ಓರಗಲ್ಲ್ಯಾಗ ನೋಡಿ ಬಿಟ್ರಪ್ಪ
ಯಾರು
ಕುಲಕ್ಕಾಗು ಹುಡುಗ್ರು
s ಬಂದ ಬಂದ ರಾಮಯ್ಯ ಕುದುರಿ ಹಿಡ್ಕಂಡು ರಾಮಯ್ಯ || ತಂದಾನ ||

ಏs ಬರ್ತಾನಪ್ಪ ಗಣಪತಿ ರಾಜ
ಏ ಯ್ಯಪ್ಪ ಎರಡು ಚೀಲ ಮಂಡಾಳು ಹೋದವೋ
ಚೀಲ ಕಡ್ಲೆ ಹೋದವೋ
ನೀವೇನು ತಿಂದು ಬಿಟ್ರಿ
ನಂದು ನಷ್ಟ ಆಯ್ತು
ನಾವೇನ್ಮಾಡಣಪ್ಪ
ನೀ ತಂದುಕೊಟ್ರೆ
ರಾಮ ಸತ್ತೋ ಅಂದ್ವಿ
ಸಾಯಲಿಲ್ಲ

ಸಾಯೋ ರಾಮವಲ್ಲಪ್ಪ ಲೋಕವಿನ್ನವ್ರ ರಾಮಯ್ಯ || ತಂದಾನ ||

ಗಣಪತಿ ರಾಜನತಲ್ಲಿ ಬರೋ ಹೊತ್ತಿಗೆ
ಶರಣ್ರಿ ರಾಮದೇವ
ಏs ಶಾಸ್ತ್ರ ಹೇಳವ್ರೆ
ಏನಪ್ಪ ಗಣಪತಿ
ರಾಮ ಸಾಯಲಿಲ್ಲ
ಕುದುರಿ ಹಿಡ್ಕಂಡ ಬಂದ
ಹ್ಯಾಂಗ ಮಾಡನಪ್ಪ
ಮೇ ಮಂತ್ರ ಓದ್ರಿ
ಏ ನಮ್ಗ ಸಾದ್ಯವಿಲ್ಲಪ್ಪ
ಮತ್ತೇನು ಮಾಡಬೇಕು
ಮಂತ್ರ ಓದವ್ರೇ
ಏನಿಲ್ಲ
ನಿಂದು ಬಂಗಾರ ತಖ್ತಿಐತಿ
ದೇವರು ಕುಂದ್ರಸೋದು
ಆ ತಖ್ತಿಮ್ಯಾಲೆ ಕುಂದ್ರಿಸಿಬಿಡು
ಇರ್ವಿ ಕುಂತಗಂಡ್ರೆ ದಗ್ಗನೆ ಉರಿತೈತಿ
ರಾಮನ ಕುಂದ್ರಸಿದ್ರೆ
ತಖ್ತದ ಮ್ಯಾಲೆ ಕುರ್ಜಿಮ್ಯಾಲೆ

ಈಗ ರಾಮನ ಒಂದೇ ತಲೆ ಒಡದೊತಾದ
ರಾಮ ಸತ್ತೋಗಿ ಬಿಡ್ತಾನ || ತಂದಾನ ||

ಸುಟ್ಟು ಬೂದಿ ಆಗ್ತಾನಂದ
ಸರಿಬಿಡು ಅಂತ
ಆಗ ಈಶ್ವರಯ್ಯಾನ ತಖ್ತು
ಈಶ್ವರ ದೇವರು ಕುಂದ್ರಿಸೋದು ಪಾಲಕ್ಯ
ಬಂಗಾರದ ಪಾಲಕಿ ಮ್ಯಾಲೆ
ರಾಮಾ ಇದರ ಮ್ಯಾಲೆ ಕುಂದ್ರಪ್ಪ
ಸಾಯ್ತಾನಂತ ತಿಳಕಂಡಾನ
ಯಾರು ಗಣಪತಿ
ಆಗ ಎರಡು ಕೈ ಜೋಡ್ಸಿ
ಸ್ವಾಮಿ ನನ್ನ ಕೊಟ್ಟಿದ ಈಶ್ವರನೇ
ನನ್ನ ಕಾಪಾಡಬೇಕಪ್ಪ ಅಂತ

ಬಲ ಪಾದವಿಟ್ಟು ಮಗ ಕುಂತಾನಮ್ಮಾ
ರಾಮ ದೇವರು ಕಂಡಂಗ ಮಗ ಕಾಣುತಾನಾ
ಕತ್ತಲ ಮನೆಯ ದೀಪ ಕಂಡಿದಂಗೆ
sಚಂದ್ರ ಕಾಣದಂಗ ಮಗ ಕಾಣ್ತಾನ || ತಂದಾನ ||

ಕತ್ತಲ ಮನ್ಯಾಗ ದೀಪ ಕಂಡ್ಹಂಗ
ಚಂದ್ರ ಕಾಣ್ದಂಗ ಕಾಣ್ತಾನಪ್ಪ
ಥಳಥಳಥಳ ಅಂತ
ವಜ್ರ ವಜ್ರ ಮೆರ್ಗಿದಂಗ ಮೆರಿತಾನಪ್ಪ
ಆಗ ಒಂದು ಗಂಟೆ ಕುತ್ಗಂಡ ತಖ್ತಿಮ್ಯಾಲೆ
ಪಾಲ್ಕಿಮ್ಯಾಲೆ ಒಂದು ಗಂಟೆ ಕುತ್ಗಂಡ ಮ್ಯಾಲೆ
ಗಣಪತಿ ರಾಜ ನೋಡ್ದ
ಲೇ ಸಾಯೋದಿಲ್ಲಪ್ಪ ಮಂತ್ರ ಓದವರೆ
ನೋಡು ರಾಮ ಬೇಷ್ ಕುಂತ್ಕಂಡಾನ
ಒಂದು ಇರುವಿ ಕಂತಗಂಡ್ರೆ
ಸತ್ತೋತಿತ್ತು ಬೂದಿ ಆಗ್ತಿತ್ತು
ಒಂದು ನೋಣ ಕುಂತಗಂಡ್ರೆ ಬೂದಿ ಆಗ್ತಿತ್ತು
ರಾಮ ನೋಡು ಗಂಟೆಗೊಂದು ಬಣ್ಣ ಕಾಣ್ತಾನ
ಮತ್ತ ಹ್ಯಾಂಗ ಮಾಡಾನಪ್ಪ
ನೀನೇ ಬೇಡಿಕೆಬೇಕಪ್ಪ ರಾಮನ್ನ
ಶರಣಪ್ಪಾ ರಾಮಯ್ಯ
ಎದಕಾಗೀ ಬಂದಿಯಿ
ಲೇ ಇಪ್ಪತ್ತಳ್ಳಿ ಆರವತ್ತೂರು ರೊಕ್ಕಾ
ಯಾರಿಗಿ ಕೊಡ್ತಿ ನೀನು
ಗಣಪತಿರಾಜ
ಮನೆ ಬಾಡಿಗೆ ಹೊಲದ ಗುತ್ತ ವಸೂಲು ಮಾಡಿ
ನೀನು ಯಾರಿಗಾಗಿ ಕಳಿಸ್ತಿ ನಿನ್ನ ರೊಕ್ಕ
ನೋಡ್ರಿ ಡಿಲ್ಲಿ ಬಾದಶಾಹನಿಗೆ
ಡಿಲ್ಲಿಗೆ ಹೋಗುತೈತಿ
ಈ ಗಣಪತಿ ತಾವಾಗಿ ನಾನೇ ಕೊಟ್ಟು ಖಳಿಸಬೇಕ್ತಿ
ಮನೆ ಬಾಡಿಗೆ ಹೊಲ ಗುತ್ತ ವಸೂಲಿ ಮಾಡಿ
ಈಗ ಲಕ್ಷ ಇನ್ನ ಡಿಲ್ಲಿಗೆ ಖಳಿಸಬೇಕು
ಆಗ ನನಗೆ ಆಗಿನ್ನ ಸಾವಿರ ರೂಪಾಯಿ
ಸಂಬ್ಳ ಕೊಡ್ತನ
ಸರಿ ಇದು ಕರ್ಣಾಟ ಇಲಾಖೆದಲೈತಿ ಓರಗಲ್
ಆಗಿನವ್ರಿಗೆ ತಾವಾಗಿ ರೊಕ್ಕ ಖಳಿಸಬೇಕಾ ನಾವು
ಇಗೋ ಇಪ್ಪತ್ತಳ್ಳಿ ರೊಕ್ಕ ಅರವತ್ತೂರು ರೊಕ್ಕ ನನಗೆ ಕಟ್ಟು
ಆನೆಗೊಂದಿ ರಾಮನಿಗೆ
ರಾಮ ನೀನು ಕಟ್ಟಿಕ್ಯಂಡು ಹೋದ್ರೆ
ಈಗ ಡಿಲ್ಲಿಯವ್ನು ಬಂದು
ಆಗ ನನ್ನ ಕುತ್ಗಿ ಕೊಯ್ಸಾನ
ನಾ ಗಣಪತಿ ನನ್ನ ಜೀವತಗ್ದು
ನನ್ನ ಓರುಗಲ್ಲು ಆಗ ನಾಶನ ಮಾಡ್ತಾನ
ಏ ಹಾಂಗಲ್ಲಾ
ನಿನಗೆ ಪತ್ರ ಬರ‍್ದು ಕೊಡ್ತಿನಿ
ಡಿಲ್ಲಿಗೂ ಕಳಿಸ್ತಿನಿ ನಾನು
ಹಾಂಗಾರೆ ಕೊಡ್ತಿನಿ ನಾನು
ಹಾಂಗಾರೆ ಕೊಡ್ತಿನಿ ರಾಮ
ಏ ಡಿಲ್ಲಿ ಬಾದಶಾಹ
ಗೋಲ್ಕೊಂಡ ನವಾಬುದಾರ
ಡಿಲ್ಲಿ ಪಟ್ನಾದಾಗಿರೋನೆ
ಆಂಧ್ರ ಡಿಲ್ಲಿ
ಆಗಿನ್ನವ್ರು ಪಟ್ನದಾಗ
ಆಂಧ್ರ ಎಲ್ಲಾ ನಿಂದು
ಕರ್ಣಾಟೆಲ್ಲಾ ನಂದು
ಇಗೋ ನಿನ್ನ ಕೆಳಗನ ಮಂತ್ರಿ
ಈಗ ನಾನು ತಳವಾರ‍್ರು
ಕೋಲು ಹಿಡಿಯೋನು
ಇಪ್ಪತ್ತಳ್ಳಿ ಇನಾಮು ಆಯ್ತು
ಅರವತ್ತೂರು ಸಂಬ್ಳ ಆಯ್ತು

ಇಗೋ ನಮ್ಮ ಕರ್ನಾಟ ದೇಶ ಎಲ್ಲಿಗೈತೋ
ಕರ್ನಾಟ ರೊಕ್ಕ ನಯ್ಯಾಪೈಸ ಆಂಧ್ರಕ್ಕ ಖಳಿಸೋದಿಲ್ಲ
ಈಗ ಆಂಧ್ರ ಎಲ್ಲಾ ನಂದು
ಕರ್ನಾಟವೆಲ್ಲಾ ನಂದು
ಇಗೋ ಗಣಪತಿ ರಾಜನ ರೊಕ್ಕ
ಇಪ್ಪತ್ತಳ್ಳಿ ಅರವತ್ತೂರು ರೊಕ್ಕ
ನಾನು ಆನೆಗೊಂದಿ ರಾಮ ಒಯ್ತಿದ್ದೀನಿ
ಅವನು ಗಣಪತಿ ರಾಜನ್ನ ಯುದ್ಧ ಮಾಡಬಾರ್ದು
ಅವನ್ನ ಕೊಲ್ಲುಬಾರ್ದು
ಬರೋನಾದ್ರೆ
ಡಿಲ್ಲಿ ಪಟ್ನದಿಂದ ಏಸು ಮಂದಿನ್ನ ಕರ್ಕಂಡು ಬರ್ತಿಯ
ಕರ್ಕಂಡು ಬಾ ಆನೆಗೊಂದಿಗೆ
ರಾಮನ್ನ ಮ್ಯಾಲೆ ಯುದ್ಧ ಮಾಡು
ಆನೆಗೊಂದಿ ಹಾಳು ಮಾಡಿ
ಆನೆಲ್ಲಿದ್ದ ತುಳ್ಸಿ
ನನ್ನ ರೊಕ್ಕ ನನ್ನ ರಾಜ್ಯ ನೀನೇನ ಗೆಲ್ಲೂ
ಇಲ್ಲದಿದ್ರೆ ನಾನು ಡಿಲ್ಲಿ ಪಟ್ನಕ್ಕೆ ಬಂದು

ನಿನ್ನ ನಾನಾಗಿ ಕಡದೇನ ನಾನು ಡಿಲ್ಲಿ ರಾಜ್ಯವಾಳೇನ || ತಂದಾನ |

ಅಂತ ಪತ್ರ ಓದಿಬಿಟ್ಟ
ಪತ್ರ ಬರ್ದು ಗಣಪತಿ ರಾಜಗೆ ಕೊಟ್ಟ
ಕಟ್ಟಪ್ಪ ನನ್ನ ರೊಕ್ಕ ಅಂದ
ಇಪ್ಪತ್ತಳ್ಳಿ ಅರವತ್ತೂರು ಲೆಕ್ಕ
ಮಾಡಿಕಟ್ಟಿದ
ರಾಮ ಕಟಿಕ್ಯಂಡ
ಹೋತಿನೆಲ್ಲೊ
ಆಗ ಬ್ಯಾಗರ ಸುಂಕ
ಕುದುರಿ ಸಲುವವನೆ
ಅವನೇನು ಮಾಡ್ದ
ನನಗೆ ಏಳು ಮಂದಿ ಇದಾರ
ಈಗ ತಿಂಗಳಿಗೆ ಮುನ್ನೂರು ರೂಪಾಯಿ ಸಂಬ್ಳ ಬರ್ತೈತಿ
ಸುಮ್ನೆ ಕೊಬ್ರಿ ಬಟ್ಲ ಇಡೋದು
ನೀರು ಕುಡ್ಸೋದು
ಕುದುರಿ ಮೈ ತೊಳ್ಯೊದು
ಈಗ ಐದು ರೂಪಾಯಿ
ಹತ್ತು ರೂಪಾಯಿ ಕೂಲಿ ಮಾಡೊದ್ರಿಂದ
ಹೆಂಡ್ರು ಮಕ್ಳು ