ಇಲಚಿ ಬಿಡಾ ಹೊತ್ತಿಗೆ
ಎತ್ತಾಗ ನೋಡಾಕಿಲ್ಲಪ್ಪ

ಇಲಚಿ ಹಿಂದೆ ಬೆಕ್ಕು ಬಿದೈತೋ
ಯತ್ತಾಗಿನ್ನಾ ಹೋಗಾಕಿಲ್ಲ
ಪಾತುರಗಿತ್ತಿ ಸೀರ್ಯಾಗ ಹೊಕ್ಕಂಡುವೋ
ಅವೈರಡು ಲೋಕ
ಥೋತಡಿ ಬರಬರಬರ ಬರ ಸೀರೆ ಬಿಚ್ಚ್ಯಾಳ
ಹಾಂಗೆ ಬರೀ ಬತ್ತಾಲೆ ಕುಂತಳಾಣ್ಣಾ
ಪಾತರಗಿತ್ತಿ
ಆಗ ಹುಡುಗನಾಡ ಎಡಗೈಯಲ್ಲಿ ನೋಡ
ಸೀರೆಂಬುದ ಒಗೆದು ಬಿಟ್ಟನಮ್ಮ
ಗೊಲ್ರುಡುಗ ಲೋಕ          || ತಂದಾನ ||

ಆಗ ಏನಂದು ಬಿಟ್ಟ ಹುಡುಗ
ಕೇಳವ್ವೇ ನೀನು ಏನಂತ ಸರ್ತಿಕಟ್ಟೀ
ಜೀವಗ ಉಟ್ಟಿದ ಸೀರೆ ಉಚ್ಚಿ ಕೆಳಗೆ ಬಿದ್ಹಾಂಗೆ ಮಾಡಿದರೆ
ಜೀವದ ಗಂಡ ಆತೆ ಅಂತಾ ಅಂದಿ
ಅಂಬೋತ್ತಿಗೆ
ಇಲ್ರೀ ಸೂಟಿ ನೋಡಿ ಎಟ್ಹಾಕಿದ್ರಿ
ಇಲಚಿ ಬಿಟ್ಟುಮಾಡ್ದೆ
ಹಾಂಗಲ್ಲ
ನಾನೇನು ಮುಟ್ಟಿನ್ಯಾ ಅಂಟಿನ್ಯಾ
ಈಗ ಸೀರಿ ಉಚ್ಚಿ ಕೆಳಗ ಬಿತ್ತಾ ಇಲ್ಲ
ಈಗ ನಾನೆ ಸೀರೆ ಒಗಧ್ಯ್ನಾ ಇಲ್ಲ
ನೋಡ್ರಿ

ಸೂಟಿನೋಡಿ ನಿನು ಏಟು ಹಾಕಿದಯ್ಯಾ
ಕೀಲುನೋಡಿ ನನ್ನ ನರ ತಗಿಸಿದಲ್ಲಾ
ಅಯ್ಯಾ ಮಾಯಕೃಷ್ಣ ನಿನ್ನ ಪಾದಕ ಶರಣಯ್ಯ            || ತಂದಾನ ||

ಏನ್ರೀ ನೀನು ಮಾಯಕೃಷ್ಣಾ
ಲೋಕದಾಗ ಗೊಲ್ರು ಹಾಲು ಗೊಲ್ರು ಕುಲದಾಗ್ಹುಟ್ಟಿ

ಲೋಕವೆಲ್ಲ ಓಡುಸ್ತಿದ್ದೆ ಶಿವನೇ
ಲೋಕವೆಲ್ಲ ನೋಡಾಗಿ ಹೋಗ್ತಿಯಯ್ಯ
ಯಾರಿಗೆ ಸೀಗಂಗಿಲ್ಲ ನೀನಯ್ಯಾ      || ತಂದಾನ ||

ಕೇಳವ್ವೇ
ಸೀರೆ ಉಚ್ಚಿ ಕೆಳಗೆ ಬಿದ್ದಹಂಗ ಮಾಡಿದವ್ನಿಗೆ ಮಾಡ್ಯಿಕಂತಿನಂದಿ
ನೀನು ನನಗೆ ಬೇಕಿಲ್ಲ
ನೀನೇನು ಸೋತುಹೋಗಿದ್ದಿ
ನಾನು ಗೆದ್ದಿನಿ
ಈಗ ನಮ್ಮಣ್ಣವರು ಇದ್ದಾರೆ
ಆರು ಮಂದಿ ನಾಗ ಛತ್ರಿ ದೇವಛತ್ರಿ
ಕುಲಛತ್ರಿ ಮರಿಯಾದ ಛತ್ರಿಯವರು
ತಂದ ಒಬ್ಬನೇ
ಎಲ್ಲರೂ ತಂದೀಗೆ ಹುಟ್ಟಿವಿ
ತಾಯರು ಏಳುಮಂದಿ

