ಕುಮಾರನ್ ಆಶಾನ್

ಅಂದು ಶಾಲೆಯಲ್ಲಿ ಯಾವ ವಿದ್ಯಾರ್ಥಿಯ ಮುಖದಲ್ಲೂ ಗೆಲುವಿಲ್ಲ. ಉಪಾಧ್ಯಾಯರು ಒಂದೊಂದು ತರಗತಿಗೆ ಹೋದಾಗಲೂ ಬಾಯಿತೆರೆದು ಮಾತನಾಡಲಾರದೆ ಶಿಷ್ಯರ ಕಣ್ಣೀರಿಗೆ ತಮ್ಮ ಕಣ್ಣೀರಿನಿಂದಲೇ ಉತ್ತರ ಕೊಟ್ಟು ಹೊರಬರುತ್ತಿದ್ದರು. ಗುರುಗಳ ಅಗಲುವಿಕೆ ಶಿಷ್ಯರಿಗೆ ಎಷ್ಟು ವೇದನೆಯನ್ನು ಉಂಟುಮಾಡಿತ್ತೋ ಶಿಷ್ಯರನ್ನು ಬಿಟ್ಟು ಹೋಗುವುದು ಗುರುಗಳಿಗೂ ಅಷ್ಟೇ ಕಷ್ಟವಾಗಿತ್ತು. ಬಯಸಿದ ವೃತ್ತಿಯನ್ನು, ಮೆಚ್ಚಿದ ಶಿಷ್ಯರನ್ನು ಉಪಾಧ್ಯಾಯರು ಅನಿವಾರ್ಯವಾಗಿ ಬಿಡಲೇಬೇಕಾಗಿತ್ತು. ಕಾರಣ ಇಷ್ಟೆ: ಚಿಕ್ಕ ವಯಸ್ಸಿನ ಈ ಉಪಾಧ್ಯಾಯರಿಗೆ, ಸರ್ಕಾರ ಉಪಾಧ್ಯಾಯ ವೃತ್ತಿಗೆ ಎಷ್ಟು ವಯೋಮಿತಿಯನ್ನು ಹಾಕಿತ್ತೋ ಅಷ್ಟು ವಯಸ್ಸು ಆಗಿರಲಿಲ್ಲ. ಆ ಉಪಾಧ್ಯಾಯರೇ ಮಹಾಕವಿ ಕುಮಾರನ್ ಆಶಾನ್. ಈ ಘಟನೆ ಅವರ ಜೀವನದ ಹಾದಿಯನ್ನೇ ಬದಲಾಯಿಸಿತು. ಇಲ್ಲದೆ ಹೋಗಿದ್ದಿದ್ದರೆ ಅವರ ಬಹು ಕಾಲ ಕೇವಲ ಉಪಾಧ್ಯಾಯರಾಗಿಯೇ ಉಳಿಯುತ್ತಿದ್ದರೋ ಏನೋ!

ತಂದೆ ತಾಯಿ

ಕೇರಳದ ಚೆರಯಿನ್‌ಕೀಳ್ ತಾಲೂಕಿನಲ್ಲಿ ಕಡಯ್ಕಾ ವೂರ್ ಎನ್ನುವ ಒಂದು ಗ್ರಾಮ. ಆಗ ಗ್ರಾಮದಲ್ಲಿ ಕಾಯಿಕ್ಕರ ಎನ್ನುವ ಒಂದು ಸ್ಥಳ. ಅಲ್ಲಿ ತೊಮ್ಮನ್ ವಿಳಾಗತ್ತು ಕುಟುಂಬ ದಲ್ಲಿ ನಾರಾಯಣನ್ ಮತ್ತು ಕಾಳಿಅಮ್ಮ ಎಂಬ ದಂಪತಿ ಗಳಿದ್ದರು. ಅವರಿಗೆ ಒಂಬತ್ತು ಮಂದಿ ಮಕ್ಕಳು. ಅವರಲ್ಲಿ ಎರಡನೆಯ ಮಗ ಕುಮಾರು ಆಶಾನ್. ಆಶಾನನ ಜನನ ೧೮೭೩ ರ ಏಪ್ರಿಲ್ ತಿಂಗಳ ೧೨ ರಂದು.

ನಾರಾಯಣನ್ ಈಳವ ಪಂಗಡದ ಒಬ್ಬ ಸಾಮಾನ್ಯ ಮನುಷ್ಯ. ತನ್ನ ಉದ್ಯೋಗ ವ್ಯಾಪಾರವಾಗಿದ್ದರೂ ಸಮಾಜ ಸೇವಾಕಾರ್ಯಗಳಲ್ಲಿ ಆಸಕ್ತಿ ಹೆಚ್ಚು. ಪ್ರಾಮಾಣಿಕ, ಜೊತೆಗೆ ತುಂಬಾ ದೈವಭಕ್ತ. ಆತನಿಗೆ ಮಲಯಾಳ ಭಾಷೆಯಲ್ಲಿ ಆಳವಾದ ಜ್ಞಾನವು ತಮಿಳು ಸಾಹಿತ್ಯದ ಪರಿಚಯವೂ ಇತ್ತು. ಸಂಗೀತದಲ್ಲಿ ಒಳ್ಳೆಯ ಅಭಿರುಚಿ ಇತ್ತು. ಕೇರಳ ಸಂಗೀತದ ಸೋಪಾನ ಶೈಲಿಯ ಕೀರ್ತನೆಗಳನ್ನು ರಚಿಸಿ ಹಾಡುತ್ತಿದ್ದರು. ಆಶಾನರ ತಾಯಿ ಅಷ್ಟೊಂದು ವಿದ್ಯಾವಂತೆ ಆಗಿರಲಿಲ್ಲ. ಆದರೆ ರಾಮಾಯಣ, ಭಾರತ, ಭಾಗವತಗಳನ್ನು ಓದಿ ಹೇಳುವಷ್ಟು ಜ್ಞಾನವಿತ್ತು. ಆಕೆಗೆ ದೀನದಲಿತರನ್ನು ಕಂಡರೆ ತುಂಬಾ ಮರುಕ. ಕಷ್ಟದಲ್ಲಿರುವವರನ್ನು ಕಂಡರೆ ಕೈಲಾದಷ್ಟು ಸಹಾಯ ಮಾಡಿದರೆ ಮನಸ್ಸಿಗೆ ತೃಪ್ತಿ. ಒಮ್ಮೆ ಅವರ ಪಕ್ಕದ ಮನೆಯ ಬಡ ಕುಟುಂಬ ಒಂದಕ್ಕೆ ಸಿಡುಬು ತಗುಲಿತು. ಆ ಕಾಲದಲ್ಲಿ ಇಂದಿನ ಹಾಗೆ ಔಷಧೋಪಚಾರಗಳ ಸೌಕರ‍್ಯವಿರಲಿಲ್ಲ. ಸಿಡುಬು ರೋಗ ತಗುಲಿದವರು ಜನಸಂಪರ್ಕದಿಂದ ದೂರ ಇರಬೇಕಾಗಿತ್ತು. ಹಾಗೆಯೇ ಅವರು ಮನೆಯನ್ನು ಬಿಟ್ಟು ಬೇರೆ ಕಡೆ ಗುಡಿಸಲಿನಲ್ಲಿ ವಾಸ ಮಾಡತೊಡಗಿದರು. ಅವರನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಅದು ಅಂಟು ರೋಗ ಎಂದು ತಿಳಿದಿದ್ದರು. ಆಶಾನರ ತಾಯಿಗೆ ಮನಸ್ಸು ನಿಲ್ಲಲಿಲ್ಲ. ಕಾಳಿಅಮ್ಮ ಅವರ ಗುಡಿಸಲಿಗೆ ಹೋಗಿ ರೋಗಿಗಳ ಶುಶ್ರೂಷೆ ಮಾಡಿದರು. ರೋಗಿಗಳ ರೋಗವೇನೋ ಗುಣವಾಯಿತು. ಆದರೆ ಕಾಳಿ ಅಮ್ಮನವರಿಗೆ ಆ ರೋಗ ತಗುಲಿತು. ಅದರಿಂದ ಅವರು ಗುಣಮುಖರಾಗಲಿಲ್ಲ. ಪರರ ಸೇವೆಗಾಗಿ ಆತ್ಮಾರ್ಪಣೆ ಮಾಡಿಕೊಂಡ ಧನ್ಯಾತ್ಮಳಾದಳು ಆಕೆ.

ವಿದ್ಯಾಭ್ಯಾಸ

ಕುಮಾರುವಿನ ವಿದ್ಯಾಭ್ಯಾಸ ಸಂಪ್ರದಾಯದಂತೆ ಅವರ ಏಳನೇ ವಯಸಿನಲ್ಲಿ ಪ್ರಾರಂಭವಾಯಿತು. ಮೊದಲನೇ ವರ್ಷದಲ್ಲಿ ಓದುವುದು, ಬರೆಯುವುದು, ಗಣಿತ ಮೊದಲಾದ ವನ್ನು ಕಲಿತ. ಕುಮಾರುವಿನ ತಂದೆಗೆ ತಮ್ಮ ಮಗ ಸಂಸ್ಕೃತದಲ್ಲಿ ಬಹು ದೊಡ್ಡ ಪಂಡಿತನಾಗಬೇಕು ಎನ್ನುವ ಆಸೆ. ಅದರಂತೆ ಎರಡನೆಯ ತರಗತಿಯಿಂದಲೇ ಸಂಸ್ಕೃತವನ್ನು ಕಲಿಸಲು ಕೊಚ್ಚುರಾಮನ್ ವೈದ್ಯರ್ ಎನ್ನುವವರಿಗೆ ಕುಮಾರುವನ್ನು ಒಪ್ಪಿಸಿದರು. ಕುಮಾರು ತುಂಬಾ ಚೂಟಿಯಾದ ಹುಡುಗ. ಜೊತೆಗೆ ಅಪಾರ ಜ್ಞಾಪಕಶಕ್ತಿ.

ಗುರುವಿನ ಅನಾರೋಗ್ಯದ ಕಾರಣದಿಂದಾಗಿ ಕುಮಾರುವಿನ ವಿದ್ಯಾಭ್ಯಾಸ ಸ್ವಲ್ಪಕಾಲದಲ್ಲಿ ನಿಂತಿತು.

ಕುಮಾರು ಓದುವುದರಲ್ಲಿ ಎಷ್ಟು ಚುರುಕಾಗಿದ್ದನೋ ಆಟಗಳಲ್ಲೂ ಚುರುಕಾಗಿದ್ದನು. ಈಜುವುದು ಎಂದರೆ ತುಂಬಾ ಇಷ್ಟ. ಮನೆಯ ಸಮೀಪದಲ್ಲೇ ಒಂದು ನದಿ; ತುಂಬಾ ಅಗಲ. ಸ್ನೇಹಿತರೆಲ್ಲಾ ಸೇರಿ ನಾಮುಂದು ತಾಮುಂದು ಎಂದು ಈಜಲು ನದಿಗೆ ಇಳಿಯುತ್ತಿದ್ದರು. ಆದರೆ ಎಲ್ಲರಿಗಿಂತ ಮೊದಲು ಆಚೆಯ ದಡವನ್ನು ತಲುಪುತ್ತಿದ್ದುದು ಕುಮಾರು.

ಈ ಮಧ್ಯೆ ಕುಮಾರುವಿನ ತಂದೆಯ ಶ್ರಮದಿಂದಾಗಿ ಹತ್ತಿರವೇ ಒಂದು ಸರ್ಕಾರದ ಶಾಲೆಯನ್ನು ತೆರೆಯ ಲಾಯಿತು. ಹದಿನಾಲ್ಕನೆಯ ವಯಸ್ಸಿನವರೆಗೆ ಕುಮಾರುವಿನ ವಿದ್ಯಾಭ್ಯಾಸ ಅಲ್ಲಿ ನಡೆಯಿತು.

ತಾನು ಕಲಿತ ಶಾಲೆಯಲ್ಲಿಯೇ ಉಪಧ್ಯಾಯನಾಗಿ ಸೇರಿದರೂ ೧೮ ವರ್ಷ ವಯಸ್ಸು ಆಗದ ಕಾರಣ ಕೆಲಸ ಬಿಡಬೇಕಾಗಿ ಬಂತು.

ತಂದೆ ಕುಮಾರುವನ್ನು ಒಬ್ಬ ವ್ಯಾಪಾರಿಯಲ್ಲಿ ಗುಮಾಸ್ತನನ್ನಾಗಿ ಕೆಲಸಕ್ಕೆ ಸೇರಿಸಿದರು. ಆದರೆ ಹುಡುಗನ ಮನಸ್ಸು ಮುಂದಿನ ವಿದ್ಯಾಭ್ಯಾಸವನ್ನು ಕುರಿತು ಸದಾ ಚಿಂತಿಸುತ್ತಲೇ ಇತ್ತು. ಹತ್ತಿರ ಯಾವ ಶಾಲೆಯೂ ಇರಲಿಲ್ಲ. ಹುಡುಗನಲ್ಲಿ ಕೆಲಸದ ವಿಷಯವಾಗಿ ಉತ್ಸಾಹವಾಗಲಿ, ಶ್ರದ್ಧೆಯಾಗಲಿ ಇರಲಿಲ್ಲ. ಇದನ್ನು ತಿಳಿದು ಕುಮಾರುವಿಗೆ ಕೆಲಸ ಕೊಟ್ಟಿದ್ದ ವ್ಯಾಪಾರಿ ಅವರ ತಂದೆಯನ್ನು ಬರಮಾಡಿ ಅವರಿಗೆ ಹುಡುಗನನ್ನು ಮತ್ತೆ ಓದಲು ಕಳಿಸುವಂತೆ ಹೇಳಿ ಕಳಿಸಿಕೊಟ್ಟರು. ಇದರಿಂದಾಗಿ ಗೋವಿಂದನ್ ಆಶಾನ್ ಎಂಬುವವರು ನಡೆಸುತ್ತಿದ್ದ ವಿಜ್ಞಾನ ಸಂದಾಯಿನಿ ಶಾಲೆಯಲ್ಲಿ ಕುಮಾರು ಕಲಿಯುವಂತಾಯಿತು. ಹುಡುಗನಲ್ಲಿದ್ದ ವಿದ್ಯಾ ದಾಹವನ್ನು ಕಂಡ ಮತ್ತು ಅವನ ಮನೆಯ ಪರಿಸ್ಥಿತಿಯನ್ನೆಲ್ಲಾ ತಿಳಿದಿದ್ದ ಗುರುಗಳು ಬಹಳ ವಿಶ್ವಾಸದಿಂದ ಪಾಠ ಹೇಳಿಕೊಟ್ಟರು.

ಗುರುವಿನ ಸೋಲು

ಒಮ್ಮೆ ಗುರುಗಳು ಶಾಕುಂತಲಾ ನಾಟಕವನ್ನು ತರಗತಿ ಯಲ್ಲಿ ಪಾಠ ಮಾಡುತ್ತಿದ್ದರು. ಗುರುಗಳ ವ್ಯಾಖ್ಯಾನ ಶಿಷ್ಯನಿಗೆ ಸರಿ ಎನಿಸಲಿಲ್ಲ. ಕುಮಾರು ಎದ್ದು ನಿಂತು ತನ್ನ ಅಭಿಪ್ರಾಯ ವನ್ನು ಸೂಚಿಸಿದ. ಗುರುಗಳಿಗೆ ಸಿಟ್ಟು ಬಂತು. “ನಿನಗೆ ನನ್ನಿಂದ ಕಲಿಯಬೇಕಾದ್ದು ಏನೂ ಇಲ್ಲ ಎನಿಸಿದ್ದರೆ ಇನ್ನು ಮುಂದೆ ಇಲ್ಲಿಗೆ ಬರಬೇಡ” ಎಂದರು. ಶಿಷ್ಯ ಏನನ್ನೂ ಮಾತಾಡಲಿಲ್ಲ. ಆದರೆ ಅಂದಿಗೆ ವಿಜ್ಞಾನ ಸಂದಾಯಿನಿಯಲ್ಲಿ ವಿದ್ಯಾಭ್ಯಾಸ ಮುಕ್ತಾಯಗೊಂಡಿತು.

ಈ ವೇಳೆಗಾಗಲೇ ‘ಸುಜನಾನಂದಿನಿ’ ಮೊದಲಾದ ಪತ್ರಿಕೆ ಗಳಲ್ಲಿ ‘ಕುಮಾರು’, ‘ಕೆ. ಎನ್. ಕುಮಾರು’, ‘ಕಾಯ್ಕರ್ ಕೆ. ಎನ್. ಕುಮಾರನ್’ ಮೊದಲಾದ ಹೆಸರುಗಳಲ್ಲಿ ಪದ್ಯಗಳನ್ನು ಬರೆಯುತ್ತಿದ್ದರು. ಅನಂತರ ‘ಒಳ್ಳೀ ವಿವಾಹಂ’, ‘ಉಷಾ ಕಲ್ಯಾಣಂ’ ನಾಟಕಗಳನ್ನು ರಚಿಸಿದರು.

ನಾರಾಯಣಗುರು

ಆ ಕಾಲದಲ್ಲಿ ಕೇರಳದಲ್ಲಿ ತುಂಬಾ ಪ್ರಭಾವಶಾಲಿ ಯಾಗಿದ್ದ ಒಬ್ಬ ವ್ಯಕ್ತಿಯೆಂದರೆ ನಾರಾಯಣಗುರು. ವಿವಾಹವಾದ ಎರಡು ವರ್ಷಗಳಲ್ಲೆ ಸಂಸಾರವನ್ನು ತ್ಯಜಿಸಿ ಆಧ್ಯಾತ್ಮ ಪ್ರಪಂಚದಲ್ಲಿ ಕಾಲಿರಿಸಿದವರು. ‘ಮನುಷ್ಯರೆಲ್ಲರೂ ಒಂದೇ ಜಾತಿ, ಎಲ್ಲರಿಗೂ ಒಂದೇ ಧರ್ಮ, ಒಬ್ಬನೇ ದೇವರು’-ಎನ್ನುವ ತತ್ವವನ್ನು ಕೇರಳದಲ್ಲೆಲ್ಲಾ ಪ್ರಚಾರ ಮಾಡಿದವರು ನಾರಾಯಣಗುರುಗಳು. ಈಳವರಲ್ಲಿ ಜಾಗೃತಿ ಯುಂಟಾಗುವಂತೆ ಮಾಡಿ ಆ ಜಾತಿಯ ಏಳಿಗೆಗಾಗಿ ತುಂಬಾ ಕೆಲಸ ಮಾಡಿದರು. ಈಳವರಲ್ಲಿ ಮತ್ತು ಹಿಂದು ಸಮಾಜದಲ್ಲಿ ಆಚರಣೆಯಲ್ಲಿದ್ದ ಕೆಲವು ಮೂಢ ನಂಬಿಕೆಗಳನ್ನೂ ಅನಾಚಾರಗಳನ್ನೂ ಹೋಗ ಲಾಡಿಸಿದರು.

ರಾಮಕೃಷ್ಣ ಪರಮಹಂಸ-ವಿವೇಕಾನಂದರು ಸಂಧಿಸಿದಂತೆ ನಾರಾಯಣಗುರುಗಳು ಮತ್ತು ಆಶಾನರು ಸಂಧಿಸಿದರು.

ನಾರಾಯಣಗುರುಗಳನ್ನು ಮೊದಲ ಬಾರಿ ಭೇಟಿ ಯಾದಾಗ ಆಶಾನರಿಗೆ ಹದಿನೆಂಟು ವರ್ಷ. ಗೋವಿಂದನ್ ಆಶಾನರ ವಿಜ್ಞಾನ ಸಂದಾಯಿನಿ ಶಾಲೆಯನ್ನು ಬಿಟ್ಟಮೇಲೆ ಆಶಾನರು ಯಾವ ವೃತ್ತಿಯನ್ನೂ ಕೈಗೊಂಡಿರಲಿಲ್ಲ. ಅಲ್ಲಲ್ಲಿ ಗೇರುಮರಗಳಿಂದ ತುಂಬಿದ ಗುಡ್ಡಗಳಲ್ಲಿ ಪ್ರಕೃತಿಯ ಮಡಿಲಿನಲ್ಲಿ ಆ ಸೌಂದರ್ಯಕ್ಕೆ ಮನಸೋತು ಆನಂದಿ ಸುತ್ತಿದ್ದರು. ವಯೋಧರ್ಮಕ್ಕನುಗುಣವಾಗಿ ಶೃಂಗಾರ ಶ್ಲೋಕ ಗಳನ್ನು ರಚಿಸುತ್ತಾ ಸಾಹಿತ್ಯ ಸೃಷ್ಟಿಯಲ್ಲಿ ಕಾಲ ಕಳೆಯ ತೊಡಗಿದರು. ಗುರುಗಳು ಆ ಕಾಲದಲ್ಲಿ ಆಶಾನರನ್ನು ಕಂಡುದಲ್ಲದೆ ಅವರಿಂದ ರಚಿತವಾದ ಉಷಾ ಕಲ್ಯಾಣ, ವಳ್ಳೀ ವಿವಾಹ ಮತ್ತು ಅನೇಕ ಶ್ಲೋಕಗಳನ್ನು ಓದಿ ಸಂತೋಷ ಗೊಂಡರು. ಜೊತೆಗೆ ಕುಮಾರುವಿಗೆ ಒಂದು ಸಲಹೆಯನ್ನೂ ನೀಡಿದರು: “ಇನ್ನು ಮುಂದೆ ನೀನು ಶೃಂಗಾರ ಶ್ಲೋಕಗಳನ್ನು ರಚಿಸಬೇಡ”.

ದಾರಿ ಬದಲಿಸಿತು

ತನ್ನ ದಾರಿಯಲ್ಲಿ ತಾನು ಹೋಗುತ್ತಿದ್ದ ಕುಮಾರುವನ್ನು ಬೇರೆ ದಿಕ್ಕಿಗೆ ತಿರುಗಿಸಿದುದು ಗುರುಗಳ ಉಪದೇಶ. ಸಿಕ್ಕಿದಷ್ಟು ಪುಸ್ತಕಗಳನ್ನು ಓದಬೇಕು, ಹೆಚ್ಚು ಶೃಂಗಾರ ಕೃತಿಗಳನ್ನು ರಚಿಸಬೇಕು ಎನ್ನುವ ಮನಸ್ಸು ಗುರುಗಳ ಸಂಪರ್ಕದಿಂದ ಬದಲಾಯಿಸಿತು. ಹೆಚ್ಚಾಗಿ ಧರ್ಮಸಂಬಂಧವಾದ ಪುಸ್ತಕಗಳನ್ನು ಓದತೊಡಗಿದರು. ತಮಿಳು ಮತ್ತು ಸಂಸ್ಕೃತಗಳಲ್ಲಿ ಧರ್ಮ ಗ್ರಂಥಗಳನ್ನು ಕಲಂಕುಷವಾಗಿ ಅಭ್ಯಾಸ ಮಾಡಿದರು. ಶೃಂಗಾರ ಶ್ಲೋಕಗಳಿಗೆ ಬದಲಾಗಿ ಭಕ್ತಿಗೀತೆಗಳ ರಚನೆಗೆ ತೊಡಗಿದರು. ಆಶಾನರು ತೀರಿಕೊಂಡ ಬಳಿಕ ಪ್ರಕಟವಾದ ‘ಸುಬ್ರಹ್ಮಣ್ಯ ಶತಕ’, ‘ಭಕ್ತವಿಲಾಪ’ ಎಂಬುವವು ಈ ಕಾಲದಲ್ಲಿ ಬರೆದವು.

ಕೆಲವು ಸಾರಿ ಅಲ್ಲೇ ಇದ್ದ ಗುಡ್ಡಗಳಲ್ಲಿ ಒಬ್ಬಂಟಿಗರಾಗಿ ಸಂಚರಿಸುತ್ತಿದ್ದರು. ನಾರಾಯಣಗುರು ಆಗಾಗ ಕಾಯಿಕ್ಕರಕ್ಕೆ ಬಂದು ಹೋಗುತ್ತಿದ್ದರು. ಆಗ ಅವರಿಗೆ ಮೂವತ್ತೈದು-ಮೂವತ್ತಾರು ವರ್ಷ ಅಷ್ಟೆ. ಗುರುಶಿಷ್ಯರು ಮತ್ತೆ ಮತ್ತೆ ಸಂಧಿಸುತ್ತಿದ್ದುದರಿಂದ ಅವರಲ್ಲಿ ಆತ್ಮೀಯತೆ ಹೆಚ್ಚುತ್ತಾ ಬಂತು. ಯೌವನಕ್ಕೆ ಕಾಲಿರಿಸಿದ ಕವಿಹೃದಯದ ಕುಮಾರುವಿನ ಮನಸ್ಸು ಕಲ್ಪನಾ ಲೋಕವನ್ನು ಬಿಟ್ಟು ಗುರುಗಳ ಆತ್ಮಶಕ್ತಿಯ ಪ್ರಭಾವದಿಂದ ಸಂನ್ಯಾಸದ ಕಡೆಗೆ ಬಾಗತೊಡಗಿತು.

ಊರ ಹತ್ತಿರವೇ ಇದ್ದ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಮಾರು ಮಕ್ಕಳಿಗೆ ಸಂಸ್ಕೃತವನ್ನು ಕಲಿಸತೊಡಗಿದರು. ಕುಮಾರು ಆಗಿದ್ದವರು ಆಗ ಕುಮಾರನ್ ಆಶಾನ್ ಎಂದಾದರು. ಮಲಯಾಳದಲ್ಲಿ ‘ಆಶಾನ್’ ಎಂದರೆ ಉಪಾಧ್ಯಾಯ ಎಂದರ್ಥ.

ಒಂದು ದಿನ, ಗೇರುಮರಗಳ ಗುಡ್ಡದಲ್ಲಿ ಆಶಾನ್ ಕುಳಿತಿದ್ದರು. ಹಿಂದೆ ಏನೋ ಶಬ್ದವಾದಂತೆ ತೋರಲು ತಿರುಗಿ ನೋಡಿದರು. ಗುರುಗಳು ಅಲ್ಲಿಯೇ ಪ್ರತ್ಯಕ್ಷರಾದಂತೆ ಕಾಣಿಸಿ ಕೊಂಡರು. ಕೈಯಲ್ಲಿ ಹಸಿರು ಎಲೆಗಳ ಒಂದು ಬಳ್ಳಿ. ತಟ್ಟನೆ ಎದ್ದುನಿಂತ ಕುಮಾರನ್‌ನನ್ನು ಕಂಡು ಕೇಳಿದರು: “ಹೆದರಿದೆಯಾ ಕುಮಾರನ್?”

“ಇಲ್ಲ ಗುರುಗಳೇ!”

“ಇತ್ತೀಚೆಗೆ ಶ್ಲೋಕಗಳನ್ನೇನಾದರೂ ಬರೆದೆಯಾ?”

“ಇಲ್ಲ. ಒಂದನ್ನೂ ಬರೆಯಲಿಲ್ಲ”.

“ಏಕೆ? ನಾನು ಶೃಂಗಾರ ಶ್ಲೋಕಗಳನ್ನು ಬರೆಯಬೇಡ ಎಂದುದರಿಂದಲೇ?”

“ಶೃಂಗಾರ ಎಲ್ಲಾ ರಸಗಳ ರಾಜ ಎಂದು ಎಲ್ಲಾ ಅಲಂಕಾರಿಕರೂ ಹೇಳುತ್ತಾರಲ್ಲಾ ಗುರುಗಳೇ?”

“ನಿಜ. ಆದರೆ ಸ್ತ್ರೀ ಸೌಂದರ್ಯಕ್ಕೆ ಮನಸೋತು ಅಂಧನಾಗಬೇಡ. ಅದಕ್ಕಿಂತ ಸುಂದರವಾದುದನ್ನು ಕಾಣುವುದಕ್ಕೆ ಪ್ರಯತ್ನ ಪಡು. ನೀನು ಉಪನಿಷತ್ತುಗಳನ್ನು ಓದಿದ್ದೀಯಾ?”

“ಇಲ್ಲ.”

“ಇನ್ನು ಮೇಲೆ ಅವುಗಳನ್ನು ಓದು.”

ಆಶಾನರು ಗುರುಗಳನ್ನು ಬೀಳ್ಕೊಂಡು ಅವರ ಮಾತನ್ನೇ ಚಿಂತಿಸುತ್ತಾ ಮನೆಯ ಕಡೆಗೆ ಹೊರಟರು.

ಪಾರ್ವತಿ ದೂರ ತಳ್ಳಿದಷ್ಟೂ ಹತ್ತಿರಬರುತ್ತಿದ್ದಳು. ಮರೆಯ ಬೇಕೆಂದಷ್ಟೂ ನೆನಪು ಹೆಚ್ಚಾಗುತ್ತಿತ್ತು. ಕುಳಿತಲ್ಲಿ, ನಿಂತಲ್ಲಿ ಅವಳು ಆವರಿಸುತ್ತಿದ್ದಳು. ತಾವರೆ ಕಣ್ಣಿನ ಆ ಮುಗ್ಧೆ ತನ್ನ ಕೋಮಲ ಕರಗಳನ್ನು ತಾವರೆ ಹೂವಿಗಾಗಿ ಮುಂದೆ ಚಾಚುತ್ತಿದ್ದಳು. ಆ ಕಣ್ಣುಗಳನ್ನು ಆ ಕೈಗಳನ್ನೂ ಮರೆಯುವು ದಾದರೂ ಹೇಗೆ?

ಅದೇ ಪಾರ್ವತಿ ನಿನ್ನೆ ಇದ್ದವಳು ಇಂದು?

ಆಶಾನರ ಮನೆಯ ಹತ್ತಿರವೇ ಮತ್ತೊಂದು ಕುಟುಂಬ. ಪಾರ್ವತಿ ಆ ಕುಟುಂಬದ ಹುಡುಗಿ. ಕುಮಾರು, ಪಾರ್ವತಿ ಒಟ್ಟಿಗೇ ಬೆಳೆದವರು. ಇಬ್ಬರಿಗೂ ತುಂಬಾ ಸ್ನೇಹ. ಮನೆಯ ಪಕ್ಕದಲ್ಲೇ ತಾವರೆ ಕೊಳ. ಪಾರ್ವತಿಗೆ ಅರಳಿದ ಹೂವುಗಳನ್ನು ಕೊಯ್ಯುವ ಆಸೆ. ಆದರೆ ಅವಳಿಂದ ಅದು ಆಗುವ ಕೆಲಸವಲ್ಲ. ಕುಮಾರುವನ್ನು ಆಸೆ ತುಂಬಿದ ಕಣ್ಣುಗಳಿಂದ ನೋಡಿ ಅವುಗಳನ್ನು ಕಿತ್ತು ಕೊಡುವಂತೆ ಕೇಳುತ್ತಿದ್ದಳು. ಕುಮಾರುವನ್ನು ಬಿಟ್ಟರೆ ಮತ್ತಾರೂ ಆ ಕೆಸರಿನ ಕೊಳಕ್ಕೆ ಇಳಿಯುವ ಧೈರ‍್ಯ ಮಾಡುತ್ತಿರಲಿಲ್ಲ. ಕುಮಾರು ಆದರೋ ಅತ್ಯಂತ ಹೆಮ್ಮೆಯಿಂದ ಪಾರ್ವತಿಯ ಆಸೆಯನ್ನು ಈಡೇರಿಸಿ ಕೊಡುತ್ತಿದ್ದನು.

ಹಿಂದಿನ ದಿನ ಪಾರ್ವತಿ ಒಂದು ಕರುವನ್ನು ಹಿಡಿದು ಕೊಂಡು ಹೋಗುತ್ತಾ ದಾರಿಯಲ್ಲಿ ಸಿಕ್ಕಿದ ಕುಮಾರುವನ್ನು ತಾನೇ ಮಾತನಾಡಿಸಿದ್ದಳು. ಆದರೆ ಮರುದಿನ ಶಾಲೆಯಿಂದ ಬರುವಾಗ ಪಾರ್ವತಿಯ ಮನೆಯ ಮುಂದೆ ತುಂಬಾ ಜನರು ಸೇರಿದ್ದರು. ಅಲ್ಲಿ ಹೋಗಿ ನೋಡಿದಾಗ ಕಂಡದ್ದೇನು? ಜಗಲಿಯ ಮೇಲೆ ಪಾರ್ವತಿಯ ಶವ!

ಪಾರ್ವತಿಯ ಅಕಾಲ ಮರಣ ಕುಮಾರುವಿನ ಮನಸ್ಸಿನ ಮೇಲೆ ದೊಡ್ಡ ಆಘಾತವನ್ನುಂಟುಮಾಡಿತು. ಊಟ ಸೇರದಾಯಿತು. ಜನರ ಸಂಪರ್ಕ ಹಿಂಸೆ ಎನಿಸುತ್ತಿತ್ತು. ಗುರುಗಳ ಉಪದೇಶದಂತೆ ಮನಸ್ಸು ಶೃಂಗಾರದಿಂದ ವೈರಾಗ್ಯದ ಕಡೆಗೆ ಬಾಗುತ್ತಿದೆ ಎಂದುಕೊಂಡಿದ್ದರೂ ಪಾರ್ವತಿ ಇಷ್ಟರ ಮಟ್ಟಿಗೆ ಮನ್ನಸ್ಸಿನಾಳದಲ್ಲಿ ಬೇರುಬಿಟ್ಟಿದ್ದಾಳೆ ಎಂದು ಅವರಿಗೂ ತಿಳಿಯದಾಗಿತ್ತು. ಎರಡು ದಿನಗಳು ಶಾಲೆಗೂ ಹೋಗಲಿಲ್ಲ. ಮನೆ, ಜನರು ಯಾವುದೂ ಬೇಡವಾಯಿತು. ಗುಡ್ಡದಿಂದ ಗುಡ್ಡಕ್ಕೆ ಅಲೆದಾಟ ಆದರೂ ನೆನಪು ಮಾಸದು. ಮನಸ್ಸು ಸಮಾಧಾನಗೊಳ್ಳದು.

ಸಂಧ್ಯಾ ಸಮಯ. ಆಶಾನರು ಚಿಕ್ಕ ಬೆಟ್ಟವೊಂದರ ಮೇಲೆ ಕುಳಿತಿದ್ದರು. ಅವರನ್ನು ಹುಡುಕಿಕೊಂಡೇ ಬಂದಂತೆ ಆ ಸಮಯದಲ್ಲಿ ಗುರುಳು ಅಲ್ಲಿ ಕಾಣಿಸಿಕೊಂಡರು. ಗುರುಗಳನ್ನು ದೂರದಿಂದ ಕಂಡಾಗ ಕೃತಕ ನಗುವಿನಿಂದ ಸ್ವಾಗತಿಸಿದರೂ ಗುರುಗಳು ಹತ್ತಿರ ಬಂದಾಗ ಅವರ ಮುಂದೆ ಮನಸ್ಸನ್ನು ಬಿಚ್ಚಿಡಲಾಗಲಿಲ್ಲ. ದುಃಖದ ಕಟ್ಟೆಯೊಡೆಯಿತು. ಗಟ್ಟಿಯಾಗಿ ಅಳತೊಡಗಿದರು. ಪಾರ್ವತಿ ಸತ್ತ ಮೇಲೆ ಅವರು ಅತ್ತದ್ದು ಅದೇ ಮೊದಲು.

ಗುರುಗಳು ಶಿಷ್ಯನ ಹತ್ತಿರ ಬಂದರು. ಶಿಷ್ಯನ ಭುಜದ ಮೇಲೆ ಕೈಯಿಟ್ಟರು. ಗುರುಗಳ ಸ್ಪರ್ಶದಿಂದ ಒಂದು ವಿಶೇಷ ಅನುಭವ ಉಂಟಾಯಿತು. ಜ್ಞಾನ ತಪ್ಪಿದಂತಾಯಿತು. ಸುತ್ತಲೂ ಇದ್ದ ಮರ, ಗಿಡ, ಬೆಟ್ಟ, ಗುಡ್ಡಗಳೆಲ್ಲಾ ಸುತ್ತುತ್ತಿರುವಂತೆ ಕಾಣಿಸಿದವು. ವಿಶೇಷ ಶಕ್ತಿಯೊಂದು ತನ್ನ ಮೈಯಲ್ಲಿ ಸಂಚಾರವಾದ ಅನುಭವ. ಅದೇ ಅರ್ಧಬೋಧಾವಸ್ಥೆಯಲ್ಲಿ ಗುರುಗಳ ಕಾಲಿಗೆರಗಿದರು. ಗುರುಗಳು ಅಲ್ಲಿಂದ ತೆರಳಿದ್ದು ಕೂಡ ಆಶಾನರಿಗೆ ತಿಳಿಯಲಿಲ್ಲ.

ಜಯಿಸಬಹುದು

ಎರಡು ದಿನಗಳು ಕಳೆದ ನಂತರ ಮತ್ತೆ ಗುರುಗಳು ಶಿಷ್ಯನನ್ನು ಸಂಧಿಸಿದರು. ಇಬ್ಬರೂ ಮಾತನಾಡುತ್ತಾ ಕಡಲ ದಡಕ್ಕೆ ಬಂದು ಕುಳಿತರು. ಪಾರ್ವತಿಯ ಮರಣವನ್ನು ಕಂಡು ಆಶಾನರ ಮನಸ್ಸು ಹುಟ್ಟು-ಸಾವುಗಳ ಬಗೆಗೆ ಚಿಂತಿಸ ತೊಡಗಿತ್ತು. ಗುರುಗಳನ್ನು ಕೇಳಿದರು:

“ಸ್ವಾಮೀ, ಸಾಯುವುದೇ ಆದ ಮೇಲೆ ಮನುಷ್ಯ ಹುಟ್ಟುವುದೇಕೆ?”

