರದ ಸಮತೋಲನ ಕಾಯ್ದುಕೊಳ್ಳವಲ್ಲಿ ಪೂರಕವಾಗಿರುತ್ತಿತ್ತು.

ಪಶು ಸಂಪತ್ತಿನ ಹೆಚ್ಚಳ ಅರಣ್ಯ ನಾಶಕ್ಕೆ ಮೂಲ ಕಾರಣ ಎಂಬ ಅಭಿಪ್ರಾಯ ಅನೇಕ ಪರಿಸರವಾದಿಗಳಲ್ಲಿ ಇದೆ. ಇದು ನಿಜಕೂಡ ಹೌದು ಆದ್ದರಿಂದಲೇ ಇರಬೇಕು, ಕುಣಬಿಯರು ಎಂದಿಗೂ ಪಶುಸಂಗೋಪನ ಕಾರ್ಯಕ್ಕೆ ಕೈ ಹಾಕಲೆ ಇಲ್ಲ. ಕೇವಲ ಕೆತ್ತು ಬೇಸಾಯವನ್ನು ಮುಂದುವರಿಸಿಕೊಂಡು ಬಂದ ಇವರಿಗೆ ಕೃಷಿಗೆ ಪೂರಕವಾದ ಎತ್ತು ಎಮ್ಮೆಗಳ ಅವಶ್ಯಕತೆಯೂ ಬರಲಿಲ್ಲ. ಒಂದು ಕಡೆ ನೆಲೆನಿಂತ ನಾಗರೀಕ ಮನುಷ್ಯ ಹಂತಹಂತವಾಗಿ ಪಶು ಸಂಪತ್ತನ್ನು ರೂಢಿಸಿಕೊಂಡ. ಅವನು ಸಾಕಿದ ಹಸು, ಎಮ್ಮೆ, ಕುರಿ, ಮೇಕೆ, ಕತ್ತೆ, ಕುದರೆ, ಕೋಳಿ ಕುಕ್ಕುಟಗಳು ಗಿಡಮರಗಳ ನಾಶಕ್ಕೂ ಕಾರಣವಾದವು. ಬಹುಶಃ ಇದನ್ನು ಅರಿತಿದ್ದ ಕುಣಬಿ ಸಮುದಾಯ ಈ ಪಶು ಸಂಪತ್ತಿನಿಂದ ದೂರ ಉಳಿದು, ತನ್ನ ಪ್ರೀತಿಯ ಅರಣ್ಯವನ್ನು ರಕ್ಷಿಸಿಕೊಂಡಿತೇ ಎಂಬುದನ್ನು ನಾವು ಚಿಂತಸಬೇಕಾಗಿದೆ. ಕುಣಬಿಯರು ಇಂದಿಗೂ ಸಾಕು ಪ್ರಾಣಿಗಳ ಮಾಂಸವನ್ನು ತಿನ್ನುವುದಿಲ್ಲ. ಕುರಿ, ಮೇಕೆಗಳಿರಲಿ, ಕೋಳಿಯನ್ನೂ ಅವರು ತಿನ್ನುವುದಿಲ್ಲ ಎಂಬುದನ್ನು ನೋಡುವಾಗ ಸಾಕು ಪ್ರಾಣಿಗಳ ಬಗೆಗಿನ ಅವರ ಎಚ್ಚರ ಒಂದು ಹೊಸ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಕೆತ್ತು ಬೇಸಾಯ ಉತ್ಪಾದನೆಯ ದೃಷ್ಟಿಯಿಂದ ಒಂದು ಮಿತಿಯೂ ಹೌದು. ಆದರೆ ನಿಸರ್ಗದ ಉಳಿವಿನ ದೃಷ್ಟಿಯಿಂದ ಒಂದು ವರವೂ ಹೌದು. ಉತ್ಪಾದನೆಗಿಂತ ಪರಿಸರಕ್ಕೆ ಬೆಲೆಕೊಟ್ಟ ಕುಣಬಿಯರ ಜೀವನ ಒಂದು ಆದರ್ಶ.

ಆಹಾರ ಸಂಗ್ರಹಣೆಯಾಗಲೀ, ಬೇಟೆಯಾಗಲೀ ಅಥವಾ ಕಮರಿ ಕೃಷಿಯಾಗಲೀ ಇಂದು ಅನೇಕ ಸ್ಥಿತ್ಯಂತರಗಳಿಗೆ ಒಳಗಾಗಿದೆ. ಅವರಿಗೆ ನೆಲೆಯಾಗಿದ್ದ ಭೂಮಿ ಇಂದು ಅವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆಶ್ರಯ ನೀಡಿದ್ದ ಅರಣ್ಯ ಅವರ ಕೈತಪ್ಪಿದೆ. ಈ ಎಲ್ಲ ಸಮಸ್ಯೆಗಳನ್ನು ನಾನು ನಂತರದಲ್ಲಿ ಚರ್ಚಿಸುತ್ತೇನೆ. ಅನೇಕ ಸ್ಥಿತ್ಯಂತರಗಳ ನಡುವೆಯೂ ಈ ಮೂರು ಜೀವನ ಪದ್ಧತಿಗಳು ಕುಣಬಿಯರಲ್ಲಿ ಇಂದಿಗೂ ಉಳಿದು ಬಂದಿವೆ ಎಂಬುದೇ ಸಮಾಧಾನದ ಸಂಗತಿ. ಅನೇಕ ಆತಂಕಗಳ ನಡುವೆಯೂ ಪರಂಪರೆಯ ಜೀವನ ಕ್ರಮಗಳು ಹೇಗೋ ಹಾಗೆ ಸಾಗಿ ಬರುತ್ತಿವೆ.

ಕುಮರಿ ಬೇಸಾಯದ ಆಧುನಿಕ ಪದ್ಧತಿ :

ಆಹಾರ ಸಂಗ್ರಹಣೆ ಮತ್ತು ಬೇಟೆಯನ್ನಷ್ಟೇ ನಂಬಿ ಬದುಕುತ್ತಿದ್ದ ಕಾಲಕ್ಕೆ ಸಂಪೂರ್ಣ ಅಲೆಮಾರಿಗಳಾಗಿದ್ದ ಕುಣಬಿಯರು ಕುಮರಿ ಬೇಸಾಯವನ್ನು ಕರಗತ ಮಾಡಿಕೊಂಡ ಮೇಲೆ ಅರೆ ಅಲೆಮಾರಿಗಳಾಗಿ ಪರಿವರ್ತಿತರಾದರು. ನಿಸರ್ಗ ನಿರ್ಮಿತ ದಟ್ಟಾರಣ್ಯದಲ್ಲಿ ಅಡವಿ ಕುಮಾರರಾಗಿಯೇ ಸಾವಿರಾರು ವರ್ಷಗಳ ಪರಂಪರೆಯ ಬದುಕನ್ನು ರೂಢಿಸಿಕೊಂಡು ಬಾಳುತ್ತಿರುವ ಕುಣಬಿಯರು ಪ್ರಧಾನವಾಗಿ ಅವಲಂಬಿಸಿದ್ದು ಕುಮರಿ ಅಥವಾ ಕೆತ್ತು ಬೇಸಾಯವನ್ನು. ಬೆಟ್ಟಗುಡ್ಡಗಳ ಇಳಿಜಾರು ಪ್ರದೇಶಗಳನ್ನು ಬೇಸಾಯಕ್ಕೆ ಒಳಪಡಿಸುವ ಮೂಲಕ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿದ ಕುಣಬಿಯರು ಕೃಷಿಯ ಜ್ಞಾನ ಪರಂಪರೆಯೊಂದನ್ನು ವೃದ್ಧಿಸಿಕೊಂಡು ಬಂದ ವಿಶಿಷ್ಟ ಸಮುದಾಯ ಎಂಬ ಖ್ಯಾತಿಗೆ ಒಳಗಾಗಿದೆ.

