ಕುದ್ಮುಲ್ ರಂಗರಾವ್

ಮಧ್ಯರಾತ್ರಿಯ ಸಮಯ. ಪಕ್ಕದ ಮನೆಯ ಬಳಿ ಒಂದೇ ಸಮನೆ ಆರ್ತ ಕರೆ. ‘ಬಾಣಾರೇ ಬಾಣಾರೇ’. ಆ ಮನೆ ಒಬ್ಬ ಮೇಲು ಜಾತಿಯ ವೈದ್ಯರದು. ಕರೆಯುತ್ತಿದ್ದ ವ್ಯಕ್ತಿ ‘ಅಸ್ಪೃಶ್ಯರು’ ಎನಿಕೊಂಡವರ ಜಾತಿಗೆ ಸೇರಿದವನು. ಅವನಿಗೆ ಕೂಗಿಕೂಗಿ ಸಾಕಾಗಿರಬೇಕು. ಎಷ್ಟೋ ಹೊತ್ತಿನ ಮೇಲೆ ವೈದ್ಯರ ಮನೆಯ ಮುಚ್ಚಿದ್ದ ಕದ ತೆರೆಯಿತು. ವೈದ್ಯರು ಸಿಡಿಮಿಡಿಗುಟ್ಟುತ್ತಲೇ ಹೊರಗೆ ಬಂದರು. ಕೈಯಲ್ಲಿದ್ದ ಕಂದೀಲಿನ ಬೆಳಕಿನಲ್ಲಿ ಬಂದವನ ಮುಖವನ್ನು ಪರೀಕ್ಷಿಸಿದರು. ಅವನು ಜಾತಿಯಲ್ಲಿ ಮುಟ್ಟುಲಾಗದವನು ಎಂಬುದು ತಿಳಿದೊಡನೆಯೇ ಅವರು ಸಿಟ್ಟಿನ ಜ್ವಾಲಾಮುಖಿಯಾದರು. ಅವನನ್ನು ಬಾಯಿಗೆ ಬಂದಂತೆ ಬೈದರು.

ಆ ನಿರ್ಭಾಗ್ಯನ ಒಬ್ಬನೇ ಒಬ್ಬ ಮಗನಿಗೆ ಹಾವು ಕಚ್ಚಿತ್ತು. ಅವನಿಗೆ ಸರಿಯಾದ ಔಷಧೋಪಚಾರವಾಗದೆ ಬದುಕು ವಂತಿರಲಿಲ್ಲ. ಮಗನಿಗೆ ಔಷಧ ಕೊಡುವಂತೆ ತಂದೆ ವೈದ್ಯರಲ್ಲಿ ಅಂಗಲಾಚಿ ಬೇಡಿಕೊಂಡ. ಕಲ್ಲೂ ಕರಗುವಂತೆ ಪ್ರಾರ್ಥನೆ ಮಾಡಿದ. ಆದರೆ ವೈದ್ಯರ ಮನಸ್ಸು ಕರಗಲಿಲ್ಲ. ಅಸ್ಪೃಶ್ಯ ಜನರನ್ನು ನೋಡಿದರೇ ಅಪಶಕುನವೆಂದು ಅವರು ಬಲವಾಗಿ ನಂಬಿದ್ದರು.

ವೈದ್ಯರು ಕೆಳಜಾತಿಯವನ ಮಗನಿಗೆ ಚಿಕಿತ್ಸೆ ಮಾಡಲು ಒಪ್ಪಲಿಲ್ಲ. ಹುಡುಗ ತೀರಿಕೊಂಡ.

ವೈದ್ಯರ ಪಕ್ಕದ ಮನೆಯ ಹೊರಜಗಲಿಯಲ್ಲಿ ಮಲಗಿ ಕೊಂಡಿದ್ದ ಒಬ್ಬ ವಿದ್ಯಾರ್ಥಿ ಈ ದೃಶ್ಯವನ್ನು ಕಣ್ಣಿವೆ ಮುಚ್ಚದೆ ನೋಡುತ್ತಿದ್ದ.

ಒಂದು ದಿನ ಆ ವಿದ್ಯಾರ್ಥಿ ಒಂದು ಗ್ರಾಮಕ್ಕೆ ಹೋಗಿದ್ದ. ಅಲ್ಲಿನ ಜಮೀನ್ದಾರರೊಬ್ಬರ ಮನೆಯೆದುರು ಬಹಳ ಜನ ಸೇರಿದ್ದರು. ಅಲ್ಲಿ ಒಬ್ಬ ಕಪ್ಪು ಬಣ್ಣದ ಹುಡುಗನನ್ನು ಸಂಪೂರ್ಣ ಬೆತ್ತಲೆ ಮಾಡಿ ಒಂದು ಕಂಬಕ್ಕೆ ಕಟ್ಟಿಹಾಕಿದ್ದರು.

ಅವನನ್ನು ಹೀಗೆ ಕಟ್ಟಿಹಾಕಲು ಕಾರಣವೇನು?

ಅವನೇನೂ ಕಳ್ಳತನ ಮಾಡಿರಲಿಲ್ಲ. ಸುಳ್ಳು ಹೇಳಿರಲಿಲ್ಲ.

ಅವನು ಮಾಡಿದ ಅಪರಾಧವೆಂದರೆ ಹೊಸ ಬಟ್ಟೆಗಳನ್ನು ಧರಿಸಿದ್ದು. ಅವನು ಜಾತಿಯಲ್ಲಿ ಕೊರಗ. ಅಸ್ಪೃಶ್ಯನಾದ ಅವನಿಗೆ ಹೊಸ ಬಟ್ಟೆಗಳನ್ನು ತೊಡುವ ಹಕ್ಕು ಇರಲಿಲ್ಲ. ಇತರ ಸವರ್ಣೀಯರು ಉಟ್ಟು ಹರಿದ ಚಿಂದಿಗಳಿಂದಲೇ ಅವನ ಜಾತಿಯವರು ತಮ್ಮ ಮಾನ ಮುಚ್ಚಿಕೊಳ್ಳಬೇಕಿತ್ತು.

ಹೊಸ ಬಟ್ಟೆ ಉಟ್ಟ ತಪ್ಪಿಗಾಗಿ ಹುಡುಗ ಬಾಸುಂಡೆ ಬರುವಂತೆ ಏಟು ತಿಂದ.

 

 

ವೈದ್ಯರು ಚಿಕಿತ್ಸೆ ಮಾಡಲು ಒಪ್ಪಲಿಲ್ಲ.

ಅದೇ ಕೊರಗರು ಕಷ್ಟಪಟ್ಟು ಕಾಡುಗಳಲ್ಲಿ ಬೀಳಲುಗಳನ್ನು ಹುಡುಕಿ ಬುಟ್ಟಿಗಳನ್ನು ತಯಾರಿಸುತ್ತಾರೆ. ಅವು ಹಳ್ಳಿಯ ಬಹು ಮೇಲ್ಮಟ್ಟದ ಸಂಸಾರಗಳವರೆಗೂ ಅವಶ್ಯ ಬೇಕಾಗುತ್ತವೆ. ಬುಟ್ಟಿ ಮಾಡಿದವರು ಅದನ್ನು ತಂದು ಮನೆಯಿಂದ ಹರದಾರಿ ದೂರದಲ್ಲಿಟ್ಟು ಜೋರಾಗಿ ಒಮ್ಮೆ ಕೂಗಬೇಕು. ಅನಂತರ ಮನೆಯವರು ಅಲ್ಲಿಗೆ ಹೋಗಿ ಕೂಲಿ ಕೊಟ್ಟು ‘ಶುದ್ಧದ ನೀರನ್ನು’ ಆ ಬುಟ್ಟಿಯ ಮೇಲೆ ಹಾಕಿ ಅದನ್ನು ಮನೆಗೆ ತರಬೇಕು.

ಅಸ್ಪೃಶ್ಯರು ಮುಟ್ಟಿದರೆ ಮೈಲಿಗೆ. ಅವರು ಊರಿಂದ ದೂರವಿರಬೇಕು. ಆದರೆ ಅವರು ತಯಾರಿಸಿದ ಸಾಮಾಗ್ರಿಗಳಿಗೆ ಅಶುದ್ಧವಿಲ್ಲ. ಇದೇಕೆ ಹೀಗೆ?

ಎಲ್ಲ ತಿನ್ನುವುದೂ ಒಂದೇ ಆಹಾರ, ಎಲ್ಲ ಸೇವಿಸುವುದು ಒಂದೇ ಗಾಳಿ, ಎಲ್ಲ ಕುಡಿಯುವುದು ಒಂದೇ ನೀರು, ಎಲ್ಲರಿಗೂ ದುಃಖ ಸಂತೋಷ ಉಂಟು; ಎಲ್ಲ ಕಡೆಗೆ ಸಾಯುವವರೇ. ಹೀಗಿರುವಾಗ ಹುಟ್ಟಿನಿಂದ ಇವರು ದೊಡ್ಡವರು ಅವರು ಕೀಳು ಎಂದೇಕೆ?

ಆ ವಿದ್ಯಾರ್ಥಿ ಬಹಳ ಯೋಚಿಸಿದ. ಕೆಳಗಿನ ಜಾತಿಯವರು ಎನಿಸಿಕೊಂಡವರಿಗೆ ಬಹು ಅನ್ಯಾಯವಾಗುತ್ತಿದೆ ಎಂದು ಅವನಿಗನಿಸಿತು. ಅವನ ಹೃದಯ ನೊಂದು ಬೆಂದಿತು. ಆ ವಿದ್ಯಾರ್ಥಿಯೇ ಕುದ್ಮುಲ್ ರಂಗರಾವ್.

ಶೋಷಣೆ-ಅನ್ಯಾಯ

ನಮ್ಮ ಸಮಾಜದಲ್ಲಿ ‘ಅಸ್ಪೃಶ್ಯತೆ’ ಎಂಬುದು ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬಂದಿರುವ ಒಂದು ಅನ್ಯಾಯದ ಪದ್ಧತಿ.

ಸ್ವಾಮಿ ಶ್ರದ್ಧಾನಂದಜೀ, ರಾಮಕೃಷ್ಣ ಪರಮಹಂಸರು, ಪೊಟ್ಟಿ ಶ್ರೀರಾಮುಲು ಮೊದಲಾದವರೆಲ್ಲ ಈ ದೀನದಲಿತರ ಕರುಣಾಜನಕ ಸ್ಥಿತಿಯತ್ತ ಸಮಾಜದ ಕಣ್ಣು ಸೆಳೆಯಲು ಯತ್ನಿಸಿದರು. ಅದಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿ ಹೋರಾಡಿದರು.

ಪ್ರಪಂಚದಲ್ಲಿ ಪ್ರಾಣಿಗಳೂ ಮಾನವರೂ ಬೀದಿಯಲ್ಲಿ ಎಂಜಲೆಲೆಗಾಗಿ ಹೋರಾಡುವ ಹೃದಯ ವೇದಕ ಚಿತ್ರವನ್ನು ನಮ್ಮ ದೇಶದಲ್ಲಿ ಮಾತ್ರ ನೋಡಬಹುದು. ಹಾಗೆ ಹೋರಾಡುವವರು ಈ ದೀನದಲಿತರೇ. ಅದಕ್ಕೆ ಕಾರಣ ಈ ಸಮಾಜ.

ದಿನನಿತ್ಯವೂ ಬಡತನದೊಂದಿಗೆ ಹೋರಾಡುತ್ತಿದ್ದ ದಲಿತ ವರ್ಗದವರ ಸ್ಥಿತಿಗಳನ್ನು ಉದ್ಧರಿಸಬೇಕು ಎಂದು ರಂಗರಾವ್ ವಿದ್ಯಾರ್ಥಿಯಾಗಿದ್ದಾಗಲೇ ವಜ್ರಸಂಕಲ್ಪ ಮಾಡಿದರು. ಸಮಾಜದ ಅನಾದರಣೆಯನ್ನೂ ಶರೀರ ಶ್ರಮವನ್ನೂ ಲೆಕ್ಕಿಸದೆ ಅವಿರತ ದುಡಿದರು. ದೀನೋದ್ಧಾರ ಕಾರ್ಯಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗಮಾಡಿ, ಬಾಳನ್ನು ಶ್ರೀಗಂಧದಂತೆ ತೇಯ್ದರು. ಪುಣ್ಯಜೀವಿಗಳೆನಿಸಿದರು.

