ಯಮ್ಮಾ ರಾಕ್ಷಸಿ ಕೈಯಾಗ ಬೆಳಕಂಡಾಕಿ ಚಿತ್ರಾಂಗಿ
ನೋಡಿ ಶರಣಕ್ಕ
ಆಗ ಮೇಟೌಷಧಾಕಿ
ಕಾಡಿನಾಗಿರಾಕಿ ಎದಿನಗಂಧಿ
ಓ ಶರಣಮ್ಮ ತಂಗಿ
ರಾಕ್ಷಾಸಿ ಕೈಯಾಗ ಬೆಳಕಂಡಾಕಿ ಚಿತ್ರಗಿರಿದಾಗ

ಆಗ ಶರಣಯ್ಯ ನಿನ ಪಾದಗಯ್ಯ
ತಂದೆನಯ್ಯ ಮೇಟೌಷದ್ಧಯ್ಯ
ಆಗ ತಂದೆ ಭಾಮ ಯೋಳ ಸಮುದ್ರಾಕಡಿಗ್ಹೋಗಿ         || ತಂದಾನ ||

ಯೋಳ ಸಮುದ್ರಾಕಡೆಗ್ಹೋಗಿ ಮೇಟೌಷಧ
ಎದಿನಗಂಧಿ ಕಾಡಿನಾಗಿರಾಕಿ
ಮೂರು ಅಂತಸ್ತು ಮನ್ಯಾಕ ಇರಾಕಿತಲ್ಲಿ ಮದ್ದು ತಂದಿನಿ
ಆಕಿ ಎದಿನಗಂಧಿ
ಶರಣಕ್ಕ ನಿನ್ನ ಪಾದಕ್ಕ ಅಂದ್ರೆ
ಕೇಳವೆ ಚಿತ್ರಾಂಗಿ
ನಮ್ಮ ತಂದಿ ಸತ್ನೋ ಐದನೋ
ಈಗ ಆರು ತಿಂಗಳ ಮಿಕ್ಕಿ ಮೀರಿ ಹೋಯ್ತು
ನಮ್ಮ ತಂದಿ ಸತ್ಹೋದ ಮ್ಯಾಲ
ಮೇಟೌಷಧ ಒಯ್ದು ನಾನೇನು ಮಾಡ್ಲಿ
ಜೀವ ಇರ್ಲಿಕ್ಕೆ ಹೋಗಿ ಜೀವ ಉಳಿಸ್ಬೇಕು
ಇಗೋ ನೀನು ಬರ್ತೀಯಾ
ಇಲ್ಲ ಇರ್ತೀಯ ಚಿತ್ರಗಿರಿ ಪಟ್ಣಕ್ಕೆ
ಏನ್ರೀ ಯಾರೈದಾರಂತಿರ್ಲಿ
ಅಂದ್ರೆ ನಿಂದೇ ಏನೆನೈತೋ ತಗಂಡು ಬರ್ರೀ ಆಂದ
ಎರ್ಡು ಟ್ರಂಕು ತಗಂಡ್ಳು
ನೋಡಿದ ಗೊಲ್ರರ ಹುಡುಗ
ಕೇಳವ್ವೆ ಆಗ ಎದಿನಗಂಧಿ
ಈಗ ಕೈಚೀಲ ಕೇಳಾಕಿ
ನಿನ್ನ ತಂಗಿ ಚಿತ್ರಾಂಗಿದ
ಒಂದ ಟ್ರಂಕ ಅದೆ ಹೊತ್ಕೊ ಅಂದ
ಇಲ್ರೀ ಅವ್ರು ಟ್ರಂಕು ಹೊತ್ತುಗಂಡು ಬಂದ್ರೆ
ನನಗೇನು ಲಾಭ
ಅವ್ಳ ಟ್ರಂಕು ನನ್ಗ ಕೊಟ್ರೆ ನನಗೇನು ಲಾಭ