ಈಗ ನಮ್ಮಣ್ಣಾರು ಎಲ್ಲಿವಯಿದಾರಲ್ಲೇ
ಅಣ್ಣೋರ್ಗಿ ಬಿಡಬೇಕು ಹೋರಗ ನೀನು ಲೋಕಕ್ಕೆ        || ತಂದಾನ ||

ಏನ್ರೀ ನಿಮ್ಮ ಅಣ್ಣವರಾಗಬೇಕೇನ್ರಿ ಅವ್ರು
ಈಗ ರೂಮನಾಗ ಹಾಕೀದ್ನಿರ್ರಿ
ಈಗ ಅಪ್ಪನವರಿಗೆ ಏನಾಗ್ಯಾವಂದ್ರೆ
ಗಜ ಗಡ್ಡ
ಆಗ ಗೇಣು ಮೀಸೆ ವಡೆತಿರುವಿ ಹಾಗ್ಯಾವೆ
ಗಡ್ಡದಾಗ ಹೇನು ಬಿದ್ದುಬಿಟ್ಟವೆ
ಆಗಿನ್ನವರು ಗಡ್ಡಿಗೆ ಬರ್ಹೋವತ್ತಿಗೆ

ಅಣ್ಣ ಅಂತ ಪಾದಕ್ಕ ಬಿದ್ದನಮ್ಮ
ಆರುಮಂದಿಗೋ ಪಾದ ಮುಗುದನಮ್ಮ         || ತಂದಾನ ||

ಯಾರಪ್ಪಾ ನೀನು
ನೋಡಪ್ಪ ತಂದೆ ಒಬ್ಬನು
ತಾಯೇರು ಏಳುಮಂದಿ
ಸುಡುಗಾಡು ರುದ್ರು ಭೂಮಿದಾಗ
ಚಿಕ್ಕ ತಾಯಿಗ್ಹುಟ್ಟಿನಿ
ಸಿರಿದೇವಿ ಮಗ ಶರಬಂದರಾಜ ನಾನು
ಈಗ ಅಣ್ಣವರಿಗೆ ಬಿಟ್ಟು ಹೋಗಬಾರದಂತ
ಆಗ ಪಾತರಗಿತ್ತಿ ಸೋಲಿಸಿ
ಆಗ ನಿಮ್ಮದಾಗಿ ಹೊರಗ ಕರಿಸಿದಣ್ಣಾ
ನೀವ್ ಜೀವದಲ್ಲಿ ಬಂದಿರಿ ಇಲ್ಲಂದ್ರೆ ಬರೋರಲ್ಲಾ
ಅಪ್ಪಾ ತಮ್ಮ
ಈ ಊರು ಒಳಗೆ
ಇಲಾಮಂತ್ರ ಪಟ್ಣ ಎಲ್ಲಮ್ಮಂತ
ಊರು ಹೊರಗೆ ದೇವಿ ಇದ್ದಾಳೆ
ಆ ದೇವಿಗೆ ಕಾಯಿ ಒಡಕೊಂಡ್ಹೋಗಬೇಕಪ್ಪ ತಮ್ಮ
ಸರಿಬಿಡಣ್ಣ
ಹೇ ಪಾತರಗಿತ್ತಿ
ಈಗ ನಮ್ಮ ಅಣ್ಣವರಿಗೆ ಕರಕೊಂಡ್ಹೋಗ್ತಿನಂತ
ಆಗ ಅಣ್ಣವರದೆಲ್ಲ ಗಡ್ಡ ಕತ್ತರಿಸಿ
ಆಗ ಬಿಸಿನೀರು ಹಾಕಿ
ಅಣ್ಣವರಿಗೆ ಬಟ್ಟೆಗಳುಡಿಸಿ
ಈಗಿನ್ನವುರು ಕಾಯಿ ಕರ್ಪೂರ ತಕ್ಕಂಡು
ಎಲ್ಲಮ್ಮನ ಗುಡಿಗೆ ಹೋಗಿ
ಇನ್ನ ಪೂಜೆಮಾಡಿ ಬರ್ತಿವಿ ನಾವು
ಇಲ್ರಿ ನಿಮ್ಮ ಅಣ್ಣವರು ಅಂತ ನಿನ್ನ ನಂಬಿಕಂಬ್ತಿವಿ
ಇವ್ರು ಆರು ಮಂದಿ ಕೆಡುಗುರು ರೀ
ನೀನು ಕೈ ಮುಗಿವಾಗ

