ಉತ್ತರ ಕನ್ನಡ ಜಿಲ್ಲೆ ಇದೀಗ ಸಂಪೂರ್ಣವಾಗಿ ತನ್ನನ್ನು ಆಧುನಿಕ ಯೋಜನೆಗಳಿಗೆ ಒಡ್ಡಿಕೊಂಡು ತಲ್ಲಣಗಳನ್ನು ಅನುಭವಿಸುತ್ತಿದೆ. ಕಾಳಿ ಮತ್ತು ಅದರ ಉಪನದಿಗಳ ವಿದ್ಯುತ್‌ ಯೋಜನೆಗಳು, ಕೈಗಾ ಅಣು ವಿದ್ಯುತ್‌ ಯೋಜನೆ, ಸೀಬರ್ಡ್ಸ್‌ ನೌಕಾನೆಲೆ, ಕೊಂಕಣ ರೈಲ್ವೆ ಯೋಜನೆ, ಅನೇಕ ಗಣಿಗಾರಿಕೆ ಯೋಜನೆಗಳು ಹಾಗೂ ರಾಷ್ಟ್ರೀಯ ಉದ್ಯಾನವನ ಯೋಜನೆ ಇತ್ಯಾದಿಯಾಗಿ ಇಡೀ ಜಿಲ್ಲೆ ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಗೆ ದಾರಿ ಮಾಡಿಕೊಟ್ಟಿದೆ. ದೇಶದ ಒಟ್ಟಾರೆ ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆಗಳನ್ನು ಜಾರಿಗೊಳಿಸುತ್ತಿರಬಹುದು. ಆದರೆ ಇದೇ ಸಂದರ್ಭದಲ್ಲಿ ದೊಡ್ಡ ಸಮುದಾಯದ ಅಭಿವೃದ್ಧಿಗಾಗಿ ತನನ್ನು ಅರ್ಪಿಸಿಕೊಳ್ಳುತ್ತಿರುವ ಸಣ್ಣ ಸಮುದಾಯಗಳ ಸ್ಥಿತಿಗತಿ ಏನು ಎಂಬುದನ್ನು ನಮ್ಮ ವ್ಯವಸ್ತೆ ಗಮನಿಸುವುದಿಲ್ಲ. ದೇಶದ ಅಭಿವೃದ್ಧಿಯ ನೆಪದಲ್ಲಿ ಸಣ್ಣ ಸಮುದಾಯಗಳನ್ನು ಸಂಪೂರ್ಣವಾಗಿ ಬಲಿಕೊಡುವುದು ಸಾಧುವೇ ಎಂಬುದನ್ನು ಗಂಭೀರವಾಗಿ ಯೋಚಿಸಬೇಕು. ಕುಣಬಿಯರು, ಹಾಲಕ್ಕಿ ಒಕ್ಕಲಿಗರು, ಸಿದ್ಧಿಯರು, ಗೌಳಿಗರು ಮುಂತಾದ ಅರಣ್ಯವಾಸಿ ಸಮುದಾಯಗಳ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿರುವ ಉತ್ತರ ಕನ್ನಡದ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

. ಜಲವಿದ್ಯುತ್ಯೋಜನೆಗಳು
(ಕಾಳಿ ಮತ್ತು ಅದರ ಉಪನದಿಗಳು)

. ಸೂಪ ಜಲಾಶಯ
೨. ಬೊಮ್ಮನಹಳ್ಳಿ ಜಲಾಶಯ
೩. ಕೊಡಸಹಳ್ಳಿ ಜಲಾಶಯ
೪. ಕದ್ರಾ ಜಲಾಶಯ
೫. ತಟ್ಟಿಹಳ್ಳಿ ಜಲಾಶಯ
೬. ಮೇಳಂಗಿ (ಉಪ ಅಣೆಕಟ್ಟು)
೭. ಜಾಲಾವಳಿ (ಉಪ ಅಣೆಕಟ್ಟು)

. ಕೈಗಾ ವಿದ್ಯುತ್ಯೋಜನೆ
ಇ. ಅಣಶಿ ನ್ಯಾಷನಲ್
ಪಾರ್ಕ್
. ಗಣಿಗಾರಿಕೆಗೆ ಒಳಗಾಗಿದ್ದ ಪ್ರದೇಶಗಳು

. ಡಿಗ್ಗಿ
೨. ಸುಳಾವಲಿ
೩. ಬಾಮಣೆ
೪. ತೆರಾಳಿ
೫. ಉಡ್ಸ
೬. ಚಾಪೆರಾ
೭. ನಗರಿ
೮. ಪಣಸೋಲಿ
೯. ಕೆವಾಲಿ

