ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಡಕಟ್ಟು ಅಧ್ಯಯನ ವಿಭಾಗವು ಕಳೆದ ಒಂದುವರೆ ದಶಕದಿಂದ ಹಲವು ಉಪಯುಕ್ತ ಯೋಜನೆಗಳನ್ನು ಹಮ್ಮಿಕೊಂಡು ನಿರ್ವಹಿಸುತ್ತಾ ಬಂದಿದೆ. ಆರಂಭದಲ್ಲಿ ವಿಭಾಗವು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಷಿದ ೧೩ ಬುಡಕಟ್ಟು ಮಹಾಕಾವ್ಯಗಳು ರಾಜ್ಯದಲ್ಲಿ ಅಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಹೊಸ ಚರ್ಚೆಯ ಹುಟ್ಟಿಗೆ ಕಾರಣವಾದವು. ಈ ಬುಡಕಟ್ಟು ಮಹಾಕಾವ್ಯ  ಮಾಲೆಯಲ್ಲಿ ಈಗ ೧೩ ಮಹಾಕಾವ್ಯಗಳು ಪ್ರಕಟವಾಗಿದ್ದು ಇನ್ನೂ ಎರಡು ಕಾವ್ಯಗಳು ಪ್ರಕಟಣೆಯ ಹಂತದಲ್ಲಿವೆ. ನಂತರ ನಾವು ಆರಂಭಿಸಿದ ಬುಡಕಟ್ಟು ಅಧ್ಯಯನ ಮಾಲೆಯು ಕರ್ನಾಟಕದ ಬುಡಕಟ್ಟುಗಳ ವಿಶಿಷ್ಟ ಆಯಾಮಗಳನ್ನು ಓದುಗರ ಮುಂದಿಟ್ಟು ಜನಪ್ರಿಯವಾಯಿತು. ಮತ್ತು ನಾವು ಹೊರತರುತ್ತಿರುವ ಬುಡಕಟ್ಟು ಅಧ್ಯಯನ ಪತ್ರಿಕೆಯು ಒಂದು ವಿಶಿಷ್ಟ ಓದುಗರ ಬಳಗವನ್ನು ಮತ್ತು ಪತ್ರಿಕೆಗೆ ಬರೆಯುವ ಲೇಖಕರ ವಲಯವನ್ನೇ ವಿಸ್ತರಿಸುತ್ತಿದೆ. ಇದರ ಜೊತೆಗೆ ಪ್ರತಿ ವರ್ಷ ನಾವು ಆಯೋಜಿಸುತ್ತಿರುವ ಬುಡಕಟ್ಟು ಸಮ್ಮೇಳನಗಳು ಕರ್ನಾಟಕದ ಬುಡಕಟ್ಟುಗಳ ಕಲೆ, ಸಂಸ್ಕೃತಿಗಳನ್ನ ಮತ್ತು ಬುಡಕಟ್ಟು ಸಮುದಾಯಗಳ ವರ್ತಮಾನದ ಸಂಕಷ್ಟಗಳನ್ನು ಜನರ ಮುಂದಿಡುವ ಸೂಕ್ತ ವೇದಿಕೆಯಾಗಿ ರೂಪಗೊಳ್ಳುತ್ತಿವೆ.

ಪ್ರಸ್ತುತ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳ ವರದಿಗಳನ್ನು ವಿಶ್ವವಿದ್ಯಾಲಯವು ಪ್ರಕಟಿಸುತ್ತಿದೆ. ೨೦೦೬ನೇ ಇಸ್ವಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಆಯುಕ್ತರಾಗಿದ್ದ ಶ್ರೀ ಮೊನ್ನಪ್ಪನವರು ಮತ್ತು ಅಂದಿನ ಕುಲಪತಿಗಳಾಗಿದ್ದ ಬಿ. ಎ. ವಿವೇಕ ರೈ ಅವರ ಒತ್ತಾಸೆಯ ಮೇರೆಗೆ ಈ ವರದಿಗಳು ರೂಪಗೊಂಡವು. ಈ ವರದಿಗಳನ್ನು ರೂಪಿಸಲು ಶ್ರೀ ಡಿ. ದೇವರಾಜ ಅರಸರು ಸಂಶೋಧನಾ ಸಂಸ್ಥೆಯು ಧನಸಹಾಯ ಮಾಡಿತ್ತು. ಕರ್ನಾಟಕದ ವಿಶಿಷ್ಟ ಅಲೆಮಾರಿಗಳ ವರ್ತಮಾನದ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳುಳ್ಳ ಅಭಿವೃದ್ಧಿಗೆ ಬೇಕಾದ ಅಂಕಿಅಂಶಗಳು ಮತ್ತು ಅವರ ಜನಾಂಗಿಕ ವಿವರಗಳುಳ್ಳ ವರದಿಯನ್ನು ಸಿದ್ಧಪಡಿಸಿ ಕೊಡಲು ಸದರಿ ಸಂಸ್ಥೆ ನಮ್ಮನ್ನು ಕೋರಿತ್ತು. ಈ ಸಮುದಾಯಗಳ ವರದಿಗಳನ್ನು ವಿಭಾಗವು ಸಿ‌ದ್ಧಪಡಿಸಿ ೨೦೦೬ರಲ್ಲಿಯೇ ದೇವರಾಜ ಅರಸು ಸಂಸ್ಥೆಗೆ ಒಪ್ಪಿಸಿತ್ತು. ಮೊದಲ ಹಂತದಲ್ಲಿ ಕುಣಬಿ, ಬುಂಡೆಬೆಸ್ತ, ಸಿಕ್ಕಲಿಗ, ಗೊಂದಲಿಗರು ಮತ್ತು ಹೆಳವ ಸಮುದಾಯಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸದರಿ ಸಂಶೋಧನಾ ಸಂಸ್ಥೆಯ ಅಪೇಕ್ಷೆಯಂತೆ ಕೇವಲ ಆರು ತಿಂಗಳಲ್ಲಿ ಈ ವರದಿಗಳು ಸಿದ್ಧಗೊಂಡವು. ಅವು ಈಗ ಪುಸ್ತಕ ರೂಪದಲ್ಲಿ ಈಗ ಪ್ರಕಟವಾಗುತ್ತಿವೆ.