ಮೂಲತಃ ಬಯಲು ಸೀಮೆಯ ಬೆಂಗಾಡಿನಲ್ಲಿ ಹುಟ್ಟಿದ ನನ್ನಂಥವನಿಗೆ ಮಲೆನಾಡಿಗೆ ಹೋಗುವುದೇ ಒಂದು ಆನಂದದ ಸಂಗತಿ. ಅಲ್ಲಿನ ಹಸಿರು ವನರಾಶಿಯಾಗಲೀ, ಹರಿಯುವ ಹಳ್ಳಗಳಾಗಲೀ, ಗೊಂಚಲು ಹೂವಾಗಲೀ ಬಯಲುಸೀಮೆಗೆ ಕೇವಲ ಮಳೆಗಾಲದ ಪಳೆಯುಳಿಕೆಗಳು.

ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಸ್‌. ಕೆ. ಕರೀಂಖಾನ್‌ರವರು ತಮ್ಮ ಅಧಿಕಾರಾವಧಿಯ ಮೊದಲ ಹಂತವಾಗಿ ಸಹ್ಯಾದ್ರಿ ಶ್ರೇಣಿಯ ಆಜುಬಾಜಿನ ಎಲ್ಲ ಗಿರಿಜನರ ಜೀವನ ವಿಧಾನಗಳನ್ನು ಕುರಿತಂತೆ ವಿಡಿಯೋ ಸಾಕ್ಷ್ಯ ಚಿತ್ರಗಳನ್ನು ತಯಾರಿಸುವ ಒಂದು ಯೋಜನೆ ರೂಪಿಸಿದ್ದರು. ನಮ್ಮ ನಾಡಿನ ಹೆಮ್ಮೆಯ ಮಲೆನಾಡು ಕೂಡ ಸದ್ಯದಲ್ಲಿಯೇ ಬರಿದಾಗಿ, ಬಯಲಾಗಿ, ಬರಡಾಗಿ ಪರಿವರ್ತಿತವಾಗುವ ಅಪಾಯದ ಮನವರಿಕೆಯಿದ್ದ ಕರೀಂಖಾನರು ಹಸಿರು ಉಳಿದಿರುವಾಗಲೇ ನಮ್ಮ ಯೋಜನೆಯನ್ನು ಪೂರೈಸಬೇಕೆಂಬ ಕಟ್ಟಾಜ್ಞೆಯನ್ನು ಕೂಡ ನಮಗೆ ವಿಧಿಸಿದ್ದರು. ಈ ಯೋಜನೆಯ ಮೊದಲ ಹಂತವಾಗಿ ನಾವು ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಪ್ರಯಾಣ ಬೆಳೆಸಿದೆವು. ಸಾಗರ ತಾಲ್ಲೂಕಿನ ತಾಲಗುಪ್ಪದ ಗಿರಿಜನ ಆಶ್ರಮ ಶಾಲೆಯ ಹುಚ್ಚಪ್ಪಮಾಸ್ತರ ನೆರೆವಿನಿಂದ ಪಶ್ಚಿಮಕ್ಕೆ ಸುಮಾರು ೭೦ ಕಿ. ಮೀ. ಪ್ರಯಾಣ ಬೆಳಸಿ ನಾಗವಳ್ಳಿ ತಲುಪಿದೆವು. ಸಹ್ಯಾದ್ರಿಯ ಅತ್ಯುನ್ನತ ಶ್ರೇಣಿಗಳ ಕಣಿವೆಯೊಳಗೆ ಸುಂದರ ‘ಸರಳಾ’ ಎಂಬ ನದಿ ದಡದಲ್ಲಿರುವ ನಾಗವಳ್ಳಿ ಇವತ್ತಿಗೂ ಮಲೆನಾಡಾಗೇ ಉಳಿದಿದ್ದುದು ನಮ್ಮೆಲ್ಲರಿಗೆ ಸಂತೊಷ ತಂದಿತ್ತು. ನಾಗವಳ್ಳಿ ಮತ್ತು ಹಾಡುವಳ್ಳಿಗಳ ಸುತ್ತಮುತ್ತ ದಟ್ಟ ಕಾಡಿನ ಒಡಲೊಳಗಿರುವ ಗೊಂಡ ಜನಾಂಗದವರ ಚಿತ್ರೀಕರಣ ನಮ್ಮ ಗುರಿಯಾಗಿತ್ತು. ನಾಗವಳ್ಳಿಯಿಂದ ಹಾಡುವಳ್ಳಿಗೆ ಪ್ರಯಾಣ ಬೆಳೆಸಿ ಜೀಪು ನಿಲ್ಲಿಸಿ ಸುತ್ತಲೂ ಒಮ್ಮೆ ಕಣ್ಣಾಡಿಸಿದೆವು. ಕೋಟೆಯಂತೆ ಹಬ್ಬಿದ ಪರ್ವತ ಸಾಲುಗಳು, ಮೊನೆಚು ಗಿರಿಶಿಖರಗಳು ಮನಸ್ಸಿನಲ್ಲಿ ಅಲೆ ಎಬ್ಬಿಸಹತ್ತಿದವು. ಅಲ್ಲಲ್ಲಿ ಸೂಜಿಯಂತೆ ಮೇಲೇಳುವ ಹೊಗೆ ವಸತಿ ಭಾಗಗಳನ್ನು ಸೂಚಿಸುತ್ತಿತ್ತು. ದೂರದೂರದಲ್ಲಿ ನಾಯಿಯೋ, ಹಸುವೋ ಮತ್ತಾವುದೋ ಪ್ರಾಣಿಯ ಶಬ್ದ ಆಗಾಗ ತೇಲಿಬರುತ್ತಿತ್ತು. ಲಟ್‌…. ಪಟ್‌…. ಎಂಬ ಮರ ಕಡಿಯುವ ಶಬ್ದವೂ ಕೇಳದಿರಲಿಲ್ಲ. ಹಾಡುವಳ್ಳಿಗೆ ಹಿಂದೆ ಸಂಗೀತಪುರವೆಂಬ ಹೆಸರು ಇತ್ತಂತೆ. ಅದು ಜೈನರ ಊರಾಗಿತ್ತೆಂದು ಕೇಳಿ ತಿಳಿದುಕೊಂಡಿವು. ಈಗ ೧೦-೧೨ ಮನೆಗಳ ಕುಗ್ರಾಮ ಅಷ್ಟೆ.

ಅಲ್ಲಿಂದ ಸುಮಾರು ೫ ಕಿ. ಮೀ. ದೂರದಲ್ಲಿದ್ದ ಅರ್ಕಳ ಎಂಬ ಜಾಗಕ್ಕೆ ಕಾಲ್ನಡಿಗೆಯಿಂದಲೇ ಹೊರಟೆವು. ಇಕ್ಕಟ್ಟಾದ ದಾರಿ. ದಾರಿಯಂಚಿಗೆ ಮಂಡಿಯೆತ್ತರ ಬೆಳೆದು ಹುಲ್ಲು. ಒಬ್ಬರ ಹಿಂದೆ ಒಬ್ಬರ ಪಯಣ. ಅಲ್ಲಲ್ಲಿ ಅಡಿಕೆ ತೋಟಗಳ ಗುಂಪು. ಕಣಿವೆಯಲ್ಲಿನ ತುಂಡು ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಗೊಂಡರ ಮತ್ತು ದೀವರ ಜನಾಂಗ. ಕೊರಳಿಗೆ ಮರದ ಗಂಟೆ ಕಟ್ಟಿಕೊಂಡ ತುಂಡು ಹಸುಗಳ ಕೊರಳ ನಾದ. ನಾಗವಳ್ಳಿಯ ಕುಪ್ಪಯ್ಯ, ಗೊಂಡ ಜನಾಂಗದ ಕರಿಯ ನಮ್ಮ ಮಾರ್ಗದರ್ಶಕರು. ನಾಡಕೋವಿಯೊಂದನ್ನು ಹೆಗಲಿಗೇರಿಸಿಕೊಂಡು ಅಪ್ಪಟ ಬೇಟೆಗಾರನಂತೆ ಲೀಲಾಜಾಲವಾಗಿ ಮುನ್ನುಗ್ಗುತ್ತಿದ್ದ ಕುಪ್ಪಯ್ಯನನ್ನು ಹಿಂಬಾಲಿಸುವುದೇ ನಮಗೆ ತ್ರಾಸವಾಗುತ್ತಿತ್ತು. ತಿರುವು-ಮುರುವಿನ ಕೊರಕಲು ಹಾದಿಗಳಲ್ಲಿ ಅವನು ಮರೆಯಾಗಿ ಯಾವುದೋ ಜಾಗದಲ್ಲಿ ನಿಂತು ಇದ್ದಕ್ಕಿಂದ್ದಂತೆ ಪ್ರತ್ಯಕ್ಷವಾಗುತ್ತಿದ್ದ. ಕಪ್ಪು ಚರ್ಮದ ದಷ್ಟಪುಷ್ಟನಾದ ಈ ಕುಪ್ಪಯ್ಯ ಕುವೆಂಪು ಕಾದಂಬರಿಯಲ್ಲಿ ಬರುವ ನಿಷ್ಣಾತ ಬೇಟೆಗಾರ ಪುಟ್ಟಣ್ಣನಂತೆಯೇ ಗೋಚರವಾಗುತ್ತಿದ್ದ. ಅಲ್ಲಿನ ಪುಟ್ಟಣ್ಣನ ಸಾಹಸಗಳನ್ನು ಕಾದಂಬರಿಯಲ್ಲಿರುವಂತೆ ವರ್ಣಿಸುತ್ತಾ, ಆ ಪುಟ್ಟಣ್ಣನಿಗೂ ಈ ಕುಪ್ಪಯ್ಯನಿಗೂ ಇದ್ದಿರಬಹುದಾದ ಸಾದೃಶ್ಯ – ವೈದೃಷ್ಯಗಳನ್ನು ನಾನು ನನ್ನ ಗುಂಪಿಗೆ ವಿವರಿಸುತ್ತಿದ್ದಂತೆಯೇ ಕುಪ್ಪಯ್ಯ ಸರಕ್ಕನೆ ಹಿಂದಿರುಗಿ ಬಾಯಿ ಮೇಲೆ ಬೆರಳಿಟ್ಟು ಮಾತನಾಡದಂತೆ ಸೂಚಿಸಿದ. ಏನೋ ಇರಬೇಕೆಂದು ಅವನ ಸೂಚನೆಗನುಸಾರವಾಗಿ ನಾವೆಲ್ಲರೂ ಗಕ್ಕನೆ ನಿಂತೆವು. ಒಂದು ಕ್ಷಣ ನಿಂತು ಎತ್ತಲೋ ನೋಡಿದ ಕುಪ್ಪಯ್ಯ ಒಂದು ಸಂದಿಯಲ್ಲಿ ಓಡತೊಡಗಿದ. ನಮ್ಮ ಹಿಂದೆ ಬೆಂಗಾವಲಾಗಿ ಬರುತ್ತಿದ್ದ ಕರಿಯನೂ ಹೇಳದೆ ಕೇಳದೆ ಕುಪ್ಪಯ್ಯ ಓಡಿದ ದಾರಿಯಲ್ಲಿಯೇ ಓಡಿದ. ಐದು ನಿಮಿಷದಲ್ಲಿ ಇಬ್ಬರು ಏದುಸಿರು ಬಿಡುತ್ತಾ ಹಿಂತಿರುಗಿದರು. ಮೊಲವೊಂದು ಕುಪ್ಪಯ್ಯನ ಕಣ್ಣಿಗೆ ಬಿದ್ದು ಅದನ್ನು ಅಟ್ಟಿಸಿಕೊಂಡು ಹೋಗಿದ್ದಾಗಿಯೂ, ಬೇಟೆ ಸಿಗಲಿಲ್ಲವೆಂದು ಕುಪ್ಪಯ್ಯ ಅನಂತರ ವಿವರಿಸಿದ. ಹೀಗೆ ಸುಮಾರು ೫ ಕಿ. ಮೀ. ಪ್ರಯಾಣಿಸಿದ ನಾವು ಅರ್ಕಳವೆಂಬ ಇನ್ನೊಂದು ಸುಂದರ ತಾಣಕ್ಕೆ ಬಂದು ಸೇರಿದೆವು. ಹಾಡುವಳ್ಳಿಯಿಂದ ದೂರದಲ್ಲಿ ಗೋಚರಿಸುತ್ತಿದ್ದ ಪರ್ವತ ಶಿಖರವೊಂದು ಈಗ ನಮ್ಮ ತಲೆಯ ಮೇಲೇ ಇತ್ತು. ಆಗಾಗ ಶಿಖರಕ್ಕೆ ಮುತ್ತಿಕ್ಕತ್ತಿದ್ದ ಮೋಡಗಳು ಕರಗಿ  ಕರಗಿ ವಿವಿಧಾಕಾರ ತಾಳುತ್ತಿದ್ದವು.

