ಕುಣಬಿಯರು ವಾಸಿಸುವುದು ದಟ್ಟಾರಣ್ಯಗಳಲ್ಲಾದುದರಿಂದ ಶಾಲೆಗಳು ಕೂಡ ತುಂಬಾ ಅಂತರದಲ್ಲಿರುತ್ತವೆ. ಕೆಲವೊಮ್ಮೆ ಶಿಕ್ಷಕರೇ ಬರುವುದಿಲ್ಲ. ಮಳೆಗಾಲದಲ್ಲಿ ಕೇಳುವರೂ ಇಲ್ಲ. ಶಾಲೆಗಳೂ ನಡೆಯುವುದಿಲ್ಲ. ಬಹುತೇಕ ಶಿಕ್ಷಕರು ಬಯಲು ಸೀಮೆ ಕಡೆಯಿಂದ ಬಂದವರು. ಮಕ್ಕಳ ಮಾತೃ ಭಾಷೆ ಕೊಂಕಣಿ. ಶಿಕ್ಷಕರಿಗೆ ಆ ಭಾಷೆ ಗೊತ್ತಿಲ್ಲದಿರುವುದರಿಂದ ಮಕ್ಕಳಿಗೆ ಮನವರಿಕೆ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಕೊಂಕಣಿ ಗೊತ್ತಿರುವ ಶಿಕ್ಷಕರನ್ನು ನೇಮಿಸಬೆಕೆಂಬುದು ಕುಣಬಿಗಳ ಒತ್ತಾಯ. ಕನ್ನಡ ಕಲಿಯಲು ಎಲ್ಲರಿಗೂ ಆಸಕ್ತಿ ಇದೆ. ಆದರೆ ಅದನ್ನು ಬಾಲ್ಯದಲ್ಲಿ ಅವರ ಮಾತೃಭಾಷೆಯಲ್ಲಿಯೇ ಮನವರಿಕೆ ಮಾಡಿಕೊಡುವ ಮೂಲಕ ಕಲಿಸಬೇಕೆಂಬ ಅವರ ಅಭಿಪ್ರಾಯದಲ್ಲಿ ಸತ್ಯಾಂಶವಿದೆ.

ದೂರದೂರದ ಶಾಲೆಗಳು. ಶಿಕ್ಷಕರ ಗೈರು ಹಾಜರಿ, ಕೆಲವು ಶಾಲೆಗಳು ಸಂಪೂರ್ಣವಾಗಿ ಮುಚ್ಚಿಹೋಗಿರುವುದು ಇವೆಲ್ಲ ಶಿಕ್ಷಣದ ಪ್ರಗತಿಗೆ ಅಡ್ಡಿಯಾಗಿವೆ. ಇವೆಲ್ಲದರ ಪರಿಣಾಮವಾಗಿ ಅರ್ಧದಲ್ಲಿಯೇ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚು. ಇದರ ಪರಿಣಾಮ ಉನ್ನತ ಶಿಕ್ಷಣ ಎಂಬುದು ಈ ಸಮುದಾಯಕ್ಕೆ ಮರೀಚಕ್ಕೆ. ಪದವಿ ಪಡೆದವರು ಕೇವಲ ಬೆರಳೆಣಿಕೆಯಷ್ಟು. ಇಡೀ ಸಮುದಾಯದಲ್ಲಿ ಇಬ್ಬರು ಮಾತ್ರ ಶಿಕ್ಷಕರಾಗಿ ನೇಮಕ ಹೊಂದಿದ್ದಾರೆ. ಇಡೀ ಕಾಡನ್ನು ವಿದ್ಯುತ್‌ ಯೋಜನೆಗಾಗಿ ಧಾರೆ ಎರೆದ ಕುಣಬಿ ಸಮುದಾಯದಲ್ಲಿ ಕೆ.ಪಿ.ಸಿ. ಕೇವಲ ಮೂವರಿಗೆ ಮಾತ್ರ ನೌಕರಿ ನೀಡಿದೆ. ಆರೇಳು ಜನ ವಿವಿಧ ಇಲಾಖೆಗಳಲ್ಲಿ ನಾಲ್ಕನೇ ದರ್ಜೆ ನೌಕರರಾಗಿ ಸೇರಿದ್ದಾರೆ. ಸ್ನಾತಕೋತ್ತರ ಮಟ್ಟದ ಉನ್ನತ ಶಿಕ್ಷಣ ಯಾರಿಗೂ ಇಲ್ಲ!

ಡಿಗ್ಗಿ, ನುಜ್ಜಿ ಮತ್ತು ಯಣಕೋಳ್‌ಗಳಲ್ಲಿ ಆಶ್ರಮ ಶಾಲೆಗಳನ್ನು ತೆರೆಯಲಾಗಿದೆ. ಇದರಿಂದಾಗಿ ಕೆಲವು ಮಕ್ಕಳು ಅಲ್ಲಿ ವಸತಿ ಸಹಿತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ.

ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಕುಣಬಿಯರಿಗಾಗಿ ಯಾವುದೇ ಪ್ರತ್ಯೇಕ ಯೋಜನೆಗಳನ್ನು ಜಾರಿಗೊಳಿಸಲಾಗಿಲ್ಲ. ವಯಸ್ಕರ ಶಿಕ್ಷಣ ಅಥವಾ ಸಾಕ್ಷರತಾ ಆಂದೋಲನಗಳು ಇಲ್ಲಿ ಯಾವ ಪರಿಣಾಮವನ್ನೂ ಬಿರಿಲ್ಲ. ಕುಣಬಿಯರಿಗೆ ಕೂಡ ಭೂಮಿ ಮತ್ತು ಅನ್ನದ ಪ್ರಶ್ನೆಯೇ ಮುಖ್ಯವಾಗಿರುವುದರಿಂದ ಶಿಕ್ಷಣದ ಕಡೆ ಗಮನ ಇನ್ನೂ ಅಷ್ಟಾಗಿ ಹರಿದಿಲ್ಲ. ಆದರೂ ಇತ್ತೀಚೆಗಿನ ದಿನಗಳಲ್ಲಿ ಕುಣಬಿಯರ ಯುವ ಸಮುದಾಯ ಶಾಲೆಗಳಿಗಾಗಿ ಮತ್ತು ಹಾಸ್ಟೆಲ್‌ಗಳಿಗಾಗಿ ಹೋರಾಟದ ಹಾದಿ ಹಿಡಿದಿದ್ದಾರೆ. ಅದರ ವಿವರವನ್ನು ಮುಂದೆ ನೀಡಲಾಗುತ್ತದೆ.

ಕುಣಬಿಯರ ಜನಸಂಖ್ಯೆ ಮತ್ತು ಶೈಕ್ಷಣಿಕ ಸ್ಥಿತಿಗತಿ

 

 

ಕ್ರ. ಸಂ. ಜಿಲ್ಲೆ ತಾಲ್ಲೂಕು ಅಧ್ಯಯನ ಕ್ಕೊಳಪಡಿಸಿದ ಕುಟುಂಬಗಳ ಸಂಖ್ಯೆ ಒಟ್ಟು ಜನ ಸಂಖ್ಯೆ ಗಂಡು ಹೆಣ್ಣು ಅಕ್ಷರಸ್ಥರು ಅನಕ್ಷರಸ್ಥರು
ಗಂಡು ಹೆಣ್ಣು ಗಂಡು ಹೆಣ್ಣು
೧. ಉತ್ತರ ಕನ್ನಡ ಜೋಯಿಡಾ ೩೫೨ ೧೯೩೪ ೯೨೬ ೧೦೦೮ ೬೧೩ ೪೬೦ ೨೯೫ ೪೦೦
೨. ಉತ್ತರ ಕನ್ನಡ ಯಲ್ಲಾಪುರ ೪೩೦ ೧೭೯ ೯೪ ೮೫ ೫೧ ೪೫ ೩೧ ೩೭
೩. ಉತ್ತರ ಕನ್ನಡ ಅಂಕೋಲ ೧೯ ೨೧೪ ೧೨೪ ೯೦ ೫೧ ೩೩
೪. ಉತ್ತರ ಕನ್ನಡ ಕಾರವಾರ ೧೧ ೬೩ ೩೦ ೩೩ ೧೦ ೧೦
ಒಟ್ಟು     ೪೧೫ ೨೩೯೦ ೧೧೭೪ ೧೨೧೬ ೭೨೫ ೫೪೮ ೩೦೧ ೪೫೦

ಉಲ್ಲೇಖ : ಡಾ. ಆರ್. ಇಂದಿರಾ ಅವರ ‘ಕುಣಬಿಯರು’ ಎಂಬ ಸಮೀಕ್ಷಾ ಗ್ರಂಥ

ಸರ್ಕಾರಿ ಯೋಜನೆಗಳ ಅನುಷ್ಠಾನ :

