ಸಂದರ್ಶಿಸಿದವರು : ಕೆ.ಎಂ.ಮೈತ್ರಿ

ಮೈತ್ರಿ : ನಮಸ್ಕಾರ್ರೀ

ಈರಮ್ಮ : ನಮಸ್ಕಾರ

ಮೈತ್ರಿ : ಏನ್ರಿ ನಿಮ್ಮ ಹೆಸ್ರು?

ಈರಮ್ಮ : ನಮ್ಮ ಹೆಸ್ರಾ? ಹಳೇ ದರೋಜಿ ಬುರ್ರಕತಿ ಈರಮ್ಮಾ

ಮೈತ್ರಿ : ನಿಮ್ಮ ಅಪ್ಪ ಅಮ್ಮೋರ ಹೆಸ್ರು?

ಈರಮ್ಮ : ಅಪ್ಪ ಅಶ್ವಿ ಲಾಲಪ್ಪ, ತಾಯಿ ಜಂಬಲಮ್ಮ

ಮೈತ್ರಿ : ಅಜ್ಜಾ ಅಜ್ಜಿ ಹೆಸ್ರು?

ಈರಮ್ಮ : ಅಜ್ಜ ಅಶ್ವೀ ಜಂಬಣ್ಣ, ಅಜ್ಜಿ ಸುಂಕಲಮ್ಮ

ಮೈತ್ರಿ : ನಿಮ್ಮ ಅಜ್ಜನ ಊರು ಯಾವ್ದು?

ಈರಮ್ಮ : ಇಲ್ರಿ, ಅವ್ರಿಗೆ ಊರು ಇದ್ದಿಲ್ರಿ, ಆಂಧ್ರದಾಗ ಅವರು ಅಲೆಮಾರಿ ಗಳಾಗಿದ್ರು ಆಮೇಲೆ ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ಹಳೆ ದರೋಜಿಯಲ್ಲಿ ನೆಲೆಸಿದ್ರು

ಮೈತ್ರಿ : ನಿಮ್ಗ ಮದ್ವೆ ಮಾಡಿಕೊಟ್ಟ ಮನೆತನದ ಬಗ್ಗೆ ವಿವರ ಕೊಡ್ರಿ

ಈರಮ್ಮ : ನನ್ನ ಗಂಡನ ಊರು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಹೊಸಹಳ್ಳಿ, ನನ್ನತ್ತಿ ಸಾಯಮ್ಮ, ಮಾವ ರಾಮಣ್ಣ, ನನ್ನ ಗಂಡನ ಹೆಸರು ರಾಮಚಂದ್ರಪ್ಪ, ಅವ್ರಿಗ್ ನಾವಿಬ್ರು ಹೆಂಡ್ರು ನನ್ನ ಸವತಿ ಹೆಸ್ರು ಕಮಲಮ್ಮ, ಅವ್ಳಿಗಿ ಆರ್ಮಕ್ಳು ಗಂಡು, ಮೂರ್ಮಕ್ಳು ಹೆಣ್ಣು, ನನಗೊಬ್ಳೆ ಹೆಣ್ಣು ಮಗಳು, ಅವಳ್ಹೆಸ್ರು ಬಿಚಮ್ಮ (ಭಾಗ್ಯಲಕ್ಷ್ಮಿ) ಅವ್ಳಿಗಿ ಹಳೆ ದರೋಜಿದಾಗೆ ನಮ್ಮಣ್ಣನ ಮಗನಿಗಿ ಕೊಟ್ಟಿನ್ರಿ

ಮೈತ್ರಿ : ಈಗ ನಿವಿರೋದು ಯಾವೂರಾಗ?

ಈರಮ್ಮ : ಬಳ್ಳಾರಿ ಜಿಲ್ಲಾ ಸೊಂಡೂರು ತಾಲೂಕಿನ ನನ್ನ ತವರು ಮನಿ ಹಳೆ ದರೋಜಿದಾಗ

ಮೈತ್ರಿ : ನಿಮ್ಮ ವಯಸ್ಸೆಷ್ಟು?

ಈರಮ್ಮ : ೫೮ ವರ್ಷ ಇರಬಹುದು

ಮೈತ್ರಿ : ಮತ್ತೆ ನಿಮ್ಮ ಜನಕ್ಕ ಏನಂತಾರಾ?

ಈರಮ್ಮ : ಬುಡ್ಗ ಜಂಗಮ ಕುಲದವ್ರು ಅಂತಾರ್ರೀ

ಮೈತ್ರಿ : ಬುಡ್ಗ ಜಂಗಮರು ಪರಿಶಿಷ್ಟ ಜಾತಿಯವರೇನು?

ಈರಮ್ಮ : ಹೂಂ

ಮೈತ್ರಿ : ನಿಮ್ಮ ಕುಲಕ ಮತ್ತು ವೀರಶೈವ ಜಂಗಮ ಕುಲಕ ಏನು ಸಂಬಂಧ?

ಈರಮ್ಮ : ಏನು ಸಂಬಂಧವಿಲ್ಲರಿ. ಅವ್ರ ಜಾತಿನೇ ಬಾರೆ. ನಮ್ಮ ಜಾತಿನೇ ಬ್ಯಾರೆ ನಮ್ದು ಅಲೆಮಾರಿ ಮಾಂಸ ತಿಂಬೋ ಜಾತಿ. ಲಿಂಗ ಕಟ್ಟಿಕೊಳ್ಳದಿಲ್ಲ.

ಮೈತ್ರಿ : ಬುಡ್ಗ ಜಂಗಮ ಅಂತ ಯಾಕ ಕರಿತಾರ

ಈರಮ್ಮ : ಲೋಕಕ್ಕೇ ಮತ್ತೇ ಊರುರು ತಿರುಗೋರಿಗೆ ಬುಡುಗ ಜಂಗಮಾ ಅಂತಾರಾ

ಮೈತ್ರಿ : ಊರುರು ತಿರುಗಾದ್ರಿಂದ ಹೇಳ್ತಾರಾ?

