ಓರಗಲ್ಲ ಪುಟ್ಟ ಗಣಪತರಾಜ
ಏನ್ಮಾಡ್ದ ಕೆರೆ ಊರ್ಮುಂದೆ
ಕೆರೆಯಾಗ ಕಡ್ಲಿ ಹಾಕಿದ್ದ
ಕಡ್ಲಿ ಹಾಕಿದ್ರೆ
ಆಗ ಇಬ್ರುನ್ನ ಕಾಯಕಿಟ್ಟ ಹೊಲನ
ಒಂದೊಂದು ಗಿಡಕ್ಕ
ಸೇರು ಅಚ್ಚೇರು ಆಗ್ತಾವ ಕಡ್ಲಿ
ಆಗ ಸಟ್ಟು ಸವ್ರತ್ನ್ಯಾಗ
ಮೂರೋ ಮೇಘದಾಗಿರವು
ಆಗ ಇನ್ನ ಎರಡು ಕುದುರಿ
ನಾಕು ಕಾಲು ಎರಡು ರೆಕ್ಕೆ
ದೇವತಾ ಕುದ್ರಿಗಳು
ಈ ಕಡ್ಲಿ ತಿಂಬಾಕ
ಸಟ್ಟ ಸರಿಹೊತ್ಸ್ಯಾಗ
ಪಟಪಟ ರೆಕ್ಕೆ ಬಡಿಯೋದು
ಕೆಳಗೆ ಹಾರೋದು
ಆಗ ರೆಕ್ಕೆಲಿಂದ ಹಾಂಗೆ ಬಳಕೊಂಬೋದು
ಆಗ ಗಿಡಗೋಳು ಬಾಯಾಗಿಟ್ಟುಕೊಂಬೋದು
ಒಂದೆಯೇಕ್ರಿ ಒಂದೊಂದು ತಿಂದ್ಹೋಗೊದು
ಗಣಪತರಾಜ ಮುಂಜಾಲಿ ಬಂದ
ಕುದ್ರಿಮ್ಯಾಲ ಕುತ್ಕಂಡು
ಏನಪ್ಪಾ ತಳವಾರ್ರೇ ನಿಮ್ಮನ್ನು ಕಾಯಾಕಿಟ್ಟಿವಿ
ಏನು ಇಷ್ಟು ಬಯಲಾಗೈತಿ
ಏನು ರಾತ್ರಿ ಏನೋ ಪಟಪಟಾಂತಾವ
ಹೊಂಯ್ ಅಂದುಬಿಡ್ತಿವಿ
ಅವು ಯತ್ತಾಗ ಹೊತಾವೋ ಯತ್ತಾಗ ಇಲ್ಲೋ
ಏಯ್ ಇಂಗಾದ್ರೆ ಬೇಸಲ್ಲ
ಏನ ಬರ್ತಾವೋ ಏನೊಲ್ಲೋ?
ನನ್ನ ಇನ್ನವ್ರುತಾ ಕಡ್ಲೆ
ನಾಶನಾಗಿ ಹೊತೈತೆ ಹೊಲ
ಆಗ ಏನು ಮಾಡ್ದ
ಮೊಣ್ಕಾಲಷ್ಟು ಕುಣಿ ತೋಡಿ
ಗುಂಡುಗಳು ಹಾಕಿದ ಕುಣ್ಯಾಗ ಭೂಮಿ ಒಳ್ಗೆ
ಅವು ಎರ್ಡು ಬಂದು ಕುಪ್ಪಳಿಸಿ ಎಗರಿದಾಗ
ಭೂಮಿ ಗಡಗಡಾ ಅಗುರಿ ಬಿಡ್ತೈತಿ
ಭೂಮ್ಯಾಗಿದ್ದ ಗುಂಡುಗಳು ಎದ್ದು ಬಿಡ್ತಾವ
ಆಗಿನ್ನವ್ರು ತಾವಾಗಿ ಸತ್ತೋತಾವ ಯಾವಾಗಿರ್ಲಿ
ಅಂತ ಗುಂಡುಗಳಿಟ್ಟಿದ್ರು
ಸಟ್ಟು ಸವ್ರತ್ಯ್ಯಾಗ
ಮೂರೋ ಮೇಘದಾಗ್ನಿದ್ದ
ಎರ್ಡ ರೆಕ್ಕೆ ನಾಕ ಪಾದ ಕುದುರಿಗಳು
ದೇವತೆ ಕುದುರಿಗಳು
ಅವು ಏನೂ ತಿಂಬಗಿಲ್ಲ
ಕಡ್ಲಿ ತಿಂಬವು ತೊಗರಿ ತಿಂಬವು
ಆಗ ಜನಲೋಕ ನೋಡವಲ್ಲ
ಅಂಥಾ ದೇವತೆ ಕುದಿರಿಗಳು