ವಾಸ್ತವವಾಗಿ ಕುಣಬಿ ಸಮುದಾಯ ‘ಪರಿಶಿಷ್ಟ ವರ್ಗಕ್ಕೆ ಸೇರಬೇಕಾದ ಸಮಸ್ತ ಅರ್ಹತೆಗಳನ್ನೂ ಹೊಂದಿದೆ. ಆದರೆ ಸೇರಿಲ್ಲ. ಇದೀಗ ಗ್ರೂಪ್‌ ‘ಎ’ ನಲ್ಲಿರುವ ಕುಣಬಿ ಸಮುದಾಯಕ್ಕೆ ನಿರ್ದಿಷ್ಟಪಡಿಸಿದ ಸರ್ಕಾರಿ ಸವಲತ್ತುಗಳು ಸಿಗಬೇಕು. ಗ್ರೂಪ್‌ ‘ಎ’ ಗೆ ಮೀಸಲಾದ ಸರ್ಕಾರಿ ಹುದ್ದೆಗಳನ್ನು ಕುಣಬಿಯರು ಪಡೆಯುವ ಸ್ಥಿತಿಯಲ್ಲೇ ಇಲ್ಲ. ಯಾಕೆಂದರೆ ಅಂಥ ಶೈಕ್ಷಣಿಕ ಮಟ್ಟ ಅವರಲಿಲ್ಲ. ಇನ್ನು ಸರ್ಕಾರಿ ಸೌಲಭ್ಯಗಳೆಂದರೆ ಕೆಲವು ತರಬೇತಿ ಕಾರ್ಯಕ್ರಮಗಳಿಗಷ್ಟೇ ಅವು ಮೀಸಲಾಗಿವೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆ ನಿರ್ದಿಷ್ಟಪಡಿಸಿ ಅನುಷ್ಟಾನಗೊಳಿಸುತ್ತಿರುವ ಎಷ್ಟೋ ಯೋಜನೆಗಳು ಈ ನಿಬಿಡಾರಣ್ಯದ ಪ್ರದೇಶದಲ್ಲಿ ಇನ್ನೂ ಜಾರಿಯಾಗಿಲ್ಲ. ಕಾರ್ಪೆಂಟರಿ, ಟೈಲರಿಂಗ್, ಡ್ರೈವಿಂಗ್‌ ಹಾಗೂ ಕಂಪ್ಯೂಟರ್ ತರಬೇತಿಗಳಿಗೆ ಅವಕಾಶಗಳಿದ್ದರೂ ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಟಾನಗೊಳಿಸಿಲ್ಲ. ಕುಣಬಿಯರೇ ಹೇಳುವ ಪ್ರಕಾರ ಎರಡು ವರ್ಷದ ಹಿಂದೆ ಸಮಾಜ ಕಲ್ಯಾಣ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಪಟ್ಟಿ ಮಾಡಿ ಹೋದರು. ಆದರೆ ಇದುವರೆಗೂ ಅವುಗಳು ಲಭ್ಯವಾಗಲಿಲ್ಲ. ಕಾರಣ ತಿಳಿದಿಲ್ಲ.

ಒಟ್ಟಾರೆಯಾಗಿ ಪ್ರವರ್ಗ -೧ ರಲ್ಲಿ ಸಿಗಬೇಕಾದ ಯಾವ ಸೌಲಭ್ಯಗಳೂ ಈ ಸಮುದಾಯಕ್ಕೆ ಇನ್ನೂ ಸಿಕ್ಕಿಲ್ಲ. ಇದಕ್ಕೆ ಅಧಿಕಾರಶಾಹಿಗಳೆಷ್ಟು ಕಾರಣವೋ ಜನಪ್ರತಿನಿಧಿಗಳೂ ಅಷ್ಟೇ ಕಾರಣರಾಗಿದ್ದಾರೆ ಎಂದು ಹೇಳದೆ ವಿಧಿ ಇಲ್ಲ.

ಆದರೆ ಜನ ಪ್ರತಿನಿಧಿಗಳು ಮನಸ್ಸು ಮಾಡಿದರೆ ಯಾವ ರೀತಿಯಲ್ಲಿ ಕೆಲಸಗಳಾಗುತ್ತೆ ಎಂಬುದಕ್ಕೆ ದಿವಂಗತರಾಗಿರುವ ಮಾಜಿ ಶಾಸಕ ಆಸ್ನೋಟಿಕರ್ ಪ್ರಯತ್ನವೇ ಸಾಕ್ಷಿ. ಅವರಿಗೆ ಪ್ರವರ್ಗ-೧ ರಲ್ಲಿ ಬರುವ ಸೌಲಭ್ಯಗಳ ಬಗ್ಗೆ ಅರಿವಿತ್ತೋ ಇಲ್ಲವೋ, ಆದರೆ ಸಾಮಾನ್ಯ ಯೋಜನೆಗಳನ್ನೇ ಕುಣಬಿಯರ ಹಾಡಿಗಳಲ್ಲೂ ಪರಿಣಾಮಕಾರಿಯಾಗಿ ಜಾರಿಗೆ ತಂದರು. ಶಾಲೆ, ನೀರು, ಕೃಷಿ ಯೋಜನೆಗಳು ಇತ್ಯಾದಿಯಾಗಿ ಅವರ ಕಾಲದಲ್ಲಿ ನಮ್ಮ ಹಾಡಿಗಳಲ್ಲೂ ತುಂಬ ಕೆಲಸವಾಯಿತು ಎಂದು ಕುಣಬಿಯರು ಇಂದಿಗೂ ನೆನೆಯುತ್ತಾರೆ. ಇರುವ ಒಂದಿಷ್ಟು ಶಾಲೆಗಳು ಮತ್ತು ನೀರಿನ ಸೌಲಭ್ಯ ಅವರ ಕಾಲದಲ್ಲಿ ಆಯಿತು ಎಂಬುದು ಬಹುತೇಕರ ಅಭಿಪ್ರಾಯ.