ಈರಮ್ಮ : ಹೂಂ

ಮೈತ್ರಿ : ಬುಡ್ಗ ಅಂದ್ರೇನು?

ಈರಮ್ಮ : ಸಣ್ಣ ಕುಲದವ್ರು

ಮೈತ್ರಿ : ಏನು ಬಾರ್ಸಾದುಕ್ಕಾ ಬುಡ್ಗ ಅಂತಾರಾ?

ಈರಮ್ಮ : ಹೂಂ ತಂಬೂರಿ ಬರ್ಸಾದುಕ್ಕೂ ಬುಡ್ಗಾ ಅಂತಾರ. ಬುಡ್ಗ ಬುಡುಗ…………ಬುಡುಗಾ ಅಂತಾರ

ಮೈತ್ರಿ : ತಮ್ಮವರು ಯಾವ ಯಾವ ವೇಷಾ ಹಾಕ್ತಾರಮ್ಮಾ?

ಈರಮ್ಮ : ಎಲ್ಲಾ ವೇಷ ಹಾಕ್ತಾರ. ಮೋಹಿನ ಭಸ್ಮಾಸುರ, ಸದುರ ವೇಷಾ ಹಾಕ್ತಾರಾ, ಹನುಮಂತ್ವೇಷಾ ಹಾಕ್ತಾರಾ, ರಾಮ, ಲಕ್ಷ್ಮಣ ವೇಷಾ ಹಾಕ್ತಾರಾ, ಭೀಮಾರ್ಜುನ ವೇಷಾ ಹಾಕ್ತಾರ, ಸುಂದ ರೂಪ ಸುಂದ ವೇಷ ಹಾಕ್ತಾರಾ, ಅಗಸರ ಮಡಿವಾಳೂದು ಅದು ಹಾಕ್ತಾರ, ಲಮಣ್ಕೇರ್ದು ಹಾಕ್ತಾರ ಬ್ರಾಹ್ಮಣರುದು ವೇಷಾ ಹಾಕ್ತಾರ ಎಲ್ಲಾ

ಮೈತ್ರಿ : ನೀವು ಹಾಡಿ ಹೇಳೊ ಕಥನ ಕಾವ್ಯಗಳ್ಯಾವ್ಯಾವು?

ಈರಮ್ಮ : ನೋಡ್ರೀ ಬಾಲನಾಗಮ್ಮದು, ಮತ್ತೆ ಕುಮಾರರಾಮದು, ಕ್ರಿಷ್ಣ ಗೊಲ್ರುದು, ಮತ್ತೆ ಎಲ್ಲಮ್ಮನ ಕತೀ, ಮತ್ತೆ ಬಲಿ ಚಕ್ರವರ್ತಿದೂ, ಮಾರ್ವಾಡಿ ಶೇಟಿಯಾವ್ರುದೂ ಅದವಾನಿ ಲಕ್ಷ್ಮಮ್ಮಂದೂ ಇಂತಾವೆಲ್ಲ ಹೇಳ್ತೀವ್ರಿ. ಬಬ್ಬಲಿ ನಾಗರೆಡ್ಡಿದು, ಗಡೇಕಲ್ಲು ಭೀಮ ಲಿಂಗಂದೂ, ಎಲ್ಲಾ

ಮೈತ್ರಿ : ಈ ಮಹಾಕಾವ್ಯಗಳನ್ನು ನೀವು ಹ್ಯಾಂಗ ಕಲ್ತ್ರಿ?

ಈರಮ್ಮ : ನಮ್ಮ ತಾತ ಹೇಳ್ತಿದ್ದ ನಮ್ಮ ತಾತಾ ಸತ್ತೋದಾ ನಮ್ಮಪ್ಪ ಹೇಳ್ತಿದ್ದಾ ಅವ್ನು (೭-೧೧-೧೯೯೭ರಂದು) ಸತ್ತ. ಇನ್ನು ಯಾರು ಗಂಡ್ಮಕ್ಕುಳು ಕಲ್ತಿಲ್ಲ ನಾನೇ ಹೆಣ್ಮಗಳು ಕಲ್ತಾರಿ.

ಮೈತ್ರಿ : ನಿಮ್ಮಜ್ಜ, ನಿಮ್ಮಪ್ಪ ಹಾಡೋ ಕಾಲಕ್ಕೆ ಹೆಣ್ಮಕ್ಕಳು ಯಾರಾದ್ರು ಹಾಡ್ತಿದ್ರಾ?

ಈರಮ್ಮ : ಹೌದು ಅವ್ರು ಗಂಡಾ ಹೆಂಡ್ತಿ, ಗಂಡಾಹೆಂಡ್ತಿ ಜೊತೆ ಜೊತೆಗೆ ಹಾಡ್ತಿದುರ್ರೀ

ಮೈತ್ರಿ : ಮತ್ತೆ ಈಗ್ಯಾಕ ಗಂಡ್ಮಕ್ಕಳು ಹಾಡೋದಿಲ್ಲ?

ಈರಮ್ಮ : ಈಗ ಯಾರು ಕಲ್ತಿಲ್ಲ

ಮೈತ್ರಿ : ನಿಮ್ಮ ತಾತರಿಗೆ ಕಾವ್ಯಗಳನ್ನು ಯಾರು ಹೇಳಿ ಕೊಟ್ಟಿದ್ರು?

ಈರಮ್ಮ : ನಮ್ಮ ತಾತನೋರಿಗೆ ಇನ್ನೊಂದು ತಾತನೋರು ಹೇಳಿರ್ತಾರೆ ಹಿಂಗೇ ನಡಕೊಂಡು ಬಂದೈತಿ

ಮೈತ್ರಿ : ಈಗ ನೀವು ಹಾಡೋ ಕಾವ್ಯಗಳು ಯಾವ ಭಾಷೆಯಲ್ಲಿದ್ವು ಮೊದಲು?