ಬಡತನದ ಮನೆ

ಕೇರಳದ ಕಾಸರಗೋಡಿನ ಸಮೀಪದಲ್ಲಿ ಕುದ್ಮುಲ್ ಎಂಬ ಹಳ್ಳಿ. ಅಲ್ಲಿ ವಾಸಿಸುತ್ತಿದ್ದ ಸಾರಸ್ವತ ಬ್ರಾಹ್ಮಣರ ಕುಟುಂಬದಲ್ಲಿ ೧೮೫೯ ರ ಜೂನ್ ೨೯ ರಂದು ರಂಗರಾವ್ ಜನಿಸಿದರು. ಅವರ ತಂದೆ ಏಳು ಮಕ್ಕಳ ಹೊರೆ ಹೊತ್ತ ಬಡ ಗುಮಾಸ್ತರಾಗಿದ್ದರು. ರಂಗರಾವ್ ಹಿರಿಯ ಮಗ.

ಕಡು ಬಡತನದಲ್ಲೇ ರಂಗರಾಯರು ತಮ್ಮ ಬಾಲ್ಯವನ್ನು ಕಳೆದರು. ಉದರ ನಿರ್ವಹಣೆಗಾಗಿ ಗಾಣದೆತ್ತಿನಂತೆ ದುಡಿಯುತ್ತಿದ್ದ ಅವರ ತಂದೆ ಸೋತು ಸುಣ್ಣವಾಗಿ ರಂಗರಾಯರ ಎಳೆಯ ಪ್ರಾಯದಲ್ಲೇ ಮರಣ ಹೊಂದಿದರು. ಆಗ ರಂಗರಾಯರಿಗಿನ್ನೂ ಹದಿನಾರು ವರ್ಷ ವಯಸ್ಸು.

ತಂದೆಯ ಮರಣದಿಂದ ಕಷ್ಟಗಳ ಬೆಟ್ಟವೇ ರಂಗರಾಯರ ತಲೆಯ ಮೇಲೆ ಕುಸಿದಂತಾಯಿತು. ಸಂಸಾರ ಸಾಗಿಸಲು ಎಷ್ಟೋ ಮಂದಿಯ ಕಾಲು ಹಿಡಿಯಬೇಕಾಯಿತು; ಕಷ್ಟ ನಿಷ್ಠುರಗಳನ್ನೆದುರಿಸಬೇಕಾಯಿತು. ರಂಗರಾಯರ ಮೃದು ಮನಸ್ಸಿನಲ್ಲಿ ಬಡತನದ ಕಷ್ಟಗಳ ಗಾಢ ಪ್ರಭಾವ ಬೀರಿದವು. ಕೈಯಲ್ಲಿ ಕಾಸಿಲ್ಲದವನಿಗೆ ಸಮಾಜದಲ್ಲಿ ಬಹು ಮಂದಿ ಕುರುಡು ಕವಡೆಯಷ್ಟೂ ಬೆಲೆ ಕೊಡುವುದಿಲ್ಲ ಎಂಬುದು ಗೊತ್ತಾಯಿತು. ಬಡತನದಲ್ಲಿ ಬೆಂದ, ಕಣ್ಣೀರಿನಲ್ಲಿ ಕೈತೊಳೆದ ರಂಗರಾಯರ ಹೃದಯ ಬಡವರಿಗಾಗಿ, ಕಷ್ಟದಲ್ಲಿರುವವರಿಗಾಗಿ ಮರುಗುತ್ತಿತ್ತು.

ಅಸ್ಪೃಶ್ಯ ಕಲಿಯಬಾರದು

ರಂಗರಾಯರು ಶಾಲೆಗೆ ಹೋಗಿ ಬಹಳ ಕಷ್ಟಪಟ್ಟು ವಿದ್ಯಾರ್ಜನೆ ಮಾಡಿದರು. ವಿದ್ಯೆ ಕಲಿಯುವಾಗಿನ ಆ ಎಷ್ಟೋ ದಿನಗಳಲ್ಲಿ ಉಪವಾಸವೇ ಇರಬೇಕಿತ್ತು. ಪುಸ್ತಕಗಳನ್ನು ಕೊಳ್ಳಲು ಕಾಸಿರಲಿಲ್ಲ. ಅದಕ್ಕಾಗಿ ಗೆಳೆಯರ ಪುಸ್ತಕಗಳನ್ನು ಕರಡು ಪ್ರತಿ ತಯಾರಿಸಿ ಓದಿಕೊಳ್ಳುತ್ತಿದ್ದರು. ಹೀಗೆಯೇ ಬಹು ಕಷ್ಟದಿಂದ ಎಫ್. ಎ. ಓದಿದರು.

ಆದರೆ ಮುಂದೆ ಓದಲು ಅವರಿಗೆ ಮಾರ್ಗವೇ ಇರಲಿಲ್ಲ. ಎಲ್ಲಾದರೂ ಕೆಲಸಕ್ಕೆ ಸೇರಿ ಸಂಪಾದಿಸದಿದ್ದರೆ ಸಂಸಾರವನ್ನು ಪೋಷಿಸುವುದು ಸಾಧ್ಯವಿರಲಿಲ್ಲ. ಅವರು ಮಂಗಳೂರಿಗೆ ಬಂದರು. ಅಲ್ಲಿ ಒಂದು ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಸ್ವೀಕರಿಸಿದರು.

ಶಿಕ್ಷಕರಾಗಿದ್ದಾಗ ರಂಗರಾಯರಿಗೆ ಬಡಮಕ್ಕಳ ಮತ್ತು ಅವರನ್ನು ಹೆತ್ತವರ ಸಂಪರ್ಕ ಬಂದಿತು; ಅವರ ಮೇಲೆ ವಾತ್ಸಲ್ಯ ಬೆಳೆಯಿತು. ಅದರಿಂದ ಅವರು ಸಾರ್ಥಕ್ಯವನ್ನು ಕಂಡುಕೊಳ್ಳಲು ಸಾಧ್ಯವಾದುದು ಉಳ್ಳಾಲ ರಘುನಾಥರ ಪರಿಚಯದಿಂದ.

ಉಳ್ಳಾಲ ರಘುನಾಥ ರಾಯರು ಬ್ರಹ್ಮಸಮಾಜ ಶಾಖೆಯ ಸಂಸ್ಥಾಪಕರು. ಬ್ರಹ್ಮ ಸಮಾಜ ಜಾತಿಭೇದವನ್ನು ಕಟುವಾಗಿ ವಿರೋಧಿಸುತ್ತಿತ್ತು. ಮನುಷ್ಯರೆಲ್ಲರೂ ಸಹೋದರ ಸಹೋದರಿಯರು; ಮೇಲು-ಕೀಳೆಂಬ ಆಚರಣೆ ಅಕ್ಷಮ್ಯ ಅಪರಾಧ ಎಂದು ಬ್ರಹ್ಮಸಮಾಜ ನಂಬಿತ್ತು.

ದೀನದಲಿತರ ಬಗ್ಗೆ ಸಹಾನುಭೂತಿಪರರಾಗಿದ್ದ ರಂಗರಾಯರು ಬ್ರಹ್ಮಸಮಾಜದ ಅನುಯಾಯಿಯಾಗಳಾದರು.

ಅಂದಿನಿಂದ ರಂಗರಾಯರು ಸಮಾಜ ದೂರವಿಟ್ಟಿದ್ದ ದೀನದಲಿತರ ಮನೆಗಳಿಗೆ ಹೋಗಲಾರಂಭಿಸಿದರು. ಅವರೊಂದಿಗೆ ಮಾತನಾಡಬಾರದೆಂದು ಸಮಾಜ ಹಾಕಿದ್ದ ನಿರ್ಬಂಧವನ್ನು ಕಡೆಗಣಿಸಿದರು. ಅವರ ಮಕ್ಕಳನ್ನೂ ಶಾಲೆಗೆ ಬರಲು ಒತ್ತಾಯ ಮಾಡಿದರು. ಸಮಾಜದ ಕೆಟ್ಟ ಕಣ್ಣಿನ ದೃಷ್ಟಿಯನ್ನು ಲೆಕ್ಕಿಸದೆ ಆ ಮಕ್ಕಳಿಗೆ ವಿದ್ಯೆ ಹೇಳಿಕೊಡಲು ಸಿದ್ಧರಾದರು.

ಸರ್ಕಾರ ಕೂಡ ‘ಜಾತಿ ಭೇದ ಮಾಡಬಾರದು, ಶಿಕ್ಷಕನು ಎಲ್ಲಾ ಜಾತಿಯವರನ್ನೂ ಸಮಾನರೆಂದು ತಿಳಿದು ವಿದ್ಯೆ ಕಲಿಸಬೇಕು’ ಎಂದು ಸಾರಿತ್ತು. ಅದರಂತೆ ರಂಗರಾಯರು ದೀನದಲಿತರಿಗೂ ಶಿಕ್ಷಣ ನೀಡುವುದು ಶಿಕ್ಷಕ ಧರ್ಮವೇ ಆಗಿತ್ತು.

ಆದರೆ ಅವರ ಈ ಕ್ರಮವನ್ನು ಸಮಾಜದಲ್ಲಿ ‘ದೊಡ್ಡವರು’, ‘ಉತ್ತಮ ಜಾತಿಯವರು’ ಎನಿಸಿದವರು ವಿರೋಧಿಸಿದರು. ‘ಕೆಳಗಿನ ಜಾತಿಯವರಿಗೆ ಕಲಿಸುವ ಜಾತಿಗೆ ನಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ’ ಎಂದು ಸಾರಿದರು. ಕೆಲವರು ರಂಗರಾಯರನ್ನು ಶಾಲೆಯಿಂದ ಓಡಿಸಬೇಕೆಂದು  ಪಣತೊಟ್ಟರು. ಶಾಲೆಗೇ ಬಂದು ಅವರನ್ನು ಸಿಕ್ಕಾಪಟ್ಟೆ ಬೈದರು. ಸಲ್ಲದ ಬೆದರಿಕೆಗಳನ್ನೊಡ್ಡಿದರು. ಅಸ್ಪೃಶ್ಯರು ಕಲಿಯುವುದು ಅವರಿಗೆ ಕಳಂಕವೆನಿಸಿತ್ತು.

ಯಾವ ರೀತಿಯಲ್ಲಾದರೂ ಅಸ್ಪೃಶ್ಯರ ಸ್ಥಿತಿಗತಿಗಳನ್ನು ಉದ್ಧರಿಸಲೇಬೇಕು ಎಂದು ರಂಗರಾಯರು ಸಂಕಲ್ಪ ಮಾಡಿದರು. ತಮ್ಮ ಆದರ್ಶದಂತೆ ನಡೆಯಲು ಅವಕಾಶ ವಿಲ್ಲವಾದರೆ ಕೆಲಸವೇ ಬೇಡ ಎಂದು ಶಿಕ್ಷಕ ವೃತ್ತಿಗೆ ರಾಜಿನಾಮೆಯನ್ನಿತ್ತರು.

ಬಡವರ ಬಂಧು

ರಂಗರಾಯರು ಶಿಕ್ಷಕರಾಗಿದ್ದಾಗಲೇ ಸ್ವಲ್ಪ ಮಟ್ಟಿಗೆ ಕಾನೂನಿನ ಪುಸ್ತಕಗಳನ್ನು ತಿರುವಿಹಾಕಿದ್ದರು. ದೀನ ದಲಿತರನ್ನು ಕಾನೂನಿನ ಬಲದಿಂದ ಮೇಲಕ್ಕೆ ತರಲು ಸಾಧ್ಯವಿದೆ ಎಂಬುದು ಅವರಿಗೆ ಸ್ಪಷ್ಟವಾಯಿತು. ಆದ್ದರಿಂದ ಅವರು ನ್ಯಾಯಶಾಸ್ತ್ರವನ್ನು ಅಭ್ಯಾಸ ಮಾಡಿದರು. ಅಚಲ ಪರಿಶ್ರಮದಿಂದ ಅವರು ವಕೀಲ ಪರೀಕ್ಷೆಯಲ್ಲಿ ಉತ್ತೀರ್ಣ ರಾದರು.

ಮಂಗಳೂರಿನ ಒಂದು ಬಾಡಿಗೆ ಹುಲ್ಲು ಚಾವಣಿಯಲ್ಲಿ ವಸತಿ ಹೂಡಿ ರಂಗರಾಯರು ವಕೀಲ ವೃತ್ತಿಯನ್ನು ಆರಂಭಿಸಿದರು.

