ಬರ್ತಾನಮ್ಮ ಇನ್ನಾಗಿ ಗೊಲ್ರ ಹುಡುಗ ಶರಬಂದರಾಜ              || ತಂದಾನ ||

ಗೊಲ್ರ ಹುಡುಗ
ಶರಬಂದರಾಜ
ಈಗ ಮದ್ದಿದ್ದ ಕುಲದಲ್ಲಿ
ಏದಿನಗಂಧೀನ ಕರಕಂಡು
ಈಗ ಚಾಂಪುರ ಪಟ್ಣಕ್ಕ ಬಂದಾ
ಆಗ ಮೆಣಸು ಓಣಿಗೆ ಬಂದ
ಚಿತ್ತಿನಿ ಶಂಕಿನಿ

ಯಮ್ಮ ಮದ್ದು ಅವ್ವಾ ಮದ್ದವ್ವಾ
ಕಾಶಿಲೋಕ ನನ್ನ ಲೋಕ
ಮದ್ದು ಮಾರದವನೆ ಬಂದ
ಚಿತ್ತಿ ಶಂಕಿನಿ ನೋಡಿ ಬಿಟ್ರು
ಯಮ್ಮಾ ಬಗ್ಗಿವಾಗೇ ನೋಡಿ ಬಿಟ್ರು
ಯಮ್ಮಾ ತಮ್ಮ ಮದ್ದು ಮಾರೋನು        || ತಂದಾನ ||

ಅಂತಾವ
ಚಿತ್ತಿ ಶಂಕಿನಿ ನೋಡಿದ್ರು
ಯಮ್ಮಾ ಯಾರಲ್ಲಾ ಈತೆ ಮದ್ದು ಮಾರೋನು
ಯಮ್ಮ ಆತನ ಮಾಡಿಕ್ಯಾಬೇಕಂದ್ರ
ನಮ್ಮನ ಮಾಡಿ ಹೋಗ್ಯಾನ ಅಂತ
ಮೆಣಸು ಓಣ್ಯಾಗಲಿದ್ದ
ಆಗ ಮಗ ಮಾಯಾ ಬಜಾರು ಬಿಟ್ಟು
ಈಗ ಲಕ್ಷ್ಮೀ ಬಜಾರಕ್ಕೆ ಬಂದ

ತಂದೆ ಕಛ್ರಿ ಬರುತಾನ
ಔಷಧ ತಗಾಂಡು
ಗೊಲ್ರ ಹುಡುಗ ಲೋಕದಾಗ                       || ತಂದಾನ ||

ಬಂದ
ಆಗ ಯಪ್ಪ ಮದ್ದು ಮಾರೋ ಹುಡುಗ
ಈಗ ಬಾರಪ್ಪ
ನಮ್ಮ ಗೌಡ ಮದ್ದು ಮದ್ದು ಅಂತಾನ
ಬಂದ
ಶರಣಪ್ಪ ಹುಡುಗ ಬಂದೇನೋ
ಬಂದೆನಯ್ಯಾ ನಿನ್ನ ಮಕ್ಕಳು ಔಷಧಾ ತಂದ್ರಾ
ಅಯ್ಯೋ ಕಣ್ಣು ಕಳಕಂಡು ಬಂದಾರ
ಯಾವ ಔಷಧ ತಂದಿಲ್ಲಪ್ಪಾ ಹುಡುಗ
ತಮ್ಮ ಕಾಶಿಲೋಕ ಹುಡುಗ
ಮದ್ದು ಮಾರೋ ರಾಮಜೋಗಿ
ನನ್ನ ಹುಣ್ಣು ಬೇಸು ಮಾಡಪ್ಪಾ
ಅಯ್ಯೋ ನಿನ್ನ ಮಕ್ಕಳು ತಂದಾರೇನೋ
ನಾನು ಹಾಕಿ ಹೋಗಾನ ಅಂತ ಬಂದೆ
ಈಗ ಆಗ್ಲೆ ಹೊಂಟ್ಹೋಗಿಯಾ ಅಂದುಕಂಡಿದ್ದೆ
ಇನ್ನ ಐದಿಯೇನಯ್ಯ
ನೋಡಪ್ಪ ಏನ್ಮಾಡ್ತಿ
ಇತ್ತ ಸಾಯುವಲ್ಲ
ಇತ್ತ ಉಳೀವಲ್ಲ
ಆಗ ಜೀವಕ್ಕ

