ಮರ್ದಿನ ಈ ಮಕ್ಕಳೇನು ಮಾಡಿಬಿಟ್ರು
ಕುಮಾರರಾಮ ಓಲಿಕೆ ರಾಮ
ಈಗಿನವ್ರು ತಾವಾಗಿ ಬಜಾರಕೂಟ ಬರ್ತಿದ್ರು
ಅಗಸಿ ತಟಾದು ಬಂದ್ರು
ತಟಾದು ಬಂದ್ರೆ
ಚಿಕ್ಕ ತಮ್ಮ ಓಲಿಕ ನೋಡಿದ
ಈ ರಾಮ ತೆಲೆ ಬಗ್ಗಿಸಿ ನಡಿತಾನ
ಈ ಓಲಿಕ ವಟ್ಟಿಗ್ಹುಟ್ಟಿದವ್ನು
ಅತ್ತಾಗಿತ್ತಾಗ ನೋಡ್ತಾನ
ಆನೆಗೊಂದಿ ಅಗಸಿ ಹೊರಗ ಪಾತರಗಿತ್ತಿ
ಮೂರು ಅಂತಸ್ತು ಮಾಳಿಗಿಮ್ಯಾಲೆ
ಆಗಿನ್ನವ್ರು ಹುಣಚೆ ತಪ್ಲ ಸೀರೆ
ರಾಗಿ ತಪ್ಲ ಕುಬಸ
ಆಕಿ ಬೆಳ್ಳಿ ಕಟ್ಟಿಕೂಟ
ಅಗ ನಿಂತಕಂಡ್ರೆ
ಭೂದೇವಿ ಮಣ್ಕಾಲಷ್ಟು ಇನ್ನ ಕೂದಲ ಬೀಳ್ತಾವ

ಬೆಳ್ಳಿ ಕೂಟಣ್ಣ ಕೂದಲಾರಿಸಿಕೊಂತಾಳ ||ತಂದಾನ||

ಕೂದಲಾರಿಸಿಕೊಂತಿದ್ರೆ
ಈ ಓಲಿಕೆ ನೋಡ್ತಾನ
ಕೆಳಗೆ ಬರೋನು ಓಲಿಕೆ ನೋಡ್ತಿದ್ರೆ
ಅಣ್ಣ ಮುಂದೆ
ಅಣ್ಣನ ಮುಂದೆ ಮಾವ ಸ್ವಾದರಮಾವ ಬಚ್ಚಣ್ಣ
ತಳಕ್ಕಂತ ಮಿಂಚು ಹೊಡದಂಗಾಯ್ತು ಅವ್ನ ಕಣ್ಣಿಗೆ
ಯಾರಿಗೆ ಓಲಿಕೆಗೆ
ಆಹಾ ಎಷ್ಟು ಚಂದ ಇದಾಳ ಹೆಣ್ಮಗಳು
ಅಂದ್ರೆ ಹೋಗೋ ರಾಮ ನಿತ್ಕಂಡ
ಹಿಂತಿರುಗಿ ನೋಡ್ದ
ಏನಪ್ಪ ತಮ್ಮ
ಆ ಮನಿಕಡಿಗೆ ನೋಡ್ರಿದ್ದಿ ಎದ್ಕ
ಏನಂತ್ಹೇಳಬೇಕಪ್ಪ ನಮ್ಮಣ್ಣಗೆ
ಹಣ್ಣಿಗೆ ಒಳ ಗಣ್ಣಿಗೆ ಹುಟ್ಟಿದವ್ನು ಆತ
ಮ್ಯಾಲ ತೊಗ್ಲಿಗೆ ಹುಟ್ಟಿದೋ ನಾ
ಒಂದೇ ಬಾಳೆಹಣ್ದಾಗ ಇಬ್ರು ಹುಟ್ಟಿ
ನಮ್ಮ ಅಣ್ಣಗ ಏನಂತ ಹೇಳಬೇಕ ನಾ
ಅಣ್ಣಾ ಏನ ಹೇಳಬೇಕಣ್ಣ
ಎರ್ಡು ರೆಕ್ಕೆ ನಾಕ ಕಾಲಿದ್ದುವು
ಸಾವಿರ ಬಣ್ಣ
ಆಗ ಕುದರಿ

ಹಾಂಗ ಮಾಳಿಗಿಮ್ಯಾಲೆ ಕುಂತೀತೋ ನನ್ಗೆ ಸಾವಿರ ಬಣ್ಣ ಕಂಡಿತೋ ||ತಂದಾನ||

ಅಣ್ಣಾ ಕಣ್ಣಿಗೆ ಕಣ್ಣುಮುಚ್ಚಿ ಕಣ್ಣು ತೆರೆದಂಗೆಲ್ಲ
ಸಾವಿರ ಬಣ್ಣ ಕಾಣ್ತಿತ್ತು ಅದ್ಕೆ ನೋಡ್ತಿದ್ದೆ ಅಣ್ಣ
ಅಬಾಅಬಾ ಕಣ್ಣು ಮುಚ್ಚಿ ಕಣ್ಣು ತೆರೆದ್ರೆ ಸಾವಿರ ಬಣ್ಣ
ಎರಡು ರೆಕ್ಕೆ ನಾಕು ಪಾದ ಕುದ್ರಿ
ಹಂತಾ ಕುದುರಿದ್ರೆ

ಈಗ ಕಣ್ಣಿಗ್ ಕಂಡಿದ ಕುದುರಾಲೇ ನಾವ ಬಿಡಬಾರ್ದು ನನ್ನ ತಮ್ಮ
ಏs ಹುಟ್ಟೀಯಾಕ ನಾವಾಲೇ ಭೂಮಿ ಮ್ಯಾಲೆ ಬೆಳೆದ ಯಾಕಲೇ ನಾವು ||ತಂದಾನ||

ಅಬ್ಬಾ ನಮ್ಮಣ್ಣ ಕೊಂಡ್ತಾನಂತೆ

ಅಣ್ಣ ಕೊಂಡೊ ಕುದುರಿ ಅಲ್ಲಣ್ಣಾ ಅದು ಸಿಗೊ ಕುದುರಿ ಅಲ್ಲಣ್ಣ ||ತಂದಾನ||

ಒಬ್ರು ಕುಂದ್ರ ಕುದ್ರಿಯಲ್ಲ
ಕೈಗ ಸಿಗಂಗಿಲ್ಲ
ಹಾಂಗೆ ಮಾಳಿಗೆ ಮ್ಯಾಲೆ ಬಂತು
ಮೂರೋ ಮೇಘಲಿದ್ದ
ಆಂಗ ಪಟಪಟ ರೆಕ್ಕೆ ಬಡಿತು
ಹಾಂಗೆ ಮ್ಯಾಕ ಹೋಯ್ತು
ತಮ್ಮ ಕುದುರಿ ಕುಂದ್ರಂಗಿರಬೇಕು
ಕಣ್ಣಲ್ಲಿ ನೋಡ್ಬೇಕು
ಆಗ ಸವಾರ ತೆಗೆಂಗಿರಬೇಕು
ನಾವು ಕುದುರಿ ಕೊಂಡಬೇಕು

ಆಗ ಸಿಗಲಾರ್ದ ಕುದುರಿಗೆ ನೀನು ಯಾಕೆ ನೋಡ್ತಿ ನನ್ನ ತಮ್ಮ
s ಕೈಗೆ ಬರಲಾರ್ದ ಕುದುರಿ ಯಾಕ ನಾವು ಕಣ್ಣಿಲಿ ನೋಡಬೇಕು ||ತಂದಾನ||

ನಡಿಯಣ್ಣಾ ಅಂತ ಇನ್ನ ಅಣ್ಣ-ತಮ್ಮ ಬಂದ್ರು
ಸ್ವಾದರಮಾವ ಕರ್ಕೊಂಡು ಬಂದು
ಶರಣಮ್ಮ ಹರಿಯಾಳದೇವಿ
ಆಗಿನ್ನವ್ರು ಅಕ್ಕ
ಏನಪ್ಪಾ ತಮ್ಮ ಹಂಪಯ್ಯ
ಈಗ ಬಚ್ಚಣ್ಣ ಏನ್ಮಾಡ್ದ
ಈಗ ಅಕ್ಕನವರ ಮನ್ಯಾಗ
ತಮ್ಮನ್ನೋರ್ನ ಬಿಟ್ಟ
ಆಗ ಇಬ್ರೂ ಅಣ್ಣ- ತಂಬ್ರು ಬಂದ್ರು
ಚೆರ್ಗಿ ನೀರು ಕೊಟ್ರೆ
ಕೈಕಾಲು ಮುಖ ತೊಳ್ಕಂಡು
ಹಾಲು ಸಕ್ಕರೆ ಅನ್ನ ಊಟ ಮಾಡಿದ್ರು
ಹೊರ್ಸ ಮ್ಯಾಲೆ ನಿದ್ದೆ ಮಾಡಿದ್ರು
ಆವತ್ತು ಮಾವ ಏನಂದ
ಯಪ್ಪಾ ಮನ್ಯಾಗ ಮಕ್ಕಂಡ್ರೆ ಸೆಕಿ ಸೆಕಿ ಆಗ್ತದ
ಮನಿ ಹೊರಗ ಮಕ್ಕಂತಿನಂತ
ಅಳಿನವ್ರು ಮನಿ ಮುಂದೆ ಬಂದು
ಅಡ್ಡಾ ಗ್ವಾಡಿಗೆ ಮಕ್ಕಂಡ ರೂಮಿಗೆ
ಹತ್ತಿನದಿಂಡ ಹಾಕ್ಯಂಡು
ಓಲಿಕೆರಾಮ ನೋಡ್ದ
ಮಾವ ಆಗ ಮನ್ಯಾಗ ಮಕ್ಕೊಂಬೊನು
ಇವೂತ್ತು ನಮ್ಮ ಬಾಕ್ಲಿಗ ಅಡ್ಡ ಮಕ್ಯಂಡಲ್ಲ ರೂಮಿಗೆ
ನಾವು ಹೆಂಗ ಹೊರಗ ಒಳಗ ಓಡ್ಯಾಡೋದು
ಅಯ್ಯೋ ಅಳಿನವ್ರೆ ಏನನನ್ನ ಸರಿವೊತ್ನ್ಯಾಗ
ನಿಮ್ಗ ಇನ್ನ ಏನನ್ನ ಕೆಲಸಿದ್ರೆ ಎಬ್ಸಿರೆಪ್ಪ
ನಾನು ಎದ್ದೇಳ್ತೀನಿ
ಸರಿ ಬಿಡು ಮಾವ
ಆಗ ಅಣ್ಣಂದ ಅಪ್ಪ
ನಮ್ಮನ್ನ ಕಾಯ್ತಾನ ಮಾವ
ಎಷ್ಯೋ ಇನ್ನ ತಾಯಿ ತಂದಿ ಸತ್ತು
ಸ್ವಾದರಮಾವ ಇರಬೇಕಂತೆ
ಆತೆ ನಮ್ಮ ಜೀವಕ್ಕೆ
ಇರ್ಲಪ್ಪಾ ಅಂದ್ರೆ
ಒಂದೇ ಜಮಖಾನ
ಒಂದೇ ವರಸಾ
ಆಗ ಅಣ್ಣನ ಕೈ
ತಮ್ಮನ ಎದಿಮ್ಯಾಲೆ
ತಮ್ಮನ ಕೈ
ಅಣ್ಣನ ಎದಿಮ್ಯಾಲೆ
ಮತ್ತ ಅಣ್ಣ ಹೊತಾನೋ
ತಮ್ಮ ಹೋತಾನೋ ರಾತ್ರಿ
ಆಗ ಹದ್ನೆಂಟು ವರ್ಷ ಒಳ್ಳೆ ವೈಸ್ಸು
ಆಗ ತಮ್ಮ ಇನ್ನ ಮಲಗಬೇಕಂದ್ರೆ
ಅಣ್ಣ ಸಂಪೂರ್ಣ ನಿದ್ದೆಮಾಡ್ದ
ಈ ತಮ್ಮ ನೋಡಿದ್ದಿಲ್ಲ
ಅಬಾಬ್ಬ ಅಷ್ಟು ಬಣ್ಣ
ಹುಣಸೆ ತಪ್ಲ ಸಿರಿ ರಾಗಿ ತಪ್ಲ ಕುಬಸ
ಆಕಿ ನಿಂತ್ಕಂಡ್ರೆ
ಇನ್ನವರ ಮಣಕಾಲಷ್ಟು ಕೂದಲು
ಆಕಿ ಮಕಾ ನೋಡಿಲ್ಲ
ಬೆಳ್ಳಿಕಟ್ಟಿ ಕೂಟ
ಈ ಕೂದಲು ಆರಿಸ್ಕೊಳ್ಳೊ
ಹೆಣ್ಮಗಳು ಎಷ್ಟು ಪ್ರಾಖರ ಇರಬೇಕು