ರಂಗರಾಯರು ಕೆಳಗಿನ ಜಾತಿಯವರು ಎನಿಸಿಕೊಂಡವರು ವಾಸಿಸುತ್ತಿದ್ದ ಕೇರಿಗಳಿಗೆ ಧಾವಿಸಿದರು. ಆದರೆ ಆ ಜನರು ಮೊದಮೊದಲು ರಂಗರಾಯರನ್ನು ಕಂಡಕೂಡಲೇ ಓಡಿ ಹೋಗಿ ಅಡಗಿಕೊಳ್ಳುತ್ತಿದ್ದರು; ಇವರು ಹೊಡೆಯಲು ಬಂದವರೆಂದು ಭಾವಿಸಿ ಅವರಲ್ಲಿ ಮಾತನಾಡುವುದಕ್ಕೆ ಹೆದರುತ್ತಿದ್ದರು. ನೂರಾರು ವರ್ಷಗಳಿಂದ ಅವರು ಕಂಡು ಉಂಡುದು ಜನರ ತುಚ್ಛೀಕಾರವನ್ನು, ಅನ್ಯಾಯವನ್ನು. ಪ್ರೀತಿ, ಕರುಣೆಗಳ ಗಂಧವನ್ನೇ ಅರಿತವರಲ್ಲ.

ಆದರೆ ರಂಗರಾಯರು ಅವರ ಬಂಧುಗಳಲ್ಲಿ ತಾನೂ ಒಬ್ಬನೆಂದು ಅವರಿಗೆ ಮನದಟ್ಟುಮಾಡಿಕೊಟ್ಟರು. ತಮ್ಮ ಪ್ರಾಮಾಣಿಕ ಸಹಾನುಭೂತಿಯಿಂದ ಅವರನ್ನು ತಮ್ಮೆಡೆಗೆ ಒಲಿಸಿಕೊಂಡರು. ಸಮಾಜದ ಇತರ ವ್ಯಕ್ತಿಗಳು ಅವರಿಗೆ ಏನೇನು ಕಿರುಕುಳ ಕೊಟ್ಟರೆಂದು ವಿಚಾರಿಸಿದರು. ರಂಗರಾಯರ ಮಮತೆಯ ಮಾತುಗಳಿಂದ ಅವರನ್ನು ತಮ್ಮ ಉದ್ಧಾರಕನೆಂದು ಭಾವಿಸಿದರು. ತಾವೂ ಒಳ್ಳೆಯ ಬಾಳುವೆ ನಡೆಸಬೇಕು ಎಂಬ ಕೆಚ್ಚು ಅವರಲ್ಲುದಯಿಸಿತು. ತಮ್ಮ ಕಷ್ಟಕೋಟಲೆಗಳನ್ನೆಲ್ಲಾ ಅವರು ರಂಗರಾಯರಲ್ಲಿ ಹೇಳಿಕೊಳ್ಳ ತೊಡಗಿದರು. ಇಷ್ಟಾಗಬೇಕಾದರೆ ರಂಗರಾಯರು ಪಟ್ಟ ಪಾಡು ಅಸಾಧಾರಣವಾದುದು.

ದೀನದಲಿತರಿಗೆ ಕೆಲವು ವ್ಯಕ್ತಿಗಳು ಮಾಡುತ್ತಿದ್ದ ಬಗೆ ಬಗೆಯ ಅನಾಚಾರಗಳು ರಂಗರಾಯರ ಕರುಳನ್ನೇ ಕತ್ತರಿಸಿದವು. ಅವರು ಅಂತಹ ಅನೇಕ ವ್ಯಕ್ತಿಗಳ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿದರು, ಅವರಿಗೆ ಶಿಕ್ಷೆ ಆಗಲು ಕಾರಣರಾದರು.

ಅಂತಹ ಪ್ರಕರಣಗಳಲ್ಲೊಂದು ಬಲು ಭೀಕರವಾಗಿತ್ತು.

ಕೆಳಗಿನ ಜಾತಿಯವರ ಒಬ್ಬ ಹುಡುಗಿಯನ್ನು ಮೇಲಿನ ಜಾತಿಯವನೊಬ್ಬ ಪ್ರೀತಿಸಿದ. ಅವಳ ಜಾತಿಯವರು ಅವಳನ್ನು ಚಾಟಿಯಿಂದ ಹೊಡೆದು ದೂರ ಓಡಿಸಲು ತೀರ್ಮಾನಿಸಿದರು. ಆ ಮೇಲಿನ ಜಾತಿಯವನು ಹುಡುಗಿಯ ಸಂಕಟದಲ್ಲಿ ಯಾವ ಸಹಾಯವನ್ನೂ ಮಾಡಲು ಮುಂದೆ ಬರಲಿಲ್ಲ. ಹುಡುಗಿಯ ಗೋಳೇ ಗೋಳು. ರಂಗರಾಯರು ಅವಳನ್ನು ಪ್ರೀತಿಸಿದವನು ಯಾರು ಎಂಬುದನ್ನು ಕಂಡುಹಿಡಿದರು. ಆ ಹುಡಿಗಿಯನ್ನು ಮದುವೆಯಾಗಬೇಕು ಅಥವಾ ಅವಳ ಜೀವನಕ್ಕೆ ಬೇಕಾದಷ್ಟು ಹಣ ಕೊಡಬೇಕೆಂದು ಅವರನ್ನು ಕೇಳಿದರು. ಅವನು ತನಗೆ ಆ ಹುಡುಗಿ ಗುರುತೇ ಇಲ್ಲ ಎಂದ; ರಂಗರಾಯರನ್ನು ಬಾಯಿಗೆ ಬಂದಂತೆ ಬೈದ.

ಅನ್ಯಾಯ ಮಾಡಿಯೂ ಅವನು ಸುಳ್ಳು ಹೇಳಿದುದನ್ನು ನೋಡಿ ರಂಗರಾಯರಿಗೆ ಸಹಿಸಲಾಗಲಿಲ್ಲ. ಅವರು ಆ ಅಬಲೆಯಿಂದ ಅವನ ಮೇಲೆ ದಾವೆ ಹೂಡಿಸಿದರು. ಅವಳ ಪರವಾಗಿ ತಾವೇ ವಾದಿಸಿದರು.

ರಂಗರಾಯರ ವಾದಕ್ಕೆ ಜಯ, ಆ ಸ್ತ್ರೀಗೆ ಜೀವನಾಂಶ ಲಭಿಸಿತು.

ಹೀಗೆ ಇನ್ನೊಂದು ಕಾನೂನು ಪ್ರಕರಣವೂ ನಡೆಯಿತು.

ಸವರ್ಣೀಯರು ವಾಸಿಸುವ ಪೇಟೆ, ಸಂತೆ, ಜಾತ್ರೆ ಮೊದಲಾದೆಡೆಗಳಿಗೆ ಕೊರಗರು ಗ್ರಾಮದ ಅಧಿಕಾರಿಯ ಅಪ್ಪಣೆ ಪಡೆಯದೆ ಬರಬಾರದು ಎಂಬ ಕಟ್ಟುನಿಟ್ಟಿತ್ತು. ಆದರೆ ಮೇಲು ವರ್ಗದವರ ಮನೆಗಳ ಬಳಿಗೆ ಜೀತದಾಳುಗಳಾಗಿ ಬರಲು ಆ ಕಟ್ಟುನಿಟ್ಟಿರಲಿಲ್ಲ. ಏನಾದರೂ ಕೆಲಸ ಕಾರ್ಯಗಳಿದ್ದರೆ ಅವರನ್ನು ಕರೆಸುತ್ತಿದ್ದರು. ಚೆನ್ನಾಗಿ ಕೆಲಸ ಮಾಡಿಸುತ್ತಿದ್ದರು. ಕೂಲಿ ಕೇಳಿದರೆ ಕೊಡದೇ, ಹೊಡೆದು ಬಡಿದು ಅಟ್ಟುತ್ತಿದ್ದರು.

ಒಮ್ಮೆ ರಂಗರಾಯರು ಕೊರಗರ ಕೇರಿಗೆ ಹೋಗಿದ್ದಾಗ ಕರುಳನ್ನು ಕತ್ತರಿಸುವಂಥ ದೃಶ್ಯವೊಂದನ್ನು ನೋಡಿದರು.

ಒಂದು ಗುಡಿಸಲಲ್ಲಿ ಗಂಡ ಹೆಂಡತಿ ಇಬ್ಬರೂ ಅರ್ಧ ಸ್ಮೃತಿಯ ಅವಸ್ಥೆಯಲ್ಲಿ ಬಿದ್ದುಕೊಂಡಿದ್ದಾರೆ. ಬೆತ್ತದ ಏಟಿನಿಂದ ಅವರ ಮೈಯಿಡೀ ನುಜ್ಜು ಗೊಜ್ಜಾಗಿದೆ.

ರಂಗರಾಯರು ಅವರ ಮನೆಯೊಳಗೆ ಹೊಕ್ಕರು. ಅವರಿಗೆ ಶುಶ್ರೂಷೆ ಮಾಡಿದರು. ಅವರನ್ನು ಕೈಹಿಡಿದು ತಮ್ಮ ಮನೆಗೇ ಕರೆತಂದರು. ವಿಚಾರಿಸಿದಾಗ ಸಮಾಜದ ಶ್ರೀಮಂತ ವ್ಯಕ್ತಿಯೊಬ್ಬ ಕಾರಣವಿಲ್ಲದೇ ಅವರನ್ನು ಹೊಡೆದ ಎಂಬುದು ತಿಳಿಯಿತು.

ರಂಗರಾಯರು ಆ ನಿಷ್ಪಾಪಿಗಳಿಗೆ ಹೊಡೆದವರ ಮೇಲೆ ಮೊಕದ್ದಮೆಗಳನ್ನು ಹೂಡಿದರು. ಅನ್ಯಾಯ ಮಾಡಿದವರಿಗೆ ಸರ್ಕಾರ ಕಠಿಣ ಶಿಕ್ಷೆಯನ್ನೇ ವಿಧಿಸಿತು.

ಕಾನೂನಷ್ಟೇ ಸಾಲದು

ಹೀಗೆ ರಂಗರಾಯರೇನೋ ಅನಾಥರಾದ ಮನುಷ್ಯ ಬಂಧುಗಳ ಪರವಾಗಿ ಹೋರಾಡಿದರು ನಿಜ. ಆದರೆ ಸಮಾಜ ದಲ್ಲಿ ತಾವೇ ತಾವೆಂದು ಮೆರೆಯುತ್ತಿದ್ದವರ ವೈರವನ್ನು ಎದು ರಿಸಬೇಕಾಯಿತು. ಬಡಜನರ ಕೈವಾರಿಯಾಗಿ ದುಡಿಯುತ್ತಿದ್ದ ಅವರು ಪ್ರತಿಫಲವಾಗಿ ಅವರಿಂದ ಕಿಲುಬು ಕಾಸನ್ನೂ ತೆಗೆದು ಕೊಳ್ಳುತ್ತಿರಲಿಲ್ಲ. ಅವರಿಗೆ ಸಿಕ್ಕಿದ ಅಮೂಲ್ಯ ಸಂಪತ್ತು ಎಂದರೆ ಅವರೆಲ್ಲರ ಪ್ರೀತಿ, ವಾತ್ಸಲ್ಯಗಳೇ.

ದೀನದಲಿತರನ್ನು ಬರೇ ಶೋಷಣೆಯಿಂದ ಪಾರು ಮಾಡಿದರೆ ಸಾಲದು; ಶಿಕ್ಷಣದಲ್ಲಿ ಸಂಪತ್ತಿನಲ್ಲಿ ಅವರನ್ನು ಮುಂದೆ ತರಬೇಕೆಂದು ರಂಗರಾಯರು ಹಗಲಿರುಳೂ ಪರಿತಪಿಸುತ್ತಿದ್ದರು. ಅದು ಅಗತ್ಯವೆಂಬ ಅಂಶ ಅವರ ಗಮನಕ್ಕೆ ಬಂದ ಸಂದರ್ಭ ಹೀಗಿತ್ತು:

ಕಳೆದ ಶತಮಾನದ ಉತ್ತರಾರ್ಧದಲ್ಲಿ ಸರ್ಕಾರವು ದೀನ ದಲಿತರಿಗಾಗಿ ಮಂಗಳೂರಿನಲ್ಲಿ ಒಂದು ಶಾಲೆಯನ್ನು ನಡೆಸುತ್ತಿತ್ತು. ಈ ಶಾಲೆಯಲ್ಲಿ ನಾಲ್ಕನೆಯ ದರ್ಜೆಯ ತನಕ ಕಲಿತು ಒಬ್ಬ ದಲಿತ ವರ್ಗದ ಹುಡುಗ ಉತ್ತೀರ್ಣನಾದ.