ನಾನು ಒಂದು ಏನು ಮಾಡಲಪ್ಪಾ
ಆಗ ಒಂದು ಜೀವದಾಗಯಪ್ಪಾ        || ತಂದಾನ ||

ಅಂಬೋತ್ತಿಗೆ
ಹಾಂಗಾಂಗ್ಲಿ ಅಂತ ಜೀವಕ್ಕ ಏನು ಮಾಡಿದ್ರು
ಈಗ ಬಟ್ಟೆ ತೆಗೀರಪ್ಪ ಅಂದ್ರು
ಬೆನ್ನ ಮ್ಯಾಲೆನ ಬಟ್ಟೆ ತಗದ್ರು
ಆಗ ತಂದೆ ಕಾಭೋಜರಾಜ
ಯಪ್ಪಾ ಮಗನಾ ಈಗ ನನ್ನ ಜೀವ
ಬೇಸು ಮಾಡಪ್ಪ ಶರಣು ಮಾಡ್ತಿನಿ
ಕೇಳಿರೋ ಇನ್ನು ಮನ್ಯಾಗ ಇದ್ದವರೆ
ಆಗ ಬಿಸಿನೀರು ಕಾಸರಪ್ಪ ಅಂದ
ಅಗ ಬಿಸಿನೀರು ಕಾಸಿದ್ರು
ಹೊಟ್ಟ್ಯಾಗ ಕಳ್ಳು ಕಿತ್ತಿಗ್ಯಂಡು ಬರುತಾವ
ಹೆಣ ನಾತು ಹೊಡೀತೈತಿ ಜೀವಕ್ಕಾಗಿ
ಹೊಡಿತ್ರಿದ್ರೆ ಎದಿನಗಂಧಿ ಏನ್ಮಾಡಿದ್ಳು
ಅಷ್ಟು ಬೇಧವಿಲ್ಲಪ್ಪ ಮಲ್ಲೆ ಹೂವಂತೆ ಜೀವದವಳು
ಎಡಗೈಲಿ ಬಿಸಿನೀರು ಹಿಡಿಕಂಡು
ಬಲಗೈಲಿ ಇನ್ನ ಅನ್ನ ತಂಬೋ ಕೈಲಿದ್ದ

ಹುಣ್ಣು ಮ್ಯಾಲೆ ಕೈಯಿಟ್ಟಾಗ ತೊಳಿತಾಳಮ್ಮ
ಎದಿನಗಂಧಿ ಸೋಸಿ ಆದ್ರೆ
ಆಗ ಕೈಲಿದ್ದ ಹುಣ್ಣು ತೊಳೆದಳಮ್ಮ               || ತಂದಾನ ||

ಆಗ ಹುಣ್ಣು ತೊಳ್ದು
ಆಗ ಮುತ್ತಿನ ಸೆರಿಗಿಲಿ ಹುಣ್ಣು ಒರೆಸಿಬಿಟ್ಳು
ತಕ್ಕಡಿ ಕೈಯಾಗ ಹಿಡಕಂಡ್ಳು
ರೂಪಾಯಿ ತಕ್ಕಡಿಯೊಳ್ಗ ಹಾಕಿದ್ರು
ಗಾಜಿನ ಬುಡ್ಡದಾಗ ಮದ್ದು ಥೈ ಥೈ ಥೈ ಕುಣಿತೈತಿ
ಆಗ ಸೌಟಿಕೂಟ ತಗಂಡು
ತಕ್ಕಡಿ ಒಳಗ್ಹಾಕಿ ತೂಕ ಮಾಡಾನ
ನವಣೆಷ್ಟು ಹೆಚ್ಚಿರಬಾರ್ದು
ಜೋಳದಷ್ಟು ಕಮ್ಮ ಇರಬಾರ್ದು ಅಂತ
ತೂಕ ಮಾಡೋನು ಅಂಬೋಳಗ