ನಾನು ಟ್ರಂಕು ಹೋರಾವಳಲ್ಲಯ್ಯ
ನನಗೆ ಕೈಚೀಲ ಕೊಡಯ್ಯ  || ತಂದಾನ ||

ನೀವು ಹೊತ್ಕೋರಿ
ಆಗ ಟ್ರಂಕು
ನಾನು ಹೊತ್ತುಗಬೇಕಾ ಟ್ರಂಕು

ನಿಮ್ಮ ಪೂಜೆ ಮಾಡೇನ
ನನ್ನ ಕೈಯಾಗ ಸಿಕ್ಕೀರಿ ನೀವು         || ತಂದಾನ ||

ನನ್ನ ಕೈಯಾಗ ಸಿಕ್ಕಿರಿ
ನಿಮ್ಮನ್ನೆಲ್ಲಾ ಪೂಜೆ ಮಾಡಾಕ
ಬಂದಿನಿ ಅಂತ
ಆಗ ಚಿತ್ರಾಂಗೀನ ಕರಕಂಡು
ಏದಿನಗಂಧೀನ ಕರಕಂಡು

ಇಬ್ರು ಅಕ್ಕ ತಂಗೇರು ನೋಡಮ್ಮ
ಹಿಂದೆ ಬರುತಾರೆ ಮಗ ಮುಂದೆ ಯಮ್ಮ
ಹೊಲಪೆಟ್ಟುಗೆ ಮುಂದೆ ಹೊತಾನಮ್ಮ
ಆರಂಡಿದಾಗ ಇನ್ನ ಬರುತ್ತನಮ್ಮ
ಗೊಲ್ರ ಹುಡುಗ ಕೃಷ್ಣ         || ತಂದಾನ ||

ಏದಿನಗಂಧಿ ಏನಂತಾಳ
ಯಮ್ಮಾ ಚಿತ್ರಾಂಗಿ
ನೀರಡಿಕೆ ಆಗ್ತವ ನೋಡೆ ಹ್ಯಾಂಗ ಮಾಡಾನ
ಆರಂಡ್ಯಾಗ ಅಯ್ಯಯ್ಯಮ್ಮ ಎಲ್ಲೈದಾವ ಅಂತ
ನಾವ ನೀರ್ಹುಡುಕಾನ
ನಾವು ನೀರು ಹುಡುಕೊ ಒಳಘೆ

ಬಿಟ್ಟು ಹೋತಾನ ತಪ್ಪಿಸಿ ಹೋತಾನಮ್ಮ
ಅದ್ವಾನ ಹಾಳಾಗಿ ಹೋತೀನಿ ನಾವು
ಮನೆ ಇಲ್ಲಮ್ಮ ಕುಂದ್ರಲಿಕ್ಕೆ ನಮಗೆ
ಮಲಗಲಿಕ್ಕೆ ನಮಗೆ ಮನಿ ಇಲ್ಲಮ್ಮ   || ತಂದಾನ ||

ಆರಂಡಿ ಕೃಷ್ಣ ಆರಂಡ್ಯಾಗ ಬಿಟ್ಟೋತಾನ
ಆದ್ವಾನ ಆಗಿ ಹೋತಿವಿ

ಯಮ್ಮಾ ನೀರು ಬ್ಯಾಡ ಅನ್ನ ಬ್ಯಾಡಮ್ಮ
ಆತನ್ಹಿಂದೆ ನಾವು ಹೋಗಾನೆ ದೇವಿ
ಅಂದರ ಬಜ್ಜೆ ಮೇಲೆ ಬಜ್ಜೆ ಇದ್ದವರಣ್ಣಾ
ತೊಗಲು ಮೇಲೆ ತೊಗಲು ಬಿದ್ದವರಣ್ಣಾ
ತೊಗಲೆಲ್ಲವೆ ಕರಗಿ ಹೋಯಿತಣ್ಣ
ಎದಿ ಮ್ಯಾಲೆ ಎಲುಬಾಗಿ ಕಾಣತಾವಣ್ಣಾ
ಅಣ್ಣಾ ಚಾವುಲರಾಜ ಪಟ್ಣಕ್ಕೆ ಬಂದೆ
ಶರಣು ಮಾವ ಚಾವುಲರಾಜ ಗೌಡ  || ತಂದಾನ ||