ಈರಮ್ಮ : ತೆಲಗು, ಬರೀ ತೆಲುಗೇ

ಮೈತ್ರಿ : ಕನ್ನಡದಾಗೆ ನೀವಷ್ಟೆ ತಂದ್ರಿ

ಈರಮ್ಮ : ಹೂಂ. ನಾನೇ, ಯಾರ ತಂದಿಲ್ಲ

ಮೈತ್ರಿ : ತೆಲುಗಲ್ಲಿದ್ವಲ್ಲ ಕಾವ್ಯಗಳು ಇವನ್ನ ಕನ್ನಡಕ್ಕೆ ಯಾಕೆ ಬದ್ಲಾಯಿಸಿಕೊಂಡ್ರಿ, ಅವನ್ನ ಕನ್ನಡದಾಗ ಹೇಳೋಕೆ ಯಾಕೆ ಶುರು ಮಾಡಿದ್ರಿ?

ಈರಮ್ಮ : ಅಂದ್ರೆ ಲೋಕೆಲ್ಲ ಕನ್ನಡ ಹೇಳಬೇಕು. ಕನ್ನಡದಾಗ ಹೇಳಬೇಕು, ನಮ್ಮ ಭಾಷೇಲಿ ಹೇಳಬೇಕು. ಇವು ತೆಲುಗು ಏನು ಅರ್ಥ ಆಗೋದಿಲ್ಲ ಅಂದ್ರು, ಅದಕ್ಕೆ ನಾನು ಉಪಾಯ ಮಾಡಿ, ಏನ್ರಿ, ಈ ಲೋಕ ತಿಳುವಳಿಕೆ ಮಾಡಬೇಕು, ಇವರಿಗೆ ಹ್ಯಾಂಗ ಅರ್ಥ ಆಗಬೇಕು ಅಂತ ನಾನು ಅರ್ಥ ಮಾಡಿಕೊಂಡು ತೆಲುಗಲ್ಲಿದ್ದದ್ದನ್ನ ಕನ್ನಡಕ್ಕೆ ಹೊಂದ್ಸಿ, ಇದಾದ್ರೆ ಇದು ಕನ್ನಡ ಇತ್ತೈತಿ ತೆಲುಗಿನಾಗ ಇದ್ದದ್ದ ಕನ್ನಡದಾಗ ಅನ್ನಬೇಕಂತ ಉಪಾಯ ಮಾಡಿ ಹಂಗ ಕಂಠಾ ಪಾಠಾ ಮಾಡ್ದೆ

ಮೈತ್ರಿ : ಎಷ್ಟನೇ ವಯಸ್ಸಿನಿಂದ ಹಾಡೋಕೆ ಶುರು ಮಾಡಿದ್ರಿ?

ಈರಮ್ಮ : ಚಿಕ್ಕ ವಯಸ್ಸಿನಿಂದಲೇ ದನ ಕಾಯ್ತಿದ್ದೆ ಆಗಿನಿಂದ

ಮೈತ್ರಿ : ಅಂದ್ರೆ ಹತ್ತಿ ಹನ್ನೆರಡನೇ ವಯಸ್ಸಿನಿಂದ ಶುರು ಮಾಡಿದ್ರ್ಯಾ?

ಈರಮ್ಮ : ಹೂಂ, ಅಂದ್ರೆ ನಮ್ಮಪ್ಪ ನಮ್ಮವ್ವ ರಾತ್ರಿ ಹೇಳ್ತಿದ್ರೆ ನಿದ್ದಿ ಕಟ್ಟಿ ಬೇಸು ಕೇಳೋದು, ಹಗಲೆಲ್ಲ ದನ ಕಾಯ್ಕೋಂತ ಆಗ ಹಾಡೋದು. ನಾನು ಮೈನೆರ್ತುನ ಮೂರು ವರ್ಷದಿಂದ ಹಾಡ್ತಾ ಇದ್ದೀನಿ

ಮೈತ್ರಿ : ಈ ಕಾವ್ಯಗಳು ತೆಲುಗಿನಾಗಿದ್ರ ಚೆಂದಾನೋ ಕನ್ನಡದಾಗ ಇದ್ರೆ ಚೆಂದಾನೋ?

ಈರಮ್ಮ : ನೋಡ್ರಿ, ಕನ್ನಡದಾಗಿದ್ರೆ ಕನ್ನಡದವ್ರಿಗೆ ಚೆಂದ

ಮೈತ್ರಿ : ಅಲ್ಲ, ನಿಮಗೆ ಯಾವುದ್ರಾಗ ಇದ್ರೆ ಹಾಡೋದಕ್ಕೆ ಚೆಂದ?

ಈರಮ್ಮ : ನನಗೀಗ ಕನ್ನಡಾನೇ ಚೆಂದ

ಮೈತ್ರಿ : ಈ ತೆಲುಗಲ್ಲಿದ್ದ ಕಾವ್ಯಗಳನ್ನು ಕನ್ನಡಕ್ಕೆ ಬದ್ಲಾಯಿಸಿಕೊಂಡ್ರಲ್ಲ ಹಂಗೆ ಬದ್ಲಾಯಿಸಿಕೊಳ್ಳಲಿಕ್ಕೆ ಎಷ್ಟು ಕಾಲ ಬೇಕಾಯ್ತು?

ಈರಮ್ಮ : ಜಾಸ್ತಿ ಆಯ್ತು, ಚಿಕ್ಕವಳಾಗಿದ್ದಾಗಿಂದ ಹಾಡೀ ಹಾಡೀ ಮೂರು ವರ್ಷದಾಗ ಕನ್ನಡದಾಗ ಹಾಡಾಕೆ ಶುರು ಮಾಡಿ ಬಿಟ್ಟೆ

ಮೈತ್ರಿ : ಮೊದಲು ಕನ್ನಡದಾಗ ಹಾಡ್ತಿದ್ಯ್ರೋ ತೆಲುಗಿನ್ಯಾಗ ಹಾಡ್ತಿದ್ಯ್ರೋ

ಈರಮ್ಮ : ಹೂಂ ಎರ್ಡು ಸರ್ತಿ ತೆಲುಗು ಹೇಳ್ದೆ ನಂತರ ಕನ್ನಡ

ಮೈತ್ರಿ : ಅಂದ್ರೆ ನಿಮ್ಮಪ್ಪವು ಮುಂದೆ ಕುಂದರ್ಸಿಕೊಂಡ ಕಲಿಸ್ಸಿಲ್ಲ?

