ಐದು ಮಂದಿ ಜಟ್ಟಿಯವರು ಹಿಡಿದ್ರೇನ
ಒಂದು ಗೇಣಷ್ಟು ಎಬ್ಬಿಸವಲ್ರು
ಒಂದು ಗೇಣನ್ನ ಎಬ್ಬಿಸಿರಲ್ಲ
ಎರಡು ಕೈಲಿ ಚೆಂಡು ಹಿಡಿಯೊದು
ಆಗ ಏನ್ಮಾವ
ನೂರು ನೂರು ಸಂಚುಗಾರ ಕೊಟ್ಟು
ಕರ್ಕಂಡು ಬಂದಿ
ಇವರನ್ನು ಏನ್ಮಾಡಬೇಕು ಮಾವ
ಈಗ ನಿನಗೆ ನನಗೆ ತಪ್ಪಂಗಿಲ್ಲ ಮಾವ
ಯಪ್ಪಾ ನನ್ನ ಕೈಲಾಗದಿಲ್ಲ
ನನ್ನ ಕೈಲಾಗದಿಲ್ಲ
ಮತ್ತೆ ಹ್ಯಾಂಗ ಮಾವ
ಚೆಂಡು ತಗಂಡು ಬಂದೆ
ಈ ಚೆಂಡು ಆಡಲಾರ‍್ದೆ
ಸುಮ್ನೆ ಯಾಕ ಕೈಯಾಗ ಹಿಡ್ಕೊಬೇಕು
ಅಂದ್ರೆ ನೋಡು ರಾಮ
ಯಾರಿಗೂ ಹಿಡಿಯಾಕ ಕೈಲಾಗದಿಲ್ಲ
ಒಂದೇ ಬಾಳೇಹಣ್ಣಿನಾಗ ಇಬ್ರು ಹುಟ್ಟಿರಿ
ನಿನ್ನ ಒಟ್ಟಿಗೆ ಹುಟ್ಟಿದ ತಮ್ಮ ಓಲಿಕ್ಯ

ಆಗ ಜೇಲಿದಾಗ ಐದಾನ ನೆಲಗರಡಿ ಒಳಗಪ್ಪ
s ನಿನ್ನ ತಮ್ಮ ಬಂದಾರೆ ಚೆಂಡು ಒಂದು ಹಿಡಿತಾನ
ಚೆಂಡು ಹಿಡಿತಾನ || ತಂದಾನ ||

ಚೆಂಡು ಹಿಡಿತಾನ ಆತನ ಬಿಟ್ರ ಯಾರಿಗೂ ಸಾಧ್ಯವಿಲ್ಲ
sriಸರಿ ಮಾವ
ನಮ್ಮ ತಂದಿ ಜೇಲಿದಾಗ ಹಾಕಿಬಿಟ್ಟಾನ
ಕೈಗ ಸರಪಣಿ ಕಾಲಿಗೆ ಸರಪಣಿ
ನೆಲಮನೆ ಗರಡಿಯೊಳಗೆ
ಮೂರು ಕಡ್ಡಿ ಬಾಕ್ಲ
ಒಂದೊಂದು ಒಣಕಿ ದಪ್ಪ ಇದಾವ
ಕಡ್ಡಿ ಬಾಕ್ಲ
ಮತ್ತ ಅದರಾಗಿರೊ ತಮ್ಮ ಹ್ಯಾಂಗ ಬರ್ತಾನ
ಅಯ್ಯೋ ಕರ‍್ಕಂಡು ಬರ‍್ತೀನಪ್ಪ ನಾನು ಅಂತ
ಸ್ವಾದರಮಾವ ಬಚ್ಚಣ್ಣ ಬಂದು
ಮೂರು ಬಾಕಿಲು ಹೊರಗೆ ನಿಂತಕಂಡು
ಯಪ್ಪಾ ಓಲಿಕ್ಯಾ ಈಗ ನಿಮ್ಮಣ್ಣ ರಾಮ
ಬಲಗೈ ಬಲದವನು ಚೆಂಡು ಹಿಡಿಯವರಿಲ್ಲ
ಮೈಸೂರು, ಬೊಂಬಾಯಿ ಗುಂತಕಲ್ಲು
ಅದೋನಿದವರನ್ನು ಕರ‍್ಕಂಡು ಬಂದಿವಿ
ಒಳ್ಳೆ ಒಳ್ಳೆ ಸ್ಟ್ರ‍್ಯಂಗ್‌ ಶಕ್ತಿಯವರನ್ನು
ಕರ‍್ಕಂಡು ಬಂದೀವಿ
ಯಪ್ಪಾ ಯಾವನೂ ಎಬ್ಬಿಸಲಿಲ್ಲ
ಈಗ ನೀನೇ ಎಡಗೈ ತಮ್ಮ ಬರಬೇಕು
ಅಣ್ಣಾ ಚೆಂಡಾಡಬೇಕು
ದುಃಖ ಮಾಡ್ತಾನಪ್ಪಾ ಒಲಿಕ್ಯಾ
ಶಬ್ದ ಕೇಳಿ

ಆಹಾ ಓಲಿಕ್ಯಾ
ಕೈ ಸರಪಣಿ ನೋಡಣ್ಣೋ
ಫಳ ಫಳ ಫಳ ಫಳ ಮುರದಾನ
ಕಾಲ ಸರಪಣಿ ನೋಡಣ್ಣ
ಎಡಗಾಲು ಝೂಡಿಸಿ ಬಿಟ್ಟಾನ
ಫಳಫಳ ಫಳ ಮುರದಾವ
ಜಾಡಿಸಿ ಬಲಗಾಲಿಂದ ಮೂರು ಬಾಕ್ಲ ಒದ್ದು ಬಿಟ್ಟ || ತಂದಾನ ||

ಫಳಫಳಫಳಫಳ ಮುರ‍್ದು ಕುಪ್ಪೆ ಬಿದ್ದು ಬಿಟ್ಟು
ಹೊರಾಗ ಬಂದುಬಿಟ್ಟ
ಶರಣು ಮಾವ ಬಚ್ಚಣ್ಣ
ಆಗ ಕೇಳಪ್ಪಾ ಅಳಿಯಾ
ಚೆಂಡು ಹಿಡಿಯರಿಲ್ಲ
ನಿನ್ನ ಕರೆಕಳ್ಸ್ಯಾನ ನೀನು ಬರಬೇಕು ಅರ್ಜೆಂಟ್‌
ಓಹೋ ಸರಿಮಾವ
ಈ ಒಂದು ಹೆಂಗ್ಸುನ ಕಾಲಾಗ ಕಳ್ಳತನ ಮಾಡ್ದೆ
ಈಗಿನವ್ರತ ಎಷ್ಟೋ ಮಾಡ್ಬಿಟ್ಟೆ
ಈಗ ನನ್ನ ಕಡ್ಯಾದ ಬದಲು ಆಕೀನ ಕಡಿತಾನೆಂದರೆ
ಛೀ ಕಡದರೆ ಇಬ್ಬರನ್ನೂ ಕಡೀಬೇಕು
ಇದ್ರೆ ಇಬ್ರೂ ಇರಬೇಕು ಉಳಿಬೇಕು ನಾವು
ಅಂತ ಅಂದಿದಿಗೆ ಮೂರುಕಾಸು ಹೆಣಿಸಿಗೆ
ಕೈ ಸರಪಣಾ ಕಾಲು ಸರಪಣ
ನೆಲಮನೆ ಗರಡಿಯೊಳಗ್ಹಾಕಿದ್ರು
ತಂದಿಮಾತ ಮೀರಬಾರ್ದಂತ ನಾನೀದ್ದಿನಿ
ಇಂಥಾ ಸರಪಣಿಗಳು ನನಗೆ ತಡೆಯೋದಿಲ್ಲ
ಇಂಥಾ ಬಾಕ್ಲುಗಳು ನನಗೆ ತಡೆಂಗಿಲ್ಲ
ಮತ್ತೆ ಏನ್ಮಾಡಬೇಕಪ್ಪ
ಏನಿಲ್ಲ ನಿನಗೆ ಮಗಳಾಗುತಾಳ
ನನಗೆ ಹೆಂಡ್ತಿ ಆಗತಾಳ
ನೀನು ಗ್ಯಾನಾಬುದ್ದಿ ಹೇಳಬೇಕು
ನಾನು ಚೆಂಡಾಡಕೋದ್ರೆ ಇತ್ತ
ಮನಿ ಬಿಟ್ಟು ಓಡ್ಹೋದ್ರೆ

ಯಮ್ಮಾ ಮನಿಬಿಟ್ಟು ಹೋಗ್ಬೇಡ
ನಿನಗೆ ಶರಣು ಮಾಡ್ತೀನಿ ನನ್ನ ಮಗಳೇ || ತಂದಾನ ||

ಶರಣು ಮಾಡ್ತಿನಿ ಮಗಳ
ನೀನು ಮನಿಬಿಟ್ಟು ಹೋಗ್ಬೇಡ
ಅಷ್ಟಾಗಲಪ್ಪ ಬಚ್ಚಣ್ಣ
ಆಗ ಓಲಿಕ್ಯನ್ನ ಕರ್ಕಂಡು
ಈಗ ಅಣ್ಣಂತಲ್ಲಿ ಬಂದ
ರತ್ನಾಕ್ಷಿ ಮನಿ ಕೆಳಗೆ ನಿಂತಾರಪ್ಪ
ಇಪ್ಪತ್ತೆಕ್ರಿ ಭೂಮಿ ಹಿಡಿಲಾರದಂಗ
ಈಗ ಗಬಗಬ ಮಂದಿ ಅಂತಿದ್ರೆ
ಮೂರು ಅಂತಸ್ತಿನ ಮ್ಯಾಗ್ಳಿದಾಗಿರೊ
ರತ್ನಾಕ್ಷಿ ನೋಡಿಬಿಟ್ಟು ಬಗ್ಗಿ
ಅಬಾಬಾಬಾ
ಇದೇನಮ್ಮಾ ಇದು ದೇವ್ರಾ ಜಾತ್ರೆಯಾ
ಏನು ವಿಚಿತ್ರ
ಇಷ್ಟು ಮಂದಿ ನಿಂತಾರ ನನ್ನ ಮನಿಕೆಳಗೆ ಅಂದ್ಳು
ಕಸವಳಿವ ಅಡ್ಗಿ ಮಾಡುವ ದಾಸಿ ಏನೆಂದಳು
ಅಯ್ಯೋ ನಿನ್ನ ಮಕ್ಳು
ಕೈಯಾಗ ಬೆಳೆದೋರು ಜೀವಗ್ಹುಟ್ಟಿದ ಮಕ್ಳು
ಚೆಂಡಾಡ್ತಾರೇ ಬಂಗಾರದ ಮುತ್ತಿನ ಚೆಂಡು
ಅಪಾಪಾಪಾಪಾ
ಯಮ್ಮಾ ಖರೆ ಬಂಗಾರದ ಚೆಂಡಾಡ್ತಾರಾ ನನ್ಮಕ್ಳು
ಯಾರು ಓಲಿಕ್ಯಾರಾಮ ರಾಮಯ್ಯ
ಓಹೋ ಸರಿ
ಯಮ್ಮಾ ಕೆಳಾಗಡಿ ಮಕಾದವನು ಅವನು ಯಾವನು
ಅಯ್ಯೋ ಏನಮ್ಮಾ ಅವರು ಯಾರಂತ ಕೇಳ್ತೀಯಾ
ಈಗ ಜೀವದಲ್ಲಿ ನಿನ್ನ ಚಿಕ್ಕಮಗ
ಓಲಿಕ್ಯ ಒಟ್ಟಿಗೆ ಹುಟ್ಟಿದವ್ನು
ಬಾಳೆಹಣ್ಣು ತೊಗಲಿಗುಟ್ಟಿದವ್ನು
ಸರಿ ಮ್ಯಾಗಡೆ ಮಕಾದವನು ಯಾವೋನು
ಯಮ್ಮಾ ಬೊಂಬಾಯಿ ಜಟ್ಟಿ ಅವ್ನು
ಛಿ ಛೀ ಅಲ್ಲವೇ ಅವನ ಬಗಲಾಗ ಇರೋನು
ಗುಂತಕಲ್ಲಿ ಜಟ್ಟಿಯವನು, ಛೀ ಛೀ ಛೀ ಅವ್ನು ಅಲ್ಲವೇ
ಅವ್ನು ಬಗಲಾಗಿರೋನು

ಆತಮ್ಮ ರಾಮಯ್ಯ ನಿನ್ನ ಫೋಟು ತೋರಿಸಿದ ರಾಮಯ್ಯೋ
s ಸೂರ್ಯ ಕಂಡಾಂಗ ಕಾಣ್ತಾನ ಕತ್ತಲು ಮನ್ಯಾಗ ನೋಡಣ್ಣ
ದೀಪ ಕಾಣ್ದಂಗ ಕಾಣ್ತಾನ ಮಗ || ತಂದಾನ ||

ಚಂದ್ರ ಚಂದ್ರ ಕಾಣ್ದಂಗ ಕಾಣ್ತಾನಪ್ಪ
ಮಗನನ್ನ ಮ್ಯಾಗಡೆ ಮಖ ಆಗಿದ್ದೋನು
ಓಹೋ ಆತೇ ನನ್ನ ಜೀವ ತಗ್ದ
ರಾಮಾ ಏಸು ದಿನಗ ನೋಡ್ದೆ
ಮೂರು ಅಂತಸ್ತಿನ ಮನ್ಯಾಗಲಿದ್ದ ಹ್ಯಾಂಗ ಬಂದು
ಇಷ್ಟು ಮಂದಿ ಲೋಕದಾಗ ನಾನು ಕೈಹಿಡೀಲಿ ನಿನ್ನ
ಈ ರಾಮ ಹ್ಯಾಂಗಾದ್ರೆ
ಈ ಮೂರು ಅಂತಸ್ತ ಮನ್ಯಾಕ ಬರ್ತಾನ
ಯಮ್ಮಾ ಗಾಳಿ ಮಾರೆಮ್ಮಾ
ಆನೇಗುಂದಿ ಪಟ್ಣ ತಾಯಿ
ಯಮ್ಮಾ ಆದಿಶಕ್ತಿ ಹನ್ನೆರಡು ಕೈಯಾಕಿ

ಬರೆಮ್ಮ ತಾಯವ್ರೆ ನಿಮಗ ಕೈ ಮುಗಿದೇನ || ತಂದಾನ ||

ಯಮ್ಮಾ ನಿನಗೆ
ಏಳು ಬ್ಯಾಟಿ ಕಡೀತಿನಿ ಗಾಳಿದೇವತಿ
ಯಮ್ಮಾ ಆದಿಶಕ್ತಿ
ನಿನಗೆ ಮೂರು ಕೋಣ ಕಡೀತಿನಿ
ಮೂರು ಖಂಡುಗ ಕುಂಭ ಹೋರುತ್ತೀನಿ
ತಾಯಿ ಬರ್ಯೊಬೊತ್ತಿಗೆ ಅಕ್ಕತಂಗೇರು
ಆದಿಶಕ್ತಿ ಅಕ್ಕ
ಗಾಳಿ ದೇವತಿ ತಂಗಿ
ಇಬ್ರು ಬಾಯಿ ತೆರಕಂಡು ಬಂದ್ರು
ಏನಮ್ಮಾ ರತ್ನಾಕ್ಷಿ
ಏನಿಲ್ಲಾ
ರಾಮನ ಚೆಂಡು ತಂದು
ನನ್ನ ಮನ್ಯಾಕ ಒಗದು ಹೋಗ್ರಿ
ಅಂಬೊತ್ತಿಗೆ ಸರೆಮ್ಮಾ
ರಾಮನ ಚೆಂಡು ತಂದು ನಿನ್ನ ಮನ್ಯಾಕ ಒಗ್ದು
ನನ್ನ ಮನಿಗೆ ನಾನು ಹೋತಿನಿ
ಆಕಿ ಮನಿಗೆ ಆಕಿ ಹೋತಾಳ
ಯಾರು ಮಠಕ್ಕ ಅವ್ರು ಹೋತಿವಿ
ಈಗ ನೀನು ಮಾಡಬೇಕು
ತಾಯಿ ನಿನ್ನ ಪಾದಾಗ್ನಿ
ನಾನು ಭೂಮಾಗ್ನಿ
ನಾನು ಮಾಡ್ತೀನಮ್ಮ ನಿಮಗೆ
ಇದೊಂದು ಗೆದಿಬೇಕು
ಚೆಂಡು ಬಂದು ಬಿದ್ದು ರಾಮ ಬಂದು ಹೋದ್ರೆ
ನಿಮಗ ಮಾಡ್ತೀನಿ ನಾನು
ಓಹೋ ಅಷ್ಟೇ ಆಗಲೆಮ್ಮ
ವರವು ಕೊಟ್ರಲ್ಲ
ವರವು ಕೊಟ್ಟ ತಾಯಿಗ
ತಲೆಕೊಟ್ಟು ಶರಣ ಮಾಡ್ತಾರ
ವರವು ಕೊಡಲಾರದ ದೇವ್ರಿಗೆ
ಯಾರು ನಡಕಂಬಂಗಿಲ್ಲ
ಅಂತಕೇಳಮ್ಮಾ ತಂಗಿ
ನೀನು ಗಾಳೆಮ್ಮಾ ಏಳು ಮರಕೂಟ ಆ ಮಣ್ಣು
ತುಂಬಿಕ್ಯಂಡು ಕೈಯಾಗ ಹಿಡ್ಕೋ
ನಾನು ಆದಿಶಕ್ತಿ ಹನ್ನೆರಡು ಕೈ ಚಾಚಿಕೊಂಡಿರ್ತಿನಿ
ರಾಮ ಚೆಂಡು ಒಗದಾಗ ನಾನು ಹಂಗೆ ಹಿಡಿಕೊಂತಿನಿ
ಅವರ ಕಣ್ಣಿಗೆ ಮಣ್ಣು ತೂರಿ ಬಿಡು
ಆಗ ಕಣ್ಣು ಮುಚ್ಚಿಕ್ಯಂತಾನ
ನಾವು ಮನ್ಯಾಕ ಹೋಗಿಬಿಡಾನ
ನಿನ್ನ ಮನಿಗೆ ನೀನು ಹೋಗು
ನನ್ನ ಮಠಕ್ಕೆ ನಾನು ಹೋಗ್ತಿನಿ
ಅಷ್ಟಾಗಲೆಂತ
ಮಾಳಿಗೆ ಮ್ಯಾಲೆ ನಿಂತಕಂಡಾರಪ್ಪ ಅವ್ರು
ಏನಪ್ಪಾ ತಮ್ಮಾ
ಈಗ ನಾನು ಹಾಕ್ತಿನಿ
ನೀನ್ಹಿಡಿಬೇಕು ಎಡಗೈ ಬಲ
ಸರೆ ಅಣ್ಣ
ಇವ್ರೆಲ್ಲಾ ಯಾಕ ಬಂದಾರಣ್ಣಾ
ಒಬ್ಬೊಬ್ನು ಹುಣಸೇ ಗಿಡದ ಬೊಡ್ಡ ಆಗ್ಯಾರ
ಅಯ್ಯೋ ಅವರೆ
ನೂರು ನೂರು ರೂಪಾಯಿ ಸಂಚಗಾರ ತಗೊಂಡೊರ
ಚೆಂಡ್ಹಿಡಿಲಿಕ್ಕಿ ಬಂದಾರಾ

s ಚೆಂಡು ಹಿಡಿಲಾರದವರು ನೀವ ಎದಕ್ಕಾಗಿ ಬಂದೀರಿ
s ಚೆಂಡು ನೋಡಾಂಗಿದ್ದರೆ ಸುಮ್ನೆ ಬಂದುನಿಂತ ನೋಡಬೇಕು || ತಂದಾನ ||

ಚೆಂಡು ಎತ್ತಲಾರದೆ ಕೈಲಾಗಲಾರದೆ
ನೂರು ರೂಪಾಯಿ ಸಂಚುಗಾರ ತಗಂಡು ಬರ್ತೀರ್ಯಾ
ಕೇಳವೋ

ಈಗ ನಿಮ್ಮ ತಲಿಮ್ಯಾಲಲೇ ನಾನು ಚೆಂಡು ಒಗದು ಬಿಟ್ಟೇನ || ತಂದಾನ ||

ನಿಮ್ಮನ್ನ ನೂರು ರೂಪಾಯಿ ಜೀವ ಕಳೀತೀನಿ
ಅಂದ್ರೆ ತಮ್ಮ ಅವರು ಕಡಿಗೆ ನೋಡಿ
ಏನೋ ಮಾತಾಡ್ತಿದ್ದೆ
ನೀನು ತಂಟೆ ಓಲಿಕ್ಯ
ನೀನಿನ್ನು ಕೇಡುಗದವ್ನು
ಯಪ್ಪಾ ತಂದಿ ನೋಡಿದ್ರೆ ಮನ್ಯಾಗಿಲ್ಲ
ಬ್ಯಾಟಿ ಮಾರ್ಗ ಹೋಗ್ಯಾನ
ನೀನ ಏನನ್ನ ಯಾರಿ ಕಡಿಗೆನ್ನ ಒಗ್ಯಂಗಿದ್ರೆ ಬ್ಯಾಡ
ಇಲ್ಲಣ್ಣಾ ನೀನಾಜ್ಞೆ ನಾನು ಒಗ್ಯದಿಲ್ಲಣ್ಣ
ಈಗ ನಾನು ಹಾಕಿದ್ರೆ ನೀನ್ಹಿಡಿ
ನೀನ್ಹಾಕಿದ್ರೆ ನಾ ಹಿಡೀತಿನಿ ಅಂದ
ಅಷ್ಟಾಗಲ್ಲಪ್ಪಾ ತಮ್ಮಾ ಮೊದ್ಲು ನೋಡೊ
ಅಷ್ಟಾಗಲೆಣ್ಣಾ

ಆಹಾ ಚೆಂಡು ಹಿಡ್ದ
ರಾಮ ಬಂದು ನೋಡಣ್ಣ
ಎಲ್ಲಿ ವೈಯ್ದಿ ನನ್ನ ಸ್ವಾಮಿs
s ಜೀವಕೊಟ್ಟ ಪರಮಾತ್ಮ
ಶಿವನು ಅಂತ ನೆನಸ್ಯಾನ
ಆಗ ಮಗ ನೋಡಣ್ಣೋ
ಬೀಸಿ ಬೀಸಿ ಒಗದಾಗ
ಗಡ್ಗಡ್ಗಡ್ಅಂತ ತಿರುಗ್ಯಂತ
ಚೆಂಡುಮ್ಯಾಕ ಬಂದೈತೋ
ಬಂದುವಾಗ ನೋಡಣ್ಣ
ಆಗ ಜೀವದಾಗಣ್ಣೋ
ಚೆಂಡು ತಿರುಕ್ಯಂತ ಬಂದೈತೋ
ಕುಪ್ಪಳ್ಸಿ ಪರಿಕಡ್ದೊ
ಎರಡು ಕೈಲಿ ಹಿಡಿದಾನ ಇನ್ನ ಕುಪ್ಪಳ್ಸಿ ಹಾರ್ಯಾನ || ತಂದಾನ ||

ಕುಪ್ಪಳ್ಸಿ ಹಾರಿಬಿಟ್ಟ
ತಮ್ಮಾ ನಾನು ಒಗದ್ರೆ
ನೀನು ಹಿಡಿಕ್ಯಂಡೆಪ್ಪ ಜೀವದಲ್ಲಿ
ಆಗ ಜಲ್ಮದಲ್ಲಿ ಏನ್ಮಾಡಿದ
ಸರೆಣ್ಣಾ ಮತ್ತ ಈಗ ಏನ್ಮಾಡೋಣ
ನಡೆಪ್ಪ ಹೋಗಾನ
ನಾನು ಒಗ್ದೆ ನೀನು ಹಿಡ್ಕಂಡಿ
ಹಾಂಗಲ್ಲಣ್ಣಾ
ಈಗ ಎಡಗೈ ಬಲ ನಾನು
ಬಲಗೈ ಅಣ್ಣಾ ನೀನು
ನೀನು ಆಡಿದಿ ನಾ ಹಿಡಕ್ಯಂಡಿನಿ
ಮತ್ತ ನಾ ಹಾಕಿದ್ರೆ ನೀ ಹೊಡ್ಕೋ
ಇನ್ನ ಆಗ್ಯೋತು ಹೋಗಿಬಿಡಾನ
ಸರಿ ತಮ್ಮ ಭಾಳ ಹುಷಾರ
ಹಂಗ ಆಗಲೆಪ್ಪ ಅಂದ

ಆದಿಶಕ್ತಿ ನೋಡ್ತಾಳ
ಗಾಳಿ ಮಾರಿ ನೋಡ್ತಾಳ
ಚೆಂಡು ಒಂದು ಓಲಿಕ್ಯಾ
ಇನ್ನ ಬಲಕ ತೋರಿಸ್ಯಾನ
ಮುಂದಾಗಿ ತೋರಿಸ್ಯಾನ
ಎಡಕ್ಕಾಗಿ ಒಗದಾನ ಜಟ್ಟಿಹಾರಿ ಮ್ಯಾಕ ನೋಡಣ್ಣ || ತಂದಾನ ||

ಜಟ್ಟಿಗನ ಮ್ಯಾಕ ಒಗದಾರೆ
ಮರ್ರ್ ಅಂತ ಬಂದೈತೋ
ಬೆಂಕಿ ಬಂದಂಗ ಬಂದೈತೋ
ತೋಪ್ತೋಪ್ತೋಪ್ಅಂತ
ತಲಿಗೆ ಬಡಕಂತಾವ
ಅಬ್ಬ ಸತ್ತೀವಿ ಅಂತಾರ
ನೂರು ಮಂದಿ ಸಾಯ್ವಾಗ
ಗಾಳಿಬೀಸಿ ತೂರ್ಯಾಳ
ಆಗ ಆದಿಶಕ್ತಿ ಅಣ್ಣೋ
ಎರಡ ಕೈಲಿ ಹಿಡದಾಳ ರತ್ನಾಕ್ಷಿ ಮನ್ಯಾಕ ಒಗದಾಳ || ತಂದಾನ ||

ರತ್ನಾಕ್ಷಿ ಮನ್ಯಾಕ ಒಗದ ಹೊತ್ತಿಗೆ
ಹೋಗಮ್ಮ ನಿನ್ನ ಮಟ್ಟಿಗೆ ನೀನು
ನನ್ನ ಮಟ್ಟಿಗೆ ನಾನು ಅಂತ
ಗಾಳಿದೇವತೆ ಹೋಯ್ತು
ಇನ್ನ ಆದಿಶಕ್ತಿ ಹೋಯ್ತು
ಚೆಂಡು ಬಿದ್ದ ಹೊತ್ತಿಗೆ
ಮಾಳಿಗೆ ಮ್ಯಾಲಿದ್ದ ತೂತು ಬಿದ್ದುಕೊಂಡು
ಮನ್ಯಾಗ ಬಿದ್ದ ಮ್ಯಾಲೆ
ಆಗ ಪುಟ್ಟಿ ಮುಚ್ಚಿಬಿಟ್ಲಪ್ಪ ಕಬ್ಬಿಣ ಪುಟ್ಟಿ
ಆಗ ರತ್ನಾಕ್ಷಿ ವರಸಿನ ಮ್ಯಾಲೆ ಕುಂತಗಂಡ್ಲು
ಆಗ ರಾಮ ನೋಡ್ದ
ಮಾವ ನಮಗೆ ಕೆಂಪುಗಾಳಿ ಎದ್ದು ಬಿಡ್ತು
ಆಗ ಮಣ್ಣು ತೂರಿಬಿಡ್ತು
ಕಣ್ಣು ಮುಚ್ಚಿಗ್ಯಂಡಿವಿ

06_80_KMKM-KUH