ಕುಮರಿ ಬೇಸಾಯದ ಪ್ರಧಾನ ಅಂಶಗಳು ಹೀಗಿವೆ :

. ಬೆಟ್ಟ ಪ್ರದೇಶಗಳ ಇಳಿಜಾರು ನೆಲವನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸುವುದು.

. ಕೇವಲ ಗುದ್ದಲಿ, ಪಿಕಾಸಿ ಮುಂತಾದ ಅಗೆಯುವ ಸಾಧನಗಳನ್ನು ಮಾತ್ರ ಬಳಸಿ ಕೃಷಿಯನ್ನು ಒಂದು ಮಿತಿಗೆ ಒಳಪಡಿಸಿ, ಅರಣ್ಯ ಭೂಮಿಯನ್ನು ಸಂರಕ್ಷಿಸುವುದು.

. ಪಶುಸಂಗೋಪನೆ ಹಾಗೂ ಕುರಿ, ಮೇಕೆ ಸಾಕಾಣಿಕೆಯಿಂದ ದೂರವಿದ್ದು ಗಿಡಮರಗಳನ್ನು ಸಂರಕ್ಷಿಸುವುದು.

. ಸ್ಥಳದಿಂದ ಸ್ಥಳಕ್ಕೆ ಕೃಷಿಯನ್ನು ಸ್ಥಳಾಂತರಿಸುವ ಮೂಲಕ ಭೂಮಿಯ ಸಾರವನ್ನು ಕಾಪಾಡುವುದು.

. ಇಳಿಜಾರು ಪ್ರದೇಶಗಳಲ್ಲಿ ಹಂತಹಂತವಾಗಿ ಅಡ್ಡ ತೆವರಿಗಳನ್ನು ನಿರ್ಮಿಸುವ ಮೂಲಕ ಭೂಮಿಯ ಸವಕಳಿಯನ್ನು ತಡೆಗಟ್ಟುವುದು.

. ನಿಗದಿತವಾದ ಬೆಳೆಗಳನ್ನು ಮಾತ್ರ ಬೆಳೆಯುವ ಮೂಲಕ ಕೃಷಿಯನ್ನು ವಾಣಿಜ್ಯೀಕರಣಗೊಳಿಸದಿರುವುದು.

. ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಕಾಫಿ, ರಬ್ಬರ್, ಕೋಕ್‌ ಮುಂತಾದವುಗಳಿಂದ ದೂರವಿರುವುದು.

. ಅಳಿವಿನ ಅಂಚಿನಲ್ಲಿರುವ ಕಾಡಿನ ಗೆಡ್ಡೆ, ಗೆಣಸು, ಔಷಧಿ ಸಸ್ಯಗಳು ಮುಂತಾದವನ್ನು ರಕ್ಷಿಸಿಕೊಂಡು ಬಂದಿರುವುದು.

ಕುಣಬಿಯರ ಬೆಳೆಗಳು

ಗುಡ್ಡಗಳಲ್ಲಿನ ಜಲಮೂಲದಿಂದ ಉದಿಸಿ ಇಳಿಜಾರಿಗೆ ಹರಿಯುವ ನಿಸರ್ಗ ಸಹಜ ಹರಿವನ್ನು ಬಳಸಿಕೊಂಡು ಕೃಷಿಮಾಡುವುದು ಕುಣಬಿಯರ ರೂಢಿ. ನೀರೇ ನಿಲ್ಲದ ಇಳಿಜಾರಿನಲ್ಲಿ ಬೃಹತ್‌ ಮರಗಳು ಬೆಳೆಯದ ತೆಕ್ಕಲುಗಳಲ್ಲಿ ಅಷ್ಟಾಗಿ ನೀರು ಬೇಡದ ಬೆಳೆ ಬೆಳೆಯುತ್ತಾರೆ. ಹೀಗಾಗಿ ರಾಗಿ ಮತ್ತು ಬತ್ತ ಕುಣಬಿಯರ ಸಾಮಾನ್ಯ ಬೆಳೆಗಳು. ಅನೇಕಾನೇಕ ವರ್ಷಗಳಿಂದ ಇವರೇ ಸ್ವತಃ ರಕ್ಷಿಸಿಕೊಂಡು ಬಂದಿರುವ ಬೀಜಗಳು ಹಾಗೂ ವಿವಿಧ ತಳಿಗಳು ಇವರಿಗಿರುವ ಕೃಷಿ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಆಧುನಿಕ ತಳಿಗಳಿಗೆ ಮಾರು ಹೋಗದೆ ದೇಸಿ ತಲಿ ಮತ್ತು ದೇಸಿ ಪದ್ಧತಿಯನ್ನು ನಂಬಿ ಬದುಕುತ್ತಿರುವ ಇವರಿಗೆ ಆರ್ಥಿಕ ಉತ್ಪಾದನೆ ಮುಖ್ಯವಲ್ಲ. ಬದಲಾಗಿ ಅದರ ಗುಣಮಟ್ಟ ಮುಖ್ಯ ಇದುವರೆಗೂ ಕುಣಬಿಯರಲ್ಲಿ ಯಾರೊಬ್ಬರೂ ಆಧುನಿಕ ರಸ ಗೊಬ್ಬರಗಳನ್ನು ಬಳಸಿಲ್ಲ ಎಂದರೆ ಬಹುಶಃ ಆಶ್ಚರ್ಯವಾದಿತು, ಆದರೂ ಇದು ಸತ್ಯ. ಕಾಡಿನಲ್ಲಿ ಉದುರಿದ ತರಗಲೆಗಳನ್ನು ಸಂಗ್ರಹಿಸಿ ಅದನ್ನು ಕೊಳೆಸಿ ಭೂಮಿಗೆ ತುಳಿಯುತ್ತಾರೆ. ಅದೇ ಅವರ ಸಹಜ ಕೃಷಿ ವಿಧಾನ. ಉಳುಮೆ ಇಲ್ಲ ಅಥವಾ ಗೊಬ್ಬರ ಇಲ್ಲ. ನಮ್ಮ ಸಹಜ ಕೃಷಿ ಪಂಡಿತರು ನಿರೂಪಿಸುವ ವಿಧಾನಗಳನ್ನು ಇವರು ಸಾವಿರಾರು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಇಂದಿಗೂ ಅದನ್ನೇ ಅನುಸರಿಸುತ್ತಿದ್ದಾರೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಬತ್ತ ಬೆಳೆಯುವ ಇವರು ಅದನ್ನೇ ಅನುಸರಿಸುತ್ತಿದ್ದಾರೆ. ಬೇಸಿಗೆಯಲ್ಲಿ ರಾಗಿ ಬೆಳೆಯುತ್ತಾರೆ. ನೀರು ನಿಲ್ಲದ ತೀರಾ ಇಳಿಜಾರುಗಳಲ್ಲಿ ಮಳೆಗಾಲದಲ್ಲಿಯೂ ರಾಗಿ ಬೆಳೆಯುತ್ತಾರೆ.

ಇವರು ಬೆಳೆದಿರುವ ಬಿಶೇಷವಾದ ನಾಲ್ಕು ಬತ್ತದ ತಳಿಗಳನ್ನು ಹೀಗೆ ಪಟ್ಟಿ ಮಾಡಬಹುದು.