ಈ ಪ್ರದೇಶದ ವಿಶೇಷವೆಂದರೆ ಎಲ್ಲಿಯೂ ಬೋರ್ ವೆಲ್‌ ಬಾವಿಗಳು ಇಲ್ಲದಿರುವುದು. ಗುಡ್ಡದಿಂದ ನಿಸರ್ಗದತ್ತವಾಗಿ ಬರುವ ನಿರನ್ನು ಪೈಪುಗಳಿಗೆ ಹರಿಸಿ ತಮಗೆ ಬೇಕಾದ ಕಡೆ ತಿರುವಿಕೊಳ್ಳುತ್ತಾರೆ. ಇಂಥ ಅನೇಕ ನಿಸರ್ಗದತ್ತ ಪೈಪಲೈನ್‌ಗಳು ಕುಣಬಿಯರ ವ್ಯವಸಾಯಕ್ಕೆ ಅನುಕೂಲ ಕಲ್ಪಿಸಿವೆ. ಆದರೆ ಬೇಸಿಗೆಯಲ್ಲಿ ಕೆಲವು ಕಡೆ ಕುಡಿಯುವ ನೀರಿಗೂ ಕಷ್ಟಪಡಬೇಕಾಗುತ್ತದೆ. ಅಂತ ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂಬುದು ಕುಣಬಿಯರ ಆಗ್ರಹ.

ದುರಂತವೆಂದರೆ ಅಲ್ಲಿನ ಜನಪ್ರತಿನಿಧಿಗಳಿಗೆ ಕುಣಬಿಯರ ಬಗೆಗೆ ನಿರ್ಲಕ್ಷ್ಯಧೋರಣೆ ಇದೆ. ಅಲ್ಪಸಂಖ್ಯಾತರಾದ ಅವರನ್ನು ಗಭೀರವಾಗಿ ಪರಿಗಣಿಸಿಲ್ಲ. ಪ್ರಜಾಪ್ರಭುತ್ವದ ಈ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಹಣೆಬರಹವೇ ಇದು. ಈ ಹಿನ್ನೆಲೆಯಲ್ಲಿ ಸಂವಿಧಾನಾತ್ಮಕವಾದ ಅರ್ಹ ಸೌಲಭ್ಯಗಳನ್ನು ಕಲ್ಪಿಸಬೇಕಾದದ್ದು ಆಡಳಿತದ ಕರ್ತವ್ಯ. ಅದರಲ್ಲಿಯೂ ಪರಿಶಿಷ್ಟ ವರ್ಗಕ್ಕೆ ಸೇರಬೇಕಾದ ಎಲ್ಲ ಅರ್ಹತೆಗಳನ್ನು ಪಡೆದಿರುವ ಈ ಸಮುದಾಯವನ್ನು ಆ ಪಟ್ಟಿಗೆ ಸೇರಿಸುವ ಮೂಲಕ ಕೇಂದ್ರ ಸರ್ಕಾರದ ಅಗಾಧ ಪ್ರಮಾಣದ ವಿಶೇಷ ಸೌಲಭ್ಯಗಳು ಇವರಿಗೆ ಸಿಗುವಂತೆ ಮಾಡಬೇಕಾಗಿದೆ.

ಕುಣಬಿಯರ ಇತರೆ ಹೋರಾಟ ಮತ್ತು ಪ್ರತಿಭಟನೆಗಳು:

ಕುಣಬಿಯರದ್ದು ಒಂದು ವಿಶಿಷ್ಟ ಸಮುದಾಯ. ಅವರ ವಾಸಸ್ಥಳಗಳು ಕಾಡಿನ ಗರ್ಭದ ಅಲ್ಲೊಂದು ಇಲ್ಲೊಂದು ಕಡೆ. ಒಟ್ಟಾರೆ ಸೇರಿವುದು ಹಬ್ಬ, ಜಾತ್ರೆ ಮುದುವೆ ಸಮಾರಂಭಗಳಲ್ಲಿ ಮಾತ್ರ. ಜೊತೆಗೆ ಅರೆ ಅಲೆಮಾರಿ ಪ್ರವೃತ್ತಿ. ಈ ಎಲ್ಲಾ ಕಾರಣಗಳಿಂದ ಇವರಲ್ಲಿ ಸಂಘಟನೆಯೇ ಇರಲಿಲ್ಲ ಎನ್ನಬಹುದು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅಲ್ಲಲ್ಲಿ ಒದಗಿದ ಸಾರಿಗೆ ಸೌಲಭ್ಯ, ಸ್ವಯಂಸೇವಾ ಸಂಸ್ಥೆಗಳ ಪ್ರಭಾವ ಹಾಗೂ ಅಲ್ಪ ಪ್ರಮಾಣದ ಶಿಕ್ಷಣ ಅವರಲ್ಲಿ ಎಚ್ಚರವನ್ನು ಉಂಟು ಮಾಡಿದೆ. ‘ಗ್ರೀನ್‌ ಇಂಡಿಯಾ’ ಎಂಬ ಸ್ವಯಂ ಸೇವಾ ಸಂಸ್ಥೆ ತನ್ನೆಲ್ಲ ವೈಚಾರಿಕ ಕಾರ್ಯಕ್ರಮಗಳ ಮೂಲಕ ಅವರಲ್ಲಿ ಸಂಘಟನೆಯ ಶಕ್ತಿಯನ್ನು ತುಂಬಿದೆ. ಇವೆಲ್ಲದರ ಜೊತೆಗೆ ದಿನೇದಿನೇ ಬರ್ಬರವಾಗುತ್ತಿರುವ ಬುದುಕು ಆಡಳಿತದ ನಿರ್ಲಕ್ಷ್ಯ ಧೋರಣೆ, ಅಭಿವೃದ್ಧಿ ಯೋಜನೆಗಳ ದುಃಸ್ಥಿತಿ ಮತ್ತು ರಾಜಕೀಯದ ಚದುರಂಗದಾಟ ಇವರು ಸಂಘಟನೆಗೊಳ್ಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಉಂಟು ಮಾಡಿವೆ. ಇವೆಲ್ಲದರ ಪರಿಣಾಮವಾಗಿ ಉತ್ತರ ಕನ್ನಡ ಜಿಲ್ಲಾ ಕುಣಬಿ ಸಂಘ ಅಸ್ತತ್ವಕ್ಕೆ ಬಂದಿದೆ. ಈ ಸಂಘಕ್ಕೆ ಪೂರಕವಾಗಿ ನಿಂತಿರುವ ಉತ್ತರ ಕನ್ನಡ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಕುಣಬಿಯರ ಪ್ರತಿಭಟನೆಗಳಿಗೆ ಸಹಕಾರ ನೀಡುತ್ತಿದೆ. ಇಡೀ ಉತ್ತರ ಕನ್ನಡದಲ್ಲಿ ರೂಪುಗೊಂಡಿರುವ ರಾಷ್ಟ್ರೀಯ ಅಭಿವೃದ್ಧಿ ನೀತಿಗಳು ಹಾಗೂ ಅವುಗಳ ಅನುಷ್ಠಾನದ ಕಾರ್ಯವೈಖರಿ ಎಲ್ಲಾ ಸಮುದಾಯಗಳ ಸಂಘಟನೆಗೆ ದಾರಿಮಾಡಿಕೊಟ್ಟಿವೆ. ಅದೇ ದಾರಿಯನ್ನು ಕುಣಬಿಯರೂ ತುಳಿದಿದ್ದಾರೆ.

ಭೂ ಚಳವಳಿ

ತಲೆತಲಾಂತರದಿಂದ ನೈಸರ್ಗಿಕ ಕೃಷಿ ಪದ್ಧತಿಯಾದ ಕುಮ್ರಿ ಬೇಸಾಯವನ್ನು ಮಾಡಿತ್ತಾ ಬಂದಿದ್ದ ಕುಣಬಿಯರ ಜಮೀನನ್ನು ಆಕ್ರಮ ಸಾಗುವಳಿ ಎಂಬ ನೆಪವೊಡ್ಡಿ ಅರಣ್ಯ ಇಲಾಖೆ ಕಸಿದುಕೊಳ್ಳುತ್ತಿದೆ ಎಂದು ಭಯಭೀತರಾದ ಕುಣಬಿ ರೈತರು ‘ಕುಂಬರಿ ಹಕ್ಕಲ ಹೋರಾಟ ಸಮಿತಿ ಜೋಯಿಡಾ’ ಎಂಬ ಹೆಸರಿನಲ್ಲಿ ಸಮಿತಿಯೊಂದನ್ನು ರಚಿಸಿಕೊಂಡು ನಿರಂತರ ಹೋರಾಟದಲ್ಲಿ ತೊಡಗಿದೆ. ಅನೇಕ ಸತ್ಯಾಗ್ರಹಗಳನ್ನು ನಡೆಸಿರುವ ಸಮಿತಿ ಅಧಿಕಾರದ ಎಲ್ಲಾ ಹಂತಗಳಿಗೆ ಪತ್ರ ಚಳುವಳಿಯನ್ನು ನಡೆಸಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ಮುಖಾಮುಖಿ ಸಂವಾದಗಳನ್ನು ನಡೆಸಿದೆ. ಅರಣ್ಯಭೂಮಿ ಒತ್ತುವರಿದಾರರ ಮಾಹಿತಿಗಳನ್ನು ಸಂಗ್ರಹಿಸಿ ಅವರೆಲ್ಲರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದೆ. ಇವರೆಲ್ಲ ಒತ್ತುವರಿದಾರರು ಹಾಗೂ ಆಕ್ರಮ ಸಾಗುವಳಿದಾರರು ಎಂಬ ಅರಣ್ಯ ಇಲಾಖೆಯ ಅರಣ್ಯ ಧೋರಣೆಯನ್ನು ಖಂಡಿಸಿ ತಾವೆಲ್ಲ ಪರಂಪರಾಗತ ಸಾಗುವಳಿದಾರರು ಎಂಬುದನ್ನು ಮನವರಿಕೆ ಮಾಡಿಕೊಡಲು ಈ ಸಮಿತಿ ಪ್ರಯತ್ನಿಸಿದೆ. ಈಗಾಗಲೇ ಕಳೆದುಕೊಂಡಿರುವ ಕುಮ್ರಿ ಭೂಮಿಯನ್ನು ಮರು ನೀಡುವಂತೆ ಒತ್ತಾಯಸಲಾಗುತ್ತಿದೆ. ಇದು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಲಭ್ಯವಿರುವ ರೆವಿನ್ಯೂ ಭೂಮಿಯನ್ನು ತಮಗೆ ವಹಿಸಿಕೊಡಬೇಕೆಂದೂ ಮಾಹಿತಿ ಕಾಯ್ದೆ ಹಕ್ಕಿನ ಪ್ರಕಾರ ಅಂಥ ವಿವಿರಗಳನ್ನು ನೀಡುವಂತೆ ಸರ್ಕಾರವನ್ನು ಕೇಳಲಾಗುತ್ತದೆ.