ಶರಣು ಮಾವ ಚಾವುಲರಾಜ
ಶರಣಪ್ಪಾ ಶರಬಂದ
ಗೊಲ್ರ ಶರಬಂದ
ಓಹೋ ಸರಿ
ಗೊಲ್ರ ಶರಬಂದ ಏನಂತಾನ
ಗೆದ್ದುಕಂಡು ಬಂದೇನ ತಮ್ಮ
ನೋಡಪ್ಪ ಏಳು ಸಮುದ್ರ ಕಡಿಗೆ ಕಾಡಿನಾಗ್ಹೋಗಿ
ಏದಿನಗಂಧಿ ತಲೆ ಆಡೇಲಿರುವ ಮದ್ದು ತಂದಿನಿ
ಓ ಸರೆ
ಅವ್ರುಯಾರಪ್ಪ
ಅಯ್ಯೋ ನಿನ್ನ ಮಗ್ಳಗಿನನ್ನ ಪಾರಕ್ರದವ್ರು ಅವರು
ಗಂಡಸರಿಗೆ ಯುದ್ಧ ಮಾಡಿದುವು ಅವು
ನನಗಾಗಿ ಬಗ್ಗ್ಯಾವ ಅವು
ಯಾರಿಗೆ ಬಗ್ಗವಲ್ಲ ಅವು
ಸೂಟಿ ಏಟ್ಹಾಕಿನಿ
ಕೀಲು ನೋಡಿ ನರ ತಪ್ಸಿನಿ
ಹೆಸರೇನಪ್ಪ ಮುಂದೆ ಬರಾಕಿ
ರಾಕ್ಷಾಸಿ ಕೈಯಾಗ ಬೆಳಕಂಡಾಕೆ
ಚಿತ್ರಗಿರಿ ಪಟ್ಣಾದಾಗ ಚಿತ್ರಾಂಗಿ
ಆಕೆ ಹಿಂದ ಬರಾಕಿ
ಏಳು ಸಮುದ್ರ ಕಡೆಗೆ ಇರಾಕಿ
ಮದ್ದಿದ್ರೆ ನಿದ್ದೆ ಮಾಡಾಕಿ ಏದಿನಗಂಧಿ
ಓಹೋ ಸರಿ
ಆಗ ಏನ್ಮಾಡಿದ ಚಾವುಲರಾಜ
ಆಗ ಮೂವಾರಿಗೆ ಉಡ್ಯಾಕಿ ಹಾಕಿದ
ಹೋಗ್ರಮ್ಮ ಮೂವರು ಮಕ್ಕಳಾರಾ ಅಂದ್ರೆ
ಶಾಮಗಂಧಿನಿ ಚತ್ರಾಂಗಿನಿ, ಏದಿನಗಂಧಿನ
ಮೂವಾರು ಹೆಂಡ್ರನ್ನ ಕರಕಂಡು

ಮಗ ಒಂದೇ ಊರು ಬಿಟ್ಟಾನಮ್ಮ
ಆಗ ಇನ್ನ ಹಿಂದೆ ಬರುತಾರ ಹೆಂಡ್ರು
ಮಗ ನೋಡ ಮುಂದೆ ಬರುತಾನ
ಒಂದು ಗಾವುದ ಎರ್ಡು ಗಾವುದ
ದೇವಗಿರಿ ಪಟ್ಣಕ್ಕೆ ಬಂದಾನಮ್ಮ       || ತಂದಾನ ||

ದೇವಗಿರಿ ಪಟ್ಣಕ್ಕ ಬಂದ ದಾವಸ್ಥಾನಿ
ನಾಗೇಂದ್ರನ ಹೊಟ್ಟ್ಯಾಗ ಹುಟ್ಟಿದಾಕಿ
ಆಗ ಬಂಡಿ ಗುಗ್ಗೂರಿ ಬಂಡಿ ಕೊಡ್ಬು ತಿಂಬಾಕಿ
ಬಂದ್ರೇನ್ರೀ ನಿನ್ನ ಪಾದಕ್ಕೆ ಶರಣು ಗೊಲ್ರ ಕೃಷ್ಣದವನೆ
ಆಗ ಬಂದೆ ಬಾಮ್ಮಾ ನಿನ್ನ ದಯಲಿದ್ದ
ಅವ್ರುಯಾರ್ರೀ
ಆಗ ಆಸುಮಂದಿ ಬರುತಾರ ಅಂದ್ಳು
ನೀನೊಬ್ಬಾಕೇನ ಬಂಡಿ ಗುಗ್ಗರಿ ತಿಂಬಾಕಿ
ಆಗ ಮಣುಷ್ಯಾನ ತಿಂಬಾಕಿ
ಅವ್ರು ಗಂಡಸೂರ ಕೂಟ ಯುದ್ಧ ಮಾಡೋವ್ರು
ಯಾರಿಗೆ ಬೊಗ್ಗಾವಲ್ಲ
ನನಗಾಗಿ ಬಗ್ಯಾವ ಅವು
ಕೀಲ ನೋಡಿ ನರ ತಪ್ಸಿನಿ
ಇಲ್ದಿದ್ರೆ ಸಾಮಾನ್ಯ ಹೆಂಗಸರಲ್ಲ ಅವ್ರು
ಹೆಸರೇನ್ರೀ
ಮುಂದೆ ಬರಾಕಿ ಚಿತ್ರಗಿರಿ ಪಟ್ಣದಾಗ ಚಿತ್ರಾಂಗಿ
ರಾಕ್ಷಾಸಿ ಕೈಯಾಗ ಬೆಳಕಂಡಾಕಿ
ಆಕ್ಹಿಂದೆ ಬರಾಕಿ ಚಾವುಲರಾಜನ ಮಗಳು ಶಾಮಗಂಧಿ
ಸ್ನಾನ ಮಾಡಿದ ನೀರು ಲಗು ಹೊಡ್ಸಾಕಿ
ಹೋಗೋ ಜೀವ ಗಂಡಸರ ಕೊಲ್ಲಾಕಿ
ಆಕ್ಹಿಂದೆ ಬರಾಕಿ ಕಾಡಿನ್ಯಾಗೆ
ಏಳು ಸಮುದ್ರ ಕಡೆಗೆ ಎದಿನಗಂಧಿ
ಮದ್ದಿದ್ರೆ ಇದ್ದೆ ಮಾಡಾಕಿ
ಅಬ್ಬಬ್ಬಾಬ್ಬಬ್ಬಾ
ನಾನೇ ಅಂದಕಂಡೆ
ನನಗಿನ್ನ ಪರಾಕದವ್ರು ಇವು ನಮ್ಮಕ್ಕನೋರು

ಶರಣ್ಣಕ್ಕ ನಿಮ್ಮ ಮೂವಾರುಯಕ್ಕಾ
ಆಗ ಎಲ್ಲವು ಇನ್ನುವಮ್ಮಾ ನಿಮಗೆ    || ತಂದಾನ ||

ಶರಣಮ್ಮ ತಂಗಿ ಅಂತ
ಆಗ ಇನ್ನ ಚಿತ್ರಗಿರಿ ಪಟ್ಣದಾಗಲಿದ್ದ
ಈಗ ನಿನ್ನ ಪಾದಕ್ಕೆ ಶರಣು ಅಂತ ಮುಗುದ್ರ
ದೇವಾಸ್ಥಾನೀನ ಕರಕಂಡು ನಾಲಾರ್ನು ಕರಕಂಡು

ಆಗ ಮಗ ದಾರಿ ಬಿಟ್ಟಾನಮ್ಮ
ದೇವಗಿರಿ ಪಟ್ಣಾಗಿ ಬಿಟ್ಟನಮ್ಮ
ಭೂಪತಿ ಪಟ್ಣಕ್ಕೆ ಮಗ ಬಂದನಮ್ಮ   || ತಂದಾನ ||