ಅಯ್ಯ ನಿಮ್ಮಣ್ಣೋರು ನಿನ್ನ ಕಡಿತಾರಯ್ಯ
ನೀನು ಹೋಗಬ್ಯಾಡ ದೇವ್ರು ಮಠಕಯ್ಯೋ     || ತಂದಾನ ||

ಕೇಳವೇ ಪಾತರಗಿತ್ತಿ
ನಮ್ಮಣ್ಣನವರು ಎಂಜಲು ಹಾಲು ಬಿಟ್ಟಿದವರು
ಒಂದು ತಂದಿಗ ಹುಟ್ಟಿದವರು
ಎಂಥಾ ದುಷ್ಟ ದುರ್ಮಾರ್ಗನಾದ್ರು ನನ್ನ ಕಡಿತಾನಾ
ಹ್ಯಾಂಗ ಕಡಿತಾನ
ಕಡಿಯಾದಿಲ್ಲ ನಾನು ಹೋಗ್ತಿನಿ ಅಂದ
ಇಲ್ರೀ ನಾನೂ ಬರ್ತಿನಿ
ಅಂದ್ರೇ
ಅಣ್ಣ ಈಗ ಪಾತರಗಿತ್ತಿ ಬರ್ತಾಳಂತೆ
ಬರ್ಲಿ ಬಿಡಣ್ಣ ಅಂದ
ಛೀ ಛೀ ಛೀ ಛೀ
ಹೆಣ್ಣುಮಕ್ಕಳು ಬರೋದೇವರಲ್ಲ
ಗಂಡ್ಮಕ್ಕಳೇ ಹೋಗಬೇಕು
ದೇವಿಗೆ
ನೋಡಪ್ಪ ಏಳುಮಂದಿ ಬರ್ತೀವಂತ
ನಾವು ಒಪ್ಪಿಕೊಂಡಿದ್ದೇವು ತಮ್ಮ
ಈಗ ಈ ಹೆಣ್ಣುಮಕ್ಕಳು ನಮ್ಹಿಂದೆ ಬರಬಾರದಪ್ಪ
ಕೇಳವೇ ನಿಂದು ಏನೇನೈತೊ ಮನ್ಯಾಗ
ತಂಗಡು ಬೀಗಾ ಹಾಕಿ
ನಿಮ್ಮ ಅಕ್ಕನವರಿದ್ದಾರೆ ಐದು ಮಂದಿ
ಊರ ಹೊರಗ
ಡೇರಿವು ಗುಡಾರ ಹಾಕಿವ್ನಿ
ಅಲ್ಲಿಗೆ ಹೋಗು ಅಂದ
ಸರಿಬುಡ್ರಿ ನಿನ್ನ ಮಾತಿಗೆ ಎದುರಾಡೋದಿಲ್ಲ ಅಂದ್ಳು
ಆಗ ಏನೇನೆಲ್ಲ ಟ್ರಂಕನಾಗಿಟ್ಟುಕೊಂಡು
ಮನೀಗೆ ಬೀಗಹಾಕಿ
ಅಕ್ಕನವರತಲ್ಲಗೆ ಬಂದ್ಳು ತಂಗಿ
ಶರಣಕ್ಕ ಐದು ಮಂದಿನವರೇ
ಶರಣಮ್ಮ ಪಾತರಗಿತ್ತಿ ತಂಗಿ
ಗೆದ್ದೇನಮ್ಮಾ ಲಾಸ್ಟ್‌ನಾಗೆ
ಆಗ ಗೆದ್ದುಬಿಟ್ನಮ್ಮ ಆ ಜೀವದವನು
ಎಲ್ಲಿಗ್ಹೋದರಮ್ಮ
ಯಮ್ಮಾ ಈಗ ಇಲಾಮಂತ್ರ ಪಟ್ನಾದಾಗೆ
ಎಲ್ಲಮ್ಮ ದೇವಿ ಐತಂತೆ
ಪೂಜಾ ಮಾಡಿಕ್ಯಂಡು ಬರ್ತಾರಂತೆ
ಯೇ ಯಮ್ಮ ನೀನ್ಹೆಂತವಳೇ
ಆಗ ಅಣ್ಣವರಲ್ಲ ಈಗ ದುಷ್ಟದವರು
ಎಲ್ಲಿ ಕಡ್ದು ಬರ್ತಾರೋ
ಹಂಗೇ ಹೋಗಿದ್ರೇ
ಏಯಮ್ಮ ಬರಬ್ಯಾಡ ಅನ್ನುವಾಗ
ನಾ ಹ್ಯಾಂಗ ಹೋಗಲಮ್ಮ
ಅಂತ ಕುಂತುಕಂಡ್ರು ಆರುಮಂದಿ
ಇವ್ರು ಏಳುಮಂದಿ ಅಣ್ಣತಮ್ಮರು
ಎಲ್ಲಮ್ಮನ ಗುಡಿಗೆ ಬಂದ್ರು
ಈಗ ಎಲ್ಲಮ್ಮನ ಮುಂದೆ ಬಾಯಾಗ ಮುಣಿಗಿಬಿಟ್ರು
ಈಗ ನೀವು ಪೂಜೆ ಮಾಡ್ರರಣ್ಣ
ದೊಡ್ಡವರು ಮುಂದ್ಹುಂಟ್ಟಿದವರು
ದೊಡ್ಡತಾಯಿಗ
ಇಲ್ಲಪ್ಪ ಲಾಸ್ಟ್ ಹುಟ್ಟಿದ ತಮ್ಮ
ನೀನೇ ಮಾಡಬೇಕು ಸಂತೋಷ ಅಂದ್ರು
ಎರಡೂ ಕಣ್ಣಿಗೆ ಬಟ್ಟೆ ಕಟ್ಟಿಕ್ಯಂಡ
ಆಗ ತಾಯಿಗ ಕೈಮುಗುದ
ಯಮ್ಮಾ