ಅವನನ್ನು ಯಾವುದಾದರೂ ಕೆಲಸಕ್ಕೆ ಸೇರುವಂತೆ ರಂಗ ರಾಯರು ಪ್ರೋತ್ಸಾಹಿಸಿದರು. ಅವರ ಪ್ರಯತ್ನದಿಂದಲೇ ಅವನಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಪೇದೆಯ ಕೆಲಸ ಸಿಕ್ಕಿತು.

ಆದರೆ ಅವನು ಕೆಲಸಕ್ಕೆ ಹಾಜರಾದ ದಿನವೇ ನ್ಯಾಯಾಲಯದಲ್ಲಿ ದೊಡ್ಡ ಗಲಾಟೆಯಾಯಿತು. ಅವನು ಮುಟ್ಟಿದ ಕಾಗದ ಪತ್ರಗಳನ್ನು ನಾವು ಮುಟ್ಟುವುದಿಲ್ಲ, ನಮಗೆ ಮೈಲಿಗೆಯಾಗುತ್ತದೆಂದು ನೌಕರರು ವಿರೋಧಿಸಿದರು.

ಅವರೆಲ್ಲಾ ಕೆಲಸಕ್ಕೆ ಹಾಜರಾಗುವಂತೆ ಮಾಡಬೇಕಿದ್ದರೆ ಆ ವ್ಯಕ್ತಿಯನ್ನು ಕೆಲಸದಿಂದ ತೆಗೆಯಬೇಕಾಯಿತು.

ಇದನ್ನು ನೋಡಿ ರಂಗರಾಯರ ಮನಸ್ಸು ಮರುಗಿತು. ಆಗ ನ್ಯಾಯಾಧಿಕಾರಿಗಳಾಗಿದ್ದವರು ಒಬ್ಬ ಆಂಗ್ಲರು. ಅವರು ಅಪಾರ ವ್ಯಥೆ ಪಟ್ಟರು. ರಂಗರಾಯರನ್ನು ಬಳಿಗೆ ಕರೆದರು. “ಒಬ್ಬ ದಲಿತನು ಒಂದು ಕೆಲಸಕ್ಕೆ ಸೇರಿದ ಮಾತ್ರಕ್ಕೆ ಅಜ್ಞಾನದ ಬಾವಿಯಲ್ಲಿ ಮುಳುಗಿರುವ ಅವನ ಜಾತಿಯೇ ಉದ್ಧಾರ ವಾಗುವುದಿಲ್ಲ. ಅವರೆಲ್ಲರಿಗೂ ಶಿಕ್ಷಣ ಸಿಗಬೇಕು. ಅಂದರೆ ಅವರು ನಿರ್ಭಯರಾಗಿ ಸ್ವತಂತ್ರರಾಗಿ ಬಾಳಬಲ್ಲರು” ಎಂದು ಒತ್ತಿ ಹೇಳಿದರು. ಸಮಾಜದ ಪ್ರಬಲ ವಿರೋಧದ ಎದುರು ಬರೇ ಕಾನೂನುಗಳು ಹೋರಾಡಲಾರವೆಂಬುದನ್ನು ಅವರಿಗೆ ಮನದಟ್ಟುಮಾಡಿಕೊಟ್ಟರು.

ರಂಗರಾಯರಿಗೆ ಈ ಮಾತಿನ ಸತ್ಯ ಅರಿವಾಯಿತು.

ರಂಗರಾಯರು ವಕೀಲವೃತ್ತಿಯನ್ನು ತೊರೆದರು. ಹಿಂದುಳಿದವರಿಗೆ ಶಿಕ್ಷಣ ನೀಡುವ ಮಹತ್ಕಾರ್ಯಕ್ಕೆ ರಂಗರಾಯರ ಜೀವಿತ ಸರ್ವಸ್ವವೂ ಮುಡಿಪಾಯಿತು.

ದಲಿತರ ಶಾಲೆ

ದೀನದಲಿತರು ಇತರರ ಶಾಲೆಗೆ ಹೋಗುವಂತಿರಲಿಲ್ಲ. ಆದುದರಿಂದ ರಂಗರಾಯರು ೧೮೯೨ ರಲ್ಲಿ ಮಂಗಳೂರಿನಲ್ಲಿ ಒಂದು ಶಾಲೆಯನ್ನು ಆರಂಭಿಸಿದರು.

ದೀನದಲಿತರ ಶಾಲೆಗೆ ಕಟ್ಟಡಗಳನ್ನು ಕೊಡಲು ಯಾರೂ ಒಪ್ಪಲಿಲ್ಲ. ಕೊನೆಗೆ ರಂಗರಾಯರು ತಮ್ಮ ಹಣವನ್ನೆಲ್ಲಾ ಖರ್ಚು ಮಾಡಿ ಮುಳಿಹುಲ್ಲಿನ ಚಾವಣಿಯ ಕಟ್ಟಡವನ್ನು ಪಡೆದರು.

ಅವರ ನಂಬಿಕೆ. ರಂಗರಾಯರು ಅವರಿಗೆ ವಿದ್ಯೆ ಕಲಿಯದೆ ಅವರು ಮುಂದೆ ಬರುವುದು ಸಾಧ್ಯವೇ ಇಲ್ಲ ಎಂಬುದನ್ನು ವಿವರಿಸಿದರು.

ರಂಗರಾಯರು ದೀನದಲಿತರ ಕೇರಿಕೇರಿಗಳಿಗೆ ಹೋದರು. ಪಾಪ, ತಾವು ವಿದ್ಯೆ ಕಲಿಯಬಾರದು ಎಂದೇ ಕೆಳಗಿನ ಜಾತಿಯವರು ಎನ್ನಿಸಿಕೊಂಡವರಿಗೆ ತಾವೂ ಉದ್ಧಾರ ವಾಗಬೇಕೆಂಬ ಛಲ ಮೂಡಿತು. ಅವರು ಶಾಲೆಗೆ ಬರಲಾರಂಭಿಸಿದರು.

ಆದರೆ ಶಾಲೆಗೆ ಧೈರ‍್ಯದಿಂದ ಕಲಿಯಲು ಬಂದ ವಿದ್ಯಾರ್ಥಿಗಳು ಆರೇ ಮಂದಿ ಮಾತ್ರ. ರಂಗರಾಯರು ಎದೆಗುಂದಲಿಲ್ಲ.

ಆದರೆ ಸುತ್ತಲಿನ ಜನರು ರಂಗರಾಯರ ಶಾಲೆ ಸುಗಮವಾಗಿ ನಡೆಯಲು ಬಿಡಲಿಲ್ಲ. ಶಾಲೆಗೆ ಬಂದು ಜಗಳ ವಾಡಿದರು, ಗಲಾಟೆ ಮಾಡಿದರು. ಶಾಲೆಯ ಚಾವಡಿಯ ಮೇಲೆ ಕಲ್ಲುಗಳನ್ನು ಎಸೆದರು. ವಿದ್ಯಾರ್ಥಿಗಳನ್ನು ಮುಳ್ಳು ಕೋಲುಗಳಿಂದ ಹೊಡೆದು ಹಿಂಸೆಗೊಳಿಸಿದರು. ಅವರ ತಂದೆ ತಾಯಿಗಳನ್ನು ಹೆದರಿಸಿದರು. ಪಾಪ, ಹುಡುಗರೂ ದೊಡ್ಡವರೂ ಹೆದರಿದರು.

ರಂಗರಾಯರು ಈ ದುರ್ಜನರ ನೆರೆಯೇ ಸಲ್ಲದೆಂದು ನಿಶ್ಚಿಯಿಸಿದರು. ಶಾಲೆಗೆ ಬೇರೆ ಸ್ಥಳವನ್ನು ನೀಡಬೇಕೆಂದು ಸರ್ಕಾರವನ್ನು ಪ್ರಾರ್ಥಿಸಿದರು. ಕೋರ್ಟು ಗುಡ್ಡದ ಬಳಿ ಸರ್ಕಾರೀ ವ್ಯವಸ್ಥೆಯೇನೋ ಲಭಿಸಿತು. ಅಲ್ಲೂ ಸುತ್ತ ಮುತ್ತಲಿದ್ದ ಕೆಲವು ಜನರು ಕೊಟ್ಟ ಪೀಡೆ ಅಷ್ಟಿಷ್ಟಲ್ಲ. ಅವರ ಉಪಟಳಗಳನ್ನೆಲ್ಲಾ ರಂಗರಾಯರು ಸಹನೆಯಿಂದಲೇ ಎದುರಿಸಿದರು. ಹೊಡೆತ ತಿಂದ ತಮ್ಮ ವಿದ್ಯಾರ್ಥಿಗಳಿಗೆ ಎಣ್ಣೆ ಹಚ್ಚಿ ಸಮಾಧಾನ ಹೇಳಿದರು. ಆದರೆ ಯಾರನ್ನೂ ಪ್ರತಿಭಟಿಸಲು ಹೋಗಲಿಲ್ಲ.

ಹೀಗೆ ದೀನೋದ್ಧಾರ ಕಾರ್ಯಕ್ಕೆ ರಂಗರಾಯರು ಧುಮುಕಿದ್ದುದರಿಂದ ಸಮಾಜ ಅವರ ಮೇಲೆ ಕೆರಳಿತು. ರಂಗರಾಯರನ್ನು ಹೊಲೆಜನರ ಬಂಧುಗಳೆಂದು ಪರಿಗಣಿಸಿ, ಅವರನ್ನು ಜಾತಿಯಿಂದ ಹೊರಗೆ ಹಾಕಿದರು. ಅದರಿಂದಾಗಿ ಬಂಧು ಬಾಂಧವರ ಮನೆಗಳಿಗೆ ಹೋಗುವಂತಿಲ್ಲ; ದೇವಾಲಯದ ಒಳಗೆ ಪ್ರವೇಶಿಸುವಂತಿಲ್ಲ ಅಷ್ಟೇ. ಅಲ್ಲ, ಅವರಿಗೆ ಕ್ಷೌರ ಮಾಡಲು ಕ್ಷೌರಿಕರು ಒಪ್ಪುತ್ತಿರಲಿಲ್ಲ; ದೋಣಿಯವನು ಅವರನ್ನು ನದಿ ದಾಟಿಸಲೊಲ್ಲ; ಮಡಿವಾಳನು ಅವರು ಉಟ್ಟ ವಸ್ತ್ರಗಳನ್ನು ಮುಟ್ಟಲೊಲ್ಲ. ಎಲ್ಲರ ದೃಷ್ಟಿಯಲ್ಲೂ ಅವರು ಜಾತಿಕೆಟ್ಟವರು. ಅವರು ರಸ್ತೆಯಲ್ಲಿ ಹೋಗುವಾಗ ದೊಡ್ಡವರು ಮಕ್ಕಳಿಗೆ ಹೇಳಿಕೊಟ್ಟು ಹಾಸ್ಯಮಾಡಿಸುತ್ತಿದ್ದರು; ಕಲ್ಲು ಹೊಡೆಸುತ್ತಿದ್ದರು.

ಇಂಥ ಕಷ್ಟನಿಷ್ಠುರಗಳನ್ನೂ ರಂಗರಾಯರು ಸಹನೆಯಿಂದ ಎದುರಿಸಿದರು. ಆದರೆ ಅವರು ನಿರ್ಭಯದಿಂದ ಎಲ್ಲಿ ಬೇಕಾದರೂ ಹೋಗಿಬರುತ್ತಿದ್ದರು. ಕಾರಣ ಅವರಿಗೆ ಯಾವ ವ್ಯಕ್ತಿಯ ಮೇಲೂ ದ್ವೇಷವಿರಲಿಲ್ಲ.