“ಹುಟ್ಟಬೇಕು, ಆದರೆ ಸಾಯಲೇಬಾರದು ಎಂತಲೇ?”

“ಮುಪ್ಪಿನಲ್ಲಿ ಸತ್ತರೇನೋ ಸರಿ. ಆದರೆ ಯೌವನಕ್ಕೆ ಕಾಲಿರಿಸುವಷ್ಟರಲ್ಲೇ ಸತ್ತರೆ?”

“ಹಾಗಾದರೆ ಮುದುಕನಾದವನು ಸಾಯಲು ಸಿದ್ಧನಾಗಿರುತ್ತಾನೆ ಎಂದುಕೊಂಡಿದ್ದೀಯಾ? ಅದಿರಲಿ, ನೀನು ಮುದುಕನಾಗಲು ಇಷ್ಟಪಡುತ್ತೀಯಾ?”

“ಇಲ್ಲ ಸ್ವಾಮಿ.”

“ಸಾಯಲು ಇಷ್ಟ ಪಡುತ್ತೀಯಾ?”

“ಅದೂ ಇಲ್ಲ. ತಂದೆ-ತಾಯಿ-ಸ್ನೇಹಿತರು ಇವರನ್ನೆಲ್ಲಾ ಬಿಟ್ಟು ಹೋಗಲು ಇಷ್ಟವಿಲ್ಲ. ಇನ್ನೂ ಎಷ್ಟೋ ಕಾವ್ಯಗಳನ್ನು ಓದಬೇಕು. ಕಾಳಿದಾಸನ ಕಾವ್ಯಗಳನ್ನೆಲ್ಲಾ ಪೂರ್ತಿಯಾಗಿ ಓದಿಲ್ಲ. ಅವನ ಪದ್ಯದಂಥ ಒಂದು ಪದ್ಯವನ್ನಾದರೂ ನಾನು ರಚಿಸಬೇಡವೇ? ಹೇಗೆ ಸಾಯಲಿ? ನಿನ್ನೆ ನಾನು ಒಂದು ಕನಸು ಕಂಡೆ. ಅದರಲ್ಲಿ ನಾನು ಸತ್ತುಹೋಗಿದ್ದೆ.”

“ಮರಣಕ್ಕೆ ಹೆದರಿಕೊಂಡು ಇರುವವರೆಗೂ ನಿನಗೆ ಇಂಥ ಕನಸುಗಳು ಬೀಳುತ್ತಲೇ ಇರುತ್ತವೆ.”

“ಮರಣಕ್ಕೆ ಹೆದರದೆ ಇರುವುದು ಹೇಗೆ? ಮರಣವನ್ನು ಜಯಿಸುವುದು ಹೇಗೆ?”

“ಜಯಿಸಬಹುದು ಕುಮಾರ. ಜಯಿಸಬೇಕು ಎಂದು ಸಂಕಲ್ಪಿಸಿದವರು ಜಯಿಸಬಲ್ಲರು.”

 


ಮರಣವನ್ನು ಜಯಿಸಬಹುದು ಕುಮಾರ’.

“ಅದು ಹೇಗೆ ಗುರುಗಳೇ?”

“ಈ ಲೋಕದ ಜೀವಿಗಳೆಲ್ಲ ತಮ್ಮನ್ನು ನಟರೆಂದು ಭಾವಿಸಿಕೊಳ್ಳಬೇಕು. ಶಾಕುಂತಲ ನಾಟಕವನ್ನು ನೋಡಿದ್ದೀ ತಾನೆ? ಅಲ್ಲಿಯ ದುಷ್ಯಂತ ನಿಜವಾದ ದುಷ್ಯಂತನಲ್ಲ. ಶಕುಂತಲೆ ನಿಜವಾದ ಶಕುಂತಲೆಯಲ್ಲ. ಇಬ್ಬರೂ ಒಬ್ಬರಿಗೊಬ್ಬರು ಪರಿತಪಿಸುವುದಾಗಲೀ ಇಬ್ಬರ ಸಮಾಗಮವಾಗಲಿ ನಟರ ನಿಜ ಜೀವನಕ್ಕೂ ಸಂಬಂಧಿಸಿದುದಲ್ಲ. ಹಾಗೆಯೇ ಈ ಲೋಕದ ವ್ಯವಹಾರವೂ ಎಂದು ತಿಳಿಯಬೇಕು. ಇನ್ನೂ ಒಂದು ದೃಷ್ಟಾಂತವನ್ನು ಕೊಡಲೇ? ಸೂರ್ಯನ ಉದಯದಿಂದ ಈ ಲೋಕದ ಜನರು ನಾನಾ ಕಾರ್ಯಗಳಲ್ಲಿ ಉದ್ಯುಕ್ತರಾಗುತ್ತಾರೆ. ಆದರೆ ಅದರ ಯಾವ ಪರಿಣಾಮವೂ ಸೂರ್ಯನ ಮೇಲಾಗುವುದಿಲ್ಲ. ಹಾಗೆ ಜೀವನದ ಆಗು ಹೋಗುಗಳನ್ನು ದೂರದಲ್ಲಿ ನಿಂತು ನೋಡಬೇಕು. ನಮ್ಮ ಮನೋ ವಿಕಾರಗಳೇ ನಮ್ಮ ನಿಜವಾದ ಶತ್ರುಗಳು. ಅವುಗಳನ್ನು ಜಯಿಸಿದರೆ ನಾವು ದುಃಖದಿಂದ ಪಾರಾಗಬಹುದು.”

-ಹೀಗೇ ಗುರುಗಳು ಬಹಳ ಹೊತ್ತಿನವರೆಗೆ ಶಿಷ್ಯನೊಡನೆ ಮಾತನಾಡುತ್ತಾ ಕುಳಿತಿದ್ದರು. ಪಾರ್ವತಿಯ ಮರಣದ ದುಃಖದಿಂದ ಭಾರವಾಗಿದ್ದ ಕುಮಾರನ್‌ನ ಮನಸ್ಸು ಹಗುರವಾಗುತ್ತಾ ಹೋಯಿತು.

ಮುಂದುವರಿದ ವಿದ್ಯಾಭ್ಯಾಸ

ಡಾಕ್ಟ್‌ರ್ ಪಲ್ಪು ಈಳವ ಪಂಗಡದವರೇ ಆಗಿದ್ದು ಮೈಸೂರು ಸರ್ಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದರು. ಶಿಷ್ಯನಲ್ಲಿ ಬೀಜರೂಪದಲ್ಲಿದ್ದ ಮಹತ್ತನ್ನು ಗುರುತಿಸಿದ ನಾರಾಯಣಗುರುಗಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಶಾನರನ್ನು ಪಲ್ಪುರವರಲ್ಲಿ ಕಳುಹಿಸಿಕೊಟ್ಟರು. ಆಶಾನರು ತಮ್ಮ ಸಂಸ್ಕೃತ ಅಭ್ಯಾಸವನ್ನು ಮುಂದುವರೆಸಬೇಕಾಗಿತ್ತು. ಆದರೆ ಆ ಕಾಲದಲ್ಲಿ ಬ್ರಾಹ್ಮಣರಲ್ಲದೆ ಬೇರೆ ಯಾರಿಗೂ ಸಂಸ್ಕೃತ ಕಾಲೇಜಿನಲ್ಲಿ ಪ್ರವೇಶ ದೊರೆಯುತ್ತಿರಲಿಲ್ಲ. ಪಲ್ಪುರವರು ಆಗ ಮೈಸೂರಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್‌ರವರನ್ನು ಕಂಡು ಸಹಾಯ ಮಾಡಬೇಕೆಂದು ವಿನಂತಿಸಿಕೊಂಡರು. ದಿವಾನರ ಪ್ರಭಾವದಿಂದಾಗಿ ೧೮೯೬ ರಲ್ಲಿ ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಆಶಾನರಿಗೆ ಪ್ರವೇಶ ದೊರೆಯಿತು. ಸ್ವಲ್ಪ ದಿನಗಳು ಕಳೆದ ನಂತರ ಇವರ ಯೋಗ್ಯತೆಯನ್ನು ತಿಳಿದು ಸರ್ಕಾರ ಒಂದು ರೂಪಾಯಿ (ಈಗಿನ ೧೫-೨೦ ರೂಪಾಯಿಗಳ ಸಮಾನ) ವಿದ್ಯಾರ್ಥಿವೇತನವನ್ನು ನೀಡಿತು. ಆಗ ಆಶಾನರು ನ್ಯಾಯ ವಿದ್ವಾನ್ ಪರೀಕ್ಷೆಗೆ ಅಭ್ಯಾಸ ನಡೆಸತೊಡಗಿದ್ದರು.

ಈ ಮಧ್ಯೆ ಬಿಡುವಿನ ವೇಳೆಯಲ್ಲಿ ಡಾಕ್ಟರ್ ಪಲ್ಪುರವರ ಪತ್ನಿ ಆಶಾನರಿಗೆ ಇಂಗ್ಲೀಷನ್ನು ಹೇಳಿಕೊಡತೊಡಗಿದರು. ಪರೀಕ್ಷೆಯ ದಿನಗಳು ಸಮೀಪಿಸುವವರೆಗೂ ಅಧ್ಯಯನ ನಿರಾತಂಕವಾಗಿ ಸಾಗಿತು. ಆದರೆ ಪರೀಕ್ಷೆಗೆ ಕುಳಿತುಕೊಳ್ಳುವ ಮೊದಲೇ ಬೆಂಗಳೂರಿನಲ್ಲಿ ಎಲ್ಲಾ ಕಡೆಗೂ ಪ್ಲೇಗ್ ಹರಡಿದ್ದ ರಿಂದ ಬೆಂಗಳೂರನ್ನು ಬಿಟ್ಟು ಊರಿಗೆ ಹಿಂದಿರುಗ ಬೇಕಾಯಿತು. ಪಲ್ಪು ಮುಂದಿನ ವ್ಯಾಸಂಗಕ್ಕೆ ಆಶಾನರನ್ನು ಕಲ್ಕತ್ತಕ್ಕೆ ಕಳುಹಿಸಿಕೊಟ್ಟರು. ಪಲ್ಪು, ತಾವು ವಿದೇಶಕ್ಕೆ ಹೋಗುವಾಗ ತಮ್ಮ ಸ್ನೇಹಿತರಾಗಿದ್ದ ಎಮ್. ಸಿ. ನಂಜುಡರಾವ್ ಅವರಿಗೆ ಆಶಾನರಿಗೆ ಪ್ರತಿ ತಿಂಗಳು ೧೦ ರೂಪಾಯಿಗಳನ್ನು ಕಳುಹಿಸಿಕೊಡುವಂತೆ ಹೇಳಿದ್ದರು.

ಆಶಾನರು ಕಲ್ಕತ್ತೆಗೆ ತೆರಳಿ ಅಲ್ಲಿನ ಸಂಸ್ಕೃತ ಕಾಲೇಜಿನಲ್ಲಿ ಅಭ್ಯಾಸ ಮಾಡತೊಡಗಿದರು. ಅವರು ವಾಸ ಮಾಡುತ್ತಿದ್ದುದು ಒಬ್ಬ ಬಂಗಾಳಿ ಬ್ರಾಹ್ಮಣ ಕುಟುಂಬದೊಡನೆ. ಅಲ್ಲಿ ನ್ಯಾಯಶಾಸ್ತ್ರ ಅದರ ಜೊತೆಗೆ ದರ್ಶನ, ಕಾವ್ಯ, ವ್ಯಾಕರಣ ಮೊದಲಾದ ವಿಷಯಗಳ ಅಭ್ಯಾಸ ಮಾಡಿದರು. ಸ್ನೇಹಿತರೆಲ್ಲಾ ಇವರನ್ನು ಪುಸ್ತಕದ ಹುಳು ಎಂದು ಕರೆಯುತ್ತಿದ್ದರು. ಇವರ ಗುರು ಕಾಮಾಖ್ಯನಾಥ ತರ್ಕ ವಾಗೀಶರು ಇವರನ್ನು ತುಂಬಾ ಪ್ರೀತಿಯಿಂದ ನೋಡುತ್ತಿದ್ದರು. ಯಾವ ಸಭೆಯಲ್ಲಿ ಭಾಗವಹಿಸಬೇಕಾಗಿದ್ದರೂ ಶಿಷ್ಯನನ್ನು ಕರೆದುಕೊಂಡು ಹೋಗುತ್ತಿದ್ದರು. ಇಂಗ್ಲಿಷನ್ನು ಮೊದಲೇ ಸ್ವಲ್ಪ ಸ್ವಲ್ಪ ಅಭ್ಯಾಸ ಮಾಡಿದ್ದುದ್ದನ್ನು ಆಶಾನ್ ಕಲ್ಕತ್ತೆಯಲ್ಲಿ ಸ್ವಪ್ರಯತ್ನದಿಂದ ಚೆನ್ನಾಗಿ ರೂಢಿಸಿಕೊಂಡರು. ವ್ಯವಹಾರಕ್ಕೆ ಬೇಕಾದಷ್ಟು ಬಂಗಾಳಿಯನ್ನು ಕಲಿತರು. ರವೀಂದ್ರನಾಥ ಠಾಕೂರರ ಕಾವ್ಯ ಅವರ ಮೇಲೆ ಪ್ರಭಾವ ಬೀರಿತು. ನಂಜುಂಡರಾವ್ ತಾವು ಕಳುಹಿಸಬೇಕಾಗಿದ್ದ ಹತ್ತು ರೂಪಾಯಿಗಳ ಜೊತೆಗೆ, ಆಶಾನರಲ್ಲಿ ತಮಗಿದ್ದ ಪ್ರೀತಿಯಿಂದಾಗಿ, ಮೂರು ರೂಪಾಯಿಗಳನ್ನು ಸೇರಿಸಿ ಹದಿಮೂರು ರೂಪಾಯಿಗಳನ್ನು ಕಳುಹಿಸಿಕೊಡುತ್ತಿದ್ದರು. ಮಿತವ್ಯಯಿಯಾದ ಆಶಾನರು ಅಷ್ಟನ್ನೂ ಖರ್ಚುಮಾಡದೆ ಅದರಲ್ಲಿ ಪ್ರತೀ ತಿಂಗಳೂ ಸ್ವಲ್ಪ ಹಣವನ್ನು ಉಳಿಸಿ ಕೂಡಿಡುತ್ತಿದ್ದರು. ಈ ಉಳಿತಾಯ, ಕಲ್ಕತ್ತೆಯನ್ನು ಇದ್ದಕ್ಕಿದ್ದಂತೆ ಬಿಡಬೇಕಾಗಿ ಬಂದಾಗ ಬಹಳ ಉಪಯೋಗಕ್ಕೆ ಬಂದಿತು.

ಕಲ್ಕತ್ತೆಯಲ್ಲೂ ಬೆಂಗಳೂರಿನ ಪರಿಸ್ಥಿತಿಯೇ ಬಂದೊದಗಿತು. ಎಲ್ಲೆಲ್ಲೂ ಪ್ಲೇಗು ಹರಡಿತು. ಅಲ್ಲಿಂದಲೂ ಪರೀಕ್ಷೆಗೆ ಕುಳಿತುಕೊಳ್ಳುವ ಮೊದಲು ತಾಯಿ ನಾಡಿಗೆ ಹಿಂದಿರುಗ ಬೇಕಾಯಿತು. ಹಣ ಉಳಿಸಿದ್ದರಿಂದ ಇದ್ದಕ್ಕಿದ್ದಂತೆ ಹೊರಡ ಬೇಕಾದರೂ ಹಣಕ್ಕೇನೂ ತೊಂದರೆಯಾಗಲಿಲ್ಲ. ಆಶಾನರಿಗೆ ಆಶ್ರಯ ನೀಡಿದ್ದ ಮನೆಯವರಿಗೂ ಆಶಾನರನ್ನು ಕಳುಹಿಸಲು ಸ್ಟೇಷನ್ನಿಗೆ ಬಂದಿದ್ದರು. ಸ್ಟೇಷನ್ನಿನಲ್ಲಿ ಕಣ್ಣೀರಿನೊಡನೆ ಆಶಾನರನ್ನು ಬೀಳ್ಕೊಟ್ಟರು.

ಜ್ಞಾನಾರ್ಜನೆಗಾಗಿ ಕಲ್ಕತ್ತೆಗೆ ಹೋದ ಆಶಾನ್ ಕರ್ಮಯೋಗಿಯಾಗಿ ಹಿಂದಿರುಗಿದರು.

ಪಲ್ಪುರವರು ತಮ್ಮ ಕುಟುಂಬವನ್ನು ಕರೆದುಕೊಂಡು ಬೆಂಗಳೂರಿಗೆ ಹೋದ ಮೇಲೆ ಆಶಾನರು ಅಲ್ಲಿಂದ ಗುರುಗಳ ಆದೇಶದಂತೆ ಅರಿವಿ ಪುರಕ್ಕೆ ಬಂದರು. ಅಲ್ಲಿ ಸುಬ್ರಹ್ಮಣ್ಯ ಕ್ಷೇತ್ರದ ಮೇಲ್ವಿಚಾರಣೆಯನ್ನು ವಹಿಸಿಕೊಂಡು ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಹೇಳಿಕೊಡುತ್ತಾ ಎರಡು ವರ್ಷ ಕಾಲಕಳೆದರು. ಈ ಕಾಲದಲ್ಲೇ ಅವರು ‘ಶಿವಸ್ತೋತ್ರಮಾಲೆ’ ಯನ್ನು ರಚಿಸಿದ್ದು.

ಗುರುಗಳ ಸಾನಿಧ್ಯದಲ್ಲೇ ಇದ್ದುದರಿಂದ ಆಶಾನರು ಜನರ ಬಾಯಲ್ಲಿ ‘ಚಿನ್ನಸ್ವಾಮಿ’ಯಾದರು.

ಹೊಸ ಕ್ಷೇತ್ರ

೧೯೦೨ ರಲ್ಲಿ ಆಶಾನರಿಗೆ ಮೂವತ್ತು ವರ್ಷಗಳಾಗಿದ್ದಾಗ ಶ್ರೀ ನಾರಾಯಣ ಧರ್ಮಪರಿಪಾಲನ ಸಭೆ ಪಲ್ಪುರಿಂದ ಸ್ಥಾಪಿತವಾಯಿತು. ಇದರ ಉದ್ದೇಶ, ಆ ಕಾಲದಲ್ಲಿ ಸಾಮಾಜಿಕ ವಾಗಿ ಬಹಳ ಕೀಳಾಗಿ ಕಾಣಲ್ಪಡುತ್ತಿದ್ದ ಈಳವ ಜಾತಿಗೆ ಸಾಮಾಜಿಕ, ರಾಜಕೀಯ ಮೊದಲಾದ ಎಲ್ಲಾ ರಂಗಗಳಲ್ಲೂ ಸರಿಸಮಾನತೆ ದೊರೆಯಬೇಕು, ಈಳವರಲ್ಲಿ ನವಜಾಗೃತಿ ಉಂಟುಮಾಡಿ ಅವರು ತಮಗೆ ಆಗುತ್ತಿರುವ ಅನ್ಯಾಯವನ್ನು ದಿಟ್ಟದೆಯಿಂದ ಎದುರಿಸಬೇಕು ಎನ್ನುವುದಾಗಿತ್ತು. ನಾರಾಯಣ ಗುರುಗಳು ‘ಚಿನ್ನಸ್ವಾಮಿ’ಯನ್ನು (ಕುಮಾರನ್ ಆಶಾನ್) ಸಂಘದ ಕಾರ್ಯದರ್ಶಿಯನ್ನಾಗಿ ನಿಯಮಿಸಿದರು. ಈ ಸಂಘದ ಉದ್ದೇಶಗಳ ಪ್ರಚಾರಕ್ಕಾಗಿ ಅದರ ಆಶ್ರಮದಲ್ಲಿ ‘ವಿವೇಕೋದಯಂ’ ಎನ್ನುವ ಪತ್ರಿಕೆಯನ್ನು ಆರಂಭಿಸ ಲಾಯಿತು. ಸಂಘಸ್ಥಾಪಿತವಾದ ಎರಡು ವರ್ಷಗಳ ಅನಂತರ ಜನ್ಮ ತಾಳಿದ ‘ವಿವೇಕೋದಯಂ’ ಪತ್ರಿಕೆಯ ಸಂಪಾದಕತ್ವ ವನ್ನೂ ಚಿನ್ನಸ್ವಾಮಿಯೇ ವಹಿಸಬೇಕಾಯಿತು.

ಕೆಲವು ಕವನಗಳು

೧೯೦೮ರಲ್ಲಿ ಎರ್ನಾಕುಲಂನಲ್ಲಿ ಶಿವಕ್ಷೇತ್ರ ಉದ್ಘಾಟನೆಗಾಗಿ ನಾರಾಯಣ ಗುರುಗಳು ತಮ್ಮ ಕೆಲವು ಜನ ಶಿಷ್ಯರೊಡನೆ ಹೊರಟರು. ಅವರಲ್ಲಿ ಆಶಾನರೂ ಇದ್ದರು. ಎರ್ನಾಕುಲಂ ತಲುಪಿದಾಗ ಅಲ್ಲಿ ಕಾಲಾರ ವ್ಯಾಪಿಸಿತ್ತು. ಅದು ಗುರುಗಳಿಗೂ ತಾಕಿತು. ಅವರ ಒಬ್ಬ ಶಿಷ್ಯನೂ ಈ ರೋಗದಿಂದ ಜೀವ ತೆರಬೇಕಾಯಿತು. ಇದನ್ನು ಕಂಡ ಇತರ ಶಿಷ್ಯರ ದಿಕ್ಕೆಟ್ಟಂತಾದರು. ಗುರುಗಳು ರೋಗಪೀಡಿತ ರಾದುದನ್ನು ಕಂಡು ಆಶಾನರಿಗೆ ಅತೀವ ದುಃಖವಾಯಿತು.

ಗುರುಗಳನ್ನು ಅಲ್ಲಿಯೇ ಇದ್ದ ಪಾಲಘಾಟ್ ಕೃಷ್ಣನ್ ಆಸ್ಪತ್ರೆಗೆ ಸೇರಿಸಿದರು. ತೀರಾ ಕಾಯಿಲೆಯಲ್ಲಿದ್ದ ಗುರುಗಳಿಗಾಗಿ ಆಶಾನರ  ಕವಿಹೃದಯ ಮರುಗಿತು. ಆಗ ‘ವೀಣಪೂವು’ (ಬಿದ್ದ ಹೂವು) ಎಂಬ ಕವನವನ್ನು ರಚಿಸಿದರು ಎಂದು ಹೇಳುತ್ತಾರೆ. ಇದು ೪೧ ಪದ್ಯಗಳ ಖಂಡಕಾವ್ಯ. ಇದೊಂದು ಬಹು ಸುಂದರ ಕವನ. ಗುರುಗಳು ನಿಧಾನವಾಗಿ ಚೇತರಿಸಿಕೊಂಡದ್ದು ಶಿಷ್ಯನಿಗೆ ಅಪಾರ ಆನಂದವನ್ನು ಉಂಟುಮಾಡಿತು.

ಆಶಾನರ ಕೃತಿಗಳು

ಆಶಾನರು ಮಹಾ ಕಾವ್ಯವೊಂದನ್ನು ರಚಿಸಿ ಮಹಾ ಕವಿ ಪಟ್ಟಕ್ಕೆ ಏರಿದವರಲ್ಲ. ತಮ್ಮ ಅಷ್ಟ ಖಂಡಕಾವ್ಯಗಳಿಂದ ಮಹಾಕವಿ ಪಟ್ಟವನ್ನು ಗಳಿಸಿದರು. ‘ವೀಣಪೂವು’, ‘ನಳಿನಿ’, ‘ಲೀಲಾ’, ‘ಚಿಂತಾವಿಷ್ಟಯಾಯ ಸೀತ’, ‘ಪ್ರರೋದನಂ’, ‘ಚಂಡಾಲ ಭಿಕ್ಷುಕಿ’, ‘ದುರವಸ್ಥ’, ‘ಕರುಣಾ’-ಇವು ಆಶಾನರ ಖಂಡಕಾವ್ಯಗಳು. ಇಪ್ಪತ್ತಮೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವವರಾದರೂ ಆಶಾನರು ಪ್ರಸಿದ್ಧರಾಗಿರುವುದು ಅವರ ಖಂಡಕಾವ್ಯಗಳಿಂದ ಮತ್ತು ಬಾಲರಾಮಾಯಣದಿಂದ.

ಕುಮಾರನ್ ಆಶಾನರು ಖಂಡಕಾವ್ಯಗಳಿಂದಲೇ ಪ್ರಸಿದ್ಧಿ ಪಡೆಯುವುದಕ್ಕೆ ನಾಂದಿಹಾಕಿಕೊಟ್ಟ ಕಾವ್ಯ ‘ವೀಣಪೂವು’.

ನಳಿನಿ

ಆಶಾನ್‌ರವರು ಪ್ರೇಮಿಗಳ ಕಷ್ಟಗಳನ್ನು ಕುರಿತು ಇನ್ನೆರಡು ಕವನಗಳನ್ನು ಬರೆದಿದ್ದಾರೆ. ‘ನಳಿನಿ’ ಎಂಬುದು ಒಂದು; ‘ಲೀಲ’ ಇನ್ನೊಂದು. ‘ನಳಿನಿ’ಯಲ್ಲಿ ಒಬ್ಬ ಯುವಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದವನು ಕ್ರಮೇಣ ಆಧ್ಯಾತ್ಮದ ಕಡೆ ತಿರುಗುತ್ತಾನೆ. ‘ನಳಿನಿ’ಯಲ್ಲಿ ದೇಹ ಸತ್ತರೂ ಆತ್ಮಕ್ಕೆ ಸಾವಿಲ್ಲ ಎಂಬ ನಂಬಿಕೆ ರೂಪ ತಾಳಿದೆ.

ವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಿದ ಸ್ತ್ರೀ ಪಾತ್ರಗಳನ್ನೇ ಸಾಧಾರಣವಾಗಿ ನಾವು ಆಶಾನರ ಕಾವ್ಯಗಳಲ್ಲಿ ಕಾಣುವುದು. ‘ಚಿಂತಾವಿಶಿಷ್ಟಯಾಯ ಸೀತ’ (ಚಿಂತಾವಿಶಿಷ್ಟಳಾದ ಸೀತೆ) ಎಂಬ ಕಾವ್ಯದಲ್ಲಿ ಬರುವ ಪಾತ್ರ ಸೀತೆ ಒಬ್ಬಳೇ. ಒಂದು ಸಂಜೆ ಆಶ್ರಮದ ಹೊರಗೆ ಹೂ ಬನದಲ್ಲಿ ಕುಳಿತಾಗ ಸೀತೆಗೆ ತನ್ನ ಹಿಂದಿನ ಜೀವನವೆಲ್ಲಾ ನೆನಪಾಗುತ್ತದೆ. ಹೀಗೆ ತನ್ನ ಆಗಿನ ಸ್ಥಿತಿಯಿಂದ ಹಿಡಿದು ರಾಮನ ಜನನದವರೆಗೆ ಅವಳ ನೆನಪು ಹಿಂದು ಹಿಂದಕ್ಕೆ ಹೋಗುತ್ತದೆ. ಒಂದು ನವೀನ ರೀತಿಯಲ್ಲಿ ಆಶಾನರು ಸಿಂಹಾವಲೋಕನ ಕ್ರಮದಿಂದ ರಾಮಾಯಣದ ಕಥೆಯನ್ನು ಕಾಣುವಂತೆ ಪ್ರಭಾವಯುತವಾಗಿ ಈ ಕಾವ್ಯದಲ್ಲಿ ರಚಿಸಿದ್ದಾರೆ. ಕಥೆಯ ಪಾತ್ರಗಳ ಚಿತ್ರಣದೊಂದಿಗೇ ಅವುಗಳ ಚಾರಿತ್ರ್ಯ ವಿಮರ್ಶೆಯನ್ನೂ ತುಂಬಾ ಪರಿಣಾಮಕಾರಿಯಾಗಿ ನಡೆಸಿಕೊಂಡು ಹೋಗಿದ್ದಾರೆ.

ಎ.ಆರ್.ರಾಜಾರಾಜವರ್ಮರು ಮಲಯಾಳ ಸಾಹಿತ್ಯದ ಪಂಡಿತವರೇಣ್ಯರು. ಸಾಹಿತ್ಯವನ್ನು ಕುರಿತ ಸಂಶೋಧನಾತ್ಮಕ ಗ್ರಂಥಗಳನ್ನೂ ಇತರ ಪ್ರೌಢ ಗ್ರಂಥಗಳನ್ನೂ ರಚಿಸಿದವರು. ಅವರು ನ್ಯೂಮೋನಿಯಾ ರೋಗದಿಂದ ಗತಿಸಿದಾಗ ಆಶಾನರು ದುಃಖ ಭಾರದಿಂದ ರಚಿಸಿದ ಕಾವ್ಯ ‘ಪ್ರರೋದನಂ’. ಆಶಾನರು ತಮ್ಮ ತಾಯಿ ತೀರಿಕೊಂಡಾಗಲೂ ‘ವರುಅನುತಾಪಂ’ (ಒಂದು ಅನುತಾಪ) ಎಂಬ ಶೋಕಗೀತೆಯನ್ನು ರಚಿಸಿದ್ದರು.

ಇದರಲ್ಲಿ ಜೀವನಮರಣಗಳನ್ನು ಕುರಿತು ಚಿಂತಿಸಿದ್ದಾರೆ. ಮರಣದ ರಹಸ್ಯವೇ ಜೀವನದ ಬಹು ದೊಡ್ಡ ಪ್ರಶ್ನೆ. ಇದರ ಅರ್ಥವನ್ನು ಕಂಡು ಹಿಡಿಯಲು ಸಾಧ್ಯವೇ ಎಂದು ಬಹುವಾಗಿ ಚಿಂತಿಸಿ ಕಡೆಗೆ ‘ಪ್ರೇಮ ಜೀವನದಿಂದ ಲಭಿಸುವ ಮಹತ್ತಾದ ಅಮೃತ. ವಿಶ್ವದೊಂದಿಗೆ ಲೀನಗೊಳ್ಳುವ ಪರಮ ಮಾರ್ಗ ಇದು’ ಎಂದು ಕವಿ ಸಮಾಧಾನ ಪಟ್ಟುಕೊಳ್ಳುವಲ್ಲಿಗೆ ಕಾವ್ಯ ಮುಗಿಯುತ್ತದೆ.

ಚಂಡಾಲ ಭಿಕ್ಷುಕಿ

ಬುದ್ಧನ ಶಿಷ್ಯ ಆನಂದ. ಸಂಚಾರಕ್ಕೆ ಹೋಗಿದ್ದ ಆನಂದನಿಗೆ ಸಹಿಸಲಾರದಷ್ಟು ಬಾಯಾರಿಕೆಯಾಗುತ್ತದೆ. ಅಲ್ಲಿಯೇ ಒಂದು ಬಾವಿಯ ಹತ್ತಿರ ಚಂಡಾಲ ಕನ್ನಿಕೆ ಒಬ್ಬಳು ನೀರೆಳೆಯುತ್ತಿರುತ್ತಾಳೆ. ಆನಂದ ಕುಡಿಯಲು ನೀರು ಕೇಳುತ್ತಾನೆ. ಚಂಡಾಲ ಕನ್ನಿಕೆ ಅಂಜುತ್ತಾ ನಿಂತಿದ್ದಾಗ, “ಸೋದರೀ, ನಾನು ನಿನ್ನ ಜಾತಿಯನ್ನು ಕೇಳಲಿಲ್ಲ. ಬಾಯಾರಿಕೆಯಿಂದ ಗಂಟಲಾರಿದೆ. ನೀನು ಭಯಪಡಬೇಡ, ಬೇಸರಪಡಬೇಡ, ನನಗೆ ನೀರನ್ನು ನೀಡು” ಎಂದ. ಅವಳು ನೀಡಿದ ನೀರನ್ನು ಕುಡಿದು ಆನಂದ ಅತ್ತ ಹೊರಡುತ್ತಾನೆ. ಸ್ವಲ್ಪಹೊತ್ತು ಕಳೆದ ನಂತರ ಆನಂದನ ಹೆಜ್ಜೆಯನ್ನು ಅನುಸರಿಸಿಕೊಂಡು ಹೋಗುತ್ತಾಳೆ. ಕೊನೆಗೆ ಬುದ್ಧ ಭಗವಾನನ ಸನ್ನಿಧಿಯನ್ನು ತಲುಪಿ ಅವಳು ಬೌದ್ಧ ಭಿಕ್ಷುಕಿಯಾಗುವುದು ಈ ಕಾವ್ಯದ ಕಥಾವಸ್ತು.

ದುರವಸ್ಥ

ಇಡೀ ಕೇರಳದ ಸಮಾಜದಲ್ಲೇ ಕೆಲವು ಕಾಲ ಗೊಂದಲವನ್ನುಂಟುಮಾಡಿದ ಕೃತಿ ’ದುರವಸ್ಥ’. ಈ ಕಾವ್ಯದಿಂದ ಬಹುಮುಖ ವಿರೋಧವನ್ನು ಆಶಾನರು ಎದುರಿಸ ಬೇಕಾಯಿತು.

೧೯೨೧ ರಲ್ಲಿ ಕೇರಳದಲ್ಲಿ ನಡೆದ ಮಾಪಿಳ್ಳೆಗಳ ಲೂಟಿಯಿಂದ ಕೇರಳದ ಜನತೆ ದಾರುಣವಾದ ಪರಿಸ್ಥಿತಿಯನ್ನು ಅನುಭವಿಸಬೇಕಾಯಿತು. ಆ ಸಂದರ್ಭದ ಒಂದು ಘಟನೆಯನ್ನೆತ್ತಿಕೊಂಡು ಇದನ್ನು ರಚಿಸಿದ್ದಾರೆ.

ನಂಬೂದಿರಿ ಬ್ರಾಹ್ಮಣ ಕನ್ಯೆ ಸಾವಿತ್ರಿ. ಈ ದಂಗೆಯಲ್ಲಿ ಎಲ್ಲರನ್ನೂ ಕಳೆದುಕೊಂಡು ಅಸ್ಪೃಶ್ಯನಾದ ಚಾತ್ತನ ಗುಡಿಸಲಿನಲ್ಲಿ ಆಶ್ರಯವನ್ನು ಪಡೆಯುತ್ತಾಳೆ. ಅಲ್ಲಿಂದ ಮುಂದೆ ಎಲ್ಲಿ, ಹೇಗೆ ತನ್ನ ಜೀವನ ಎಂದು ಚಿಂತಿಸುವಾಗ ಅಂದಿನ ಸಮಾಜದ ಕಟು ಸತ್ಯ ಅವಳಿಗೆ ತಿಳಿಯುತ್ತದೆ. ಚಾತ್ತನ ಗುಡಿಸಲಿನಲ್ಲಿ ವಾಸವಾ ಗಿದ್ದ ತನ್ನನ್ನು ಯಾವ ಹಿಂದು ಪಂಗಡವಾಗಲಿ ಒಳಗೆ ಸೇರಿಸು ವುದಿಲ್ಲ. ಹೆಣ್ಣಾದ ನಾನು ಯಾವ ಆಶ್ರಯವೂ ಇಲ್ಲದೆ ಹೊರಗೆ ದುಡಿದು ಜೀವನ ಸಾಗಿಸುವುದೂ ಕಷ್ಟ ಎನಿಸುತ್ತದೆ.

ಅದೇ ಸಂದರ್ಭದಲ್ಲಿ ತನಗೆ ಆಶ್ರಯ ಕೊಟ್ಟಿದ್ದ ಚಾತ್ತನನ್ನು ಕುರಿತು ಚಿಂತಿಸುತ್ತಾಳೆ. ಸುಂದರನೂ ಹೃದಯ ಸಂಪನ್ನನೂ ದೃಢಕಾಯನೂ ಆದ ಚಾತ್ತ, ಅವಳ ಮನಸ್ಸನ್ನು ಆಕರ್ಷಿಸುತ್ತಾನೆ. ಸತ್ಯ, ಪ್ರೇಮ, ಶುದ್ಧ ಚಾರಿತ್ರ್ಯ ಎನ್ನುವುದು ಉತ್ತಮ ಜಾತಿಯ ಸ್ವತ್ತು ಮಾತ್ರವಲ್ಲ; ಎಲ್ಲ ಜಾತಿಯವರಲ್ಲೂ ಕಾಣಬಹುದು. ದೇವರ ದೃಷ್ಟಿಯಲ್ಲಿ ಯಾವ ಜಾತಿ ಬೇಧವೂ ಇಲ್ಲ. ಮನುಷ್ಯರೇಕೆ ತಮ್ಮತಮ್ಮಲ್ಲಿ ಹೀಗೆ ಮೇಲು ಕೀಳು ಎಂದು ಭಾವಿಸುತ್ತಾರೆ? ಇದರಲ್ಲಿ ಯಾವ ಅರ್ಥವೂ ಸತ್ವವೂ ಇಲ್ಲ ಎನಿಸಿ ಸಾವಿತ್ರಿ ಚಾತ್ತನನ್ನು ಅಗ್ನಿಸಾಕ್ಷಿಯಾಗಿ ಮದುವೆ ಯಾಗುತ್ತಾಳೆ. ಈ ಕೃತಿಯ ರಚನೆಯಿಂದ ಆಶಾನರು ಕ್ರಾಂತಿ ಕಾರ ಕವಿ ಎನಿಸಿಕೊಂಡರು.

ಕರುಣ

ಆಶಾನರ ಕೊನೆಯ ಕಾವ್ಯ. ಉತ್ತರ ಮಧುರೆಯ ರಾಜಬೀದಿಯಲ್ಲಿ ಒಬ್ಬಳು ವೇಶ್ಯೆ-ವಾಸವದತ್ತೆ. ಬುದ್ಧನ ಶಿಷ್ಯನಾದ ಉಪಗುಪ್ತನನ್ನು ತನ್ನ ಆರಾಧಕನನ್ನಾಗಿ ಮಾಡಿ ಕೊಳ್ಳುವ ಆಸೆ. ಸಖಿಯ ಮೂಲಕ ತನ್ನ ಬಯಕೆಯನ್ನು ತಿಳಿಸುತ್ತಾಳೆ.

“ಅದಕ್ಕಿನ್ನೂ ಕಾಲ ಬಂದಿಲ್ಲ.” ಎಂದಷ್ಟೆ ಆತ ಹೇಳಿ ಕಳಿಸುತ್ತಾನೆ. ನಾಲ್ಕು ತಿಂಗಳುಗಳು ಕಳೆಯುತ್ತದೆ. ವಾಸವದತ್ತೆ ತನ್ನ ಮನೆಯಲ್ಲೇ ಒಬ್ಬ ಹಣವಂತನಿಂದ ಮತ್ತೊಬ್ಬ ಹಣವಂತನ ಕೊಲೆ ಮಾಡಿಸುತ್ತಾಳೆ. ಈ ಕೊಲೆಯ  ಪ್ರಕರಣದಲ್ಲಿ ವಿಚಾರಣೆ ನಡೆಸಿದ ರಾಜ ವಾಸವದತ್ತೆಯನ್ನು ಕೊಲ್ಲಲು ಆಜ್ಞಾಪಿಸುತ್ತಾನೆ. ಸ್ಮಶಾನದಲ್ಲಿ ರಾಜಭಟರು ಅವಳ ಕೆಲವು ಅಂಗಗಳನ್ನು ಕತ್ತರಿಸಿ ಅವಳನ್ನು ಸಾಯಲು ಬಿಟ್ಟು ಹೋಗುತ್ತಾರೆ. ಅವಳ ಸಖಿ ಅಳುತ್ತಾ ಕುಳಿತಿರುತ್ತಾಳೆ. ವಾಸವದತ್ತೆಯ ಪ್ರಾಣ ಇನ್ನೇನು ಹೋಗುವುದರಲ್ಲಿರುತ್ತದೆ. ಆಗ ಉಪಗುಪ್ತ ಆ ಮಾರ್ಗವಾಗಿ ಬರುತ್ತಾನೆ. ಅವಳಿಗೆ ಶಾಂತಿ ಮಂತ್ರವನ್ನು ಉಪದೇಶಿಸುತ್ತಾನೆ. ಅವನ ಉಪದೇಶ ವಾಣಿಯನ್ನು ಕೇಳುತ್ತಾ ಅವಳು ನಿರ್ವಾಣ ಹೊಂದುವುದು ಈ ಕಾವ್ಯದ ಕಥಾವಸ್ತು.

ಮದುವೆ

ಕುಮಾರು ರೈಟರ್ ಎಂಬುವರೊಬ್ಬರು ನಾರಾಯಣ ಧರ್ಮಪರಿಪಾಲನಾ ಸಭೆಯ ಉಪಾಧ್ಯಕ್ಷರಾಗಿದ್ದರು. ಅವರ ಮತ್ತು ಅವರ ಮನೆಯವರೆಲ್ಲರ ಪರಿಚಯ ಆಶಾನ್ ಅವರಿಗಾಯಿತು. ರೈಟರ್‌ರ ಎರಡನೆಯ ಮಗಳು ಭಾನುಮತಿ ಅಮ್ಮನಿಗೆ ಹದಿನೈದು ವರ್ಷ. ಆಕೆಗೆ ಆಶಾನ್ ಸಂಸ್ಕೃತ ಹೇಳಿ ಕೊಡಬೇಕೆಂದು ರೈಟರ್ ಕೇಳಿಕೊಂಡರು. ಕ್ರಮೇಣ

ಭಾನುಮತಿಅಮ್ಮ ಮತ್ತು ಆಶಾನ್ ಒಬ್ಬರನ್ನೊಬ್ಬರು ಪ್ರೀತಿಸಿದರು. ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದರು. ‘ಚಿನ್ನಸ್ವಾಮಿ’ ಎಂದು ಕರೆಸಿಕೊಳ್ಳುತ್ತಿದ್ದ ಆಶಾನ್ ಮದುವೆ ಆಗುತ್ತಾರೆ ಎಂಬುದು ಅನೇಕರಿಗೆ ಒಪ್ಪಿಗೆಯಾಗಲಿಲ್ಲ. ಆಶಾನ್ ಅನೇಕರ ನಿಂದೆಗಳನ್ನು ಸಹಿಸಬೇಕಾಯಿತು.

ಹದಿನೇಳು ವರ್ಷದ ಭಾನುಮತಿಅಮ್ಮನನ್ನು ನಲವತ್ತೈದು ವರ್ಷದ ಆಶಾನರಿಗೆ ಮದುವೆ ಮಾಡಿಕೊಡಲು ಹುಡುಗಿಯ ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಆದರೆ ಭಾನುಮತಿ ಅಮ್ಮನ ಒಲವು ಸಂಪೂರ್ಣವಾಗಿ ಆಶಾನರ ಕಡೆಗಿದೆ ಎನ್ನುವ ವಿಷಯ ಮನೆಯವರಿಗೆಲ್ಲರಿಗೂ ತಿಳಿದಿತ್ತು. ಅವರ ಮೊದಲ ಮಗಳೂ ತೀರಿಕೊಂಡಿದ್ದಳು. ಆ ದುಃಖ ಇನ್ನೂ ಹಸಿಯಾಗಿಯೇ ಉಳಿದಿತ್ತು. ಆ ಮಗಳ ಮನಸ್ಸನ್ನು ನೋಯಿಸುವುದು ತಂದೆತಾಯಿಗಳಿಗೆ ಇಷ್ಟವಾಗಲಿಲ್ಲ. ಮನಸ್ಸಿಲ್ಲದ ಮನಸ್ಸಿನಲ್ಲಿ ವಿವಾಹ ಮಾಡಿಕೊಡಲು ಒಪ್ಪಿದರು.

೧೯೧೮ನೇ ಇಸವಿಯಲ್ಲಿ ಯಾರು ಇಷ್ಟಪಡಲಿ, ಪಡದಿರಲಿ ಭಾನುಮತಿಅಮ್ಮ ಮತ್ತು ಆಶಾನರು ಒಬ್ಬರನೊಬ್ಬರು ಮೆಚ್ಚಿ ಪತಿಪತ್ನಿಯರಾದರು.

ವಿರೋಧ

ಯಾವ ಈಳವ ಸಮಾಜದ ಪ್ರಗತಿಗಾಗಿ ಹಗಲು ರಾತ್ರಿ ದುಡಿದು ಅವರಿಗೆ ಸೌಕರ್ಯಗಳನ್ನೊದಗಿಸಿದರೋ ಅದೇ ಈಳವ ಸಮಾಜದಲ್ಲಿ ಹಲವರಿಗೆ ಅವರ ಅಭ್ಯುದಯವನ್ನು ಕಂಡು ಸಹಿಸದಾಯಿತು. ನಾರಾಯಣಗುರು ಧರ್ಮಪಾಲನ ಸಭೆಯ ಉಗಮದಿಂದ ಅದು ವಿಸ್ತಾರಗೊಂಡಂತೆ ಆಶಾನರ ಕೀರ್ತಿ ಹಬ್ಬುತ್ತಾ ಹೋಯಿತು.

 

‘ಒಳ್ಳೆಯದು, ನಿಮ್ಮ ಮಗಳು-ಅಳಿಯನಿಗೆ ಶುಭವಾಗಲಿ’.

ಪ್ರಾರಂಭದಲ್ಲಿ ಕಾರ್ಯದರ್ಶಿಯ ಸ್ಥಾನ ಅಂತಹ ಗಣನೀಯವಾದುದೇನಾಗಿರಲಿಲ್ಲ. ಆದರೆ ಕ್ರಮೇಣ ಸಭೆ ಬೆಳೆದಂತೆ ಸರ್ಕಾರದಿಂದ ಇದಕ್ಕೆ ಮಾನ್ಯತೆಯೂ ದೊರೆತ ಮೇಲೆ ಅದರ ಕಾರ್ಯದರ್ಶಿಯ ಸ್ಥಾನಮಾನವೂ ಬೆಳೆಯಿತು. ದಿವಾನರಾಗಿದ್ದ ರಾಜಗೋಪಾಲಾಚಾರಿ, ಕೃಷ್ಣನ್ ನಾಯರ್ ಇವರೊಡನೆ ಇದ್ದ ಸ್ನೇಹ ಮತ್ತು ಸಲುಗೆ ಇತರರಿಗೆ ಕಣ್ಣುರಿಯಾಯಿತು. ಸರ್ಕಾರಿ ವಲಯದಲ್ಲಿ ಆಶಾನರ ಮಾತು ಪ್ರಭಾವ ಬೀರುವುದಾಗಿತ್ತು. ಆ ಸಮಯದಲ್ಲಿ ಅನೇಕ ಮಂದೆ ಈಳವರು ಸರ್ಕಾರದ ಕೆಲಸಕ್ಕೆ ಸೇರಿದುದು ಕೂಡ ಆಶಾನರ ಪ್ರಭಾವದಿಂದ. ಈ ಪ್ರಗತಿ ಜನರಿಗೆ ಸಹಿಸದಾಯಿತು.

೧೯೧೭ರ ವರೆಗೆ ಆಶಾನ್ ಅವರು ತಮ್ಮ ಕೆಲಸಕ್ಕೆ ತೆಗೆದು ಕೊಳ್ಳುತ್ತಿದ್ದುದು-ತಿಂಗಳಿಗೆ ಮೂವತ್ತೇ ರೂಪಾಯಿಯ ಗೌರವ ಧನ!

ಹೇಗಾದರೂ ಸರಿಯೇ ಆಶಾನರ ಏಳಿಗೆಯನ್ನು ಕುಂಠಿತಗೊಳಿಸಬೇಕು, ಅವರಿಗೆ ಅವಮಾನಪಡಿಸಬೇಕು ಎಂದು ಕೆಲವರು ನಿರಂತರವಾಗಿ ಪ್ರಯತ್ನ ಮಾಡತೊಡಗಿದರು.

ನಾರಾಯಣಗುರು ಧರ್ಮಪರಿಪಾಲನ ಸಭೆಯ ಕಾರ್ಯದರ್ಶಿಯಾಗಿ ಗುರುಗಳ ಷಷ್ಟ್ಯಬ್ಧಿ ಸ್ಮಾರಕ ಮಂದಿರದ ಕೆಲಸವನ್ನು ಆಶಾನರೇ ನೋಡಿಕೊಳ್ಳುತ್ತಿದ್ದರು. ಕಟ್ಟಡದ ಅಡಿಪಾಯಕ್ಕೆ ಕಲ್ಲನ್ನು ಹಾಕಿಸುವ ಬದಲು ಬರಿಮಣ್ಣನ್ನೇ ತುಂಬಿಸಿ ಆಶಾನ್ ಹಣ ದುರುಪಯೋಗಪಡಿಸಿದ್ದಾರೆ ಎಂದು  ಕೆಲವರು ಗುರುಗಳ ಹತ್ತಿರ ದೂರು ಹೇಳಿದರು. ಅವರ ಒತ್ತಾಯಕ್ಕೆ ಕಟ್ಟುಬಿದ್ದ ಗುರುಗಳು ಅದನ್ನು ಪರೀಕ್ಷಿಸುವುದಕ್ಕೆ ಹೊರಟರು. ಗುರುಗಳು ಆಶಾನರ ಪ್ರಾಮಾಣಿಕತೆಯನ್ನು ಜನರಿಗೆ ತೋರಿಸಲು ಇದು ಒಳ್ಳೆಯ ಸಂದರ್ಭ ಎಂದು ಕೊಂಡರು. ಎಲ್ಲರೆದುರಿಗೂ ಅಡಿಪಾಯವನ್ನು ಅಗೆಸಿದರು. ಅಡಿಪಾಯವನ್ನು ಕಲ್ಲಿನಿಂದಲೇ ಕಟ್ಟಿಸಿದ್ದುದನ್ನು ಕಂಡಾಗ ಪಿತೂರಿಗಾರರ ಮುಖ ಚಿಕ್ಕದಾಯಿತು.

ಆಶಾನರ ಬಾಲ್ಯಮಿತ್ರ ಹಾಗೂ ಸಹಪಾಠಿಯಾಗಿದ್ದ ಪಿ. ಎಂ. ಕುಞ್ಞಶಂಕರ ವೈದ್ಯರ್ ತಮ್ಮ ಹಿರಿ ಮಗಳ ಮದುವೆಗೆ ಆಶಾನರಿಗೆ ಆಹ್ವಾನವನ್ನು ಕಳಿಸಿದ್ದರು. ಆದರೆ ಆಶಾನರು ಮದುವೆಗೆ ಹೊರಟು ವೈದ್ಯರ ಮನೆಯ ಹತ್ತಿರ ಬಂದಾಗ ಎದುರಿನಲ್ಲಿ ವೈದ್ಯರು ಬಂದು ಕೈಮುಗಿದು ನಿಂತುಕೊಂಡರು. ಅವರ ಬಾಯಲ್ಲಿ ಮಾತೇ ಹೊರಡದಂತಾಗಿತ್ತು. ಕಾರಣ ಆಶಾನರು ಮದುವೆಗೆ ಬಂದರೆ ಮದುವೆಯನ್ನು ನಿಲ್ಲಿಸುವು ದಾಗಿ ಗಂಡಿನ ಕಡೆಯವರು ಹೇಳಿದ್ದರು. ಆಶಾನರ ಮೇಲಿದ್ದ ಈಳವರ ಅಸಹನೆ ಅಲ್ಲಿಯವರೆಗೂ ಮುಟ್ಟಿತ್ತು. ಇದನ್ನು ಅರಿತ ಆಶಾನರು ಅಲ್ಲಿಂದಲೇ, “ಒಳ್ಳೆಯದು, ನಿಮ್ಮ ಮಗಳು-ಅಳಿಯನಿಗೆ ಶುಭವಾಗಲಿ” ಎಂದು ಹರಸಿ ಹಿಂದಿರುಗಿದರು.

ಆಶಾನರಿಗೆ ಮದುವೆಯಾದ ಮೇಲಂತೂ ಈಳವರಿಗೆ ಅವರನ್ನು ಟೀಕಿಸಲು ದೊಡ್ಡ ಕಾರಣವೇ ಸಿಕ್ಕಂತಾಯಿತು. ಅನೇಕ ರೀತಿಯ ದೂರುಗಳೂ ಕಿರುಕುಳಗಳೂ ಉಂಟಾಗ ತೊಡಗಿದವು. ಈ ಕಹಿ ಅನುಭವಗಳಿಂದ ಪ್ರಚೋದಿತವಾದದ್ದು ಅವರ ’ಗ್ರಾಮ ವೃಕ್ಷದ ಕೋಗಿಲೆ’ ಎಂಬ ಕವನ ಸಂಗ್ರಹ.

ಕಾರ್ಯದರ್ಶಿ ಸ್ಥಾನದಿಂದ ಅವರನ್ನು ಕೆಳಗಿಳಿಸಿದರೆ ಅವರ ಗೌರವ ಕಡಿಮೆಯಾಗುತ್ತದೆ ಎಂದು ಅನೇಕರು ಅದಕ್ಕಾಗಿ ಪ್ರಯತ್ನಿಸುತ್ತಿದ್ದರು. ಇದು ಆಶಾನರಿಗೂ ತಿಳಿದಿತ್ತು. ಆದರೆ ತಮ್ಮ ಅಭಿರುಚಿಗೂ ಕಾವ್ಯ ರಚನೆಗೂ ಈ ಕೆಲಸ ಹೊಂದುವುದಿಲ್ಲ ಎಂದು ಭಾವಿಸಿ ೧೯೧೯ ರಲ್ಲಿ ಸುಮಾರು ೧೬ ವರ್ಷಗಳ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಹೊಂದಿದರು. ೧೯೨೦ ರಲ್ಲಿ ಕೇರಳ ಶಾಸನ ಸಭೆಗೆ ಈಳವ ಪಂಗಡದಿಂದ ಅವರನ್ನು ಸರ್ಕಾರ ನಾಮಕರಣ ಮಾಡಿತು. ಅದನ್ನು ಹಲವು ರಾಜಕೀಯ ವ್ಯಕ್ತಿಗಳು ಸಹಿಸಲಿಲ್ಲ. ಟಿ.ಕೆ.ಮಾಧವನ್ ಮುಂತಾದವರ ಎದುರು ನಿಂತು ಹೋರಾಡಬೇಕಾಯಿತು. ಸಾಹಿತ್ಯ ಕ್ಷೇತ್ರದಲ್ಲೂ ಆಶಾನರ ವಿರೋಧಿ ಗಳಿದ್ದರು. ಮದರಾಸಿನಲ್ಲಿ ೧೯೨೨ ರಲ್ಲಿ ಇಂಗ್ಲೆಂಡಿನ ರಾಜ ಕುಮಾರರು ಚಿನ್ನದ ಬಳೆ ಮತ್ತು ಪದಕವನ್ನು ನೀಡಿ ಶಾಲನ್ನು ಹೊದಿಸಿ ಆಶಾನರನ್ನು ಗೌರವಿಸಿದರು. ಇದಂತೂ ಕೆಲವರು ಸಮಕಾಲೀನ ಕವಿಗಳ ಅಸಹನೆಯನ್ನು ಶಿಖರಕ್ಕೆ ಮುಟ್ಟಿಸಿತು. ಆಶಾನರ ಕಾವ್ಯಗಳನ್ನು ಕಟುವಾಗಿ ವಿಮರ್ಶಿಸಿ ಅವುಗಳನ್ನು ಹೀಯಾಳಿಸಲು ಪ್ರಯತ್ನ ಪಟ್ಟರು. ಆಶಾನರು ಇವುಗಳೆಲ್ಲವನ್ನೂ ಒಬ್ಬಂಟಿಗರಾಗಿ ನಿಂತು ಧೈರ್ಯದಿಂದ ಎದುರಿಸಿದರು.

ಜ್ಯೋತಿ ನಂದಿತು

೧೯೨೪ರ ಜನವರಿಯ ಒಂದು ರಾತ್ರಿ ಆಶಾನ್ ದೋಣಿಯಲ್ಲಿ ಕೊಲ್ಲಂನಿಂದ ಆಲಪ್ಪುಳಕ್ಕೆ ಹೊರಟರು. ಅದೇ ಕಡೆಯ ದೋಣಿ ಆದುದರಿಂದ ದೋಣಿಯಲ್ಲಿ ಪ್ರಯಾಣಿಕರು ತುಂಬಿದ್ದರು. ದೋಣಿ ಹೊರಟಿತು. ಸ್ವಲ್ಪ ವೇಳೆ ಕಳೆಯಿತು. ರಾತ್ರಿ ಪ್ರಯಾಣ. ಬಹು ಮಂದಿಗೆ ನಿದ್ರೆ ಆವರಿಸಿತ್ತು. ಇದ್ದಕ್ಕಿದ್ದಂತೆ ಜನರ ಹಾಹಾಕಾರ. ದೋಣಿ ಮುಳುಗಿತು.

ಮಾರನೆಯ ದಿನ ಆಶಾನರ ಶವ ಸಿಕ್ಕಿತು. ಅದೇ ಸ್ಥಳದಲ್ಲಿಯೇ ಅವರ ಸಮಾಧಿ ಮಾಡಲಾಯಿತು. ಒಂದು ಸ್ಮಾರಕ ಮಂದಿರವನ್ನೂ ಅಲ್ಲಿ ನಿರ್ಮಿಸಲಾಗಿದೆ. ಈಗಲೂ ಆ ಪ್ರದೇಶಕ್ಕೆ ಹೋದ ಜನರು ಸಮಾಧಿಯನ್ನು ಸಂದರ್ಶಿಸಿ ಬರುತ್ತಾರೆ.

ಆಶಾನ್ ಸ್ವಪ್ರಯತ್ನದಿಂದ ಮೇಲೇರಿ ಇತರರಿಗೂ ಒಳ್ಳೆಯದನ್ನು ಮಾಡಿ, ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯದೆ ಬಂದ ಎಡರುತೊಡರುಗಳನ್ನು ಧೈರ್ಯವಾಗಿ ಎದುರಿಸಿದರು. ಕವಿಯಾಗಿ ಅನೇಕ ಕಾವ್ಯಗಳನ್ನು ಸಾಹಿತ್ಯದೇವಿಗೆ ಅರ್ಪಿಸಿ ಆಶಾನ್ ಅಮರರಾದರು.

ಬೆಳಕು ಉಳಿದಿದೆ

ಒಂದೇ ಮತ, ಒಂದೇ ಜಾತಿ, ಒಬ್ಬನೇ ದೇವರು ಎನ್ನುವ ಮಹಾಸತ್ಯವನ್ನು ಸಾರಿದ ನಾರಾಯಣಗುರು ಕೇರಳದ ಮಹಾಪ್ರವಾದಿ. ಆ ಗುರುವಿನ ನೆಚ್ಚಿನ ಶಿಷ್ಯ ಕುಮಾರನ್ ಆಶಾನ್. ಶೃಂಗಾರ ಕಾವ್ಯಗಳ ರಚನೆಯ ಕಡೆಗೆ ತಿರುಗಿದ್ದ ಆಶಾನರ ಮನಸ್ಸನ್ನು ಕಾವ್ಯಗಳ ರಚನೆಯ ಕಡೆಗೆ ತಿರುಗಿಸಿದ ಮಾಂತ್ರಿಕ ನಾರಾಯಣಗುರು. ಈಳವ ಜನಾಂಗದ ಅಭ್ಯುದಯಕ್ಕಾಗಿ ಈ ಗುರು-ಶಿಷ್ಯರ ಸೇವೆ ಚಿರಸ್ಮರಣೀಯ.

ಆಶಾನರ ವೈಯಕ್ತಿಕ ಜೀವನದ ಆಕಾಂಕ್ಷೆಗಳೆಂದರೆ ಸಾಕಷ್ಟು ಆಧ್ಯಾತ್ಮಿಕ ಗ್ರಂಥಗಳನ್ನೋದುವುದು ಮತ್ತು ಸ್ವಂತ ಕಾವ್ಯರಚನೆ. ಸರ್ವಧರ್ಮ ಸಮನ್ವಯವಾದಿ, ಸ್ವಾತಂತ್ರ್ಯಪ್ರಿಯ, ರಾಜಕಾರಣಿ, ಧೈರ್ಯಶಾಲಿ, ವಿನೋದಪ್ರಿಯ. ನಲವತ್ತೈದು ವರ್ಷಗಳು ಬ್ರಹ್ಮಚರ್ಯ ಪಾಲನೆ. ಅನಂತರ ಪ್ರೇಮಕ್ಕೆ ಸಿಕ್ಕು ಸಂಸಾರಿಯಾದರು. ಮನಮೆಚ್ಚಿದ ಮಡದಿ ಭಾನುಮತಿಅಮ್ಮ. ಆಶಾನರ ಹೆಚ್ಚಿನ ಕೃತಿಗಳು ರಚನೆಯಾದದ್ದು ವಿವಾಹದ ಅನಂತರ. ಖಂಡಕಾವ್ಯಗಳ ರಚನೆಯ ಸುಗ್ಗಿಕಾಲ ಅದು. ಆ ಕಾಲದಲ್ಲಿ ಕೇರಳದ ಎಲ್ಲ ಕವಿಗಳ ಒಲವು ಇದ್ದದ್ದು

ಖಂಡಕಾವ್ಯಗಳ ರಚನೆಯ ಕಡೆಗೆ. ರಚನೆ ಮಲಯಾಳದಲ್ಲಾದರೂ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಅಗ್ರಗಣ್ಯ ಗ್ರಂಥಗಳ ಪ್ರಭಾವ ಆಶಾನರ ಕೃತಿಗಳ ಮೇಲಾಗಿದೆ. ಹದಿನಾರು ವರ್ಷಗಳು ನಾರಾಯಣಗುರು ಧರ್ಮಪರಿಪಾಲನ ಸಭೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

ಸಮಾಜದಲ್ಲಿ ಮೇಲಿನವರು, ಕೆಳಗಿನವರು ಎಂಬ ತಾರತಮ್ಯವಿರಬಾರದೆಂದು ಆಶಾನ್ ದುಡಿದರು. ’ದುರವಸ್ಥ’, ‘ಚಂಡಾಲ ಭಿಕ್ಷುಕಿ’ ಮತ್ತು ‘ಕರುಣ’ ಇಂತಹ ಕವನಗಳಲ್ಲಿ ಹುಟ್ಟಿನಿಂದ ಎಲ್ಲರೂ ಸಮಾನ, ಸೌಜನ್ಯ-ತ್ಯಾಗ-ಕರುಣೆ ಇವುಗಳಿಂದ ಮನುಷ್ಯ ದೊಡ್ಡವನಾಗುತ್ತಾನಲ್ಲದೆ ಹುಟ್ಟಿದ ಜಾತಿ, ಸಂಸಾರಗಳಿಂದಲ್ಲ, ಹಣ-ಪದವಿಗಳಿಂದಲ್ಲ ಎಂದು ಸಾರಿದರು.