ಶಿಕ್ಷಣ ಸೌಲಭ್ಯಕ್ಕಾಗಿ ಹೋರಾಟ

ಕುಣಬಿ ಪ್ರದೇಶಗಳಲ್ಲಿ ಶಾಲೆಗಳೇ ಅತ್ಯಂತ ವಿರಳ. ಆದರೆ ಅವುಗಳಿಗೂ ಹಲವು ಕಡೆ ಶಿಕ್ಷಕರಿಲ್ಲ. ಅಂಥ ಶಿಕ್ಷಕರಿಲ್ಲದ ಶಾಲೆಗಳಲ್ಲಿ ಕುಣಬಿಯರೇ ನಾಡಹಬ್ಬ ಆಚರಿಸುವ ಮೂಲಕ ವಿನೂತನ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಶಾಲೆಗಳ ಮೂಲ ಸೌಕರ್ಯ ಹಾಗೂ ಶಿಕ್ಷಕರಿಗಾಗಿ ಒತ್ತಾಯಿಸಿ ಧರಣಿ, ಮೆರವಣಿಗೆ ಹಾಗೂ ರಸ್ತೆ ರೋಕೋ ಚಳುವಳಿಗಳನ್ನು ನಡೆಸಿದ್ದಾರೆ.

ಅಣಶೀ ನ್ಯಾಷನಲ್ಪಾರ್ಕ್ಹೋರಾಟ

ಕುಣಬಿಯರೇ ಹೆಚ್ಚು ವಾಸಿಸುವ ಪ್ರದೇಶದಲ್ಲಿ ಅಣಶಿ ನ್ಯಾನಲ್‌ ಪಾರ್ಕ್‌ ಸ್ಥಾಪಿಸುವ ಆದೇಶ ಹೊರಬೀಳುತ್ತಿದ್ದಂತೆ ಅರಣ್ಯ ಇಲಾಖೆ ವತಿಯಿಂದ ಕುಣಬಿಯರನ್ನು ಒಕ್ಕಲೆಬ್ಬಿಸುವ ಕಾರ್ಯಾಚರಣೆ ಬಿರುಸುಗೊಂಡಿತು. ಆಗ ಕುಣಬಿ ಸಂಘದ ಕಾರ್ಯದರ್ಶಿಗಳಾದ ಮಹಾಬಳೇಶ್ವರ ಕಾಜುಗಾರ್ ಅವರ ನೇತೃತ್ವದಲ್ಲಿ ಅಣಶಿ ನ್ಯಾಷನಲ್‌ ಪಾರ್ಕ್‌‌ನ ಹೋರಾಟ ಸಮಿತಿ ರೂಪುಗೊಂಡಿತು. ಸಮಿತಿಯ ನಿರಂತರ ಹೋರಾಟದ ಫಲವಾಗಿ ನೂರಾರು ಕುಟುಂಬಗಳ ಒಕ್ಕಲೆಬ್ಬಿಸುವ ಕಾರ್ಯ ನಿಂತಿತಲ್ಲದೆ. ಕುಣಬಿಯರು ಕಾಡಿನ ಶತೃಗಳಲ್ಲ ಬದಲಾಗಿ ಅದರ ಮಿತ್ರರು ಮತ್ತು ರಕ್ಷಕರು ಎಂಬುದನ್ನು ಮನಗಾಣಿಸಲಾಯಿತು. ಇಷ್ಟೆಲ್ಲ ಆದರೂ ನ್ಯಾಷನಲ್‌ ಪಾರ್ಕ್‌ ಪ್ರದೇಶದ ನಿವಾಸಿಗಳ ತಲೆಯ ಮೇಲೆ ತೂಗುಗತ್ತಿ ನೇತಾಡುತ್ತಲೇ ಇತ್ತು. ಆದರೆ ಇತ್ತೀಚಿಗಷ್ಟೆ ಜಾರಿಗೆ ಬಂದ ಪರಿಶಿಷ್ಟ ವರ್ಗಗಳು ಮತ್ತು ಇತರೆ ಪರಂಪರಾಗತ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಬಿಲ್‌, ೨೦೦೬ರ ತಿದ್ದುಪಡಿಗಳು ಸಮಾಧಾನದ ಉಸಿರು ಬಿಡುವಂತೆ ಮಾಡಿವೆ. ಇದರ ಅನುಷ್ಠಾನವನ್ನು ಇನ್ನು ಕಾದು ನೋಡ ಬೇಕಾಗಿದೆ.

ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಚಳವಳಿ

ಪ್ರಾಚೀನ ಬುಡಕಟ್ಟುಗಳ ಅನೇಕ ಲಕ್ಷಣಗಳನ್ನು ಹೊಂದಿದ್ದು, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರತಿನಿಧಿಸುತ್ತಿರುವ ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡವೆಂದು ಗುರುತಿಸಬೇಕೆಂದು ಕುಣಬಿಗಳ ಒತ್ತಾಯ. ಧರಣಿ, ಸತ್ಯಾಗ್ರಹ, ಸಂವಾದ ಹಾಗೂ ಸಂಕಿರಣಗಳ ಮೂಲಕ ಈ ವಿಚಾರವನ್ನು ಸರ್ಕಾರದ ಮುಂದಿಟ್ಟು ಹೋರಾಟ ಮಾಡುತ್ತಿರುವ ಕುಣಬಿ ಸಂಘ ಇಂದಲ್ಲ ನಾಳೆ ಆ ಸೌಲಭ್ಯ ಪಡೆದೇತೀರುತ್ತೇವೆ ಎಂಬ ಆಶಾಭಾವನೆಯಲ್ಲಿದೆ.

ದೌರ್ಜನ್ಯದ ವಿರುದ್ಧ ಹೋರಾಟ :

ಕುಣಬಿಯರು ಸಾಮಾಜಿಕವಾಗಿ ತೀರಾ ಕೆಳಸ್ಥರದಲ್ಲೇನೂ ಇಲ್ಲ. ಅಸ್ಪೃಶ್ಯರಿಗೆ ಇರುವ ಸಾಮಾಜಿಕ ಅಪಮಾನಗಳು ಇವರಿಗಿಲ್ಲ. ಆದರೂ ತಮ್ಮದು ಸಣ್ಣ ಅಲ್ಪಸಂಖ್ಯಾತ ಸಮುದಾಯ ಎಂಬ ಭಾವನೆ ಹಾಗೂ ಕಾಡಿನ ವಾಸ ಇವರಲ್ಲಿ ಕೀಳರಿಮೆಯನ್ನು ಹುಟ್ಟಿಸಿದೆ. ತಮ್ಮ ಸುತ್ತ ಇರುವ ಭೂಮಾಲೀಕ ವರ್ಗವಾದ ಭಟ್ಟರು, ದೇಸಾಯರು (ಮರಾಠರು) ವಾಣಿ (ಶೆಟ್ಟರು) ಕೊಂಕಣಿ ವ್ಯಾಪಾರಿಗಳು ಮುಂತಾಗಿ ಕೆಲವರು ಇವರನ್ನು ಶೋಷಿಸುತ್ತಲೇ ಬಂದಿದ್ದಾರೆ. ಬಟ್ಟೆಗೆ ಹಣಕೊಟ್ಟು ತುಂಡು ಜಮೀನುಗಳನ್ನು ವಶಪಡಿಸಿಕೊಂಡಿರುವ ಪ್ರಕರಣಗಳೂ ಉಂಟು. ಜೀತದಾಳುಗಳನ್ನಾಗಿ ದುಡಿಸಿಕೊಂಡದ್ದು ಇದೆ. ಈಗಲೂ ಅನೇಕ ಕುಣಬಿಗಳು ಇವರ ಮನೆಗಳಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸಾಮಾಜಿಕವಾಗಿ ಅಲ್ಲದಿದ್ದರೂ ಆರ್ಥಿಕವಾಗಿ ತೀರಾ ಹಿಂದುಳಿದ ಈ ಸಮುದಾಯದ ಮೇಲೆ ನಿರಂತರವಾದ ದೌರ್ಜನ್ಯಗಳು ನಡೆದಿವೆ. ಕೊಲೆ ಮತ್ತು ಲೈಂಗಿಕ ದೌರ್ಜನ್ಯಗಳ ವಿರಳ ಪ್ರಕರಣಗಳೂ ನಡೆದಿವೆ. ೧೯೯೯ರಲ್ಲಿ ಒಬ್ಬ ಯುವತಿಯ ಕೊಲೆಯ ಸಂದರ್ಭದಲ್ಲಿ ಇವರೆಲ್ಲ ಒಟ್ಟಾದರು. ಒಗ್ಗಟ್ಟಿನ ಹೋರಾಟ ನಡೆಸಿದರು. ಧರಣಿ ಸತ್ಯಾಗ್ರಹಗಳ ಮೂಲಕ ಮೇಲ್ವರ್ಗದ ಹಾಗೂ ಧನಿಕನಾದ ಅಪರಾಧಿಯನ್ನು ಜೈಲು ಸೇರಿಸುವಲ್ಲಿ ಕುಣಬಿಯರು ಯಶಸ್ವಿಯಾದರು. ಈ ಪ್ರಕರಣ ಅವರಲ್ಲಿ ಒಂದು ಆತ್ಮ ವಿಶ್ವಾಸವನ್ನು ಮೂಡಿಸಿತು. ಆ ನಂತರದಲ್ಲಿ ಪ್ರತಿಯೊಂದು ದೌರ್ಜನ್ಯದ ವಿರುದ್ಧ ಕುಣಬಿಯರು ಧನಿ ಎತ್ತುತ್ತಿದ್ದಾರೆ. ಅಂಥ ಎಚ್ಚರ ಅವರಲ್ಲಿ ಉಂಟಾಗಿದೆ.