ಅವಳನ್ನ ನೋಡೇ ಬರಬೇಕು ಅವಳ ಬಿಡಬಾರ್ದು ನಾನಾಗಿ ||ತಂದಾನ||

ಮೆಲ್ಲಕ್ಕೆದ್ದು
ಅಣ್ಣನ ಪಾದ ಮುಗಿತಾನ

ಅಣ್ಣಾ ಓತಿನಣ್ಣಾ ಕೆಟ್ಟು ಗ್ಯಾನಕಣ್ಣಾs
ಅಣ್ಣಾ ಹಣ್ಣಿಗ್ಹುಟ್ಟಿದ ನೀನು ಲೋಕವಣ್ಣಾss
ಲೋಕ ನೋಡವನಲ್ಲ ನೀನು
ನೀನು ಆರಂಡ್ಯಡಿವಾಗಿರೋ ರಾಮದೇವಾs
ಆರಂಡಿ ಅಡವ್ಯಾಗಿರೊನಪ್ಪ ನೀನು ಊರಾಗಿರೋನಲ್ಲ
ನೀನು ಊರಾಗಿದ್ದ ಲೋಕ ನೋಡೊನಲ್ಲ
ಲೋಕನೋಡೋವನಲ್ಲ ನೀನು ದುಷ್ಟುರು ದುರ್ಮಾಗರು
ಕರ್ಮರು ನೋಡೋನಲ್ಲ ||ತಂದಾನ||

ಅಂತಾ ಓಲಿಕ್ಯಾ
ಅಣ್ಣನ ಪಾದಕ್ಕ ಬಿದ್ದು
ಕೈ ಮುಗಿದ
ಅಣ್ಣ ಮ್ಯಾಗಳರು ವಟ್ಟೆಗೆ ಹುಟ್ಟಿದವ್ನು
ರಂಡೆ ಮುಂಡೆಗ್ಹುಟ್ಟಿದೋನು
ಆಗ ಇನ್ನ ಕೆಟ್ಟಗ್ಯಾನಕ್ಕೊಗ್ತೀನಿ
ಕೆಟ್ಟ ಬುದ್ದಿಗ್ಹೊಗ್ತೀನಂತ

ಅಣ್ಣನ ಪಾದ ಮುಗಿದಾಗ ತಮ್ಮವ್ಹೋದು ಬಿಟ್ಟಾನ ||ತಂದಾನ||

ಸಿಟ್ಟುವಾಗಿ
ಮಾವ ಅಡ್ಡ ಮಕ್ಕಂಣಾನ
ಮಾವಗ ಕೈ ಮುಗ್ದು
ಎದಿಮ್ಯಾಲ ಆಕಡೆಲಿದ್ದ ಪಾದ ಇಟ್ಟ
ಆ ಕಡೆಗಿ ಎಗರಿಬಿಟ್ಟ
ಎಗರಿ ಬಜಾರಕೂಟ
ಆಗಸಿ ತಟಾದು
ಆಗ ಹೊರಗಿನ್ನವ್ರ
ಪಾತರಗಿತ್ತಿ ಮನ್ಗಿ ಬಂದ
ಆನೆಗೊಂದಿ ಕಂಪ್ಲಿ ಪಟ್ಣದಾಗ
ಬಂದ್ರೆ ಆಕಿ ಇನ್ನವ್ರತ ಬೀಗ ಹಾಕ್ಯಂಡು
ಈಗಿನ್ನವ್ರು ವರಸಿನ ಮ್ಯಾಲೆ
ಹತ್ತಿನದಿಂಡ ಮ್ಯಾಲೆ
ಬಣ್ಣದ್ರಗ್ಗು ಹೊದ್ದಕೊಂಡ ಮಕ್ಕಂಡಾಳೆ
ದಬ್ ದಬ್ ಬಾಕ್ಲು ಬಡ್ದ
ಆಗ ಎಡಕ್ಕಲಿದ್ದ ಬಲಕ್ಕೆದ್ಳು
ಯಾರ್ರೀ ನೀವು ನಿಮ್ಮ ಜಾತಿ ಏನು
ನಿಮ್ಮ ತಂದೆ ಯಾರು
ನಿಮ್ಮ ತಾಯಿ ಯಾರು
ಊರ್ಹೆಸ್ತು ಹೇಳ್ತಿ
ಓಹೋ ಕೇಳವೇ ಮೂರು ಕಾಸಿನ ಹೆಣಸು
ನಮ್ಮ ತಾಯಿ ತಂದಿ ಹುಟ್ಟಿ ಬೆಳದದ್ದು
ಎಲ್ಲಾ ಹೇಳಬೇಕ ನಿನಗೆ
ಹೌದ್ರಿ ಹಂಗಾದ್ರ ಬಾಕಿಲ್ ತೆರೆದು
ಇಲ್ದಿದ್ರೆ ಇಲ್ರಿ
ಓಹೋ ಕೇಳವೇ
ನಮ್ಮ ತಂದಿ ಹಿರೇಕಂಪ್ಲಿ ರಾಜ
ಆಗ ವಟ್ಟಿಗೆ ಹುಟ್ಟಿದೋನು ಓಲಿಕಾ ನಾ
ಹಣ್ಣಿಗೆ ಬೆಳೆದೋನು ನಮ್ಮಣ್ಣ ರಾಮ
ಹರಿಯಾಳದೇವಿ ಮಗ
ಓಹೋ

ರಾಜ್ಯವಾಳೋ ಮಗನಪ್ಪ ನನ್ನ ಕೈಗಿ ಸಿಕ್ಕ ಬಿಟ್ಟಾನ
s ಇನ್ನ ಕನ್ನಡಿ ಮನ್ಯಪ್ಪ ಇವ್ನ ಕಾಲ ನಾನು ಕಡಿಸೇನ ||ತಂದಾನ||

ಏನಪ್ಪಾ ದೊಡ್ಡವ್ರು ಮಗ
ಚಿಕ್ಕೊರತಲ್ಲಿಗೆ ಬಂದಿದಿ
ಈಗ ಏನನ್ನ ತಂದಿಯಾ
ಸುಮ್ಗೆ ಬಂದಿಯಾ

ಏಯ್ ತಂದಿ ಕೈಯಾಗ ಇರೋನು
ನಾನ ಅಣ್ಣನ ಕೈಯಾಗ ನಡಿಯೋನು ||ತಂದಾನ||

ಸುಮ್ನೆ ಬಂದೀನಿ
ಎದಕಾಗಿ ಬಂದೇ
ನೀನ ಇನ್ನವ್ರ ಮಾಳಿಗೇರಿ
ಬೆಳ್ಳಿಕಡ್ಡಿಕೂಟ ಕೂದಲ ಆರಿಸ್ಕೋವಾಗ
ಹುಣಸಿ ತಪ್ಲ ಸೀರಿ
ರಾಗಿ ತಪ್ಲ ಕುಬಸ
ಎರಡ ಕಣ್ಣಿಗೆ
ತಳಕ್ ಮಿಂಚು ಹೊಡಿತು
ಅವ್ಳು ಎಷ್ಟು ಪ್ರಾಖರದ್ಳೊ
ಬೆಳ್ಳಿ ಕಡ್ಡಿಲಿದ್ದ ಕೂದಲ ಆರಿಸಿಕೊಂಬಾಳೊ
ನೋಡ್ಬೇಕಂತ ನಾನು ಬಂದಿನಿ
ಓಹೋ ಸರಿ

ಇದು ಉದ್ರಿ ಪಾತರಗಿತ್ತಲ್ಲ ಇದು ನಗದಿ ಪಾತರಗಿತ್ತಿಯಯ್ಯಾ ||ತಂದಾನ||

ನೀನು ದೊಡ್ಡೋನ ಮಗ ಆಗಿರಬೋದು
ನೀನು ರೊಕ್ಕ ತಂದಿ ಅಂದ್ರೆ
ನಾನು ಬಾಕ್ಲ ತೆರಿತೀನಿ ಇಲ್ಲಂದ್ರೆ ಇಲ್ಲ
ಕೇಳವೇ ಈವೊತ್ತು ನಾನೇನು ಮರ್ತು ಬಂದಿನಿ
ನಾಳಿದ್ದ ನಾನು ತರ್ತೀನಿ ಬಾಕ್ಲ ತೆರಿ
ಛೀ ಇವೂತ್ತು ಬಂದಿಯಲ್ಲ
ನಿನಗೇನು ನಾನು ತಪ್ಪು ಮಾತಾಡೋದಿಲ್ಲ
ಹರ್ದೋಗಿದ್ದ ಕೌದಿ ಐತಿ ಕೊಡ್ತಿನಿ
ಈಗ ಹೊಲಿಗುಂಡಿ
ಇವಾಗ ಬೆಂಕಿ ಹಾಕಿ
ಹೊಕಿಗುಂಡಿ ಈಗ ಆರಿಟ್ಟಿನಿ

ಒಲಿಗುಂಡಿ ತಲ್ಲಯ್ಯ
ಮೂರು ಒಲಿಗುಂಡುತಲ್ಲಿ
ಮೂರು ಗಂಟಿ ನಿದ್ದಿ ಮಾಡ್ಹೋಗು ||ತಂದಾನ||

ಒಲಿಗುಂಡಿತಲ್ಲಿ ನಿದ್ದಿ ಮಾಡಿ ಹೋಗು ಮೂರು ಗಂಟೆ
ಬೆಚ್ಚಗಿರ್ತೈತಿ ಕಾವು ಇರ್ತೈತಿ ನಿನಗೆ

ಛೀ ಮೂರು ಕಾಸು ಹೆಣಸಾಲೇ ನೀನು ಎಂಥಾ ಮಾತು ನುಡಿದಲೇ
s ಎಡಗಾಲಲ್ಲಿ ಓದ್ದೇನೋ ನಿನ್ನ ಬಾಕ್ಲಾಗ ಮುರ್ದೇನು ||ತಂದಾನ||

ಏನ್ರಿ ಸರಿ ನಾನು ಮೂರು ಕಾಸಿನೋಳು
ನೀನು ಆರು ಕಾಸಿನ ಮಗ

ಮೂರು ಕಾಸಿನ ತಲ್ಲಿಗೆ ನೀನು ಯಾಕಾಗಿ ಬಂದೀದಿ ||ತಂದಾನ||

ಏನ್ರಿ ನೀವ ದುಡ್ಡೋರು ಹೊಟ್ಟ್ಯಾಗ ಹುಟ್ಟಿದವ್ರು
ದೊಡ್ಡ ಬುದ್ದಿ ದೊಡ್ಡ ಜ್ಞಾನ ಇರಬೇಕು

ದೊಡ್ಡ ಜ್ಞಾನ ಬಿಟ್ಟಯ್ಯ
ನನ್ನ ಚಿಕ್ಕ ಜಾತಿದವ್ಳೀತಲ್ಲಿಗೆ
ನೀನು ಯಾಕಾಗಿ ಬಂದೈಯ್ಯ ||ತಂದಾನ||

ನಿನ್ನ ಬಾ ಅಂತ ನಾನು ಕರ್ದಿಲ್ಲ
ಚಿಕ್ಕ ಜಾತಿದವುಳ್ತಲ್ಲಿ ಬಂದವ್ನು
ನನಗಿಂತ ಚಿಕ್ಕ ಜಾತಿ ನಿಂದು
ಚಿಕ್ಕೊನಾದ್ರೇನೇ ನೀನು ಬಂದಿರೋದು
ಛೀ ಎಂಥಾ ಮಾತು ನುಡಿತಿ ಲುಚ್ಚಾದವಳೇ
ಅಂತ ಆ ಓಲಿಕ ರಾಮ ಹಿಂದಕ ಬಂದ
ಬಂದು ನಿತ್ಕಂಡ
ಬಜಾರದಾಗ ಯ್ಯಾಂಗ ಹೋಗ್ಲಿ ನಾನು
ನನಗೆ ನಿದ್ದಿ ಬರಾದಿಲ್ಲ ಅಂತ

ತಂದಿ ಮನಿಗೆ ಬಂದಾನ ವಟ್ಟೀಗ್ಹುಟ್ಟೀದ ಓಲೀಕಾ||ತಂದಾನ||

ತಂದಿ ಮನಿಗೆ ಬಂದ್ರೆ ದಿನಾಲು ಬಾಕ್ಲ ಅಡ್ಡ ಗ್ವಾಡಿಮ್ಯಾಲ ಹಕ್ಯಂಡು ಮಕ್ಕಂತಿದ್ರು
ಬ್ಯಾಸಿಗೆ ಕಾಲ
ಈಗಿನ್ನವ್ರು ತಾವು ಗಾಳಿ ಬರಬೇಕಂತ
ಆಗ ಬಾಕ್ಲ ತೆರೆಕಂಡು
ಹೊರ್ಸಹಾಕ್ಯಂಡು ಬೆಳ್ಳಿ ಹೊರ್ಸ
ಆಗ ಹತ್ತಿನದಿಂಡು ವ್ಯಾಲೆ
ತಾಯಿ ತಂದಿ ನಿದ್ದಿ ಮಾಡ್ಯಾರೆ
ಕಂಪಿಲಿರಾಜ ಹರಿಯಾಳದೇವಿ
ನೋಡ್ದ
ಹೇ ನಮಪ್ಪ ನಮ್ಮಮ್ಮ ಬಾಕಿಲ್ ತೆರೆದಾರಂತ
ಮಂತ್ರಗಳು ತಂತ್ರಗಳು ಕಲ್ತಾನ
ಅಣ್ಣಗ ತಿಳಿಲಾರದ್ಹಾಂಗ
ಹೆಚ್ಚು ಓದಿಕ್ಯಂಡಾನ ಅವ್ನು
ಯಾರ ವಟ್ಟಿಗ್ಹುಟ್ಟಿದವ್ನು
ಇಲ್ಲಿದ್ದ ಮಂತ್ರಿಸಿದ್ರೆ
ಬೀಗ ಉಚ್ಚಿ ನೆಲಕ ಬೀಳಬೇಕು
ಹಿಡಿಕಿ ಮಣ್ಣು ತಗಂಡು ಉಗಿದರೆ
ಆ ಬಾಕ್ಲ ಹಾಂಗೆ ಮುಚ್ಚಿಕ್ಯಂಬೇಕು
ಹಂಥಾ ಮಂತ್ರಗಳು ಓದ್ಯಾನವ್ನು
ಆಗ ಮನ್ಯಾಗ ಬಂದು
ಬ್ಯಾಂಕಿಗೆ ಶರಣು ಮಾಡ್ದ
ಒಳಗೆ ಬೀಗ ಎರ್ಡು ಹೊರಗೆ ಬೀಗ ಒಂದು

ಅವ್ನು ಮೂರು ಮಂತ್ರ ಓದ್ಯಾನ ಬಲಗೈ ಇಟ್ಟಾನ
s ಮಂತ್ರಗಳಲಿದ್ದನ್ನ ಇನ್ನ ಮೂರು ಬೀಗ್ನು ಉಚ್ಚಿ ಕೆಳಗೆ ಬಿದ್ದಾವಾ ||ತಂದಾನ||

ಕೆಳಗೆ ಬಿದ್ದ ಮ್ಯಾಲೆ
ಬ್ಯಾಂಕ್ಯಾಗ ನೋಡಿದ್ರೆ
ಭೂಮೀ ಪತ್ರಗಳು
ಮನಿ ರೆಕಾಟುಗಳು
ಆಗ ಬೆಳ್ಳಿ ಬಂಗಾರ
ಒಂದು ಲಕ್ಷ ರೊಕ್ಕ
ಓಹೋ ಕೈ ಮುಗುದು
ಆಗ ಮೂರು ಗೊಗ್ನಿ ರೊಕ್ಕ ಶೆಲ್ಯದಾಗ ಆಕ್ಯಂಡ
ಗಂಟು ಕಟ್ಟಿದ
ಮತ್ತೆ ಮಂತ್ರ ಓದಿದ
ಆಗ ತಾವಾಗಿ ಬ್ಯಾಂಕ್ ಮುಚ್ಚಿಕ್ಯಂಡು ಬಿಡ್ತು
ಆಗ ಇನ್ನವ್ರತ್ತ ಗಂಟು ಕಟ್ಟಿಕೊಂಡು
ಆಗ ತಾಯೊ ತಂದೆ ಪಾದ ಮುಗ್ದ
ಅಪ್ಪಾ ನಾನು ತಿಂಬಾಕಲ್ಲ
ನಾನು ಹಾಳು ಮಾಡಾಕಲ್ಲ

ನಿನ್ನ ಸೊಸಿಗೆ ಹೋಗಿ ಕೊಡ್ತೀನಿ
ನಿನ್ನ ಮನಿಗೆ ಬರಾ ಸೊಸಿಯಪ್ಪಾ
ಕುಂತಗಂಡ್ರೆ ಚಂದಪ್ಪ
ಮನಿ ನಿಂತಕಂಡ್ರೆ ಚಂದಪ್ಪ ನಿನ್ನ ಮನಿ ||ತಂದಾನ||

ಪಾಪ ಮಗ್ನಿಬಂದು ಬಾಳವೆ ಮಾಡಾಕಿ
ಕುಂತಕಂಡ್ರೆ ಚಂದ ಅಂತೆ
ನಿಂತಕಂಡ್ರೆ ಬೇಸಂತೆ ಮನಿ
ಆಗ ನಿನ್ನ ಸೋಸಿ ಕೇಳ್ಯಾಳ
ನಿನ್ನ ಸೊಸಿಗೆ ಕೊಡ್ತೀನಿ ಅಂತ
ತಗಂಡು ಬಜಾರ ಕೂಟ ಬಂದಾ
ಆಗ ದವ್ ದಬ್ ಬಾಕ್ಲ ಬಡ್ದಾ
ಏನ್ರಿ ಯಾರು
ಕೇಳವೇ

ಮೂರು ಕಾಸು ಸಣ್ಣ ಜಾತಿ
ನಿನ್ನ ಬುಟ್ಟಿತಕ್ಕಂಡು ಬಾರೆ
ಬುಟ್ಟಿ ತುಂಬ ತುಂಬಿ ಕೊಡುತ್ತೀನಿ ||ತಂದಾನ||

ಏs ಚಿಕ್ಕ ಜಾತಿಯವಳೇ
ಬುಟ್ಟಿ ತಕ್ಕಂಡು ಬಾ
ಬುಟ್ಟಿ ತುಂಬ ತುಂಬಿ ಕೊಡ್ತಿನಿ
ಅಂದ್ರೆ ಬುಟ್ಟಿ ತಂದಳು
ಹೆಂಡೆ ಬುಟ್ಟಿ ತಂದ್ರೆ
ಬುಟ್ಟಿತುಂಬ ಹಾಕಿದ
ಆಹಾಹಾ
ಬುಟ್ಟಿ ತುಂಬ ಹಾಕಿದ ಅಂತ
ಬರ್ರಿ ಈಗ ನೀವು ವರಸಿನಮ್ಯಾಲೆ ಕುಂತ್ಕೋರಿ
ಕೂಡ್ರಿ ಅಂತ

ಆಗ ವರಸಿನ ಮ್ಯಾಲೆ ನೋಡಣ್ಣ ಎಲೆ ಅಡಿಕೆ ಕೊಟ್ಟಾಳ
ಒಂದು ಗಂಟೆ ಐದಾನಾ ಪಾತರಗಿತ್ತಿ ಮನ್ಯಾಗ ||ತಂದಾನ||

ಏನ್ರೀ ನೀನು ದೊಡ್ಡೋರು ಕೈಯಾಗಿರೋನು
ಅಣ್ಣನ ಕೈಯಾಗ ತಂದಿ ತಾಯಿ ಕೈಯಾಗಿರೋನು
ಹೋಗ್ರಿ ಅಂಬ್ಹೊತ್ತಿಗೆ
ಆಗ ಇವನು ಪಾತರಗಿತ್ತಿಯನ್ನು ಬಿಟ್ಟು
ಆಗ ಬಜಾರಕೂಟ ಅಣ್ಣನ ಮನಿಗೆ ಬಂದ
ಆಗ ಇನ್ನವರತಾ ಮಾವಲ್ಲಿದ್ದ
ಆಕಡಿಗ ಲಾಗ ಹೊಡ್ದು
ಅಣ್ಣನ ಬಗಲಾಗ ಎಡಗೈ ಕಡಿಗೆ
ಆಗ ಜಮ್ಖಾನ ಹೊದ್ದುಕೊಂಡು ಮಕ್ಕಂಡ
ಆವೊತ್ತು ಇನ್ನವ್ರ ಹೊತ್ತು ಹುಟ್ಟಿದ ಮ್ಯಾಲೆ
ಆಗಿನ್ನವ್ರ ಮಾವ ಎದ್ದ
ಏನಪ್ಪಾ ಅಳಿಯನವ್ರೆ
ಇನ್ನಾ ಮಕ್ಕಂಡಿರಿ ನನ್ನೇ ಎಬ್ಬಿಸ್ತಿದ್ರಿ ದಿನಾನೂ
ಇವೊತ್ಯಾಕ ಹೊತ್ತು ಹುಟ್ಟೈತಿ ಇನ್ನ ಎದ್ದಿಲ್ಲ
ಆಗ ಇನ್ನ ರಾಮಯ್ಯ ಎಡಕ್ಕಲಿದ್ದ ಬಲಕ್ಹೊಳ್ಳಿದ
ಅಪ್ಪಾ ತಮ್ಮ
ಎಲ್ಲಾರಿಗಿ ಮುಂಬ್ಯಾಗ ನಿನೇ ಎಬ್ಬಿಸ್ತಿದ್ದಿ
ಏನಮ್ಮ ತಮ್ಮ

ಅಣ್ಣಾ
ಮೈಸುಸ್ತು ಆಗೈತೋ ನನಗ ಭಾಳ ನಿದ್ದಿ ಬರತೈತೊ ||ತಂದಾನ||

ಅಂಬೊತ್ತಿಗೆ ಇಲ್ಲಪ್ಪಾ ತಂದಿ ಬೈತಾನ
ರೂಮನಾಗ ಕುಂತ್ಕೊಂಡು
ಸ್ನಾನ ಮಾಡಿಕೊಂಡು
ದೇವರ ಧ್ಯಾನ ಮಾಡಿ
ನಾವು ಓದಿ ಕಲಿಬೇಕು
ಅಂಬೊತ್ತಿಗೆ
ಸರಿಬಿಡಣ್ಣಂತ ಎದ್ದುಬಿಟ್ಟ
ಸ್ನಾನ ಮಾಡಿಕೆಂಡ್ರು
ದೇವ್ರೀಗ ಧ್ಯಾನ ಮಾಡ್ದುರು
ರೂಮಿನಾಗ ಬಂದು ಓದಿಕ್ಯಂತ ಕುಂತ್ಕೊಂಡು
ಆಗ ಇನ್ನ ಡಿಲ್ಲಿ ಪಟ್ಣದಿಂದ ಬಂದ
ಯಾರು
ಒಬ್ಬ ರಾನೆಂಬೋನ ಮಂತ್ರಿ
ಡಿಲ್ಲಿಯವ್ನ ಕೈಯಾಗಿರೋ ಮಂತ್ರಿ
ಬಂದು ಏನಪ್ಪ ಗುಂಡು ಎಬ್ಬಿಸುವವರಿದ್ದಾರಂತೆ
ಇಪ್ಪಾತ್ತಾರು ದಡೆವು ಗುಂಡು
ಎಡಗೈಲಿ ತಾವು ಎತ್ತಾಕ್ಯಾನಂತೆ,
ಯಾರು ವಟ್ಟಿಗೆ ಹುಟ್ಟಿದೊನು
ರಾಮಯ್ಯ ಆಗ ಮೂರು ಗೇಣು
ಎರ್ಡು ಕೈಲಿ ಎಬ್ಬಸ್ಯಾನಂತೆ

ಈಗ ಚಂಡು ನೋಡೆವಯ್ಯ ನಾವ್ ಗುಂಡು ನೋಡಾಕ ಬಂದೀವಿ ||ತಂದಾನ||

ಅಂಬೊತ್ತಿಗೆ
ಅಪ್ಪಾ ತಮ್ಮ
ಏನ ಅಣ್ಣ
ಏನ ಮಾವಾ
ಏನಿಲ್ಲ
ಗುಂಡು ಮತ್ತೆ ನೋಡಾಕ ಬಂದಾರಂತೆ
ಆವೊತ್ತು ಇವ್ರು ಬಂದಿದಿಲ್ಲವಂತೆ
ಈವೊತ್ತು ನೋಡ್ತಾರಂತೆ
ಆಗ ಇಪ್ಪತ್ತಹಳ್ಳಿ ಅರವತ್ತು ಊರು ಮಂದಿ ಬಂದಿದ್ರು
ಈಗ ಡಿಲ್ಲಿಲಿಂದ ಬಂದಾನಂತೆ
ಮಂತ್ರಿಯಂತೆ ಇವ್ನು
ಬಾಪ್ಪಾ ಅಂದ್ರೆ
ಏನಣ್ಣ ನನ್ಗೆ ಸುಸ್ತಿ ಆಗೈತಿ
ಅಯ್ಯೋ ಬರಬೇಕಪ್ಪಾ
ಆಗಂಗಿಲ್ಲ ಅಂತ ಆಗ ಬಂದ್ರು
ಈಗ ಅಣ್ಣ ಕೈಮುಗುದು

ಗುಂಡು ಸುತ್ತ ತಿರಗ್ಯಾನ
ಕೈಯೊಂದು ಮುಗಿದಾನ
ಎರ್ಡು ಕೈಲಿ ಹಿಡಿದಾನೋ
ಗೆಣಷ್ಟು ಎಬ್ಬಿಸ್ಯಾನ ಎತ್ತಿ ಭೂಮಿ ಮ್ಯಾಲೆ ಹಾಕ್ಯಾನ || ತಂದಾನ ||

ತಮ್ಮ
ಅಣಂದಾಗೋಯ್ದು ತಮ್ಮಂದೈತಿ
ಎಡಗೈಲಿ ಒಂದೇ ಕೈಲಿ ಎಬ್ಬಿಸಿದೋನು
ಎತ್ತಿಹಾಕಿದ್ರೆ ಭೂಮಿ ಗೇಣಷ್ಟು ನೆಗ್ಗೋಗಿತ್ತು
ಅಂಥವ್ನು

ಎರ್ಡು ಕೈಲಿ ಹಿಡಿದಾನ ಗೇಣಷ್ಟು ಎದ್ದೆಳವಲ್ಲದಣ್ಣಾ ಗುಂಡು || ತಂದಾನ ||

ತಮ್ಮಾ
ನಿನ್ನ ಮೊನ್ನೆಯ ಪರಾಕ್ತ
ಇಂದು ಎತ್ತಾಗೊಯ್ತು
ಎಡೆಗೈಲಿ ಒಂದು ಕೈಲಿ ಎಬ್ಬಿಸಿದೋನು
ಎರ್ಡುಗೈಲಿ ಗೇಣು ಎಬ್ಬಿಸ್ವಲ್ಲೇ
ಏನಪ್ಪ ನಿನ್ನ ಬಲ ಶಕ್ತಿ ಎಲ್ಲಗ್ಹೋತು
ಅಣ್ಣಾ ಎಡಗೈಲಿನ್ನು ಎತ್ತುವಾಗ
ಎದಿ ಎಂಬೋದು ಎಲುಬು ಖಳ್ಕ ಅಂದುಬಿಡ್ತು

ಅದ್ಕ ಸುಸ್ತಿಯಾಗೈತಣ್ಮಾ ನಿನ್ನೆಲಿದ್ದ ಊಟ ಮಾಡಿಲ್ಲ ನಾನು || ತಂದಾನ ||

ಯಾರಿಗ ಹೇಳ ಮಾತಲ್ಲ ಇದು
ನಮ್ಮಣ್ಣಗ ಹೇಳೋದಲ್ಲ
ತಾಯಿ ತಂದಿಗಿ ಹೇಳಂಗಿಲ್ಲ
ಯಪ್ಪಾ ಏನ್ಮಾಡ್ತಿ
ನಿನ್ನಲಿಂದ ಅನ್ನ ಇಲ್ಲ
ಮೈ ಸುಸ್ತು ಆಗೈತಿ
ತಮ್ಮಾ ಅಷ್ಟೊಂದು ಸುಸ್ತಾಗಿದ್ರೆ
ಔಷಧಿ ಈಸ್ಕೊಡ್ತಿನಪ್ಪ
ಏಯಮ್ಮ ಔಷಧಿ ಈಸ್ಕೊಡ್ತಾನಂತೆ

ಸಾಯ್ತೀನೋ ಉಳಿತೀನೋ ನಾ ಔಷುಧ ತಿಂದಾರೆ
s ಹೆಂಗಸ್ತು ಪೌರ್ ಎಷ್ಟೈತೋ
ಗಂಡಸ್ರ ಪೌರ್ ಎಲ್ಲ ಎಳದಾದ || ತಂದಾನ ||

ಗಂಡಸ್ರದೆಲ್ಲ ಬಲ ಕಳ್ದೊಗು ಬಿಡ್ತು
ಕೇಳವೇ ಪಾತರಗಿತ್ತಿ
ಎಷ್ಟು ಮೋಸ ಮಾಡ್ದಿ ನನ್ನ
ಸಾಯಂಗ ಮಾಡಿಬಿಟ್ಟಿ
ನನ್ನ ಜೀವನ ಅಂತಾ ಸುಮ್ನಿದ್ದ
ಈಗ ನಾಳೆ ಎತ್ತತಿ ಏನಪ್ಪಾ ತಮ್ಮ
ಇಲ್ಲ ಅಣ್ಣ

ಆಯ್ತಣ್ಣ ಇಲ್ಲಿಗೆ ನಾನು ಗುಂಡು ಎತ್ತಾಂಗಿಲ್ಲಣ್ಣ || ತಂದಾನ ||

ಅಂಬೊತ್ತಿಗೆಲ್ಲ
ತಿರಿಗ ದಿವಸಿ ತಾವಾಗಿ ತಾಯಿತಂದಿ

ಈಗ ಬ್ಯಾಂಕಿ ನೋಡಲಿಲ್ಲಣ್ಣ ಮಗ ಒಯ್ದಿದ್ದಾಣ್ಣ || ತಂದಾನ ||

ಆಗ ಏನ್ ಮಾಡಿಬಿಟ್ಟ
ಮತ್ತೆ ತಿರುಗ ದಿವ್ಸ ನಿದ್ದೆ ಮಾಡ್ಬೇಕಲ್ಲ
ನಿದ್ದೆ ಬರೋಲ್ದು
ಆಗ ಪಾತರಗಿತ್ತಿ ನೋಡ್ದಾಗ್ಲಿದ್ದ
ಇನ್ನವ್ರು ತಾವಾಗಿ ರುಚಿ ಕಂಡಿದ್ದ
ಆಗ ಏನಂದ
ಮತ್ತೆ ತಿರುಗಿ ಇನ್ನವ್ಳತ್ತ ಬಂದ
ಸುಟ್ಟು ಸರಿವೊತ್ನ್ಯಾಗ
ಅಣ್ಣನ ಬಗಲಾಗ ಎದ್ದು ಬಂದು
ದಬ್ ದಬ್ ಬಾಕ್ಲು ಬಡ್ದ
ಏನ್ರಿ
ಏನನ ತಂದಿಯಾ ಸುಮ್ನೆ ಬಂದಿಯಾ
ಅರೆ ನಿನ್ನೇ ಮೂರು ಬಗಸಿ
ತಂದು ಕೊಟ್ಟನ್ನಿ ತಾವಾಗಿ ಬುಟ್ಟಿ ತುಂಬ
ಮತ್ತೆ ದಿನಾನಾ
ಇಲ್ತಿ
ಇದು ಇನ್ನ ಉದ್ರಿ ಪಾತರಗಿತ್ತಿ ಅಲ್ಲ
ನಗದು ಪಾತರಗಿತ್ತಿ
ಮತ್ತೆ ಏನ್ ತರ್ಬೇಕು
ಏನಿಲ್ಲ
ಆಗ ಕುಲದಲ್ಲಿ ಕ್ಷಾಮಟರಾಕಿ
ಕೊರಳಾಗ
ಮೂರು ತೊಲ ಬಂಗಾರೈತಿ
ಇರಿಶೆಟ್ಟಿ ಅಂತ ಇಲಾಸ್ಯಾಕ್ಯಾನ
ಆ ಬಂಗಾರದ ಸರ ತಂದ್ರೆ
ನಾನ್ಹಾಕಂಡ್ರೆ ನಿನ್ಗೆ ಎಷ್ಟು ಛಂದರಿ
ಕುಂತ್ರೆ ನಿಂತ್ರೆ ನಡದ್ರೆ
ಕೇಳವೇ
ನಮ್ಮ ಮನಿಯಾಗ
ನಮ್ಮ ತಾಯಿ ತಂದಿ ಮನಿಯಾಗ
ಇರೋದು ಏನನ್ನ ಕೇಳು
ಆಗಿನ್ನವ್ರತ್ತಾಗಿ ಎರದೊರ್ದು ಯಾರ್ದು ಕೇಳ್ಬೇಡ
ಇಲ್ಲ ನನ್ಗೆ ಅದೇ ಬೇಕ್ರೀ
ಓಹೋ ಇನ್ನ ಸಾಯೋತನಕ
ನೀನೇ ಗಂಡ ನಾನೇ ಹೆಂಡ್ತಿ
ಇನ್ನೊಬ್ಬರ ದಾರಿ ನೋಡಂಗಿಲ್ರಿ ಓಲಿಕ್ಯಾ
ಬಾಮಾ

ನಿನ್ನ ಕಾಟ ಭಾಳಾಯ್ತೋ ನಾನ್ ಹ್ಯಾಂಗ್ ಮಾಡ್ಲಿ ಬಾಮ್ಮ || ತಂದಾನ ||

ಕಳತನಗೆ ಹಂಗ್ಹೋಗ್ಬೇಕು
ಏನ್ತಿ ಕಳತಾನ ಮಾಡಕ ಬಂದಿಯಾ ಈವಾಗ
ಆ ಏನನ್ನ ನಿಜದಲ್ಲಿ ಬಂದಿಯಾ
ಅಣ್ಣಗ ಕಾಣ್ಲಾರ್ದಂಗ
ತಾಯಿತಂದ್ಗಿ ತಿಳಿಲಾರ್ದಂಗ
ಆಗ ಕಳ್ಳತನದಲ್ಲಿ
ಸೂಳೆತನ ಮಾಡ್ಲಿಕ್ಕೆ ಬರತೈತಂತೆ
ಕಳ್ಳತನ ಮಾಡಾಕ ಬರೋದಿಲ್ಲ
ಏನ್ರಿ ಇಲ್ಗಿ ಹ್ಯಾಂಗ ಬಂದಿಯೋ ಕಳ್ಳತನಗೆ

ಹಾಂಗ ಕಳ್ಳತನ್ಕ ಹೋಗಿ ನೀನು ಕಳ್ಳತನ ಮಾಡಿ ಬಾರೋ || ತಂದಾನ ||

ಸರಿ ಬಿಡು ಅಂತ
ಅವೂತ್ತು ಕ್ವಾಮಟ್ರು ಹೊರಗ ಮಕ್ಕಂಡಿದ್ರು
ಚುಕ್ಕಾಡಿ ಪರ್ದಿ ಕಟ್ಟಿಕ್ಯಾಂಡು
ಗಾಳಿ ಬೀಸುತೈತಿ ಅಂತ
ಆಯಮ್ಮನ ಕೊರಲಾಗ ಮೂರು ತೊಲ
ಇನ್ನವ್ರ ಇರಿಶೆಟ್ಟಿ ಅಂತ ಇಲಾಸ ಹಾಕ್ಯಾರ
ಆಗ ಇವ್ನು ಹೊರ್ಸಿನ ಅಡಾಲಿ ಬಂದು ಕುತ್ಕಂಡ
ಎಡಕ್ಕಿಲ್ಲಿದ್ದ ಬಲಕ್ಕೊಳ್ವಾಗ
ಕೊಳ್ಳಾಗಿನ್ನವ್ರ ಒಂಬತ್ತು ತೊಲ ಬಂಗಾರ ಅಲ್ಲ
ಮೂರು ತೊಲ ಬಂಗಾರಿಗ ಆಸೆ ಬಿದ್ದ
ಕತ್ತರಿಸಿ ಬಿಟ್ಟ
ಹೊರ್ಸಮ್ಯಾಗಿಂದ ತೆಳ್ಗ ಬಿದ್ದು ಬಿಡ್ತು
ಬಿದ್ಹೊತಿಗ ತಕ್ಕಂಡು
ಆಗ ಪಾತರಗಿತ್ತಿ ಮನೆಗೆ ಬಂದ
ಏ ಈ ಟೈಮ್‌ನಾಗ ನೀನ ಕಟ್ಟಕಂಡ್ರೆ
ನಿನ್ನ ನನ್ನ ಕುತ್ಗಿ ಕೊಯ್ತಾರ ಆನೆಗೊಂದ್ಯಾಂಗ
ಮತ್ಹೆಂಗ ಮಾಡ್ಬೇಕ್ರಿ
ಇರಿಶೆಟ್ಟಿ ಇರಿಶೆಟ್ಟಿನ ಹೆಂಡ್ತಿ
ಗಂಡ ಹೆಂಡ್ತಿ ಸಾಯೋತನಕ
ನಿನ್ನ ಕೊಳ್ಳಾಗ ಕಟ್ಕಬ್ಯಾರ
ಅವ್ರು ಹರೇದೋರು
ಮಕ್ಕಳಾಗಿಲ್ಲ ಮರಿಗಳಾಗಿಲ್ಲ
ಯಾವಾಗ ಸಾಯಬೇಕ ಅವ್ರು
ಅವ್ರು ಯಾವಾಗ ಸಾಯಬೇಕು
ಈಕಿ ಯಾವಾಗ ಕೊಳ್ಳಾಗ ಕಟ್ಟುಗೋಬೇಕು
ಹೇs ಟ್ರಂಕ್‌ನಾಗಿಟ್ಟು ಬೀಗ ಹಾಕೆಂದ
ಟ್ರಂಕ್‌ನಾಗಿಟ್ಟು ಬೀಗ ಹಾಕ್ದುಳು
ಆಗ ಪಾತರಗಿತ್ತಿ ಮನ್ಯಾಗ ಘಂಟೆ ನಿದ್ದೆ ಮಾಡ್ದ
ಮತ್ತೆ ಅಣ್ಣನ ಬಗಲಾಗ ಬಂದು ನಿದ್ದಿ ಮಾಡ್ದ
ಈ ಕ್ವಾಮಟ್ರಕಿ ಎದ್ದೇಳಬೇಕಲ್ಲ
ಕೋಳಿ ಕೂಗಿದಾಗ ಎದ್ದು ಬಿಟ್ಳು
ನೀರು ತರುತ್ತಿದ್ಳು
ಗಂಡ ನೋಡ್ದ ಇರಿಶೆಟ್ಟಿ
ಏನೇ ಮೂರು ತೊಲ ಕೊಳ್ಳ ಪದಕ
ಯತ್ತಾಗೊಯ್ತು ಅಂದ
ಅಬ್ಬಾ

ಊರಾಗ ಕಳತಾನ ಇಲ್ಲಾದ್ದು ನನ್ನ ಕಳತನವಾಯಿತೋ || ತಂದಾನ ||

ರಾಜ ಕಚೇರಿಗೆ ಬಂದ್ರು
ಶರಣ್ರಿ ಹಿರಿಕಂಪ್ಲಿರಾಜ
ಏನಪ್ಪಾ
ಈಗ ಈ ಆನೆಗೊಂದು ಅಂದ್ರೆ
ಕಂಪ್ಲಿಪಟ್ಣ ಅಂದ್ರ
ರಾಜತನ ಮಾಡೋನು ಈ ಊರಾಗ
ಕಳ್ಳಂಬೋನು ಹುಟ್ಟಬಾರ್ದು
ಈಗ ಸೂಳೆ ಅಂಬೋಳು ಇರಬಾರ್ದು
ಈಗಿನವ್ರು ಅಂಥಾ ಊರಾಗ

ಈಗ ಕೊಳ್ಳು ಪದಕ ಒಯಿದ್ದಾರ ಮೂರು ತೊಲ ಬಂಗಾರವಾಗಿ ಸರಪಣ || ತಂದಾನ ||

ಹೌದು ಪಾಪ
ದಿನಾಲು ಕಟ್ಟಕ್ಯಂಡು ನೀರು ತರ್ತಿದ್ಳು
ಮುವತ್ತಾರು ಗಂಟೆ ಕೊಳ್ಳಾಗೆ ಇತ್ತು
ಮೂರು ತೊಲ
ಬಂಗಾರದ ಸರ ಹೋಗಬೇಕಾತಂದ್ರೆ
ಈ ಊರು ಆನೆಗೊಂದ್ಯಾಗ
ಇಂಥಾದೇನೂ ಹೋಗಂಗಿಲ್ಲ
ಒಂದು ಬೆಳ್ಳಷ್ಟೂ ಚೂರಿ ಹೋಗಂಗಿಲ್ಲ
ಲೇ ಆಗ ಹಂದಿ ಬಲೆ ಒಡ್ಡ್ರಿ
ಈರ ಅಗಸಿ ಸುತ್ತ
ಊರ ಸುತ್ತ ಕಾಯಿರಿ ಅಂತಾ
ಐದು ಮಂದಿ ತಳವಾರರಿಗೆ
ಕಾಯಾಕಿಟ್ಟ ಹಂದಿ ಬಲಿ ಹಾಕಿ
ಬೇರೆ ಊರು ಕಳ್ಳರು ಬರ್ತಾರೋ
ಅಂಬೋತ್ತಿಗೆ ಆಗ ಓಲಿಕ ರಾಮ ಏನಂತಾನ

ಬಲೆ ಒಡ್ಡಲಿದ್ದಾರೆ ಹತ್ತು ಮಂದಿ ಕಾಯೋರು ನಮ್ಮ || ತಂದಾನ ||

ಏನ್ರಿ
ಹತ್ತಿ ಮಂದಿ ಕಾಯದ್ರೂ…..
ಒಬ್ನಿಗೂ ಸಿಗೋನಲ್ಲ ನಾನು
ಅಂತ ಆಗಿನ್ನವ್ರತ್ತ ಓಲಿಕರಾಮ ಬಂದ
ಮತ್ತೆ ಪಾತರಗಿತ್ತಿ ಮನೆಗೆ
ಏನ್ರಿ ಇನ್ನೇನು ಬೇಡ
ಆಗಿನ್ನವ್ರು ಬೆಳ್ಳಿ ರೊಕ್ಕೈತಿ
ಈಗ ನಿಮ್ಮಪ್ಪನ ಮನೆಯಾಗಿದ್ದ ಬೆಳ್ಳಿ ರೊಕ್ಕ ತಕ್ಕಂಡು ಬಾ ಅಂದ್ಳು
ಆಗಿನ್ನವ್ರುತಾವಾಗಿ ಏನಂದ
ನಮ್ಮೆನೆಯಾಗಿಲ್ಲವೇ
ಏನ್ರಿ
ಮತ್ತೇ ಕ್ವಾಮಟರು ಬಗಲಾಗೇ ಇದ್ದಾರಲ್ರಿ
ಕ್ವಾಮಟರ ಬಗಲಾಗೇ
ಶ್ಯಾನಭೋಗರಿದ್ದಾರಲ್ರಿ
ಈಗ ಭೂಮ್ಯಾಗ ಹೂಣಿಕ್ಕಿ
ಮ್ಯಾಲೆ ವರ್ಸ ಹಾಕ್ಯಂಡು ಮಕ್ಕಣ್ತಾರಂತೆ
ಆವತ್ತು ನನಗೆ ಬ್ಯಾಮುಣ್ರು ರಾಕಿ ಹೇಳಿದ್ಳು
ಶ್ಯಾನುಭಾಗನ ಹೆಂಡ್ತಿ
ಸರಿಬಿಡು ಬಾಮ್ಮ ತರ್ತಿನಿ
ಅಂತ ಓಲಿಕೆರಾಮ ಬಂದ
ವರ್ಸ ಅಡಿಯಲ್ಲಿ ತೂರಿದ ಆಗ ಗಡಾರಿ ತಕ್ಕೊಂಡು
ಇನ್ನವ್ರತ್ತ ತಿವಿದ ಭೂಮೀನ
ಆಗ ಮಣ್ಣೂ ತೆಗೆದ
ಆಗ ಕೊಡಪಾನಕ ಹಾಕ್ಯಾರ ಬೆಳ್ಳಿರೊಕ್ಕ
ಮೂರು ತಲೀ ರೊಕ್ಕ
ಈ ರೊಕ್ಕ ಎಲ್ಲ ತಕ್ಕೊಂಡ್ಹೋಗಿ
ಅವಳಿಗ್ಯಾಕ ಕೊಡ್ಲಿ
ದಿನಾ ಒಂದ ತಕ್ಕಾಂಡು ಬಾ ಅಂತಾಳೆ
ಪಾಪ ನಾಯಕರು ಬರೇ ಬಡೂರು
ನಮ್ಮ ಜನ
ಪಾಪ ಕೂಲಿಗೋದರೆ ಗಡಿಗೇರುತ್ತೆ
ಇಲ್ಲಾಂದ್ರೆ ಉಫಾಸ
ಅವರ ಓಣ್ಯಾಗ ಉಗ್ಗಿದರೆ
ಮುಂಜಾಳಾರ್ಸಕಂತ್ತಾರ ಅಂತ

ಅರ್ಧ ಕೊಡಪಾನ ರೊಕ್ಕಾಣ ಇನ್ನು ಓಣ್ಯಾಗ ಉಗ್ಗ್ಯಾನ
ಆಗ ಅರ್ಧ ರೊಕ್ಕಾಣ ಮನೀಗಾಗಿ ತಂದಾನ || ತಂದಾನ ||

ಏ ಪಾತರಗಿತ್ತಿ
ಅರ್ಧಕೊಡ ಇತ್ತು ನಾ ತಂದಿನಿ
ಸಾಕು ಬಿಡ್ರಿ
ಇನ್ನ ಆಗ್ಹೋತ್ರಿ
ನಾನು ಏನೂ ಅಂಬೋದಿಲ್ಲ ಅಂಬೋತ್ತಿಗೆ
ಇವ್ರು ಮುಂಜಾಳೆದ್ದೇಳಬೇಕಲ್ಲ
ಆಗ ಇನ್ನವ್ರು ಮುಂಜಾಲೆದ್ರು

ಯಮ್ಮಾ ಕೊಪಾನ ಹೋಗೈತೋ
ಯಾರೋ ಕಳ್ರು ಬಂದು ತೋಡ್ಯಾರ || ತಂದಾನ ||

ರಾಜ ಕಚೇರಿಗೆ ಬಂದ್ರು
ಏನ್ರಿ ಹಿರೆಕಂಪ್ಲಿರಾಜ
ಇರಾನಾ ನಾವು ಹೋಗಾನ ಊರ ಬಿಟ್ಟು
ನೋಡ್ರಿ ನಿನ್ನೆ ನೋಡಿದ್ರೆ ಕ್ವಾಮುಟ್ರುದು
ಆಗ ಮೂರು ತೊಲ ಬಂಗಾರ ಹೋಯ್ತು
ಆಗ ಪದಕ ಒಯ್ದುಬಿಟ್ರು
ಈವೊತ್ತು ನೋಡಿದ್ರೆ ನೋಡ್ರಿ
ಹೂಣಿಕ್ಕಿದ ರೊಕ್ಕ ಒಯ್ದಾರೆ
ಬೆಳ್ಳಿ ರೊಕ್ಕ
ಅಲೇಲೇ ಲೇs
ಬೇರೂರು ಕಳ್ತು ಬಂದಿಲ್ಲ
ಹಂದಿ ಬಲೆ ಒಡ್ಡಿವಿ ಊರ್ಸುತ್ತು
ಇಗೋ ಐದು ಮಂದಿ ತಳಿವಾರ್ನ ಕಾಯಾಕಿಟ್ಟಿವಿ
ಏs ಇದ್ದೂರಾಗೇ ಇರಬೋದು ಕಳ್ರು
ಬೇರೆ ಊರು ಕಳ್ರಲ್ಲ
ನಮ್ಮ ಆನೆಗೊಂದಿಗೆ ಬರೋರು
ಇದ್ದ ರೂರು ಕಳ್ರೆ
ನೋಡ್ತಿ ಓಣಿ ಓಣಿ ಹುಡುಕ್ಯಾಡ್ರಿ
ಅವ್ರು ಜನ ಓಣಿದಾಗ

ಓಣಿಗೊಂದು ನೋಡಣ್ಣ ಇನ್ನ ರೊಕ್ಕಾಗಿ ಬಿದೈತೋ || ತಂದಾನ ||

ಏs ನಾಯಕರಾ ಬರ್ರೀ
ಎಲ್ಲರೂ ಬರ್ರಿ ನಮ್ಮ ಜನದವ್ರು
ಈಗ ನೀವು ಕಳ್ಳತಾನ ಮಾಡ್ಕಂಡು ಒಡ್ಹೋಗಿರಿ
ರೊಕ್ಕ ಓಣ್ಯಾಗ ಬಿದ್ದಾವ
ಇಲ್ರಿ ನಮಗೆ ದನ ಕರ ಹೆಂಡ್ರು ಮಕ್ಳು
ಕೊಳಿ ನಾಯಿ ನೋಡ್ರಿ
ನಾವು ಕಳ್ಳನ ಮಾಡಿಲ್ಲ
ಏs ಇಲ್ಲ ಬರಬೇಕು
ಅಂತ ತಳವಾರ್ರು ಕರಕಂಡ್ಹೋದ್ರು
ಏನ ಸೊಂಟ ಕೋಲ್ ತಕ್ಕಂಡು
ಮೊಣಕಾಲ್ ಮೊಣ ಕೈಗ ಬಡಿತಾರ
ಆಗಿನ್ನವ್ರು ಓಲಿಕೆರಾಮ
ರಾಮಯ್ಯ ತಂದಿ ಕಂಪಿಲ್ಲಿ
ಮಾವ ಬಚ್ಚಣ್ಣ
ಈಗ ರಾಮ ಏನಂತ ದುಃಖ ಮಾಡ್ತಾನೆ

ಯಪ್ಪಾ ಬಡವರ ನೀನು ಕೈ ಎತ್ತಿ ಬಡಿಬ್ಯಾಡಪ್ಪ
ಯಪ್ಪಾ ಇವರು ಕಳತನ ಮಾಡುವರಲ್ಲ ಶಿವನೇ
ಯಪ್ಪಾ ಬಾಳೆಗಿಡಗಳ ಲೋಕ ಬೆಳೆಸವರಪ್ಪ
s ಕೊಬ್ಬು ನಾಟಿ ಕಬ್ಬು ತುಳಿಯ್ಯರಪ್ಪಾ || ತಂದಾನ ||

ಕಬ್ಬು ನಾಟಿ ಕೊಬ್ಬು ತುಳಿಯೋರು ಅವ್ರು
ಈಗ ಬಾಳೆಗಿಡಗಳು ಬೆಳೆಸವ್ರು
ಅಂತಾವ್ರಲ್ಲ
ಹೊಲಗಳು ಮಾಡಿಕ್ಯಂಡು ತಿಂಬೋರು
ಕಳ್ಳನಾಯಿ ಓಡ್ಹೋದ್ರೆ
ಓಡಾಡೋ ನಾಯಿನ್ನ ಹಿಡ್ಕಂಡು ಬಂದ್ರೆ
ಇದ್ದೂರ ನಾಯಕರನ್ನೆಲ್ಲಾ
ಹಿಡಿದಾಕಿದ್ರೆ ಏನು ಪುಣ್ಯಪ್ಪ
ಅಂತ ದುಃಖ ಮಾಡಿದರೆ
ಓಲಿಕಾ ಏನಂತಾನ
ಅಣ್ಣ ಸರಿ ಅವ್ರು ಒಳ್ಳೆಯವರು ಅಂತಿ
ಏನ ಅಣ್ಣ
ಅವ್ರು ಓಣ್ಯಾಗ ರೊಕ್ಕಯಂಗೆ ಸಿಕ್ಕವು
ಅವ್ರು ನಮ್ಮೂರೊರೆ ಕಳ್ತು
ಆನೆಗೊಂದಿಯೋರೆ
ಬೇರೆ ಊರೋನು ಒಬ್ಬನೂ ಇಲ್ಲ
ಇವ್ರು ತಕೊಂಡು ಓಡ್ಹೋಗುವಾಗ
ಓಣ್ಯಾಗ ಬಿದ್ದೋಗ್ಯಾವ

s ಹಾಕ್ರಲೇ ತಳವಾರ್ರೆ ನೀವು ಹಾಕ್ರಲೇ ಪೋಲಿಸವ್ರೆ || ತಂದಾನ ||

ಸೊಂಟ ಕೊಲುತ್ಕಂಡು ಬಡಿತಾರಪ್ಪ
ಹೇಳ್ತೀರಾ ಬೇಕಾ ಅಂತ
ನಾಯಕರನ್ನೆಲ್ಲ ಹಿಡಿದ್ಹಾಕಿದ್ರು
ಮತ್ತೆ ಇವೊತ್ತು ನೋಡೋಣ
ಬಲಿ ಒಡ್ಡು
ಬಲಿ ಒಡ್ಡಿದ್ರು
ಏ ಪಾತರಗಿತ್ತಿ ಊರಾಗ ಇರಬಾರದು
ಈರ ಅಗಸಿ ಹೊರಗೆ ಇಡಬೇಕು ಇನ್ನ
ಅಂತ ಮೂರಂಕಣ ಮನಿಕಟ್ಟಿ
ಆಗಿನ್ನುವ್ರು ತಾವಾಗಿ ಕುಲಕ್ಕೆ
ಆಕಿನ ಸಾಮಾನೆಲ್ಲ ಟ್ರಂಕ್‌ನಾಗೆ ಹಾಕಿ ಇಟ್ಟಿದ್ದು
ಈಗ ಬಂಡಿಗೇರಿಸಿ
ಏನಮ್ಮ ನೀನು ಊರಾಗ ಇರಬಾರ್ದು
ನೀನು ಊರ ಹೊರಿರಬೇಕು
ಬೇರೆ ಊರವ್ರೆ ಬರ್ಲಿ
ಇದ್ದೂರೋರೆ ಬರ್ಲಿ
ಅಲ್ಲಿ ನಿನ್ನ ಮನಿಗ ಬರ್ತಾರ
ಕನ್ನಡಿ ಮನಿ ನೋಡ್ತಾರಾ
ಹೋತಾರಾ
ನಿನ್ನ ಕನ್ನಡಿ
ಇಲ್ಲಿ ಊರಾಗಿರಬಾರ್ದು ನೀನು
ಇಂತಾಕೀ ಅಂದ್ರೆ
ಹಂಗೇ ಆಗ್ಲಿರಿ ಅಂದ್ಳು
ಆಕಿನ ಊರ ಹೊರಗೆ ಇಟ್ರು
ಬಲಿ ಒಡ್ಡಿದ್ರು ಅಗಸಿಗೆ
ಆಗ ಓಲಿಕಾ ನೋಡ್ದ

ಬಾಮ ಯಂಗಬರ್ಲಿ ಮೂರಗ್ಸಿತಟಾದು ಬಾಮ್ಮ
ನಿನ್ನ ಊರು ಒಳಗೆ ಲೋಕ ಬಿಡಿಸೀದರಲ್ಲಾ
ನಮ್ಮ ತಂದಿ ಹಿರಿ ಕಂಪ್ಲಿರಾಜ || ತಂದಾನ ||

ಊರು ಬಿಡಿಸಿ ಬಿಟ್ರು ನಿನ್ನ
ಅಂತ ಆಗ ಓಲಿಕ್ಯಾ
ಸಟ್ಟ ಸರ್ಹೋತ್ನ್ಯಾಗ ನಿದ್ದಿ ಮಾಡ್ಬೇಕಂದ್ರ ಬರುವಲ್ದು
ಓ ಇಂಥಾ ಬಲೆ ಒಡ್ಡ್ರೆ
ಆಗ ಇನ್ನವ್ರ ಮೂರಗ್ಸಿ ನನಗಿರ್ತವ ಅಂತ

ವಟ್ಟಿಗ್ಹುಟ್ಟಿದ ಓಲಿಕ್ಯಾ
ಹೊರಗಾಗಿ ಬಂದಾನಾ
ಮೂರು ಗೇಣು ಲಾಘ ಹೊಡ್ದ
ಮೂರಗ್ಸಿಕಡಿಗೆ ಪಾತರಗಿತ್ತಿ ಮಾಳಿಗಿ ಮ್ಯಾಲೆ
ಕುಪ್ಪಳಿಸಿ ಎರಗಿ ಬಿಟ್ಟಾನಾ || ತಂದಾನ ||

ಆಗ ಬಜಾರಕೂಟ
ಏಳೇಳು ಹದಿನಾಲ್ಕು ಗಜ ಲಾಗ ಹೊಡ್ದು
ಮೂರು ಅಗಸಿ ತಟಾದು
ಆಗ ಪಾತರಗಿತ್ತಿ ಮಾಳಿಗೆ ಮಾಲೆ ಎಗರಿಬಿಟ್ಟ
ಗವಾಕ್ಷಿಲಿಂದ ಮನ್ಯಾಕ ಬಂದ
ಅಬಾಬಾ ಈತ ಹ್ಯಾಂಗ ಬಂದ ಅಬಾ
ಮೂರಗಸಿ ಆಗ ಮೂರ ಅಗಸ್ಯಾಗ
ಮೂರು ಹಂದಿ ಬಲಿ
ಆಗ ಹ್ಯಾಂಗಬಂದ್ರಿ ಓಲಿಕರಾಮ
ಇಲ್ಲ ನಿನ್ನ ಮಾಳಾಗಿಮ್ಯಾಕ್ ಎಗರುಬಿಟ್ಟೆ
ಹಂಗೆ ಬಜಾರಕೂಟ
ಮೂರಗಸಿ ಮ್ಯಾಲಿದ್ದ
ಅಬಾಅಬಾ ದೊಡ್ಡೋರು ಬಿಡಪ್ಪಾ
ನನ್ನ ಮನಿ ಎಲ್ಲಿ ಬಿದ್ದು ಹೊತೈತೋ
ಏನಿಲ್ತಿ ನಿಮ್ಮಪ್ಪ ನಿಮ್ಮಮ್ಮ
ಬಾಯಾಹ ಹಲ್ಲಿಲ್ಲ
ಮುದ್ಯೋರು
ಬೆಳ್ಳು ಹೊರ್ಸುಗಳು ಯಾಕ್ರಿ ಅವ್ರಿಗೆ
ಈಗ ನಾವು ಹರೇದವ್ರು
ಕುಂತ್ಗಂಡ್ರೆ ನಿಂತ್ಕಂಡ್ರೆ
ಭೋ ಚಂದ ಹೊರ್ಸ
ಏನ್ರಿ ನಾಕ ಮೂಲಿಗಿ ಬ್ಯಾಕಾಳ ಕಟ್ಗಿ ಇಟ್ಟು
ಬೆಳ್ಳಿ ಹೊರ್ಸುಗಳು
ಆಗ ಸೇದ್ಹಗ್ಗ ಹಾಕಿ
ಬೆನ್ನಿಗ ಕಟ್ಟಿಗೊಂಡು ತಗಂಡು ಬಾ

ಇನ್ನ ಸಾಯೋತನಕ ನೋಡಿಲ್ಲಿ ನಿನ್ನ ನೈಯಾಪೈಸ ಕೇಳೋದಿಲ್ಲ || ತಂದಾನ ||

ಬಾಮ್ಮ ಯಜಮಾನ್ರು
ನನ್ನ ಹಡದೋರು
ಆಗ ಬೇಡ್ದೆ ಜೋಪಾನ ಮಾಡಿದವ್ರು ದೇವ್ರುತಲ್ಲಿ
ಅಂಥಾ ತಾಯಿತಂದಿದ್ದ ತರಬಾರ್ದು ಬಾಮ
ಇಲ್ರಿ ಅವ್ವೇ ತರಬೇಕು
ಬಾಮ ನಿಂದು ಒಂದೇ ಹಟ ಅಂತಾ

ಹಾಗಂದು ಓಲಿಕ್ಯಾ
ಮಾಳ್ಗಿಮ್ಯಾಕೇರ್ಯಾನ
ಮೂರಗಿಸಿ ಹೊರಗಣ್ಣೋ
ಒಳಗಾಗಿ ನೋಡಣ್ಣೋ
ಬಜಾರದೊಳಗ ನೋಡಣ್ಣ ತಾ ಕುಪ್ಪಳಿಸಿ ಹಾರ್ಯಾನ || ತಂದಾನ ||

ಹಾರಿದ ಮ್ಯಾಲೆ
ತಾಯಿತಂದಿ ಮನ್ಯಾಕ ಬಂದ
ನಾಕು ಮೂಲಿಗೆ
ರಾಗಳ ಕಟ್ಟಿಗಿ ಇಟ್ಟ
ಬೆಳ್ಳಿ ವರಸುಗಳನ್ನು ಬಿಚ್ಚಿಗ್ಯಂಡ
ಸೇದೋ ಹಗ್ಗ ಹಾಕಿ ಬೆನ್ನಿಗ ಕಟ್ಟಿಕೊಂಡ
ಸ್ವಾಮಿ ನನ್ನ ಕೊಟ್ಟಿದ ಶಿವ ಎಲ್ಲಿದ್ದಿಯಪ್ಪ
ಜಟಿಂಗೇಶ್ವರ
ಈಗ ನನ್ನ ಜೀವ ಕೊಟ್ಟಾವ್ನೊ
ಭೂಮಿ ಮ್ಯಾಲೆ ಹಿಡಿಯಾಕ ಕೈಲಾಗೋದಿಲ್ಲಲ್ಲ
ಜಟಿಂಗಸ್ವಾಮಿ ನೋಡ್ದ
ಅಬಾಬಾ
ದಿಷ್ಟ;ಫಲದಾಗ ನಾನು ಕೊಟ್ಟು ಬೆಳೆಸಿದವ್ನು
ನನ್ನ ಕೈಲಾಗದಿಲ್ಲಂತ ಹಿಡಿಯಾಕ

ಲೇs ಕಳ್ಳ ಸೂಳೆ ಮಗನೇಲಿ
ನಿನ್ನ ಹಿಡಿದು ಬಿಡುತ್ತೀನಿ
ನಾನ ದೇವ್ರು ಕೊಟ್ಟವ್ನು
ಆಗ ಗಗನಕ್ಹಾರಿದಾಗ
ಎರಡುಕಣ್ಣ ಮಬ್ಬಾಯ್ತೋ ಮೂರು ಅಗಸೀ ಒಳಗಣ್ಣಾ
ತಾ ಕುಪ್ಪಳಿಸಿ ಎಗರ್ಯಾನ || ತಂದಾನ ||

03_80_KMKM-KUH

ಕುಪ್ಪಳಿಸಿ ಹಾರಿಬಿಟ್ಟ

ಇದೇ ಪಾತರಗಿತ್ತಿ ಮನಿ ಅಂತ
ಹಂದಿ ಬಲ್ಯಾಗ ಬಿದ್ದು ಬಿಟ್ಟ
ಹಂದಿ ಬಲ್ಯಾಗ ಬೋರ್ಲು ಬಿದ್ದಾಗ

ಮಾರಿಕಚ್ಚು ಬಿದ್ದೈತೋ ಇನ್ನ ಓಲಿಕ್ಯಾಗ ನೋಡಣ್ಣ
ಓಲಿಕೆ ರಾಮನಿಗೆ || ತಂದಾನ ||

ಕಚ್ಚು ಬಿದ್ದ ಮ್ಯಾಲೆ
ಏs ಬಿತ್ತು ಬಿತ್ತು ಹಂದಿ ಬಲ್ಯಾಗ ಅಂತ
ಐದು ಮಂದಿ ತಳವಾರರು ಬಂದು ಹಿಡ್ಕಂಡ್ರು
ಹಿಂಡ್ಕಂಡು
ಆಗ ಕಂಪ್ಲಿರಾಜನ ಮನಿಗ ಕರ್ಕೊಂಡು ಬಂದ್ರು
ಸಟ್ಟು ಸರಿವ್ರ್ಯೆತ್ನಾಗ
ಏನ್ರಿ
ರಾಜತನ ನೀವೇ ಮಾಡ್ತಿರಿ
ಕಳ್ಳತನ ನೀವೇ ಮಾಡ್ತಿರಿ
ಸೂಳೆತನ ನೀವೇ ಮಾಡ್ರಿರಿ

ಎಲ್ಲ ನಿಂತಲೈತೋ ಆನೆಗೊಂದಿ ರಾಜದವನಯ್ಯ || ತಂದಾನ ||

ಏನ್ರಪ್ಪ ಹಾಂಗಂತಿರಿ
ನೋಡ್ರಿ ನಿಮ್ಮ ಚಿಕ್ಕ ಮಗ ಒಟ್ಟಿಗೆ ಹುಟ್ಟಿದವ್ನು
ಓಲಿಕರಾಮ ನೋಡು
ಈಗ ಬೇನ್ನಿಗ ಏನ ಕಟ್ಟಿಗ್ಯಂಡು ಹೋತಾನ
ಅಂದ್ರೆ ಏನಪ್ಪಾ ಮಗನೇ
ನೀವು ಒಂದೇ ಬಾಳೆಹಣ್ಣಾಗ
ಇಬ್ರು ಹುಟ್ಟೀರಪ್ಪ ಯಾತ್ರುವಪ್ಪ
ಯಪ್ಪಾ ನನ್ನ ಬಡಿಬ್ಯಾಡ
ನಿನ್ನ ಪಾದಾಗ್ನಿ ಅಂತ ಪಾದ ಮುಗದಾ
ಈಗ ನಿನ್ನ ಸೊಸಿಗೆಪ್ಪ
ಈಗ ಇನ್ನವ್ರ ಹುಣಸಿ ತಪ್ಲಿ ಸೀರಿ
ರಾಗಿ ತಪ್ಮ ಕುಬಸ
ಆಗ ಬೆಳ್ಳಿಕಡ್ಡಿಲಿದ್ದ ಕೂದ್ಲ ಆರ್ಸಾಕಿ

ಈಗ ತಗೊಂಡು ಬಾ ಅಂದ್ರೆ ನಾನು ಒಯ್ತಿದ್ದೆ ನೋಡಪ್ಪ || ತಂದಾನ ||

ಅಬ್ಬಾ ನನ್ನ ಸೊಸೆ ಅಂತೆ
ಹುಣಸೆ ತಪ್ಲ ಸೀರೆಯಂತೆ
ರಾಗಿ ತಪ್ಲ ಕುಬೂಸಂತೆ
ಬೆಳ್ಳಿ ಕಡ್ಡಿ ಕೂಟ ಕೂದಲ ಆರಿಸ್ಕೊಂಬಾಳಂತೆ
ನನ್ನ ಮನಿಗೆ ಬರುವಾಕೆಯಂತೆ ಸೊಸೆ

ಲೇs ಎಲ್ಲೈತೆ ಸೊಸೆಲೆ ನೀನು ಈಗ ಹೇಳಲೇ ನನಗಾಗಿ || ತಂದಾನ ||

ಏs ಏನೇನು ಒಯ್ದಿ ಹೇಳು
ಏನಿಲ್ಲ ಅಪ್ಪ
ಈಗ ಬ್ಯಾಂಕ್ಯಾಗ ಇರೋದು
ಮೂರು ಬೊಗಸಿ ರೊಕ್ಕ ಒಯ್ದಿನಿ
ಈಗ ಶ್ಯಾನುಭೋಗರ ಮನ್ಯಾಗಿರೋದು ಬೆಳ್ಳಿ ರೊಕ್ಕ
ಕೊಡ ರೊಕ್ಕದಾಗ ಅರ್ಧಕೊಡ
ನಾಯಕರ ತಿನ್ನಲಂತ ಉಗ್ದಿನಿ
ಅರ್ಧರೊಕ್ಕ ಪಾತರಗಿತ್ತಿಗಿ ಕೊಟ್ಟೀನಿ
ಕ್ವಾಮಟ್ರಕಿ ಇರಿಶೆಟ್ಟಿನ ಹೆಂಡ್ತಿ
ಈಗಿನ್ನವ್ರ ತಾವಾಗಿ ಮೂರು ತೋಲ ಬಂಗಾರ
ಆಗ ಆ ಸರ
ಇಕಿಗಿ ನನ್ನ ಹೆಂಡ್ತೀಗೆ ಕೊಟ್ಟೀನಿ
ಪಾತರಗಿತ್ತಿಗೆ
ಇನ್ನೇನು
ಇನ್ನೇನಿಲ್ಲಪ್ಪಾ ಈ ಬೆಳ್ಳಿ ಹೊರ್ಸುಗಳು
ಮುದೇರು ಹಾಕ್ಯಂಡ್ರೆ ಏನ್ ಚಂದ ಅಂತ
ಬಾಯಾಗ ಹಲ್ಲಿಲ್ಲ
ಆಗಿನ್ನವ್ರತ್ತ ಬಿಳೆಕೂದ್ರು
ನಾವು ಹರೆದವ್ರು ಹಾಕ್ಯಂಡು
ನಿಂತ್ಕೆಂಡ್ರೆ ಏನ್‌ಚಂದ
ಕುಂತಗಂಡ್ರೆ ಏನ್‌ಚಂದ
ತೊಗೊಣ ಬಾ ಅಂದ್ರೆ
ನಾನ ತಗಂಡ್ಹೋಗ್ತಿದ್ದೆ
ಓಹೋ ಸರಿಯಪ್ಪ
ಅದ್ರಾಗೇನಿಲ್ಲ
ಇನ್ನೇನನ್ನ
ಏನಿಲ್ಲಪ್ಪ ನಿನ್ನ ಪಾದಾಗ್ನಿ ಇಷ್ಟೇ
ಕಳತಾನ ಮಾಡಿಸಿ
ಲೇs ಈಗ ಐದುಮಂದಿ ತಳವಾರರು ಹೋಗಿ
ಪಾತರಗಿತ್ತಿ ಬಂದ್ರೆ ಬಂದಂಗ
ಮೂರು ಅಗಸ್ಯಾಗಲಿದ್ದ
ಬಜಾರಕೂಟ ಹಾಗ
ರಾಜಕಚೇರಿಗೆ ಎಳ್ಕೊಂಡ ಬರ್ರಿ ಸೆರಗ್ಹಿಡಿದು
ಸರಿ ಬಿಡು ಅಂತ

ಯಮ್ಮ ಐದು ಮಂದಿ ತಳವಾರ್ರು ಬರ್ತಾರಮ್ಮ
ಪಾತರಗಿತ್ತಿ ಮನಿಗೆ
ಯಮ್ಮ ಬಂತು ನಿನ್ನ ಪೂಜೆವಾಗುತೈತೋ
ನಿನ್ನ ಮದುವೆ ಆಗತೈತಿ ಅಮ್ಮಾ || ತಂದಾನ ||

ಏನ್ರಪ್ಪ ತಳವಾರ್ರೆ
ಏನಿಲ್ಲ ಕಂಪ್ಲಿರಾಜ
ಈಗ ಹಿರಿಕಂಪ್ಲಿ ರಾಜ
ರಾಜಕಚೇರಿಗೆ
ಆನೆ ಒಂಟೆ ಕಟ್ಟಿಹಾಕಿದ್ದತಲ್ಲಿಗೆ
ಪಂಚಾಯತಿ ಐತಂತೆ
ಬರಬೇಕಂತೆ
ಏನ್ರೀ ನಮ್ಗ ಗಂಡ್ರ ಇಲ್ದವ್ರದು
ಹೆಣ್ಮಕಳ್ದು ಏನು ಪಂಚಾಯತಿರೀ
ಹೆಣ್ಮಕಳು ಇದ್ದರೆ
ಹೆಣ್ಮಕ್ಳ ಪಂಚಾಯತ
ಗಣ್ಮಕಳು ಇದ್ದರೆ
ಗಣ್ಮಕ್ಳ ಪಂಚಾಯತ
ಗಣ್ಮಕ್ಳ ತಲ್ಲಿ
ನಾವ್ ಹೆಣ್ಮಕ್ಳು ಬರಬಾರ್ದುರೀ
ಓಯೋ ಬರಬಾರದೇನಮ್ಮ
ಬರಬಾರ್ದರಿ
ಮತ್ತ ಬರಲಾರದವ್ಳು

ಆಗ ಊರೆಲ್ಲ ನೀ ಬಾಡ್ಗಿ ಇದ್ದಿಯಮ್ಮ
ಗಣ್ಸರನ್ನೆಲ್ಲ ಕರಕೊಂಡು ನೀನು ಊರೆಲ್ಲ ಹಾಳ ಮಾಡವ್ಳೆ
ಕೇಡ್ಸಿ ಕುಂತಿದವಳಾದೆ ನೀ ಕೇಡ್ಸಾಕಿಯಾದೆ || ತಂದಾನ ||

ಪಾತರಗಿತ್ತಿ ಊರಾಗ ಕೆಳಕ್ಯಂಡು
ಇನ್ನವರತ್ತಾ ಕೆಡ್ದು ಬುದ್ದಿ
ಇನ್ನ ಮಿಂಡ್ರತನ ಮಾಡಾಕ
ಇನ್ನವರ ಎಲ್ಲಾರ ಕರಕಂಡು
ಗಣ್ಸರನೆಲ್ಲಾ ದೊಡ್ಡ ದೊಡ್ಡವರನೆಲ್ಲಾ
ಹಾಳ ಮಾಡಾಕ ನಿಂತಿಯಾ
ಈಗ ದೊಡ್ಡವ್ರು ಕರದ್ರ
ಬರಾಕ ಇನ್ನ ನಾಚಿಕೆ ಆಗತೈತ್ಯಾ
ಗಣ್ಸರು ಇದ್ದ ತಲ್ಲಿಗೆ
ಹೆಂಗ್ಸರು ಬರಾದಿಲ್ಲ
ಮತ್ತೆ ದೊಡ್ಡವ್ರನ್ಯಾಕ
ಕರಕೊಂಡೆ ನೀನು

ಹಂಗೆ ದೊಡ್ಡವುರನೆಲ್ಲ ತಂದಿ ಕರೀತಾನಲ್ಲೇ
ದೊಡ್ಡೊರ್ನೆಲ್ಲ ನೀನು ಕರಕಂಡಲ್ಲೇ
ಏಳ ಮಂದ್ಯಕ್ಯಾಕ ಬರಲಾರೆ || ತಂದಾನ ||

ಯಮ್ಮಾ ಹ್ಯಾಂಗ ಮಾಡಲಮ್ಮ
ಹತ್ತು ಮಂದಿ ಸಭಾ ಇರತೈತಿ
ನನ್ನ ಜೀವ ಹ್ಯಾಂಗೈತತೊ
ನೋಡಮ್ಮ ಆ ಕಾಲಕ
ಈಸ ದಿನ ತುಪ್ಪದಲ್ಲಿ
ಗೋಧಿ ರೊಟ್ಟಿ ತಿಂದಿದಿ

ಇವತ್ತು ನಿನ್ಗ ಇಳ್ದು ಹೋಗಬೇಕು
ಆಗ ತಿನ್ನಲಿಲ್ಲಾ ನೋಡಮ್ಮಾ || ತಂದಾನ ||

ಹರ್ಕ ಸೀರೆ ಉಟ್ಟಕಂಡ್ಳು
ಹರ್ದ ಕುಪ್ಪಸ ತೊಟ್ಟಕಂಡ್ಳು

ಆಗ ತುಂಬ ಸೇರ್ಗ ಹಾಕ್ಯಂಡಳಾಕಿ
ಹೊಸ ಮೊದಲಗಿತ್ತಿ ಬಂದ್ಹಂಗಾಗ್ಯಾಳ
ಹಣವಂತಳಲಮ್ಮೊ ಇನ್ನ ಸೆರಗ್ಹಾಸಿ ಬಿಟ್ಟಾಳೆ
ಸೀರೆ ಸೆರ್ಗು || ತಂದಾನ ||

ಬಜಾರ ಕೂಟ ಬಂದ್ರು ಬಂದೋಷ್ಟಿಗೆ
ಆಗ ಮಗ ಇದಾನಪ್ಪ
ನೋಡಿ ಬಿಟ್ಳು
ಈಗ ಏನಂತಾನ ಓಲಿಕ್ಯಾ

ಆತದ ನಿನ್ನ ಪೂಜಾ ಆತದಲೇ
ನನ್ನ ಮದುವಿ ಅಲ್ಲ ನಿನ್ನ ಮದುವಿಯಲೇ || ತಂದಾನ ||

ಆಗ ಕಣ್ಣು ತೋರಿಸೊ ಹೊತ್ತಿಗೆ
ಕಣ್ಣ ಬಡ್ದ ಹೊತ್ತಿಗೆ
ಈಕಿ ಏನಂತಾಳ
ಹೆಂಗ ಜೀವಕ್ಕ ಕಲ್ತವ್ನು
ತಂದಿ ಬಡ್ದರ ಇವ್ನು ಸುಮ್ನೆ ಇರ್ತಾನಾ

ಹ್ಯಾಂಗಾಕೆ ತನ್ನ ಹಿಡ್ಕಂತಾನ
ಬಡಬಡ ಬಡಬಡ ಪಾಂಟಿಗಿ ಏರ್ಯಾಳಮ್ಮ || ತಂದಾನ ||

ಹರಿ ಕಂಪ್ಲಿರಾಜಾ ಅಂದ

ಆಳ ಎತ್ತರ ಬಾರಕೋಲ ಹಿಡಿದಾರಮ್ಮ
ಕುದುರ್ಗಿ ಹೊಡ್ಯೋ ಬಾರಕೋಲ ಹಿಡದಾನ
ಏಡಗೈಲಿ ಆಕಿನ ಹಿಡಿದಾನಮ್ಮ
ಬಲಗೈಲಿ ನೋಡಮ್ಮ ಛಳ್ ಛಳ್ ಹೊಡಿತಾನ
ಇನ್ನ ತೈತ ತೈಯ್ಯಾ ದಿಗಿ ತೈಯ್ಯಾ ಕುಣಿತಾಳೆ
ಯಮ್ಮ ಸೀರ್ಯಾಗ ನೋಡಮ್ಮ ಉಚ್ಚಿ ಉಯ್ಯಕಂಡಾಳೆ || ತಂದಾನ ||

ಆಗ ನಂತಾನ ಏಲಿಕ್ಯಾ

ಬೀಳಲಿ ಬೀಳ್ಲಿ ಬೇಸೆ ಬೀಳ್ಲಲೇ
ಏಸ್ ಮಂದಿ ಕೊಂದು ಸುಖವಾ ಪಡಿಯಾಲೇ || ತಂದಾನ ||

ನಾನ ಕಳಕೊಂಡ ಕಲ್ತಿದ್ದಿಗೆ
ನೀನು ಹೇಳ್ದಂಗೆಲ್ಲ
ನಾನು ಹೋಗಿ
ಮನೆಗೊಳಾಗ ಕಳ್ತಾನ ಮಾಡ್ದೆ
ಈಗ ನನ್ನ ಕಲಿಲಾರದವಗಿದ್ದ
ಈಗ ಅವ್ನ ಜೀವ ಕೊಲ್ಲವ್ಳಲ್ಲಾ ನೀನು
ಎಸ್ ಮಂದಿ ಗಣಸುರ್ನ ಕೊಲ್ಲಬೇಕಂದಿದಿ ನೀ
ಬೀಳ್ಲಿ ಏಟ ಅಂತ
ಐದ ಏಟ ಬೀಳತಾನ್ಕ ಇದ್ದ
ಇದ ಏಟ ಬಿದ್ದ ಮ್ಯಾಲೆ
ಯಾವಾಗ ಸೀರ್ಯಾಗ ಉಚ್ಚೆ ಹೊಯ್ಯಂಕಡ್ಳೊ

ಆವಾಗ ತಂದಿ ಕೈ ಹಿಡಿದಾನಮ್ಮ
ಯಪ್ಪಾ ಹೇಣ್ಸುರ ನಾದ ಬಿಡಬಾಡದಪ್ಪ
ಅವ್ರು ಬುದ್ದಿ ಕಲ್ಲಪ್ಪ ಬಡೀ ಬಾರ್ದು ನೀನಾಪ್ಪಾ || ತಂದಾನ ||

ಹೆಣ್ಮಕ್ಳು ಹಿಂಗ ಮಾಡಬಾರದಂತ
ಅವ್ಳಿಗ ಬಿದ್ಧಿ ಇರಬೇಕು
ಈಗ ಇನ್ನ ಕಣ್ಣೆತ್ತಿ ನೋಡಬಾರದಂತ
ಜ್ಞಾನ ಇರಬೇಕ ಅವ್ರಿಗೆ
ಯಪ್ಪಾ ನಿನ್ಗ ಶರಣ ಮಾಡ್ತಿನಿ
ಹೆಣಮಕ್ಳಿಗಿ ಬಡಿಬಾರ್ದು
ಹೆಣಮಕ್ಳಿಗಿ ಬಡದ್ರೆ
ನಾವು ಮಕ್ಳಿಗಿ ಬಡದಂಗಪ್ಪಾ ಛೀ

ನನ್ನಗ್ಹೊಡಿಯೋ ಅವ್ಳಿಗ್ಹೊಡಿಬ್ಯಾಡ
ಬುದ್ದಿ ಕಮ್ಮಿಯೋ ಇನ್ನ ಒಯಪ್ಪಾ
ನಡೆಲೆ ಮನಿಗಲೆ ನೀನು ನಿಂದ್ರಬ್ಯಾಡ ಇಲ್ಲಲ್ಲೇ || ತಂದಾನ ||

ಅಂಬ ಹೊತ್ತಿಗೆ
ಆಕಿ ಹೋಗಿ ಬಿಟ್ಳಪ್ಪ
ಯಪ್ಪಾ ನನ್ನ ಬಡಿ
ಅವ್ಳಿಗಿ ಬಡಿಬ್ಯಾಡ
ಹಂಗಲ್ಲಾ
ಅವ್ಳಿಗಿ ಬಿಡಾದಿಲ್ಲ

ಅವ್ಳ ಜೀವಾನನೆ ತಗ್ಹ ಹೋತಿನಲೆ
ಅಂತವ್ಳಿದ್ರೆ ಊರೂ ನಾಶಾನಾ
ಗಣ್ಸರೆಲ್ಲ ನೋಡಲೆ ಉರ್ಹಾಳ ಮಾಡುತಾಳಲ್ಲೆ
ಈರಾಗ ಗಣ್ಸುರ ಕೆಟ್ಟು ಹೋತಾರ || ತಂದಾನ ||

ಇಂಥಾ ಇನ್ನ ಕೆಡಗು ಸೇರಿಕ್ಯಂಡು
ಹಿಂಥಾ ಸೂಳೇರು ಸೇರಿಕ್ಯಂಡು
ಗಣ್ಸರನೆಲ್ಲ ಹಾಳು ಮಾಡಿ ಬಿಡ್ತಾವ
ಜೀವಿತಾನೆ ಇರಬಾರ್ದು
ಇವಳ ತಲೆ ಕಡ್ದು
ಅಗಸಿಗ ಕಟ್ರಿ

ತಲೆ ಕಡ್ದು ಅಗಸ್ಗಿ ಕಟ್ಟುತ್ತೀರಿ
ಗಣ್ಸರ ಹೆಂಗ್ಸರ ಬುದ್ದಿ ಬರತೈತಿ || ತಂದಾನ ||

ಹೆಣ್ಸರ ಗಣ್ಸರ ಬುದ್ಧಿ ಬರ್ತದ
ಹ್ಯಾಂಗ ಬರ್ತದ್ರೀ
ಏಯಮ್ಮಾ
ನಾವು ಗಣ್ಯರ ಕೂಟ ನಗಬಾರ್ದಲೇ
ಈಗ ನಮ್ಮ ತಲೆ ಹಿಂಗೆ ಹೋತೈತೆನೊ
ಈಗ ಗಣ್ಸರಾದ್ರೆನಾ
ಏಯಪ್ಪಾ ಹೆಣ್ಸರ ಕೂಟ ಮಾತಾಡ್ಬಾರ್ದಲೇ
ನಮ್ಮ ತಲೆ ಆಗಸಿಗ ಹೋತೈತಲೆ ಅಂತ

ಹೆಣ್ಸರಿಗನ್ನ ಬುದ್ಧಿ ಬರ್ತೈತಿ
ಇದ್ದೋರಿಗಿನ್ನ ಗ್ಯಾನಾ ಬರ್ತೈತಿ
ಇವ್ರಿಗಿನ್ನ ಎಲ್ಲಿ ತಾನ ನೋಡಾಲೆ
ಈಗ ಇದ್ದಾವ್ರಿಗೆಲ್ಲ || ತಂದಾನ ||

ಈಗಲಿದ್ದ ಹುಟ್ಟಿದ ಹುಡುಗ್ರು ಎಲ್ಲ
ದೊಡ್ಡವ್ರಾದಂಗೆಲ್ಲ ಬುದ್ಧಿ ಬರ್ತೈತಿ
ಇವ್ರಂದ್ರ ಕೆಟ್ಹೋಗ್ಯಾರ ನಾಶಾನಾಗಿ

ಅವ್ರುನ್ನ ಬುದ್ಧಿವಂತರಾಗ್ತಾರ ಅಂದ್ರೆ
ಆಗ ಏನಂತಾನ ಮಗ
ಯಪ್ಪಾ

ಕಡ್ಡರ ನಮ್ಮನ್ನ ಇಬ್ಬರ ಕಡಿಯಪ್ಪೊ
ಯಾರ್ದು ತಲೀ ಅಗಸೀಗ ಕಟ್ಟಪ್ಪೊ
ಎಲ್ಲಾರು ನೋಡಾಲಿ
ಎಲ್ಲಾರು ನೋಡ್ತಾರೋ|| ತಂದಾನ ||

ಹೆಣ್ಸರ್ಗಿ ಗಣ್ಸರ್ಗಿ ಇಬ್ಬರಿಗ
ಬರ್ತೈತಿ ಬುದ್ಧಿ
ಇಬ್ಬರನ ಕಡ್ದು
ಎರ್ಡ ತಲೆ ಕಟ್ಟು
ಎರ್ಡ ತಲೆ ಕಟ್ರೆ
ಏಯಪ್ಪ ನೋಡಲೆ
ಎರ್ಡ ತಲ ಹೊದ್ವು ನೋಡು
ಏಯಮ್ಮ ನಿಂದು ಹೊತೈತಿ
ನಂದು ಹೊತೈತಿ
ಬ್ಯಾಡಪ್ಪೊ ಅಂತ
ಬುದ್ಧಿ ಬರ್ತೈತಪ್ಪಾ
ಛೀ ಛೀ ಛೀ ಮಗನಾ
ಹೊಟ್ಟ್ಯಾಗ್ಹುಟ್ಟಿದ ಮಗನ
ಹ್ಯಾಂಗ ಕಡಿಬೇಕಪ್ಪ
ಮತ್ತೆ ಆಕೀನ ಹ್ಯಾಂಗ ಕಡಿತಿಯಪ್ಪ
ಆಕೀ ಮಗಳ ರೀತಿಯಲಲ್ಲ
ನಾವಾಗಿ ಹೋಗಿದ್ರೆ
ಅವಳಾಗಿ ಕರಕಂಡಿರ್ತಾಳ
ನಾವಾಗಿ ಹೋಗದಿದ್ರೆ
ಅವಳ್ಯಾಕ ಕರಕಂಡಿರ್ತಾಳಪ್ಪ
ನಮ್ದೆ ಹೋಗೊರ್ದೆ ಬುದ್ಧಿ ಕಮ್ಮಿ
ಯಪ್ಪಾ
ಈಗ ಕಡ್ದರೆ ಇಬ್ರದ್ದೂ ಕಡಿ
ಹಾಂಗಲ್ಲ
ಇಬ್ರಿಗ ನಿಮ್ಗೆ ಬೇಡಿ ಹಾಕಿ ಬಿಡ್ತಿನಿ
ಉಕ್ಕಿನ ಬೇಡಿ ಹಾಕಿ

ಆಗ ತಂದಿ ಸುಮ್ಮನಾದನಮ್ಮಾ
ಇಬ್ರಿಗಿನ್ನ ಕೋಣ್ಯಾಗ ಬೇಡಿವಳ್ಗ ಹಾಕ್ಯಾನ || ತಂದಾನ ||

ಆಕಿನ ತಳವಾರು
ಮತ್ತೆ ಕರಿತಾರ
ಬಾರಮ್ಮ
ಇಲ್ಲಪ್ಪೊ ನಾವ ಬರಾದಿಲ್ಲ
ಬರಬೇಕಂತೆ
ಬರಲಿದ್ರೆ ಆಗ್ಯತು
ನಿನ್ನ ಬಡ್ಯಾದಿಲ್ಲ
ಒಂದೇಟು ಬಿದ್ರೆ
ನಾನಿದ್ದಿನಿ
ಅಂಬೊತ್ತಿಗೆ ಬಂದ್ಳು
ಕೈಗ ಬೇಡಿ ಹಾಕಿಬಿಟ್ರಪ್ಪ ಕಬ್ಬಿಣುವು
ಕೆಬ್ಬಿಣವು ಇನ್ನ ಕಾಲಿಗೆ ಕೈಗೆ ಬೇಡಿ ಹಾಕಿ
ರೂಮಿನಾಗ ಹಾಕಿ ಬೀಗ ಹಾಕಿ ಬಿಟ್ರು
ಕಟ್ಟಿ ಬಾಕ್ಲಿಗಿ
ಒಂದೊಂದು ಒಣಕಿ ದಪ್ಪ ಐತಾವ ಕಡ್ಡಿ
ಆಗ ರೂಮಿನಾಗ ಹಾಕಿದ್ರು
ಏ ಪಾತರಗಿತ್ತಿ ಮನ್ಯಾಗ
ಏನೆನೈತೊ ಟ್ರಂಕುಗಳೆಲ್ಲ ತಗೊಂಡು ಬರ್ರೀ
ರಾಜ ಕಛೇರಿಗೆ ಹೊತ್ಕಂಡು ಬಂದ್ರಪ್ಪ ತಳವಾರ್ರು
ಎರ್ಡ ಟ್ರಂಕಗಳ ತುಂಬ ಬರೇ ಸೀರೆಗಳು
ಹುಣಸೆ ತಪ್ಪಲವು ರಾಗಿ ತಪ್ಪಲವು
ಬೇನ್ ತಪ್ಪಲ ಸೀರೆಗಳು
ಬನ್ನಿ ತಪ್ಪಲ ಸೀರೆಗಳು
ಆಗ ಎಲ್ಲ ಸೀರೆಗಳು ನೋಡಿದ್ರು
ಈಗ ವಜ್ರಗಳು ಒಂದು ಪೆಟ್ಟಿಗಿ
ಬರೇ ಬೆಳ್ಳಿ ಬಂಗಾರದ್ವು
ರೂಪಾಯಿಗಳು ಬಂದ ಪಡಗ
ಆಗ ಎಲ್ಲ ಇನ್ನ ತಂದ್ರು
ನೋಡ್ರಪ್ಪ ಶಾನಭಾಗ್ರೆ
ಬರ್ರೀ ಅಂತ ಶಾನಭಾಗ್ರ
ರೊಕ್ಕ ಶಾನಭಾಗ್ರಿಗ ಕೊಟ್ಟ
ಶಾನಭಾಗ್ರ ವಜ್ರ ಶಾನಭಾಗ್ರಿಗ ಕೊಟ್ಟ
ಕ್ವಾಮುಟ್ರು ಇನ್ನ ಇರಿಶೆಟ್ಟಿದಿ ಐತಿ
ಮೂರು ತೊಲ ಬಂಗಾರ
ಆತಂದು ಆತಗ ಕೊಟ್ರು
ಇನ್ನ ಎಲ್ಲೆಲ್ಲಿಂದ ತಂದಾಳೊ
ಯಾರಿಗ ಗೊತ್ತು
ಅಲ್ಲಿ ಎಲ್ಲ ಮೂಲಿಗಿ ಹಾಕಿ ಬಿಟ್ಟ
ಆಗ ಕೇಳಪ್ಪ ರೂಮಿನಾಗ ಹಾಕಿವಿ
ಆಗ ರಾಮಯ್ಯ ನೋಡಿದ
ಈ ಊರಿನ ಎಲ್ಲಾ ನಾಯ್ಕರಿಗ ಬಿಟ್ಟು ಬಿಟ್ರು
ಬಿಡೊ ಹೊತ್ತಿಗೆ
ಆಗ ರಾಮ ನೋಡಿ ಏನಂತಾನ