ಅಂದಿನ ನಮ್ಮ ಉದ್ದೇಶ ಅರ್ಕಳದ ಗೊಂಡರ ಪರಿಸರವನ್ನು ಚಿತ್ರೀಕರಿಸಿಕೊಂಡು ಸಾಗರಕ್ಕೆ ಹಿಂತಿರುಗುವುದಾಗಿತ್ತು. ನಮ್ಮ ಹಿಂದುಗಡೆ ಮೈಚಾಚಿ ನಿಂತಿದ್ದ ಪರ್ವತ ಶ್ರೇಣಿಯೊಂದನ್ನು ತೋರಿಸಿ ಆ ಪರ್ವತದ ಮೇಲೆ ‘ಮೆಗಾನೆ’ ಎಂಬ ಹಳ್ಳಿ ಇರುವುದಾಗಿಯೂ ಅಲ್ಲಿ ‘ಕುಣಬಿ’ ಎಂಬ ಜನಾಂಗ ವಾಸವಿರುವುದಾಗಿಯೂ, ಅವರಲ್ಲಿ ಅನೇಕರು ಇದುವರೆಗೆ ಸೈಕಲ್ಲನ್ನೇ ನೋಡಿಲ್ಲವೆಂದು ತಿಳಿಸಿ, ನಾವೆಲ್ಲರೂ ಸಿದ್ಧರಿರುವುದಾದರೆ ಬೆಟ್ಟ ಹತ್ತಿಸಿ ಅಲ್ಲಿಗೇ ಮೊದಲು ಕರೆದುಕೊಂಡು ಹೋಗುವುದಾಗಿಯೂ ಕುಪ್ಪಯ್ಯ ತಿಳಿಸಿದ. ಸಾವಿರಾರು ಅಡಿ ಎತ್ತರವಿದ್ದ ಬೆಟ್ಟದ ಶಿಖರವನ್ನು ನೋಡಿಯೇ ದಂಗಾಗಿದ್ದ ಮತ್ತು ಈಗಾಗಲೇ ಸಾಕಷ್ಟು ಬಸವಳಿದಿದ್ದ ವಿಷ್ಣು ಎಂಬ ಸ್ವಲ್ಪ ದಢೂತಿ ಹೊಟ್ಟೆಯ ಗೆಳೆಯ “ಅಯ್ಯಪ್ಪ ನಾನಂತೂ ಬರುವುದಿಲ್ಲ” ಎಂಬ ಪ್ರಥಮ ಉದ್ಗಾರವೆತ್ತಿದರು. “ಎಲ್ಲರೂ ಮನಸ್ಸು ಮಾಡಿದರೆ ತುಂಬಾ ಚೆನ್ನಾಗಿರುತ್ತೆ. ಹೋಗಿ ಬರೋಣ. ನಮ್ಮ ಜೀವನದಲ್ಲಿ ಇಂಥಾ ಸ್ಥಳಕ್ಕೆ ಬರುತ್ತೀವೋ ಇಲ್ವೋ” ಎಂದು ಕ್ಯಾಮೆರಾಮನ್‌ ಶ್ರೀನಿವಾಸಮೂರ್ತಿ ಉತ್ಸಾಹ ತೋರಿ ನನ್ನ ಮುಖ ನೋಡಿದರು. ನಾನಂತೂ ಒಪ್ಪಿಗೆ ನಿರ್ಧಾರ ಪ್ರಕಟಿಸಿದ ಕೂಡಲೇ ಗೆಳೆಯ ಲಿಂಗೇಗೌಡ ಹತ್ತಲೇಬೇಕೆಂಬ ಹಟ ಹಿಡಿದರು. ಪಾಪ ವಿಷ್ಣು ಬಹುಮತಕ್ಕೆ ತಲೆ ಬಾಗಲೇಬೇಕಾಯಿತು. ಗೊಂಡರ ಒಬ್ಬ ಆಳನ್ನು ಹಾಡುವಳ್ಳಿಗೆ ಕಳಿಸಿ ಜೀಪು ಸಾಗರಕ್ಕೆ ಹಿಂತಿರುಗವಂತೆ ಸೂಚಿಸಿದೆವು. ಅಧ್ಯಕ್ಷ ಕರೀಂಖಾನರು ಸಾಗರದಲ್ಲಿ ಗಿರಿಜನ ಮೇಳ ನಡೆಸುವ ಬಗೆಗೆ ಪ್ರಮುಖರ ಜೊತೆ ಸಮಾಲೋಚನೆಯಲ್ಲಿದ್ದರು. ಹುಚ್ಚಪ್ಪ ಮಾಸ್ತರರೂ ಅಲ್ಲೇ ಇದ್ದರು. ಅವರಿಗೆ ಡ್ರೈವರ್ ಮೂಲಕ ಸುದ್ದಿ ಮುಟ್ಟಿಸುವಂತೆ ಮಾಡಿ ನಾವು ನಮ್ಮ ಸಾಹಸಯಾತ್ರೆಗೆ ತೊಡಗಿದೆವು. ನಮ್ಮ ಸಾಹಸ ಯಾತ್ರೆಯ ನಂತರ ನಾಗವಳ್ಳಿಯಿಂದ ಬಸ್ಸಿನಲ್ಲಿ ಸಾಗರ ತಲುಪುವುದೆಂದು ತೀರ್ಮಾನಿಸಿಕೊಂಡೆವು. ಇಷ್ಟರಲ್ಲಿ ಸಂಜೆ ೬ ಗಂಟೆಯಾಗಿತ್ತು. ಸರಿ, ಮುಸ್ಸಂಜೆಯ ಮುಸುಕು ಬೆಳಕಿನಲ್ಲಿ ನಮ್ಮ ಪ್ರಯಾಣ ಸಾಗಿತು. ಯಥಾಪ್ರಕಾರ ಕುಪ್ಪಯ್ಯ ಕೋವಿ ಹೆಗಲಿಗೇರಿಸಿ ಹೊರಟ. ಅರ್ಕಳದ ಇಬ್ಬರು ಹುಡುಗರು ನಮ್ಮ ಕ್ಯಾಮೆರಾ ಇತ್ಯಾದಿಗಳಿದ್ದ ಪೆಟ್ಟಿ ಹೊತ್ತುಕೊಂಡು ನಮ್ಮ ಜೊತೆಗೂಡಿದರು. ಕರಿಯ ಹಿಂದಿನಂತೆ ನಮ್ಮ ಬೆಂಗಾವಲಿಗೆ. ಗೊಂಡಾರಣ್ಯ ಹಲವು ಹತ್ತ ಜಾತಿಯ ಹೆಮ್ಮರಗಳು ನೂರೆಂಟು ರೀತಿಯ ಬಳ್ಳಿಗಳು ಚಿಯ್‌ಯೋ…  ಎನ್ನುವ ಜೀರುಳುಗಳ ಶಬ್ದ. ಆಕಾಶದಲ್ಲಿ ಕೆಂಬೆಳಕಿದ್ದರೂ ಅರಣ್ಯ ಪ್ರವೇಶಿಸುತ್ತಿದ್ದಂತೆಯೇ ಕತ್ತಲ ಅನುಭವ. ನೂರಿನ್ನೂರು ಅಡಿ ಏರುವಷ್ಟರಲ್ಲೇ ಏದುಸಿರು, ಅಸ್‌….. ಉಸ್‌…. ಎನ್ನುವ ತೊಳಲಾಟ. ಒಬ್ಬರಷ್ಟೇ ಮುನ್ನೆಡೆಯಲು ಸಾಧ್ಯವಾಗುವಂಥ ಕಿರುದಾರಿ. ಕುಪ್ಪಯ್ಯ ಗಿಡಗಂಟಿ, ಮರಗಿಡಬಳ್ಳಿಗಳ ಲೆಕ್ಕವೇ ಇಲ್ಲದೆ ಕಾಡುಮಿಕದಂತೆ ಮುನ್ನುಗ್ಗುತ್ತಿದ್ದ. ಅವನ ನಾಲ್ಕು ಹೆಜ್ಜೆ ನಮ್ಮಿಂದ ಮುಂದಾದರೂ ಸಾಕು ಕುಪ್ಪಯ್ಯನನ್ನು ಮುಂದಿನ ದಾರಿ ತೋರಿಸುವಂತೆ ಅಂಗಲಾಚುತ್ತಿದ್ದೆವು. ಏರುತ್ತಾ ಏರುತ್ತಾ ಆವರಿಸಿದ ಕಗ್ಗತ್ತಲು ನಮ್ಮನ್ನು ಸಂಪೂರ್ಣ ಹೊಸದಾದ ಜಗತ್ತಿಗೆ ನೂಕಿತು. ಅಲ್ಲಲ್ಲಿ ಮಿಣಮಿಣಗುಟ್ಟುವ ಮಿಂಚು ಹುಳುಗಳು ಕಣ್ಣಿಗೆ ಹೊಡೆಯುತ್ತಿದ್ದವು. ಸಾವಿರ ಅಡಿ ಏರಿರಬಹುದು, ವಿಷ್ಣು ಸಾಧ್ಯವೇ ಇಲ್ಲವೆಂದು ಕುಳಿತೆಬಿಟ್ಟ, ತನ್ನನ್ನು ತಮಾಷೆ ಮಾಡಿದ ಲಿಂಗೇಗೌಡರನ್ನು ವಾಚಾಮಗೋಚರವಾಗಿ ಶಪಿಸಿದ. ವಾಸ್ತವವಾಗಿ ವಿಷ್ಣು ಮಾತ್ರ ಸುಸ್ತಾಗಿರಲಿಲ್ಲ. ವಿಷ್ಣು ಸುಸ್ತಾಗಿ ಕೂರುವುದನ್ನು ನಾವೆಲ್ಲರೂ ಕಾಯುತ್ತಿದ್ದೆವು. ಯಾವಾಗ ವಿಷ್ಣು ಕೂತನೋ ಅವನ ಮೇಲೆ ಗೂಬೆ ಕೂರಿಸಿ ನಾವೂ ಕೂತೆವು. ಹೀಗಾದರೆ ನೀವು ಮೆಗಾನೆ ತಲುಪುವಿದಿಲ್ಲ ಎಂದು ಗೊಣಗುತ್ತಲೆ ಕುಪ್ಪಯ್ಯನೂ ನಿಂತ.