ಸ್ವಾತಂತ್ರ್ಯಾ ನಂತರದ ಈ ಅಭಿವೃದ್ಧಿ ಯೋಜನೆಗಳಿಂದ ಕುಣಬಿಯರು ಸಾಕಷ್ಟು ನಲುಗಿಹೋಗಿದ್ದಾರೆ. ಅಪಾರ ಪ್ರಮಾಣದ ಪ್ರಾಕೃತಿಕ ಸಂಪತ್ತೇ ಉತ್ತರ ಕನ್ನಡ ಜಿಲ್ಲೆಗೆ ಮುಳುವಾಗಿದೆ. ದೇಶದಲ್ಲಿಯೇ ಕಡಿಮೆ ಅಂತರದಲ್ಲಿ ಹೆಚ್ಚು ಜಲಾಶಯಗಳಿರುವ ಪ್ರದೇಶ ಎಂಬ ‘ಖ್ಯಾತಿ’ಗೆ ಈ ಪ್ರದೇಶ ಒಳಗಾಗಿದೆ. ಕುಣಬಿಯರ ಬಹುತೇಕ ಕುಮ್ರಿ ಜಮೀನು ಈ ಜಲಾಶಯಗಳ ಗರ್ಭದಲ್ಲಿ ಮುಳುಗಿ ಹೋಯಿತು. ಆ ಜಮೀನುಗಳಿಗೆ ಖಾತೆ-ಕಿರಿದಿ ಇತ್ಯಾದಿ ಲೆಕ್ಕಗಳಿದ್ದಲ್ಲಿ ಒಂದಿಷ್ಟು ಪರಿಹಾರವೋ ಅಥವಾ ಪರ್ಯಾಯ ಭೂಮಿಯೋ ಸಿಗುತ್ತಿತ್ತು. ಆದರೆ ಕುಣಬಿಯರ ಬಹಳಷ್ಟು ಕುಮ್ರಿಗೆ ಯಾವುದೇ ಸಕರಾರಿ ಲೆಕ್ಕ ಇರಲಿಲ್ಲ.

ಇದೇ ಪ್ರದೇಶದ ಅನೇಕ ಭಾಗಗಳಲ್ಲಿ ಆರಂಭಗೊಂಡು ಸಾಕಷ್ಟು ಕಾಲದ ನಂತರ ಸ್ಥಗಿತಗೊಂಡಿರುವ ಗಣಿಗಾರಿಕೆ ಕುಣಬಿ ಕೃಷಿಯ ಮೇಲೆ ಅಗಾಧ ಪರಿಣಾಮವನ್ನು ಬೀರಿದೆ. ದೊಡ್ಡ ಜಲಾಶಯಗಳ ಸುರಂಗಗಳಿಂದ ಅಂತರ್ಜಲದ ಪ್ರಮಾಣ ಹಿಂಗಿದ್ದರೆ, ಗಣಿಗಾರಿಕೆಯಿಂದಾಗಿ ಮಣ್ಣಿನ ಸವಕಳಿ ನಿರಂತರವಾದ ದೂರಗಾಮಿ ಪರಿಣಾಮವನ್ನು ಉಂಟು ಮಾಡುತ್ತಿದೆ. ಈ ಗಣಿಗಾರಿಕೆಯಿಂದ ಇರುವ ಭೂಮಿಯನ್ನು ಉಪಯೋಗಿಸಲಾರದ ಸ್ಥಿತಿಗೆ ಕುಣಬಿಯರು ತಲುಪಿದ್ದಾರೆ.

ಇಂಥ ಯೋಜನೆಗಳಿಂದ ಮುಕ್ತವಾಗಿದ್ದು ಸುಸ್ಥಿತಿಯಲ್ಲಿ ಉಳಿದ ಅರಣ್ಯ ಭೂಮಿಯಲ್ಲಾದರೂ ಮತ್ತೆ ಕುಮರಿ ಬೇಸಾಯವನ್ನು ಆರಂಭಿಸಬಹುದು ಎಂಬ ಆಸೆ ಮೂಡುವ ಹೊತ್ತಿಗೆ ಸರಿಯಾಗಿ ಇಡೀ ಪ್ರದೇಶವನ್ನು ‘ಅಣಶಿ ನ್ಯಾಷನಲ್‌ ಪಾರ್ಕ್‌’ ಎಂದು ಘೋಷಿಸಿ ಸರ್ಕಾರ ಆಜ್ಞೆ ಹೊರಡಿಸಿತು. ನ್ಯಾಷನಲ್‌ ಪಾರ್ಕ್‌‌ನ ಕಾಯ್ದೆ ಪ್ರಕಾರ ಆ ವ್ಯಾಪ್ತಿಯ ಅರಣ್ಯದೊಳಗೆ ಇರುವ ಕುಟುಂಬಗಳು ಕೂಡ ಹೊರಗೆ ಬರಬೇಕು! ಇಂಥ ಅಭಿವೃದ್ಧಿ ನೀತಿಯ ಇಕ್ಕಟ್ಟುಗಳಿಗೆ ಸಿಲುಕಿದ ಕುಣಬಿಯರು ಇಂದು ಯಾವುದೇ ಆಸರೆ ಇಲ್ಲದ ಅನಾಥ ಸ್ಥಿತಿಗೆ ತಲುಪುತ್ತಿದ್ದಾರೆ.