ಭಾಳ ಹುಷಾರಂತ ರಾಮನಿಗೆ ಹೇಳಿ
ಹೆಡೇತ್ತಿ ಶರಣ ಮಾಡಿ ಹೋಗ್ತಿದ್ರೆ
ರಾಮ ದಿಗ್ಗನೆದ್ದು
ಆಗ ಶರಣು ಮಾಡ್ದ ನಾಗೇಂದ್ರನಿಗೆ
ಬುಸ್ ಅಂತ ಹಾವು ಹುತ್ತಿನ್ಯಾಗ ತೋರಿಕ್ಯಂಡು ಬಿಡ್ತು
ರಾಮಾ ಅರ್ಧ ನಿದ್ದೆ ಹೋಗೆತಿ ಅರ್ಧ ನಿದ್ದಿಲ್ಲ
ಜ್ಯೋತಿ ಇದ್ದಂಗ ಕೆಂಪಗೈದಾವು
ಕಣ್ಣು ಒಂದೊಂದು ಚಾರಗಲಾಗ
ರಾಮ ಅರ್ಧ ನಿದ್ದಿದಾಗ ಎದ್ದು ಕುಂತಗಂಡಾನ
ಏಯ್ ಗೂಡ ಸಾಬ್ ಮದರ್ ಸಾಬ್
ಪಟೇಲ್ ಸಾಬ್ ಫಕೀರ ಸಾಬ್ ಅಮೀರ ಸಾಬ್ ಹುಸೇನ ಸಾಬ್
ಏನ್ರಲೆ
ಇದ್ರಾಗ ಹುಲಿ ಬಂದೈತೋ
ಇಲ್ಲಾ ಕರಡಿ ಬಂದೈತೋ
ಈಗ ನಡ್ರೆಲೆ ನೀರು ಕುಡ್ದು ಬರಾನ ಅಂತ
ಆಗ ಬಾಯಾಕ ಬಂದ್ರು
ದಿಗದಿಗದಿಗ ಪಟೇಲ್ ಸಾಬ್ ಇಳಿದು ಬಿಟ್ಟ
ಐದು ರೂಪಾಯಿ ಪಾವಟಿಗೆ ಮ್ಯಾಲೆ
ಅಯ್ಯೊಯ್ಯಾಪ್ಪ ನನ್ನದು
ಆಗ ನಿನ್ನೆ ಆಗಿನ್ನವ್ರುತ್ತ ಕೊಟ್ಟಿದ್ದ
ಯಾರು
ಆಗ ಗಣಪತ ರಾಜ
ಯಪ್ಪಾ ಬಡವ ಮಕ್ಕಳೈದಾರ
ಅಂತ ನನಗೆ ಕೊಟ್ಟಿದ್ದ ಏಯ್ ಇನ್ನ ಎಂಟು ದಿವ್ಸೈತಿ
ಸಂಬ: ಕೊಡೋದು
ನಮ್ಮನ್ನ ಬಿಟ್ಟು ನಿನಗ ಕೊಟ್ನ
ಯಾರೋ ಕಳ್ಳತಾನ ಮಾಡೋರು ಬಂದಾರ
ಇಲ್ಲಿ ನೀರು ಕುಡ್ದಾರ
ಪಾಂಟಿಗೆ ಮ್ಯಾಲೆ ಇಟ್ಟು ಹೋಗ್ಯಾರ
ಐದು ಮಂದಿ ಬಂದಿವಿ
ಐದು ರೂಪಾಯಿ ಸಿಕ್ಕ್ಯಾವ
ತಲಿಗೊಂದು ರೂಪಾಯಿ
ತೊಕೊಂಬಾಣ ಬೆಳ್ಳಿ ರೊಕ್ಕ
ಏಯ್ ನನ್ನವು ರೊಕ್ಕ
ಸರೆ ನಿಂತೆಂತ ತಿಳಿ
ನೀನ ಮುಂದೆ ನಡಿ
ನಾವ್ಹಿಂದೇ ಬರ್ತಿವಿ
ನಿನ್ಗ ಅನ್ಯಾಯದಲ್ಲಿ
ಈ ರೊಕ್ಕ ಸಿಕ್ಕಿದ್ರೆ
ಹುಲಿ ಬರ್ಲಿ ಕರಡಿ ಬರ್ಲಿ
ನಿನ್ನ ತಿಂದು ಹೋಗ್ತೈತಿ
ಈಗ ನಿನ್ನ ರೊಕ್ಕಾದ್ರೆ
ನೀನು ಕರಡಿ ಹುಲಿ ಬಾಯಾಗ ಬಿಳೋದಿಲ್ಲ
ಏಯ್ ನಾನು ಮುಂದೆ ಹೋಗ್ಬೇಕಾ?
ಎಲ್ಲಾರು ಕೈಕೈಕೈ ಹಿಡಿಕ್ಯಂಬಾನ
ಒಬ್ರೂ ಕೈ ಬಿಡಬಾರ್ದು
ಹುಲಿಬರ್ಲಿ ಕರಡಿ ಬರ್ಲಿ
ಎಲ್ಲಾರ್ನ ತಿಂದು ಹೋತೈತಿ
ಇದ್ರೆ ಎಲ್ಲಾರು ಉಳಿಕಂಬಾನ
ಇವು ನನ್ನವುಪ್ಪಾ
ಗಂಗೇ ಆಜ್ಞ್ ನನ್ನವು ರೊಕ್
ನಿನ್ನೆ ಲುಂಗ್ಯಾಗ ಗಂಟು ಹಕ್ಕಂಡಿದ್ದೆ
ಹಂಗೇ ಬಿಚ್ಚಿ ಸ್ನಾನ ಮಾಡ್ಕೊಂಡಿನಿ
ಹಂಗೆ ಬಿಟ್ಟು ಹೋಗೆನಿ
ನಾನು ಒಬ್ರೂದು ಪಾಪ ಪಾಡಿಲ್ಲ
ಒಬ್ರೂದು ಕರ್ಮ ಮಾಡಿಲ್ಲ
ನನ್ನ ರೊಕ್ಕ ನನಗೇ ಸಿಕ್ಕೈತಿ
ಸರಿಬಿಡಪ್ಪಾ ಅಂತ
ಕೈಕೈ ಹಿಡಕಂಡು ಗಿಡಗಿಡ ನೋಡಾವ
ಯಾವ ಗಿಡಾಡೆಲ್ಲಿ ಮಕ್ಕಂಡೈತೋ
ದ್ರಾಕ್ಷಿ ಗಿಡಗಳು ಬಾಳೆ ಗಿಡಗಳು
ಅಡ್ಕಿ ಗಿಡಗಳು ತೆಂಗಿನ
ಗಿಡಗಳೊಳಗೆ ಏನ್ನನ್ನ ಐತೆಂತ

ಯಮ್ಮಾ ಗಿಡಗಿಡ ನೋಡಿಕ್ಕಂತ ಬರುತಾರಮ್ಮ
ಏಯ್ ಆಗ ಹತ್ತು ಎಕ್ತೆ ಅಮ್ಮಾ ಟ್ವಾಟದಾಗ
ಹತ್ತು ಎಕ್ರೆ ತೋಟ
ರಾಮ ಗಿಡ ಅಡೇಲಿ ಮಗ ಕುಂತಾನಮ್ಮ
ಮಲ್ಲಿಗಿ ಹೂ ಗಿಡ ಅಡೇಲಿ || ತಂದಾನ ||

ಗಿಡ ನೆಳ್ಳಾಗ ಕುಂತೋನು
ಥಳಕ್ ಅಂತ ಇನ್ನವ್ರ ಕನ್ನಡಿ ಕಂಡಂಗ ಕಟ್ಟಿದ
ಅಬ್ಬಾ
ಏನಲೇ ಅಂತ ಗಿಡಗಳ ಅಡೇಲಿ ತೂರಿಕ್ಕಂಡ್ರು
ದ್ರಾಕ್ಷಿ ಗಿಡ್ದ ಬಳ್ಳಿ ಅಡೇಲಿ
ಬಕ್ಕ ಬಾರ್ಲಿ ಬಿದ್ದು ನೋಡಿದ್ರು
ಏಯ್ ನಮ್ಮಂಗ ಕೈ ಕಾಲು ಕಿವಿ ಕಣ್ಣು ಮೂಗು
ಎಲ್ಲಾ ಐದಾವಲೆ
ಏಯ್ ಹುಲಿಯಲ್ಲ ಕರಡಿಯ ನೋಡ್ರಲೇ ಬೇಸು
ಏಯ್ ಹುಲಿಯಲ್ಲ ಕರಡಿ ಅಲ್ಲ ಮನುಷ್ಯನಲೇ
ನಮಗೆ ಆ ಬಿಸಿಲಿಗೆ ಥಳಕ್ಕಂತ ಕನ್ನಡಿ ಕಂಡಾಂಗ ಕಂಡಿದ
ಸೂರಿ ಛೂರಿ ಬೆಳ್ದಂಗ ಬೆಳ್ದಾನ ಮಗ
ಅಂತ ಏಯ್ ಹೊರ್ಸ ಹೋಗಾನ ನಡ್ರಲೆ
ಗಿಡದಾಗ್ಲಿದ್ದ ಇನ್ನವ್ರ ಬಳ್ಳಿ ಎತ್ತಿಕೊಂಡು ಮ್ಯಾಕ
ಬಂದುಬಿಟ್ರು ದ್ರಾಕ್ಷಿ ಬಳ್ಳಿ
ಆಗ ಮ್ಯಾಕ ಬಂದು
ಕೈ ಕೈ ಹಿಡಿಕಂಡ್ರು
ಏಯ್ ಒಬ್ರೂ ಬಿಟ್ಟು ಹೋಗಬಾರ್ದು
ಆಗ ಎಲ್ಲರನ್ನ ನೋಡಿ ಹೆದರಿಕಂತ್ಯಾನ
ಎಲ್ಲಾರೂ ಕೈ ಮುಗ್ಯಾನ
ಒಂದೊಂದು ಕೈ ಒಬ್ಬೊಬ್ಬನಿಗೆ
ಮತ್ತೆ ಕೈ ಕೈ ಹಿಡಕಂಬಾನ
ಐದು ಮಂದಿ ಬಲಗೈ ಹಿಡ್ಕೊಂಡು ಏನಂತಾರ
ಶರಣ್ರೀ
ನೀನು ದೇವರಾ ಪರಮಾತ್ಮ
ಯಾರ್ರೀ ನೀವು
ಲೇ ನೀವ್ಯಾರು
ಏ ಹ್ಯಾಂಗ ಮಾತಾಡ್ತಾನ ನೋಡ್ರಲೆ
ನೀವ್ಯಾರಂತಾನ
ಏನ್ರಿ ನಮ್ಮದು ಇನ್ನವ್ರ ಓರುಗಲ್ಲು
ಓರುಗಲ್ಲಾಗ
ಗಣಪತಿ ರಾಜನ ಕೈಯಾಗಿರೋರು
ಈ ತ್ವಾಟ ಕಾಯೋರು
ಗೂಡ್‌ಸ?ಬ್ ಮದರ್ ಸಾಬ್ ಪಟೇಲ್ ಸಾಬ್
ಫಕೀರ ಸಾಬ್
ಅಮೀರ್ ಸಾಬ್ ಹುಸೇನ ಸಾಬ್ ಆತನ ಕೈಯಾಗಿರೋರಾ
ತ್ವಾಟ ಕಾಯೋರಾ
ನಂದು ಹೊಳೆದಂಡಿ ಬಗ್ಲಾಗ
ಆಗ ಕಂಪ್ಲಿ ಪಟ್ಣ
ಕಂಪ್ಲಿ ಪಟ್ಣದಾಗ
ಕಂಪ್ಲಿ ರಾಜನ ಮಗ
ಆನೆಗೊಂದಿ ಪಟ್ಣ
ರಾಮಯ್ಯ ನಾನು
ಏಯ್ ಆನೆಗೊಂದಿ ರಾಮಯ್ಯ ಬರಬೇಕು
ಓರಗಲ್ಲು ನಾಶನವಾಗಬೇಕಂತಿದ್ರು
ಬಂದ ಬಿಟ್ನಲೇ ರಾಮ
ಇನ್ನೊಬ್ಬ ಪೀರ ಸಾಬ್ ಏನಂತಾನ
ಲೇs ಹಿಂಗೇನು
ಆನೆಗೊಂದಿ ರಾಮಯ್ಯ ಬರೋದು
ಆನೆ ಒಂಟೆ ಕಟೆಗ್ಯಂಡು
ಈಗ ಏಳು ಸಾವಿರ ಮಂದಿನ ಕರ್ಕಂಡು
ಡೊಳ್ಳು ಹೊರ್ಯೋರ್ನು ಮ್ಯಾಳ ಉದೋರ್ನು
ತುಫಾಕು, ಬಂದೂರು, ಬಲ್ಲೇವು ತಗಂಡು

ಓರಗಲ್ಲು ಬಾಯಿಗೆ ಬಂದು ಯುದ್ದವೆ ಮಾಡುವನು || ತಂದಾನ ||

ಏs ಇವರು ಆನೆಗೊಂದ್ಯಾಗ
ರೂಪ ನೋಡಲಾರ್ದ
ಇವ್ನು ದನ ಕಳಕಂಡಾನೋ
ಆಕಳ ಕಂಳಕಂಡಾನೊ
ರೂಪ ನೋಡಲಾರ್ದ
ಅಡ್ಡ ರಾಮಯ್ಯ ಅಂತ ಇಟ್ಟಾರ
ರಾಮ ಇದ್ದಂಗೈದಾನ ನೋಡೋ ಅದಕ್ಕೆ

ರಾಮ ಅಂತ ಇಟ್ಟಾರ ಇಂವ ದನ ಕಾಯೋ ರಾಮಯ್ಯ|| ತಂದಾನ ||

ಇನ್ನೊಬ್ಬ ಫಕೀರ ಸಾಬ್ ಏನಂತಾನ
ಏs ಪಟೇಲ ಸಾಬ್
ನಿನ್ನ ಪುಟ್ಯಾಲ ಕಡ್ದಂಗ ಕಡೀತಾನ
ಈಗ ದನ ಕಾಯೋನಾಗಲಿ
ಸುಮ್ನೀರು ನೀನು
ನಾವು ಮಾತಾಡ್ತಿವಿ
ಏs ಏನ ಮಾತಾಡ್ತಿರಲೆ
ಏನ್ರಿ ರಾಮಯ್ಯ
ನೀನು ಯದಕ್ಕಾಗಿ ಬಂದಿದಿ
ಅಮದ್ರೆ
ನೋಡಪ್ಪ ನಾನು ಆನೆಗುಂದ್ಯಾಗ
ಈಗ ಇನ್ನವ್ರ ದನಕಾಯೋ ರಾಮಯ್ಯ
ಲೇs ನಿಮ್ಮಮ್ಮ ರಸನ್ಹಾಡ
ಆಗ್ಲೇ ಕೇಳಿ ಬಿಟ್ಟಾನಲೆ
ಏs ಕೇಳಿದ್ರೇನಾಯ್ತಲೆ ನಮ್ಗೇನು ಭಯ
ನಾನು ದನ ಕಾಯೋ ರಾಮಯ್ಯ
ನಮ್ಮ ದನಕಳ್ದು ಹೋಗ್ಯಾವ
ಈ ತ್ವಾಟದಾಗ ಇದಾವ ಏನಂತ ಎಗರಿಬಿಟ್ಟೆ
ತ್ವಾಟ ಎಲ್ಲ ನೋಡ್ದೆ
ಇಲ್ಲ ನೀರು ಕುಡ್ದು ಕುಂತಗಂಡೆ
ನೀವ್ ಬಂದ್ರಿ
ಇಷ್ಟು ದೂರ ಬಂದಿನಿ
ಓರ್‌ಗಲ್ಲು ಇನ್ನವ್ರು ತಾವಾಗಿ ದೇವಿ ಐದಾಳ
ಓರ್‌ಬಾಯಿದಾಗ ಭೋ ಚಂದೈತಂತೆ ಓರೆಗಲ್ಲಾಗ
ಇದೋ

ನಾನು ಓರಗಲ್ಲಗೆ ಹೋತೀನಿ
ನಾನು ನೋಡಲಿಕ್ಕೆ ನೋಡ ಅಪ್ಪಾ || ತಂದಾನ ||

ಏನ ನೋಡಾಕ ಹೋಯ್ತೀರಿ
ಇಲ್ಲಾ ಮೀನು ಹೊಟ್ಟ್ಯಾಗಿರೋದು
ಆಗ ಇಪ್ಪತ್ತು ದಡೇವು ಚಂದ್ರಾಯುದ್ಧ
ಇಗೋ ವಜ್ರ ಮಾಣಿಕ್ಯ
ಸರಪಣ ಹಾಕಿ
ಮೀನ ಅಗಸ್ಯಾಗ ಕಟ್ಟ್ಯಾರಂತೆ
ಎರ್ಡು ರೆಕ್ಕಿ ನಕ ಪಾದ
ಆಗ ಕುದುರಿ ಐತಂತೆ
ಆ ಕುದುರಿ ಗೆದ್ದಕಂಡು
ಆಗ ಚಂದ್ರಾಯ್ಧ ಹಿಡಕಂಡು
ಬರಾಕ ಹೋತಾನಂತೆ
ಓಹೋ ಲೇs

ಆಯ್ತಲೆ ಪುಜಾಲೆ ನಮ್ಮ ಊರು ಹಾಳಾಗಿ ಹೋತೈತೋ || ತಂದಾನ ||

ಏಯ್ ಇವ್ನು ಏನ ಕೈಲಾತೈತಿ
ಇವ್ನು ಕೈಲಾತೈತಾ ಓರುಗಲ್ಲು ಗೆಲ್ಯಾಕ
ಕೈಲಾಗಲ್ಲ
ಲೇs ನೀನು ಪರಾಕ್ಷದವ್ನಾದರೆ
ಕೇಳಪ್ಪ ರಾಮಯ್ಯ ಅಲ್ಲ
ನೀನು ಆವಾಗ ಹ್ಯಾಂಗ ಎಗರಿದ್ಹೋ
ಈವಾಗ ಆಕಡಿಗೆ ಎಗರಬೇಕಂದ
ನೀವ್ ಬೇಷ್‌ ನಿಂತ್ಕೋಬೇಕ ನೋಡಂದ
ಏಯ್ ಬಿಗಿದಲ್ಲಿ ಬೇಲಿ ಬಗಲಾಗ ನಿಂದ್ರತಿವಿ
ನೀನು ಮ್ಯಾಕ ಎಗರಿದಾಗ
ಹಂಗೆ ಬೇಲ್ಯಾಗ ಹೊಕ್ಕಂತಿವಿ
ನೀನು ಬೇಲಿ ಮ್ಯಾಲೆ ಯಗರ್‌ಇಯಾ
ಯಗರಂಗಿಲ್ಲ
ನಮ್ಮ ಜೀವ ಉಳಕಂತ್ತೈತಿ ಅಂದ
ಸರಿಬಿಡು ಅಂತ
ಬೇಲಿ ಬಗಲಾಗ ನಿಂತಕಂಡ್ರು

ಆಹಾ ರಾಮಯ್ಯ
ಮುದಕ ಏಳಗೇಣಾದ
ಇನ್ನ ಬಂದ ನೋಡಣ್ಣೋs
ಕುಪ್ಪಳ್ಳಿ ಯಗರ್ಯಾನ
ಏಳೇಳಗಜಣ್ಣ
ಆಕಡಿಗೆ ಎಗರ್ಯಾನ ರಾಮಯ್ಯ ನೋಡಣ್ಣ || ತಂದಾನ ||

ಭಲೇs ರಾಮ ಯಗರಿದಾಗಣ್ಣಾ
ಪೀರು ಸಾಬು ಗೂಡುಸಾಬ್
ಬೇಲಿ ಅಡಿಯಲ್ಲಿ ತೂರ್ಯಾರ
s ಬಸ್ ಬಸ್ ರಾಮಯ್ಯ
ಅಲ್ಲಾ ಅಲ್ಲಾ ರಾಮಯ್ಯ
ಸಲಾಂ ಸಲಾಂ ರಾಮಯ್ಯ
ಕೈ ಮುಗಿತಿವಿ ರಾಮಯ್ಯ
ಆಗ ಬೇಲಿ ಆಡೇಲಿ ಅವರು ಒದ್ದಾಡ್ತಾರಣ್ಣಾ || ತಂದಾನ ||

ಏಯ್ ಗ್ವಾಡ್ಯಾಗಿನ್ನ ಮನುಷ್ಯರ
ಮೂವರ ಎತ್ತರ ಮ್ಯಾಕ್ಹೋದ
ಯಗರಿಬಿಟ್ಟಲೇ
ಇನ್ನ ನಮ್ಮ ಊರ ಮ್ಯಾಳ್ಗಿಮ್ಯಾಲ ಯಗರಿಬಿಡ್ತಾನ
ನಮ್ಮನ್ನೆಲ್ಲ ಕುತ್ಗಿ ಕೊಯ್ತಾನ
ಏಯ್ ಅವ್ನು ದನಗಳು ಹೊಲ್ದಾಗ ಬಿದ್ದಗ
ಹೊಲ ಕಾಯೋರು ಬಡಿತಾರಂತ
ಎಗರಿ ಎಗರಿ ಎಗರಿ ಅಭ್ಯಾಸ ಆಡಿಕ್ಯಂಡನ
ಲೇs ನೀನ ಯಗರಲೇ
ನಾವು ಸುಮ್ನ್ಯಾಕ ಯಗರಾನ
ದನಗಳು ಬಿದ್ರೆ ಅವ್ರು ಒದ್ದು ಬಿಡ್ತಾರಂತ
ಲಟಕ್ನೆ ಯಗರಿಬಿಡ್ತಾನ
ಹಂಗ ಕಲ್ತು ಬಿಟ್ಟಾನ ರಾಮಯ್ಯ
ರಾಮಯ್ಯ ನಿಮ್ಮ ಆನೆಗುಂದಿಗೆ ಬರ್ತಿವಿ
ಆನೆಗುಂದಿ ರಾಮಯ್ಯ
ನೀನು ಎಲ್ಲಿಗೆ ಬರ್ತೀಯಪ್ಪ
ನಿಮ್ಮ ಓರಗಲ್ಲಿಗೆ ಬರ್ತೇನಿ
ಅಯ್ಯೋ ರಾಮ ಓರಗಲ್ಲಿಗೆ ಬರಬೇಡ
ಈವಾಗ ನಮ್ಗ ಸಂಬ್ಳಾ ಕೊಡಬೇಕು
ಗಣಪತಿ ರಾಜ
ಒಂದು ಹದಿನೈದ ದಿನ
ಸಂಬ್ಳ ಕೊಡೋದು
ಆಗ ಮುನ್ನೂರು ಮುನ್ನೂರು ಕೊಡ್ಬೇಕು
ನಮ್ಮ ಸಂಬ್ಳ ಹಾಳು ಮಾಡ್ಬೇಡ
ಲೇs ನೀವು ತ್ವಾಟ ನೋಡಿ ಬಾ ಅಂದ್ರ
ಹತ್ತು ಯಕ್ರಿ ತ್ವಾಟಕ್ಕ ಹೋಗ ಅಂದ್ರೆ
ಆನೆಗೊಂದಿಗೆ ಹೋಗಿ ರಾಮನ್ನ ಕರ್ಕಂಡು ಬಂದ್ರ್ಯಾ
ಓರಗಲ್ಲನ್ನ ನಾಶನ ಮಾಡಾಕಂತಾನ
ಈಗ ನಾವು ಹೋದ ಗಂಟೆ ಹೊತ್ತಿಗೆ ಬಾ
ಈಗ ನಾವು ಹ್ಯಾಂಗ ಹೋದ್ರೆ
ಹಾಂಗ ಹಳ್ಳಗ್ನ ದಾರಿ ನೋಡಿಕ್ಯಂಡು ಬಾ
ಸರಿಬಿಡಪ್ಪಾ ಹಂಗಾಗ್ಲಿ
ಪಾಪ ಬಡತನ ಬಾಯಾಗ ಮಣ್ಣು ಹಾಕಬಾರ್ದು
ನಡ್ರಿ ಅಂದ
ಲೇ ನಾವು ಇದೇ ದಾರಿ ಹಿಡ್ಕಂಡು ಹೋದ್ರೆ
ನಮ್ಮ ಹಿಂದೇನೇ ಬರ್ತಾನ
ಆ ರಾಮಯ್ಯ
ಆಗ ಗುಡ್ಡದಾರಿ ಹಿಡ್ಕಂಡು ಹೋಗಾನ
ಗುಡ್ಡದಾರಿ ಹಿಡ್ಕಂಡು
ಗುಂಡುಗಳಾಗ ಬಿದ್ದು
ಗಿಡಗಳಾಗ ಬಿದ್ದು
ಇನ್ನವ್ರ ಓರಗಲ್ಲಿಗೆ ಬರಾನ ಅಂತ

ಆಗ ಇನ್ನ ನೋಡ ಯಣ್ಣಾ
ಗುಡ್ಡದಾರಿ ಹಿಡ್ದುಬಿಟ್ಟಾರ ಅವ್ರು
ರಾಮನೇ ನೋಡ್ದ ರಾಮಯ್ಯ ರಾಮಯ್ಯ || ತಂದಾನ ||

ಇಗೋ ರಾಮ ನಿಂತು ನೋಡ್ತಾನ
ಅವ್ರು ಹ್ಯಾಂಗ್ಯಾಂಗ ಹೋತಾರೋ
ದಾರಿ ನೋಡ್ತಾನ
ಮತ್ತೆ ಅವರು ಗುಡ್ಡ ತಿರುವಿ ಹಾಕ್ಕಂಡು
ಕೊಲ್ಲುಗಳಾಗ ಬಿಡುಗಳಾಗ ಬಂದು
ಆಗ ಇನ್ನ ಓರಗಲ್ಲಿನ ದಾರಿಗೆ ಬಂದ್ರು
ಏ ಗಡ್ಡದವ್ರೆ
ಈ ದಾರಿ ಹಿಡ್ಕಂಡು
ಹೋಗೋದು ಬಿಟ್ಟು
ಆಗ ಗುಡ್ಡದಾರಿ ತೋರಿಸ್ತೀರ್ಯಾ ನನಗೆ

ಏಯ್ ನಿಮ್ಮನ್ನ ಗುಡ್ಡದಾಗ ಕಡಿತೇನಾ
ನಿಮ್ಮ ಮುಂದೆ ಕಡೆದು ಹಾಕ್ಯೇನ || ತಂದಾನ ||

ಗುಡ್ಡದಾಗಿದ್ದ ಕರಡಿಗೆ
ನಿಮ್ಮ ಕಡ್ದು ಕರಡಿಗೆ
ನಿಮ್ಮನ್ನ ಕಡ್ದು ಹಾಕ್ತಿನಿ
ತಿನ್ಲಿ ಪಾಪ ಗುಡ್ಡದಾಗಿರೋವು
ಅಂತಾ ರಾಮಯ್ಯ

ಯಮ್ಮ ದಾರಿ ಹಿಡಿದು ರಾಮ ಬರುತಾನಮ್ಮ
ತೋತಡಿ ರಾಮ ಇನ್ನ ದೇವರು ಬಂದಂಗ ಬರುತಾನಮ್ಮ
ದೇವರು ಬಂದಂಗ ಬರುತಾನ ರಾಮ || ತಂದಾನ ||

ದೇವರು ಬಂದಂಗ ಬಂದ ಓರುಗಲ್ಲಿಗೆ ಬಂದು
ಆಗ ಏನ್ಮಾಡದ
ಅಗಸಿ ಮುಂದೆ
ಈಗ ಅಲ್ಲಿ ಅವರೇ ಇದಾರಪ್ಪ
ಯಾರು
ಪೀರ್‌ಸಾಬ್ ಗೂಡುಸಾಬ್
ಇವ್ರು ಬಂದೋರು
ಏಯ್ ಈಗ ತಳವಾರ್ ಕಾಯ್ವೋರೆ

ಬಂದಾರೆ ರಾಮಯ್ಯ ನಮ್ಮ ಪೂಜಾ ಆತೈತಿ ನೋಡಲೇ || ತಂದಾನ ||