ಜೀವಕ್ಕ ಹ್ಯಾಂಗ ತಾಳಿ ಕಟ್ತಾರೋ
ಜೀವಕ್ಕ ಹ್ಯಾಂಗ ಲಗ್ನ ಮಾಡ್ತಾರೋ
ನಾನು ಜೀವಕ್ಕ ಹುಟ್ಟಿದವ್ನು
ನಮ್ಮ ಜೀವದ ತಂದಿ ಮದುವಿ ನೋಡ್ತಿನಿ
ಅಯ್ಯೋ ರಾಮ
ನೀನು ಮದುವಿ ನೋಡಾಕ ಬಂದ್ರೆ

ರಾಮ ನನ್ನ ಕುತ್ಗಿ ಕೊಯ್ತಾರ ರಾಮ
ರಾಮ ನೀನು ಮದುವೆ ನೋಡಾಗಿಲ್ಲ ರಾಮs
ರಾಮಯ್ಯ || ತಂದಾನ ||

ರಾಮ ನೀನು ಲೋಕವು ನೋಡಾಂಗಿಲ್ಲ
ಮತ್ತೆ ಹ್ಯಾಂಗ ಮಾಡ್ಬೇಕು ಮಾವ ಈ ಪಾಪೀ ಕಣ್ಣಿಲಿ
ಜೀವಗ ಹುಟ್ಟಿದವ್ನಿಗಿ ಜೀವಕ್ಕ ಹ್ಯಾಂಗ ತಾಳಿ ಕಟ್ತಾರೋ
ಹ್ಯಾಂಗ ಮದುವಿ ಮಾಡ್ತಾರ
ಅದನ್ನ ನೋಡ್ತಿನಿ ಮಾವ
ಅಯ್ಯೋ ನೋಡಂಗಿಲ್ಲಪ್ಪ
ನಿಮ್ಮ ತಂದಿ ಪ್ರೇಮಿಸಿ ಬಿಟ್ಟಾನ
ನಿಮ್ಮ ತಂದಿ ಮಾಡ ಅಂದಾನ
ಮತ್ತೆ ನನ್ನ ಏನು ಮಾಡ್ತಿರಿ ಮಾವ
ಏನಿಲ್ಲ ಹಗೀದಾಗ ಕುಂತ್ಗಬೇಕು ನೀನು
ಹಗೇದಾಗ ಕುಂತ್ಕೊಂಡು
ಮ್ಯಾಲೆ ಬಂಡೆ ಮುಚ್ತಿವಿ
ಬಂಡಿಗಿ ತೂತು ಹೊಡಿತಿವಿ
ನಿನಗ ಗಾಳಿ ಬರಾಕ
ಇಗೋ ಮದುವೆ ಆದ ಹತ್ತು ದಿವಸಗೆ
ಅಗೇದಾಗಲಿದ್ದ ಗಡ್ಡಿಗೆ ಬಾ
ರಾತ್ರಿಯೆಲ್ಲಾ ಬಂಡೆ ತಗಿತಿವಿ
ಹಗೇಲಿದ್ದ ಗಡ್ಡಿಗೆ ಬರೋದು
ಪಾದ ಹಿಡ್ಕೊಂಡಿದ್ದಾನ ಈಗ ರಾಮಯ್ಯ
ಹೀಗ ನನ್ನ ಜೀವ ತಗೀಬ್ಯಾಡ್ರೀ
ಈಗ ನೀ ಜೀವಕ್ಕ ಕುಂತಗಂಡ್ರೆ
ನಿಮ್ಮ ತಂದಿ ಜೀವಕ್ಕ ಮದುವೆಯಾಗತೈತೆ
ಇಲ್ಲದಿದ್ರೆ ಆಗಾದಿಲ್ಲ
ಓಹೋ ಮಾವ
ದುಷ್ಠಲೋಕ ಕರ್ಮಲೋಕದಾಗ
ಜೀವಕ್ಕ ಹುಟ್ಟಿದವ್ನು
ಜೀವಕ್ಕ ಹ್ಯಾಂಗ
ತಾಳಿ ಕಟ್ತಾರೋ
ನೋಡಬೇಕಂತ ಮಾಡಿದ್ನೋ ಮಾವ
ನಿನ್ನ ಪಾದಕ್ಕೆ ಶರಣು
ಅಂತಾ ಹಗೇವು ತೆರೆದ್ರೆ
ಹಗೇದಾಗ ಕುಂದ್ರಿಸಿ
ಮ್ಯಾಲೆ ಬಂಡೆ ಮುಚ್ಚಿದ್ರು
ಬಂಡೆ ಮುಚ್ಚಿ
ಆಗಿನ್ನ ಸ್ವಾದರಮಾವ
ಬಚ್ಚಣ್ಣ ಏನ್ಮಾಡ್ದ
ಪತ್ರ ತಗಂಡು ಗರಗರ ಪತ್ರ ಬರ್ದ
ಏನ್ರಿ
ಚಿತ್ರಗೇರಿ ಪಟ್ಣದಾಗ
ಚಾವುಲರಾಜನ ಮಗಳು ರತ್ನಾಕ್ಷಿ
ಈಗ ಆನೆಗೊಂದಿ ಪಟ್ಣದಾಗ
ಹಿರಿ ಕಂಪ್ಲಿರಾಜನ ಮಗ
ರಾಜ ಈಗ ರಾಮಯ್ಯ
ಈ ನಿನ್ನ ಫೋಟೋ ನೋಡಿ
ಒಪ್ಪಿದಲ್ಲಾಗಿ ಬಿಟ್ಟಾನ
ಆನೆಗೊಂದ್ಯಾಗ ಲಗ್ನ ನಡಿಬೆಕು
ರಾಮನ ಜೀವಕ್ಹುಟ್ಟಿದವ್ನು
ಜೀವಕ್ಕ ತಾಳಿ ಕಟ್ಟಿಸ್ತಾನ