ನಿನ್ನ ಹೊಟ್ಯಾಗ್ಹುಟ್ಟಿದ ಮಗ ಇದ್ದೀನಮ್ಮ
ನೀನು ಇನ್ನು ತಾಯಿ ನಾನು ಮಗನುನಮ್ಮ
ನಿನ್ನ ಮೈ ತೊಳಿಯೋ ಮಗ ಬಂದಿನಿತಾಯಿ
ಆಗ ತಾಯಿ ಉಟ್ಟಿದ ಸೀರೆ ಬಿಡಿಸ್ಯಾನಮ್ಮಾ   || ತಂದಾನ ||

ತಾಯಿ ಸೀರೆ ಬಿಡಿಸಿದ
ಕುಪುಸ ಬಿಡಿಸಿದ
ಹಾಲಿಂದ ತೊಳ್ದ
ಸೀರೆ ಉಡಿಸಿ ಉಡಿ ಅಕ್ಕಿ ಹಾಕಿದ
ಅರಿಸಿಣ ಭಂಡಾರ ಹಚ್ಚಿದ
ಆಗ ಸೂಸುಗ ಹಾಕಿದ
ಆಗ ತಾಯಿಗೆ ಊದುನಕಡ್ಡಿ ಹಚ್ಚಿದ
ಆಗ ಲೋಬಾನ ಹಾಕಿದ
ಅಣ್ಣ ಇನ್ನ ಕಾಯಿ ವೋಡಿರಿ ಬರ್ರೀ ಅಣ್ಣ ಅಂದ
ಇಲ್ಲಾಪ್ಪ ನೀನೆ ವೋಡಿ
ಆಗ ಎಲ್ಲಮ್ಮ ದೇವಿ ಅಂತ ಟೆಂಗಿನ ಕಾಯಿ ವೋಡೆದ
ಇನ್ನೇನಣ್ಣ ಶರಣು ಮಾಡ್ರಿ
ಆಗ ಅವರೇನು ಮಾಡಿದ್ರು ಕೈಮುಗಿದ್ರು
ತಮ್ಮ ಚಿಕ್ಕ ತಮ್ಮ
ಬಕ್ ಬಾರ್ಲಿ ಬಿದ್ದು ಶರಣು ಮಾಡಬೇಕಪ್ಪ
ದೇವಿ ಮೈತೊಳೆದಿದ್ದೀಯೇ ಅಂದ
ಬೊಕ್ಕ ಬಾರ್ಲ ಬಿದ್ದು ಆದೇವಿಗೆ ಕೈಮುಗಿತಿದ್ದ
ಲೇ ತಮ್ಮ ಹಿಂದೆ ಹುಟ್ಟ್ಯಾನ
ನಮ್ಮಪ್ಪಗ ಹುಟ್ಟಿಲ್ಲ ಇವ್ನು
ಸುಡುಗಾಡ್ಯಾಗ ಯಾವೋನಿಗ ಹುಟ್ಟ್ಯಾನೋ
ಆಗ ಸುಡುಗಾಡ್ಯಾಗ ಹುಟ್ಟಿ
ಇವುನು ಹೋಗಿ
ಆರು ಮಂದಿ ಹೆಂಡರು ಕರ್ಕಂಡು
ಇವನು ಮೇಟೌಷಧ ತಂದಾನೆ
ಏಳು ಸಮುದ್ರದ ಕಡೆಗ್ಹೋಗಿ
ಇವ್ನುಸೈ ಅಂತಾನೆ
ಮಿಂಡ್ರುಗ್ಹುಟ್ಟಿದವನು ಮುಂಜೂರಾದ
ಗಂಡನಿಗ್ಹುಟ್ಟಿದವರು ಹಿಂದಕಾದ್ಯೋ
ನಮ್ಮನ್ನ ಛಿ ಅಂದು ಬಿಡ್ತಾನ ತಂದಿ
ಅವನ್ನೇ ಮುಂಜೂರು ಮಾಡ್ತಾನೆ
ಹಾಂಗಲ್ಲ ನಾವು ಮುಂಜಾರಾಗಬೇಖು
ಇವ್ನುನ್ನ ಆರು ತುಂಡು ಕಡಿಯಾನ
ಇವ್ನ ಆರು ಮಂದಿ ಹೆಂಡರ
ತಲೆಗೊಂದ್ಹೆಂಡ್ತಿ ಕರ್ಕಂಡು ಬರಾನ
ಇವ್ನ ತಂದ ಮೇಟಾಷಧ ಒಯ್ದು
ತಂದಿ ಹುಣ್ಣು ಬೇಸ್ ಮಾಡಾಣ
ಸೈ ಅಪ್ಪ ಮಕ್ಳೆ ಹುಟ್ರೆ ಸಾರ್ಥಕ
ನನ್ನ ಜೀವಕ್ಕ
ಯಪ್ಪಾ ಮೇಟೌಷಧ ತಂದ್ರಿ
ಹುಣ್ಣು ಬೇಸು ಮಾಡಿದ್ರಿ
ತಲಿಗೊಂದೊಂದು ಹೆಂಡ್ತಿರ
ಮಾಡಿಕ್ಯಂಡು ಬಂದ್ರಿ ಅಂತ
ನಮ್ಮಪ್ಪ ಸೈ ಅಂತಾನ
ಅಂತ ಬಕ್ಕ ಬಾರಲು ಬಿದ್ದು ಕೈ ಮುಗಿವಾಗ

ಆರು ಮಂದಿ ಹೋಗಿ ಕಡಿಯಕ ನಿಂದ್ರುತಾರೋ
ಧರ್ಮ ಅಂತ ಹೋದ್ರೆ ಕರ್ಮ ಬರ್ತಾತ್ರಿ        || ತಂದಾನ ||

ಆಹಾಹಾಹಾ
ಆರು ಮಂದಿ ತಾವಾಗಿ
ಚಂದ್ರಾಯುಧಗಳು
ಆಯುಧಗಳನ್ನು ಮ್ಯಾಕೆ ಎತ್ತು ಬಿಟ್ರಪ್ಪ
ತಮ್ಮನ್ನ ಕಡಿಯಾಕ
ಯಾಮ್ಮಾ ಎಲ್ಲಮ್ಮ

ನಿನ್ನ ಶಿಶುವ ನಿನ್ನ ಮುಂದೆ ನಾವು ಕಡಿತಿವಮ್ಮಾ
ನಿನ್ನ ಜೀವದ ಮಗನ ಜೀವ ಕಳಿತಿವಿ              || ತಂದಾನ ||

