ಇವ್ರು ಆರು ಮಂದಿ ಹೆಂಡ್ರು
ಆರು ಮಂದಿ ಅಣ್ಣೋರು
ಲೇ ಮಿಂಡ್ರುಗ್ಹುಟ್ಟದವನು ರಾಜ್ಯ ಆಳೋಕೆ ನಿಂತಿಬಿಟ್ಟ
ಗಂಡಗ್ಹುಟ್ಟಿದೋರು ಹಿಂದಕಾದ್ವಿ
ಆರು ಮಂದಿ ಕಣ್ಣು ಕಳಕಂಡು ಬಂದ್ವಿ
ಏಳು ಮಂದಿ ಹೆಂಡ್ರಾದವರು ಅವನಿಗೆ
ರಾಜ್ಯತನ ಕೊಟ್ಟ
ಲೋಕ ಏನಂತಾರ
ಮಿಂಡ್ರಗ್ಹುಟ್ಟಿದವ್ರು ಹಿಂದಂತಾರ
ಹೇ ಆಗ ನಿಮ್ಗೆ ಕಣ್ಣು ಹೋಗ್ಯಾವಪ್ಪ
ಯಾರು ಹೆಣ್ಣು ಕೊಡತಾರ
ಏನಿಲ್ಲ ಮಕ್ಕಳಾರೆ ಸಟ್ಟ ಸರವೊತ್ತಿನ್ಯಾಗ ಹೋಗಿ
ಆಗ ಚಿಮ್ನಣೆ ಉಗ್ಗಿ ಮನೆಗೆ ಬೆಂಕಿ ಇಟ್ಟು ಬಿಡ್ರಿ
ಏಳು ಮಂದಿ ಹೆಂಡ್ರು ಅವನು ಸತ್ತೋಗುತ್ತಾರ

ಆಸ್ತೆಲ್ಲಾ ನಮಗೆ ಬರುತೈತಲೆ
ಆಸ್ತಿ ನೋಡ್ಯನ್ನ ಹೆಣ್ಣು ಕೊಡುತಾರಲೆ
ಆಗ ಗಂಡ್ರು ಕಣ್ಣು ಹೋದರೇನು       || ತಂದಾನ ||

ಆಗ ಆಸ್ತಿ ನೋಡಿ
ಹೆಣ್ಣು ಮಕ್ಕಳು ಬಾಳ್ವೆ ಮಾಡ್ತಾರಾ
ಅಂಬೊತ್ತಿಗೆ
ಆಗ ಕುರುಡರಿಗೆ
ಎರ್ಡು ಕಣ್ಣಿಲ್ಲಪ್ಪ ಇವರಿಗೆ
ಸಟ್ಟ ಸರುವೊತ್ತಿನ್ಯಾಗ ಬಂದ್ರು
ಏಳು ಮಂದಿ ಹೆಂಡ್ರು ತಾವು
ಮೂರು ಅಂತಸ್ತು ಮಾಳಿಗೆ ಮ್ಯಾಲೆ
ಈಗ ತಾಯಿ ತಂದಿ ತಾವಾಗಿ ಬಂಕದಾಗ
ಇದ್ರೆ ಸಟ್ಟ ಸರುವೊತ್ತಿನ್ಯಾಗ
ಆರು ಮಂದಿ ಅಣ್ಣೋರು ಬಂದು
ನಾಗಚತ್ರಿ, ದೇವಚತ್ರಿ,
ಕುಲಚತ್ರಿ ಮರಿಮಾದಿಚತ್ರಿ
ಇಲ್ಲದ ಮರ್ಯಾದೆ ಕಳೆಯವರು
ಸಟ್ಟು ಸರುವೊತ್ತಿನ್ಯಾಗ
ಆಗ ಮನಗೆ ಚಿಮ್ನೆಣ್ಣೆ ಉಗ್ಗಿ
ಸಟ್ಟ ಸರುವೋತ್ತಿನ್ಯಾಗ
ಆಗ ತಳಕ್ ಅಂದ್ರೆ ಮಕ ಕಾಣುತ್ತೆ
ಇಲ್ದಿದ್ರೆ ಇಲ್ಲ