ಬೆನ್ನು ಮ್ಯಾಲೆ ಶನಿಮಾತ್ಮ ಬುಡುನ್ನ ಹೊರಗೆ ಬಂದಾನೆ
ಕುಪ್ಪಳಿಸಿ ಬಂದಾನ ಹೊರಗಾಗಿ ಎಗರಿಬಿಟ್ಟಾನ           || ತಂದಾನ ||

ಕುಫ್ಳಿಸಿ ಹೊರಗ ಎಗರಿ ಬಿಟ್ನಪ್ಪ
ಶನಿಮಾತ್ಮ
ಯಪ್ಪಾ ಈಗ ಶರಣು
ಈಗ ಶರಬಂದರಾಜ
ಇನ್ನು ನೀನು ಬಂದ ಮ್ಯಾಲೆ
ನಾನು ಉಳಿಯೋದಿಲ್ಲ
ಕೇಳವೋ ಏದಿನಗಂಧಿ ಮೇಟಿ ಔಷಧದಗಳೇ
ನೀವಿಬ್ರು ಕಲ್ತ ಮ್ಯಾಲ ನಾನು ಉಳಿಯೋದಿಲ್ಲ
ಸುಟ್ಟು ಸುರುಮಾಂಡಲಾತಿದೆ
ಆಗ ಕಣ್ಣು ತೆರೆದು ನೋಡಿಬಿಟ್ಟು
ಕುಪ್ಪಳಿಸಿ ಹೊರಗ ಬಂದು ಬಿಟ್ಟೆ
ಯುಪ್ಪಾ ನಾನು ಹೋಗಿಬಿಡ್ತಿನಿ ಅಪ್ಪಣೆಕೊಡ್ರಿ
ಆಗ ಜೀವಕೊಟ್ಟ ಶಿವನತಲ್ಲಿ
ಹೋಗಿಬಾರಪ್ಪಾ ಶನಿಮಹಾತ್ಮ
ಆಗ ಶನಿಮಾಹಾತ್ಮ ಹೋದ
ನೋಡಿದ ಸಾಂಬಶಿವ ವಿಷ್ಣು ಪರಮಾತ್ಮ
ಏನೋ ಬಂದೆ ಶನಿಮಹಾತ್ಮ ಲೋಕ ಬಿಟ್ಟು
ಏಯಪ್ಪ ನನ್ನ ಹಾಕಿ ಸುಟ್ಟು ಸುರಮಂಡಲ ಮಾಡ್ತಿದ್ಳು
ಆಗ ಕಣ್ಣಿಲಿ ನೋಡಿದೆ
ಬುಡಗ್ಗನೇ ಅಂತ ಹೊರಗ ಎಗರಿಬಿಟ್ಟೆ
ಸರಿ ಔಷಧ ಹಾಕ್ತಾರ
ಹೂಂ ಹಾಕ್ತಾರ
ಆಗ ಏದಿನಗಂಧಿ ತೂಕಾಮಾಡಿ
ಬೆನ್ನಗೆ ಕೈ ಮುಗಿದು

ಆಗ ಬೆನ್ನಿಗೆ ಹುಣ್ಣಿಗ ಹಾಕ್ಯಾಳಮ್ಮ
ಏದಿನಗಂಧಿ ಜನ್ಮದಾಗಯಮ್ಮ
ಬೆನ್ನಗಲಗಾ ಹುಣ್ಣು ಇರೋದು
ಹೊಟ್ಟ್ಯಾಗ ಕಳುವು ತಿರುಣು ಮಾಡೋದು
ಆಗ ಒಂದೇ ಜೀವದ ಒಳಗೆ
ಆಗ ಮದ್ದು ಹಾಕ್ಹೋತ್ತಿಗೆ
ಹುಣ್ಣು ಮಾಯ್ದಿಕ್ಯಂಡು ಹೊಗೈತೋ  || ತಂದಾನ ||

ಅವುಷಧ ಒಂದು ತೋಲ ಹಾಕುವ ಹೊತ್ತಿಗೆ
ಮಾಯ್ದಿಕ್ಯಂಡು ಹೋಗಿ ಬಿಡ್ತಪ್ಪ ಹುಣ್ಣು
ಹುಣ್ಣಿಲ್ಲ ಹುಣ್ಣು ಮ್ಯಾಲೆ ಗಾಯಿಲ್ಲ
ಹದ್ನೆಂಟು ವರ್ಷ ಬಾರ್ಲು ಬಿದ್ದವ್ನು

ಎಡಕಲಿದ್ದ ಬಲಕ ಎದ್ದು ಬಿಟ್ಟಾನಮ್ಮಾ           || ತಂದಾನ ||

ಅಯ್ಯೋ ಪರಮಾತ್ಮ
ಮದ್ದು ಮಾರೋ ಹುಡುಗ
ಚಿಕ್ಕ ಹೇಣ್ತಿನ ಬಡಿದಿದ್ದಕ್ಕೆ
ಸುಡುಗಾಡು ರುದ್ರಭೂಮಿ
ಕತ್ರಿಕುಡುಗೋಲು ನೆಗ್ಗಿನ ಮುಳ್ಳಿನ ಮ್ಯಾಲೆ ಇಟ್ಟಿದ್ದಿಗೆ

ಇಲ್ಲಿಗೆ ಹದ್ನೆಂಟು ವರ್ಷ ಬಾರ್ಲು ಬಿದ್ದೀನಪ್ಪಾ
ಯಪ್ಪಾ ಹೆಣ್ಮಕ್ಕಳು ಕರ್ಮ ಬೋಕರ್ಮ ಶಿವನೆ            || ತಂದಾನ ||

ಆಹಾ ಕೇಳವ್ವೋ ಹುಡುಗ
ಈಗ ನಿನ್ನ ಜೀವಕ್ಕ ಶರಣಪ್ಪಾ
ಹೋಗೋ ಜಲ್ಮ ಉಳಿಸಿದೆ
ಅಂಬೋತ್ತಿಗೆ ಸರ್ಯಪ್ಪಾ
ಈಗ ನಾನು ಯಾರಂತ ತಿಳಿದಿ
ನನಗ್ಯಾಕ ಶರಣು ನಿನಗೇ ಶರಣಂತ
ಪಾದಕ್ಕೆ ಬಿದ್ದ
ಏನಪ್ಪಾ ಸುಡುಗಾಡು ರುದ್ರಭೂಮಿದಾಗ
ನಮ್ಮ ತಾಯಿ ಸತ್ತಿಲ್ಲ
ಈಗ ನಮ್ಮ ತಾಯಿ ಹೊರಸು ಮ್ಯಾಲೆ ಒದ್ದಾಡುತ್ತಿದ್ದರೆ
ಶಿವಾ ಬಂದು ನನ ಕೊಟ್ಟು
ಶಿನಿಮಾತ್ಮ ಬೆನ್ನಿಂದೆ ಬಿಟ್ಟು ಹೋಗ್ಯಾನ
ನಾನು ಹುಟ್ಟಿದಾಗ ನಿನ್ನ ಹುಣ್ಣು ಹುಟ್ಟೈತೆ
ಈಗ ಏಳು ಸಮುದ್ರದ ಕಡೆಗೆ ಹೋಗಿ
ಕಾಡಿನಾಕ ಹೋಗಿ
ಈಗ ಹನ್ನೆರಡು ಕೈನ ಏದಿನಗಂಧಿ
ತಲೆ ಅಡೇಲಿ ಗಾಜಿನ ಬುಡ್ಡಿ ಮದ್ದು ತಂದೆ
ಯಪ್ಪಾ ಶನಿಮಾತ್ಮ ಬಿಟ್ಟು ಹೋದ
ಇಲ್ದಿದ್ರೆ ಬಿಡವ್ನು ಅಲ್ಲ
ಈಗ ನಮ್ಮ ತಾಯಿ ಇದಾಳ