ಶರಣು ಮಾವಾ ಭೂಪತಿರಾಜ
ಏನ ಅಪ್ಪಾ ಹುಲಿಕಡದ ಪುಣ್ಯಾತ್ಮ ಬಂದೇನಪ್ಪಾ
ಆಗ ಹೋಗಿದ ಕಾರ್ಯ ನೆಟ್ಟಗಾಯ್ತು
ಆಯ್ತು ಮಾವ ನಿನ್ನ ದಯಲಿದ್ದ
ಅವ್ರು ಯಾರಪ್ಪಾ ನಾಲೋರು ಬರ್ತಾರ
ಅಯೋ ನಾಲೋರು ದರ್ಬಾರು ಹೇಳಬೇಕಂದ್ರೆ
ಅವ್ರ ಹೇಸರ್ಹೆದ್ರೆ ಎದೆ ಒಡಿತಿ
ಎದಕಪ್ಪಾ ಸಾಮಾನ್ಯ ಹೆಂಗಸ್ರಲ್ಲಾ
ಮುಂದೆ ಬರಾಕಿ ಏದಿನಗಂಧಿ
ಆಕಿ ಹಿಂದೆ ಬರಾಕಿ ಶಾಮಗಂಧಿ
ಆಕಿ ಹಿಂದೆ ಬರಾಕಿ ರಾಕ್ಷಾಸಿ ಕೈಯಾಗ ಚಿತ್ರಾಂಗಿ
ಆಕಿ ಹಿಂದೆ ಬರಾಕಿ ದೇವಸ್ಥಾನಿ
ಅಯ್ಯಯಪ್ಪ ಅವ್ರೆಲ್ಲಾರೂ ಸುಮ್ನೆ ಬಂದಾರ
ಸುಮ್ನೆಲ್ಲಾ ಯುದ್ದಕ್ಕ ಬಂದಾರ
ನನ್ನ ಕೊಲ್ಲಾಕ
ಕೀಲು ನೋಡಿ ನರ ತೆಗೆಸಿ ಬಿಟ್ಟೀನಿ ನಾನು
ನನಗಾಗಿ ಬಗ್ಗ್ಯಾವ
ನಾನೆನು ಬ್ಯಾಡ ಅಂದ್ರ ಅವೇ ಬರ್ತಾವ ಹಿಂದೆ
ನನ್ಮಗಳು ಒಬ್ಬಾಕೆಲ್ಲಾ ಹುಲಿ
ಕಡ್ಡಿದ್ದಕ್ಕೆ ಕೊಟ್ಟಿನಿ ಅಂದೆ
ನನ್ಮಗಳು ಬಾಯಿಸತ್ತಾಕಿ
ಈ ನಾಲೋರೊಳಗೆ ನನ್ನ ಮಗಳು ಇರಬೇಕಂದ್ರೆ
ಇರ್ತಾಳೆನಪ್ಪ ಅಂದ
ನೋಡ್ಮಾವ ಏನಂತಾರ
ತಾಳಿಕಟ್ಟಿ ಬಿಟ್ಟು ಹೋದ್ರೆ
ಎನಂತಾರ ಲೋಕಕ್ಕ
ಹೇಣ್ತಿ ಸಲುವಲಾರ್ದ
ಬಿಟ್ಟು ಹೋದನಪ್ಪಾ ತಾಳಿಕಟ್ಟಿ ಅಂತ ಅಂತಾರ
ನಾನು ಏಳು ಸಮುದ್ರಾ ಕಡೆಗೆ
ಮೇಟಿ ಔಷಧಕ್ಕ ಹೋಗಿನಿ
ಈಗ ಬಂದೀನಿ ಅವ್ರೆಲ್ಲಾರ
ಬಾ ಅಂತ ಕರಿದಿಲ್ಲ
ನಾನೇನು ನಿನ್ನ ಮಗಳ್ನ ಕೊಡು ಅಂತ ಹೇಳಿಲ್ಲ
ಹುಲಿ ಕಡಿದಿದ್ದಕ್ಕೆ ಬ್ಯಾಡೋ ಅಂದ್ರೆ
ನೀನು ಕೊಟ್ಟು ಮಾಡಿದಿ