ಬೆಂಕಿ ಹಚ್ಚಿ ಅವರು ಹೋಗಿ ಬಿಟ್ಟರಮ್ಮಾ
ಮನಿಗಿ ಬೆಂಕಿ ಇಟ್ಟು ಬಿಟ್ರು
ಯಮ್ಮಾ ಧಗಧಗ ಧಗಧಗ ಮನಿ ಉರಿತೈತವ್ವೋ
ಕೆಳಗ ಧಗಧಗಧಗಧಗ ಉರಿಕ್ಯಂತು ಬರ್ತೈತಿ            || ತಂದಾನ ||

ಬಂಕದ್ದಾಗಿದೋರು
ಯಮ್ಮಾ ನನಮಗ ಸತ್ತ ಅಂತ
ಆಗ ಬಂಕ ಬಿಟ್ಟು ಮನಿ ಬಿಟ್ಟು
ಓಡಿಹೋಗಿ ನಿಂತುಗಂಡು
ದುಃಖ ಮಾಡ್ತಾಳಪ್ಪ ಸಿರಿದೇವಿ
ಮಾಳಿಗೆ ಮ್ಯಾಲೆ ಇದಾರಪ್ಪಾ
ಏಳು ಮಂದಿ ಹೆಂಡ್ರು ಮಗ ಶರಂದ
ಯಪ್ಪಾ ಸತ್ತೋತೀಯ ಮಗನೆ
ಅಂತ ದುಃಖ ಮಾಡ್ತಾಳ
ಮಗ ನೋಡಿದ
ಈಗ ನಾನೊಬ್ಬನಾದ್ರೆ ಎಗರಬಹುದು
ಈ ಏಳು ಮಂದಿ ಹೆಂಡ್ರು
ಛಿ ಏಸುದಿನ ಇದ್ರೆ ಸಾಯೋದೆ
ಅಂತ ಸ್ವಾಮಿ ನಮ್ಮ ಏಳು ಮಂದೀನ
ಕೊಲ್ಲು ಸ್ವಾಮಿ
ಅಂತ ಆಗ ಕೈಮುಗೀತಾನ
ತಾಯಿ ಸೆರಗೊಡ್ಡಿ ಶರಣು ಮಡೋ ಹೊತ್ತಿಗೆ

ಮರಡ್ತಾಲೆ ಮಾಡವಾಯಿತಮ್ಮಾ
ಸುರುತಾಸುರುತಾತಿ ಮಳೆರಾಜನ್ಹಾಡ
ಉಗಾದಿ ಮಳೆ ಊದಿ ಬಡಿತೈತಮ್ಮ
ಧಗಧಗ ಉರಿಯೋದ ಗಂಪಾಂಗೆ ಆರೈತೋ  || ತಂದಾನ ||

ಧಗಧಗ ಉರಿಯೋ ಮನಿ ಗಪ್ಪ ಆರಿಬಿಡ್ತಪ್ಪ
ಆರೋ ಹೊತ್ತಿಗೆ
ಹಂಗ ಕುಸೇ ಬಿದ್ದು ಬಿಡ್ತಪ್ಪ ಮನೆ
ಏಳು ಮಂದಿ ಹೆಂಡ್ರು ಬಂದು
ಆಗ ಮಗ ಬಂದು
ತಾಯಿ ಪಾದ ಹಿಡಕಂಡ
ಯಮ್ಮಾ ಇಷ್ಠು ನಾವು ಭೂಮಿ ಮ್ಯಾಲೆ ಒದ್ದ್ಯಾಡಿ
ಈಗಿನ್ನ ಸುಖದಲ್ಲಿ ತಾಯಿ ತಂದಿ ಏಕಾಗಿ
ಸುಖ ಜೀವದಲ್ಲಿ ನಡ್ಯಾನ ಅಂದ್ರೆ
ಯಾರಿಗೇನು ಪಾಪ ಮಾಡಿದ್ವಿ
ಯಾರಿಗೇನು ಪಾಪ ಮಾಡಿದ್ವಿ
ಯಾರಿಗೇನು ಕರ್ಮ ಮಾಡಿದ್ವಿ

ಯಮ್ಮಾ ಇನ್ನ ನನ್ನ ಮನೆಗೆ ಬೆಂಕಿ ತಾಯಿ
ಅಮ್ಮ ಬೆಂಕಿ ಹಚ್ಚಿ ಕೊಲ್ಲಬೇಕಂತ ಮಾಡ್ಯಾರ ಅಮ್ಮ    || ತಂದಾನ ||

ಅಪ್ಪಾ ಯಾರೇನು ಹಚ್ಚಿಲ್ಲಪ್ಪಾ ಲೋಕದಾಗ
ನಿಮ್ಮ ಆರು ಮಂದಿ ದೊಡ್ಡಮ್ಮನೋರು
ನಿಮ್ಮಪ್ಪಗ ಏಳು ಮಂದಿ ನಾವು ಹೆಂಡ್ರು
ಆಗ ಮಂಕನ ದೇವಿ ಮಾಡಲ್‌ದೇವಿ
ಗಿರಿದೇವಿ ಸುಂಕಮ್ಮದೇವಿ
ನಾನು ಆರು ಮಂದಿ ಚಿಕ್ಕಾಕೆ ಸಿರಿದೇವಿ
ಆಗ ಅವರು ಕುಲ ಮರ್ಯಾದೆ ಇಲ್ಲದಂಗ ಕಳೆಯೋರು
ಕಣ್ಣಿಲ್ಲದವ್ರು
ಆಗ ನಿಮ್ಮಣ್ಣವರು ಬಂದು
ಬೆಂಕಿ ಹಚ್ಚಿ ಹೋಗ್ಯಾರಪ್ಪಾ
ಛೀ ಅಮ್ಮ ಅಂಥ ಮಾತು ನುಡಿಬ್ಯಾಡ ತಾಯಿ
ಮೊದಲೇ ಕಣ್ಣು ಕಾಣೋದಿಲ್ಲ
ಎರ್ಡು ಕಣ್ಣು ಹೋಗ್ಯಾವ
ಅವ್ರು ಬಂದು ಬೆಂಕಿ ಇಟ್ಟಿರ್ತಾರೇನಮ್ಮ
ಕಣ್ಣೀಲಿ ನೋಡಿದ್ರೆ
ಕೈಕಾಲು ಕಟ್ಟಿ ಹಂಗೆ ಬೆಂಕ್ಯಾಗ ಒಗಿತಿದ್ದೆ
ನೋಡಲಾರ್ದ ಅನುಬಾರ್ದಮ್ಮ
ಮಗನಾ ಇರುಗೋಡಿಸೋದಿಲ್ಲ ನಮ್ಗ
ಈ ಬೆಂಕಿ ಹಚ್ಚಿದ್ರನ್ನ ಸಾಯ್ಲಿಲ್ಲ
ಉಳುಕಂಡ್ರು ಅಂತ
ಏನನ್ನ ಯಿಸ ಇಟ್ಚುಕೊಲ್ಲಿ ಇಡ್ತಾರ
ಯಪ್ಪಾ ಈ ಲೋಕನೇ ಸಾಕು
ಈಗ ದುಷ್ಟದೇ ಆಳಲಿ
ಜೀವದಲ್ಲಿ ನಾವು ಹೋಗಾನ ಅಂತ
ಒಂದು ಪಾದ ಎರ್ಡು ಕೈ ಜೋಡಿಸಿ

