ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದರೇನು ಫಲ? || ಪ ||

ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ?
ಸಟೆಯನ್ನಾಡುವ ಮನುಜನರು ಮನದಲಿ
ವಿಠಲನ ನೆನೆದರೆ ಏನು ಫಲ?

ಕಪಟತನದಿ ವಂಚಿಸುವ ಮನುಜರು
ಜಪಗಳ ಮಾಡಿದರೇನು ಫಲ?
ಕುಪಿತ ಬುದ್ಧಿಯನು ತ್ಯಜಿಸದೆ ನಿತ್ಯದಿ
ಉಪವಾಸವಿದ್ದರೇನು ಫಲ?         || ಬೇವು ||

ಮಾತಾಪಿತರನು ಬಳಲಿಸುವ ಮಗ
ಯಾತ್ರೆಯ ಮಾಡಿದರೇನು ಫಲ?
ಘಾತಕತನವನು ಬಿಡದೆ ನಿರಂತರ
ಗೀತೆಯನೋದಿದರೆ ಏನು ಫಲ     || ಪ ||

ಪತಿಯನು ನಿಂದಿಸಿ ಬೊಗಳುವ ಸತಿಯೊಳು
ವ್ರತಗಳ ಮಾಡಿದರೇನು ಫಲ?
ಅತಿಥಿಗಳೆಡೆಯಲಿ ಬೇಧವ ಮಾಡುತ
ಗತಿಯನು ಬಯಸಿದರೇನು ಫಲ?   || ಪ ||

ಹೀನ ಕೃತ್ಯಗಳನ್ನು ಮಾಡುತ್ತ ನದಿಯಲಿ
ಸ್ನಾನವ ಮಾಡಿದರೇನು ಫಲ?
ಶ್ರೀ ವೀ ಪುರಂದರ ವಿಠಲನ ನೆನೆಯದೆ
ಧ್ಯಾನವ ಮಾಡಿದರೇನು ಫಲ? || ಪ ||