ತಾಯಿ ತಂದಿ ನೋಡಿದ್ರು
ಮಗ ಶರಬಂಧರಾಜನಿಗೆ
ನೋಡ್ದ್ಯಾ
ಮಗ ಹುಟ್ಟಿ ಕುಲ ಉದ್ಧಾರ ಮಾಡಬೇಕು
ಮಗಳ್ಹುಟ್ಟಿ ಕೀರ್ತಿ ತರಬೇಕು
ಅಪಕೀರ್ತಿ ತರಬಾರ್ದು
ನೋಡಿದ್ಯಾ
ಆಗ ಆರು ಮಂದಿ ಹೆಂಡ್ರನ್ನ ಮಾಡಿಕ್ಯಂಡು
ಈಗ ತಾಯಿ ತಂದೆ ಕಲಿಸಿ ಬಿಟ್ಟ
ಈ ಮಗನ ಕುಲೇನು
ಜಾತಿ ಏನು
ದೇವ್ರು ದಿಂಡ್ರು
ಯಾರಂಗಿಲ್ಲ
ಇವು ಸಂಪಂಗ ಜಾತಿವು ಯಾವ ಜಾತಿವು
ಈ ಮಗನಿಗೆ ಏನು ಮಾಡಬೇಕು ಅಂದ್ರೆ
ಕುಲ ಹೆಣ್ಣು ತಗದು ಮದ್ವೆ ಮಾಡಬೇಕು
ಅಂತ ಏನು ಮಾಡಿಬಿಟ್ರು
ಆಗ ಇದ್ದೂರಾಗ ಚಾಂಪುರ ಪಟ್ನದಾಗ
ಗೊಲ್ರು ನೀಲಮ್ಮನ ಮಗಳು ಗಂಗಮ್ಮ

ಆಗ ಇನ್ನ ಗೊಲ್ರು ಮಗನಿಗೆ ತಗದಾರ
ಗೊಲ್ಲರಮ್ಮಾ ಕೃಷ್ಣಗೊಲ್ಲರು ಯಮ್ಮಾ
ಶರಬಂದ ರಾಜಗೆ ಹೆಣ್ಣು ತಗದಾರಮ್ಮ          || ತಂದಾನ ||

ಮನೆ ಮುಂದೆ ಹಂದಾರ ಹಾಕಿದ್ರು
ಶಾನುಭೋಗರ ಕರಕಂಡು ಬಂದ್ರು
ಕರಿಕಂಬ್ಳಿ ಹಾಸಿ ಸಾಸಿ ಒಗ್ದಬಿಟ್ರು
ಆಗ ಇನ್ನ ತಟ್ಟ್ಯಾಗ ತಾಳಿ ಮುತ್ತು
ಅವಳಿಗೆನಂದ್ರೆ ಬಲಗೈ ಕಡಗ
ಎಡಗೈಗೊಂದು ಬಳೆ
ಕೃಷ್ಣ ಹಾಲು ಗೊಲ್ಲರಂದ್ರೆ
ಕುಪುಸ ಇಲ್ಲದ ಗೊಲ್ರು
ಆಗ ಏನು ಮಾಡಿಬಿಟ್ರು
ಕರಿಕಂಬಳಿ ಮ್ಯಾಲೆ ಕುಂಡ್ರಿಸಿದ್ರು
ಆಗ ಶಾನುಭಾಗರು
ಜಿರಂಜೀವ ವಿಷ್ಣು ಈಶ್ವರ ಆದಿಶಕ್ತಿ

ಎದ್ದೇಳಮ್ಮಾ ನೀಲಮ್ಮ ಮಗಳೆ
ಗಂಗಮ್ಮಾನ ಮಗಳೆ ಇನ್ನು ಎದ್ದಾಳಮ್ಮಾ      || ತಂದಾನ ||

ಆಗ ಪಾದಕ್ಕೆ ಮುಗಿದು
ಈಗ ಅಕ್ಕಿ ಹಾಕಿ ಶರಣು ಶರಣು ಮಾಡಿ
ಆಯಮ್ಮ ಕುಂತುಗಂಡ್ಳು
ಮಗ ಎದ್ದ
ಸ್ವಾಮಿ ಪರಮಾತ್ಮ ಎಲ್ಲೈದಿಯಪ್ಪ ಅಂತ
ಮಗ ಕೈ ಮುಗುದು

ಮೂಗು ಮುತ್ತು ಮಗಾ ಇಟ್ಟಾನಮ್ಮಾ
ಆಗ ಮಗ ಕಡಗವಾಕಿದ
ಹಾಲದ ಕೈಕಡಗ ಬಲಗೈಗ ಇಟ್ಟಾ
ಮಗ ಒಂದನೆ ತಾಳಿ ಹಿಡಿದಾನ
ಹೇs ದೇವೇಂದ್ರಂತಾ ತಾಳಿ ಕಟ್ಟ್ಯಾನಮ್ಮಾ ಜೀವಕ್ಕೆ ಮಗ         || ತಂದಾನ ||

ದೇವೇಂದ್ರ ಅಂತ ತಾಳಿ ಕಟ್ಟಿದ
ಹಾಲು ತುಪ್ಪ ಕಲಿಸಿ ಕುಡಿಸಿದ್ರು
ಹಾಲು ಗೊಲ್ರು
ಆಗ ಎಲೆ ಇನ್ನ ತಿರುವನ ಮಾಡಿದ್ರು

ಆಗ ಕೈ ಹಿಡಿದು ಮೆರವಣಿ ಮಾಡಿಸ್ಯಾರಮ್ಮಾ
ಊರಿಗೆಲ್ಲನೆ ಊಟ ಕೊಟ್ಟರಮ್ಮ
ಆಗ ಒಂದು ಮೂರು ದಿನ ಮದುವೆ ಆಯ್ತು      || ತಂದಾನ ||

ಮೂರು ದಿನ ಮದುವೆ ಆಯ್ತು
ಐದು ದಿನದಲ್ಲಿ ಹಂದರ ಕಿತ್ತಿ
ಗಂಗಮ್ಮನ ಮಾಡಿಬಿಟ್ರು
ತಿರುವ್ಹ್ಯಾಕಿ ಬಿಟ್ರು
ಆರು ದಿನದಲ್ಲಿ ತಂದೆ ನೋಡಿದ
ನೋಡಿದ್ಯಾ
ಮಗಗ ಇನ್ನು ಕುಲ ಹೆಣ್ಣು ತಗದು ಲಗ್ನ ಮಾಡಿದೆವು
ದೇವ್ರು ದಿಂಡಿರಿಗೆ ಏರಬೇಕಾಂತ
ಆರು ಮಂದಿ ಅವ್ನೇ ಜೀವದಲ್ಲಿ
ಹೆಂಡ್ರನ್ನ ಮಾಡಿಕೊಂಡು ಬಂದಾನ
ಈ ಮಗನ ರಾಜತನ ಕೊಡಬೇಕು ಅಂತ
ಆಗ ರಾಜ ಕಚೇರಿದಾಗ ಮಗನ ಕುಂಡ್ರಿಸಿದ