ಅವರಿನ್ನು ತಪಸಾಗಿ ನಿಂತಾರಮ್ಮಾ
ಸಟ್ಟುಸರುವೊತ್ತಿನ್ಯಾಗ ಜೀವದಾಗಿ   || ತಂದಾನ ||

ಸಟ್ಟು ಸರುವೊತ್ತಿನ್ಯಾಗ
ಸೆರಗೊಡ್ಡಿ ಇನ್ನ ಶರಣು ಮಾಡಿದ್ರೆ

ಸ್ವಾಮಿ ಮ್ಯಾಲೆ ಇದ್ದ ದೇವ್ರು ನಿನಗೆ ಶರಣು
ನಮಗೆ ಲೋಕದಾಗ ನಾವು ಇರುಲಾರೆವೋ
ದುಷ್ಟ ಲೋಕದಾಗ ನಾವು ಕಾಲ ಕಳಿಲಾರ್ಯವೋ ಸ್ವಾಮಿ
ಯಪ್ಪಾ ದುಷ್ಟರೊಳಫೆ ನಾವು ಇರಲಾರೆಯ್ಯೋ
ದುಷ್ಟ ಲೋಕದಾಗ ಕರ್ಮದತಲ್ಲಿ ನಾವು ಇರಲಾರಿವಿ
ನಿನ್ನ ಮಠಕ್ಕೆ ನಮ್ಮನ್ನ ಜೀವ ಎಳಿಯೋ ಸ್ವಾಮಿ
ಜೀವ ಕೊಟ್ಟವನು ಜಿವ ಎಳಿಯಪ್ಪ ನಿನ್ನ ಮಠಕ್ಕೆ           || ತಂದಾನ ||

ಸ್ವಾಮಿ ಜೀವ ಕೊಟ್ಟವನು
ಜೀವ ಎಳಿಬೇಕು
ನಿನ್ನ ಮಠಕ್ಕಾಗಿ ಹೂವಿನ ಗಿಡಕ್ಕೆ ನೀರ್ಹಾಕ್ತಿವಿ
ನಿನ್ನ ಗುಡಿ ಮುಂದೆ ಕಸ ಬಳಿತಿವಿ ಮಠ ಮುಂದೆ
ಸ್ವಾಮಿ ನಿನ್ನ ಸೇವಕನ್ನ ಮಾಡೇವು
ಈ ದುಷ್ಟ ಲೋಕದಲ್ಲಿ
ನಾವು ಒದ್ದಾಡಲಾರೆವು ಸ್ವಾಮಿ ಅಂದ್ರೆ
ಆಗ ಎಲ್ರಾರು ನಿದ್ದೆ ಮಾಡಿ
ಸಟ್ಟುಸರುವೊತ್ತಿನ್ಯಾಗ
ಆಗ ಹೂ ತೊಟ್ಲು ಬಿಟ್ರಪ್ಪಾ ಕೆಳಗ
ಏನ್ರಪ್ಪಾ ಕೃಷ್ಣ ಹಾಲು ಗೊಲ್ರೆ
ನಿಮ್ಗೆ ದುಷ್ಟ ಲೋಕ ಸಾಕುವಾ ಒದ್ಯಾಡಿದ್ರ್ಯಾ
ಇಲ್ಲ ಸ್ವಾಮಿ ನಮ್ಗೆ ಸಾಧ್ಯವಾಗೋದಿಲ್ಲ
ಅಂಗಾರೆ ಎಲ್ಲಿಗೆ ಬರ್ತಿರಿ
ನಿಮ್ಮ ಮಠಕ್ಕೆ ಬರ್ತಿವಿ ಸ್ವಾಂಇ
ನಾವು ಹೂವಿನ ಗಿಡಗ ನೀರ್ಹಾಕೋದು
ಈಗ ಕಸ ಬಳಿತಿವಿ
ನಿನ್ಹೇಳಿದ ಆಜ್ಞೆದಲ್ಲಿರ್ತಿವಿ ಸ್ವಾಮಿ
ಸರಿ ಈಗ ದುಷ್ಠರು ಇನ್ನ ನಿನ್ನ ಅಕ್ಕನವರೆ ಇದ್ದಾರ
ಈಗ ನಿನಗ ಮಕ್ಕಳಿದಾರಂತ