ಈಗ ತಾಯಿತಲ್ಲಿಗೆ ಯಪ್ಪಾ
ನಾವು ಹೋಗಾನ ಬಾರಪ್ಪ || ತಂದಾನ ||

ಯಪ್ಪಾ ನಮ್ಮ ತಾಯಿತಲ್ಲಿಗೆ ಹೋಗಾನ
ನಮ್ಮ ತಾಯಿ ಬಾ ಅಂದ್ರೆ ಏನಂದ್ಳು
ಈಗ ನಿಮ್ಮಪ್ಪ ಬಂದು
ಬಾರೆ ಅಂತ ಕೈ ಹಿಡ್ದರೆ

ಆಗ ನಾನು ಬಂದು ಬಿಡ್ತಿನಮ್ಮಾ
ಇಲ್ದಿದ್ರೆ ನಾನು ಬರಾದಿಲ್ಲ    || ತಂದಾನ ||

ಇಲ್ದಿದ್ರೆ ನಾನು ಬರೋದಿಲ್ಲ ಅಂತಾಳೆ
ಯಪ್ಪಾ ಈಗ ಬಂದು ನಮ್ಮ ತಾಯಿ ಕೈ ಹಿಡಿದ್ರೆ
ನಮ್ಮ ತಾಯಿ ಬರುತಾಳ ಇಲ್ದಿದ್ರೆ ಇಲ್ಲ
ಮಗನಾ ನನಗೆ ಹದಿರಿಕೆ ಆಗ್ತೈತಪ್ಪಾ
ನಿನ್ಗ ಹೆದ್ರಿಕೆ ಆಗ್ತದಾ
ಯಾಕಾಪ್ಪಾ
ಏನಂದ್ರೆ ಕತ್ರಿ ಕುಡುಗೋಲು
ನೆಗ್ಗಿನ ಮುಳ್ಳಿನ ಮ್ಯಾಲೆ
ಇಟ್ಟಿದ್ದು ಕುತ್ಗಿಮಟ್ಟ ಸಿಟ್ಟೈತೆ ಅವ್ಳುದು ನನಮ್ಯಾಲೆ
ಯಪ್ಪಾ ಬಾಯಿಗೆ ಬಂದಂಗ ಬೈಯ್ತಾಳ
ನೋಡಪಾ ನಮ್ಮ ತಾಯಿ ಬೈಯ್ತಿದ್ರೆ
ನಿನ ಜೀವಗ್ಹುಟ್ಟಿದವ್ನು ಸುಮ್ನಿರುತ್ತಿನ್ಯಾ

ನಿನ್ನ ಮುಂದೆ ನಮ್ಮ ತಾಯೀನ ಕಡಿತಿನಪ್ಪಾ
ಇಬ್ರು ನಡುವಿಲಿ ನಾನು ಹುಟ್ಟಿನಪ್ಪಾ
ನಿಮ್ಮ ಜೀವನ ಏಕ ಮಾಡ್ತಿನಪ್ಪಾ
ತಾಯಿ ತಂದಿ ಹೊಂದುಸವನು
ಇಬ್ರೂ ನಡುವಿಲಿ ಹುಟ್ಟಿನಿ ನಾನು      || ತಂದಾನ ||

ನಿನ್ನ ಜೀವಕ ನನ್ನ ಜೀವ ಐತಿ ಬಾರಪ್ಪಾ ಅಂದ
ಕೇಳವೆ ಏದಿನಗಂಧಿ
ಈಗ ನಮ್ಮ ತಂದೀನ ಕರಕಂಡು ಬಾ
ಸಿಟ್ಟುಮ್ಯಾಲೆ ನಮ್ಮ ತಾಯಿ ಎಲ್ಲಿ ಬೈತಾಳೋ ಅಂದ