ಆಹಾ ನೋಡಣ್ಣ
ಮೂರು ಮೇಘಲಿದ್ದಣ್ಣೋ
ಪಟಪಟಾಲೆ ರೆಕ್ಕೆ ಬಡ್ದೋ
ಕುಪ್ಪಳಿಸಿ ಹಾರ್ಯಾವ ಭೂಮಿ ಮ್ಯಾಲೆ ನೋಡಣ್ಣ || ತಂದಾನ ||

ಭೂತಾಯಿ ಗಡಗಡಾಂತ ಅದುರಿ ಬಿಡ್ತಾಪ್ಪ ಭೂಮಿ
ಅದುರ್ಹೊತ್ತಿಗೆ ಭೂಮ್ಯಾಗಿದ್ದ ಗುಂಡುಗಳು

ಆಹಾ ನೋಡಣ್ಣ
ಟಪಾ ಟಪಾ ಟಪಾ ಅಂತಾ
ಮ್ಯಾಕೆ ಎಗುರುವಾಗಣ್ಣೊ
ಗಂಡು ಕುದುರಿ ನೋಡಣ್ಣೋ
ಪಟಪಟಾನೆ ರೆಕ್ಕೆ ಬಡ್ದೋ
ಗಗನಕ್ಕೆ ಹೋಗೈತೋ ಇನ್ನೂ ಮೂರು ಮೇಗದಾಗಣ್ಣೋ || ತಂದಾನ ||

ಗಂಡು ಕುದುರಿ ಪಟಪಟ ರೆಕ್ಕೆ ಬಡಿದು
ಮೂರು ಮೇಗ್ದಾಗ ಹೊಗಿಬಿಡ್ತು
ಹೆಣ್ನು ಕುದುರಿ ಆಗೋ ಈಗೋ ಈದಂಗೈತಿ
ದಿವ್ಯದಲ್ಲೆ ಇನ್ನ ರೆಕ್ಕೆ ಬಡ್ದು ಮಯಾಕ ಏರುವಾಗ
ಮೂರು ಮೇಘ ಹೋಗೊನೆಂದುವಾಗ

ಹೊಟ್ಟ್ಯಾಗಿರೋ ಪಿಂಡಾನ್ನ ಜಾರಿಕೊಂಡು ಬಿದ್ದೈತೋ || ತಂದಾನ ||

ಹೊಟ್ಟ್ಯಾನ ಪಿಂಡ ಜ್ಯಾರಿಕಂಡು ಬಿದ್ದಿದ್ದು
ರೆಕ್ಕೆ ಗೂಡ ಆರಲಿಲ್ಲ
ಆಗ ಮೂವರ್ನ ಕೊಲ್ಲುತೈತಿ ಅದು
ಅಲೇ ಎಷ್ಟು ಚೆಂದೈತಿ
ಎರಡು ರೆಕ್ಕೆ ಕುದುರಿ
ಇರಬೇಕು ನಮ ಲೋಕದಾಗಂತ
ಹಿಡಕಂಬಾಕ್ಹೋದ್ರು
ಹಂದಿಬಲೆ ಹಾಕಿ ಬಿಟ್ಟಾರ
ಈಗಿನ್ನವ್ರು ಹಿಡಕಂಬೋಕ್ಹೋದ್ರೆ

ಆಹಾ ಕುದುರೆಣ್ಣಾ
ಮುಂದೆ ಬಂದದವರನ್ನೋs
ಇನ್ನ ಕಡ್ಯಾಕ ಬರತೈತೋ
ಹಿಂದು ಬಂದದವರನ್ನ
ಕಾಲಿಲಾಗಿ ಒದಿತೈತೋ
ಬಲಗೈಲಿ ಬಂದವನ್ನ
ಬಲರೆಕ್ಕೇಲಿ ಹೊಡೊತೈತೋ
ಎರಕ್ಕಾಗಿ ಬಂದವನ್ನ
ಎಡ ರೆಕ್ಕೇಲಿ ಹೊಡಿತೈತೋ
ಕುದುರ್ಯಾಗಿ ಬರಗೊಡ್ಸದಿಲ್ಲೊ
ಒಬ್ಬ ಮಣುಷ್ಯಾನ್ನಾ || ತಂದಾನ ||

ಮೂವರು ಸತ್ತೋದ್ರು
ಏಯಮ್ಮ ಇನ್ನ ನಾವು ಸತ್ತೊತೀವಿ ಅಂತ

ಬಲೆ ವಗೆದು ಬಿಟ್ಟಾರಾ ಹಂದಿ ಬಲೆ ನೋಡಣ್ಣ || ತಂದಾನ ||

ಹಂದಿ ಬಲೆ ಒಗ್ದ ಹೊತ್ತಿಗೆ
ಹಂದಿ ಬಲ್ಯಾಗ ಬಿದ್ದು ಬಿಡ್ತು
ಎರ್ಡ ರೆಕ್ಕೆ ಬಡಕಂಬಾಕಿಲ್ದಂಗಾತು
ಆಗಿನವ್ರು ಆದಮ್ಯಾಲೆ
ಆಗ ಏನ್ ಮಾಡಿಬಿಟ್ರು
ಈಗ ಕುದ್ರಿಯನ್ಹಿಡಕೊಂಡ್ರು
ಹಿಡ್ಕೊಂಡು ಬಂದ್ರು
ಈ ಕುದ್ರಿಮ್ಯಾಲ ಯಾವನು ಕುಂದ್ರವ್ನು ಇದಾನ
ಯಾವನು ಸವಾರಿ ತೆಗೆಯವ್ನು ಇದಾನ
ಈ ಲೋಕದಾಗ ಯಾರೂ ಇಲ್ಲ
ಈ ಓರೆಗೆಲ್ಲಾಗ
ಏನಿಲ್ಲ ಈ ಕುದುರಿ ಕಟ್ಟಾಕಬೇಕಂತ
ಎರಡು ಸರಪಣಿ ಹಾಕಿ
ಆಗ ಕೆಬ್ಬಿಣ ಕಂಬಕ್ಕೆ
ರೂಮ್ನಾಗ ಕಟ್ಟಿ ಹಾಕಿದ್ರು
ಡಿಲ್ಲಿ ಪಟ್ನಕ್ಕೆ ಪತ್ರ ಬರ್ದು ಖಳಿಸಿಬಿಟ್ರು
ಡಿಲ್ಲಿಯವಯನು ಆನೆಮ್ಯಾಲೆ ಬಂದ
ಆಗ ಏನಂದಾ ಆಹಾಹಾ
ಎರಡು ಇನ್ನ ಮೇನ್ ಮಾಡಿಟ್ಟ್ಯಪ್ಪ ಓರಗಲ್ಲಾಗ
ಆಗಿನ್ನ ಏನ್ಮಾಡಿದ
ಈಗ ಜೀವಕ್ಕಾಗಿ
ಈ ಕುದುರಿ ಕಟ್ಟ್ಹಾಕಿರಿ
ಈಗ ಆನೆಗೊಂದಿ ರಾಮಯ್ಯ ಬರಬೇಕು
ಈಗ ಏಳು ದಡೆವು ಚಂದ್ರಾಯುಧ
ಮೀನ ಅಗ್ಸಿನ ಕಟ್ಟಿದ್ದು
ವಜ್ರಮಾಣಿಕ್ಯವು
ಎಡಗಾಲಿಲಿ ಒದ್ದು ಬಲಗೈಲ್ಹಿಡಿಬೇಕು
ಇದೋ ಈ ಕುದುರಿ ಗೆದ್ರೆ
ಈ ಓರಗಲ್ಲ ಅವಂದೆ ಅಂತಾ

ಪತ್ರಾಗೆ ಬರೆದಾರ ಇಲಾಸೆವಾಕ್ಕಾರ || ತಂದಾನ ||

ಸುತ್ತ ನಾಕ ಹಳ್ಳಿ ಪತ್ರ ಖಳಿಸಿದ್ರು
ಆಗ ನೂರು ಮಂದಿನ ಕಾಯಾಕಿಟ್ರು
ಇಟ್ಟಿದ್ದ ಮ್ಯಾಲೆ
ಕುದರಿಗೆ ಏನಿಡ್ತಾರೆ ಅಂದ್ರೆ
ಆಗ ಕೇಜಿ ಕೊಬ್ಬರಿ ಬಟ್ಲ ಇಡೋದು
ಆಗ ಮೈತೊಳೆಯೋದು ನೀರು ಕುಡಿಸೋದು

ಆನೆಗೊಂದು ಪಟ್ನಾಕೆ ಪತ್ರವೊಂದು ಬಂದೈತೋ || ತಂದಾನ ||

ಆ ರಾಮನಿಗ ಪತ್ರ ಬಂತು
ಪರಮಾತ್ಮ
ಆ ರಾಮ ಪಟ ಪಟ ಪಟ ಪತ್ರ ಓದಿಕ್ಯಂಡ
ನನಗ ಯಾರಿದ್ದಾರೆ
ಕರಕಂಡ್ಹೋಗಾಕ

ನನಗ ಒಬ್ಬರಿಲ್ಲಾಮ್ಮ ಬಲವಂತ ಕೈಯಿದವನಮ್ಮ || ತಂದಾನ ||

ಅಂತ ತಂದಿ ಕೈಗ ಪತ್ರ ಕೊಟ್ಟು
ತಂದಿ ಇನ್ನ ಓದಿಕ್ಯಂಡ ಪೆಟ್ಟಿಗ್ಯಾಗಿಟ್ಟ