ಅವುರ್ನಾಗೆ ಏನು ಮಾಡ್ತಾನಮ್ಮ
ಮಾವಿಳಣ್ಣುದಾಗೆ ಹುಳ ಮಾಡ್ಯಾನಮ್ಮಾ
ದುಷ್ಟದವರು ಬಾಳದಿವಸ ಬಾಳ ಬಾರ್ದು       || ತಂದಾನ ||

ಮಾವಿಳ ಹಣ್ಣು ಹುಡುಗ್ರಿಗ ಕೊಟ್ಟಿದ್ರವ್ರು
ಮಾವಿಳ ಹಣ್ಣುದಾಗ ಹುಳಾ ಮಾಡಿ
ಆಗ ಒದ್ಯಾಡ್ತಿದ್ರೆ ತಿಪ್ಪೆಗೆ ಒಗೀಬೇಕು ಇವುರನ್ನ
ಈ ಪಾಪಿಷ್ಟರು ಸಟ್ಟ ಸರುವೊತ್ತಿನ್ಯಾಗೆ
ಹೋಗಿ ಬೆಂಕಿ ಹಚ್ಚಿ ಬಂದವ್ರು
ಮನಿಗೆ ಸುಟ್ಟು ಸುರು ಮಂಡಲು ಮಾಡವ್ರು

ನೀವು ಕರೆಯ ಕಾಗಿ ಆಗ್ರಾಲೆ ನೀವು ಊರುಮುಂದೆ ಇರಾಲೆ
ಹೇ ಸತ್ತುಗಂಟು ಹುಡುಕವ್ರು ನೀವು ಸತ್ತ ಹೆಣ ತಿನುಬೇಕು          || ತಂದಾನ ||

ಅವ್ರುನ್ನ ಕೊಲ್ಲಿ ಅವರು
ಗಂಟು ತಿನುಬೇಕು ಅಂತ ಮಾಡಿದವರು
ಕರೇಕಾಕಿ ಆಗಬೇಕು ನೀವು
ಎಲ್ಲಿ ಸತ್ತಿದ್ದೆಲ್ಲಾ ತಿನುಕಾಂತ ಇರುಬೇಕು ನೀವು
ಹೊತ್ತು ಮುಣುಗೊತ್ತಿಗೆ ಊರ ಗೌಡನ ಮಕ್ಕಳು
ಊರ ಮುಂದೆ ಗಿಡದಾಗ ಕುಂದ್ರುಬೇಕು ನೀವು

ಕರೇಕಾಕಿ ಮಾಡ್ಯಾರ
ಅವರು ಆರು ಮಂದಿನ ನೋಡಣ್ಣಾ   || ತಂದಾನ ||

ಕರೆಕಾಕಿ ಆಗ್ಯಾರಾ
ಸಾಂಬಶಿವ ಎನಂತ ಹೇಳ್ದ
ನೋಡಪ್ಪ ನಿಮ್ಮ ತಾಯಿಗೆ
ನಿನಗೆ ನಿನ್ನ ಏಳು ಮಂದಿ
ಹೆಂಡ್ರು ಮಠಕ್ಕ ಬರಬೇಕು

ನಿಮ್ಮಪ್ಪನೆ ಬರು ಬಾರದಪ್ಪಾ
ದುಷ್ಠರೊಳಗೆ ದುರ್ಮಾರ್ಗವೈದನಪ್ಪಾ
ಅವನಿಗ ಕೊಡದಿಲ್ಲಪ್ಪಾ ನಮ್ಮ ಮಟಕೆ ಬಾರಬಾರ್ದು    || ತಂದಾನ ||