. ಪಟ್ಟೋ (ಕೆಂಪು ಬತ್ತದ ವಿಶೇಷ ತಳಿ)
೨. ವೈಪರ್ (ಬಿಳಿ ಬತ್ತದ ದಪ್ಪತಳಿ)
೩. ಬಂಗಾರ ಸಾಳ (ಸುವಾಸನೆಯ ವಿಶೇಷ ತಳಿ)
೪. ಪೂನಂ (ಸಣ್ಣ ತಳಿ)

ಇವೆಲ್ಲ ಇವರೇ ರಕ್ಷಿಸಿ ಇಟ್ಟ ಮೂಲ ತಳಿಗಳು. ಇವರಲ್ಲದೇ ಇನ್ನೂ ಎಷ್ಟೋ ಬಗೆಯ ತಳಿಗಳಿದ್ದರು ಹೆಚ್ಚಾಗಿ ಬೆಳೆಯುವುದು ಇವುಗಳನ್ನೇ.

ರಾಗಿಯಲ್ಲಿ ತಮ್ಮದೇ ಆದ ದೇಸಿತಳಿ (ಗೊಂಡೆ) ಬೆಳೆಯುತ್ತಾರೆ. ಹಾಗೂ ಇತ್ತೀಚೆಗೆ ಕೆಲವರು ಇಂಡಾಫ್‌ ಒಂದೆರಡು ತಳಿಗಳನ್ನು ಹೊಸದಾಗಿ ರೂಢಿ ಮಾಡಿಕೊಂಡಿದ್ದಾರೆ. ಒಬ್ಬಿಬ್ಬರು ಕಳೆದ ಒಂದೆರಡು ವರ್ಷಗಳಲ್ಲಿ ಸೋನಾ ಮಸೂರಿ ಬತ್ತದ ತಳಿಯನ್ನು ಬೆಳೆಯಲು ಪ್ರಯತ್ನಸಿದ್ದಾರೆ. ಎಂದು ತಿಳಿದು ಬಂತು. ಇಷ್ಟಲ್ಲದೆ ಕಾಂಗೋ (ಸಜ್ಜೆ) ಒರಿ (ನವಣೆ) ದವಸಗಳನ್ನೂ ಕುಣಬಿಯರು ಬೆಳೆಯುತ್ತಾರೆ.

ಗೆಡ್ಡೆ ಗೆಣಸಿನ ಕೃಷಿ

ಕುಣಬಿಯರು ಈಗಾಗಲೇ ನಾವು ನೋಡಿದಂತೆ ಮೂಲತಃ ಆಹಾರ ಸಂಗ್ರಾಹಕರಾಗಿದ್ದವರು. ಗೆಡ್ಡೆ – ಗೆಣಸು ಅವರ ಪ್ರಾಚೀನ ಆಹಾರ. ಕುಮ್ರಿ ಬೇಸಾಯ ಕರಗತವಾದ ಮೇಲೆ ಕಾಡಿನ ಗೆಡ್ಡೆ ಗೆಣಸುಗಳನ್ನು ಹಿತ್ತಲಿನಲ್ಲಿ ಬೆಳೆಯುವ ಪದ್ಧತಿಯನ್ನು ರೂಢಿಗೆ ತಂದರು. ಇದು ಕೂಡ ಸಾವಿರಾರು ವರ್ಷಗಳ ಪರಂಪರೆಯ ರೂಢಿಬದ್ಧ ಕೃಷಿ. ಅಂಥವುಗಳಲ್ಲಿ ಮುಖ್ಯವಾದ ಕೆಲವು ಬೆಳೆಗಳನ್ನು ಹೀಗೆ ಪಟ್ಟಿ ಮಾಡಬಹುದು.

. ಕೋನ (ಗೆಡ್ಡೆ ಮಾದರಿ)
೨. ಮೂಡ್ಲಿ (ಕೆಸು ಮಾದರಿ)
೩. ಕಾಟೆ ಕಣಂಗ್‌ (ಗೆಣಸು ಮಾದರಿ)
೪. ಚಿರತೆ (ಬಳ್ಳಿ ಮಾದರಿ)

ಇವಲ್ಲದೆ ವಿವಿಧ ಬಗೆಯ ಸೊಪ್ಪು ತರಕಾರಿಗಳನ್ನು ಹಿತ್ತಲಿನಲ್ಲಿ ಬೆಳೆಯುತ್ತಾರೆ. ಗೆಡ್ಡೆ ಗೆಣಸಿನ ಹಿತ್ತಲು ಇಲ್ಲದಿದ್ದರೆ ಅದು ಕುಣಬಿ ಮನೆಯೇ ಅಲ್ಲ. ಇದೇ ಅವರ ಕೃಷಿಯ ಪ್ರೀತಿಗೆ ಸಾಕ್ಷಿ.

ಜೇನು ಸಂಗ್ರಹ

ಕುಣಬಿಯರು ವಾಸಿಸುವ ದಟ್ಟಾರಣ್ಯಗಳಲ್ಲಿ ಇಡೀ ವರ್ಷ ಪೂರ್ತಿಯಲ್ಲದಿದ್ದರೂ ಸಾಂದರ್ಭಿಕವಾಗಿ ಆಹಾರ ಸಂಗ್ರಹಣೆ ಕಾರ್ಯವನ್ನು ಕೈಗೊಳ್ಳುತ್ತಾರೆ. ಜೇನು ಸಂಗ್ರಹದಲ್ಲಿ ಕುಣಬಿಯರು ನಿಷ್ಣಾತರು. ಜೇನನ್ನು ಅವರು ‘ಮೋ’ ಎಂದು ಕರೆಯುತ್ತಾರೆ. ಅವರು ಶೇಖರಿಸುವ ಜೇನಿನಲ್ಲಿ ಮೂರು ವಿಧ. ದೊಡ್ಡ ಜೇನು (ಕೋನ್ಗ) ಮಧ್ಯಮ ಜೇನು (ಸತಡೆ) ಮತ್ತು ಸಣ್ಣ ಜೇನು (ಪೊಯೆ) ದೊಡ್ಡ ಜೇನಿಗೆ ೬೦ ರೂಪಾಯಿ, ಮಧ್ಯಮಕ್ಕೆ ೯೦ ರೂಪಾಯಿ, ಸಣ್ಣ ಜೇನಿಗೆ ೧೫೦ ರೂಪಾಯಿ. ಸಣ್ಣ ಜೇನನ್ನು ಬಿದಿರು ಬೊಂಬಿನಲ್ಲಿ ಸಾಕುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಆದರೆ ಇದು ಕೆಲವರಿಗೆ ಮಾತ್ರ ಸಿದ್ಧಿಸುತ್ತದೆ. ನಿಸರ್ಗವನ್ನು ಹಿಡಿದಿಡುವ ಪ್ರಯತ್ನ ಇದು.

ಇತರೆ ಸಂಗ್ರಹಗಳು

ಜೇನಿನ ರೀತಿಯಲ್ಲೇ ಆದಾಯ ತರುತ್ತಿರುವ ಇತರ ಆಹಾರ ಸಂಗ್ರಹಣಾ ಪದಾರ್ಥಗಳೆಂದರೆ

ಸೀಗೇಕಾಯಿ (ಚೆಂಬೇಲಾ)
ವಾಟೆಹುಳಿ (ಆತಂಬಿ)
ಪುನರ್ಪುಳಿ (ಬಿಂಡಾ)
ಅಂಟುವಾಳ (ರೀಟೆ)
ಸಣ್ಣ ಲವಂಗ (ತಿಕೇಪಳ)
ಕಾಳು ಮೆಣಸು (ಮಿರಿ)
ಜಾಯಿಪತ್ರೆ (ಪತ್ರಿ)
ಅಣಬೆಗಳು (ಅಳಬಿ)
ವಿವಿದ ಹಣ್ಣುಗಳು : ಹಲಸು, ಚಾಪೇರ, ಔಳು, ಚುನ್ನ, ಚಿವಾರ, ಕಣ್ಣೇರಾ ಇತ್ಯಾದಿ
ಕಾಡು ಬಾಳೆ (ಕರಿಬಾಳೆ ರೀತಿಯ ಮಿಟಗ)
ಗೆಡ್ಡೆ – ಗೆಣಸು (ಜಾಡ್‌ ಕಣಂಗು, ನಾಗರ ಕಣಂಗು ಇತ್ಯಾದಿ)