ಮಾವ ಕಳಿಸಿದ್ರೇನು ಸಂತೋಷೆ
ನೀನು ಉಳಿಸಿದ್ರೇನು ಸಂತೋಷ ||ತಂದಾನ ||

ಬರಲಿಲ್ಲ ಅಂತ ಮಾತು ಬರುತೈಂತ
ನಾನು ಬಂದು ಮಾತಾಡಿ ಹೋತಿನಿ
ಕಳಿಸಿದ್ರೆ ಒಂದೇ ಕಳಿಸದಿದ್ರೆ ಒಂದೇ
ಸಂತೋಷ ಅಂದ ನೋಡಪ್ಪಾ ಕಳಿಸಿದಿದ್ರೆ ಹ್ಯಾಂಗ
ಮತ್ತ ನೀ ಬರ್ತೀಯಾ ಬರೋನಲ್ಲಾ
ಅಂತ ಏನ್ಮಾಡಿದ ಭೂಪತಿರಾಜ ಆಗ ಐದು ಮಂದಿಗೆ ಉಡೆಕ್ಕಿ ಹಾಕಿದ
ಶರಣಮ್ಮ ಐದು ಮಂದಿ ಮಕ್ಕಳೆ
ಐದು ಮಂದಿ ಒಬ್ಬನನ್ನೇ ಮಾಡಿಕ್ಯಂಡೀರಿ
ಈಗ ಐದು ಮಂದಿ ಕಲ್ತು

ಒಬ್ಬರು ಮಾತದಾಗ ನೆಡೀರಮ್ಮಾ
ಹೋಗಿಬರ್ರಿ ನಮ್ಮ ಮಕ್ಕಳಾರೀ ಶರಣು
ಆಗ ಆಕಿ ಕೈ ಚೀಲ ಕೇಳಾಕಿ            || ತಂದಾನ ||

ಏನ್ರೀ ಈಗನ್ನ ಐದು ಮಂದಿ ಆದ್ವಿ
ಹೋಗಾ ಖಯಾಲಿದ್ರೆ ಅಲ್ಲೇ ಹೋತಿದ್ದೆ
ಏನ್ರೀ ಕೈಚೀಲ ಕೊಡ್ರಿ

ಬರೇ ಕೈಲಿ ನಾನು ದಾರಿ ನಡ್ಯಂಗಿಲ್ಲ
ಬಾಮ್ಮ ಕೈ ಚೀಲ ನನ್ನ ಕೇಳಬ್ಯಾಡ ಬಾಮ್ಮ
ಜೀವನ್ನ ಕಳದೇನು ಕೈಚೀಲ ನಾನು ಕೊಡೋದಿಲ್ಲ        || ತಂದಾನ ||

ಅಂತ ಇನ್ನ ಗೊಲ್ರ ಹುಡುಗ ಶರಬಂದರಾಜ
ಐದು ಮಂದಿ ಹಿಂದೆ ಬರುತಾರ
ಮಗ ಮುಂದೆ ಹೋತಾನ ಕೈಚೀಲ ಹಿಡ್ಕಂಡು

ಅಲ್ಲಿದ್ದ ಮಗನಮ್ಮ ಒಂದು ಗಾವುದ ಬಂದಾನ ಹುಡುಗ
ಹೇs ಮೂರು ಗಾವುದ ಬಂದಾನ
ಮೂರು ದಾರಿ ಕಲತಾವ    || ತಂದಾನ ||

ಮೂರು ದಾರಿ ತಲ್ಲಿ ನಿಂತಗಂಡು ಆಲೋಚನೆ ಮಾಡಿದ
ಇದು ಇಲಾಮಂತರ ಪಟ್ಣಕ್ಕೆ ಹೋಗೋ ದಾರಿ
ಇದು ಚಾಂಪುರ ಪಟ್ಣಕ ಹೋಗೋ ದಾರಿ
ಇದು ನಾನು ಬಂದ ದಾರಿ ಇರೋದು