ಅಂದ್ರೆ ಆ ತಾಯಿ ಏನಂತಾಳ ಸಿರಿದೇವಿ
ಸ್ವಾಮಿ ದೋಡ್ಡೋರು ಮಾಡಿದ್ದು ಕುರ್ಡಾಗ್ಲಿ
ಕುಂಟಾಗ್ಲಿ ದುಷ್ಟಾಗ್ಲಿ ದುರ್ಮಾಗಾರ್ಗ್ಲಿ
ಇನ್ನ ಮುತೈದೆತನ ಇಲ್ದಂಗಾ
ಜೀವದ ಗಂಡ ಎದುರಾಗಿ ಬಿಟ್ಟು

ನಾನು ಮಟಕೆ ಬರಲಾರೆ ಇಬ್ಬರಿಗೆ ಇದನ ಕೊಡಯ್ಯ    || ತಂದಾನ ||

ಸ್ವಾಮಿ ಕೊಟ್ರೆ ನಮಗಿಬ್ರಿಗಿ ಕೊಡು
ನಿಮ್ಮಟಕೆ ಬರ್ತೀವಿ ಇಲ್ದಿದ್ರೆ ಬ್ಯಾಡ
ಈಗ ನನ್ನ ಮಗನ ಕರ್ಕೋಂಡ್ಹೋಗು ಸ್ವಾಮಿ

ಅಮ್ಮ ನಿಮ್ಗಕೋಸ್ರ ಬಂದೀನಿ ಇನ್ನ ಇಬ್ಬರಾಗಿ ಬರಬೇಕು           || ತಂದಾನ ||

ನಿನ್ನ ಭಕ್ತಿ ನೋಡಿ ಹೂವಿನ ತೋಟ್ಲ ಹಾಕ್ಕೊಂಡು ಬಂದಿನಿ
ಈಗ ನಿನ ಗಂಡನಕೋಸ್ರ ಹಾಕ್ಯೋಂಡು ಬಂದಿಲ್ಲ
ಇಲ್ಲ ಸ್ವಾಮಿ

ನನ್ನಲಿದ್ದವಣ್ಣಯ್ಯ ನನ ಗಂಡಗಾಗಿ ಬರಲಯ್ಯ
ಹೆಣಮಕ್ಳ ಕಾಲಯ್ಯ ಗಣಮಕ್ಳು ರಾಜ್ಯವಾಳಾಲಿ
ಕಡೇಲಾಸ್ಟು ನೋಡಮ್ಮ ನಿನ್ನ ಗಂಡುಗು ಕುಂಡ್ರಾನೊ              || ತಂದಾನ ||

ಕೇಳಮ್ಮ ಕೆಡೆಲಾಸ್ಟು ನಿನ್ನ ಗಂಡ ದರೀದ್ರ ಕುಂದ್ರೋವ್ನು
ಈಗ ಹೆಣ್ತಿತೀ ಇದ್ದುದುಗೆ ಅವನಿಗೆ ಮೋಕ್ಷಾಗೈತಿ
ಇಲ್ದಿದ್ರೆ ಅವುನ ಕರೇ ಕಳಿಸ್ತಿದ್ದಿಲ್ಲ ನಮ್ಮ ಮಠಕ್ಕ
ಅಂತ ಮುತ್ತಿನ ಶರಗಿಲಿ
ಇನ್ನ ಶರಣು ಮಾಡ್ಬೇಕಂತ
ಆ ತಾಯಿ ಬನ್ನಿಪತ್ರ ಕ್ಯಾದಿಗಿ ಹೂವ್ವಾ
ಆಗ ಅಂಬ್ರೆಹೂವ್ವಾ ಎಕ್ಕೆ ಹೂವ್ವಾ ತಂದು