ಆಹಾಹಾ
ರಥಮ್ಯಾಲೆ ಕುಂತ ತಾಯಿ ನೋಡಿಬಿಟ್ಟು
ಅಲೇಲೇಲೇ
ನನಗೆ ಕೈಮುಗಿಯೋನ್ನ
ನನ್ನ ಶಿಶುವುನ್ನ ಕಡೀತಾರೆ ಅಂತ
ರಥ ಮ್ಯಾಲಿದ್ದ

ಕುಪ್ಪುಳಿಸಿ ಮಗನ ಮ್ಯಾಲೆ ಕುಂತಾಳಮ್ಮಾ
ಆಹಾ ಬೆನ್ನಮ್ಯಾಲೆ ಕುಂತು ಬಿಟ್ಳು ದೇವಿ        || ತಂದಾನ ||

ಸರಿ ದುಷ್ಟ್ರ ನೋಡ್ರಿ ಅಬ್ಬಾ ಯಮ್ಮಾ

ಯಮ್ಮ ದೊಡ್ಡ ತಾಯಿ ನೀನು ಇದ್ದೀಯಮ್ಮಾ
ಸರ್ವತಪ್ಪು ನಿನಗಾಗಿ ಶರಣು ಯಮ್ಮಾ          || ತಂದಾನ ||

ಯಮ್ಮ ದೊಡ್ಡತಾಯಮ್ಮ ನೀನು
ಸರ್ವತಪ್ಪು ನಿನ್ನ ಪಾದಕ್ಕೆ ಶರಣು
ಕೇಳಿರಾ ದುಷ್ಟ್ರಾ
ಪಾಪಾಂತ ರೂಮನಾಗ ಬಿದ್ದೋರ
ಹೊರಗ ತಗದ ನನ್ನ ಶಿಶು ಬಂದು
ನನ್ನ ಜೀವಕ್ಕೆ ಕಡೀತಿರ್ಯಾ
ನನ್ನ ಜೀವದ ಮಗನ
ಅಮ್ಮ ಈಗೆ ಕಡಿಯಾದಿಲ್ಲ ತಾಯಿ ಸರ್ವ ತಪ್ಪಾಗೈತಿ
ನಿನ್ನ ಪಾದಕ್ಕೆ ಶರಣಮ್ಮ
ಈಗ ತಮ್ಮನ ಬೆನ್ನುಬಿಟ್ಟು ರಥಕ್ಕೆ ಕುಂಡ್ರೆ ದೇವಿ
ಕಡಿಯೋದಿಲ್ಲಾ
ಕಡಿಯೋದಿಲ್ಲಾ

ಆಗ ಇನ್ನು ಎರಗಿ ಬಿಟ್ಟಾಳ ರಥಮ್ಯಾಲೆ ಕುಂತಾಳೆ       || ತಂದಾನ ||

ಈ ಮಗ ಇನ್ನ ಶಿಶುವಾ
ಶರಬಂದರಾಜ ಬಾರ್ಲಬಿದ್ದೋನು
ಆರು ಮಂದಿ ಕಡಿದದ್ದೂ ಗೊತ್ತಿಲ್ಲ
ಆಗ ಈ ದೇವಿ ಕುಂತಿದ್ದು ತಿಳುವಳಿಕೆ ಇಲ್ಲ
ಎದ್ದೇಳಪ್ಪ ತಮ್ಮ
ಎಡಕಲಿಂದ ಬಲಕ್ಕೆ ಎದ್ದ
ಇನ್ನ ಏನಣ್ಣ ನಡ್ರಿ ಹೋಗಾನ
ದೇವಿಗಿ ಮಾಡ್ದೀವಲ್ಲ
ಹಾಂಗಲ್ಲ ತಮ್ಮ
ಮೂರುಸುತ್ತ ಪರದಕ್ಷಣೆ ಮಾಡಿಕ್ಯಂಡು
ಹೋಗಿಬಿಡೋಣ
ಸರಿಬುಡು ತಮ್ಮ ಅಂತೇಳಿ
ಇಲ್ಲಾರು ಇನ್ನವರು ಎರಡು ಪಾದಮ್ಯಾಲೆ
ಪರದಕ್ಷಣೆ ಮಾಡಿದರೆ
ಈ ಮಗ ಏನು ಮಾಡ್ತಾನ
ಯಮ್ಮ ನಿನ್ನ ಮಗ ನಾನಂತ

ಒಂದು ಪಾದ ಎರಡು ಕೈಯಿ ಜೋಡಿಸ್ಯಾನಮ್ಮಾ
ಒಂದು ಪಾದ ಮ್ಯಾಲೆ ಪರದಕ್ಷಣ ಮಾಡುತ್ತಾನ           || ತಂದಾನ ||

ಒಂದು ಸುತ್ತು ತಿರುಗಿಬಿಟ್ಟ
ಇನ್ನೊಂದು ಸುತ್ತಿಗೆ
ಆಗ ದೇವಿ ಹಿಂದೆ ಹೋಗ್ತಿದ್ರೆ

ಆರು ಮಂದಿ ಬಂದಾರ ತಮ್ಮನ ಕೈಯಿ ಹಿಡುದಾರ      || ತಂದಾನ ||

ಆರು ಮಂದಿ ಇನ್ನವರು ತಮ್ಮನ ಕೈ ಹಿಡಿದ್ರು
ದೇವಿ ಗುಡಿ ಹಿಂದುಕ
ಏನಣ್ಣ ನನ್ನ ಕೈ ಹಿಡುಕಂಡ್ರಿ
ಆರು ಮಂದಿ ಅಣ್ಣವರೆ ಅಂದ
ಲೇ ಮಿಂಡ್ರುಗ್ಹುಟ್ಟಿದವನು ಮುಂಜೂರಾದೆ
ಗಂಡುಗ್ಹುಟ್ಟಿದ್ವರು ಹಿಂದಕಾದ್ವಿ
ಯಾವೋನ್ಗಿ ಹುಟ್ಟಿಯೋ ಸುಡುಗಾಡಾಗ
ಮೇಟೌಷಧ ತಂದಿ
ನಾಳೆ ಹೋತಿ ತಂದಿ ಹುಣ್ಣು ಬೇಸು ಮಾಡ್ತಿ
ನಿನ್ನ ಸೈ ಅಂಬ್ತಾನ
ನಮ್ಮನ್ನ ಛೀ ಅಂದು ಬಿಡ್ತಾನ
ನಾವ್ ಇದ್ದು ಮಾತಕ್ಕ
ನಿನ್ನ ಆರು ತುಂಡು ಕಡ್ದು
ನಿನ್ನ ತಂದ ಔಷಧ ನಾವು ಹೋಗಿ
ತಂದಿಗ್ಹಾಕಿ ಬೇಸ ಮಾಡ್ತಿವಿ
ನಮ್ಮನ್ನ ಸೈ ಅಂತಾನ
ಅಣ್ಣ
ಈಗ ನಿಮ್ಮ ಪಾದಕ್ಕೆ ಶರಣು
ಈಗ ನನ್ನ ಕಡಿಬ್ಯಾಡ್ರಿ
ನಿಮ್ಮ ಪಾದ ಮುಗಿತಿನಿ
ಈಗ ಜಲ್ಮಕ್ಕಾಗಿ
ನನ್ನ ಮಾತು ಕೇಳಿರ್ಯೋ ಅಣ್ಣಗಳೋರೇ
ಅದೇನೆಪ್ಪ ತಮ್ಮ
ಏನಿಲ್ಲ
ಈಗ ನಿಮಗ ತಂದೆ ನನಗೆ ತಂದೆ
ಮೇಟೌಷಧ ನಿಮ್ಮಗ ಕಯಗೆ ಕೋಡ್ತಿನಿ
ಆರು ಮಂದಿ ಅಣ್ಣಂದಿರುಗೂ
ತೆಲಿಗೊಂದು ಹೆಂಡ್ತಿರುನೂ ಕೊಡ್ತಿನಿ
ಅಣ್ಣ ನಿಮ್ಮ ಪಾದ ಮುಗಿತಿನಿ

ತಮ್ಮನಿಗಿ ನೀವು ಲೋಕ ಕಡಿಬ್ಯಾಡ್ರೋ
ಅಣ್ಣಾ ನನ್ನ ಕಡಿಬ್ಯಾಡ್ರಿ
ಎರಡು ಕೈಯ ಮುಗಿದು ಜೋಡ್ಸ್ಯಾನಮ್ಮೋ
ಆರುಮಂದಿ ಅಣ್ಣವರಿಗೆ ಕೈಮುಗಿತಾನಪ್ಪ       || ತಂದಾನ ||