ಸ್ವಯಂಸೇವಾ ಸಂಸ್ಥೆಯ ಪಾತ್ರ :

ಇತ್ತೀಚೆಗಿನ ದಿನಗಳಲ್ಲಿ ವಿದೇಶಿ ಹಣದ ವ್ಯಾಮೋಹಕ್ಕಾಗಿಯೇ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಹುಟ್ಟಿಕೊಂಡಿವೆ. ಅಂತ ಅನೇಕ ಸಂಸ್ಥೆಗಳು ಜನ್ಮ ತಾಳಿವೆ.

ಆದರೆ ನನ್ನ ತಿಳುವಳಿಕೆ ಪ್ರಕಾರ ಕುಣಬಿಯರ ಒಳಿತಿಗಾಗಿ ದುಡಿಯುತ್ತಿರುವ ದಾಂಡೇಲಿಯಲ್ಲಿರುವ ‘ಗ್ರೀನ್‌ ಇಂಡಿಯಾ’ ಸ್ವಯಂಸೇವಾ ಸಂಸ್ಥೆ’ ವೈಚಾರಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸಂಘಟನೆ, ಸಹಕಾರ ಈ ಎರಡೂ ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆ ‘ಜಂಗಲ್‌ – ಜಮೀನು – ಸಂಸ್ಕೃತಿ’ ಎಂಬ ಧ್ಯೇಯ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ಜನ್ಮ ತಾಳಿರುವ ‘ಉತ್ತರ ಕನ್ನಡ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ’ ಯ ಉತ್ತರ ಕನ್ನಡದ ಕುಣಬಿ, ಗೌಳಿ ಸಿದ್ಧಿ ಹಾಗೂ ಹಾಲಕ್ಕಿ ಸಮುದಾಯಗಳನ್ನು ಒಂದಾಗಿ ಬೆಸೆಯುವ ಕಾರ್ಯ ಮಾಡುತ್ತಿದೆ. ಕುಣಬಿಯರ ಸಾಂಸ್ಕೃತಿಕ ಅನನ್ಯತೆ ಉಳಿಸುವಲ್ಲಿ ಗ್ರೀನ್‌ ಇಂಡಿಯಾದ ಕಳಕಳಿ ಎದ್ದು ಕಾಣುತ್ತದೆ.

ಉಳಿತಾಯ ಸಂಘಗಳು :

ಕುಣಬಿ ಸಮುದಾಯ ಮೊದಲಿನಿಂದಲೂ ದುಡಿಮೆಗೆ, ಶ್ರಮಕ್ಕೆ ಬೆಲೆ ಕೊಡುತ್ತಾ ಬಂದಿದೆ. ಒಗ್ಗಟ್ಟು ಅವರ ಬುಡಕಟ್ಟು ಮನೋಧರ್ಮದಿಂದ ಬಂದ ಸಹಜ ಗುಣ. ಇದರ ಪ್ರತೀಕವೋ ಎಂಬಂತೆ ಕುಣಬಿಯರಲ್ಲಿ ಕೂಲಿಯನ್ನು ಉಳಿತಾಯ ಮಾಡುವ ಸುಮಾರು ೨೦೦ ಸಂಘಗಳು ಇತ್ತೀಚೆಗಷ್ಟೆ ಸ್ಥಾಪನೆಗೊಂಡಿವೆ. ಗಂಡಸರು ಮತ್ತು ಹೆಂಗಸರು ಇದರ ಸದಸ್ಯರಾಗಬಹುದು. ಈ ಸಂಘಗಳಲ್ಲಿ ಯಾವುದೇ ಹೊರಗಿನ ಹಸ್ತಕ್ಷೇಪವಿಲ್ಲ. ಆಡಳಿತ ಮತ್ತು ನಿರ್ವಹಣೆ ಅವರದೇ ಇದರಿಂದಾಗಿ ಸಾಲ-ಸೋಲದಿಂದ ಬಳಲುವುದು ತಪ್ಪಿದೆ ಎಂಬುದು ಕುಣಬಿ ಮುಖಂಡರ ಅಭಿಪ್ರಾಯ.