ರಂಗರಾಯರ ಪರಿಶ್ರಮದ ಫಲವಾಗಿ ಕೋರ್ಟು ಗುಡ್ಡದಲ್ಲಿ ಪ್ರೌಢಶಾಲೆಯೂ ತಲೆಯೆತ್ತಿತು. ಅದಲ್ಲದೆ ಸರ್ಕಾರ ಅವರಿಗೆ ಅನೇಕ ಕಡೆಗಳಲ್ಲಿ ಖಾಲಿ ಸ್ಥಳಗಳನ್ನು ಕೊಟ್ಟಿತು. ಆಗ ರಂಗರಾಯರು ದೀನದಲಿತರ ಸೇವೆಗಾಗಿ ‘ಡಿಪ್ರೆಸ್ಡ್ ಕ್ಲಾಸ್ ಮಿಷನ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅದಕ್ಕೆ ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲವು ಮಂದಿ ಮಿತ್ರರು ಸಹಕರಿಸಿದರು. ಅವರೆಲ್ಲರ ಪ್ರಯತ್ನವನ್ನು ಒಗ್ಗೂಡಿಸಿ, ರಂಗರಾಯರು ಆ ಖಾಲಿ ಸ್ಥಳಗಳಲ್ಲಿ ದೀನದಲಿತರಿಗಾಗಿ ಶಾಲೆಗಳನ್ನು ಆರಂಭಿಸಿದರು, ಆಶ್ರಮಗಳನ್ನು ತೆರೆದರು; ಉಚಿತ ವಿದ್ಯಾರ್ಥಿ ನಿಲಯಗಳನ್ನು ಕಟ್ಟಿಸಿದರು.

ರಂಗರಾಯರ ಶಾಲೆಗಳಲ್ಲಿ ಅಧ್ಯಾಪಕರಾಗಲು ಇತರ ಯಾವ ಜಾತಿಯವರೂ ಒಪ್ಪಲಿಲ್ಲ. ಆಗ ಅವರು ಬೇರೆ ಶಾಲೆಗಳಲ್ಲಿ ಕಲಿತಿದ್ದ ದೀನದಲಿತ ಯುವಕರನ್ನೇ ಆರಿಸಿ ಕೊಂಡರು. ಅವರಿಗೆ ತರಬೇತಿ ಇತ್ತು ಅಧ್ಯಾಪಕರನ್ನಾಗಿ ನೇಮಿಸಿದರು. ಈ ಕ್ರಮದಿಂದ ದಲಿತ ಜನರಲ್ಲಿ ವಿದ್ಯಾಭ್ಯಾಸ ವನ್ನು ಪ್ರಸಾರ ಮಾಡುವ ಕ್ರಮ ಸುಗಮವಾಯಿತು.

ರಂಗರಾಯರು ಕೆಳಗಿನ ಜಾತಿಯವರು ಎನ್ನಿಸಿಕೊಂಡ ವರಿಗೆ ಆತ್ಮಗೌರವ ಕಲಿಸಲು ಶ್ರಮಿಸಿದರು. ಎಂಜಲೆಲೆ ಅನ್ನ ವನ್ನು ತಿನ್ನದಂತೆ ಅವರಿಗೆ ಹೇಳಿಕೊಟ್ಟರು; ಹೆಂಡ ಕುಡಿಯುವು ದನ್ನು ಬಿಡುವಂತೆ ಮನವೊಲಿಸಿದರು; ಮೂಢ ನಂಬಿಕೆಗಳನ್ನು ಬಿಡುವಂತೆ ಬುದ್ಧಿ ಹೇಳಿದರು.

ರಂಗರಾಯರು ಸ್ಥಾಪಿಸಿದ ಶಾಲೆಗಳಲ್ಲಿ ಬರೇ ಓದು ಬರಹ, ಲೆಕ್ಕಗಳನ್ನು ಮಾತ್ರ ಕಲಿಸುತ್ತಿರಲಿಲ್ಲ. ಗಾಂಧೀಜಿಯವರ ಮೂಲ ಶಿಕ್ಷಣ ತತ್ವವು ಆಗಲೇ ರಂಗರಾಯರಿಗೆ ಮನವರಿಕೆ ಯಾಗಿತ್ತು. ತಮ್ಮ ವಿದ್ಯಾರ್ಥಿಗಳು ಸ್ವಾವಲಂಬನೆಯಿಂದ ಜೀವನ ನಡೆಸಬೇಕು ಎಂದು ಹಠತೊಟ್ಟರು ರಂಗರಾಯರು. ಅದಕ್ಕಾಗಿ ಅವರು ಸ್ಥಾಪಿಸಿದ ಶಾಲೆಗಳಲ್ಲಿ ಕೈಮಗ್ಗ, ಕಸೂತಿ, ಮರಗೆಲಸ ಮುಂತಾದವುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ ನೀಡುವ ವ್ಯವಸ್ಥೆ ಮಾಡಿದರು.

ಆದರೆ ರಂಗರಾಯರ ಹೃದಯದಲ್ಲಿ ನೆಲೆಸಿದ್ದ ಕರುಣೆಯ ಸೆಲೆಯನ್ನು ಕೆಲವರು ಕಂಡುಕೊಳ್ಳಲಿಲ್ಲ. ಅವರ ಸಹಾನುಭೂತಿಯನ್ನು ಅರ್ಥಮಾಡಿಕೊಳ್ಳಲಿಲ್ಲ. ಜಾತೀಯತೆಯ ಸೊಕ್ಕನ್ನೇ ಪದರ್ಶನಮಾಡಿದರು.

ಭಾರತದ ಮೇಲೆ ಅಪಾರ ಅಭಿಮಾನವಿದ್ದ ರೆವರೆಂಡ್ ಸಿ.ಎಫ್.ಆಂಡ್ರೂಸರು ಮಂಗಳೂರಿಗೆ ಬಂದಿದ್ದರು. ರಂಗ ರಾಯರು ಅವರಿಗಾಗಿ ಔತಣವನ್ನು ಏರ್ಪಡಿಸಿದ್ದರು.

ಈ ಔತಣಕೂಟಕ್ಕೆ ಮಂಗಳೂರಿನ ಪ್ರಮುಖ ಮಹನೀಯರೊಬ್ಬರು ಹೋಗಿದ್ದರು. ಜಾತಿ ಬಹಿಷ್ಕಾರಕ್ಕೆ ಒಳಗಾಗಿದ್ದ ರಂಗರಾಯರೊಂದಿಗೆ ಸಹಭೋಜನ ಮಾಡಿದರು. ಈ ಕಾರಣಕ್ಕಾಗಿ ಅವರಿಗೂ ಅವರ ಜಾತಿಯವರು ಬಹಿಷ್ಕಾರ ವಿಧಿಸಿದರು. ಅದರಿಂದ ಆ ಮಹನೀಯರು ತುಂಬಾ ನೊಂದರು.

ಆಗ ರಂಗರಾಯರು ಈ ಜಾತಿ ಬಹಿಷ್ಕಾರದ ನೋವಿನಿಂದ ಪಾರುಮಾಡಲು ನ್ಯಾಯಾಲಯದ ಮೊರೆ ಹೋಗಲು ಪ್ರೇರೇಪಿಸಿದರು. ಅವರು ನ್ಯಾಯಾಲಯಕ್ಕೆ ಹೋದರು.

ಅವರ ಮೇಲೆ ಸಮಾಜ ವಿಧಿಸಿದ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳಲು ನ್ಯಾಯಾಲಯ ಆಜ್ಞಾಪಿಸಿತು.

ಕೊಡುಗೈ ದಾನಿಗಳು

ದೀನ ಜನರ ಉದ್ಧಾರಕ್ಕೆ ಇಳಿದ ರಂಗರಾಯರು ಉಚ್ಚ ವರ್ಗದವರ ವಿರೋಧ ಕಟ್ಟಿಕೊಳ್ಳಲು ಬಯಸಲಿಲ್ಲ. ಅವರೊಂದಿಗೂ ಪ್ರೀತಿಯಿಂದ ಮಾತನಾಡಿದರು. ದೀನ ಜನರ ಮೇಲೆ ಕರುಣೆ ತೋರಿ ಎಂದು ಅವರ ಮನಸ್ಸನ್ನು ಒಲಿಸಲು ಪ್ರಯತ್ನಿಸಿದರು.

ಆದರೆ ಶಾಲೆಗಳನ್ನು ಆರಂಭಿಸಿದ ಸಮಯದಲ್ಲಿ ರಂಗ ರಾಯರು ಎದುರಿಸಿದ ಸಮಸ್ಯೆಗಳು ಅಷ್ಟಿಷ್ಟಲ್ಲ.

ದೀನದಲಿತರಿಗೆ ಅವಶ್ಯಕವಾದ ಪುಸ್ತಕಗಳನ್ನು ಕೊಳ್ಳ ಬೇಕು, ಅವರಿಗೆ ಊಟೋಪಚಾರಗಳನ್ನು ನೀಡಬೇಕು. ಇವಕ್ಕೆಲ್ಲಾ ಕೈಯಲ್ಲಿ ಹಣವಿರಲಿಲ್ಲ. ಕೆಲವು ಸಲವಂತೂ ವಿದ್ಯಾರ್ಥಿಗಳು ಉಪವಾಸವೇ ಇರಬೇಕಾದ ಪರಿಸ್ಥಿತಿಯೂ ಒದಗಿತು. ರಂಗರಾಯರು ಎದೆಗುಂದಲಿಲ್ಲ.

ಅವರು ಬಡವರ ಮೇಲೆ ಎಷ್ಟು ಅನುಕಂಪ ವುಳ್ಳವರಾಗಿದ್ದರೋ ದೇವರ ಮೇಲೆ ಅಷ್ಟೇ ಭಕ್ತಿ ಇದ್ದವರೂ ಆಗಿದ್ದರು. ಉಪವಾಸವೇ ಗತಿಯಾದ ದಿನಗಳಲ್ಲಿ ಅವರು ಮುಗ್ಧರಾದ ವಿದ್ಯಾರ್ಥಿಗಳೊಂದಿಗೆ ‘ಪರಮಾತ್ಮನಲ್ಲಿ ದೃಢವಾದ ಭಕ್ತಿಯನ್ನಿಡಿ ಅವನು ನಮ್ಮನ್ನು ಕೈಬಿಡುವುದಿಲ್ಲ’ ಎಂದು ಬೋಧಿಸುತ್ತಿದ್ದರು.

ರಂಗರಾಯರು ಕೈಗೊಂಡ ಸಮಾಜ ಸುಧಾರಣೆಯ ಕೆಲಸಕ್ಕೆ ಊರವರು ತಾವಾಗಿ ಮುಂದೆ ಬಂದು ಸಹಾಯ ಮಾಡಲಿಲ್ಲ. ಅವರೂ ಬೇಡಲಿಲ್ಲ. ಮುಂಬೈ, ಮದರಾಸು, ಕಲ್ಕತ್ತ ಮೊದಲಾದ ಪರ ಊರುಗಳಲ್ಲಿ ವಾಸಿಸುತ್ತಿದ್ದ ಸಹೃದಯಿಗಳಾದ ಮಹನೀಯರ ವಿಳಾಸಗಳನ್ನು ಸಂಗ್ರಹಿಸಿ ದರು. ತಮ್ಮ ಸಿದ್ಧಿ ಸಾಧನೆಗಳನ್ನೆಲ್ಲಾ ವಿವರಿಸಿ ಒಂದು ಪತ್ರದಲ್ಲಿ ಬರೆದರು; ಸಾಧ್ಯವಿರುವಷ್ಟು ಸಹಾಯ ನೀಡುವಂತೆ ಯಾಚಿಸಿ ಅವರಿಗೆ ಕಳುಹಿಸಿದರು.

ಹೀಗೆ ಬರೆದ ಪತ್ರಗಳನ್ನು ರಂಗರಾಯರು ಕೈಯಲ್ಲಿ ಹಿಡಿದು ತಮ್ಮ ಶಿಷ್ಯರೊಂದಿಗೆ ಮೊಣಕಾಲೂರಿ ಕೂಡುತ್ತಿದ್ದರು. “ಇದು ನಮ್ಮ ಅನ್ನದೇವರ ಆಗಮನಕ್ಕಾಗಿ ಬರೆಯುತ್ತಿರುವ ಪತ್ರ. ಇದಕ್ಕೆ ಯಶಸ್ಸು ಸಿಗುವಂತೆ ದೇವರಲ್ಲಿ ಪ್ರಾರ್ಥಿಸಿರಿ” ಎನ್ನುತ್ತಿದ್ದರು. ಪ್ರಾರ್ಥನೆ ನಡೆಯುತ್ತಿತ್ತು. ಅನಂತರ ಪತ್ರವನ್ನು ಟಪಾಲಿಗೆ ಹಾಕುತ್ತಿದ್ದರು.

ರಂಗರಾಯರು ಈ ಪದ್ಧತಿ ಆರಂಭಿಸಿದ ಮೇಲೆ ಹಣದ ತಾಪತ್ರಯ ಕಡಿಮೆಯಾಗತೊಡಗಿತು. ಇಂದಿಗೆ ಏನು ಮಾಡಲಿ ಎಂದು ಚಿಂತಿಸುವಷ್ಟರಲ್ಲಿ ಹಣ ಬಂದೇ ಬರುತ್ತಿತ್ತು. ದೂರದ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಕಾರ್ನಾಡು ಸದಾಶಿವರಾವ್, ಬೆನಗಲ್ ಶಿವರಾಯರಂತಹ ಅನೇಕ ಆದ್ಯ ಮಹನೀಯರು ಹಣಗಳನ್ನು ಕಳುಹಿಸುತ್ತಿದ್ದರು; ಇತರ ಅನುಕೂಲವನ್ನೂ ಮಾಡಿಕೊಡುತ್ತಿದ್ದರು. ಅನೇಕ ವ್ಯಾಪಾರ ಸಂಸ್ಥೆಗಳೂ ಸಹಾಯವನ್ನಿತ್ತವು.

ರಂಗರಾಯರ ಸೇವಾಕಾಂಕ್ಷೆ ಭಾರತೀಯ ಮತ್ತು ಆಂಗ್ಲ ಉಚ್ಚ ಅಧಿಕಾರಿಗಳನ್ನೂ ಮೆಚ್ಚಿಸಿತು. ಅಂಥವರು ಅನೇಕರು ರಂಗರಾಯರ ವಿದ್ಯಾಸಂಸ್ಥೆಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ ಹಣವನ್ನು ಕಳುಹಿಸಿದರು. ದೂರ ದೇಶಗಳಿಂದಲೂ ಅವರಿಗೆ ಚೆನ್ನಾಗಿ ಸಹಾಯ ಬಂದೊದಗಿತು. ನಮ್ಮ ದೇಶದ ಮತ್ತು ವಿದೇಶಗಳ ಬರಹಗಾರರು ಪ್ರಕಾಶಕರು ಕಳುಹಿಸಿಕೊಟ್ಟ ಪುಸ್ತಕಗಳನ್ನು ಒಟ್ಟುಗೂಡಿಸಿ ರಂಗರಾಯರು ಗ್ರಂಥಾಲಯವನ್ನು ಸ್ಥಾಪಿಸಿದರು. ಹಿರಿಯರೊಬ್ಬರು ಕೊಟ್ಟ ದತ್ತಿಯಿಂದ ಅನಾಥಾಲಯ ಮತ್ತು ವಸತಿಗೃಹವನ್ನು ನಿರ್ಮಿಸಿದರು.

ಆಗ ಅಸ್ಪೃಶ್ಯರೆನಿಸಿದ ಈ ದೀನದಲಿತರ ಮನೆಗಳು ಇದ್ದುದು ಕಾಡಿನೊಳಗೆ. ಅವರಿಗೆ ಹೊಲಗದ್ದೆಗಳಿರಲಿಲ್ಲ. ಕಾಡಿನಲ್ಲಿರುವ ಕಂದಮೂಲಗಳನ್ನು ಅವರು ಅಗೆದು ತಿನ್ನುತ್ತಿದ್ದರು.

ಈ ಶೋಚನೀಯ ಪರಿಸ್ಥಿತಿಯನ್ನು ಕಣ್ಣಾರೆ ಕಂಡರು ರಂಗರಾಯರು. ಅವರೂ ಹಳ್ಳಿಗಳಲ್ಲಿ ಸ್ವತಂತ್ರರಾಗಿ ಬಾಳುವಂತೆ ಮಾಡಬೇಕೆಂದು ವಜ್ರಸಂಕಲ್ಪ ಮಾಡಿದರು. ಸರ್ಕಾರದ ಕಣ್ಣು ತೆರೆಸಬೇಕೆಂದೂ ನಿಶ್ಚಯಿಸಿದರು.

ರಂಗರಾಯರ ಮನವಿಗಳು ಒಂದರ ಹಿಂದೊಂದ ರಂತೆ ಬಂದವು. ಕಲ್ಲಿನಂತೆ ತೆಪ್ಪಗೆ ಕುಳಿತಿದ್ದ ಸರ್ಕಾರವನ್ನು ನಡುಗಿಸಿದರು. ಅವರ ಕೋರಿಕೆಯನ್ನು ಈಡೇರಿಸಿದರು. ಅಂತೂ ಸರ್ಕಾರ ಒಪ್ಪಿಕೊಂಡಿತು. ಕಾಡುಗಳಲ್ಲಿದ್ದವರು ನಾಡಿಗೆ ಬಂದರು.

ವಿಧವೆಯರ ಸಂಕಟ

ಕುದ್ಮುಲ್ ರಂಗರಾಯರ ಮನಸ್ಸನ್ನು ಇನ್ನೊಂದು ಕಹಿ ಘಟನೆ ಕೊರೆಯುತ್ತಿತ್ತು.

ಹಿಂದುಸಮಾಜದಲ್ಲಿ ಹೆಣ್ಣು ಆಡುವ ಹುಡುಗಿಯಾಗಿ ದ್ದಾಗಲೇ ಮದುವೆ ಮಾಡಬೇಕಾಗಿದ್ದ ಕಾಲ ಅದು. ಅವಳ ವಯಸ್ಸು ಏಳು ದಾಟಿದ ಮೇಲೂ ಮದುವೆಯಾಗದಿದ್ದರೆ ಅವಳಿಗೂ ಅವಳ ಮನೆಯವರಿಗೂ ಚಿತ್ರಹಿಂಸೆ.

ಮದುವೆಯಾದ ಮೇಲೂ ಹೆಣ್ಣಿನ ಕಷ್ಟಗಳು ಮುಗಿಯಲಿಲ್ಲ. ಅವಳಿಗೆ ಗಂಡ ಸತ್ತರೆ ಸಮಾಜ ‘ವಿಧವೆ’ ಎಂಬ ಪಟ್ಟ ಕಟ್ಟುತ್ತಿತ್ತು. ಆಮೇಲೆ ವಿಧವೆ ಹೆಂಗಸಿನ ತಲೆಯ ಕೂದಲನ್ನು ಕತ್ತರಿಸಿ ವಿರೂಪಗೊಳಿಸುತ್ತಿದ್ದರು. ಸಮಾಜದ ಶುಭಕಾರ್ಯಗಳಿಗೆಲ್ಲ ಅವಳು ಬರಲಾಗದು. ಹೆಂಡತಿ ತೀರಿ ಹೋದ ಗಂಡು ಮರಳಿ ಮದುವೆಯಾಗಬಹುದು. ಆದರೆ ಕಣ್ಣಿಲ್ಲದ ಸಮಾಜದಲ್ಲಿ ಗಂಡ ಸತ್ತ ಹೆಣ್ಣಿಗೆ ಮದುವೆಯಾಗುವ ಹಕ್ಕೂ ಇರಲಿಲ್ಲ. ಕಣ್ಣೀರಿನಲ್ಲಿ ಕೊರಗಿ ಆಕೆ ಸಾಯಬೇಕು ಅಷ್ಟೆ.

ಗಂಡ ಸತ್ತಾಗ ಹೆಂಡತಿಯೂ ಅವನ ಚಿತೆಯಲ್ಲಿ ಬೀಳುವ ಪದ್ಧತಿ ಕೆಲವರಲ್ಲಿತ್ತು. ಸುಧಾರಕರು ಈ ಪದ್ಧತಿಯ ವಿರುದ್ಧ ಸಮರ ಹೂಡಿದರು; ಬ್ರಿಟಿಷ್ ಸರ್ಕಾರವೂ ನಿಷೇಧ ಹಾಕಿತು.

ಒಂದೆಡೆ ಹದಿವಯಸ್ಸಿನ ಒಬ್ಬ ಬಾಲಕಿಯ ಗಂಡ ಸತ್ತಿದ್ದಾನೆ. ಗಂಡನೆಂದರೇನು, ಪ್ರಪಂಚವೆಂದರೇನು ಎಂದೇ ತಿಳಿಯದ ಆ ಮುಗ್ಧೆಯನ್ನು ಕೆಲವರು ನೆಲಕ್ಕೆ ಒತ್ತಿ ಹಿಡಿದಿ ದ್ದಾರೆ. ಒಬ್ಬನು ಅವಳ ತಲೆಯ ಕೂದಲನ್ನು ಕತ್ತರಿಸುತ್ತಿದ್ದಾನೆ.

ಎಷ್ಟು ಸುಂದರವಾದ ತಲೆಗೂದಲು! ಅವಳು ಪ್ರೀತಿ ಯಿಂದ ಎಣ್ಣೆ ಸವರಿ ಅದನ್ನು ಬೆಳೆಸಿದ್ದಳು. ಅವಳು ಚೀರಿ ಚೀರಿ ಅಳುತ್ತಿದ್ದಾಳೆ.

ರಂಗರಾಯರು ಈ ದೃಶ್ಯವನ್ನು ನೋಡಿದರು. ಅವರ ಕರುಳು ವೇದನೆಯಿಂದ ಮುರುಟಿತು. ಬಾಲ್ಯವಿವಾಹವನ್ನು ವಿರೋಧಿಸಬೇಕು, ವಿಧವೆಯರಿಗೆ ಆಗುವ ಕ್ರೂರ ಅನ್ಯಾಯ ವನ್ನು ತಡೆಗಟ್ಟಬೇಕು ಎಂದು ದೃಢ ನಿಶ್ಚಯ ಮಾಡಿದರು.

ರಂಗರಾಯರ ಸಂಕಲ್ಪ ಕಾರ್ಯರೂಪಕ್ಕೂ ಬಂದಿತು. ಅವರ ಹತ್ತಾರು ಅಭಿಮಾನಿಗಳಿಂದ ಧನಸಂಗ್ರಹ ಮಾಡಿದರು. ಅನಾಥರಾದ ಮಹಿಳೆಯರಿಗೆ ಮತ್ತು ವಿಧವೆಯರಿಗಾಗಿ ಒಂದು ಆಶ್ರಮವನ್ನು ಕಟ್ಟಿಸಿದರು. ಅಂಥವರನ್ನೆಲ್ಲಾ ಕರೆತಂದು ಆಶ್ರಮಕ್ಕೆ ಸೇರಿಸಿದರು.

ವಿಧವೆಯರಂತೆಯೇ ಸಮಸ್ಯೆಯ ಇನ್ನೊಂದು ಅಗ್ನಿಕುಂಡದಲ್ಲಿ ಬೇಯುತ್ತಿದ್ದವರು ದೇವದಾಸಿಯರು. ಅವರು ಮದುವೆಯಾಗಬಾರದು, ವೇಶ್ಯೆಯರಾಗಿಯೇ ಬಾಳಬೇಕು ಎನ್ನುತ್ತಿತ್ತು ಸಮಾಜ. ಆದರೆ ರಂಗರಾಯರು ಅವರನ್ನೂ ಆಶ್ರಮಕ್ಕೆ ಕರೆದುತಂದರು. ಮರ್ಯಾದೆಯಿಂದ ಬಾಳಲು ಕಲ್ಪಿಸಿಕೊಟ್ಟರು. ಅಷ್ಟೇ ಅಲ್ಲ ವಿಧವೆಯರನ್ನು, ದೇವದಾಸಿ ಯರನ್ನು ವಿವಾಹ ವಾಗಿ ಅವರನ್ನು ಉದ್ಧರಿಸಬೇಕು, ಕಣ್ಣೀರಿನ ಕಡಲಿನಿಂದ ಅವರನ್ನು ಪಾರುಮಾಡಬೇಕು ಎಂದು ಯುವಕರಿಗೆ ಕರೆಯಿತ್ತರು.

ಅವರ ಕರೆಯನ್ನು ಆಲಿಸಿ ಬಂದ ಸಮಾಜಸೇವಕರು ಅನೇಕರು.

ಆರ್ಯ ಸಮಾಜ, ಬ್ರಹ್ಮ ಸಮಾಜಗಳು ಒಂದಾಗಿ ಹಾಕಿದ ಚಪ್ಪರ. ಅದರ ಕೆಳಗೆ ರಂಗರಾಯರು ಅನೇಕ ವಿಧವೆಯರಿಗೆ, ದೇವದಾಸಿಯರಿಗೆ ವಿವಾಹ ಮಾಡಿದರು. ಅವರ ಬದುಕಿಗೆ ನವ ಚೈತನ್ಯವಿತ್ತು, ಆಸರೆಯಾದರು.

