ಇಪ್ಪತ್ತಳಿ ಅರವತ್ತೂರು ಆನೆಗುಂದಿ ಮ್ಯಾಕ
ಈಗ ಹೊಳೆದಂಡರ ಅಂಚಿಲಿ
ಈಗಿನವ್ರು ಓರುಗಲ್ಲು ಪಟ್ಣ
ಓರುಗಲ್ಲದಾಗ ಗಣಪತಿ
ಗಣಪತಿ ರಾಜನ ಮಗ ಗಣರಾಮ
ಆತ್ನ ಇಪ್ಪತ್ತಳ್ಳಿ ಅರವತ್ತೂರು ಇದ್ರೆ
ಆ ಊರೊಳಗೆ ಯಾರಿದ್ದಾರೆ ಅಂದ್ರೆ
ಅಂಬಿಗರು
ಮೀನು ಹಿಡಿಯವ್ರು
ತಂದಿ ಕುರುಡ್ಯವನು
ಆತನಿಗೆ ಏಳು ಮಂದಿ ಮಕ್ಳು
ಚಿಕ್ಕತಿರುಪತಿ ನಾಗತಿರುಪತಿ
ದೇವಿ ತಿರುಪತಿ ಮುನಿತಿರುಪತಿ
ಹಿರೆತಿರುಪರಿ ರುದ್ರತಿರುಪತಿ ಭದ್ರತಿರುಪತಿ
ಕುರುಡಿಗ ಭೋಯೋರು

ಆಗ ಭೋಯಿ ಯಂಕಣ್ಣ
ಆ ಏನ್ಮಾಡಿದ
ಯಪ್ಪಾ ಮಕ್ಳಾರ
ದೊಡ್ಡ ದೊಡ್ಡ ಮೀನು ತಂದಿಟ್ರೆ
ಹೇ ಏನ್ ಬೇಸೈತಲಾ
ಬರಿ ನಾಥೋಡಿತೈತೆ ಅಂತಾನ
ಮೀನು ತಿಂದ ಮ್ಯಾಲೆ
ಒಣಗಿದ ಕೊಬ್ರಿ ಕಡ್ದಂಗ್ ಕಡಿಬೇಕು
ಅದ್ರ ಎಲುಬೆಯಿನ್ನವ್ರ ಅಗಸಿ ತಯಾರು ಮಾಡ್ಬೇಕು
ಓರುಗಲ್ಲಾಗ
ಇಗೊ ಅದ್ರ ಕಣ್ಣಾಗ
ಎರ್ಡು ಬಂಡಿ ಹೋಗಬೇಕು
ಮೀನು ಕಣ್ಣಾಗ
ಆಗ ಮೀನು ಕನ್ನಡಿಲಿದ್ದ ಎಲುಬಿಲಿದ್ದ
ತಯಾರು ಮಾಡ್ಬೇಕು ಆ ಅಗ್ಸಿ ಅಂದ
ಅಬಾಬಾ
ಲೇ ಒಂದು ಕಣ್ಣಿಲ್ಲೋ ನಿನಗೆ
ಒಂದೇ ಕಣೈತೆ ನಿನ್ಗ
ಏನಪ್ಪಾ ಅಷ್ಟು ಮೀನು ಹಿಡಿತಿಯ
ಅಗಸಿ ತಯಾರು ಮಾಡ್ತಿಯಾ
ಮೀನಿಲಿದ್ದ ಎಲುಬುಲಿದ್ದ ಕನ್ನಡಿಲಿದ್ದ
ಲೇ ಸುಮ್ಗೆ ಮನ್ಯಾಗ ಕುಂತ್ಕೊಂಡು
ಮಾತಾಡ್ದ್ರೆ ಯಂಗಾತೈತಿ
ಈಗ ಮೀನ್ಹಿಡ್ದು ನಮಗೆ ಮಖ್ಲೇ ಅಂದ್ರೆ
ನಾವ ಅನಿಸಿಕೊಂತಿವಿ ಅಂದ್ರು
ಸರೆ ಅಪ್ಪಾ ಮಕ್ಳಾರಾ
ನಾನ್ ಮೀನ್ಹಿಡಿತೀನಿ
ನೀವ್ ನೋಡ್ತಿರ್ಯಾ
ಓ ನೋಡ್ತಿವಿ
ನಿನ್ನ ಹೊಟ್ಯಾಗ ಹುಟ್ಟಿದೋರ
ಓ ಸರಿಬಿಡೆಂತ
ಆಗ ಒಂದು ಖಂಡಗ
ಗೋಧಿ ಬೀಸಿ
ಗೋಧಿ ನೆನಿಟ್ಟು
ಓನಕಿಲ್ಲ ತೊಗೊಂಡು ಕುಟ್ಟಿ
ಕನಕ ಮಾಡ್ದರು
ಕನಕ ಮಾಡಿ ಖುಣಿ ಮಾಡ್ದುರು
ಆಗಿನ್ನವರ ಪಣ್ತಿ
ಇಗೊ ಐದು ಹಳೆ ಸೀರಿ
ಆಗ ಹಗ್ಗ ಹೆಣ್ದಂಗ ಹೆಣ್ದು
ಈಗಿನ್ನವರ ತಾವಾಗಿ
ಐದ ಡೆಬ್ಬಿ ಒಳ್ಳೆಣ್ಣಿ ಹಾಕಿ
ಆಗ ಪಣ್ತಿ ಹಚ್ದರು
ಪಣ್ತಿ ಹಚ್ಚಿ
ಜೀವಕ್ಕಾಗಿ
ಈಗಿನ್ನವ್ರತ ಕುಲಕ್ಕಾಗಿ
ಈಗಿನ್ನವ್ರತ ಬಂಡಿ ಕಟ್ಟಿದ್ರು ರಥ
ನೀರ ಮ್ಯಾಲೆ ಹೋಗೊದು
ರಥ ಕಟ್ಟಿ
ಯೊಳ ಮಂದಿ ಮಕ್ಳುನು ಕರ್ಕಂಡು
ಆಗ ಕುರಡಿ ನಾನೂರ ಭೋಯಿನ
ಕುರಡ್ಯೋಯ್ನು ಆಗ ಕುಂತಕ್ಕೊಂಡ
ಯಾರು
ಅಂಬಿಗರು
ಮೀನ್ಹಿಡಿಯವ್ರು
ಅಂಬಿಗರು ಕುಂದ್ರಿಸಿಕೊಂಡು ಮಕ್ಳನ್ನ

ಏಳು ಸಮುದ್ರ ಬರುತಾನ ಮಕ್ಳನ ಕರಕಂಡಾಣ್ಣ || ತಂದಾನ ||

ಏಳು ಸಮುದ್ರ ನೋಡ್ದ
ಯಪ್ಪಾ ಮಕ್ಕಳಾರೆ
ಏಳು ಮಂದಿ ಹುಟ್ಟಿದ್ರು ಕುರಡಿಯವ್ನಿಗೆ
ನೋಡ್ರಿ ಏಳ ಸಮುದ್ರ
ಹಾಲ ಸಮುದ್ರ
ನೀಲ ಸಮುದ್ರ
ತುಪ್ಪ ಸಮುದ್ರ
ಉಣ್ಣನೀರ ಸಮುದ್ರ
ಉಪ್ಪು ನೀರ ಸಮುದ್ರ
ಮಸುರ ಸಮುದ್ರ
ವಿಷ ಸಮುದ್ರ

s ಯೊಳ ಸಮುದ್ರದಾಗಮ್ಮ
ರಥ ಒಂದ ಬಂದೈತೋ|| ತಂದಾನ ||

ಜೋತಿ ಪಣತಿ ನೋಡು
ಧ್‌ಗ್ ಧ್‌ಗ್‌ ಉರಿತಿದ್ರೆ
ತಿಮತಿಮಂಗಲ ಮೀನು
ಗಂಡು ಹೆಣ್ಣು
ಆಗ ಗಂಡು ಮೀನು ನೋಡಿ
ಏನೋ ಕೆಂಪುಗ ಬರ್ತೈತಿ
ಬಾಯಾಗ ಇಟ್ಕಂಡು ಬರಾಣ ಅಂತ

ಆಹಾ ಮೀನಣ್ಣ
ಇನ್ನ ನೀರಾದಾಗಣ್ಣ
ತಾನು ಹೊಂಟು ಬರತೈತೊ
ಬರತಿದ್ರೆ ನೋಡಣ್ಣ
ಮೀನುವಾಗಿ ಇನ್ನಾಗಿ
ಆಗ ಇಪ್ಪತೆಕ್ರೆಯಣ್ಣೊ
ಜಿಗ್ಗಿ ನೀರು ಬಂದಾವಾ ಬಗ್ದಿಮ್ಯಾಕ ಬಂದಾವಾ
s ನೀರ್ಹಿಂದೆ ನೋಡಣ್ಣ ಮೀನುವಾಗಿ ಬರುತೈತೋ ಜೋತಿಗಾಗಿ ಇನ್ನಾಗಿ
s ನೀರು ಹಿಂದಕೆಳದಾವಾ ಸ್ರಗ್ಗನಂಗೆ ನೋಡಣ್ಣ || ತಂದಾನ ||

ಇಪ್ಪತ್ತೂಗಜ ಎದಿಗಿರುವುದು ಇನ್ನವ್ರ ಮೀನು
ಇನ್ನ ಅಡಿಯಲ್ಲಿ ಇನ್ನವ್ರತ್ತ ಎದೆ ಮುಳ್ಳೊಂಬುದು

ಆಗ ಹನ್ನೆರುಡು ಗಜ ಹೋಗೈತೋ ಭೂಮ್ಯಾಕ ನೋಡಣ್ಣೊ || ತಂದಾನ ||

ಭೂಮಿ ನಾಟ್ಕೊಂಡು ಬುಡ್ತು
ಭೂಮಿ ನಾಟ್ಕೊಂಡ ಮ್ಯಾಲೆ
ಗಡ್ದೇಮ್ಯಾಲೆ ಬುಗ್ದಿಮ್ಯಾಲೆ ಬಿದ್ದು ಬಿಡ್ತು ಮೀನು
ಆಗ ಅಪ್ಪಾ ಮಕ್ಳಾರ
ಏನ ತಂದೀ
ನೋಡಿದ್ರ್ಯಾ
ಎಷ್ಟು ದಪ್ಪ ಎಷ್ಟು ಉದ್ದ
ಎಷ್ಟು ಅಗಲೈತೋ ಮೀನು
ಅಪ್ಪಾ ನಾವು ಮನುಷ್ಯರನದಪ್ಪ
ಇಬ್ರು ಮನುಷ್ಯರ ದಪ್ಪಿಟ್ರೆ
ನೀನು ಒಪ್ತಿದ್ದಿಯಾ
ಅಬಾಬಾಬಾಬಾಬಾಬಾಬಾ
ಐದೇಕರೆ ಭೂಮಿ ಅಗಲಾಗೈತೆ
ಇದರಲ್ಲಿದ್ದ ಅಗಸಿ ಆಗಂಗಿಲ್ಲೇನು
ಬೇಖಾದಂಗಾತೈತಿ
ಗಣಪತ ರಾಜಗೆ ಪತ್ರ ಹಾಕಿ ಕರೆ ಖಳಿಸಿದ್ರು
ಈಗಿನ್ನವ್ರತ್ತ ತಾವು ಡಿಲ್ಲಿ ಪಟ್ನಕ್ಕ
ಇನ್ನೊಬ್ರು ಪತ್ರ ಹಾಕಿ ಕರೆ ಕಳ್ಸಿದ್ರು
ಡಿಲ್ಲಿ ಗೋಲ್ಕಂಡ ನವಾಬುದಾರ
ಆನೆಮ್ಯಾನೆ ಬಂದು ಬಿಟ್ಟ
ಇಪ್ಪತ್ತಳಿ ಅರವತ್ತೂರು ಮಂದಿ ಬಂದ್ರು
ಓಯೋ ಅಂಬಿಗರೋನೆ, ಮೀನ್ಹಿಡಿಯೋರೆ

ಎಂಥಾ ದಪ್ಪಾ ಮೀನು ನೀನು ಹಿಡಿದಿಯಪ್ಪಾ
ಭೂಮಿ ಹುಟ್ಟಿದ ಮುಂಚಕ ಮೀನಾ ಹುಟ್ಟೈತೋ || ತಂದಾನ ||

ಈ ದೇಶ ಹುಟ್ಟಿದ ಮುಂಚ್ಯಾಗ ಹುಟ್ಟೈತಿ ಈ ಮೀನು
ಈ ಸಮುದ್ರದಾಗ ಎಷ್ಟು ದಿನ ಆಗೈತೋ
ಇನ್ನವ್ರು ಕಾಲ ಕಳೆದಿದ್ದು
ಹನ್ನೆರಡು ಗನ ಇನ್ನವ್ರ ಹೊಟ್ಟೆ ಅಡಿಯಲ್ಲಿ
ಮುಳ್ಳು ಬಾಕು ಭಲ್ಲೆ ವಿದ್ದಾಂಗೈತಿ
ಆಹಾ ಇಂಥಾ ಮೀನು ಹಿಡ್ದೊನು
ನೀನೊಂದು ಸತ್ಯವಂಥ
ನೀನೊಂದು ಬಕ್ತಿವಂತಾ ಅಂತಾ
ಬಾರ್ಸ ತಗ್ಗೊಂಡು ಮ್ಯಾಗಳ ಹೊಟ್ಟಿ ಕೆತ್ತಿದ್ರೆ
ಒಂದೂಂದು ಬಂಡಿ ಚಕ್ರ ಅಗಲ ಕನ್ನಡಿ
ಕೈದಪ್ಪ ಕನ್ನಡಿ
ಹನ್ನೆರಡು ಕನ್ನಡಿಗಳೂ ಎಬ್ಬಿಸಿ ಬಿಟ್ರು
ಹೊಟ್ಟೆ ಕೊಯದರೆ ವಜ್ರ ಮಾಣಿಕ್ಯಾವ
ಇಪ್ಪತ್ತಾರು ದಡೇವ್ರು ಇನ್ನವ್ರತ್ತ
ಚಂದ್ರಾಯುಧ ಐತಿ
ಮೀನು ಹೊಟ್ಟ್ಯಾಗ
ಉಗ್ರ ನರಸಿಂಹ ನೀರು ಕುಡಿವಾಗ
ಗುಟುಕ್ ನುಂಗೈತೆ
ಆತೆಲ್ಲ ಕರಿಗೋಗ್ಯಾನ
ಆತನ ತಲಿಯೊಂದೈತಿ
ಮೂಗಿಲ್ಲ ಮೊಖಯಿಲ್ಲ
ಓಹೋ ಆಗಿನ್ನವ್ರು ಕುಲಕ್ಕಾಗಿ
ಈಗ ಅಡ್ಡೆಲುಬು
ಉದ್ದೆಲುಬು
ಆಗ ಕನ್ನಡಿ
ಆ ಬಾಯಿ ಎಲುಬು
ಮೀನು ಕಣ್ಣು
ಬಂಡಿಗೇರಿಸಿ ಬಿಟ್ರು
ನಾಕ ಬಂಡಿಗಿ
ನಾಕು ಬಂಡಿಗೆರ್ಸಿಕ್ಯಂಡು

ಆಗ ಅವ್ರು ತಂದಾರ ಓರಗಲ್ಲಿಗೆ ನೋಡಣ್ಣ
s ಓರುಗಲ್ಲಿಗ ನೋಡಣ್ಣ ತಾವಾಗಿ ತಂದಾರೆ || ತಂದಾನ ||

ಗಣಪತಿ
ಏನು ಮಾಡ್ದ
ಕನ್ನಡಿಮ್ಯಾಲೆ ಕನ್ನಡ ಇನ್ನ ಬಲಕಿಟ್ಟ
ಕನ್ನಡಿ ಮ್ಯಾನ ಕನ್ನಡಿ ಎಡಕಿಟ್ಟ
ಅಡ್ಡ ಎಲ್ಬು ಅಡ್ ಹಾಕ್ಯಂತ ಬಂದ
ಉದ್ದೆಲುಬು ಉದ್ಹಾಕಿದ
ಮೀನು ಕಣ್ಣಿಟ್ಟಿದ್ರೆ
ಮೀನು ಕಣ್ನಾಗ ಎರಡು ಬಂಡಿ ಹೋತಾವ ಜತೇಲಿ
ಆಹಾ ಜತೆಲೇನು ಹೋತಾವ
ಈ ಮೀನುಲಿಂದ ತಯಾರು ಮಾಡ್ದೇವಿ
ಅಗಸಿನ
ನಿಂತು ಕಂಡ್ರೆ ಮಕಾ ಕಾಣತೈತಿ
ಏನಪ್ಪಾ ಈ ಮೀನು ಹೊಟ್ಟ್ಯಾಗಿರೋದು
ವಜ್ರ ಮಾಣಿಕ್ಯವು
ಆಗಿನ್ನವ್ರು ಇಪ್ಪತ್ತಾರು ದಡೇವಿನ್ನವ್ರ ಚಂದ್ರಾಯಿದ್ದ
ಇದನ್ಯಾರು ಹಿಡಿಯೋದು
ಅಗಸಿಗ ಕಟ್ಟಬೇಕು ಮೀನ ಅಗಸ್ಯಾಗ
ಅಂದ್ರೆ ಸರಪಣಿ ಹಾಕಿ ಕಟ್ಟಬೇಕು
ಆಗ ಕಾಯಿ ಕರ್ಪೂರ ತಂದು
ಪೂಜಾ ಮಾಡಿ ಹಿಡಕಂಬಾಕ್ಹೋದ್ರೆ

ಆಗ ಇನ್ನೂ ಬೊಕ್ಕನೆ ರಕ್ತಾಣ್ಣ ತಿರುವಿಕೊಂಡೆ ಸಾಯ್ತಾರ || ತಂದಾನ ||

ಇಬ್ರೂ ಸತ್ತೋದ್ರು
ಯಪ್ಪಾ ನಮ್ಗ ಸಾಧ್ಯ ಆಗೋದಿಲ್ಲ
ಇದು ಏನು ಮಂತ್ರೋ
ಇದು ಏನಿಲ್ಲೋ
ಈ ಮೀನ್ಹೊಟ್ಟ್ಯಾಗಿರೋದು
ವಜ್ರ ಮಾಣಿಕ್ಯವು
ಆಗ ಎಲ್ಲಿದ್ದೋ
ಇದರ ಗರ್ಭದಾಗ ಬಿದೈತೊ
ಆಗ ಇಪ್ಪತ್ತಾರು ದಡೇವು ಚಂದ್ರಾಯುಧ
ಏಸ್ ಮಂದಿ ಆಹುತಿ ತಿಂಬತೈತೊ ಇದು
ನಮ್ಗ ಸಾಧ್ಯ ಆಗದಿಲ್ಲ
ಏನಪ್ಪಾ ನೀನೆ ಮೀನ ಹಿಡಿದೋನೆ
ಅಂಬಿಗರವ್ನೇ
ನೀನು ಮೂವತ್ತಾರು ಗಂಟೆ ಮೀನು ಕೊಯ್ಯೊವ್ನು
ಮೀನು ಹಿಡಿಯೋನು
ನೀನೇ ಇನ್ನ ಸರಪಣಿ ಹಾಕಿ
ಅಗ್ಸಿಗ ಕಟ್ಟಬೇಕು
ಅಂದ್ರೆ ಕುರುಡಿ ನಮ್ಮೂರವ್ನು
ಈಗ ಸ್ವಾನ ಮಾಡಿಕ್ಯಂಡು

ಕೆವ್ವು ಕ್ಯಾಕಿ ಹೊಡದಾನ
ಮೂರು ಸುತ್ತು ತಿರುಗ್ಯಾನ
ತಾವು ಬಂದ ನೋಡಣ್ಣೋs
ಕೈಮುಗಿದು ಬಿಟ್ಟಾನ ಎರಡು ಕೈಲೊಂದೆ ಹಿಡುದಾನ
ತೋs ಇನ್ನಲಿನ್ನೂ ಕ್ಯಾವಣ್ಣ ಕ್ಯಾಕಿ ಹೊಡಿತಾ ಬರ್ತಾನಾ || ತಂದಾನ ||

ಒಂದೊಂದು ಒನಿಕೆ ದಪ್ಪದವ್ನು
ಇನ್ನ ಗಡಾರ ಸರಪಣಿ ಹಾಕಿ

ಆಗ ಅರಸಿಗ್ಹಾಕಿ ಕಟ್ಟ್ಯಾನ ಮೀನ ಅಗ್ಸಿದಾಗಣ್ಣಾ || ತಂದಾನ ||

ಮೀನು ಅಗ್ಸಿದಾಗ ಕಟ್ಟಿದ
ಕಟ್ಟಿ ಆಗ ಏನು ಮಾಡಿ ಬಿಟ್ರು
ವಿಳಾಸ ಹಾಕಿಬಿಟ್ರು
ಏನಂತ ಹಾಕಿದ್ರು
ಆನೆಗೊಂದಿ ರಾಮಯ್ಯ ಬರಬೇಕು
ಓರಗಲ್ಲಿಗೆ
ಇದೋ ಈ ಮೀನು ಹೊಟ್ಟ್ಯಾಗಿರೋದು
ಆಗಿನ್ನವ್ರ ಏಳು ದಡ್ಯಾವಿನಲ್ಲ
ಇಪ್ಪತ್ತು ದಡ್ಯಾವ ಚಂದ್ರಾಯುಧ
ಆಗಿನ್ನವ್ರು ವಜ್ರ ಮಾಣಿಜ್ಯವು
ಸರಪಣಿ ಕಟ್ಟಿದ್ದು ಒದ್ದು ಕೈಲ್ಹಿಡ್ಕಬೇಕು
ಈ ಓರಗಲ್ಲು ಅವನಿಗೆ
ಅಂತ ವಿಳಾಸ ಹಾಕಿಬಿಟ್ರು
ವಿಳಾಸ ಹಾಕೋವತ್ತಿಗೆ
ಆಗಿನ್ನ ಏನು ಮಾಡಿಬಿಟ್ರು
ಅಲ್ಲಿ ಇನ್ನವ್ರು ತಾವಾಗಿ
ಮೂವರನ್ನು ಕಾಯಾಕಿಟ್ರು ಅಗ್ಸಿನ
ತಳವಾರ್ನ
ಕಾಯಕಿಟ್ಟು ಆಗ ಹೋಗಿ ಬಿಟ್ರು