ಇವೆಲ್ಲವನ್ನೂ ಸಂಗ್ರಹಿಸುವ ಇವರು ಇವುಗಳನ್ನು ನೇರವಾಗಿ ಮಾರುವಂತಿಲ್ಲ. ಅಂಥ ವ್ಯವಸ್ಥಿತ ಮಾರಟ ಜಾಲವೂ ಅವರಲಿಲ್ಲ. ಅವೆಲ್ಲವನ್ನು ನಾಗರೀಕ ಸಮಾಜ ಹೆಣೆದಿರುವ ವ್ಯವಸ್ಥಿತ ಜಾಲದ ಏಜೆಂಟರುಗಳು ಖರೀದಿಸುತ್ತಾರೆ. ನಿರ್ದಿಷ್ಟ ಬೆಲೆಯನ್ನು ಎಂದೂ ಕುಣಬಿಗಳು ನಂಬುವಂತಿಲ್ಲ. ಏಜೆಂಟರು ನಿಗದಿಪಡಿಸಿದಷ್ಟಕ್ಕೆ ಕೊಟ್ಟು ಕೈತೊಳೆದುಕೊಳ್ಳಬೇಕು. ಅವರು ಒಂದಕ್ಕೆ ಹತ್ತು ಪಟ್ಟು ಲಾಭ ಇಟ್ಟು ಮಾರಿಕೊಳ್ಳುತ್ತಾರೆ. ಕುಣಬಿಯರಿಗೆ ಸಹಕಾರಿ ತತ್ವದ ಪರಿಚಯ ಇನ್ನೂ ಆಗಿಲ್ಲ.

ಕುರಕುಶಲ ವಸ್ತುಗಳು

ಕುಣಬಿಯರು ಕಾಡಿನ ಮಧ್ಯೆಯೇ ಬೆಳೆದವರಾದ್ದರಿಂದ ಕಾಡಿನಲ್ಲಿ ಸಿಗುವ ವಸ್ತುಗಳ ಕುಶಲಕಲೆಗೆ ಹೆಸರಾದವರು. ನಿತ್ಯ ಬಳಕೆಗೆ ಪೂರಕವಾದ ಬಿದಿರು, ಬೆತ್ತ, ನಾರು, ಬಿಳಿಲು ಹಾಗೂ ಹುಲ್ಲುಗಳನ್ನು ಸಂಗ್ರಹಿಸಿ ಅವುಗಳಿಂದ ಕುಸರಿ ವಸ್ತುಗಳನ್ನು ಸಿದ್ಧಪಡಿಸುವುದರಲ್ಲಿ ನಿಷ್ಣಾತರು. ಇವರು ತಯಾರಿಸುವ ಪ್ರಮುಖ ವಸ್ತುಗಳ ವಿವರ ಹೀಗಿದೆ.

ತೊಟ್ಟಿಲು, ಬುಟ್ಟಿ, ಮೊರ, ಚಾಪೆ, ಸಿಂಬಿ, ಮೂಡೆ, ಟೋಪ್ಪಿಗೆ, ಬೀಸಣೆಗೆ, ಲಘು ಪೀಠೋಪಕರಣ, ಧಾನ್ಯ ತುಂಬುವ ಸಾಧನ, ಮರದ ಮೂರ್ತಿಗಳು.

ಇವುಗಳನ್ನು ಕೂಡ ನೇರ ಮಾರಾಟ ಮಾಡುವ ಹಾಗಿಲ್ಲ. ಬಿದಿರು ಬೆತ್ತದ ಮೇಲೆ ನಿಷೇಧವಿರುವುದರಿಂದ ಬಹಿರಂಗವಾಗಿ ಉತ್ಪಾದಿಸುವ ಹಾಗೂ ಇಲ್ಲ. ಕಳ್ಳ ದಾರಿಗಳಲ್ಲಿ ಬರುವ ಏಜೆಂಟರು ಇವುಗಳನ್ನು ಕಡಿಮೆ ಹಣಕ್ಕೆ ಲೂಟಿ ಮಾಡುತ್ತಾರೆ.

ಬೇಟೆ

ಬೇಟೆ ಇಂದು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿದೆ. ಒಂದು ಕಾಲಕ್ಕೆ ಉಪವೃತ್ತಿಯೇ ಆಗಿದ್ದ ಬೇಟೆ ಕುಣಬಿಯರಿಗೆ ಇಂದು ಅಪರೂಪದ ಸಂಗತಿ. ಸಾಕು ಪ್ರಾಣಿಗಳ ಪಾಲನೆಯನ್ನು ಕಂಡರಿಯದ ಕುಣಬಿಯರಿಗೆ ಬೇಟೆ ಅನಿವಾರ್ಯವೇ ಆಗಿತ್ತು. ಆದರೆ ನಮ್ಮ ಆಧುನಿಕ ವ್ಯವಸ್ಥೆ ಅದಕ್ಕೆ ಕಡಿವಾಣ ಹಾಕಿದೆ.

ಕುಣಬಿಯರ ಅರಣ್ಯ ಪ್ರಾಣಿಲೋಕದ ಅದ್ಬುತ ಅರಣ್ಯ ಎಂದೇ ಹೇಳಬಹುದು ಇಂದು ಅವನತಿಯ ಹಾದಿಯಲ್ಲಿರುವ ಕೆಂಜಳಿಲು (ಕುಣಬಿ ಭಾಷೆಯಲ್ಲಿ ಶೆಕ್ರು) ಉತ್ತರ ಕನ್ನಡದ ನಾಡಿನಲ್ಲಿ ಇನ್ನೂ ಸಮೃದ್ಧವಾಗಿವೆ. ಜಿಂಕೆ, ಸಾರಂಗ, ಬರ್ಕ, ಕಾಡುಕುರಿ, ಕಾಡುಹಂದಿ, ಮುಳ್ಳುಹಂದಿ ಇನ್ನೂ ಯಥೇಚ್ಛವಾಗಿವೆ. ಹಾರುವ ಅಳಿಲು, ಹಾರುವ ಓತಿಕ್ಯಾತ, ಹಾರುವ ಬೆಕ್ಕು ಮುಂತಾದ ವಿಶಿಷ್ಟ ಪ್ರಾಣಿಗಳು ಬಹುಸಂಖ್ಯೆಯಲ್ಲಿವೆ. ಉಡ, ಮೀನು, ಏಡಿ ಮುಂತಾದವುಗಳಿಗೂ ಬರವಿಲ್ಲ.

ಕರಿ ನಾಗರಕ್ಕೆ ಇದು ಪ್ರಸಿದ್ಧ ನೆಲ. ಕಾಡುನಾಯಿ, ಕರಡಿ, ಚಿರತೆ ಸಾಕಷ್ಟು ಇವೆ. ಹುಲಿಸಂಖ್ಯೆ ಕ್ಷೀಣಿಸುತ್ತಿದೆ ಎಂದು ಕುಣಬಿಯರೇ ಹೇಳುತ್ತಾರೆ. ತೋಳಗಳ ಸಂಖ್ಯೆಯೂ ಕಡಿಮೆಯೇ. ಉಳವಿ ಸುತ್ತಮುತ್ತ ಕಾಡು ಆನೆಗಳ ಕಾಟವೂ ಇದೆ. ಆನೆಗಳು ನಿಗದಿತ ಮಾರ್ಗಗಳಲ್ಲಿ ಓಡಾಡುತ್ತಿದ್ದು ಆಗಾಗ ಕಾಣಿಸಿಕೊಳ್ಳುವುದುಂಟು.

ಅರಣ್ಯ ಇಲಾಖೆಯ ಕಾನುನು ಕಟ್ಟಳೆಗಳಿಂದಾಗಿ ತಮ್ಮ ಪ್ರಿಯ ಆಹಾರವನ್ನು ಕಿತ್ತುಕೊಳ್ಳಲಾಯಿತು ಎಂಬ ಅಸಮಾಧಾನ ಕೆಲವು ಹಿರಿಯರಲ್ಲಿದೆ. ಇತ್ತೀಚೆಗಿನ ಯುವ ಪೀಳಿಗೆ ಬೇಟೆಯ ಗೊಡವೆಯೇ ಬೇಡ ಎಂದು ಸುಮ್ಮನಾಗಿದೆ. ಆದರೂ ಕೆಲವು ನಿಷ್ಣಾತ ಬೇಟೆಗಾರರು ಇಂದಿಗೂ ಕುಣಬಿ ಸಮುದಾಯದಲ್ಲಿದ್ದಾರೆ. ಅಲ್ಲಲ್ಲಿ ಬೇಟೆ ನಡೆಯುವುದಿಲ್ಲ ಎಂದೇನೂ ಇಲ್ಲ. ಮೊಲ, ಬರ್ಕ, ಕಾಡುಹಂದಿ, ಚಿಂಕೆ, ಕಾಡುಕುರಿಯಂಥ ಪ್ರಾಣಿಗಳ ಬೇಟೆ ಕದ್ದುಮುಚ್ಚಿ ನಡೆಯುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಸಾಕು ಪ್ರಾಣಿಗಳ ಸಾಕಾಣಿಕೆಯಿಂದಲೂ ದೂರವಿರುವ ಕುಣಬಿಯರು ಮಾಂಸಾಹಾರದಿಂದ ವಂಚಿತರಾಗಿದ್ದಾರೆ. ಅವರ ಪ್ರಿಯ ಆಹಾರವನ್ನು ನಮ್ಮ ವ್ಯವಸ್ಥೆ ಕಸಿದುಕೊಂಡಿದೆ ಎಂಬುದು ನಿಜವಾದರೂ ಅದು ಅನಿವಾರ್ಯವೂ ಹೌದು ಎಂಬುದನ್ನು ಒಪ್ಪಕೊಳ್ಳಲೇಬೇಕು. ಇಂದಿನ ಯುವ ಪೀಳಿಗೆ ಬೇಟೆಯಿಂದ ದೂರ ಸರಿದಿದೆ ಎಂಬುದಂತೂ ಸತ್ಯ. ಇದರಿಂದ ಕುಣಬಿಯರ ಆಹಾರ ಕ್ರಮದ ಮೇಲೆ ಪರಿಣಾಮವಾಗಿದೆಯೇ ಹೊರತು ಅದು ಅವರ ಆರ್ಥಿಕತೆ ಮೇಲೆ ತೀವ್ರವಾದ ಪರಿಣಾಮವನ್ನೇನೂ ಬೀರಿಲ್ಲ.

ಕುಣಬಿಯರ ಆರ್ಥಿಕ ಸಂಕಷ್ಟಗಳು

ನಿಸರ್ಗದ ಶಿಶುಗಳಾಗಿ ಬದುಕಿ ಬಂದ, ನಿಸರ್ಗವನ್ನೇ ದೈವವೆಂದು ಆರಾಧಿಸಿಕೊಂಡು ಬಂದ ಕುಣಬಿಯರಿಗೆ ಅದೇ ನಿಸರ್ಗ ದೂರವಾಗತೊಡಗಿದೆ. ಇದೊಂದು ವ್ಯವಸ್ಥೆಯ ವೈಪರೀತ್ಯ. ಕುಣಬಿಯರ ಆರ್ಥಿಕ ಸಂಕಷ್ಟಕ್ಕೆ ಎರಡು ಪ್ರಮುಖ ಕಾರಣಗಳು ಉಂಟಾಗಿದೆ.

. ಕಾಡನ ಸಮಸ್ಯೆ
೨. ಭೂಮಿಯ ಸಮಸ್ಯೆ

ಕುಣಬಿಯರ ಕಾಡಿನ ಸಂಬಂಧ :

ಹೊರಗಿನ ಸಮುದಾಯಗಳ ಲೆಕ್ಕದಲ್ಲಿ ‘ಕಾಡು ಕುಣಬಿ’ಗಳು ಎಂದೇ ಕರೆಸಿಕೊಳ್ಳುವ ಇವರು ಇಂದು ಕಾಡಿನಿಂದ ದೂರವಾಗಬೇಕಾದ ಸ್ಥಿತಿಗೆ ಯಾಕೆ ತಲುಪಿದರು? ಈ ಸಂದರ್ಭದಲ್ಲಿ ನನ್ನದೇ ಲೇಖನವೊಂದರ ಆಯ್ದ ಭಾಗವನ್ನು ಉದಾಹರಿಸುವುದು ಸೂಕ್ತ ಎಂಬುದು ನನ್ನ ಭಾವನೆ.

“ನಿತ್ಯ ಹರಿದ್ವರ್ಣದ ಕಾಡುಗಳೆನಿಸಿದ ಪಶ್ಚಿಮಘಟ್ಟದ ಅರಣ್ಯಗಳು ಪ್ರಪಂಚದಲ್ಲಿಯೇ ಅಪರೂಪದ ಸಸ್ಯ ರಾಶಿಗಳನ್ನು ಪಡೆದವಾಗಿದ್ದು ಜೀವಜಗತ್ತಿನ ಎಲ್ಲ ವಿಸ್ಮಯಗಳನ್ನು ಪ್ರತಿಬಿಂಬಿಸುವ ತಾಣಗಳಾಗಿವೆ. ಹೊನ್ನೆ, ನಂದಿ, ಸಾಗಡೆ, ತಡಸಲು, ನೇರಳೆ, ಜಂಬೆ, ಬುರಗ, ಮಾಕಾಳಿ, ದೂಪ, ಧೂಮ, ಹಲಸು, ಹೆಬ್ಬಲಸು, ಸಳ್ಳೆ, ಸಾತಿ ಮುಂತಾದಂತೆ ನುರಾರು ರೀತಿಯ ಭೀಮಕಾಯದ ಮರಗಳು ಪಶ್ಚಿಮಘಟ್ಟದ ಸಮೃದ್ಧಿಗೆ ಸಾಕ್ಷಿಯಾಗಿವೆ. ಭೂಮ್ಯಾಕಾಶಗಳನ್ನು ಒಂದು ಮಾಡಿ ಸೂರ್ಯ ಕಿರಣಗಳನ್ನು ನುಂಗಿ ಭೂಮಿಯನ್ನು ತಣ್ಣಗಿಟ್ಟು ಅದರಲ್ಲಿ ಮತ್ತೆ ನಾನಾ ವಿಧವಾದ ಅಣಬೆ ಆರ್ಕಿಡ್‌ಗಳು ಬೆಳೆಯಲು ಸಹಕಾರಿಯಾಗಿ ಜೊತೆಗೇ ಬಿದಿರು, ಬೆತ್ತ ಹಾಗೂ ಹತ್ತಾರು ಬಗೆಯ ಬಳ್ಳಿಗಳು ಹಬ್ಬಿ ಹೆಣೆದುಕೊಂಡಿವೆ. ಅಡಿಕೆ, ತೆಂಗು, ಬೈನೆ, ಈಚಲು ಮುಂತಾದ ಸಸ್ಯಗಳಲ್ಲದೆ ಕಾಫಿ, ಟೀ, ಏಲಕ್ಕಿ, ಲವಂಗ, ಮೆಣಸು, ಕೋಕೋ ಹಾಗೂ ಕಿತ್ತಳೆಗಳಂಥ ವಾಣಿಜ್ಯ ಬೆಳೆಗಳಾಗಿ ಪರಿವರ್ತಿತವಾದ ದುಡ್ಡಿನ ಗಿಡಗಳೂ ಸಮೃದ್ಧಿಯಾಗಿವೆ.”

ಒಂದು ಕಾಲಕ್ಕೆ ತಮ್ಮ ಕುಲ ಹಾಗೂ ಪಂಗಡಗಳಿಗೆ ಗಿಡಮರಗಳ ಹೆಸರನ್ನೆ ಇಟ್ಟುಕೊಂಡು ಅವುಗಳ ಮೂಲಕವೇ ತಮ್ಮ ಅಸ್ತಿತ್ವನ್ನು ಗುರುತಿಸಿಕೊಂಡ ಹತ್ತಾರು ಬುಡಕಟ್ಟುಗಳು ಇಂದಿಗೂ ಆ ಸಂಪ್ರದಾಯವನ್ನು ಅನುಸರಿಸುತ್ತಿವೆ. ದೇವರ ಹೆಸರಿನಲ್ಲಿ ಮೀಸಲಿಟ್ಟ ಕಾಡುಗಳು ಇಂದಿಗೂ ದೇವರಕಾಡುಗಳಾಗಿ ಉಳಿದುಬಂದಿರುವುದನ್ನು ನಾವು ನೋಡುತ್ತಿದ್ದೇವೆ. ಮೀಸಲಲ್ಲದ ಕಾಡಿನಲ್ಲೂ ಒಂದು ಮರ ಕಡಿಯಬೇಕಾದ ಪ್ರಸಂಗ ಬಂದರೆ ಅದನ್ನು ಪೂಜಿಸಿ ಅತ್ಯಂತ ಗೌರವದಿಂದ ಮರಗಳನ್ನು ಕಡಿಯುತ್ತಿದ್ದ ಕುಣಬಿಗಳ ಮೌಲ್ಯ ಆದರ್ಶಪ್ರಾಯ. ಹೀಗೆ ಕಾಡಿನ ಆಸರೆಯಲ್ಲಿ ಅದರ ಮಗುವಿನಂತೆ ಬೆಳೆದ ಮನುಷ್ಯ ಅದು ನೀಡುವ ಜೇನು, ಗೆಡ್ಡೆ, ಗೆಣಸು, ಹಣ್ಣು ಹಂಪಲು ಹಾಗೂ ಅದರೊಳಗಿನ ಪ್ರಾಣಿ ಪಕ್ಷಿಗಳನ್ನು ಅಗತ್ಯವಿದ್ದಷ್ಟು ಸೇವಿಸಿ ಬಿದಿರು, ಬೆತ್ತ ಹಾಗೂ ಹೊಂಬು ಬಳ್ಳಿಗಳಲ್ಲಿ ತಯಾರಿಸಿದ ವಸ್ತುಗಳನ್ನು ಕಾಡಿನಾಚೆಯ ಸಂತೆಗಳಲ್ಲಿ ಮಾರಿ ತನಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳುತ್ತಿದ್ದ. ಇಷ್ಟರಮಟ್ಟಿಗೆ ಮಾತ್ರ ಹೊರ ಜಗತ್ತಿನೊಂದಿಗೆ ಸಂಪರ್ಕ ಇಟ್ಟುಕೊಂಡು ತನ್ನ ಪಾಡಿಗೆ ತಾನು ಕಾಡಿನ ಕುವರನಾಗಿ ಇದ್ದ ಅವನಿಗೆ ಬಹುಶಃ ನಮ್ಮ ದೇಶ ಸ್ವಾತಂತ್ರ್ಯ ಕಳೆದುಕೊಂಡಿದೆ ಎಂದಾಗಲೀ (ಕರ್ನಾಟಕದ ಮಟ್ಟಿಗೆ) ತಾವು ಗುಲಾಮರು (ಆಧುನಿಕ ಅರ್ಥದಲ್ಲಿ) ಎಂದಾಗಲೀ ಗೊತ್ತಿರಲಿಲ್ಲ ಎಂದೇ ನನ್ನ ನಂಬಿಕೆ. ಇದ್ದಕ್ಕಿದ್ದ ಹಾಗೆ ತನ್ನ ಕಾಡೊಳಗೆ ನಾಗರಿಕರೂ ಅವರ ಜೊತೆಗೆ ಬಿಳಿಯರೂ ಬರತೊಡಗಿದಾಗ ಕೂಡ ಈ ಬಿಳಿಯರು ನಮ್ಮ ದೇಶವನ್ನಾಳುತ್ತಿರುವವರು ಎಂಬ ಎಚ್ಚರವೂ ಅವರಿಗಿರಲಿಲ್ಲವೆಂದೇ ಭಾವಿಸಬಹುದೇನೋ. ಆದರೆ ತಮ್ಮದಾದ ಕಾಡನ್ನು ಮತ್ಯಾರೋ ಬಂದು ನಿಯಂತ್ರಿಸುತ್ತಿದ್ದಾರೆ ಎಂಬ ವಾಸ್ತವ ಅವನಿಗೆ ಗೊತ್ತಾಗತೊಡಗಿದ್ದು ನಮ್ಮ ಸ್ವಾತಂತ್ರ್ಯ ಬಂದ ಮೇಲೆಯೇ.

ಸ್ವಾತಂತ್ರ್ಯಾನಂತರದ ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಆಡಳಿತ ನಿರ್ವಹಣೆಗಾಗಿ ಅನೇಕ ಇಲಾಖೆಗಳು ಹುಟ್ಟಿಕೊಂಡದ್ದನ್ನು ನಾವು ಕಂಡಿದ್ದೇವೆ. ಅಂಥ ಪ್ರಮುಖ ಇಲಾಖೆಗಳಲ್ಲಿ ಅರಣ್ಯ ಇಲಾಖೆಯೂ ಒಂದೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಇಲಾಖೆಯ ಮುಖ್ಯ ಕೆಲಸ ಅರಣ್ಯ ಇಲ್ಲದಿರುವ ಕಡೆ ಅರಣ್ಯ ಬೆಳೆಸುವುದು ಹಾಗೂ ಅರಣ್ಯ ಇರುವ ಕಡೆ ಅದನ್ನು ರಕ್ಷಿಸುವುದು. ಅರಣ್ಯ ಇಲ್ಲದಿರುವ ಕಡೆ ಅರಣ್ಯ ಬೆಳೆಸಿದ್ದು ಅಷ್ಟಾಗಿ ನಮ್ಮ ಕಣ್ಣಿಗೆ ಗೋಚರವಾಗುತ್ತಿಲ್ಲ ಎಂದರೆ ಆ ಇಲಾಖೆಗೆ ಸಿಟ್ಟು ಬರಬಹುದೇನೋ. ಯಾಕೆಂದರೆ ಇದು ನಿಜವಾಗಿದ್ದರೆ ಉತ್ತರ ಕರ್ನಾಟಕದ ಕೆಲವು ಭಾಗವಾದರೂ ಸ್ವಾತಂತ್ರ್ಯ ಬಂದ ಈ ೬೦ ವರ್ಷಗಳಲ್ಲಿ ಹಸಿರಾಗಬೇಕಾಗಿತ್ತು. ಆದರೆ ಅರಣ್ಯ ಇಲಾಖೆ ತನ್ನ ಗಮನ ಕೇಂದ್ರೀಕರಿಸಿದ್ದು ಈಗಾಗಲೇ ಯಥೇಚ್ಛವಾಗಿ ಬೆಳೆದು ನಿಂತಿರುವ ಮಲೆನಾಡಿಗೆ – ಇದಕ್ಕಿರುವ ಒಳ ಕಾರಣಗಳನ್ನು ನಾನು ಹೇಳಹೋಗುವುದಿಲ್ಲ. ರಕ್ಷಣೆಯ ನೆಪದಲ್ಲಿ ಈ ಕಾಡಿಗೆ ದಾಳಿ ಇಟ್ಟ ಅರಣ್ಯ ಇಲಾಖೆಗೆ ಮೊದಲು ಕಂಡವರು ಅದರ ಗರ್ಭದಲ್ಲಿ ಅಡಗಿ ಜೀವಿಸುತ್ತಿದ್ದ ಬುಡಕಟ್ಟುಗಳು, ಅದುವರೆಗೆ ಸ್ವಂತ ಆಸ್ತಿಯ ಕಲ್ಪನೆಯಿಲ್ಲದೆ ಸ್ವಚ್ಛಂದವಾಗಿ ಬದುಕುತ್ತಿದ್ದ ಅವರು. ‘ನಿಮ್ಮ ಖಾತೆ’ ಎಲ್ಲಿ? ನಮ್ಮ ‘ಹಕ್ಕು’ ಯಾವುದು? ಎಂದು ಪ್ರಶ್ನಿಸುವ ಹೊಸ ಬಗೆಯ ಜನ ಬಂದದ್ದನ್ನು ಕಂಡು ದಿಕ್ಕೆಟ್ಟು ಹೋದರು. ಅಂದಿನಿಂದ ಇಂದಿನವರೆಗೂ ಅನೇಕ ಬುಡಕಟ್ಟುಗಳು ಅದೇ ಡೋಲಾಯಮಾನದಲ್ಲಿ ಬದುಕುತ್ತಿವೆ. ಈ ಐದು ದಶಕಗಳ ನಮ್ಮ ಪ್ರಜಾಪ್ರಭುತ್ವ ಅವರನ್ನು ಸ್ಥಳದಿಂದ ಸ್ಥಳಕ್ಕೆ ಎತ್ತಂಗಡಿ ಮಾಡಿದೆ. ಯಾರೋ ಕಡಿದ ಕಾಡಿನ ಬೊಡ್ಡೆಗಳಿಗೆ ಇವರ ಹೆಸರು ಹೋಗುತ್ತಿದೆ. ಯಾರೋ ಹಚ್ಚಿದ ಕಾಳ್ಗಿಚ್ಚುಗಳಿಗೆ ಇವರು ನೆಪವಾಗುತ್ತಿದ್ದಾರೆ. ಇನ್ನಿಲ್ಲದ ಕಿರುಕುಳಗಳ ನಡುವೆ ಅರಣ್ಯ ಇಲಾಖೆಯ ಪ್ಲಾಂಟೇಶನ್‌ಗಳನ್ನು ಬೆಳೆಸುತ್ತಿರುವವರೂ ಇವರೇ ಆಗಿದ್ದಾರೆ. ಒಟ್ಟಿನಲ್ಲಿ ಪೊರೆದ ತಾಯಿಯಿಂದ ಇವರನ್ನು ಬೇರ್ಪಡಿಸಿದ ಅಥವಾ ಆ ತಾಯಿ ಸೆರಗಿನ ಪ್ರೀತಿಯಿಂದ ದೂರ ಮಾಡಿದ ಪಾಪವನ್ನಂತೂ ನಮ್ಮ ಪ್ರಜಾಪ್ರಭುತ್ವ ಹೊತ್ತುಕೊಂಡಿದೆ. ಕಾಡಿಗೂ ಆ ಜೀವಿಗಳಿಗೂ ಇದ್ದ ಅವಿನಾಭಾವ ಸಂಬಂಧ ಈಗ ಕೇವಲ ಕೃತಕವಾಗಿ ದಿಕ್ಕು ತಪ್ಪಿದ ಹಸುಳೆಗಳಾಗಿ ಅವರು ಅತಂತ್ರದ ಸ್ಥಿತಿ ತಲುಪಿದ್ದಾರೆ.

ಹೀಗೆ ಅವರ ಆಶ್ರಯ ತಾಣವಾಗಿದ್ದ, ಅವರನ್ನು ಪೊರೆಯುತ್ತಿದ್ದ ಕಾಡು ಅಧಿಕಾರಶಾಹಿ ಮನೋಭಾವದ ಜನರಿಂದಾಗಿ ಅವರಿಂದ ದೂರವಾಗತೊಡಗಿದೆ. ಸ್ವಾತಂತ್ರ್ಯ ನಂತದಲ್ಲಿ ಜಾರಿಗೆ ಬಂದ ನಾನಾ ಕಾಯ್ದೆಗಳು ಅವರ ಮೇಲೆ ಅಪಾರವಾದ ನಿಯಂತ್ರಣ ಹೇರಿವೆ. ಬೇಟೆಯ ನಿಷೇಧವೊಂದನ್ನು ಒಪ್ಪಬಹುದು. ಆದರೆ ಶತಮಾನಗಳಿಂದ ಅರಣ್ಯವನ್ನು ಪೋಸಿಷಿಕೊಂಡು ಬಂದಿದ್ದರೂ ಅವರನ್ನೇ ಅದರ ಶತೃಗಳಂತೆ ಬಿಂಬಿಸುವುದು ಆಧುನಿಕ ವ್ಯವಸ್ಥೆಯ ಅಪರಾಧ. ವಾಸ್ತವವಾಗಿ ಮರಗಿಡಗಳ ಬಗ್ಗೆ ಅಪಾರವಾದ ಜ್ಞಾನ ಹೊಂದಿರುವ ಕುಣಬಿಯರನ್ನು ಅರಣ್ಯ ಸಂರಕ್ಷಣಾ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೆಕು. ಸಾಧ್ಯವಾದಲ್ಲಿ ಇಂತಿಷ್ಟು ಪ್ರದೇಶವನ್ನು ಅವರಿಗೇ ಬಿಟ್ಟುಕೊಟ್ಟು ಅರಣ್ಯ ಬೆಳೆಸುವ ಮತ್ತು ಅದನ್ನು ಕಾಪಾಡುವ ಹೊಣೆ ಹೊರಿಸಬೇಕು. ಆದರೆ ಅದರ ಕಾಡುತ್ಪತ್ತಿಗಳನ್ನು ಸಂಗ್ರಹಿಸಲು ಅವರಿಗೆ ಅನುಮತಿ ನೀಡಬೇಕು. ಕಾಡಿನ ಉತ್ಪನ್ನಗಳಿಂದ ತಯಾರಿಸುವ ಕುಶಲಕಲೆಗಳಿಗೆ ಪ್ರೋತ್ಸಾಹ ನೀಡಬೇಕು. ಬಿದಿರು, ಬೆತ್ತ, ಬಿಳಲುಗಳನ್ನು ಕಡಿದು ಹೊರಗೆ ಸಾಗಿಸುವ ಬದಲು ಅದರ ತಯಾರಿಕೆಯನ್ನು ಕುಣಬಿ ಸಂಘ ಸಂಸ್ಥೆಗಳಿಗೆ ವಹಿಸಬೇಕು. ಇವೆಲ್ಲದರ ಜೊತೆಗೆ ಸಹಕಾರ ಸಂಘಗಳನ್ನು ಸ್ಥಾಪಿಸಿ ಅಲ್ಲಿ ಅವರದೇ ಸ್ವಾಯತ್ತತೆ ತಂದು ಪೂರ್ಣ ಪ್ರಮಾಣದ ಲಾಭ ಅವರಿಗೆ ದಕ್ಕುವಂತೆ ಆಗಬೇಕು. ಇಷ್ಟೆಲ್ಲ ಆಗಬೇಕಾದರೆ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ, ಬುಡಕಟ್ಟು ಕಲ್ಯಾಣ ನಿದೇಶನಾಲಯ ಮತ್ತು ಸರ್ಕಾರದ ಇತರ ಇಲಾಖೆಗಳಲ್ಲಿ ಸಮನ್ವಯ ಏರ್ಪಡಬೇಕು. ಇದಕ್ಕೆಲ್ಲ ಆಡಳಿತಗಾರರ ಇಚ್ಛಾಶಕ್ತಿ ಬೇಕು.