ರಂಗರಾಯರು ಈ ಬಗೆಯ ವಿವಾಹಕ್ಕಾಗಿ ಪ್ರಯತ್ನ ಮಾಡುತ್ತಿದ್ದಾಗ ಒಬ್ಬ ಮುಖಂಡರು ಹೇಳಿದರಂತೆ: “ಇವರಿಗೆ ಯಾರ ಯಾರ ಮಕ್ಕಳ ಮದುವೆ ಚಿಂತೆ ಏಕೆ? ತಮ್ಮ ಮಗಳನ್ನೇ ಬೇರೆ ಜಾತಿಯವನಿಗೆ ಕೊಟ್ಟು ಮದುವೆ ಮಾಡ ಬಾರದೇ?’ ಎಂದು. ಆ ಕುಹಕನುಡಿ ರಂಗರಾಯರ ಕಿವಿಗೆ ಬಿತ್ತು.

ತಮ್ಮ ಮಗಳನ್ನು ಬೇರೆ ಜಾತಿಯ ಹುಡುಗನಿಗೆ ಕೊಟ್ಟು ಮದುವೆ ಮಾಡಿಯೇ ಮಾಡಿದರು. ತಮ್ಮ ಎರಡನೆಯ ಮಗಳಾದ ರಾಧಮ್ಮನನ್ನು ಅಸ್ಪೃಶ್ಯ ಪಂಗಡಕ್ಕೆ ಸೇರಿದವ ನೊಬ್ಬನಿಗೆ ಮದುವೆ ಮಾಡಿಕೊಟ್ಟರು.

ನಿರಂಹಕಾರದ ಮೂರ್ತಿ

ಸಮಾಜದಲ್ಲಿ ತುಳಿಸಿಕೊಳ್ಳುತ್ತಿದ್ದವರಿಗಾಗಿ ರಂಗ ರಾಯರು ಅನೇಕ ಸಂಸ್ಥೆಗಳನ್ನೂ ಶಾಲೆಗಳನ್ನೂ ಸ್ಥಾಪಿಸಿದರು. ಬಹು ಕಷ್ಟದಿಂದ ಅವನ್ನು ನಡೆಸಿದರು. ಆದರೆ ಒಂದಕ್ಕೂ ತಮ್ಮ ಹೆಸರನ್ನು ಇಡಲಿಲ್ಲ. ಇತರರು ಸೂಚಿಸಿದಾಗಲೂ ಒಪ್ಪಲಿಲ್ಲ.

ಅಸ್ಪೃಶ್ಯರೆನಿಸಿದ ಮಕ್ಕಳನ್ನು ರಂಗರಾಯರು ತಾವೇ ಶಾಲೆಗೆ ಕರೆತರುತ್ತಿದ್ದರು; ಸ್ನಾನ ಮಾಡಿಸುತ್ತಿದ್ದರು; ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ದೀನದಲಿತರ ಸೇವಾ ಸಂಘ

ದೇಹದ ಹಿತಕ್ಕಾಗಿ ನಡೆಯುವ ಕೆಲಸಗಳಲ್ಲೆಲ್ಲಾ ಹಿಂದು, ಮುಸ್ಲಿಮ್, ಕ್ರೈಸ್ತ ಎಂಬ ವ್ಯತ್ಯಾಸವಿಲ್ಲದೆ ಎಲ್ಲರಿಂದ ಒಟ್ಟಾಗಿ ನಡೆಯಬೇಕೆಂದು ರಂಗರಾಯರು ತಿಳಿದಿದ್ದರು. ಅವರು ಸ್ಥಾಪಿಸಿದ ದೀನದಲಿತ ಜನರ ಸೇವಾ ಸಂಘದಲ್ಲಿ ಈ ಮೂರು ಮತಗಳ ಮುಖ್ಯಸ್ಥರೂ ಸದಸ್ಯರಾಗಿದ್ದರು. ವಿಶೇಷ ಸಂದರ್ಭದಲ್ಲಿ ಮೆರವಣಿಗೆ ಹೋಗುತ್ತಿದ್ದಾಗ ಅವರು ಹಿಡಿಯುತ್ತಿದ್ದ ಧ್ವಜದ ತತ್ವವೂ ಅದೇ ಆಗಿತ್ತು. ಒಂದು ಎತ್ತರದ ಮಂದಿರ ಅದರ ಹೊಸ್ತಿಲಲ್ಲಿ ಕುಳಿತ ಈ ಮೂರು ಮತಗಳ ಮೂವರು ವ್ಯಕ್ತಿಗಳು. ಅದರ ಬದಿಯಲ್ಲಿದ್ದ ಒಂದು ಕೆಸರಿನ ಹಳ್ಳದಲ್ಲಿ ಒಂದು ಹಂದಿ ಹೊರಳಾಡುತ್ತಿತ್ತು. ಕೆಸರಿನಲ್ಲಿ ಒಬ್ಬ ಬಡವನೂ ಕುಳಿತಿದ್ದ ದೇಶಮಾತೆಯು ಅವನನ್ನು ಮೇಲಕ್ಕೆ ಎತ್ತುತ್ತಿದ್ದಳು.

ಧ್ವಜದ ಮೇಲು ಭಾಗದಲ್ಲಿ ಒಂದು ವಾಕ್ಯ: ‘ದೀನೋದ್ಧರಣಂ ದೇಶೋದ್ಧರಣಂ’- ದೀನಜನೋದ್ಧಾರವೇ ನಿಜವಾದ ದೇಶೋದ್ಧಾರ.

ವಿಶೇಷ ಸಂದರ್ಭಗಳಲ್ಲಿ ಶಾಲಾ ಮಕ್ಕಳಿಗೆ ತಿಂಡಿ ತಿನಿಸು ಗಳನ್ನು ಹಂಚುವುದು, ಹಾಜರಿ ತಪ್ಪಿಸದೆ ಶಾಲೆಗೆ ಬಂದ ಮಕ್ಕಳಿಗೆ ಇನಾಮು ಕೊಡುವುದು ರಂಗರಾಯರ ಹಿಗ್ಗಿನ ಕೆಲಸಗಳಾಗಿದ್ದವು.

ಹಿಂದಿನಿಂದಲೇ ಒರಟು ಭಾಷೆಯನ್ನು ಮಾತನಾಡಿ ಅಭ್ಯಾಸವಾಗಿತ್ತು ಶಾಲೆಗೆ ಬರುತ್ತಿದ್ದ ಮಕ್ಕಳಿಗೆ. ಅವರ ಬಾಯಿಂದ ಅಕ್ಷರಗಳನ್ನು ಹೊರಡಿಸುವುದು ಸುಲಭವಾಗಿ ರಲಿಲ್ಲ. ಆದರೆ ಕೆಲವು ಬಾರಿ ರಂಗರಾಯರೇ ಸ್ವತಃ ಅವರಿಗೆ ಸಹನೆಯಿಂದ ಕಲಿಸಿದರು. ಅವರ ಉಚ್ಛಾರಗಳನ್ನು ತಿದ್ದಿದರು.

ಅವರಲ್ಲಿ ಮೂಲಭೂತವಾಗಿದ್ದುದು ಅಪಾರವಾದ ಕರುಣೆ.

ರಂಗರಾಯರ ಪ್ರೇಮ, ಆದರ, ಹಿತಬೋಧಗಳ ಫಲವಾಗಿ ದೀನದಲಿತರಲ್ಲಿ ತಾವೂ ಮುಂದೆ ಬರಬೇಕೆಂಬ ಹಂಬಲ ಚಿಗುರಿತು. ರಂಗರಾಯರು ಅವರ ಮನೆಗಳಿಗೆ ಹೋಗುತ್ತಿದ್ದರು. ಅಕ್ಕ, ಅಣ್ಣ, ತಮ್ಮ ಎಂದೇ ಸಂಬೋಧಿಸು ತ್ತಿದ್ದರು. ಆ ದೀನದಲಿತರಾದರೋ ಅನೇಕ ಅಂಧ ಶ್ರದ್ಧೆಗಳ ಅಡಿಯಾಳುಗಳಾಗಿದ್ದರು. ಹೆಜ್ಜೆ ಹೆಜ್ಜೆಗೂ ಅವರನ್ನು ಹಳೆಯ ಕಂದಾಚಾರಗಳು ದುರ್ಬಲಗೊಳಿಸುತ್ತಿದ್ದವು. ಅವನ್ನೆಲ್ಲಾ ತ್ಯಜಿಸ ಬೇಕೆಂದು ರಂಗರಾಯರು ಉಪದೇಶಿಸಿದರು. ‘ಜಾತಿಯೊಳಗೆ ಕಲಹಗಳನ್ನು ಮಾಡಬಾರದು. ಎಲ್ಲರೂ ಒಗ್ಗಟ್ಟಿನಿಂದ ಬಾಳಬೇಕು. ನಿಮ್ಮ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಶ್ರಮಿಸಬೇಕು’ ಎಂದು ಅವರೆಲ್ಲರಿಗೆ ಮಾರ್ಗದರ್ಶನ ನೀಡಿದರು.

ಬಹಳ ಹಿಂದಿನಿಂದಲೇ ಅನೇಕ ದಲಿತ ಕುಟುಂಬಗಳ ಜನರು ದಲ್ಲಾಳಿಗಳ ಹಿಂದೆ ಹೋಗಿ ಕೊಡಗಿನ ಕಾಫಿ ತೋಟಗಳಲ್ಲಿ ಗಾಣದೆತ್ತುಗಳಂತೆ ದುಡಿಯುತ್ತಿದ್ದರು. ಅಂಥವರಿಗೆ ರಂಗರಾಯರು ಸರ್ಕಾರೀ ಕೆಲಸಗಳನ್ನು ಕೊಡಿಸಿದರು. ಕೈಲಾದ ಮಟ್ಟಿಗೆ ಸಹಾಯಮಾಡಿದರು. ಅವರಿಗೂ ಕೃಷಿಯ ಗೀಳು ಹಚ್ಚಿಸಿದರು. ಸುಖದ ಬಾಳಿನ ಕಲ್ಪನೆಯನ್ನು ಅವರ ಮನಸ್ಸಿನೊಳಗೂ ತುಂಬಿಸಿದರು. ಗೇಣಿಗೆ ಜಮೀನುಗಳನ್ನು ತೆಗೆಸಿಕೊಟ್ಟರು.

ಶಿಕ್ಷಣದಲ್ಲಿ ಉನ್ನತಿ

ದಲಿತವರ್ಗದವರಿಗಾಗಿ ಸದಾ ಪರಿಶ್ರಮ ಮಾಡುತ್ತಿದ್ದ ರಂಗರಾಯರು ಅವರನ್ನು ಕುರಿತು ತುಂಬಾ ಆಸೆಗಳನ್ನೂ ಹೊಂದಿದ್ದರು.

“ನಾನು ಸ್ಥಾಪಿಸಿದ ಶಾಲೆಯಲ್ಲಿ ಕಲಿತವರಲ್ಲಿ ಒಬ್ಬರಾದರೂ ಪದವೀಧರರಾಗಬೇಕು. ನನ್ನ ವಿದ್ಯಾಸಂಸ್ಥೆ ಯಲ್ಲಿ ವಿದ್ಯಾದಾನ ಪಡೆದ ಅವರು ಜೀವನದಲ್ಲಿ ಉನ್ನತಿಯನ್ನು ಪಡೆದು ಸ್ವಂತ ಕಾರಿನಲ್ಲಿ ಹೋಗುವಾಗ ಆ ಕಾರಿನ ಧೂಳನ್ನು ನಾನು ಕಾಣಬೇಕು” ಎಂದು ಅವರು ಅನ್ನುತ್ತಿದ್ದರು. ಈ ಕನಸು ಅವರು ಬದುಕಿರುವಾಗ ಈಡೇರಲಿಲ್ಲ. ಆದರೂ ಮುಂದೆ ದೀನದಲಿತ ವರ್ಗಗಳ ಸಾವಿರಾರು ಮಂದಿ ಜನರು ಅವರ ವಿದ್ಯಾಸಂಸ್ಥೆಗಳಿಂದ ವಿದ್ಯೆಯನ್ನು ಗಳಿಸಿದರು. ವೈದ್ಯರಾದರು, ಸೇನೆಯಲ್ಲಿ ದೊಡ್ಡ ಪದವಿಯಗಳನ್ನು ಪಡೆದರು. ಜಿಲ್ಲಾಧಿಕಾರಿಗಳಾದರು. ಪೋಲೀಸ್ ಅಧಿಕಾರಿಗಳಾದರು. ರಾಜಕೀಯದಲ್ಲೂ ಮುಂದೆ ಬಂದರು.

