ಯಾರು ಬರ್ತಾರಲೆ
ಏ ರಾಮ ಬರ್ತಾನಲೆ ಇವಾಗ
ಅಂತ ನಿಂತಕಂಡ್ರು
ರಾಮಬಂದ
ಈಗ ಇವ್ರು ನೋಡಿದ್ರು
ಏಯ್ ತಮ್ಮಾ ನಿಂದು ಯಾವೂರಪ್ಪ
ಏಯ್ ಹುಡಗ್ಯರ್ಯಾ
ಆಗ ನಿಂದ್ಯಾವೂರ
ಭಾಳ ಚೆಲುವಿ ಐದಿ
ನನ್ನ ಊರು ಕೇಳತ್ರ್ಯಾ ನೀವು
ಇಗೋ ಆನೆಗೊಂದಿ ನಂದು ಪಟ್ಣ
ನಮ್ಮ ತಂದಿ ಕಂಪ್ಲಿರಾಜ
ನಮ್ಮ ತಾಯಿ ಹಿರಿಯಾಳದೇವಿ
ಈಗ ಮಗ ರಾಮಯ್ಯ ನಾನು
ಓಹೋ ಮತ್ತ ಯದಕ್ಕಾಗಿ ಬಂದಿ ಓರಗಲ್ಲಿಗೆ
ಏನಿಲ್ಲಪ್ಪಾ
ಅಗಸಿ ನೋಡ್ಬೇಕಂತ ಬಂದಿನಿ
ಈಗ ಕುದುರಿ ಊರಾಗ ಐತಂತೆ
ಎರ್ಡು ರೆಕ್ಕೆ ನಾಕ ಪಾದ ಕುದುರಿ ಐತಂತೆ
ಆಗ ಕುದುರಿ ನೋಡಾಕ ಹೋತಿನಿ
ಈಗ ನನ್ನಂತವ್ನ ಕೈಯಾಗಿರೋದು
ಮೀನು ಹೊಟ್ಟ್ಯಾಗಿರೋದು
ಏಳು ಖಂಡ ಚಂದ್ರಾಯುಧ
ಆಗನವ್ರುತಾ ಕುಲಕ್ಕಾಗಿ
ಈಗ ವಜ್ರಮಾಣಿಕ್ಯವು
ಸರಪಳಿ ಹಾಕಿ ಮೀನು ಅಗಸ್ಯಾಗ ಕಟ್ಟರಿ
ಅದು ಬಿಚ್ಚಿ ಕೆಳಗಿಕ್ರಿ ನಾನು ಹೋತೀನಿ
ಅಂದ್ರೆ ಏನಂತಾನ
ಲೇ ಯಾವ್ನು ಕೈಲಾಗೋದಿಲ್ಲ ಬಿಚ್ಚಾಕ
ಏನ್ರಿ ನಿಮ್ಮ ಕೈಲಾಗದಿಲ್ರಿ
ಒಳ್ಳೆ ಒಳ್ಳೊವ್ರ ಬಮದ್ರೆ
ಬಗ್ಗಿ ಹೋಗ್ತಾರ್ರಿ ಅಗಸ್ಯಾಗ
ನೀವು ಬಗ್ಗಿ ಹೋಗ್ರಿ ಅಗಸ್ಯಾಗ
ಛೀ ನನ್ನಂಥವ್ನು ನಾನು ತಲಿ ಬಗಿಸೋದಿಲ್ಲ
ಮತ್ತ ಹ್ಯಾಂಗ ಮಾಡ್ಬೇಕು ರಾಮಯ್ಯ
ಏನಿಲ್ಲ ನೀವು ಬಿಚ್ತೀರಾ ಬಿಚ್ಚಿ ಬಗ್ಲಾಗ ಇಟ್ಕೋರಿ
ಇಲ್ಲದ್ರ ನನಗ ಅಪ್ಪಣಿ ಕೊಡ್ರಿ
ಎಡಗಾಲಲ್ಲಿ ಒದ್ದು
ಬಲಗೈಲಿ ಹಿಡಕಂತಿನಿ
ಹೇ ಇವ್ನು ಏನು ಹಿಡಿತಾನ ಬಿಡಲೆ
ಆನೆಗುಂದಿ ರಾಮ ಬರಬೇಕು
ಆನೆ ‌ಮ್ಯಾಲೆ ಬರ್ಬೇಕಾತ
ಒಂಟಿ ಮ್ಯಾಲೆ ಬರ್ಬೇಕು
ಯುದ್ಧ ಮಾಡ್ಕಂತ
ಏಳು ಸಾವಿರ ಮಂದಿ ಕರ್ಕಂಡು ಬರ್ಬೇಕು
ಓರುಗಲ್ಲು ನಾಶನಾಗಬೇಕು
ಇವ್ನು ಏನು ದನ ಕಾಯೋ ರಾಮಯ್ಯ
ಅಂದ್ರೆ ಲೇ ಸುಮ್ನಿರಲೇ ಬಿಚ್ಚತಾನೇನ
ಏs ಇವ್ನೇನು ಬಿಚ್ತಾನ
ಏನಪ್ಪಾ ರಾಮಯ್ಯ
ನಿನ್ನ ಕೈಲಾದ್ರೆ ಬಿಚ್ಚು ಅಂದ
ಖರೆವಾ
ಹೂಂ
ಅಷ್ಟೇ ಆಗಲ್ರಿ
ಅಂದ್ರೇ ಆ ರಾಮಯ್ಯಗ ಬಿಚ್ಚ್ಯಂತ
ಆರ್ಡರ್ ಕೊಟ್ಟಮ್ಯಾಲೆ
ಎಷ್ಟು ಚಲುವಿ ಬಿಚ್ತಾನಪ್ಪ ಆ ರಾಮಯ್ಯ

ಆಹಾ ರಾಮಯ್ಯ
ಎಷ್ಟು ಚೆಲುವಿ ರಾಮಯ್ಯೋ
ಕ್ಯಾವ್ ಕ್ಯಾಕಿ ಹೊಡದಾನ
ಈಶ್ವರ ಎಲೈದಿ
ನನ ಜೀವ ಬಾರಪ್ಪ
ದೇವ್ರು ಬಂದ ಬಂದಾನ
ಜಲಮದಾಗ ನೋಡಣ್ಣೋ
ಯಾವ ಲೋಕದಾಗಣ್ಣೋ
ಜಾಡ್ಸಿ ಎಡಗಾಲಲ್ಲಿ ಒದ್ದಾನ ಬಲಗೈಲಿ ಇನ್ನ ಹಿಡಿದಾನ ಮಗ
ಏಯ್ ಕುಪ್ಪಳ್ಸಿ ಹಾರ್ಯಾನ ಅಗಸಿ ಹೊರಗ ರಾಮಯ್ಯ || ತಂದಾನ ||

ರಾಮ ನೋಡಿದ್ರೆ
ಎಡಗಾಲಲ್ಲಿ ಒದ್ದ
ಸರಪಣಿಗಳು ಹರ್ದವು
ಬಲಗೈಲಿ ಹಿಡ್ಕಂಡು
ಇನ್ನವ್ರು ಕುಪ್ಪಳ್ಸಿ ಹಾರಿದ
ಇವ್ರು ನೋಡಿದ್ರು
ಪೀರಸಾಬ್, ಗೂಡಸಾಬ್
ಐದು ಮಂದಿ ತಳವಾರರು
ಏಯ್ ನೋಡಾಕ ತಟ್ಕ ಇದ್ದಾನ ರಾಮಯ್ಯ
ಆದ್ರ ಇವ್ನು ಎಷ್ಟು ಪರಾಕ್ರ ಇರಬಹುದ್ಲೇ
ಗುಡಿಮಿ ಕಾಯಿ ಇದ್ದಂಗ
ಮೂರು ಗೇಣು ಇದಾನ ರಾಮಯ್ಯ
ಈಗ ಈ ರಾಮಯ್ಯ ಎಗರಿ
ಇನ್ನ ಬಿಚಗಂಡು ಹೋತಾನ

ಲೇs ಹಾಕ್ರಲೇ ರಾಮನ್ನ
ಕಡೀರಲೆ ರಾಮನ್ನ
ಬರ್ರೆಲೇ ನನ್ನ ಮಕ್ಳs
ನಿಮ್ಮನ್ಹಾಗ ಬಿಡೊದಿಲ್ಲ
ಅಗಸಿಯಾಗ ಇರಿಯವ್ರು
ಒಂಭತು ಕೊಟಾನ ರಾಕ್ಲಸಿಲಿಂದವೈದಾವ || ತಂದಾನ ||

ಯಮ್ಮಾ ಗಾಳಿ ಮಾರೆಮ್ಮಾ
ಆನೆಗುಂದಿ ಮಾರೆಮ್ಮ
ಆದಿಶಕ್ತಿ
ಬರ್ರೆಮ್ಮ ತಾಯೋರೆ
ಊರು ಕಾಯೋ ಸುಂಕ್ಲಮ್ಮ
ಹೆಣ್ಣು ದೇವತೆಗಳು ಬಾಯಿ ತೆರ್ಕಂಡು ಬಂದ್ರು
ಯಪ್ಪಾ ನಮ್ಗೆ ಬ್ಯಾಟೆ ಕಡದಿಲ್ಲ
ನಮ್ಗ ಕ್ವಾಣ ಕಡಿದಿಲ್ಲ

ಇವರ್ನೇ ಕಡಿಯಪ್ಪ ನಾವು ತಿಂದು ಬಿಡ್ತಿವಿ ನೋಡಪ್ಪ
s ಒಂದು ಸರ್ತಿ ಕಡ್ದಾನೆ ಆಗ ಎಂಟು ತಲೆಯಣ್ಣಾ ಇನ್ನ ಸಾಪಾಗಿ ಬಿಳ್ತಾವ
s ಮೂರು ಸರ್ತಿಗಲ್ಲಣ್ಣ ನೂರು ಮಂದಿ ಸತ್ತಾರ || ತಂದಾನ ||

s ಓರಗಲ್ದಾಗಪ್ಪ
ಕಡಿಕ್ಯೆಂತ ಬಡಿಕ್ಯಂತ
ಇನ್ನ ಬಾರದಿದ್ದರೆ
ಯಾರು ಕಣ್ಣಿಲ್ಲಿ ನೋಡಿದ್ರು || ತಂದಾನ ||

ಆಗ ಕಡಿಕ್ಯಂತ ಕಡಿಕ್ಯಂತ ಬರ್ತಿದ್ರೆ
ಯಾರ ನೋಡಿದ್ರು
ಗಣಪತಿ ರಾಜನ ಮಗ
ಗಣರಾಮ ನೋಡ್ದ
ಯಪ್ಪಾ ಗಣಪತಿ
ಏನೋ ಮಗನೆ
ಯಪ್ಪಾ ಮಾಳ್ಗಿ ಏರಿ ನೋಡ್ದರೆ
ಏನೋ ಗಲಾಟೆ ಅಗತೈತಂತ ಬರ್ತಾನಪ್ಪ ಯಾವನೊ
ಊರಾಗೆಲ್ಲ ನಾಶನ ಮಾಡ್ಕ್ಯಂತ ಬರ್ತಾನ
ಏs ಮಗ ಇದಿಯಲ್ಲಪ್ಪಾ
ಹೋಗೋನ ಅಂತ

ತಂದಿ ಮಗ ಬರುತಾರ
ಯುದ್ಧಕ್ಕೆ ನೋಡಣ್ಣ
ಆನೆ ಮ್ಯಾಲೆ ಕುಂತಾನ
ಬಾರಲೆ ಗಣರಾಮ
ಗಣ ಗಣ ಅಂತಾಲೇ ನಿನ್ನ ಬೆನ್ನಕಟ್ಟಿ ಬಡಿದೇನ || ತಂದಾನ ||

s ಆನೆಮ್ಯಾಲೆ ಕುಂತವ್ನು
ಮೂರು ದಡೆ ಚೆಂದ್ರಾಯ್ದೊ
ಎಡಗೈಲಿ ನೋಡಣ್ಣ ಗರಗ್ ನಂಗೆ ಕಡದಾನ
ಆನೆಯವ್ನು || ತಂದಾನ ||

ಗಳಕ್ ಅಂತ ಕಡ್ದು ಬಿಟ್ಟ ಕುತ್ಗಿ
ಕತ್ತರ್ಸಿಕ್ಯಂಡ ಬಿದ್ದ
ಆನೆ ತಾವ
ಎರಡು ತಲೆ ಕೆಳಗೆ ಬಿದ್ದು ಬಿಟ್ಟವು
ಆಗ ಗಣಪತರಾಜ ನೋಡ್ದ
ಗಣರಾಮ ನನ್ನ ಮಗ
ಕಡ್ದು ಬಿಟ್ಟ ಒಂದೇ ಏಟಿಗೆ
ಆ ಆನೆನ್ನ ಆ ನನ್ನ ಮಗನ್ನ
ಇನ್ನ ನನ್ನ ಜೀವ ತೆಗಿತಾನ
ಹ್ಯಾಂಗ ಮಾಡ್ಬೇಕಂತ
ಹಿಂದೆ ಬರೋನು
ಗಣಪತ್‌ರಾಜ
ಆಗ ಒಂದು ಕೈಲಿದ್ದ ಎರಡು ಕೈ ಜೋಡ್ಸಿ
ಒಂದು ಪಾದದ ಮೇಲೆ

ರಾಮ ಶರಣೆಂಬೋರಿಗ ಹೊಡಿಬಾರದೋ
ಶರಣೆಂಬೋರಿಗೆ ಮರಣಿಲ್ಲ ಭೂಮಿಮ್ಯಾಲೆ
ರಾಮ ಕೈಯೆತ್ತಿ ಮುಗಿದರೆ ಕೈಯೆತ್ತಿ ಕಡಿಬ್ಯಾಡ
ಕೈಯೆತ್ತಿದೋರ್ನ ಕೈಯೆತ್ತಿ ಕಡಿಬಾರ್ದು || ತಂದಾನ ||

ಆಹಾs
ರಾಮ ಕಡಿ ಅಂತ ಬರೋನು ರಾಮ
ನಮ್ಮ ಕುಲದಾಗ
ಶರಣು ಅಂಬೋರಿಗೆ
ಕೈಯೆತ್ತಿದವರಿಗೆ ಬರಿಬಾರ್ದು ಅಂತ
ಕೇಳವೋ ಗಣಪತಿ ರಾಜ
ಏನ್ರೀ
ಆಗಿನ್ನವ್ರು ತಾವ್ ಕಂಪ್ಲಿರಾಜನ ಮಗ
ನಾನು ಆನೆಗುಂದಿ ರಾಮಯ್ಯ
ರಾಮಾ ನಿನಗ ಶರಣ ಮಾಡ್ತಿನಿ ರಾಮ
ಏs ಮೀನು ಹೊಟ್ಟ್ಯಾಗಿರೋವು ಅಗಸಿಕಟ್ಟಿದ್ದು
ಎಡಗಾಲಲ್ಲಿ ಒದ್ದು ಬಲಗೈಲಿ ಹಿಡಿಕಂಡಿದ್ಗೆ
ಅಗಸಿ ಕಾಯೋರು ನನ್ನ ಮ್ಯಾಲೆ ಬಂದ್ರು
ಕಡ್ದು ಕಡ್ದು ಹಕ್ಕಂತ ಹಾಂಗೇ ಬಂದೀನಿ
ಎಡಗೈ ಪಕ್ಕೆ ಕಡದಿನಿ
ಬಲಗೈ ಪಕ್ಕೆ ಹಾಂಗೆ ಐತಿ
ನಿಮ್ಮ ಓರಗಲ್ಲು
ಅಯ್ಯಾ ರಾಮಯ್ಯ
ನಿನಗ ಶರಣ ಮಾಡ್ತೀನಿ ರಾಮ
ಏs ಮಂತ್ರ ಓದವ್ರೆ
ರಾಮ ಎಗರಿ ಬಿಳಂಗ
ಎದುರು ಮಂತ್ರ ಓದ್ರಿ
ನೀವು ಕೇಳಿದ್ದು ಕೊಡ್ತಿನಿ
ಬೆಳ್ಳಿ ಬಂಗಾರ ವಜ್ರ ಮಾಣಿಕ್ಯ ಕೊಡ್ತಿನಿ
ಹೋಗಯ್ಯ ಗಣಪತಿರಾಜ
ರಾಮ ಸಾಯೋವ್ನ
ಬಾಳೆಹಣ್ಣು ವರವಲಿದ್ದ
ಜಟಿಂಗೇಶ್ವರ ವರದಲ್ಲಿ ಹುಟ್ಟ್ಯಾನ
ಈಶ್ವರ ಭಕ್ತಿಲಿದ್ದ
ಆತನ ಕಡಿಯಾಕ ಹೋದ್ರೆ
ಆತನ ಮಂತ್ರ ಓದಾಕೆ ಹೋದ್ರೆ

ಎದುರುವಾಗಿ ಬಿದ್ದಯ್ಯ ನಾವ್ ಎದುರು ಮಂತ್ರವಾಗುತೈತಿ ನಮಗೆ || ತಂದಾನ ||

ಎದುರು ಮಂತ್ರವಾದ್ರೆ
ನಮ್ಗೇ ಎದುರುವಾಗಿಬಿಡ್ತೈತಿ
ನಾವೇ ಎಗರಿ ಬಿದ್ದು ಸಾಯ್ತಿವಿ
ಸಾಧ್ಯವಿಲ್ಲಪ್ಪೋ
ಮತ್ತ ಹ್ಯಾಂಗ ಮಾಡಬೇಕಲೆ ಶ್ಯಾನುಬಾಗ್ರೆ
ಏನಿಲ್ಲಪ್ಪ ಮಂತ್ರ ಓದೋರು ನಾವು
ರಾಮನ್ನ ಕುದುರಿತಲ್ಲಿ ಕರ್ಕಂಡು ಹೋದ್ರೆ
ರಾಮ ಸತ್ತೋತನ
ಮುಂದೆ ಬಂದ್ರೆ ಕಡೀತೈತಿ
ಹಿಂದೆ ಬಂದ್ರೆ ಕಾಲಿಂದ ಒದಿತೈತಿ
ಬಗಲಾಗ ಬಂದ್ರೆ ಎಡರೆಕ್ಕೇಲೆ ಹೊಡಿತೈತಿ
ಬಗಲೈಲಿ ಬಂದ್ರೆ
ಬಲರೆಕ್ಕೇಲಿ ಹೊಡಿತೈತಿ
ರಾಮ ಸತ್ತೋತಾನ
ಇನ್ನ ಓರುಗಲ್ಲು ಉಳಿತೈತಿ
ಈಗ ನಿನ್ನ ಜೀವ ಉಳಿತೈತಿ
ಸರಿ ಬಿಡು ಅಂತ
ರಾಮಾ ನಿನಗೆ ಶರಣು
ಕುದುರಿ ಐತಿ

ನೋಡು ಬಾರ ರಾಮಯ್ಯ ನಿನಗೆ ಶರಣಪ್ಪ ರಾಮಯ್ಯ || ತಂದಾನ ||

ನಡೆಪ್ಪ ಗಣಪತಿ
ಕಡ್ಡಿ ಬಾಕ್ಲಿಂದ ತಾ ಬಗ್ಗಿ ನೋಡಿದ್ರ
ಎರಡು ಕಣ್ಣಿಗಿ
ಥಳಕ್ ಅಂದು ಬಿಟ್ಟು ಕುದುರಿ
ಈ ಕುದುರಿ ಏನಂತ ದುಃಖ ಮಾಡ್ತೈತಿ
ನಿಂತಕಂಡು ಇನ್ನ ಅದರ ಕಾಲು
ಬಾತುಕೊಂಡ್ಹೋಗ್ಯಾವ
ಅದರ ರೆಕ್ಕೆ ಹಿಡ್ಕಂಡ್ಹೋಗ್ಯಾವ
ದುಷ್ಟರಿಗೆ ಕೈಗೆ ಸಿಕ್ಕಿ ಬಿಟ್ನನಲ್ಲಾ
ಈ ಓರಗಲ್ಲಾಗ
ಈಗ ಅದ್ವಾನ ಆಯಿತಲ್ಲ
ಈ ಜೀವಕ್ಕ
ನನ್ನ ಮ್ಯಾಲೆ ಕುಂದ್ರವನಿಲ್ಲದಂಗಾಯ್ತು
ಇನ್ನ ತಾಸ್ಹೋತ್ತು ನೋಡಿ
ಈ ಮಾಳ್ಗಿ ಹಂಗೆ ಕಿತ್ಗಂಡು
ಮ್ಯಾಕ ಹೋತೀನಂತ
ದುಃಖ ಮಾಡ್ತೈತಿ
ಆ ಟೈಮಿನಾಗ ರಾಮ ಬಂದು ಬಗ್ಗಿ ನೋಡಿದ್ರೆ
ಎರಡು ಕಣ್ಣಿಗೆ ಥಳಕ್ ಅಂತ ಬಡಿತೈತಿ
ಆಹಾ ಬಲಗಾಲಿಗೆ ಪತ್ರಾಳ ಸುಳಿ ಐತಿ
ಎಡಗಾಲಿಗೆ ಧನಲಕ್ಷ್ಮಿ ಸುಳಿ ಐತಿ
ಎದಿಗೆ ಮಾಣಿಕ್ಯವೈತಿ
ಮೂರು ನಾಮ ಐದಾವ ಕುದುರಿಗೆ
ಪಂಚ ಕಲ್ಯಾಣ ಅರಿಷಿಣ ಬಣ್ಣದ ಠೇಕಿನ ಕುದ್ರಿ

ದೇವರು ಕುದುರಿ ಆಯಿತಮ್ಮ ದೇವರು ಸಂತೋಷದ ಕುದುರಿಯಮ್ಮ || ತಂದಾನ ||

ಕುದುರಿ ಸಲುವವನೆ
ಈಗ ಆ ಕಡ್ಡಿ ಬಾಕ್ಲ ತೆರಿಯಪ್ಪಾ
ಕುದುರಿ ಹಿಡ್ಕಂಡು ಬಾರಪ್ಪ ಅಂತ
ಸರಿಬಿಡ್ರಿ ಅಂತ ಕಡ್ಡಿ ಬಾಕ್ಲ ತೆರೆದ
ತೆರೆದು ಕುದುರಿತಲ್ಲಿ ಬಂದ
ಬ್ಯಾಗರಸುಂಕ
ಕುದುರಿ ನೋಡಿತು
ಈ ರಾಮ ಆನೆಗುಂದಿ
ಈಶ್ವರ ವರದಲ್ಲಿ
ಬಾಳೆಹಣ್ಣಿನ ಇಷ್ಟದಲ್ಲಿ ಹುಟ್ಟ್ಯಾನ
ನಾನು ಇನ್ನ ಮೂರೋ ಮೇಘದ
ದೇವ ಪಟ್ಣದ ಕುದುರಿ ನಾನು
ನನಗಿನ್ನ ಮ್ಯಾಕ ಎಗರಿ
ನನ್ನ ಬೆನ್ನಮ್ಯಾಲೆ ಕುಂತ್ರೆ ಸಾಯೋತನಕ
ಅವನ ಜೀವದಲ್ಲಿರ್ತಿನಇ ನಾನು
ಮುಂದೆ ಬಂದ್ರೆ ಕಡ್ದು ಹಾಕ್ತಿನಿ
ಹಿಂದೆ ಬಂದ್ರೆ ಕಾಲಿಲಿ ಒದಿತೀನಿ
ಬಗಲಾಗ ಬಂದ್ರೆ ರೆಕ್ಕೇಲಿ ಬಡಿತಿನಿ
ಕಾಲಡಿ ಬಂದ್ರೆ ಕಾಲಿಂದ ಹೊಟ್ಟೆ ತುಳಿತಿನಿ
ಎಲ್ಲಾ ತಪ್ಪಿಸಿಕೊಂಡು
ನನ ಬೆನ ಮ್ಯಾಲೆ ಕುಂತ್ರೆ ಜೀವ
ಅವನೇ ನನ್ನ ಜೀವ ಇರೋತನಕ ಸಲುವುತಿನಿ ಅಂತ

ಕುದುರಿ ಆಗಿ ನೋಡಣ್ಣ
ಎಡಗೈಲಿ ಇನೈಯೋ
ಪಟಪಟ ರೆಕ್ಕೆ ಬಡ್ದೋ
ಥಳಕನಾಂಗ ಹೊಳದೈತೊ ಇನ್ನಮದ ಕುದುರಿ ನೋಡಣ್ಣ || ತಂದಾನ ||

ಕುದುರಿ ಒಂದ ಹಾರಿದೈತೋ
ಇನ್ನ ಮ್ಯಾಕ ಎಗರೈತೋ
ಏಳು ಮನುಷ್ಯರ ಮ್ಯಾಲಣ್ಣ
ಏಳೇಳು ಗಜನ್ನ
ಮ್ಯಾಕ ಎಗರ ಹೊತ್ತೀಗೆs

ಹದ್ನಾರು ಗಜಣ್ಣ ಮಗ ಮ್ಯಾಕ ಎಗರಿ ಬಿಟ್ಟಾನ ರಾಮ
ತೋs ಕುದುರಿ ಮ್ಯಾಲೆ ಕುಂತಾನ ಕುಪ್ಪಳಿಸಿ ಎಗರಿ ರಾಮಯ್ಯ || ತಂದಾನ ||

ಕುದುರಿ ಮ್ಯಾಲೆ ಕುಂತುಬಿಟ್ಟ
ಕುದುರಿ ಮ್ಯಾಲೆ ಕುಂತು

ಆಗ ಕುದ್ರಿ ನೋಡೊ ಯಣ್ಣ
ಎಡಗೈಲಿ ಕೂದ್ಲು ಹಿಡ್ದ
ಬಲಗೈಲಿದ್ದನ್ನೋs
ಚಂದ್ರಾಯ್ದಾ ಹಿಡ್ದಾನ
ಎಡ ರೆಕ್ಕೆಲಿ ಹೊಟ್ಟಿಗೆ ಆನ್ಸಿದ
ಬಲ ರೆಕ್ಕೆಲಿ ಹೊಟ್ಟಿಗೆ ಆನ್ಸಿ
ಆಡಲಾರದಾಂಗಣ್ಣ ಎರಡು ಪಾಡ ಹೊಟ್ಟಿಗಾನ್ಸ್ಯಾನ || ತಂದಾನ ||

ಎರಡು ರೆಕ್ಕೆ ಹೊಟ್ಟಿಗಾನ್ಸಿ ಬಿಟ್ಟ ಎರಡು ಹಾಲಿಂದ
ಆ ರೆಕ್ಕೆ ಹಾರುತ್ತಿದ್ರೆ ಅಲ್ಲ ಮ್ಯಾಲೆ ಹಾರಾಡೋದು
ಹಾರಲಾರದ್ಹಾಂಗ ಬಂದು ಮಾಡಿದ ಮ್ಯಾಲೆ ಹ್ಯಂಗ
ಆಗ ಗ್ಯಾರಗ್‌ಅಂತ ತಿರಕ್ಕಂತ
ಆಗ ಮೂರು ಅಗಸಿ ಹೊರಾಗ ಇಳಿದು ಬಿಡ್ತು
ಇಳಿಯಾ ಹೊತ್ತಿಗೆ ಕುದುರಿ ಕೂದಲ ಹಿಡಕಂಡು ಬರ್ತಾನ
ಮೀನ ಅಗಸ್ಯಾಗಲ್ಲಿದ್ದ
ಅವರೇನು ಮಾಡಿದ್ರು
ಹಳೆ ಅಗಸಿ
ಅವರು ಊರಿಗೆ
ಈಗ ಗಣಪತಿ ರಾಜ
ಏಲೇ ರಾಮ ಸತ್ತೋಗಿಬಿಟ್ಟ
ಕುದುರಿ ಕಾಣ್ವಲ್ಲ
ಆತ ಕಾಣ್ವಲ್ಲ
ಮ್ಯಾಕ ಹೋಗಿಬಿಟ್ರು ಇಬ್ರು
ಎಲ್ಲಿ ಕೊಲ್ಲಿತೋ ರಾಮನ
ಅಂತ ಎರಡು ಚೀಲ ಮಂಡಾಳು ತಂದ
ಒಂದು ಚೀಲ ಕಡ್ಲಿ ತಂದ
ಲೇ ಓರುಗಲ್ಲಾಗ ಹುಡುಗ್ರಿಗ ಹಿಡ್ತೀನಿ
ಆನೆಗುಂದಿ ರಾಮಯ್ಯಾ ಸತ್ತೋದನಪ್ಪೋ ಅನ್ರಿ
ಮಂಡಾಳು ಉಗಿರಿ ಬಾಯಾಗ
ಏs ನೀವ ಕೊಡೋದು ಹೆಚ್ಚಾ
ನಾವ್ ಉಗ್ಗೋದು ಹೆಚ್ಚಾ
ತಗಂಡುಬರ‍್ರೇ ಅಂತ
ಹುಡುಗ್ರೇನಂತಾರ
ರಾಮ ಸತ್ತೋದನಪ್ಪೋ ಅಂಬೋದು
ಮಂಡಾಳು ಬಾಯಾಗ ಉಗ್ಗೋದು

ರಾಮ ದೇವರು ಬಂದ್ಹಂಗ ರಾಮ ಬರುತಾನಮ್ಮಾ
ಕುದುರಿ ಹಿಡ್ಕಂಡು ಬರುತಾನ ರಾಮಯ್ಯ ಅಗಸ್ಯಾಗಲಿದ್ದ || ತಂದಾನ ||