ಈರಮ್ಮ : ಇಲ್ಲಲ್ಲ

ಮೈತ್ರಿ : ಅಂದ್ರೆ ನೀವೇ ಸ್ವಂತ ಅವರ ನೋಡಿ ಕಲ್ತಿದ್ದೀರಿ

ಈರಮ್ಮ : ಹೂಂ

ಮೈತ್ರಿ : ನೀವು ಈ ಕಾವ್ಯಗಳನ್ನ ಎಲ್ಲಿಲ್ಲಿ ಹಾಡಿದ್ರಿ?

ಈರಮ್ಮ : ಬಳ್ಳಾರಿದಾಗ, ಹಾಡಿದ್ವಿ, ಈ ಜಿಲ್ಲಾದಾಗ

ಮೈತ್ರಿ : ಬಳ್ಳಾರಿ ಜಿಲ್ಲೆ ಬಿಟ್ಟು ಹೊರಗೆ

ಈರಮ್ಮ : ಹೊರಗೆ ಹೊಳೆ ಆ ಕಡೆಗೆ ಹಾಡಿದ್ದೀನಿ ಮುದ್ದಗಲ್ ಶಿವಮೊಗ್ಗ, ಚಳ್ಳೆಕೇರೆ ಕೂಡಲ್ಗಿಕಡೆಲ್ಲಿ ಹಾಡಿನಿ

ಮೈತ್ರಿ : ಈಗ ಇಷ್ಟು ಕಾವ್ಯವಗಳನ್ನು ಹಾಡ್ತೀರಲ್ಲ, ಅದ್ರಾಗ ನಿಮಗೆ ಪ್ರೀತಿಯ ಕಾವ್ಯ ಯಾವುದು?

ಈರಮ್ಮ : ಪ್ರೀತಿ ಕಾವ್ಯ ಅಂದ್ರೆ ಇವೇ, ದೊಡ್ಡ ಕಥೆಗಳೆಂದ್ರೆ ಕುಮಾರರಾಮಂದು,

ಮೈತ್ರಿ : ನಿಮಗೆ ಬಾಳ ಇಷ್ಟವಾದದ್ದು ಯಾವ್ದು?

ಈರಮ್ಮ : ಬಾಲ ನಾಗಮ್ಮದು

ಮೈತ್ರಿ : ಒಂದೊಂದು ಕಾವ್ಯ ಏಷ್ಟೆಷ್ಟು ಗಂಟೆ ಹಾಡ್ತೀರಿ ನೀವು?

ಈರಮ್ಮ : ನಾವಾ…….? ಹನ್ನೆಡರು ಗಂಟೆ ತನಕ ಹಾಡ್ತೀವಿ ದೇವರುನೆಲ್ಲ ನೆನಸಿ, ಹಾಡ್ತೀವಿ, ಹಾಡಿ ಮನೆಗೆ ಹೋಗ್ತಿವಿ,

ಮೈತ್ರಿ : ನೀವು ಹಾಡೋ ಕಾವ್ಯಗಳಲ್ಲಿ ದೊಡ್ಡ ಕಾವ್ಯ ಯಾವುದು?

ಈರಮ್ಮ : ಎಲ್ಲ ಕತೆಗಿಂತ ದೊಡ್ಡದ್ದು ಬಾಲ ನಾಗಮ್ಮದು, ಕಿಷ್ಣಗೊಲ್ರದ್ದು

ಮೈತ್ರಿ : ಎಷ್ಟು ದಿನ ತಗೋಂತದೆ ಹಾಡಾಕ?

ಈರಮ್ಮ : ನಾಕು ದಿನ

ಮೈತ್ರಿ : ಅಂದ್ರೆ ಕೃಷ್ಣಗೊಲ್ಲ ನಾಲ್ಕದಿನ ಬಾಲ ನಾಗಮ್ಮ ನಾಲ್ಕು ದಿನಾನ

ಈರಮ್ಮ : ಹೂಂ, ಕುಮಾರರಾಮಂದು ಮೂರು ದಿನ, ಬಲಿ ಚಕ್ರವರ್ತಿದು ಎರ್ಡು ದಿನ ಬಬ್ಬಲಿ ನಾಗಿರೆಡ್ಡಿದು ಎರ್ಡುದಿನ, ಎಲ್ಲಮ್ಮನ ಕಥಿ ಎರ್ಡು ದಿನ, ಮಾರ್ವಾಡಿ ಕತೀ ಎರ್ಡು ದಿನ

ಮೈತ್ರಿ : ಹಾಡ್ಲಿಕ್ಕೆ ಹೋಗ್ತಿರಲ್ಲ ಹಳ್ಳಿಹಳ್ಳಿಗೇ ಅವ್ರು ನಿಮ್ಮನ್ನ ಕರೀಲಿಕ್ಕೆ ಬರ್ತಾರಾ?

ಈರಮ್ಮ : ಅವ್ರೇ ಕರಿಯಾಕ ಬರ್ತಾರ. ಮುಂಚ್ಯಾಗ ನಾವು ಊರಾಗ ಹಾಡಿಕ್ಯೋಂತ ಹೋಗ್ತೀವಿ, ಓ ಚೆಂದಾಗ ಹಾಡ್ತಾಳಾ, ಏನ್ರೀ ಹೆಂಗೇಳ್ತೀರಿ ಬಾಲನಾಗಮ್ಮನ ಕತೀನ ಎಷ್ಟಾರಾಗ ಮುಗಿಸ್ತೀರಿ, ನೋಡ್ರೀ ಮುನ್ನೂರಾಗ್ತೈತಿ, ದಿನಾಲು ನಮಗೆ ಐವತ್ತನ್ನ ಬೇಕಲ್ರೀ, ನಾವು ಕೂಲೀ ಮಾಡಾದ್ರಿ, ಹದ್ನಾಕ್‌ರೂಪಾಯಿ ಕೂಲಿ ಮಾಡದೇನು. ಏನೋ ಐದೋ ಹತ್ತೋ ಹಕ್ಯಂಡು ಎಲ್ಲಾರು, ದಿನಾಲು ಐವತ್ತು ರೂಪಾಯಿದಂಗ ಹೇಳ್ರಿ ಅಂತಾರೆ, ಇಲ್ರಿ ದಿನಾ ನೂರು ರೂಪಾಯಿದಂಗ ಹೇಳ್ತೀನಿ, ಗಿಟ್ಟಬೇಕಲ್ರಿ ನಿದ್ದಿಗೆಟ್ಟು ಕೂತ್ಕಂಡು ಕೈಲಿಬಾರ್ಸಿ, ಬಾಯಿಲರ್ಸಿ, ನಿಮ್ಮ ಮನಸ್ಸು ಕರಗಿದ್ರಲ್ರಿ ನೀವು ಹೇಳೋದು ಬೇಕಿದ್ರೆ ಹೇಳ್ರಿರಿ, ಇಲ್ಲದಿದ್ರೆ ಬ್ಯಾಡ್ರಿ ಸರಿ ಬಿಡು ಅಂತಾರೆ. ಅಂತ ಆಗ ಕಾಯಿ ಕರ್ಪೂರ ಎಲ್ಲ ತರಬೇಕ್ರಿ.

ಮೈತ್ರಿ : ಮತ್ತೆ ಏನೇನು ಕೊಡ್ತಾರ ನಿಮಗ

ಈರಮ್ಮ : ನಮಗಾ ಕತೀಗೆ ಪೂಜಿಗಿಡ್ತಾರಾ, ಪೂಜಿ ಮಾಡ್ತೀವಿ, ಮಾಡಿದ ಮೇಲೆ ಕತೆಲ್ಲ ಮುಗಿದ ಮ್ಯಾಲ ಏನ್ರಿ, ಮನೀಗಿ ಬರ್ರೀ ಏನ್ರೀ, ಯಾರನ್ನ ಒಂದು ಸೀರಿ ಕೊಡ್ರಿ ಅಂದ್ರ, ಹಳೇ ಸೀರೆ ಕೊಡಬಾರುದುರೀ ಅಂದ್ರ ಒಂದು ಹೊಸಾಸೀರಿ ಉಡುಸ್ತಾರಾ. ಇನ್ನೊಂದು ಹೇಳು ಬೇಕ್ರೀ ಅಂದ್ರ ಆ ಕಡೀ ಓಣಿಯವ್ರು ಹೇಳಂತಾರ್ರಿ ಇಲ್ಲ ಈ ಕಡೆಗೆ ಮುಗಿಸಿಗೊಂಡು ಆಕಾಡಿಗೆ ಹೋಗ್ರಿ ನಮಗ ಸಂಪೂರ್ಣ ಆಗೈತಿ ಇದು ಬಾಲನಾಗಮ್ಮದ ಮುಗಿಸಿ ಕೃಷ್ಣಗೊಲ್ರದ ಹೇಳ್ರಿ, ಅದು ಅಷ್ಟ ಆತೈತ್ರಿ ಹೇಳಿದ ಮ್ಯಾಲ ಅವ್ರು ಸೀರ್ಯೋ ಏನೂ ತಂದು, ಒಬ್ಬೊಬ್ರು ಏನ ಆಕಳ ಕೋಡೋಣ ಒಂದು, ಆಕಳ ಕತಿ ಹೆಳ್ಯಾಳ ಅಂತ ಒಬ್ಬೊಬ್ಬರು ಆಡುಗಳು ಕೊಡತಾರ.

ಮೈತ್ರಿ : ಯಾವ ಕಾಲದಲ್ಲಿ ಹಾಡತೀರಿ ನೀವು ಸಾಮಾನ್ಯವಾಗಿ? (ಮಳೆಗಾಲ, ಚಳಿ, ಬೇಸಿಗೆ)

ಈರಮ್ಮ : ಎಲ್ಲಾ ಕಾಲ ಹೇಳತೀವ್ರಿ

ಮೈತ್ರಿ : ನೀವು ಹಾಡತಕಂತ ಕಾವ್ಯನ ಮತ್ತೆ ಯಾರಯಾರು ಹಾಡ್ತಾರೆ?

ಈರಮ್ಮ : ತೆಲಗಿನಲ್ಲಿ ಹಾಡ್ತಾರ ಕನ್ನಡದಲ್ಲಿ ಯಾರು ಹಾಡಂಗಿಲ್ಲ. ಯಾರು ಕಲಿಲಿಲ್ಲ

ಮೈತ್ರಿ : ನೀವು ಈ ಹಾಡು ಹಾಡುವಾಗ ಯಾವ ಯಾವ ಸಂಗೀತ ವಾದ್ಯಗಳನ್ನು ಬಳಸ್ತೀರಿ?

ಈರಮ್ಮ : ನಾವು, ತಾಂಬೂರಿ, ಡಿಮ್ಕಿಗಳು ಮತ್ತೆ ಗೆಗ್ಗರಿಗಳು.

ಮೈತ್ರಿ : ನಿಮ್ಮ ಜೊತೆಗೆ ಹಾಡು ಹಾಡುವ ಸಂಗಡಿಗರ ಬಗ್ಗೆ ಸ್ವಲ್ಪ ಪರಿಚಯ ನೀಡ್ರಿ

ಈರಮ್ಮ : ಪಾರ್ವತಮ್ಮ, ಶಿವಮ್ಮ

ಮೈತ್ರಿ : ಅವ್ರದು ಯಾವೂರು?

ಈರಮ್ಮ : ಎಲ್ಲರ್ದೂ ಹಳೆ ದರೋಜಿನೆ. ನಮ್ಮ ತಂಗಿ ಶಿವಮ್ಮ, ಪಾರ್ವತೆಮ್ಮಾ ನಮ್ಮಣ್ಣನ ಹೆಣ್ತಿ

ಮೈತ್ರಿ : ಏನ ಮಾಡ್ತಾರ ಅವ್ರು?

ಈರಮ್ಮ : ಅವ್ರು ಏನೋ ಕೂಲಿ ಹೋಗದೋ ಇಲ್ಲಿದ್ರೆ ಹೊಲ ಬದಕ ಮಾಡಿಕೆಂಬುದು, ಹೀಗೆ ಕತೆ ಹೇಳುವಾಗ ಎಲ್ಲಾರ ಕಲ್ತು ಹಾಡದು ಅಷ್ಟೆ.

ಮೈತ್ರಿ : ಹಾಡಿದ ಮೇಲೆ ದುಡ್ಡು ಕೊಡ್ತಾರಲ್ಲ. ಅದ್ನ ನೀವು ಮೂವಾರು ಹಂಚಕೋತಿರೋ ಹೇಗೆ?

ಈರಮ್ಮ : ಮೂವರಿಗಿ ಮೂರು ಭಾಗ ಮಾಡ್ತೀವಿ

ಮೈತ್ರಿ : ನಿಮ್ಮ ಜೊತೆಗೆ ಇರ್ರವ್ರಿಗೆ ಹಾಡಲಿಕ್ಕೆ ಬರ್ತದಾ?

ಈರಮ್ಮ : ಇದೇ ನನ್ಹಿಂದೆ ಹಾಡಾಕ ಬರ್ತದ ಮುಂದಿಲ್ಲ

ಮೈತ್ರಿ : ಇಬ್ಬರು ಬಾರ್ಸತಾರ? ಇಲ್ಲ ಒಬ್ಬರೇ ಬಾರಿಸ್ತಾರ?

ಈರಮ್ಮ : ನಾವೊಬ್ಬರೆ ಬುರ್ರಾ ಬಾರಿಸೋದು. ಅವ್ರು ಡಿಮ್ಕಿ ಮತ್ತು ಹಿಂದಲಾಡ್ಕಿ, ಗಗ್ಗರಿನೂ ನಾನೇ ಬಾರಿಸೋದು

ಮೈತ್ರಿ : ಯಾಕ ಹಾಡ್ತೀರಿ ನೀವು ಇಂಥ ಹಾಡುಗಳು?

ಈರಮ್ಮ : ಅಂದರೆ ಧರ್ಮ, ಪುಣ್ಯ ದುಷ್ಟರು ಕಣ್ಣಿಲಿ ನೋಡ್ಲಿದ್ರೆ ಕೀವೀಲೇ ಕೇಳಿ, ಪೂಜೆ ಮಾಡಿ ಪುಣ್ಯಪಡಿಲಿ ಅಂತ. ಹಿಂಗ ಇತ್ತಲ್ಲ ಅಂತ ತಿಳಿಕೊಂತ್ತಾರ. ಹಳ್ಳಿ ಊರಾಗ ಸಿನಿಮಾಕ ಯಾರು ಹೋತಾರ.

ಮೈತ್ರಿ : ನೀವೇ ಯಾಕ ಹಾಡಬೇಕೆಂತಿರೀ? ಬೇರೆಯವರು ಯಾಕಿಲ್ಲ?

ಈರಮ್ಮ : ಯಾರೂ ಕಲಿತಿಲ್ಲ, ನಾವು ಕಲಿತೀವಿ ಮತ್ತೆ, ನಮ್ಮ ತಾತ ಹೇಳುತ್ತಿದ್ದ ಹಿಂಗ ಹೇಳ್ರಮ್ಮ ನೀವು ಮುಂದಕ ಹೊಟ್ಟೆಪಾಡಿಗಾತೈತಿ ನಮ್ಮ ಉದ್ಯೋಗ ಬಿಡಬ್ಯಾಡ್ರಿ ಅಂತಂದ್ರೆ, ಆಗ ನಾನು ಒದ್ದ್ಯಾಡಿ ಒದ್ದ್ಯಾಡಿ ಕಲ್ತಕೊಂಡಿನಿ

ಮೈತ್ರಿ : ಅಲ್ಲ ನೀವು ನಿಮ್ಮ ಹೊಟ್ಟೆ ಪಾಡಿಗ ಹಾಡ್ತೀರೋ ಅಥವಾ ನಿಮಗ ಸಂತೋಷ ಆಗತದಂತ ಹಾಡ್ತಿರೋ?

ಈರಮ್ಮ : ಇಲ್ಲ ಎಲ್ಲಾ ಲೋಕಕ ಸಂತೋಷಾಗ್ಲಂತ ಹಾಡ್ತೀವ್ರಿ. ಅವರಿಗೆ ತಿಳಿವಳಿಕೆ ಆಗ್ಬೇಕಂತ. ಮೋಟದವರೂ ಎಲ್ಲಾರೂ ಕೇಳ್ತಾರಲ್ಲ ಬೇಸ ಹೇಳ್ತಾಳ ಸಂಗೀತ ಈಯಮ್ಮ ಅಂತಾರ. ಹೆಸರಾಗಬೆಂಕಂತ ಅಷ್ಟೆ. ಹಾಡಿದರ ನಮಗ ಸಂತೋಷ ಅದರಲಿದ್ದ ನಮಗ ತುತ್ತ ಅನ್ನ.

ಮೈತ್ರಿ : ಹಾಡುವುದರಲ್ಲೂ ನಿಮಗೆ ಏನು ಸಮಸ್ಯೆ ಇವೆ?

ಈರಮ್ಮ : ಏನೂ ಕಷ್ಟ ಇಲ್ಲ ಏನೆಂದರೆ ನಿದ್ದಿ ಕಟ್ಟದು, ಕುಂತ್ಗೋಬೋದು ದೂರ ಹೋಗಿ ಬರದು ಅಷ್ಟೆ.

ಮೈತ್ರಿ : ಜನ ಕರೆದಾಗಲೆಲ್ಲಾ ಕಾರ್ಯಕ್ರಮ ಕೊಡ್ತಿರಾ?

ಈರಮ್ಮ : ಹೂಂ. ಅಷ್ಟೇ ಕರೀತಾರ ಬರ್ರೆಮ್ಮಾ ಅಂತಾ. ಇಲ್ರಿ ಇವತ್ತು ಕೈಲಾಗದಿಲ್ಲ, ದಿನಾ ನಿದ್ದಿ ಕಟ್ಟಿ ಸಾಕಾಗೈತಿ ಅಂತಿವಿ. ಕೇಟಿ ಮಾಡ್ತೆವಮ್ಮ ನಾಳೆ ನನ್ನ ಮಗಳು ಊರಿಗೆ ಹೋತಾಳಂತೆ, ಕೇಳತಾಳಂತೆ ಬಾಮ್ಮ ಅಂತಾರ. ನಡೇನ ನಡ್ರಿ ನೀವು ದೊಡ್ಡೋರು ನಮ್ಮ ಹಿಂದೆ ಬಡ್ಯೋರು ನಮ್ಮ ಕೈಲಿ ಆಗದಿಲ್ಲ ಅಂತ ಎದುರಾಡದಿಲ್ಲ. ಅವ್ರು ನಡ್ರೆಮ್ಮ ಹೋಗನ ಅಂತಾರ

ಮೈತ್ರಿ : ಈಗ ನಿಮ್ಮ ಕಲೆ ಸರ್ಕಾರಕ್ಕೆ ಗೊತ್ತಾಗ್ಯದ, ಸರ್ಕಾರ ಎನು ಸಹಾಯ ನಿಮಗ ಮಾಡ್ಯಾದ?

ಈರಮ್ಮ : ನಮಿಗೇನೂ ಸಹಾಯ ಮಾಡಿಲ್ಲ. ಅಲ್ಲೆಲ್ಲೆ ಕರಕೊಂಡು ಹೋತಾರ, ಇವಾಗೆನಂದ್ರೆ ಮೂರು ವರ್ಷ ಆಯಿತು. ನನ್ನ ಕಂಡ ಹಿಡಿದು ಗೋರಮೆಂಟದವರು. ಸೋಮಲಾಪುರವರು ಇಲ್ಲೆ ಹೊಸಪೇಟಿಗೆ ಹಾಡಾಕ ಬಂದಾಗ, ಆಗ ಏನ ಮಾಡಿ ಬುಟ್ರು ಕನ್ನಡ ಒಂದು ತೆಲಗು ದರೋಜಿಗೆ ಬಂದ್ರು, ನಾನು ಹೊಲ ಮಾಡದು, ಕೂಲಿ ಮಾಡಿಕೊಂತ ಇದ್ದೆ. ಅವ್ರು ಹೊಲಕಾ ಇವ್ರ ಹೊಲಕಾ ಹೋಗದು. ಮುದೇರ ಆದಾರ ಯಜಮಾನ್ರು, ಮನೇಗಾದಿನಿ ಇವಾಗ. ಮೂರು ವರ್ಷ ಆತ ತಾಯಿ ತಂದಿನ ಜೋಪಾನ ಮಾಡಕ ಹತ್ತಿ. ಮೂವರು ಮಕ್ಕಳ ಇದಾರ ಅವ್ರು ಹೆಂಡ್ರ ಮಕ್ಳ ನೋಡಿಕೆಂಬುದೇ ಕಷ್ಟ ಐತಿ. ನನ್ನಷ್ಟು ಹೊಂದಿಕೆ ನೋಡ್ಬೇಕೆಲ್ಲ. ಹೆಣಮಕ್ಕಳಿಗಿದ್ದ ಕನಿಕರ ಗಣಮಕ್ಕಳಿಗೆ ಇರತೈತ್ಯಾ. ಅದಕ್ಕಾಗಿ ನೀರ ಹಾಕದು, ಅನ್ನಮಾಡಿ ಇಕ್ಕದು ಮತ್ತೆ ಯಾರಾನ ಕರದರ ಕೂಲಿಗ ಹೋಗೊದು ಹಾಂಗ ಮಾಡಿಕಂತ ಇದಿವಿ.

ಮೈತ್ರಿ : ನೀವು ಹಾಡುಗಳು ಯಾರ್ಯಾರಿಗೆ ಕಲಿಸಿದ್ರಿ?

ಈರಮ್ಮ : ಯಾರಿಗೆ ಕಲಿಸಲಿಲ್ಲ.

ಮೈತ್ರಿ : ಮತ್ತೆ ಕಲಿಸದಿದ್ದರೆ ನಿಮ್ಮಾ ಜೊತೆಗೆ ಹೊಂಟ್ಹೋಗ್ತಾವಲ್ಲ ಅವು ಉಳಿಬೇಕು

ಈರಮ್ಮ : ಮತ್ತೆ ಬೇಸ ಒದ್ದಾಡ್ತಿದಿನ ನನ್ನ ಮಗಳಿಗ ಕಲಿಯೆಂದರೆ ಕಲಿತಕೊಂಬ್ಲಿಲ್ಲ, ನಮ್ಮ ತಂಗಿ ಅಂದ್ರೆ ಇದು ಬಾರಿಸಿದ್ರೆ ಇದು ಹೋತೈತಂತೆ. ಇದು ಬಾರಿಸಿದ್ರೆ ಇದು ಬರದಿಲ್ಲಂತೆ. ನಾನೇನ ಮಾಡ್ಲಿ. ಗಣಮಕ್ಕಳಿಕೂಡ ಕಲಿರಂತ ಒದ್ದಾಡಿದೆ. ನೀವು ಗೂಡಾನ ಕಲೀರಪ್ಪಾ ಯಾರೂ ಕಲೀಲಿಲ್ಲ ಅಂತ.

ಮೈತ್ರಿ : ಆಂಧ್ರ ಪ್ರದೇಶದಾಗ ನೀವು ಹಾಡ್ತೀರಾ?

ಈರಮ್ಮ : ಆಂಧ್ರದಾಗ ತೆಲಗು ಅಂದ್ರ ಕೇಳ್ತಾರ ಕನ್ನಡ ಎಂದ ಕೇಳ್ತಾರ.

ಮೈತ್ರಿ : ನೀವು ತೆಲಗು ಹಾಡ್ತೀರ್ಯಾ?

ಈರಮ್ಮ : ಹೂಂ, ತೆಲಗು ಹಾಡ್ತೀನ್ರಿ, ಕನ್ನಡ ಹಾಡ್ತೀನಿ. ಎರಡು ಭಾಷೆ ಕಲಿತಿನಿ ನಾನು

ಮೈತ್ರಿ : ತೆಲುಗುದಾಗ, ಎಲ್ಲಾ ಕಾವ್ಯ ಹಾಡ್ತೀರ್ಯಾ?

ಈರಮ್ಮ : ಹೂಂ ಎಲ್ಲಾ ಹಾಡ್ತಿನಿ

ಮೈತ್ರಿ : ಮತ್ತೆ ಯಾವ ಯಾವ ಕಥೆಗಳು ಬರ್ತಾವ ನಿಮ್ಮಗೆ ಹೇಳಾಕ್?

ಈರಮ್ಮ : ಇವೇ ಎಂಟ ಕಥೆ ನನಗ ಬರೋದು. ಮತ್ತೆ ಗಂಗಮ್ಮ ಗೌರಮ್ಮ ಹೇಳ್ತಿನಿ, ಹಾಡ್ತಿದ್ರೆ ಗೊಂಬೆಗಳ ಹಿಡ್ಕಂಡು ಹಾಡಬೇಕು.

ಮೈತ್ರಿ : ನಿಮ್ಮ ಮುಂದಿನ ಆಸೆ ಏನಿದೆ? ಇವನ್ನ ಉಳಿಸಿ ಬೆಳೆಸೋ ಸಲುವಾಗಿ, ಏನೂ ಯೋಜನೆ ಮಾಡಿದ್ದೀರಿ?

ಈರಮ್ಮ : ನಮಗೇನಿಲ್ಲ ನೋಡ್ರಿ ನಮಗೆ ತುತ್ತ ಅನ್ನ ಬೇಕು ಅಷ್ಟೆ ಮತ್ತ ನಮ್ಮ ಆಸೆ ಏನಂದ್ರೆ, ಏನೋ ತಿಂಗಳಿಗೀಟು ತಿಂಗಳಿಗೀಟು ನಮಗ ಕಳಿಸಿದ್ರೆ ಸಂಬಳ ಊಟಾ ಮಾಡಕಾತದೆ. ದೇಶ ತಿರಗಾಕ ಇನ್ನ ಕೈಲಾಗದಿಲ್ಲ ಅರಸಾಕ ಕೈಲಾಗದಿಲ್ಲ ನಿದ್ದಿಕಟ್ಟಿ ಕಟ್ಟಿ ಸಾಕಾಗೈತೆ. ಮುದೆವರಾಗಿವಿ.

ಮೈತ್ರಿ : ಈಗ ೯ ಕಾವ್ಯಗಳು ನಿಮ್ಮ ಮೆದುಳಿನಲ್ಲಿವೆ. ನೀವು ಹೋದ ಮೇಲೆ ಹೊಂಟುಹೋಗ್ತಾವಲ್ಲ ಅವನ್ನು ಉಳಿಸಲು ಏನ ಚಿಂತೆ ಮಾಡಿರಿ ನೀವು?

ಈರಮ್ಮ : ಯಾರೂ ಕಲತಕೊಂಬಲಿಲ್ಲಲ್ಲಾ, ಪರಮಾತ್ಮ ಯಾರ ಕಲೀತಾರ ಯಾರಿಲ್ಲ ಆಗ್ಯೋತು ನಾನು ಹೋದ ಮೇಲೆ ಅಂತ ಇದೇ ಚಿಂತೆ. ಆಗ ಗೋರಮಂಟದವರು ಕಂಡುಹಿಡದ್ರು ನನ್ನ ಯಪ್ಪಾ ನೀವಾನಾ ತಿಳಕೋರಿ ಏನ ಮಾಡತಿರಿ ನಮ್ಮದ್ರಾಗ ಯಾರ ಕಲಿತಿಲ್ಲ ಅಂತ ಚಿಂತೆ.

ಮೈತ್ರಿ : ಕುಮಾರರಾಮನ ಈ ಕಾವ್ಯ ಯಾವ ಭಾಗದಲ್ಲಿ ಹೆಚ್ಚಿಗೆ ಹಾಡಿಸ್ತಾರೆ?

ಈರಮ್ಮ : ಬಳ್ಳಾರಿ ಇಲಾಖೆದಾಗೆಲ್ಲಾ ಕುಮಾರರಾಮುಂದು ಇತ್ತಾಗ ಶಿವಮೊಗ್ಗದ ಕಡಿಗೆ, ಚೆಲಿಕೇರಿ ಕಡಿಗೆ ಮತ್ತೆ ಗಂಗಾವತಿ ಕಡೆಗೆ ಬಾಲನಾಗಮ್ಮುಂದು ಕೃಷ್ಣಗೊಲ್ರುದು. ಆತ ಇದ್ದಾನಲ್ಲ ಇತ್ತಾಗ ಕುಮಾರಸ್ವಾಮಿ ಇದು ಜಾಸ್ತಿ ಹೇಳಸದು.

ಮೈತ್ರಿ : ಇಷ್ಟಲ್ಲ ಮಾಹಿತಿ ಹೇಳಿದ ನಿಮ್ಗೆ ನಮಸ್ಕಾರಮ್ಮ

ಈರಮ್ಮ : ನಮಸ್ಕಾರ್ರೀ