ಕುಪ್ಪಯ್ಯನ ಅವಸರಕ್ಕೆ ಬೇಸರದಿಂದಲೇ ಮತ್ತೆ ಪಯಣ ಮುಂದುವರೆಸಿದೆವು. ಹಿಂದೆ ಇದ್ದ ಕರಿಯ ಬಲಕ್ಕೆ ಹೋದೀರಿ, ಎಡಕ್ಕೇ ನಡೆಯಿರಿ, ಜೋಕೆ ಎಂದು ಎಚ್ಚರಿಸುತ್ತಿದ್ದ. ಬಲಕ್ಕೆ ನುರಾರು ಅಡಿ ಆಳದ ಕಮರಿ ಇತ್ತಂತೆ. ಕತ್ತಲಾದುದರಿಂದ ಅದೇನು ಗೋಚರಿಸುತ್ತಿಲ್ಲ. ಬೆಂಕಿಯ ದೊಂದಿಯನ್ನಾದರೂ ತರಬೇಕಾಗಿತ್ತೆಂದು ಕರಿಯ ಗೊಣಗಿಕೊಳ್ಳುತ್ತಿದ್ದ. ಕೈಯಲ್ಲಿದ್ದ ಟಾರ್ಚ್‌ ಯಾವ ಪ್ರಯೋಜನಕ್ಕೂ ಬರಲಿಲ್ಲ. ಸರಿ, ಕುಪ್ಪಯ್ಯ ಅಲ್ಲಿಯೇ ಇದ್ದ ಒಣಗಿದ್ದ ಬೆತ್ತದಂತ್ತಿದ್ದ ಕಡ್ಡಿಗಳನ್ನು ಮುರಿದು ಕಂತೆಕಟ್ಟಿ, ಬೆಂಕಿ ಹಚ್ಚಿದ. ಅದು ರವರವನೆ ಉರಿಯುವ ದೊಂದಿಯಾಯಿತು. ಎಲ್ಲರಿಗೂ ದಾರಿ ಕಾಣುವಂತಾಯಿತು. ಅಂಥ ನಾಲ್ಕು ಐದು ದೊಂದಿಗಳು ಉರಿದು ಭಸ್ಮವಾದರು ಆ ಜಾಗ ಸಿಗಲೇ ಇಲ್ಲ. ಸುಸ್ತೋ ಸುಸ್ತು. ಸುಮಾರು ಎತ್ತರವನ್ನು ಬಸವಳಿಯುತ್ತಾ ತಲುಪಿದ ಮೇಲೆ ನೀಲಾಕಾಶ ಗೋಚರಿಸಿತು. ಲಕ್ಷಾಂತರ ನಕ್ಷತ್ರಗಳು ಒಟ್ಟಿಗೇ ಮಿನುಗಿದವು. ಮೂರನೇ ಒಂದು ಭಾಗವಿದ್ದ ಚಂದ್ರನೂ ಕ್ಷೀಣವಾಗಿ ನಕ್ಕ. ಮರಗಳ ಸಂಖ್ಯೆ ವಿರಳವಾಗುತ್ತಾ ಬಂದು. ಸಣ್ಣ ಕಾಲು ಹಾದಿ ಇಷ್ಟಿಷ್ಟೇ ದೊಡ್ಡದಾಗಿ ಒಂದು ಮಾರು ಅಗಲವಾಯಿತು. ನಮ್ಮೆಲ್ಲರಿಗೆ ಜೀವ ಬಂದಂತಾಗಿ ಮಾತಿಗೆ ಪ್ರಾರಂಭಿಸಿದೆವು. “ಇಂಥ ಜಾಗದಲ್ಲಿ ವಾಸವಾಗಿರಲು ಇವರಿಗೇನು ಬಂದಿತ್ತು ದಾಡಿ” ಎಂದು ಲಿಂಗೇಗೌಡ ತಮ್ಮ ಗೌಡರ ಗಮ್ಮತ್ತಿನಲ್ಲಿ ಬೈದು ಕುಣಬಿಯವರ ದಡ್ಡತನವನ್ನು ಅಳಿದರು. ಬೆಟ್ಟ ಹತ್ತುವಾಗ ವಿಪರೀತ ಬೆವರಿದ್ದ ಮೈನೀರು ಕ್ರಮೇಣ ಶೀತಕ್ಕೆ ತಿರುಗಿ ಚಳಿಯ ಅನುಭವವಾಗಿ ಆಶ್ಚರ್ಯವಾಯಿತು. ಅಷ್ಟು ತಂಪಾದ ಗಾಳಿ ಆ ಎತ್ತರದಲ್ಲಿ ಸುಯ್ಗುಡುತ್ತಿತ್ತು.

ನಮ್ಮ ಮಾತಿನ ಶಬ್ದ ಅಲೆಅಲೆಯಾಗಿ ತೇಲತೊಡಗಿದಂತೆ ಕುಣಬಿಯರ ನಾಯಿಗಳು ಚುರುಕಾಗತೊಡಗಿದವು. ದೂರದಿಂದಲೇ ಬೊಗಳುವ ಮತ್ತು ಕುಂಯ್ಗುಡುವ ಶಬ್ದ. ಹತ್ತಿರ ಹತ್ತಿರ ಹೋಗುತ್ತಿದ್ದಂತೇ ನಾಲ್ಕಾರು ನಾಯಿಗಳು ಒಮ್ಮೆಲೇ ನುಗ್ಗಿ ಬಂದುವು. ಕುಪ್ಪಯ್ಯ ಹಚಾ ಹಚ ಎನ್ನುತ್ತಿದ್ದರೂ ಅವನನ್ನು ಲೆಕ್ಕಕ್ಕೇ ಇಟ್ಟುಕೊಳ್ಳದೆ ಅಡ್ಡಗಟ್ಟಿ ನಿಂತವು ಕುಣಬಿಯರಿಗೂ ಆಶ್ಚರ್ಯವಾಗಿರಬೇಕು. ಏಕೆಂದರೆ ಆ ಸುರುಹೊತ್ತಿನಲ್ಲಿ ಬೆಟ್ಟ ಹತ್ತಿ ಬಂದಿರುವ ಈ ಜನ ಯಾರಿರಬಹುದು? ನಾಲ್ಕಾರು ಗಂಡಸರು ಯಾವುದೋ ಭಾಷೆಯಲ್ಲಿ ಕೂಗುತ್ತಾ ನಾಯಿಗಳು ಹಿಂದಯೇ ಬಂದರು. ಮಬ್ಬುಗತ್ತಲಿನ ಮುಖಗಳು ಪರಸ್ಪರ ಗುರುತು ಹಿಡಿಯಲು ತಡವಾಗುತ್ತಿದ್ದಂತೆಯೇ ಕುಪ್ಪಯ್ಯ ಜೋರಿನ ದನಿಯಲ್ಲಿ ತಾನು ಬಂದಿರುವುದಾಗಿ ಹೇಳಿಕೊಂಡ. ಅಲ್ಲಿಗೆ ಅವರ ಆತಂಕ ನಿವಾರಣೆಯಾಯಿತು. ಅವರೆಲ್ಲಾ ನಮ್ಮನ್ನು ಸುತ್ತುಗಟ್ಟಿ ಕೆಳಿಗಿನಿಂದ ಹೊತ್ತು ತಂದಿದ್ದವರ ತಲೆಯ ಮೇಲಿನ ಭಾರಗಳನ್ನು ಅವರೇ ಹೊತ್ತುಕೊಂಡರಲ್ಲದೆ ಬನ್ನಿ ಬನ್ನಿ ಎಂದು ಸ್ವಾಗತಿಸುತ್ತಾ ಗದ್ದೆಯ ಪುಟ್ಟ ಬದುವಿನ ಮೇಲೆ ಹೆಜ್ಜೆ ಹಾಕತೊಡಗಿದರು. ರಣರಂಗಕ್ಕೆ ಸಿದ್ದವಾದಂತಿದ್ದ ನಾಯಿಗಳು ತಮ್ಮ ಒಡೆಯರ ನಡುವಳಿಕೆಗನುಸಾರವಾಗಿ ತಾವೂ ಬಾಲ ಮುದುರಿಕೊಂಡು ಮುಸಿಮುಸಿಗುಟ್ಟುತ್ತಾ, ನೆಲ ಮೂಸುತ್ತಾ ನಡೆಯತೊಡಗಿದವು. ಮಂದ ಬೆಳಕಿನ ನಡುವೆ ಮಲಗಿದ್ದಂತಿದ್ದ ಗುಡಿಸಲುಗಳ ಅಂಗಳಕ್ಕೆ ಕಾಲಿಡುತ್ತಿದ್ದಂತೇ ಇಡೀ ಹಾಡಿಯ ಜನರೆಲ್ಲಾ ನಮ್ಮನ್ನು ಸುತ್ತುವರೆದರು. ಮಲಗಿ ನಿದ್ರಿಸುತ್ತಿದ್ದ ಗುಡಿಸಲೊಳಗೆ ಮಿಣಿಕು ದೀಪಗಳು ಹತ್ತಿಕೊಂಡವು. ಒಂದು ಗುಡಿಸಲ ಮುಂದಿನ ವಿಶಾಲ ಅಂಗಳದಲ್ಲಿ ಕಂಬಳಿ ಹಾಸಿ ನಮ್ಮನ್ನು ಕೂರಿಸಲಾಯಿತು. ಸುಸ್ತಾಗಿ ಬೆಂಡಾಗಿದ್ದ ನಮಗೆ ನೀಡಿದ ಬೆಲ್ಲದ ನೀರು ಅಮೃತ ಸಮಾನವಾಯಿತು. ಆಶ್ಚರ್ಯಚಕಿತ ಜನಕ್ಕೆ ನಾವು ಬಂದ ಉದ್ದೇಶವನ್ನು ವಿವರಿಸಿದ ಕುಪ್ಪಯ್ಯ ‘ನಾಳೆ ಬೆಳಗ್ಗೆ ಎಲ್ಲಾ ಸೇರುವ ಹೋಗಿ’ ಎಂದು ಕಳಿಸತೊಡಗಿದ. ನಮ್ಮ ವಾಸ್ತವ್ಯಕ್ಕಾಗಿ ಒಂದು ಗುಡಿಸಲ ಜನವನ್ನೆ ಖಾಲಿ ಮಾಡಿಸಲಾಯಿತು. ಆತುರಾತುರವಾಗಿ ವಿಶೇಷ ಗಂಜಿ ತಯಾರಿಸಲಾಯಿತು. ಹೊಟ್ಟೆಗೇನಾದರೂ ಬಿದ್ದರೆ ಸಾಕೆಂದು ಒಣಮೋರೆ ಹಾಕಿಹೊಂಡಿದ್ದ ನಾವು ಬಟ್ಟಲುಗಟ್ಟಲೆ ಗಂಜಿ ಕುಡಿದೆವು. ಮಿಷ್ಣುವಂತೂ ಉಂಡು ಎಷ್ಟು ದಿನವಾಗಿತ್ತೋ ಎನ್ನುವಂತೆ ಗಂಜಿ ಹೀರತೊಡಗಿದ.

ಬೆಳಿಗ್ಗೆ ಎದ್ದಾಗ ಇದು ಪರ್ವತವೇ ಅಲ್ಲ, ಯಾವುದೋ ಸಮತಟ್ಟಾದ ಸ್ಥಳದಲ್ಲಿಯೇ ಇದ್ದೇವೆ ಅನ್ನುವಂತೆ ಇಡೀ ಸ್ಥಳ ಗೋಚರವಾಯಿತು. ಆ ಪ್ರದೇಶದಿಂದ ಮತ್ತೆ ಎತ್ತರದ ಬೆಟ್ಟಗಳು ಕುಡಿಯೊಡೆದಿದ್ದವು. ಹಾಗಾದರೆ ನಾವು ಹತ್ತಿಬಂದ ಪರ್ವತ ಯಾವುದು? ಇದೇನು ಆಕಾಶಕ್ಕೆ ಏಣಿಯೇ? ಇದೇ ಸಹ್ಯಾದ್ರಿಯ ವಿಶೇಷ! ಬೆಟ್ಟದ ಮೇಲೊಂದು ಬೆಟ್ಟ, ಆ ಬೆಟ್ಟಗಳ ದುರ್ಗಮ ಕಣಿವೆ – ಕಂದರಗಳಲ್ಲು ಜನ ಜೀವನ. ನಮಗಂತೂ ಬಹಳ ವಿಚಿತ್ರವೆನಿಸಿತು. ಮೂಡಣ ಸೂರ್ಯ ನಮಗೆ ಕಾಣಿಸಿಕೊಳ್ಳಬೇಕಾದರೆ ಏಳು ಗಂಟೆ ಮೀರಿತು. ಮತ್ಯಾವುದೋ ಬೆಟ್ಟದ ತುದಿಯೇರಿ ಸೂರ್ಯ ತನ್ನ ಪ್ರಥಮ ಕಿರಣಗಳನ್ನು ಚಾಚುತ್ತಿದ್ದ. ತೇಲಾಡುವ ಮೇಘಗಳ ಮಧ್ಯೆ ಇರುವುದರಿಂದಲೇ ಇದಕ್ಕೆ ‘ಮೇಗಾನೆ’ (ಮೇಘ-ಆನೆ) ಎಂಬ ಹೆಸರು ಬಂದಿರಲೂಬಹುದು ಎನ್ನಿಸಿತು. ಅರಳೆ ರಾಶಿಗಳಂಥ ಮೋಡಗಳ ತೇಲಾಟ ಮನಮೋಹಕವಾಗಿತ್ತು.

ಆಗಲೇ ಇಡೀ ಕುಣಬಿಯರ ಹಾಡಿ ಬದುಕಿಗಿಳಿದಿತ್ತು. ನೀರಿನ ಕೊಡ ಹಿಡಿದ ಹೆಂಗಸರು, ಕಂಬಳಿ ಗೊರಬೆ ಕವುಚಿಕೊಂಡ ಗಂಡಸರು, ನಡುವಿಗೆ ಕಟ್ಟಿದ ಪಟ್ಟಿಗೆ ಕುಡಗೋಲು ಸಿಕ್ಕಿಸಿಕೊಂಡು ಕೆಲಸಕ್ಕೆ ಹೊರಟವರು, ಮಕ್ಕಳು, ಮರಿಗಳು, ಒಟ್ಟೊಟ್ಟಿಗೆ ಕಟ್ಟಿದ ಹತ್ತಾರು ಗುಡಿಸಲು ನೆಲದಿಂದ ಹೊರಚಿಮ್ಮಿದ ಅಣಬೆ ಮೊಗಟುಗಳಂತೆ ಕವುಚಿ ಕುಳಿತ್ತಿದ್ದುವು. ಅಚ್ಚುಕಟ್ಟಾಗಿ ಸಗಣಿಯಿಂದ ಸಾರಿಸಿದ ಅಂಗಳ, ಅಂಗಳದ ಒಂದು ಭಾಗದಲ್ಲಿ ತುಳಸಿಗಿಡ, ಅತ್ಯಂತ ಅಚ್ಚುಕಟ್ಟು ಮತ್ತು ಓರಣ. ಎತ್ತರದ ಜಾಗದಿಂದ ಸಣ್ಣ ಝರಿಯಂತೆ ಹರಿದು ಬರುತ್ತಿದ್ದ ನೀರನ್ನು ಅಡಿಕೆ ಮರದ ಓಟೆಗಳ ಮೂಲಕ ಗುಡಿಸಲಿಗೆ ತಿರುಗಿಸಿಕೊಂಡು ವಾಸ್ತವದ ನಲ್ಲಿಯನ್ನಾಗಿ ಮಾಡಿಕೊಂಡಿದ್ದರು. ತುಂಬಾ ತಂಪಾದ ನೀರು. ಪ್ರತಿಯೊಂದು ಗುಡಿಸಲೂ ನಿಸರ್ಗದ ನಡುವಿನ ಸಹಜಾಕೃತಿ.

ಗುಡಿಸಲಿಗೆ ಕಿರಿದಾದ, ಬಗ್ಗಿ ಹೋಗಬೇಕಾದ ಚಿಕ್ಕ ಬಾಗಿಲು. ಗುಡಿಸಲಿನ ಗೋಡೆಗಳಿಗೆ ವಿವಿಧಾಕೃತಿಯ ರಂಗೋಲಿ, ಚಿತ್ತಾರ. ಪ್ರತಿ ಗುಡಿಸಲ ಚಿತ್ತಾರಗಳಿಗೂ ಅವರದೇ ವಿಶೇಷತೆ ಮತ್ತು ಮೆರಗು. ಗುಡಿಸಲು ಒಳಹೋದರೆ ಕಗ್ಗತ್ತಲು, ಕಿಟಕಿಯೇ ಇಲ್ಲ. ಇದ್ದರೂ ಸಣ್ಣ ಗೂಡಿನಂಥ ರಂಧ್ರ ಮಾತ್ರ. ಬಹುಶಃ ಎತ್ತರದ ಚಾಗದಲ್ಲಿರುವ ಇವರಿಗೆ ಯಾವಗಲೂ ಚಳಿಯ ಅನುಭವವೇ ಇರಬಹುದು. ಒಳಮನೆ ತುಂಬಾ ಸರಳ. ಕೋಣೆಗೂ, ಮಲಗುವ ಜಾಗಕ್ಕೂ ಯಾವುದೇ ಅಂತರವಿಲ್ಲ. ಒಂದೇ ಹಜಾರದಲ್ಲಿ ಎಲ್ಲವೂ ನಡೆಯಬೇಕು. ಗುಡಿಸಲ ಪಕ್ಕಕ್ಕೆ ಬಚ್ಚಲ ಮನೆ. ಕಿರಿದಾದ ಬಾಯಿಯ ಗುಡಾಣಹೊಟ್ಟೆಯ ಮಣ್ಣಿನ ಹಂಡೆಗಳಲ್ಲಿ ಸದಾ ಬಿಸಿ ನೀರು, ಬೇಕಾದಷ್ಟು ಮೀಯಬಹುದು. ಮಲೆನಾಡಿನ ಜನರ ಅಭ್ಯಂಜನ ಸ್ನಾನವನ್ನು ಕೇಳಿ ತಿಳಿದಿದ್ದ ನಮಗೆ ಆ ಹಂಡೆ ನೋಡಿಯೇ ಅಂಥ ಅನುಭವವಾಯಿತು. ಗುಡಿಸಲು ಇನ್ನೊಂದು ಬದಿಗೆ ದನಕರುಗಳಿಗಾಗಿ ಒಂದು ಪುಟ್ಟ ಮನೆ. ಅದಕ್ಕೆ ತಡಿಕೆಯೇ ಬಾಗಿಲು.

ಸಾಗರ, ಭಟ್ಕಳ, ಯಲ್ಲಾಪುರ, ಜೋಯಿಡಾ ಮುಂತಾದ ತಾಲ್ಲೂಕುಗಳಲ್ಲಿ ಅಲ್ಲಲ್ಲಿ ನೆಲೆ ಕಂಡುಕೊಂಡಿರುವ ಈ ಕುಣಬಿಗಳಿಗೆ ಸ್ವಂತ ಜಮೀನಿಲ್ಲ. ಸಾಮಾನ್ಯವಾಗಿ ಭಟ್ಟರು ಮತ್ತು ಹೆಗಡೆಯವರ ಮನೆಗಳ ಜೀತ ಮಾಡುತ್ತಾ ಅವರ ಆಶ್ರಯದಲ್ಲಿಯೇ ಬದುಕುತ್ತಾರೆ. ಕುಣಬಿಗಳ ಒಟ್ಟಾರೆ ಏಳು-ಬೀಳು, ಆರ್ಥಿಕ ಸ್ಥಿತಿ-ಗತಿ, ಉದ್ದಾರ ಅಥವಾ ಅವನತಿ ಈ ಜಮೀನುದಾರರ ಮೇಲೆ ಅವಲಂಬಿಸಿರುತ್ತದೆ. ಆದರೆ ಈ ಮೆಗಾನೆಯ ಕುಣಬಿಗಳ ವಿಶೇಷತೆಯೆಂದರೆ ಇವರಲ್ಲಿ ಅನೇಕರಿಗೆ ಸ್ವಂತ ಜಮೀನಿದೆ. ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಬಹುಶಃ ಈ ಪರ್ವತ ಹತ್ತಿ ಬಂದು ಮೆಗಾನೆಯ ಕುಣಬಿಗಳ ಮೇಲೆ ಸವಾರಿ ಮಾಡುವ ಧೈರ್ಯ ಯಾರಿಗೂ ಬರಲಿಲ್ಲವೇನೋ?

ಇಂಥ ಸ್ಥಳವನ್ನು ತಮ್ಮ ನೆಲೆಯನ್ನಾಗಿ ಆರಿಸಿಕೊಂಡ ಕುಣಬಿಗಳ ಬಗ್ಗೆ ನಮಗೆ ಹೆಚ್ಚಿನ ಕುತೂಹಲ ಉಂಟಾದದ್ದು ಸಹಜ. ಕೇಳಿದಾಗ ಹಾಡಿಯ ಯಜಮಾನ ೭೦ ವರ್ಷದ ಯಂಕು ಹೇಳಿದ ರೀತಿ ಸ್ವಾರಸ್ಯಕರವಾಗಿತ್ತು. ಈಗ ಲಿಂಗನಮಕ್ಕಿ ಅಣೆಕಟ್ಟು ಇರುವ ಪ್ರದೇಶದಲ್ಲಿ ಮೊದಲಿಗೆ ಇವರು ಜೀತದಾಳುಗಳಾಗಿಯೇ ಇದ್ದರು. ಕೆಲವರು ಕುಮರಿ ಬೇಸಾಯ ಮಾಡುತ್ತಿದ್ದರು. ಅಣೆಕಟ್ಟು ಕಟ್ಟಲು ಆರಂಭ ಮಾಡಿದ ತರುವಾಯ ಇವರನ್ನು ಎತ್ತಂಗಡಿ ಮಾಡಲಾಯಿತು. ಈಗಾಗಲೇ ಅಲ್ಲಿ ಮಾಲೀಕರಾಗಿದ್ದ ಮೇಲ್ವರ್ಗದವರಿಗೆ ಸರ್ಕಾರ ಯಥಾಪ್ರಕಾರ ಜಮೀನು ಮಂಜೂರು ಮಾಡಿ ಒಂದು ದಾರಿ ತೋರಿಸಿತು. ಆದರೆ ಅಲ್ಲಿ ಜೀತದಾಳುಗಳಾಗಿದ್ದ ಕುಣಬಿಯವರು, ಹಸಲರು ಮುಂತಾದವರಿಗೆ ಯಾವ ಜಮೀನು ಇಲ್ಲ. ವಸತಿಯೂ ಇಲ್ಲ. ಸರಿ, ಬಡಪಾಯಿ ಕುಣಬಿಯವರ ಒಂದೆರಡು ಪಂಗಡಗಳು ಬದುಕು ಅರಸುತ್ತಾ ಅಲೆದಾಡಹತ್ತಿದವು. ಯಾವ ಒಡೆಯನ ಮನೆಗೆ ಹೋದರು ಒಂದು ಸೇರಕ್ಕಿ, ನಾಲ್ಕಾಣಿ ಬಿಟ್ಟರೆ ಹೆಚ್ಚಿನದೇನೂ ಇಲ್ಲ. ಗುಡ್ಡ ಹತ್ತಿ ಗುಡ್ಡ ಇಳಿದು ಸ್ವಂತ ಜಮೀನಿಗಾಗಿ ಪರದಾಡಹತ್ತಿದರು. ಎಲ್ಲಿಯೂ ಸಿಗಲಿಲ್ಲ. ಕೊನೆಗೆ ತಮ್ಮ ಕಣ್ಮುಂದೆ ಕಡಿದಾಗಿ ನಿಂತ ತನ್ನ ನೀಳ ಶರೀರವನ್ನೇ ಹಸ್ತವಾಗಿ ಚಾಚಿದ ಮೇಗಾನೆ ಪರ್ವತ ಇವರಿಗೆ ಆಶ್ರಯ ನೀಡಿತು. ಕುಣಬಿಯರು ಮೆಗಾನೆಯ ಸುಂದರ ನೆಲದಲ್ಲಿ ನೆಲೆ ನಿಂತು ಸ್ವತಂತ್ರ ಜೀವಿಗಳಾದರು.

ಯಂಕು ಮತ್ತು ಮುಂದುವರೆಸಿ ಹೇಳುತ್ತಾನೆ – “ನಾವೆಲ್ಲಾ ಗೋವಾದ ಕಡೆಯವರು ನಮ್ಮ ತಾತಂದಿರ ಕಾಲದಲ್ಲಿ ಸಹ್ಯಾದ್ರಿಯ ಸಾಲನ್ನೇ ಹಿಡಿದು ವಲಸೆ ಬಂದ ನಾವು ಅಲ್ಲಲ್ಲಿ ನೆಲೆನಿಂತೆವು. ಹಾಗಾಗಿ ನಮ್ಮ ಭಾಷೆ ಮರಾಠಿಯೂ ಅಲ್ಲ. ಕೊಂಕಣಿಯೂ ಅಲ್ಲ ಅಥವಾ ಕನ್ನಡವೂ ಅಲ್ಲ. ಇದೆಲ್ಲಾ ಋಣಾನುಬಂಧ” – ಋಣಾನುಬಂಧ ಎನ್ನುವ ವಿಚಾರವನ್ನು ಮತ್ತಷ್ಟು ಕೆದಕಿದರೆ ಯಂಕು ಮತ್ತಷ್ಟು ಭಾವಜೀವಿಯಾಗಿ ಹೇಳುತ್ತಾನೆ – “ಋಣಾನುಬಂಧವಲ್ಲದೇ ಇನ್ನೇನು ಸ್ವಾಮೀ? ಯಾವುದೋ ಗೋವಾ ನೆಲದಲ್ಲಿ ಹಟ್ಟಿ ಕಾಡು ಕಾಡು ಅಲೆದು ಎತ್ತಂಗಡಿಯಾಗಿ ಇದೀಗ ಇಲ್ಲಿ ನಾವೆಲ್ಲಾ ಜಮೀನು ಪಡೆದು ಧನ್ಯರಾದೆವು” – ಎನ್ನುತ್ತಾನೆ ವಾಸ್ತವವಾಗಿ ಯಂಕುಗಾಗಲೀ, ಅವನ ಸಹಚರರಿಗಾಗಲೀ ಹೇಳಿಕೊಳ್ಳುವಂಥ ಜಮೀನೇನು ಇಲ್ಲ. ಅದು ಜೀವನಕ್ಕೇ ಸಾಕಾಗುವುದಿಲ್ಲ. ಆಗಾಗ್ಗೆ ಬೆಟ್ಟದ ಕೆಳಗಿಳಿದು ಕೂಲಿ ಮಾಡಿ ಬರುವುದೂ ಅನಿವಾರ್ಯವೇ. ಆದರೂ ಶತಶತಮಾನಗಳಿಂದ ತನ್ನದೆಂಬುದೇನೂ ಇಲ್ಲ ಎನ್ನುವ ದಾಸ್ಯದಲ್ಲೇ ಬದುಕಿದ ಇವರಿಗೆ ಕಚ್ಚೆಯಗಲದ ಸ್ವಂತ ಜಮೀನು ಕೂಡ ಸ್ವಾಭಿಮಾನವನ್ನು ಮತ್ತು ಆತ್ಮ ತೃಪ್ತಿಯನ್ನು ತುಂಬಿದೆಯೆಂದರೆ ಅದು ಅತಿಶಯೋಕ್ತಿಯಲ್ಲ. ಸುಮಾರು ೧೮೦ ಜನಸಂಖ್ಯೆಯಿರುವ ಈ ಮೆಗಾನೆಯ ಕುಣಬಿಯರಲ್ಲಿ ಯಾರೊಬ್ಬರಿಗೂ ಅಕ್ಷರಜ್ಞಾನವಿಲ್ಲ. ಶಾಲೆಗಳಿಗೆ ಹೋಗಬಹುದಾದ ಸುಮಾರು ೪೦ ಮಕ್ಕಳಿಗೆ ಶಾಲೆಯ ಕಲ್ಪನೆಯೂ ಇಲ್ಲ. ನಮ್ಮ ಸರ್ಕಾರ ಅಥವಾ ಅಲ್ಲಿನ ಮುಖಂಡರಿಗಾದರೂ ಮೆಗಾನೆಗೆ ಶಾಲೆಯೊಂದನ್ನು ಮಂಜೂರು ಮಾಡಬೇಕೆಂಬ ಅಥವಾ ಮೆಗಾನೆಯಲ್ಲಿ ಜನರಿದ್ದಾರೆಂಬ ಸಾಮಾನ್ಯ ಜ್ಞಾನವೂ ಇದ್ದಂತಿಲ್ಲ. ಇದುವರೆಗೆ ಯಾವ ಹೇಳಿಕೊಳ್ಳುವ ದೊಡ್ಡ ಮನುಷ್ಯರೂ ಆ ನೆಲವನ್ನು ನೋಡುವ ಆಸಕ್ತಿಯನ್ನಾಗಲೀ, ಕುತೂಹಲವನ್ನಾಗಲೀ ಬೆಳಸಿಕೊಂಡಂತೆ ಕಾಣುವುದಿಲ್ಲ. ಸರ್ಕಾರದ ಯಾವ ಅಧಿಕಾರಿಯಾಗಲೀ, ಸಮಾಜ ಸೇವಕರೆಂಬವರಾಗಲೀ ಆ ಐದು ಸಾವಿರ ಅಡಿ ಹತ್ತುವ ಸಾಹಸ ಮಾಡಿಲ್ಲವಂತೆ; ಆದರೂ ಸಾಗರದ ಕೆಲವು ಮುಖಂಡರ ನೆರೆವಿನಿಂದ ಕುಣಬಿಯರು ಹತ್ತು ಜನತಾ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಹೆಂಚುಗಳನ್ನು ತಲೆಯ ಮೇಲೆ ಹೊತ್ತು ಹೊತ್ತು ತಂದದ್ದೇ ಒಂದು ಸಾಹಸವೆಂದು ಹೇಳುತ್ತಾರೆ. ಆಶ್ಚರ್ಯವೆಂದರೆ ಆ ಹೆಂಚಿನ ಮನೆಗಳನ್ನು ಪ್ತತ್ಯೇಕವಾದ ಕಡೆ ಕಟ್ಟಲಾಗಿದ್ದು, ಕಾಡುಹುಲ್ಲಿನ ಗುಡಿಸಲುಗಳನ್ನು ಅವು ಅಣಕಿಸುವಂತೆ ಕಾಣುತ್ತಿದ್ದರೂ ಹುಲ್ಲಿನ ಮನೆಗಳಿಗಿರುವ ಸೌಂದರ್ಯ ಅವಕ್ಕಿಲ್ಲ ಎಂಬುದಂತೂ ಸತ್ಯ.

ಹೇಗಾದರೂ ಮಾಡಿ ಈ ಮಕ್ಕಳಿಗೆ ಅಕ್ಷರ ಕಲಿಸಲು ಪ್ರಯತ್ನಿಸಬಾರದೆ ಎಂಬ ಪ್ರಶ್ನೆಗೆ ಸುಮಾರು ೪೦ ವರ್ಷದ ದುರ್ಗು ಹೇಳುತ್ತಾನೆ “ಹೇಗೆ ಸಾಧ್ಯ ಸ್ವಾಮಿ. ಐದು ಸಾವಿರ ಅಡಿ ಇಳಿಯಬೇಕು, ಬೆಟ್ಟದ ಬುಡದಿಂದ ಹಾಡುವಳ್ಳಿಗೆ ೫ ಕಿ. ಮೀ. ನಡೆಯಬೇಕು. ಇಷ್ಟು ದೂರ ಹೋಗಿ ಮಕ್ಕಳು ಹಿಂತಿರುಗುವುದಾದರೂ ಹೇಗೆ ನಾವಂತೂ ಕಲಿಯಲಿಲ್ಲ. ನಮ್ಮ ಮಕ್ಕಳಾದರೂ ಕಲಿಯಲಿ ಎಂದರೆ ಯಾರೂ ನಮ್ಮ ಕಡೆ ಗಮನ ಕೊಡುತ್ತಿಲ್ಲ. ಇಲ್ಲಿ ಶಾಲೆ ಸ್ಥಾಪನೆ ಮಾಡಿದರೂ ಪಾಠ ಹೇಳುವ ಮಾಸ್ತರು ಬರುವುದು ಮಾತ್ರ ಅನುಮಾನ”. ಇದು ಮುಗ್ಧ ದುರ್ಗುವಿನ ನಿಜವೆನ್ನಬಹುದಾದ ಅನುಮಾನ ಕೂಡ.

ಇನ್ನು ಕಾಯಿಲೆ-ಕಸಾಲೆಗಳು ಬಂದರೆ ಬೇರು, ಕಷಾಯ ಬಿಟ್ಟು ಬೇರೆ ಮಾರ್ಗವೇ ಇಲ್ಲ. ಒಂದು ವೇಳೆ ತೀರಾ ಉಲ್ಬಣಿಸಿದರೆ ನಾಲ್ಕು ಜನ ಸೇರಿ ಬಿದಿರು ಬೊಂಬಿನ ‘ಚಟ್ಟ’ ಕಟ್ಟಿ ಅದರ ಮೇಲೆ ರೋಗಿಯನ್ನು ಮಲಗಿಸಿ ಸರ್ಕಸ್‌ ಮಾಡುತ್ತಾ ಬೆಟ್ಟ ಇಳಿದು ಭಟ್ಕಳದ ದಾರಿ ಹಿಡಿಯುವುದು ಇವರಿಗೆ ಅನಿವಾರ್ಯ.

ಇನ್ನು ಕುಣಬಿಯರ ವೈವಾಹಿಕ ಸಂಬಂಧಗಳಲ್ಲಿ ಅಂತ ವಿಶೇಷತೆಯೇನು ಇಲ್ಲ. ಆದರೆ ಇಲ್ಲಿಗೆ ಹೊರಗಿನಿಂದ ಹೆಣ್ಣು ತರುವುದು ಕಷ್ಟ. ಹೆಣ್ಣು ಕೇಳಲು ಬರುವವರೂ ಅಪರೂಪವೇ. ಹಾಗಾಗಿ ಅಲ್ಲಲ್ಲಿಯೇ ಗಂಟುಹಾಕಿಕೊಂಡ ಸಂಬಂಧಗಳೇ ಹೆಚ್ಚು. ಬಹುಶಃ ಈ ಕಾರಣಕ್ಕಾಗಿ ಕುಣಬಿಯರು ಮೊದಲಿನ ದೇಹದಾರ್ಢ್ಯ ಮತ್ತು ರೂಪವನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿರಬಹುದಲ್ಲವೆ ಎಂಬ ನಮ್ಮ ಮಾರ್ಮಿಕ ಪ್ರಶ್ನೆಗೆ, ಆ ಪ್ರಶ್ನೆ ಯಾವ ಹಿನ್ನಲೆಯದು ಎಂಬುದನ್ನು ಅರ್ಥಮಾಡಿಕೊಳ್ಳಲಾಗದ ಗಣೇಶ ಎಂಬ ಕುಣಬಿ ಕಲಾವಿದ ನಕ್ಕು ಸುಮ್ಮನಾದ. ಆದರೂ ಮೆಗಾನೆಯ ಕುಣಬಿಯರಲ್ಲಿ ದಷ್ಟಪುಷ್ಟವಾದ ಹುಡಗರಿದ್ದಾರೆ. ಪರವಾಗಿಲ್ಲ ಎಂದು ಹೇಳಬಹುದಾದ ಸಾಮಾನ್ಯ ಸುಂದರ ಹೆಣ್ಣು ಮಕ್ಕಳೂ ಇದ್ದಾರೆ. ಎಲ್ಲಕ್ಕಿಂತ ವಿಶೇಷವೆಂದರೆ ಕುಣಬಿ ಹೆಣ್ಣು ಮಕ್ಕಳ ಸುಂದರವಾದ ತುರುಬು, ಕೇಶಾಲಂಕಾರ ಕುಣಬಿ ಹೆಣ್ಣು ಮಕ್ಕಳ ಪ್ರೀತಿಯ ಹವ್ಯಾಸ. ಸಿಂಗರಿಸಿದ ತುರುಬಿಗೆ ಕೋಮಲವಾದ ಕಾಡು ಕುಸುಮದ ಪಕಳೆಗಳ ಮೆರಗು.

ಕುಣಿತವಿಲ್ಲದೆ ಜಾನಪದ ಬದುಕಿಲ್ಲ. ಅಂತೆಯೇ ಮೆಗಾನೆಯಲ್ಲೂ ದಿನದ ದುಡಿತದ ಆಯಾಸವನ್ನು ಮರೆಮಾಚುವಂತೆ ಮದ್ದಳೆಯ ನಾದ ಆರಂಭವಾಗುತ್ತದೆ. ಮದ್ದಳೆಯ ಪಲ್ಲವಿಗೆ ತಾಳದ ಅನುಪಲ್ಲವಿ. “ಸ್ವಾಮಿ ಶರಣು ದೇವಕೋ, ಸ್ವಾಮಿ ಶರಣು ದೇವಕೋ” ಸೊಲ್ಲಿನ ಪ್ರಾರಂಭ. ಅದರ ಜೊತೆಗೆ ರಾಮಾಯಣದ ಕಥಾನಕಗಳ ಸರಮಾಲೆ. ಈ ಹಾಡಿಗೆ ತಕ್ಕನಾಗಿ ಹರೆಯದ ಹುಡುಗರು ಬಣ್ಣದ ಸೀರೆ, ರವಿಕೆ ತೊಟ್ಟು, ತಾಳ ಮತ್ತು ಮದ್ದಳೆಯ ಲಯಕ್ಕೆ ಸೊಂಟ ಬಳುಕಿಸುತ್ತಾ. ನರ್ತಿಸುತ್ತಾರೆ. ಕುಣಬಿಯರಲ್ಲಿ ಹೆಂಗಸರು ಕುಣಿಯುವುದಿಲ್ಲವಂತೆ. ಗಂಡಸರೇ ಹೆಣ್ಣಿನ ವೇಷ ತೊಟ್ಟು ಅತ್ಯಂತ ನವಿರಾಗಿ ಕುಣಿಯುವಾಗ ಮನಸ್ಸು ಮುದಗೊಳ್ಳುತ್ತದೆ. ಸುಮಾರು ೭೦ ವರ್ಷದ ಗಣೇಶ ಈ ಹಾಡಿಯ ಪ್ರಮುಖ ಕಲಾವಿದ. ತಂದೆ ತಾಯಿಯಿಂದ ಕಲಿತ ರಾಮಾಯಣ ಕಾವ್ಯವನ್ನು ಕೊಂಕಣಿ ಮಿಶ್ರ ಮರಾಠಿ ಭಾಷೆಯಲ್ಲಿ ೫ ರಾತ್ರಿ, ೫ ಹಗಲು ಸತತವಾಗಿ ಹಾಡುತ್ತಾನಂತೆ. ಹೋಳಿ ಹುಣ್ಣಿಮೆ ಹಬ್ಬ ಬಂದರಂತೂ ಕುಣಬಿಗಳಿಗೆ ಎಲ್ಲಿಲ್ಲದ ಸಂಭ್ರಮ ಜೊತೆಗೆ ‘ಹೋಳಿ ಸಿಗ್ಮಾ’ ನರ್ತನ. ಅಲ್ಲದೆ ಕೋಲುಪದ, ಗಮಟೆ ಪದಗಳ ರಸದೌತಣ.

ಹಾಸನ ಕಡೆಯ ಬಯಲುಸೀಮೆಯಿಂದ ಆಕಸ್ಮಿಕವಾಗಿ ಮೆಗಾನೆ ಸೇರಿರುವ ಲಕ್ಷ್ಮಮ್ಮ, ಅಲ್ಲಿನ ಗಣಪಿ, ಶಾಂತಿ, ಸೋಮಿ ಮುಂತಾದವರಿಗೆ ಅಚ್ಚಕನ್ನಡದ ಜನಪದ ಗೀತೆಗಳನ್ನು ಕಲಿಸಿರುವುದ ಒಂದು ಆಶ್ಚರ್ಯ. “ನಮ್ಮ ಎರಡಡಕೆ ನಿಮ್ಮ ಎರಡಡಕೆ ಜೋಡು ಮಾಡಯ್ಯ ಶಿವನೇ…..” ಎಂಬ ಹಾಡು ಪ್ರಾರಂಭವಾಗುತ್ತಿದ್ದಂತೇ ನಮ್ಮೆಲ್ಲರ ಕಿವಿ ನೆಟ್ಟಗಾದವು. ಕೊಂಕಣಿ ಮಿಶ್ರಿತ ಮರಾಠಿಯ ಅರ್ಥವಾಗದ ಹಾಡುಗಳನ್ನೇ ಹಗಲೂ-ರಾತ್ರಿ ಧ್ವನಿಮುದ್ರಿಸಿಕೊಂಡು ಸಾಕಾಗಿದ್ದ ನಮ್ಮ ಲಿಂಗೇಗೌಡರು ಈ ಹಾಡು ಕೇಳಿ ಹೊಸ ಉತ್ಸಾಹದಿಂದ ಮತ್ತೆ ಆ ಯಂತ್ರಕ್ಕೆ ಜೀವ ಕೊಟ್ಟರು.

ಹಗಲಿನಲ್ಲಿ ಛಾಯಾಗ್ರಹಣ, ರಾತ್ರಿಯಲ್ಲಿ ಧ್ವನಿಮುದ್ರಣ, ಕುಣಬಿಯರ ಹಾಡಿ ನಮ್ಮ ಹಾಡಿಯೇ ಆದದ್ದು ನಮ್ಮೆಲ್ಲರಿಗೆ ನೆಮ್ಮದಿ ತಂದಿತ್ತು. ಅವರೂ ಅಷ್ಟೇ, ದೂರದ ಲೋಕದಿಂದ ಬಂದಿಳಿದ ನಾವೇ ಮಹಾಗಣ್ಯರು ಎಂಬಂತೆ ನಮ್ಮನ್ನು ನಡೆಸಿಕೊಂಡು ಕ್ಯಾಮೆರಾಕ್ಕೆ ಹೊಂದಿಕೊಂಡಿದ್ದರು. ಅವರ ವಿಶೇಷ ಊಟವಾದ ‘ಪೋಳಿ’ಯನ್ನೂ ಬಡಿಸಿ ‘ಗುಳ್ಳಾಣಿ’ ಪಾಯಸ ಕುಡಿಸಿ ಸತ್ಕರಿಸಿದರು. ಕುಣಬಿಯರು ಕೋಳಿ ತಿನ್ನುವುದಿಲ್ಲ ಎಂಬುದು ನಮಗೆ ಗೊತ್ತಿರಲಿಲ್ಲ. ಕೋಳಿ ಮಾಡಿ ಎಂದು ಅವರನ್ನು ತಮಾಷೆ ಮಾಡಿದೆವು. ಆದರೆ ತಮಾಷೆಯನ್ನೇ ಗಂಭೀರವಾಗಿ ಪರಿಗಣಿಸಿ ಬೆಟ್ಟದ ಕೆಳಗಿನ ಅರ್ಕಳಕ್ಕೆ ಒಬ್ಬನನ್ನು ಕಳಿಸಿ ಕೋಳಿ ತರಿಸಿ ಗೊಂಡರ ಕರಿಯನಿಂದ ಅಡುಗೆ ಮಾಡಿಸಿ ಬಾಳೆ ಎಲೆಯ ಮೇಲೆ ಬಡಿಸಿ ಸಂತೃಪ್ತಿಪಡಿಸಿದರು. ಕುಣಬಿಯರ ಆತಿಥ್ಯವನ್ನು ಎಂದಿಗೂ ಮರೆಯುವಂತಿಲ್ಲ.

ಆದರೆ ಈಗೀಗ ಮೆಗಾನೆ ಶಿಖರಕ್ಕೂ ಆಧುನಿಕತೆಯ ಗಾಳಿ ಬೀಸತೊಡಗಿದೆ. ಬೆಟ್ಟದ ಮೇಲಿರುವ ಗಂಡಸರು ಹಾಡುವಳ್ಳಿಯಲ್ಲಿ ಬಸ್ಸು ಹಿಡಿದು ಭಟ್ಕಳಕ್ಕೆ ಹೋಗಿ ಪಟ್ಟಣದಲ್ಲಿ ಅಡ್ಡಾಡಿ ಬರುವ ಸಾಹಸ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಈಗಿನ ಮೆಗಾನೆಯ ಹುಡುಗಿಯರ ಬೆನ್ನು ಕುಪ್ಪಸ ಕಂಡಿದೆ. ಬಣ್ಣದ ಸೀರೆಗಳು ಸಾಮಾನ್ಯವಾಗಿವೆ. ಆದರೆ ಹಳಬರು ಮಾತ್ರ ಯಥಾಸ್ಥಿತಿಯಲ್ಲೇ ಇದ್ದಾರೆ. ಮುದುಕಿಯರು ಮೊಣಕಾಲಿನಿಂದ ಸೀರೆಯನ್ನು ಮೇಲಕ್ಕೆ ಎತ್ತಿಕಟ್ಟಿ ಅದೇ ಸೆರಗನ್ನು ಎದೆಗೂ ಬಿಗಿಯುತ್ತಾರೆ ವಯಸ್ಸಾದ ಗಂಡಸರು ಬರೀ ಲಂಗೋಟಿಯಲ್ಲೇ ಇರುತ್ತಾರೆ. ವಾಲೆ, ಕಡಕು, ಪಿಲ್ಲಿ, ತೋಳುವಂದಿ, ಕಾಲುಕಡಗ, ಮಣಿಸರ ಹಾಕಿದ ಹೆಂಗಸರು ಅಲ್ಲಲ್ಲಿ ಕಾಣುತ್ತಾರೆ. ಗಂಡಸರು ಕಿವಿಗಳಿಗೆ ಅತ್ತಕಡಕು ಹಾಕುತ್ತಾರೆ. ಈಗಿನ ಹುಡುಗರು ಭಟ್ಕಳದ ಬನಿಯನ್ನ ಮತ್ತು ಖಾಕಿ ಚಡ್ಡಿ ತೊಡಲು ಮೊದಲು ಮಾಡಿದ್ದರೆ, ಸ್ನೋ, ಪೌಡರ್ ಮತ್ತು ಕ್ರೀಂಗಳನ್ನು ಇಟ್ಟುಕೊಂಡಿರುವ ಒಬ್ಬಿಬ್ಬರು ಹುಡುಗಿಯರು ಮೆಗಾನೆಯ ಹಾಡಿಯ ಹುಡುಗರ ಗುಂಪಿನಲ್ಲಿ ರೋಮಾಂಚನ ತಂದಿದ್ದಾರೆ. ಆದರೂ ನಾಗರಿಕ ಜಗತ್ತಿನ ನಿರ್ಲಕ್ಷ್ಯದಿಂದ ಈ ಎಲ್ಲರೂ ಅಕ್ಷರಜ್ಞಾನದಿಂದ ವಂಚಿತರಾಗುತ್ತಿರುವುದು ಮಾತ್ರ ವಿಷಾದನೀಯ.

ಕುಣಬಿಯರ ಆತ್ಮೀಯ ಆತಿಥ್ಯವನ್ನು ಪಡೆದು, ಅವರ ಜೀವನಕ್ರಮ ಮತ್ತು ಪರಿಸರವನ್ನು ಸೆರೆಹಿಡಿದು ಸಂತೃಪ್ತಿಯ ಮನೋಭಾವದಿಂದ ಹೊರಟಾಗ ಇಡೀ ಹಾಡಿಗೆ ಹಾಡಿಯೇ ನಮ್ಮನ್ನು ಕಳಿಸಲು ಬಂತು ಶ್ರೀನಿವಾಸಮೂರ್ತಿ ಎಲ್ಲರನ್ನೂ ಒಂದು ಗುಡಿಸಲ ಅಂಗಳದಲ್ಲಿ ಕೂಡಿಸಿ ಅವರ ಜೊತೆ ನಮ್ಮನ್ನೂ ಸೇರಿಸಿ ಮತ್ತಷ್ಟು ಫೋಟೊ ತೆಗೆದರು. ಅವರೆಲ್ಲರಿಗೆ ಕೈಬೀಸಿ ಹೊರಟಾಗ ಹಾಲು, ಸಿದ್ದು, ಸೋಮು, ಚಿನ್ನು ಎಂಬ ಮುದ್ದು ಹುಡುಗರು ಅಟ್ಟಣಿ ಮೇಲಿಂದ ಹಕ್ಕಿ ಬೆದರಿಸುವ ಡಬ್ಬ ಬಡಿಯುತ್ತಾ, ಸೀಟಿ, ಕೇಕೆ ಹಾಕುತ್ತಾ ನಮ್ಮನು ಬೀಳ್ಕೊಟ್ಟರು.

ಯಥಾಪ್ರಕಾರ ಕುಪ್ಪಯ್ಯ ನಮ್ಮ ಮುಂದೆ ಹೊರಟ, ಹಾಡಿಗಳನ್ನು ಬಿಟ್ಟು ಸ್ವಲ್ಪ ದೂರ ಹೋದ ಮೇಲೆ ಮೊನ್ನೆ ಬಂದ ದಾರಿಯಲ್ಲೇ ಇಳಿಯುವುದೋ ಅಥವಾ ಉತ್ತರ ದಿಕ್ಕಿಗೆ ಸ್ವಲ್ಪ ದೂರ ನಡೆದು ಸೀದಾ ನಾಗವಳ್ಳಿ ರಸ್ತೆಗೆ ಇಳಿಯುವುದೋ ಎಂದು ಕುಪ್ಪಯ್ಯ ನಮ್ಮನ್ನೇ ಕೇಳಿದ. ಯಾವ ದಿಕ್ಕು ಯಾವ ಮೂಲೆ ಯಾವ ಕಾಡುಕಂದರವೂ ತೋಚದಿದ್ದ ನಮಗೆ ಕುಪ್ಪಯ್ಯನಿಗೆ ಏನು ಹೇಳುವುದು ಎಂದೇ ತಿಳಿದಿದರಲಿಲ್ಲ. ಇಳಿಸುವುದು, ಬೀಳಿಸುವುದು ಎಲ್ಲವನ್ನೂ ಕುಪ್ಪಯ್ಯನಿಗೆ ಬಿಟ್ಟೆವು. ನಾವವಳ್ಳಿ ದಿಕ್ಕಿಗೆ ನೇರವಾಗಿ ಇಳಿದರೆ ಸುಮಾರು ೮ ಕಿ. ಮೀ. ಪ್ರಯಾಣ ಕಡಿಮೆಯಾಗುತ್ತದೆ. ಆದರೆ ಕಡಿದಾದ ದಾರಿಯಲ್ಲಿ ಕಷ್ಟಪಟ್ಟು ಇಳಿಯಬೇಕಾಗುತ್ತದೆ. ಎಂದು ವಿವರಿಸಿದ ಕುಪ್ಪಯ್ಯ ನಮ್ಮ ಎದುರಿಗೇ ಇದ್ದ ಸುಮಾರು ಸಾವಿರ ಅಡಿ ಬೆಟ್ಟ ತೋರಿಸಿ ಈ ಬೆಟ್ಟಹತ್ತಿ ಆ ಕಡೆ ಇಳಿಯಬೇಕು ಎಂದು ಮತ್ತೆ ಬೆಟ್ಟ ಹತ್ತುವ ಪಡಿಪಾಟಲು ಬೇಡವೇ ಬೇಡ ಎಂದು ವಿಷ್ಣ ಹಠ ಮಾಡಿದ. ಲಿಂಗೇಗೌಡ – ವಿಷ್ಣ ಬಿಸಿ ಬಿಸಿ ಚರ್ಚೆಯನ್ನೆ ನಡೆಸಿದರು. ಇಲ್ಲೂ ವಿಷ್ಣು ಸೋತ. ಬೆಟ್ಟ ಹತ್ತುವುದು ಮೊದಲಾಯಿತು. ತುಂಬಾ ಹುಮ್ಮಸ್ಸಿನಲ್ಲಿ ತುಂಬಾ ಕಡಿದಾದ ಸಾವಿರ ಅಡಿ ಏರಿದೆವು. ಇಲ್ಲಿಗೆ ಬಹುಶಃ ಐದು ಸಾವಿರ ಅಡಿಗಳನ್ನು ಪೂರೈಸಿದ್ದೆವೆಂದು ಕಾಣುತ್ತದೆ. ದೂರದಲ್ಲಿ ತೆಂಗಿನ ಮರಗಳ ನಡುವೆ ಭಟ್ಕಳ ಗೋಚರಿಸಿತು. ನೀಲ ಸಾಗರ, ಮಸುಕು ಮಸುಕಾಗಿ ಕಾಣತೊಡಗಿತು. ಭಟ್ಕಳದ ಸೇತುವೆ, ಬಂದರಿನ ಸೂಚನಗೋಪುರ ಎಲ್ಲವೂ ಕಾಣತೊಡಗಿದವು. ಆಳೆತ್ತರಕ್ಕೆ ಬೆಳೆದ ಹುಲ್ಲಿನ ನಡುವೆ ಕುಪ್ಪಯ್ಯ ಮತ್ತು ಕರಿಯ ನಮ್ಮ ಪೆಟ್ಟಿಗಳನ್ನು ಹೊತ್ತುಕೊಂಡು ದಾರಿ ಮಾಡಿಕೊಂಡು ಮುನ್ನುಗ್ಗುತ್ತಿದ್ದರು. ಇದು ಪರ್ವತವೇ ಅಲ್ಲ ಎನ್ನುವ ವಿಶಾಲ ಹುಲ್ಲುಗಾವಲು, ತೆಳುಗಾಳಿಗೆ ಇಡೀ ಹುಲ್ಲುಗಾವಲು ತೆರೆತೆರೆಯಂತೆ ನರ್ತಿಸುತ್ತಿತ್ತು. ಅದೊಂದು ಮನಮೋಹಕ ದೃಶ್ಯ ಹುಲ್ಲುಗಾವಲು ನಡುವೆ ಅದನ್ನು ಸೀಳಿಕೊಂಡು ಹೋಗುತ್ತಿದ್ದ ನಮಗೆ ಕೆಲವೊಮ್ಮೆ ಹಿಂದುಮುಂದಿನವರೇ ಕಾಣದಂತೆ ನಾವು ಯಾವುದೋ ಲೋಕದಲ್ಲಿ ಅಂತರಪಿಶಾಚಿಗಳಾಗಿ ಅಲೆಯುತ್ತಿರುವಂತೆ ಭಾಸವಾಗಿ ಒಮ್ಮೊಮ್ಮೆ ಮೈ ನಡುಗುತ್ತಿತ್ತು. ಇದೆಂತಹ ವೈಚಿತ್ರ್ಯ? ಇಷ್ಟು ವಿಸ್ತಾರವಾದ ಇಡೀ ಹುಲ್ಲುಗಾವಲಿನಲ್ಲಿ ಎಲ್ಲಿಯೂ ಒಂದು ಮರವಿಲ್ಲ. ಆಕಾಶದ ನಡುವೆ ಬರೀ ಬಯಲು, ಅದೇ ಒಂದು ಲೋಕ.

ಸಹ್ಯಾದ್ರಿಯ ಶೀಖರಾರೋಹಣ ಮಾಡಿದ ಸಂತೃಪ್ತಿ ನಮಗೆ ಉಂಟಾಗಿತ್ತು ಅಲ್ಲಿ ಕುಪ್ಪಯ್ಯ ಮತ್ತು ಕರಿಯನ ಜೊತೆ ಒಂದಿಷ್ಟು ಫೋಟೋ ತೆಗೆದೆವು. ಅರ್ಧ ಗಂಟೆ ಕುಂತು ಇಡೀ ಮಲೆನಾಡನ್ನು ಕಣ್ಣಿಗೆ ತುಂಬಿಕೊಂಡು ಆಸ್ವಾದಿಸಿದೆವು. ಮತ್ತೆ ಕುಪ್ಪಯ್ಯನ ಅವಸರಕ್ಕೆ ಮಣಿದು ಇಳಿಯುವ ಕಾರ್ಯಕ್ಕೆ ಸಜ್ಜಾದೆವು. ಕಡಿದಾದ ಇಳಿಜಾರು. ಶರೀರದ ಭಾರ ಹಿಡಿದು ಚಮತ್ಕಾರಿಕವಾಗಿ ಇಳಿಯಬೇಕಾದ ಪರಿಸ್ಥಿತಿ ಬೃಹದಾಕಾರದ ಕಾಡು ಎದುರಾಯಿತು. ಸೂರ್ಯನ ಬಿಸಿಲನ್ನೇ ಕಾಣದ ಕಪ್ಪು ನೆಲ, ತರಗೆಲೆ ಕೊಳೆತು ಮಣ್ಣಿನೊಡನೆ ಸೇರಿಹೋದ ಕಾರಣಕ್ಕೆ ಉತ್ಪನ್ನವಾದ ಒಂದು ಥರಾ ಹಿತವಾಗಬಹುದಾದ ವಾಸನೆ. ಮರಮರವನ್ನೂ ಕೈಯಲ್ಲಿ ಹಿಡಿಯುತ್ತಾ ಅಸರೆ ತಪ್ಪದಂತೆ ಇಳಿಯತೊಡಗಿದೆವು. ಗಿಡ-ಬಳ್ಳಿ-ಮುಳ್ಳುಗಳು ಆಗಾಗ ತರಚಿ ತೊಂದರೆ ಕೊಡುತ್ತಿದ್ದವು. ಎಲ್ಲರ ಕಣ್ಣೂ ವಿಷ್ಣು ಮೇಲೆ. ಇವನೆಲ್ಲಿ ಬಂಡೆ ಉರುಳಿದ ಹಾಗೆ ಉರುಳಿ ಏಕಾಏಕಿ ನಾಗವಳ್ಳಿ ರಸ್ತೆಗೆ ಬೀಳುವನೋ ಎಂಬ ಭಯ. ಅವನಂತೂ ಉಸಿರು ಬಿಗಿಹಿಡಿದು ಅಂಗೈಯಲ್ಲಿ ಪ್ರಾಣ ಇಟ್ಟುಕೊಂಡು ನಮ್ಮನ್ನೆಲ್ಲಾ ಶಪಿಸುತ್ತಾ ಇಳಿಯುತ್ತಿದ್ದ; ಮಧ್ಯೆ ಮಧ್ಯೆ ಬುಡಮೇಲಾಗಿ ಉರುಳಿದ ಭಾರಿ ಭಾರಿ ಮರಗಳು ಅಡ್ಡಾಗುತ್ತಿದ್ದವು. ಆ ಕಡೆ – ಈ ಕಡೆ ಕಂದರಗಳು, ಅಂತಹ ಸಂದರ್ಭದಲ್ಲಿ, ಮರಕ್ಕೂ ನೆಲಕ್ಕೂ ಇರುವ ಸಂದಿನಲ್ಲಿ ನುಸುಳಿ ಹೊರಬರಬೇಕಾಗುತ್ತಿತ್ತು. ಇಂತಹ ನಾಲ್ಕೈದು ಸಾಹಸಗಳೂ ಆದವು. ಕೊನೆಗೂ ವಿಷ್ಣು ಒಂದು ಕಡೆ ಬಿದ್ದೇ ಬಿದ್ದ! ನಾಲ್ಕಡಿ ಉರುಳಿ ಒಂದು ಬೃಹತ್‌ ವೃಕ್ಷದ  ಒಡಲಿಗೆ ತಗಲಿಕೊಂಡ. ಹೊಟ್ಟೆಯ ಮೇಲೆ ಗೀರಿದ ಒಂದು ಬೇರು ಒಂದಿಷ್ಟು ರಕ್ತದ ರುಚಿಯನ್ನೂ ನೋಡಿತು. ತಕ್ಷಣವೇ ಕುಪ್ಪಯ್ಯ ಕಾರ್ಯ ಪ್ರವೃತ್ತನಾಗಿ ಅವನ ಗಾಯಕ್ಕೆ ಕಾಡಿನ ಔಷದಿಯ ಪ್ರಥಮ ಚಿಕಿತ್ಸೆ ಮಾಡಿದ ಅಂತೂ – ಇಂತೂ ಬೆಳಿಗ್ಗೆ ೧೧ ಗಂಟೆಗೆ ಮೆಗಾನೆ ಬಿಟ್ಟ ನಾವು ಸಂಜೆ ೪ ಗಂಟೆಗೆ ನಾಗವಳ್ಳಿ ತಲುಪಿದೆವು. ಹಸಿದ ಹೊಟ್ಟೆ ದಣಿದ ದೇಹ, ಬಂದವರೇ ನಾಗವಳ್ಳಿಯ ಹೊಳೆಗೆ ಧುಮುಕಿ ಮನಸಾರೆ ಈಜಾಡಿದೆವು. ನೀರು ಬಿಟ್ಟು ಬರಲು ಮನಸ್ಸೇ ಆಗುತ್ತಿರಲ್ಲಿಲ್ಲ. ಕತ್ತಲಾಗತೊಡಗಿದಾಗ ಕುಪ್ಪಯ್ಯ ಬಂದು ನಮ್ಮೆಲ್ಲರನ್ನೂ ನೀರಿನಿಂದ ಬಲವಂತವಾಗಿ ಕರೆದುಕೊಂಡು ಹೋದ. ಅವನ ಹಿಂದೆ ಒಂದು ಫರ್ಲಾಂಗ್‌ ನಡೆಯುವಷ್ಟರಲ್ಲಿ ಒಂದು ಗುಡಿಸಲಿನ ಹಜಾರದಲ್ಲಿ ಬಾಳೆ ಎಲೆ ಹಾಸಲಾಗಿತ್ತು ಘಮಘಮ ವಾಸನೆ ಮೂಗಿಗೆ ಅಪ್ಪಳಿಸಿ ಹಸಿವನ್ನು ಮತ್ತಷ್ಟು ಪ್ರಚೋದಿಸುತ್ತಿತ್ತು. ಕುಪ್ಪಯ್ಯನ ಮನೆಯ ಮೀನಿನ ಊಟ ನಮ್ಮೆಲ್ಲರಿಗೂ ಅಮೃತ ಸಮಾನವೇನು? ಅಮೃತವೇ ಆಗಿತ್ತು!