ದಲಿತ ವರ್ಗಗಳ ಹೆಂಗಸರೂ ರಂಗರಾಯರ ವಿದ್ಯಾ ಸಂಸ್ಥೆಗಳಿಂದ ವಿದ್ಯೆ ಕಲಿತರು. ಉನ್ನತ ಪದವಿಗಳನ್ನು ಪಡೆ ದರು. ಅವರಲ್ಲಿ ಅನೇಕರು ಅಂತರ್ಜಾತೀಯ ವಿವಾಹಗಳನ್ನೂ ಮಾಡಿಕೊಂಡಿದ್ದಾರೆ. ಇಂದು ಉತ್ತಮ ಸ್ಥಿತಿಯಲ್ಲಿ ಬಾಳುತ್ತಿದ್ದಾರೆ.

ದಲಿತರ ಜನರ ಶಿಕ್ಷಣ, ಅವರ ಉದ್ಧಾರ- ಈ ಸಾಮಾಜಿಕ ಕ್ರಾಂತಿಗಾಗಿ ರಂಗರಾಯರು ಅವಿರತವಾಗಿ ಕೆಲಸ ಮಾಡಿದುದು ಮೂವತ್ತು ವರ್ಷ ಕಾಲ. ಮುಟ್ಟಬಾರದವರನ್ನು ಮುಂದೆ ತಂದು ಲೋಕವನ್ನು ಹಾಳುಮಾಡುತ್ತಿದ್ದಾರೆಂಬ ಜನ ನಿಂದೆಗೆ ಅವರು ಗುರಿಯಾಬೇಕಾಯಿತು. ಸಮಾಜದಲ್ಲಿ ಉತ್ತಮರು ಎನಿಸಿಕೊಂಡವರು ರಂಗರಾಯರ ತತ್ವಗಳನ್ನು ದ್ವೇಷಿಸಿದರು. ಅವರ ಸಂಸ್ಥೆಗಳ ವಿರುದ್ಧ ಹೋರಾಡಿದರು. ಆದರೂ ರಂಗರಾಯರು ಹಿಡಿದ ಹಠ ಬಿಡಲಿಲ್ಲ. ಗುರಿ ಮುಟ್ಟದೆ ವಿಶ್ರಾಂತಿ ಹೊಂದಲಿಲ್ಲ. ಅವರ ಪ್ರಯತ್ನದಿಂದ ಜಿಲ್ಲಾ ಬೋರ್ಡಿನಲ್ಲಿ ಮಂಗಳೂರು ಪುರಸಮಿತಿಯಲ್ಲಿ ದಲಿತ ವರ್ಗದವರಿಗೂ ಪ್ರಾತಿನಿಧ್ಯ ಸಿಗುವಂತಾಯಿತು. ಕಾಡಿನ ಮೂಲೆ ಯಲ್ಲಿದ್ದವರಿಗೆ ಹೊಸ ಬೆಳಕು ಬಾಳಿನಲ್ಲಿ ಬೆಳಗಿತು.

ಮೊದಲ ಮಹಾ ಯುದ್ಧದ ನಂತರ ದೇಶದ ಎಲ್ಲೆಡೆಯೂ ಆಹಾರ ಬರಗಾಲ ಉಂಟಾಯಿತು. ಆಗ ರಂಗರಾಯರು ಕಷ್ಟದಲ್ಲಿದ್ದವರಿಗೆ ಅಗ್ಗ ಕ್ರಯದಲ್ಲಿ ಅಕ್ಕಿ ಮತ್ತು ಸೀಮೆಎಣ್ಣೆಯನ್ನು ಒದಗಿಸುವ ಏರ್ಪಾಟು ಮಾಡಿದರು.

ರಂಗರಾಯರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಸಂಸ್ಕೃತ ವೈದಿಕ ಮಂತ್ರಗಳ ಬಗೆಗೆ ಉಪದೇಶ ನೀಡುತ್ತಿದ್ದರು. ಆದರೆ ಉಪದೇಶದ ಭಾಷೆ ಮಾತ್ರ ಕನ್ನಡ. ಪರದೇಶಗಳ ಧರ್ಮಬೋಧಕರು ಈ ದೇಶಕ್ಕೆ ಬಂದು ಇಲ್ಲಿಯ ಭಾಷೆಗಳಲ್ಲಿ ಜನರಿಗೆ ಬೋಧಿಸಿ ಅವರನ್ನು ತಮ್ಮ ಮತಗಳಿಗೆ ಸೇರಿಸಿ ಕೊಳ್ಳುತ್ತಾರೆ. ಹಾಗಿರುವಾಗ ನಾವು ನಮ್ಮ ಜನರಿಗೆ ಬೇರೆ ಭಾಷೆಯಲ್ಲಿ ಬೋಧಿಸಬಾರದು ಎಂಬುದು ಅವರ ವಾದ ವಾಗಿತ್ತು.

ಅವರ ಸಮಾಜೋದ್ಧಾರ ಕಾರ್ಯಗಳಲ್ಲಿ ಅವರ ಪತ್ನಿ ರುಕ್ಮಿಣಿಅಮ್ಮಾ ಮತ್ತು ಮಕ್ಕಳು ನೀಡಿದ ಸಹಕಾರ ಅಪಾರ ವಾದುದು.

ಸ್ವಾಮೀ ಈಶ್ವರಾನಂದರು

ರಂಗರಾಯರು ಮೂವತ್ತು ವರ್ಷ ಕಾಲ ತಮ್ಮ ಈ ವಿವಿಧ ಶಿಕ್ಷಣ ಸಂಸ್ಥೆಗಳನ್ನು ನಡೆಸಿದರು. ತಮ್ಮ ಅನಂತರವೂ ಈ ಸಂಸ್ಥೆಗಳು ಅಳಿಯಬಾರದು, ಹೀಗೇ ನಡೆಯಬೇಕೆಂಬ ಇಚ್ಛೆ ಅವರಲ್ಲಿ ಬಲವತ್ತರವಾಗಿತ್ತು. ಆದ್ದರಿಂದ ಅವರು ತಮ್ಮ ವೃದ್ಧಾಪ್ಯದಲ್ಲಿ ಈ ವಿದ್ಯಾಸಂಸ್ಥೆಗಳನ್ನೆಲ್ಲಾ ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ಯ ಯಜಮಾನಿಕೆಗೆ ಒಪ್ಪಿಸಿದರು. ಅದರ ಮೂಲಕ ಶಿಕ್ಷಣ ಮುಂದುವರೆಯಿತು.

ಅವರು ಸಂನ್ಯಾಸ ಸ್ವೀಕರಿಸಿ, ಬದುಕಿನ ಕೊನೆಯ ಕ್ಷಣಗಳನ್ನು ದೈವಚಿಂತನೆಯಲ್ಲೇ ಕಳೆಯಬೇಕೆಂದು ನಿಶ್ಚಯಿ ಸಿದರು. ೧೯೨೪ ರಲ್ಲಿಯೇ ಅವರು ಈ ನಿಶ್ಚಯ ಮಾಡಿದ್ದರು. ಆದರೆ ಸಾಧ್ಯವಾಗಲಿಲ್ಲ ಅಂತೂ ೧೯೨೭ರಲ್ಲಿ ಸುವಿಚಾರಾನಂದ ಸ್ವಾಮಿಯವರಿಂದ ಸಂನ್ಯಾಸ ದೀಕ್ಷೆಯನ್ನು ಪಡೆದರು. ಪಂಡಿತ ಧರ್ಮದೇವವಿದ್ಯಾವಾಚಸ್ಪತಿಯವರು ಅವರಿಗೆ ‘ಈಶ್ವರಾನಂದ’ ಎಂದು ನಾಮಕರಣ ಮಾಡಿದರು. ಅದೇ ದಿನ ಅವರು ಹಿಂದೆ ಅವರಿಗೆ ಸರ್ಕಾರ ಕೊಟ್ಟಿದ್ದ ‘ರಾವ್ ಸಾಹೇಬ್’ ಎಂಬ ಬಿರುದಿನ ಪದಕವನ್ನೂ ಪತ್ರವನ್ನೂ ಹೋಮಕುಂಡಕ್ಕೆ ಅರ್ಪಿಸಿದರು.

ಸ್ವಾಮಿ ಈಶ್ವರಾನಂದರು ತಮ್ಮ ಶಾಲೆಯ ವಿದ್ಯಾಥಿಗಳಿಗೆ ಹೇಳಿಕೊಟ್ಟ ಪ್ರಾರ್ಥನೆ ಶ್ಲೋಕ ಇದು:

ಓಂ ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವಃ

ಸಂನ್ಯಾಸಿಯಾದ ನಂತರವೂ ಭಗವಂತನ ಧ್ಯಾನ ದೊಂದಿಗೆ ಭಗವಂತನ ಮಕ್ಕಳ ಸೇವೆಯನ್ನೂ ಮುಂದುವರಿಸಿ ದರು. ದೀನ ದಲಿತರಿಗೆ ಹಿತಬೋಧೆಗಳನ್ನು ಉಪದೇಶಿಸು ತ್ತಿದ್ದರು. ಕುಡಿಯಬೇಡಿರಿ, ಮನುಷ್ಯರನ್ನು ದ್ವೇಷಿಸಬೇಡಿರಿ ಎಂದು ಒತ್ತಿ ಹೇಳುತ್ತಿದ್ದರು. ಅವರ ನಡೆನುಡಿಗಳನ್ನು ತಿದ್ದುತಿದ್ದರು.

ದೀಪ ಆರಿತು

೧೯೨೮ ಜನವರಿ ೩೦ ನೇ ದಿನಾಂಕ.

ಅಂದು ಭೀಷ್ಮಾಷ್ಟಮಿ. ಇಚ್ಛಾಮರಣಿ ಎನಿಸಿದ ಆಚಾರ್ಯ ಭೀಷ್ಮರು ಇಹಲೋಕವನ್ನು ತ್ಯಜಿಸಿದ ಪುಣ್ಯ ದಿನ.

ಅಂದೇ ಸ್ವಾಮಿ ಈಶ್ವರಾನಂದರು ತಮ್ಮ ೬೯ ವರ್ಷಗಳ ತುಂಬು ಜೀವನವನ್ನು ಮುಗಿಸಿ ಭಗವಂತನಲ್ಲಿ ಸೇರಿಕೊಂಡರು.

 

ಈಶ್ವರಾನಂದರು ಹುಡುಗರಿಗೆ ಪ್ರಾರ್ಥನೆಯನ್ನು ಹೇಳಿಕೊಟ್ಟರು

‘ನಾನು ಸತ್ತಮೇಲೆ ನನ್ನ ಕಳೇಬರವನ್ನು ಸ್ಮಶಾನಕ್ಕೆ ದೀನದಲಿತರೇ ಹೊತ್ತುಕೊಂಡು ಹೋಗಬೇಕು. ಬ್ರಹ್ಮ ಸಮಾಜದ ಸ್ಮಶಾನಕ್ಕೆ ಭಜನೆ ಮಾಡುತ್ತಾ ಮೆರವಣಿಗೆಯಲ್ಲಿ ಕೊಂಡೊಯ್ದು ಅಲ್ಲಿ ಸಂಸ್ಕರಿಸಬೇಕು’ ಎಂದು ಅವರು ಬದುಕಿದ್ದಾಗ ಹೇಳುತ್ತಿದ್ದರು.

ಇದೇ ರೀತಿ ಅವರ ಅಂತ್ಯಸಂಸ್ಕಾರ ನೆರವೇರಿತು.

ರಂಗರಾಯರೂ ಹುಟ್ಟಿನಿಂದ ಮೇಲಿನದು ಎನಿಸಿ ಕೊಳ್ಳುತ್ತಿದ್ದ ಜಾತಿಗೆ ಸೇರಿದವರೇ. ಆದರೆ ಕೆಳಗಿನ ಜಾತಿಯವರಿಗಾಗುತ್ತಿದ್ದ ಅನ್ಯಾಯಕ್ಕೆ ನೊಂದರು. ಅವರಿಗೆ ನೆರವಾಗಲು ಮುಂದಾದರು. ಆಗ ಅಪಮಾನ, ಕಷ್ಟ, ಬಡತನ ಎಲ್ಲವನ್ನೂ ಸಹಿಸಿದರು. ಕರ್ಪೂರದಂತೆ ಉರಿದರು, ಶ್ರೀಗಂಧದಂತೆ ತಮ್ಮನ್ನೇ ತೇಯ್ದುಕೊಂಡರು.

ರಂಗರಾಯರದು ಆದರ್ಶ ಬದುಕು.