ಆಗ ತೊಟ್ಲಿಗಿ ಇನ್ನ ಹಾಕ್ಯಾನವ್ವಾ
ಆಗ ಪೂಜಿನೆ ತಾಯಿ ಮಾಡ್ಯಾಳಮ್ಮಾ
ಮುತ್ತಿನ ಸೆರಗಿಲಿ ಶರಣ ಮಾಡ್ಯಾಳಮ್ಮಾ
ಬಲಪಾದ ಇಟ್ಟಾಳಾ ಇನ್ನ ತೊಟ್ಲದಾಗ ಕುಂತಾಳ ದೇವಿ           || ತಂದಾನ ||

ಆ ಸಿರಿದೇವಮ್ಮ ದುಷ್ಠ ಲೋಕ ಬಿಟ್ಟು
ಆ ತೊಟ್ಲದಾಗ ಕುಂತ ಮ್ಯಾಲೆ
ಮಗ ಎರಡು ಕೈಲಿ ಶರಣು ಮಾಡಿ

ಹಡ್ದ ತಾಯಿ ನೋಡಮ್ಮಾ ಎಡಗೈ ನನ್ನ ಮಾಗಮ್ಮ
ಎಡಗೈ ಮಗ                                                                   || ತಂದಾನ ||

ಅಂತ ಆಗ ತಾಯಿ ಬಗಲಾಗ ಎಡಗೈ ಕಡಿಗೆ ಕುಂತ
ಆಗ ಏಳು ಮಂದಿ ಸೋಸಿನ್ಯೋರು
ಈಗ ತಾವು ತೊಟ್ಲ ಶರಣು ಮಾಡಿ
ಬಲ ಪಾದ ಇಟ್ಟು ಕುಂತ್ಕೊಂಡ್ರು

ಆಗ ದುಷ್ಟಗಂಡ ವಾಗಿಯಮ್ಮ
ಆಗ ಎರಡು ಕೈ ಶರಣು ಮಾಡ್ಯಾನಮ್ಮಾ
ಸರಿದೇವಿ ಕಡೆಗಮ್ಮ ಬಗಲಾಗ ಬಲಗೈಯೆ                             || ತಂದಾನ ||

ಬಲಕ್ಕಾಗಿ ಕುಂತ್ಕೊಂಡ ಆತ
ಆಗ ಬಲಕ್ಕೆ ಕುಂತು ಮ್ಯಾಲೆ

ದುಷ್ಟ ಲೋಕ ಹೋತಿವಿ ನಾವು ಲೋಕವೆಲ್ಲ ಬಿಟ್ಟಮ್ಮ
ಲೋಕ ಬಿಟ್ಟು ಹೋತಿವಿ
ನಮ್ಮ ಮನೆಗಳೈದಾವ ನಮ ಆಸ್ತಿ ಭೂಮಿ ಹೊತ್ತಲ್ಲ
ಭೂಮಿಗಳೂ ಮನೆಗಳು ಐದಾವ                                         || ತಂದಾನ ||

ಈ ಲೋಕ ಕಣ್ಣಿಲಿ ನೋಡ್ಲಾರ್ದಂದ ಹೋಗ್ತಿದ್ವಿ
ಕಣ್ಣಿಲಿಂದ ನೋಡ್ದಂಗ ಆಗ ಕಿವಿಲಿ ಕೇಳಿ

ಕೈಲಿ ಪೂಜಿ ಮಾಡಿದವ್ರಿಗೆ ಅವ್ರು ಲೋಕ ನೆಡಿತೈತೋ
ನಮ್ಮನ ಕಳದವರಪ್ಪ ಅವ್ರು ನಿನ್ನ ಕಳ್ಕಂಡ ಹೋಗ್ತಾರ || ತಂದಾನ ||

ಈ ಲೋಕನೆ ನೋಡ್ಲಾರ್ದಂಗ ಹೋಗಿವಿ
ಈಗ ಕಣ್ಣಿಲಿ ನೋಡ್ಲಾರ್ದಂಗ
ಕಿವಿಲೆ ಕೇಳಿಕ್ಕ ಇದು ನನ್ನ ಮನ್ಯಾಗ
ಪೂಜೆ ಮಾಡ್ದೋರಿಗೆ ಆಗ ಆವ್ರಿಗೆ ಬೆಳಕು
ಈಗ ಇನ್ನ ಕೇಳ್ಲಾರದಂಗಿದ್ದೋರು

ಅವ್ರು ಹೋಗಿ ಬಿಡತಾರ ಇನ್ನ ದುಷ್ಟ ಲೋಕ ಇರವರು
ಅವರು ಶಿವ ಶಿವ ಅಂದರಾ ಶಿವಲೋಕ ಮಠಕ್ಕ ಬಂದಾರ
ಶಿವನ ಮಠಕ್ಕ
ಮೂರವತಾರಾದಾರೆ ನಿನ ಜೀವಮಯ ಕೃಷ್ಣಪ್ಪ
ಗೊಲ್ರು ಕೃಷ್ಣ                                                                    || ತಂದಾನ ||

ಹಾಲಗೊಲ್ರಂತ ಈಶ್ವರ ಮಠಕ್ಕೆ ಹೋಗಿ ಬಿಟ್ರಪ್ಪ
ಇಲ್ಲಿಗ ಶರಬಂದ ರಾಜ ಹಾಲುಗೊಲ್ರದು
ಇಲ್ಲಿಗಿ ಮುಗಿತಪ ಕತಿ

 

ಮಂಗಳ

ಮಂಗಳ ಮನೆ ಮಂಗಾಳ ಮನೆ ಮಂಗಳ ಆರತಿನೇ
ಮಂಗಳ ಮನೆ ಮಂಗಳ ಮನೆ ಜಯ ಮಂಗಳಾ || ಮಂಗಳ ||

ಕಾಯಿ ಕರ್ಪೂರವೆಲ್ಲ ನಿನಗೆ ತಂದೀವಿ
ಗಂಧ ಕಸ್ತೂರಿವೆಲ್ಲ ನಿನಗೆ ತಂದೀವಿ  || ಮಂಗಳ ||

ಆಗ ಬಂಗಾರದಾರತಿ ನಿನಗೆ ಇಟ್ಟೀವಿ
ನಿನ್ನ ಜೀವ ಜಲ್ಮಕ್ಕಾಗಿ ನಾವು ಒಪ್ಪಿಸೀವಿ || ಮಂಗಳ ||

ಲೋಕವೆಲ್ಲ ಇನ್ನ ನಿನ್ನ ಪೂಜೆ ನಡೀತದ
ರಾಜ್ಯನೇ ಲೋಕವೆಲ್ಲ ನಿನಗೆ ಬರುತ್ತಾರ || ಮಂಗಳ ||

ನಡಕಂಡು ನಡದು ಬಂದರೆ ವರವು ಕೊಡು ಬಾ
ಎಲ್ಲೈದಿ ನನ್ನ ಲೋಕ ಗುಡ್ಡದಾಗೇನೆ || ಮಂಗಳ ||

ಕೋಮಾರಿಸ್ವಾಮಿಯಾಗಿ ನೀನು ನಿಂತಿಯಾ
ಹೆಣ್ಮಕ್ಕಳು ನೋಡಲಾರದ ಲೋಕವೈದಿಯಾ || ಮಂಗಳ ||

ಕೃಷ್ಣಗೊಲ್ಲ ಶರಬಂಧರಾಜ ದೇವರಾದಿಯಾ
ಶಿವಶಿವ ಅಂತ ಶಿವರೋಕ್ಕಕ್ಹೋದಿಯಾ || ಮಂಗಳ ||