೧೯೩೨ರಲ್ಲಿ ಜನಿಸಿದ ಶ್ರೀ ಕುದ್ಕಾಡಿ ವಿಶ್ವನಾಥ ರೈ ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿದ ಕಲಾವಿದರು. ವಿದ್ವಾನ್ ಎ.ಎನ್. ನಾಗರಾಜನ್, ಶ್ರೀ ರಾಜನ್ ಅಯ್ಯರ್, ಕೆ.ಎಸ್. ರಾಜಗೋಪಾಲ್, ಕಾಂಚೀಪುರಂ ಜಿ. ಎಳ್ಳಪ್ಪನ್, ಡಾ|| ಕೆ. ವೆಂಕಟಲಕ್ಷ್ಮಮ್ಮ ಮುಂತಾದವರಿಂದ ಭರತನಾಟ್ಯ, ಕಥಕ್ಕಳಿ, ಓರಿಯಂಟಲ್ ನೃತ್ಯ ಅಭ್ಯಾಸ ಮಾಡಿರುವ ಶ್ರೀಯುತರಿಗೆ ಮೃದಂಗ ಹಾಗೂ ಹಾಡುಗಾರಿಕೆಯಲ್ಲೂ ಪರಿಣತಿ ಇದೆ. ಜೊತೆಗೆ ಇಂಡೋ-ಸಿಲೋನ್ ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ ೨ ವರ್ಷಗಳ ಕಾಲ ಸಿಂಹಳೀ ನೃತ್ಯ ಅಭ್ಯಾಸ ಮಾಡಿದ್ದಾರೆ.

ಹಲವು ನೃತ್ಯ ನಾಟಕಗಳನ್ನು ನಿರ್ದೇಶಿಸಿರುವ ವಿಶ್ವನಾಥ್ ಅವರ ವಿಶ್ವಕಲಾ ನಿಕೇತನದಲ್ಲಿ ನೂರಾರು ಯುವ ಕಲಾವಿದರು ಶಿಕ್ಷಣ ಪಡೆಯುತ್ತಿದ್ದಾರೆ. ಪುಸ್ತಕ ಪ್ರಕಟಣೆ, ನಟನೆ ಇವರ ಇತರ ಹವ್ಯಾಸಗಳು, ಹಲವು ಕೃತಿಗಳನ್ನೋ ಪ್ರಕಟಿಸಿರುವ ಶ್ರೀಯುತರ “ನರ್ತನ ಜಗತ್‌” ನೃತ್ಯ ಕಲಾವಿದರಿಗೆ ಬಹಳ ಉಪಯುಕ್ತ ಕೃತಿಯಾಗಿದೆ.

’ಲಲಿತಕಲಾ ಪ್ರವೀಣ’, ’ನರ್ತನ ಕಲಾ ಚತುರ’ ಮುಂತಾದ ಬಿರುದುಗಳಿಂದ ಸನ್ಮಾನಿತರಾಗಿರುವ ಶ್ರೀಯುತರ  ಕೆಲವು ಕೃತಿಗಳಿಗೆ ತುಳು ಸಾಹಿತ್ಯ ಅಕಾಡೆಮಿಯ ಬಹುಮಾನಗಳು ಲಭಿಸಿರುವ ಇವರಿಗೆ ೨೦೦೦-೦೧ನೇ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.