ನಾನು ಹೋಗಿ ಶಾಂತಿ ಹೇಳತಿನಿ
ತಾಯಿ ಜೀವಗೆ ನೀನ ಹೇಳತೀನಿ
ಮಗ ಒಂದು ತಾವು ಬಂದಾನಮ್ಮ    || ತಂದಾನ ||

ಯಮ್ಮಾ ತಾಯಿ ಸಿರಿದೇವಮ್ಮ ನಿನ್ನ ಪಾದಕ ಶರಣು
ಆ ಕಾಲಕ್ಕೆ ಏನ ಕತ್ರಿ ಕುಡುಗೋಲು
ನೆಗ್ಗೀನ ಮುಳ್ಳಿನ ಮ್ಯಾಲೆ ಹುಟ್ಟ್ಯಾನೋ
ಇಟ್ಟಿದ್ದಿಕ್ಕೆ ಸುಖ ಪಡಿದಿಲ್ಲ
ಹದ್ನೆಂಟು ವರ್ಷ ಗೋಳ್ಯಾಡ್ಯಾನ
ಈಗ ನಮ್ಮ ತಂದಿಗೆ ಕರಕಂಡು ಬರ್ತೀನಿ
ಹುಣ್ಣು ಬೇಸಾಗ್ಯಾದ ಅಂದ ಶರಬಂಧರಾಜ
ಯಮ್ಮಾ ಈಗ ನಮ್ಮ ತಂದಿ ಬರೋತ್ತಿಗೆ
ನೀನ ಬಾಯಿಗೆ ಬಂದಾಗ ಬೈಬ್ಯಾಡ
ನಮ್ಮ ತಂದಿನ ಬೈಬ್ಯಾಡ
ಈಗ ಜೀವಕ್ಕಾಗಿ
ಆಗ ಪಾದ ತೊಳೆದು
ಮುತ್ತಿನ ಸೆರಗೀಲೆ ಶರಣು ಮಾಡೇ ದೇವಿ
ಯಪ್ಪಾ ನಿಮ್ಮ ತಂದಿನ ಯಾಕ ಕರಕಂಡು ಬರ್ತಿ
ಈಗ ನಿಮ್ಮ ತಂದಿ ನನ್ನೆಲ್ಲಿ ಕಡಿದು ಹಾಕ್ತಾನೋ
ಯಾಕ ಕಡಿದು ಹಾಕ್ತಾನಮ್ಮ
ಏಯಪ್ಪಾ ಯಾವಾಗ ಹ್ಯಾಂಗ ಬಂತು
ಈ ಮೂರು ಅಂಕಣ ಮನಿ
ಯಾರಿಗ್ಹುಟ್ಟಿದ ಈ ಮಗ
ಅಂತ ನನ್ನ ಕಡ್ದ ಹಾಕ್ತಾನ ಮಗನೆ
ಆವಾಗೆಲ್ಲ ನೆಗ್ಗೀನ ಮುಳ್ಳೂ ಡಿಬಿಗ್ಯಾಳ ಮುಳ್ಳ ಮ್ಯಾಲೆ
ನಮ್ಮಪ್ಪ ಇಟ್ಹೋಗಿದ್ದು
ನಿನ್ನ ಜೀವಗ್ಹುಟೀನಿ
ನಮ್ಮಪ್ಪ ಬಡ್ಯಾಕ ಬರ್ತಿದ್ರೆ
ನಾನು ಸುಮ್ನೆ ಇರ್ತಿನಾ
ಮುಂದೆ ಹುಟ್ಟಿದವ್ನು

ಈಗ ನಿನ್ನ ಮುಂದೆ ನನ್ನ ತಂದಿನ ಕಡೀತಿನಮ್ಮಾ
ನಿನಗೆ ಒಂದು ಮಾತು ಬೈದೀರೇನು || ತಂದಾನ ||

ನಿನ್ನ ಒಂದು ಮಾತು ಬೈದ್ರೆ
ಮುಂದೆ ಹುಟ್ಟಿದವ್ನ ನಾನು ಸುಮ್ನೆ ಇರ್ತಿನಾ
ನಿನ್ನ ಬಡಿಗೋಡಿಸೋದಿಲ್ಲೇ ತಾಯಿ
ಮತ್ತೆ ಹ್ಯಾಂಗ ಮಾಡ್ಲ್ಯಪ್ಪ
ಅಂದ್ರೆ ಆಗ ಚೆರಿಗೆ ನೀರು ತಂದು ಕೊಟ್ಳು
ಆಗ ಚರಿಗಿ ನೀರು ತಾಯಿ ತಲ್ಲಿ ಇಟ್ಟ
ಈಗಮ್ಮಾ ನಮ್ಮಪ್ಪನ ಕರಕಂಡು ಬರುತಿನಿ
ಅಂತ ದಾರಿ ಹಿಡಕಂಡು ಬಂದ
ಸೊಸೆ ಮಾವ ಬರುತಾರ ಶರಣಪ್ಪ
ಬಾ ತಂದೆ ಅಂದ
ತಂದೇನ ಕರಕಂಡು ಬಂದ
ಆಗ ತಟ್ಟ್ಯಾಗ ನಿಂದ್ರಪ್ಪ ಆಅಂದ
ತಟ್ಟ್ಯಾಗ ನಿಂದ್ರಿಸಿದ
ತೊಳಿಯಮ್ಮಾ ಬಂದು ಅಂದ
ಆಗ ಪಾದ ತೊಳದ್ಳು
ಯಮ್ಮಾ ಕುಡಿ ನೀರು ಅಂದ
ಆಗ ಪಾದ ತೊಳದಿದ್ದು ಕುಡಿದ್ಳು
ಈಗ ಸೆರಗು ಹಾಸಿ ಶರಣು ಮಾಡಮ್ಮ ಅಂದ
ಸೆರಗ್ಹಾಸಿ ಶರಣು ಮಾಡಿದ್ಳು

ಹಿಡಿಯಪ್ಪಾ ನಮ್ಮ ತಾಯಿ ಕಾಯೀನ
ಇಬ್ಬರು ನಾನೇ ಇನ್ನು ಬೇಟಿ ಮಾಡಿದೆ
ಒದ್ದ್ಯಾಡಿ ನಾಣು ಭೇಟಿ ಮಾಡಿನಪ್ಪಾ
ಸಾಯೋತನಕ ಇನ್ನು ತಪ್ಪಾಂಗಿಲ್ಲ
ದೇವ್ರರಗಲಿಸಿ ಬಿಟ್ಟಾನ ಮಗ ಹುಟ್ಟಿ ಕಲಿಸಿನ   || ತಂದಾನ ||

ದೇವರು ಅಗಲಿಸಿ ಬಿಟ್ಟಾನ
ನಾನು ಹುಟ್ಟಿ ಮಗ ಕಲಿಸಿ ಬಿಟ್ಟಿನಿ
ಕೈ ಹಿಡೆಪಾ ಅಂದ
ನೋಡಿದ
ಯಪ್ಪಾ ಈ ಮೂರು ಅಂಕಣ ಮನಿ ಹ್ಯಾಂಗ ಬಂತು
ನೀನು ಯಾರಿಗ್ಹುಟ್ಟೀಯೋ ಯಾರಿಗಿಲ್ಲೋ

ನನ್ನ ಜೀವ ವೃದ್ಧಿಯಾಗೋದಿಲ್ಲಾ
ನನಗೆ ಏನೋ ಅನುಮಾನ ತರುತೈತೋ
ಯಪ್ಪಾ ನಿನ್ನ ಜೀವಗೆ ನಾನು ಹುಟೀನಪ್ಪಾ     || ತಂದಾನ ||

ಇಲ್ಲಪ್ಪಾ ಮಗನೆ
ನನಗೆ ರುಚಿ ಆಗೋದಿಲ್ಲಪ್ಪಾ
ಜೀವ ಆನಂದಾಗೋದಿಲ್ಲ ಅಂದ
ಮತ್ತೆ ನಿಮ್ಮ ತಾಯೀನ
ಕೈಲಿ ಹಿಡಿಯೋದಿಲ್ಲಪ್ಪಾ ಅಂದ
ಯಾಕಪ್ಪಾ ಅಂದ
ಈಗ ನಿಮ್ಮ ತಾಯಿ
ನಾನು ಹೇಳಿದ ಮಾತು ಕೇಳಿದ್ರೆ
ನಿಮ್ಮ ತಾಯಿ ಕೈ ಹಿಡಿತೀನಿ ಇಲ್ದಿದ್ರೆ ಇಲ್ಲ
ಏನು ಮಾಡಬೇಕಪ್ಪಾ
ನಿಮ್ಮ ತಾಯಿಗೆ ತುಂಬಿದ ಕೊಡಪಾನ ನೀರು ಹಾಕಬೇಕು
ಬಿಳಿ ಸೀರೆ ಬಿಳೆ ಕುಪ್ಪಸ
ಉಡ್ಯಕ್ಕಿ ಹಾಕಬೇಕು
ಸುಸುಗ್ಹಾಕಬೇಕು
ಬೆಂಕಿನ ಗುಂಡ ತೊಡಿಸ್ಬೇಕು
ಎದೆಮಟ್ಟ
ಗಂಧದ ಚೆಕ್ಕಿ ಹಾಕಬೇಕು ನಿಮ್ಮ ತಾಯಿನ
ಗುಂಡದಾಗ ನಿಂದ್ರಿಸಿ ಬೆಂಕಿ ಹಚ್ಚಬೇಕು
ಈಗ ಇನ್ನವ್ರು ಹಾಲಂತ ಕುಲ

ಬೆಂಕಿಗೊಂಡು ಹೋಗಬೇಕು
ಇನ್ನು ಹಾಲಾಗಿ ನಿಂದ್ರಬೇಕು           || ತಂದಾನ ||

ಉಟ್ಟಿದ ಸೀರೆ ಸುಡುಬಾರ್ದು
ಇಟ್ಟದ ಕುಂಕುಮ ಕೆಡುಬಾರ್ದು
ಆಗ ಹಾಲು ಗುಂಡೆ ಆಗಬೇಕು
ಬೆಂಕಿನ ಗುಂಡ್ಹೋಗಿ

ಹಂಗಾರೆ ನಿಮ್ಮ ತಾಯಿನ ಹಿಡಿತೀನಲೋ
ಇಲ್ದಿದ್ರೆ ನಿಮ್ಮ ತಾಯೀನ ಹಿಡಿಯೋದಿಲ್ಲಾ      || ತಂದಾನ ||

ಸರಿ ಬಿಡಪ್ಪಾ
ಈಗ ಶಿವ ಕಟ್ಟಿದ ಮನೆ ಆದ್ರೆ
ಈಗ ಈಭೂತಿ ಕುಪ್ಪೆ ಬಿಳ್ತೈತಿ
ಲೋಕ ದುಷ್ಟರು ಕಟ್ಟಿದ ಮನೆ
ಆದ್ರೆ ಹಾಂಗೆ ಇರುತೈತಿ
ನೋಡಪ್ಪಾ ನಮ್ಮ ತಾಯಿ ಸತ್ಯವಂತ
ಆರು ಮಂದಿ ಹೆಂಡ್ರು
ತಾಯಿ ಇನ್ನ ಹೊರಗೆ ಬರೋ ಹೊತ್ತಿಗೆ

ಅಗ ಧಗ್ಗನಂತ ಕುಪ್ಪೆ ಬಿದ್ದಿತಮ್ಮಾ
ಈಭೂತಿ ಆಗೆ ಕುಪ್ಪೆ ಆಯಿತಮ್ಮಾ    || ತಂದಾನ ||

ನೋಡಿದೇನಪಾ ನಮ್ಮ ತಾಯಿ ಸತ್ಯೇವು
ಇಲ್ಲಪ್ಪ ನನ್ಗೆ ಅನುಮಾನ ಐತಿ
ಸರೆ ನಡ್ಯೆಪ್ಪಾ ಹೋಗೋನು ಅಂತ
ಆರು ಮಂದಿ ಹೆಂಡ್ರನ್ನ ಕರಕಂಡು
ತಾಯಿ ತಂದೇನ ಕರಕಂಡು

ಊರಾಕಾಗಿ ಮಗ ಬಂದಾನಮ್ಮೋ
ಶರಬಂದರಾಜಾ
ಹಳೆ ಮನೆಗೆ ಮಗ ಬಂದಾನಾ
ಬೀಗ ಒಂದೇ ಇನ್ನ ತೆಗದಾನೆ
ಆಗ ತಾಯಿನೇ ಕಂಡ್ರಿಸ್ಯಾನಮ್ಮಾ
ಆರು ಮಂದಿ ಹೆಂಡ್ರುನಾ    || ತಂದಾನ ||

ತಾಯಿ ತಂದೆಗೆ ಹೆಂಡ್ರನ್ನ ಕರಕಂಡು ಬಂದು
ಹಳೆ ಮನೆಗೆ ಬಂದ
ಬೀಗ ತೆರೆದು ತಾಯೀನ ಕುಂದ್ರಸಿದ
ಸುಡುಗಾಡು ರುದ್ರ ಭೂಮಿ ಬಿಟ್ಟು
ಆಗ ಏನಪ್ಪಾ ನಮ್ಮ ತಾಯೀನ
ಕೈಲಿ ಹಿಡಿಯೋದಿಲ್ಲ ಅಂತಿ
ನಮ್ಮ ತಾಯಿ ಸತ್ಯೆತೋರಿಸ್ತೀನಿ ನಡಿ
ನೀನು ಹಾಲು ಗೊಲ್ರವ್ನು
ನಿನಗೆ ಅನುಮಾನ ಜೀವಕ್ಕೆ ತಟ್ಟೈತೆ
ಅಂತ ತಾಯಿಗೆ ತುಂಬಿದ ಕೊಡಪಾನ ಹಾಕಿದ
ಬಿಳಿಸೀರೆ ಬಿಳೇಕುಬುಸ
ಉಡ್ಯಕ್ಕಿ ಹಾಕಿ ಸುಸುಗು ಹಾಕಿದ
ಆಗ ಎದೆ ಮಟ್ಟ ಕುಣಿ ತೋಡಿಸಿದ
ಗಂಧದ ಚೆಕ್ಕೆ ಹಾಕ್ಸಿದ
ತಾಯಿಗೆ ಬೆಂಕಿ ಕುಂಡದೊಳಗೆ ನಿಂದ್ರಿಸಿದ
ಆಗ ಎರಡು ಕೈ ಜೋಡಿಸಿದ
ಯಮ್ಮಾ ನೀನು ಉಟ್ಟಿದ ಸೀರೆ ಸುಡುಬಾರ್ದು
ಹಣೆ ಮ್ಯಾಲಿನ ಭಂಡಾರ ಕೆಡಬಾರ್ದು
ನಿನ್ನ ಇಟ್ಟಿದ ಕುಂಕುಮ ಕೆಡಬಾರ್ದು
ಈಗ ಬೆಂಕಿನ ಗುಂಡ ಹೋಗಿ
ಹಾಲುಗುಂಡುವಾಗಬೇಕು
ಹಾಲು ಗೊಲ್ರು ನಾವು
ಕ್ರಿಷ್ಣಗೊಲ್ರು
ಈಗ ನಿನ್ನ ಸತ್ಯೇವು ತೋರಸಬೇಕೇ ತಾಯಿ
ಅವಸತ್ಯವಿದ್ರೆ ದಗ್
ಉರಿದು ಬೂದಿ ಆಗಿ ಬಿಡು ಅಂತ ಅಂದ್ರೆ
ತಾಯಿನ ಗುಂಡಿ ಒಳಗ ನಿಂದ್ರಿಸಿ
ಧಗಧಗ ಉರೀತಿದ್ರೆ
ಅಯ್ಯಯ್ಯಮ್ಮಾ ಜನ ಲೋಕ ಏನಂತಾರ
ಅಯ್ಯಾಯ್ಯಮ್ಮಾ ರೊಟ್ಟಿ ತಿರುವ್ಹಾಕಿ ಹೋದೆ
ಆಗ ಹೆಂಚಿನ ಮ್ಯಾಲೆ ಬೊಳ್ಳು ಬಿದ್ದು ನೋಡೇ
ಎಷ್ಟ ಗಾಲ ಬೊಬ್ಬೆ ಹೋಂಟೈತಿ
ಆಯ್ಯ ನಾನ ಅನ್ನ ಬಗ್ಗಿಸುವಾಗ
ಬಿಸಿ ನೀರು ಬಿದ್ದಿದಿಗ್ಗೆ ನೋಡು
ಅರ್ಧಕಾಲು ಸುಟ್ಟುಹೋಗೈತೆ
ಅಯ್ಯಾಯ್ಯಮ್ಮಾ ಪುಣ್ಯಗಿತ್ತಿ ಬಿಡಮ್ಮ
ಹಾಲು ಗೊಲ್ರು
ಅಯ್ಯಯ್ಯಮ್ಮಾ ಬೆಂಕ್ಯಾಗ ನಿಂದ್ರಿಸಿ ಬಿಟ್ಟರೆ
ಏನಮ್ಮಾ ಸತ್ಹೋತಾಳ ಅಂಬೋರು ಅರ್ಧಮಂದಿ
ಎಲುಬಿಲ್ಲದ ಬಾಯಿ
ಏಯಮ್ಮ ಉಳಿಯೋದಿಲ್ಲ
ಆಯ್ತಮ್ಮ ಅಂಬೋರು ಅರ್ಧಮಂದಿ
ಎರ್ಡು ಕೈ ಜೋಡಿಸಿ ನಿಂತು ಬಿಟ್ಳು ತಾಯಿ

13_80_KMKM-KUH

ಯಮ್ಮಾ ಗುಂಡಕ್ಯಾಗಿ ಉರಿಯ ಹಚ್ಚಿದಾರ
ಯಮ್ಮಾ ಧಗಧಗ ಧಗ ಧಗ ಇನ್ನ ಉರೀತೈತೆ
ಯಮ್ಮಾ ಉರಿಯೋ ಗುಂಡ್ಯಾಗೆ ತಾಯಿ ನಿಂತಾಳೆ      || ತಂದಾನ ||

ಯಪ್ಪಾ ನೋಡು ನಮ್ಮ ತಾಯಿ ಸತ್ಯೇವು
ಹೌದಪ್ಪಾ ಈಗನ್ನ ಕೈಲಿ ಹಿಡಿ
ಯಪ್ಪಾ ಬೆಂಕ್ಯಾಗಿನ್ನ ನನ್ಗೆ ನಂಬಿಕೆ ಇಲ್ಲ
ಹಾಲು ಗುಂಡೇವು ಆಗಬೇಕು
ಸರಿ ಅಮ್ಮಾ ನಿಂತಲ್ಲಿ ಸತ್ಯವಿದ್ರೆ ಹಾಲು ಗೊಲ್ರು ನಾವು
ಬೆಂಕಿಯ ಗುಂಡ ಹೋಗಿ
ಹಾಲು ಗುಂಡವಾಗ್ಬೇಕು

ಯಮ್ಮಾ ಇನ್ನ ಹಾಲುದ ಗುಂಡುವಾಯಿತಮ್ಮ
ಹೇ ಮೊಣಕಾಲುದ್ದ ಹಾಲು ನಿಂತಾವಮ್ಮಾ     || ತಂದಾನ ||

ಧಗಧಗ ಉರಿಯೋಗುಂಡಾ ಹೋಗಿ ಹಾಲು ಗುಂಡಾ ಆಯಿತ್ತು
ಮಣಕಾಲಷ್ಟು ಹಾಲು ನಿಂತಾವಪ್ಪ ಗುಂಡದಾಗ
ಯಪ್ಪಾ ಈಗನ್ನ ನಮ್ಮ ಸತ್ಯೇವ ನೋಡಿದೇನಪ್ಪಾ
ಆವ ಸತ್ಯೇವಾ ನಿಜ ಸತ್ಯೇವಾ
ಅಂದ್ರೆ ಕಾಂಭೋಜರಾಜ ಏನಂತಾನ

ಬಾಮ್ಮಾ ಅಗಲಿಸಿದೆವ್ರು ಲೋಕ ಕಲಿಸಿನಲೇ
ಸಾಯ ಕಾಲಕ್ಕೆ ಗಂಡ ಹೇಳಿದಂತ
ಸಾಯೋತನಕ ನೋಡಾಲೆ ನಮ್ಮ ಜೀವ ತಪ್ಪಾಂಗಿಲಾಲೆ ಲೋಕ
ಚಿಕ್ಕ ಹೆಂಡ್ತಿ ಸಿರಿದೇವಿ ಬಾರಾಣಿ ಜೀವದವಳಾಲೆ          || ತಂದಾನ ||

ಚಿಕ್ಕ ಹೇಣ್ತಿ ಸಿರಿದೇವಿ ಬಾರೆ
ನೀ ನನ್ನ ಜೀವದವ್ಳೆ ಕೈ ಹಿಡಿಕೊಂಡ
ಕೈ ಹಿಡಕೊಂಬೋತ್ತಿಗೆ ಮಗ

ಊರೆಲ್ಲ ಮೆರವಣಿಗೆ ಮಾಡಿದಾನ
ತಾಯಿ ತಂದಿಗೆ ಮಗ ಹೊಂದಿಸ್ಯಾನ
ಊರು ಮಂದಿಗೆ ಊಟ ಕೊಟ್ಟಾನಮ್ಮ           || ತಂದಾನ ||