ಈಗ ಲೋಕೆಲ್ಲ ಪತ್ರನ್ನ ಲಗ್ನಪತ್ರ ಬರ್ದಾನ
s ಪತ್ರವಾಗಿ ಬರ್ದಾರ ತಾವು ಹೊಂಟು ಕಳಿಸ್ಯಾರ || ತಂದಾನ ||

ಟಪಾಲು ಹುಸೇನ ಪತ್ರ ತಗಂಡು
ಆಗ ರತ್ನಾಕ್ಷಿಯವರ ಪಟ್ಣಕ್ಕೆ ಬಂದು ಪತ್ರ ಕೊಟ್ಟ
ರಾಮನ ಲಗ್ನ ಆಗ್ತೈತಂತೆ
ಆನೆಗೊಂದ್ಯಾಗ ಅಂತ
ಆಗಿನ್ನವ್ರು ಬಂಡಿ ಕಟ್ಟಿಗ್ಯಂಡು
ಬಂಡಿಮ್ಯಾಲೆ ಕುತ್ಗಂಡು
ರಥಮ್ಯಾಲೆ ಬಂದಾಂಗ ಬರ್ತಾರ
ಈಗ ಬಚ್ಚಣ್ಣ ಏನಂದ
ಕೇಳವೋ ಮಾವ ಅಕ್ಕನ ಗಂಡ
ನಿನ್ನ ಬಾಯಾಗ ಒಂದು ಹಲ್ಲಿಲ್ಲ
ನೀನು ಮಾತಾಡಿದ್ರೆ ಏನಂತಿ
ಅಂವ್ ಅಂವ್‌ ಅಂವ್‌ ಅಂತಿ
ನನ್ನ ಮದುವಿ ತಯಾರಾಗ್ತ
ಈಗ ನಿನ್ನ ಏನು ಮಾಡಂಗಿಲ್ಲ
ಈಗ ಕಂಬ್ಳಿ ಮ್ಯಾಲೆ ಕಂಬ್ಳಿ
ಮೂರು ಕಂಬ್ಳಿ ಮುಚ್ಚಿ ಬಿಡ್ತೀವಿ
ಮುಚ್ಚಿ
ಅಳಿಯಾ ಅಂದ್ರೆ ಹೂಂ
ಎದ್ದೇಳ ಅಳಿಯಾಂದ್ರ ಅಂದ್ರೆ
ಹೂಂ ಅನ್ಬೇಕು

ಮಾತಾಡಿದ್ರೆ ನೋಡಯ್ಯ ನನ್ನ ಜೀವ ತಗೆದು ಬಿಡ್ತಾರ || ತಂದಾನ ||

ಆಗ ಭಾವ ಮೈದ ಬಚ್ಚಣ್ಣ
ಈಗ ಬಚ್ಚು ಬಾಯೋನಿಗೆ ಮಾಡ್ತಿದ್ದೆ
ನಿನ್ನ ಮಾತಿಗೆ ಎದುರಾಡೋದಿಲ್ಲ
ನೀನು ಹೇಳಿದ್ಹಂಗ ಕೇಳ್ತಿನಪ್ಪ
ರತ್ನಾಕ್ಷಿಯನ್ನ ನನ್ನ ಜೀವಕ್ಕ ಕಲಿಸಬೇಕಪ್ಪ
ಓಹೋ ಸರಿ ಆಗ ಜೀವದಲ್ಲಾಗಿ
ಈಗ ಕಂಬ್ಳ್ಯಾಗಲ್ಲಿದ್ದ ಕೈ ಚಾಚಿ
ಈಗ ತಾಳಿ ಕಟ್ಟಬೇಕು
ಮಕ ತೋರಿಸಬಾರ್ದು
ತಾಳಿಕಟ್ಟಿದ ಮ್ಯಾಲೆ
ಲೋಕೆಲ್ಲ ಬಂದಿದ್ದವ್ರೂ
ಆನೆಗೊಂದಿ ರಾಮನಿಗೆ ಮದುವಿ ಆಗತೈತಂತ
ರಾಮನ್ನ ತೋರಿಸ್ಯರಪ್ಪ ಅಂತಾರ
ಅಯ್ಯೋ ರಾಮನ್ನ ತೋರಿಸ್ತಿವಿ
ಈಗ ಹಾಲು ತುಪ್ಪ ಕಲಿಸಿ
ಈಗ ಜೀವಕ್ಕೆ ಕುಡಿಸುವಾಗ
ಈಗ ಎಲ್ಲಾರಿಗೂ ಮಕ ತೋರಿಸ್ತಿವಿ
ಒಂದು ಅರ್ಧ ಗಂಟೆ ನಿಂದ್ರಿಸಿ
ಲೋಕೆಲ್ಲ ನೋಡ್ರಿ
ಲೋಕ ಜೀವಕ್ಕ ತಾಳಿ ಕಟ್ಟಿದ ರಾಮನ್ನ
ಅಷ್ಟತ್ತನಕ ನಾವು
ತೋರ್ಸೋದಿಲ್ಲ ಅಂತೀವಿ
ಈಗ ನಾನು ಹೋಗಿಬಿಡ್ತಿನಿ ಆನೆಗೊಂದಿ ಪಟ್ಣಬಿಟ್ಟು

ಈಗ ನಿನ್ನಿಷ್ಟ ಅವರಿಷ್ಟ ಹಿರಿಕಂಪ್ಲಿ ರಾಜಯ್ಯ || ತಂದಾನ ||

ಅಯ್ಯೋ ಬಚ್ಚಣ್ಣ
ತಾಳಿ ಜೀವಕ್ಕ ಬಿಳೋತನಕ ಇರು
ಜೀವಕ್ಕೆ ತಾಳಿ ಬಿದ್ದಮ್ಯಾಲೆ
ನೀನು ಎತ್ತಾಗನ ಹೋಗು
ಎಲ್ಲೆನ್ನ ಬಚ್ಚಿಕೋ

ಆಗ ಬಂದ ನೋಡಣ್ಣ ಕಂಪ್ಲಿರಾಜ ರಾಜ || ತಂದಾನ ||

ಆಗ ಕಂಪ್ಲಿ ರಾಜ ಏನು ಮಾಡ್ಬಿಟ್ಟ
ಆಗ ಬಚ್ಚನ್ನವಾಗಿ
ಏಲವೋ ಮಾವ
ಏನಪ್ಪಾ ಅಳಿಯಾ
ಆಗ ಏನಿಲ್ಲ
ನಿನಗೆ ಕಂಬ್ಳಿ ಮ್ಯಾಲೆ ಕಂಬ್ಳಿ
ಮೂರು ಕಂಬ್ಳಿ ಹೊದಿಸ್ತಿವಿ
ಆಗ ಕುಂದ್ರ ಅಳಿಯ ಅಂದ್ರೆ ಹೂಂ ಅನ್ಬೇಕು
ಎದ್ದೇಳು ಅಳಿಯ ಅಂದ್ರೆ ಹೂಂ ಅನ್ಬೇಕು
ಈಗ ತಾಳಿ ಕಟ್ಟೋ ಟೇಮ್‌ನಾಗ
ನಾನು ಊರು ಬಿಟ್ಟು
ಆನೆಗೊಂದಿ ಮೂರು ಆಗಸಿ ತಟಾದು ಹೋಗ್ತಿನಿ

ಮಾವ ನಿನ್ನಿಷ್ಟ ಅವರಿಷ್ಟ ಇದು ಒಂದು ನನ್ನ ಮಾತು
ಎಪ್ಪಾ ಹೆಂಗಾನ ಮಾಡಲೋ ಆನೆಗುಂದಿ ಪಟ್ಣಾದು
s ತಾಳಿ ಒಂದು ಬಿಳ್ಲಾಪ್ಪ ಯಾರು ಕೈಲೂ ಆಗಾದಿಲ್ಲೋ || ತಂದಾನ ||

ತಾಳಿ ಬಿದ್ರೆ ಯಾರು ಕೈಲಿ ಆಗಾದಿಲ್ಲ
ಓಹೋ ಅಷ್ಟು ಆಗಲ್ಯಂತ
ಈಗ ಹತ್ರೆಣಿ ಹಚ್ಚಿ
ಮಾವ ಕಂಬ್ಳಿ ಮ್ಯಾಲೆ ಕಂಬ್ಳಿ
ಮೂರು ಕಂಬ್ಳಿ ಹೊಸಿದ್ರು
ದಡಿ ಅಂತ ಮಲ್ಲೇ ಹೂವ ಹಾಕಿದ್ರು
ಆಗಿನವ್ರು ಇಪ್ಪತ್ತೂ ಅಗಲ
ಹಂದ್ರ ಹಾಕಿಬಿಟ್ರು ಆನೆಗುಂದ್ಯಾಗ
ಕಾಣ್ಗಿನ ತೊಪ್ಪಲು
ಟೆಂಗಿನ ಗಿಡಗಳು ಹಂದ್ರ ಹಾಕ್ರಿ
ಆಗ ಅಡಿಗಿ ಮಾಡ್ಸಿದ್ರು
ಸುತ್ತ ನಾಕ ಹಳ್ಳಿ ರಾಮನ ಲೋಕ ಹುಟ್ಟಿದವ್ನು
ಲೋಕ ನೋಡಂಗಿಲ್ಲಂತೆ
ಆರಂಡಿ ರಾಮ ಅಂತ ಹೆಸರಾಗ್ಯಾನ

ಹೆಂಗ ಲೋಕ ಕಲಿತಾನೋ
ಹ್ಯಂಗ ಲೋಕ ಲಗ್ನ ಆಗ್ತಾದೋ
ರಾಮಂದು
s ಬಂಡಿ ಬಂಡಿ ಬರ್ತಾವ ನೋಡಲಿಕ್ಕ ಜನ ಲೋಕ
ಆನೆಗುಂದಿಗೆ ರಾಮನ್ನ ಮದುವಿ ಅಂತ || ತಂದಾನ ||

ಆನೆಗುಂದಿ ಸುತ್ತಾ ನಿಂತ್ಕಂಡು ನೋಡ್ತಾರ
ಬರೀ ತಲೆ ತಲೆ ಕಾಣ್ತಾವ
ಮನುಷ್ಯರ ಮಕ ಕಾಣಾದಿಲ್ಲ
ಕಾಲುಕಾಲು ತುಳುಕಂತ ನಿಂತಾರಪ್ಪ
ಆಗ ರಾಮನ್ನ ಕರ್ಕಂಡು ಬರಂದ್ರೆ
ಆಗ ಇಬ್ರು ಶ್ಯಾನುಭೋಗ್ರು
ಚಿರಂಜೀವ ವಿಷ್ಣು ಈಶ್ವರ
ಆದಿ ಶಕ್ತೆ ಅಂತಾ ಬಂದು

ಆಗ ಬಣ್ಣಾರಗ್ಗು ಹಾಸ್ಯಾರಾ ಗಂಧ ಕಲಿಸಿ ಅಕ್ಕ್ಯಾನ ಸ್ಯಾಸಿ ಒಂದು ಹೊಯ್ದಾರೋ
ಇನ್ನ ಬಂಗಾರ ತಾಳಿ ಅಣ್ಣಾ ಇನ್ನು ತಾಳಿ ಮುತ್ತಣ್ಣೋ || ತಂದಾನ ||

ಬೆಳ್ಳಿ ತಟ್ಟಿದಾಗ ಇಟ್ಕೊಂಡು ಬಂದು
ಆಗ ಸ್ಯಾಸಿ ಒಯ್ದು ಮ್ಯಾಲಿಟ್ರು
ರಾಮನ್ನ ಕರ್ಕಂಡು ಬರ್ರೆಪ್ಪ
ಆಗ ಎದ್ದೆಳೋ ರಾಮ
ಅತ್ತಗೊಬ್ರು ಇತ್ತಗೊಬ್ರು ಕೈ ಹಿಡ್ಕಂಡ್ರು
ರಾಮನ್ನ ಕರ್ಕಂಡು ಬಂದ್ರು
ಆಗ ಸ್ಯಾಸಿ ಮ್ಯಾಗೆ
ಎಡಪಾದ ಇಟ್ಕಂಡು ಕೂತ್ಕೊಂಡ
ರತ್ನಾಕ್ಷಿನ್ನ ಕರ್ಕಂಡು ಬರ್ರಪ್ಪ
ಬಾರಮ್ಮ ರತ್ನಾಕ್ಷಿ

ರಾಮನಿಗೆ ನಿನಗೆ ಲೋಕದಾಗ ಲಗ್ನ ಮಾಡ್ತಿವಿ ಅಮ್ಮಾ
ರಾಮ ಯಾಗ ನೋಡಲಿ ಜೀವ ನಿಂದು ರಾಮ
s ರಾಮನ ಮಕ ಯಾಗ ನೋಡಬೇಕು || ತಂದಾನ ||

ನಮ್ಮ ಜೀವ ವೃದ್ಧಿಯಾಗಬೇಕಂತ
ಆಯಮ್ಮ ಬಂದು ಬಿಟ್ಳು
ಈಗ ಬಲಪಾದವಿಟ್ಟು ಕುಂತ್ಗಂಡ್ಳು
ಆಗ ಜನಲೋಕ ರಾಮನ್ನ ಮಕ ನೋಡಾನ
ಈಗ ರಾಮನ ಮಕ ತೆರ್ರಿ
ಛೀ ಛೀ ಗುಜ್ಲೋರು, ಬಿಂಜ್ಲೋರು, ಇಟ್ಗಿಲೋರು
ವಾಯ್ಲೋರು ಚಿಪ್ಲೋರು ಮೇಡ್ಯೋರು
ಯಾರು ದೊರೆ ನಾಯಕರ ಕುಲ್ದಾಗ
ಈಗ ತಾಳಿ ಕಟ್ಟೋತನ್ಕ
ನಾವು ಮಕ ತೋರ್ಸೋದಿಲ್ಲ
ತಾಳಿಕಟ್ಟಿದ ಮ್ಯಾಲೆ
ಹಾಲು ತುಪ್ಪ ಕಲಿಸಿ ಕುಡಿಸುವಾಗ
ಲೋಕವೆಲ್ಲ ನೋಡುವಂತ್ರಿ
ಅಂದ್ರೆ ಸರಿಬಿಡಪ್ಪ ಹಂಗೇ ಆಗ್ಲಿ ಅಂತಾ
ಆಗ ಎದ್ದೇಳಮ್ಮಾ ಮಾಣಿಕ್ಯಮ್ಮಾ

ರತ್ನಾಕ್ಷಿ ಎದ್ದಳಾ ಆನೆಗುಂದಿ ರತ್ನಾಕ್ಷಿ
ರಾಮ ಕಂಬ್ಳಿದಾಗ ಐದಿಯೋ ರಾಮ ಯಾಗ ಮಕ ನೋಡಾಲೀ || ತಂದಾನ ||

ಆಗ ಜೀವಕ್ಕ ಏನ್ಮಾಡಿ ಬಿಟ್ರು
ಆಗ ಕಂಬ್ಳಿ ಒಳಕ್‌ ಕೈತೂರ್ಸಿ ಆಗ ಗಂಧ ಹಚ್ಚಿದ್ರು
ಗಂಧ ಹಚ್ಚಿದ ಮ್ಯಾಲೆ
ಆಗಿನ್ನು ಶರಣು ಮಾಡಿ
ಮುತ್ತಿನ ಶರಗಿಲೆ
ಆಗ ಗಂಧ ಕಲಿಸಿದ ಅಕ್ಕಿ ಸಾಸಿ ಹೊಯ್ದರು
ಆಗ ಆತನ ಪಾದಕ್ಕೆ ಹಾಕಿ
ಶರಣು ಮಾಡಿ ಕುತ್ಗಂಡ್ಳಪ್ಪ
ಯಾರು ರತ್ನಾಕ್ಷಿ
ಏದ್ದೇಳಪ್ಪಾ ಅಳಿಯ ರಾಮ
ಬಾಯಾಗ ಒಂದು ಹಲ್ಲಿಲ್ಲ
ಮುದೇವ್ರು ಮಾತಾಡಿದ್ರ
ಅಕುಂ ಅಕುಂ ಅಕುಂ ಅಂತಾನ
ಹೂಂ ಅನ್ನಬೇಕಷ್ಟೆ

ರಾಮ ಹೂಂ ಅಂತ ಮ್ಯಾಕ ಎದ್ದಾನಮ್ಮ
ಆಗ ಕಂಬ್ಳಿ ಮ್ಯಾಲೆ ಕಂಬ್ಳಿ ಹೊದಿಸ್ಯಾರ
ಮುಚ್ಚಿ ಬಿಟ್ಟಾರ ಕಂಬ್ಳಿದಾಗ || ತಂದಾನ ||

ಆಗ ಏನ್ಮಾಡಿಬಿಟ್ಟ ತಾ ಜೀವಕ್ಕಾಗಿ
ಈಗ ಜೀವಕ್ಕೇನು ಮಾಡಿದನಂದ್ರೆ
ಕಂಬ್ಳಿ ಒಳಕ್ಕ ಎರಡು ಕೈ ಜೋಡಿಸಿದ
ಆಗ ಗಂಧ ಕೊಟ್ರು ಗಂಧ ಹಚ್ಚಿದ
ಆಗ ಕುಂಕುಮ ಕೊಟ್ರು ಕುಂಕುಮ ಹಚ್ಚಿದ
ಹೂ ಕೊಟ್ರು ಹೂ ಹಾಕಿದ
ಆಗ ಏನಂತಾನ
ತಾಳಿ ಮುತ್ತಿಟ್ಟ
ಆಗ ಕಂಬ್ಳಿ ಹೊರಗ ಸೇರಿ
ಈಗ ತಾಳಿ ಕೈಲಿ ಹಿಡ್ಕಂಡು

ಯಮ್ಮಾ ಇನ್ನಲೋಕ ಶರಣು ಮಾಡ್ಯಾನಮ್ಮ
ಯಮ್ಮಾ ಲೋಕವೆಲ್ಲ ರಾಮನ ತಾಳಿ ಇದೋ
ರಾಮ ಇನ್ನ ತಾಳಿ ಕಟ್ಟೋ ರಾಮ
ರಾಮ ಪರಮಾತ್ಮ ಜೀವ ಅಂತ ಕಟ್ಟಿದಾನಾ || ತಂದಾನ ||

ಪರಮಾತ್ಮ ಜೀವ ಅಂತ
ಜೀವಕ್ಕೆ ತಾಳಿ ಕಟ್ಟಿದ
ಕಟ್ಟಿದ ಮ್ಯಾಲೆ
ಏನ್ರಿ ಈಗನ್ನ ಮಕ ತೋರ್ಸಿರಿ
ರಾಮನ್ನ ನೋಡ್ತಿವಿ
ಇಷ್ಟೂ ದೂರ ಬಂದಿವಿ
ರಾಮನ ಇನ್ನ ತಾವು ಆರಂಡಿ ರಾಮ
ಆನೆಗುಂದ್ಯಾಗ ಲಗ್ನ ನೋಡಬೇಕು
ದುಷ್ಟಲೋಕದಾಗ ಅಂದ್ರೆ
ನಾವು ನೋಡಾಕ ಬಂದಿವಿ
ಏ ಹಂಗೇ ತೋರ್ಸಂಗಿಲ್ಲ ನಾವು
ಹಾಲು ತುಪ್ಪ ಕಲಿಸಿ
ಈಗ ಜೀವಕ್ಕೆ ನಾವು ನಿಂತು
ಲೋಕೆಲ್ಲಯಿನ್ನವರ ತಾವಾಗಿ
ನಾವು ತೋರಿಸ್ತಿವಿ
ಅಂತ ಆಗ ಏನು ಮಾಡಿದ್ರು ಅಂದ್ರೆ

ಯಮ್ಮಾ ಲೋಕದಾಗ ನೋಡಣ್ಣ ಹಾಲುತುಪ್ಪ ತರತಿನಿ ನಾನು || ತಂದಾನ ||

ಹೋಗಿ ಬರ್ತಿನಿ
ಆಗ ಅಳಿಯ ರಾಮಯ್ಯ
ಹೋಗಿಬಾರಪ್ಪ
ಹೂಂ ಅಂದ

ಆಗ ಇನ್ನ ಬಚ್ಚಣ್ಣ ನೋಡಣ್ಣ
ಮೂರು ಅಗಸಿ ತಟಾದ
ಆನೆಗುಂದಿ ಬಿಟ್ಟಾನ
ಆತ ಹೋಗಿ ನೋಡಮ್ಮೋ
ಆಲದ ಗಿಡದಾಗ ಕುಂತಾನ ಊರು ಬಿಟ್ಟು ಅಡವಿ ಸೇರ್ಯಾನ || ತಂದಾನ ||

ಅರ್ಧತಾಸು ನೋಡ್ಯಾರ ರಾಮನ ಮಕ ನೋಡಾಕ
ಜನ ಲೋಕವೆಲ್ಲ ನಿಂತಾ || ತಂದಾನ ||

ಜನಲೋಕವೆಲ್ಲ ನಿಂತು ಬಿಟ್ಟಾರ
ಈಗ ಕಂಬ್ಳಿದಾಗ ಮುಚ್ಯಾರ
ಇನ್ನೆದ್ದು ಬಿಡ್ತಾರ ಹೋತಾರಾ
ನಾವು ಇಷ್ಟು ದೂರ ಬಂದಿವಿ ರಾಮ
ನಿನ್ನ ಮುದುವಿ ನೋಡಾಕ
ದೈವ ಇಲ್ದಂಗಾತು ನಮಗೆ
ಅಂದ್ರೆ ರತ್ನಾಕ್ಷಿಯವರ ತಂದಿ ಚಾವುಲರಾಜ ಕೇಳ್ದ
ಏ ಬಚ್ಚಣ್ಣ ಯತ್ತ ಹೋದ
ಫೋಟೋ ತಂದು ಲಗ್ನ ಮಾಡ್ತಂತ್ವನು
ಮುಂಜೂರಾದೋನು ಮದುವಿಗೆ
ಹುಡುಕ್ರಿ
ಆಗ ಆನೆಗುಂದೆಲ್ಲ ಹುಡುಕಿದ್ರು
ಹಿರೇಕಂಪ್ಲಿ ಪಟ್ಣದಾಗ

ಜಾಡ್ಸಿ ಕಂಬ್ಳಿ ಕಿತ್ಯಾನ ತನ್ನ ಮಾವ ನೋಡಣ್ಣ || ತಂದಾನ ||

ಜಾಡ್ಸಿ ಕಂಬ್ಳಿ ಕಿತ್ತೋ ಹೊತ್ತಿಗೆ
ಆಗಿನವ್ರು ಒಂದು ಹಲ್ಲಿಲ್ಲಪ್ಪ ಬಾಯಾಗ
ಮುದೇವ್ನ ಜೀವದಲ್ಲಿ
ಏs ಈಗ ನೀನು ಕೇಳಮ್ಮ ಮಗಳೇ ರತ್ನಾಕ್ಷಿ
ಒಳ್ಳೆ ಒಳ್ಳೆ ಪೋಟೋ ತಂದ್ರೆ ಯಾವ್ನೂನು ಬ್ಯಾಡಂದಿದ್ದಿದ್ದಿ
ರಾಮನು ಬೇಕಂತ ಒಪ್ಪಿದಲ್ಲಾಯ್ತು
ರಾಮಲೋಕ ಹುಟ್ಟಿದ ರಾಮಯ್ಯ
ಈಗ ಜೀವಕ್ಕೆ ನಿನಗ ಕಲಿಲಿಲ್ಲಮ್ಮ
ಈಗ ರಾಮನ ತೆಗ್ದ ಫೋಟೋ ತೋರ್ಸಿ
ಈಗ ಕಂಬ್ಳಿಮ್ಯಾಲೆ ಕಂಬ್ಳಿ ಮೂರು ಕಂಬ್ಳಿ ಹೊದ್ಸಿ
ಆಗ ಆಗಲೆ ಕಣ್ಣು ತೆರೆದು ತಾಳಿ ಕಟ್ಟಿಸಿದ್ರು
ಅಮ್ಮಾ ರತ್ನಾಕ್ಷಿ
ಈಗ ತಾಳಿಯಿಂದ ಮಗಳು ಕೊಟ್ಟಿದ ಮ್ಯಾಲೆ
ಅಳಿಯಲ್ಲ ಮಗಳಿದ್ದಂಗ
ನಾನು ಕೈಯೆತ್ತಿ ಬಡೀಬಾರ್ದು
ಹುಡುಕ್ರಿ ಎಲ್ಲಿದ್ದಾನ
ಮದುವೆ ಮುಂಜೂರಾದೋನು
ಎಲ್ಲೆಲ್ಲಿ ಹುಡುಕಿದ್ರೂ ಸಿಗಲಿಲ್ಲ

ಇನ್ನ ಯಾಕ ಮಗ್ಳೆ ನಾನು ಹೋಗ್ತಿನಿ ಮಗಳಾ
ತಾಯಿ ತಂದೆ ಮಗ್ಳು ಪಾದಕ್ಕೆ ಬಿದ್ದಾರಮ್ಮ
ಮಗಳ ಮುದೇವನಾಗಿ ಅದೃಷ್ಟ ಆಯಿತಮ್ಮ
ಮುದೇಯ್ನು ಅದೃಷ್ಟ ಐತೆಮ್ಮಾ
ಯಂಗ ಬಂದು ನಾನು ಮುಖ ನೋಡಲೇ ಮಗ್ಳೇ
ಅಮ್ಮಾ ಮಗಳಾ || ತಂದಾನ ||

ಅಂತ ತಾಯಿ ತಂದೆ ದುಃಖ ಮಾಡ್ತಿದ್ರೆ
ಈ ಮಗಳು ರತ್ನಾಕ್ಷಿ ಏನಂತಾಳ
ಯಪ್ಪಾ ರಾಮನಿಗೆ ಆಸರೆ ಆಗತೈತಂತ
ಲೋಕವೆಲ್ಲ ನೋಡ್ತಾರಾಂತ
ಆಗಿನವ್ರು ತಾ ಮಗನ್ನ ಬಚ್ಚಿಕ್ಕಿ ತಂದಿಗಿ ಕಟ್ಟ್ಸ್ಯಾನ

ತಂದಿಗಿ ಕಟ್ರೆ ಏನೈತೋ ರಾಮ ನನಗೆ ಗಂಡಯ್ಯೋ
s ಆನೆಗುಂದಿ ನಾನಾಗಿ ರಾಮನ್ನ ಎಷ್ಟು ದಿನ ನೋಡೇನ || ತಂದಾನ||

ಸುಮ್ನೆ ತಾಳಿ ಜೀವಕಟ್ಟ್ಸ್ಯಾನ
ಜೀವ ಹುಟ್ಟಿದವ್ನು ಮಗಗೆ ಆಸ್ರ ಆಗ್ತದಂತ
ತಂದಿ ಕಟ್ಟಿದ್ರೇನು ಮಗ ಕಟ್ರೆ ಏನು
ಏನು ಪರ್ವಾಗಿಲ್ಲ
ಏಸುದಿನ ಆಗ್ಲಿ ರಾಮನ ಜೀವನ್ನ ಕಳೀಬೇಕು
ಜೀವದಲ್ಲಿ ಕಲಿಬೇಕು ನಾನು ಅಂತ
ತಾಯಿ ತಂದಿ ಜನಲೋಕವೆಲ್ಲ ಹೋದ್ರು
ಈಗ ರತ್ನಾಕ್ಷಿಯನ್ನು ಕರಕೊಂಡು ಬಂದು
ಆಗ ಒಂದು ಕಂಬದ ಮನಿದಾಗ
ಮೂರಂತಸ್ತಿನ ಮಾಳಿಗಿದಾಗ ಇಟ್ಟ
ಇಟ್ಟಿದಮ್ಯಾಲೆ
ಆ ರತ್ನಾಕ್ಷಿ ಏನಂತಾಳ

ರಾಮ ಯಾಗ ನೋಡ್ಲೆ ನಿನ್ನ ಮಕ ರಾಮ
ರಾಮ ಯಾಗ ಹೊರ್ಗಾ ಬರ್ತಿಯಾ ರಾಮದೇವ || ತಂದಾನ ||

ರಾಮನ ಮಕ ಯಾಗ ನೋಡ್ಲ್ಯೆಂತ
ಆಗಿನವ್ರು ತಾವು ಕುಲದಲ್ಲಿ
ರಾಮ ರಾಮ ರಾಮ ಅಂತಾಳಪ್ಪ ಆ ಮದ್ವೆ ಆಗಿ

ಒಂದಿನವಾಯ್ತು ಎರಡು ದಿನವಾಯ್ತು
s ಐದು ದಿವ್ಸ ವಾಯಿತೋ
ಹಂದ್ರ ತಿರುವಿ ಹಾಕ್ಯಾರಾ
ಇನ್ನ ಗಂಗನೊಂದೆ ಮಾಡ್ಯಾರ
ಆಗ ಹತ್ತು ದಿನಗೆ ರಾಮನೇನೆ ಆಗೆದ್ಯಾಗ ಇದ್ದಂತ
ರಾಮನ ಹೊರಗಾಗಿ ತಗದಾರ || ತಂದಾನ ||

ಆಗ ಹಗೇದಾಗಿದ್ದ ರಾಮನ್ನ ಹೊರಗ ತಗದುಬಿಟ್ರು
ಹೊರಗ ತಗದು
ಸ್ವಾದರಮಾವ ಬಚ್ಚಣ್ಣ
ನಡಿಯಪ್ಪಾ ರಾಮದೇವ
ಈಗ ರಾಜ ಕಛೇರಿಗೆ ಹೋಗಾನಂತ

ಕೈ ಹಿಡಿಕಂಡಾನ, ರಾಜಕಛೇರಿಗೆ ಕರಕೊಂಡು
s ರಾಮನ ಕರ್ಕಂಡು ಬರತಾನ ತಂದಿ ಹಿರಿಕಂಪಿಲಿ || ತಂದಾನ ||

ಕರ್ಕಂಡು ಬಂದು
ಆಗ ರಾಜ ಸಿಂಹಾಸನ ಮ್ಯಾಲೆ ಮಗನ ಕುಂದ್ರಿಸಿದ್ರು
ಕುಂದ್ರಿಸೋ ಹೊತ್ತಿಗೆ
ಆಗ ತಂದಿ
ಈಗ ಈ ಸ್ವಾದರ ಮಾವ ಬಚ್ಚಣ್ಣ ಕುಂತಗಂಡ್ರು
ಹನ್ನೆರಡು ಗಂಟಿ ಕೂತ್ಗಂಡು
ನಡಿಮಾವ ಹೋಗಾನ
ಮನಿಗೆ ಹರಿಯಾಳ ದೇವಿತಲ್ಲಿಗೆ
ಹರಿಯಾಳ ದೇವಿ ಮನೀಗಿ ಕರ್ಕಂಡು ಬಂದ
ಈಗ ಕಂಪಿಲಿ ರಾಜ ರತ್ನಾಕ್ಷಿತಲ್ಲಿ ಬಂದ
ಆಗ ಕೇಳವೇ ಈಗ ಜೀವದಲ್ಲಾಗಿ ನನಗಿನ್ನು ಉಂಬಾಕ್ಕಿಡು
ಛೀ ದುಷ್ಠ
ನನಗೆ ಉಂಬಾಕಿಡು ಅಂತೀಯಾ

ಈಗ ಸೊಸಿನ್ನ ಮಾಡಿಕ್ಯಂಡವನು ನನಗೇನಂತ ಅನ್ನಬ್ಯಾಡ
ದುಷ್ಠ ಮಾತ ನುಡಿತೀಯಾ ನೀನು ಭಚ್ಚು ಬಾಯೋವನೇ || ತಂದನ ||
ರಾಮ ರಾಮ ಅಂತ ನೆನಸ್ತಾಳಪ್ಪ ಇನ್ನವ್ರ ರತ್ನಾಕ್ಷಿ