ಮರ ಮತ್ತು ಭೂಮಿ ಸಂಬಂಧ :

ಇಂದು ನಮ್ಮಲ್ಲಿರುವುದು ಸಂಪೂರ್ಣವಾಗಿ ಕೃಷಿ ಪ್ರಧಾನ ವ್ಯವಸ್ಥೆ. ಕುಣಬಿಯರು ಇಂದಿನ ವ್ಯವಸ್ಥೆಯಲ್ಲಿ ಅಲೆಮಾರಿಗಳಾಗಿ ಉಳಿದಿಲ್ಲ. ಕಾಡಿನ ಕಾಯ್ದೆಗಳು ರೂಪಿತಗೊಂಡ ಮೇಲೆ ಸ್ಥಳಾಂತರ ಕೃಷಿ ಸಾಧ್ಯವಿಲ್ಲದ ಕಾರಣ ಅವರ ಅರೆ ಅಲೆಮಾರಿತನವೂ ನಿಂತುಹೋಗಿದೆ. ಯಾಕೆಂದರೆ ಇವರು ಇತರೆ ಅಲೆಮಾರಿಗಳಂತೆ ತಮ್ಮ ವೃತ್ತಿಗಳನ್ನು ಬದಲಾಯಿಸುವವರೂ ಅಲ್ಲ. ಕೃಷಿ ಮತ್ತು ಆಹಾರ ಸಂಗ್ರಹಣೆ ಹಾಗೂ ಕರಕುಶಲತೆ ಬಿಟ್ಟು ಬೇರಾವ ವೃತ್ತಿ ಗೊತ್ತಿರುವವರೂ ಅಲ್ಲ. ಆದ್ದರಿಂದ ಭೂಮಿ ಎಂಬುದು ಇವರಿಗೆ ಅತ್ಯಾವಶ್ಯಕ. ಆದರೆ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಇವರ ಬದುಕು ಅಸ್ತಿರತೆಗೆ ಬರಲು ಕೆಲವು ಕಾರಣಗಳಿವೆ.

ಈಗಾಗಲೇ ಹೇಳಿದಂತೆ ಬುಡಕಟ್ಟುಗಳಿಗೆ ಸ್ವಂತ ಆಸ್ತಿಯ ಕಲ್ಪನೆ ಇರಲಿಲ್ಲ. ತೀರಾ ಮೊದಲಿಗೆ ಆಹಾರ ಸಂಗ್ರಹಣೆ ಮತ್ತು ಬೇಟೆಯಿಂದ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಇವರು ಕೃಷಿಯ ಅನ್ವೇಷಣೆಯ ನಂತರ ಕೂಡ ಒಂದೆಡೆ ನಿಂತು ಒಂದೇ ಭೂಮಿಯನ್ನು ನಂಬಿ ಬದುಕಿದವರಲ್ಲ. ಇವರು ‘ಕುಮರಿ’ ಬೇಸಾಯ ಮಾಡುತ್ತಾ ಜಾಗದಿಂದ ಜಾಗಕ್ಕೆ ಸ್ಥಳಾಂತರವಾಗುತಿದ್ದರು. ಅಂದರೆ ಕಾಡೊಳಗಿನ ಒಂದೆರಡು ಎಕರೆಯಷ್ಟು ಭೂಮಿಯನ್ನು ಹಸನು ಮಾಡಿ ಬಿತ್ತನೆ ಮಾಡುವ ಪದ್ಧತಿ. ಈ ಕುಮರಿ ಬೇಸಾಯದ ಎರಡು ಮುಖ್ಯ ಲಕ್ಷಣವೆಂದರೆ ನೇಗಿಲನ್ನು ಬಳಸದೆ ಗುದ್ದಲಿಯಿಂದ ಮಾತ್ರ ಅಗೆದು ಅಬಾದು ಮಾಡುವುದು ಹಾಗೂ ನಿರ್ದಿಷ್ಟ ಪ್ರದೇಶದಲ್ಲಿ ಮೂರು ಸಲಕ್ಕಿಂತ ಹೆಚ್ಚಿನ ಬಾರಿಗೆ ಬೆಳೆ ತೆಗೆಯದೆ ಮುಂದಿನ ಪ್ರದೇಶಕ್ಕೆ ಹೋಗುತ್ತಿದ್ದುದು. ನೇಗಿಲಿನ ಉಪಯೋಗವಿರಲಿಲ್ಲ ಎಂದರೆ ಕೃಷಿ ಭೂಮಿಯ ವಿಸ್ತರಣೆ ಕೂಡ ಇರಲಿಲ್ಲ ಎಂದೇ ಅರ್ಥ. ಬ್ರಿಟಿಷರ ಆಗಮನದ ನಂತರ ಬಂದ ಕಬ್ಬಿಣದ ನೇಗಿಲ ‘ಗುಳ’ ಎಷ್ಟರಮಟ್ಟಿಗೆ ಕೃಷಿ ಭೂಮಿಯ ವಿಸ್ತರಣೆ ಮಾಡಿತು ಎಂಬುದು ನಮಗೆಲ್ಲ ಗೊತ್ತೇ ಇದೆ. ಯಾವುದೇ ಭೂಮಿಯಲ್ಲಿ ಕಾಡು ಕಡಿದರೂ ಅನಂತರ ಅದರ ಪಾಡಿಗೆ ಅದನ್ನು ಏಳು ವರ್ಷ ಬಿಟ್ಟರೆ ಮತ್ತದೇ ಕಾಡು ಆವರಿಸಕೊಳ್ಳುತ್ತದೆ. ಇದನ್ನು ತಿಳಿದಿದ್ದ ಈ ಜನರು ‘ಖಾಯಂ ಕೃಷಿ’ ಭೂಮಿಯ ಬದಲಾಗಿ ‘ಕುಮರಿ ಕೃಷಿ’ಯನ್ನು ಅವಲಂಬಿಸಿ ಆ ಮೂಲಕ ಕಾಡಿಗೆ ಯಾವುದೇ ಅಪಾಯವೂ ಒದಗದಂತೆ ಸಮತೋಲನ ಕಾಪಾಡಿಕೊಂಡು ಬರುತ್ತಿದ್ದರು. ಹೀಗೆ ಇಡೀ ಕಾಡು ತಮ್ಮದು ಎಂಬ ಮನೋವೈಶಾಲ್ಯದಿಂದ ಬಾಳುವ ಮೂಲಕ ಅದರ ಅಸ್ತಿತ್ವಕ್ಕೆ ಧಕ್ಕೆ ಬರದಂತೆ ಬದುಕಿದ ಇವರನ್ನು ಅತಿಕ್ರಮಿಸಿ ಕಾಡು ಮತ್ತು ಭೂಮಿ ‘ನನ್ನದು’ ಎಂಬ ಅಹಂಕಾರದಿಂದ ಗುತ್ತಿಗೆ ಹಿಡಿದ ನಾಗರಿಕ ಮನುಷ್ಯ ಮುಂದೇನು ಮಾಡಿದ ಎಂಬುದನ್ನು ಈಗ ನೋಡೋಣ: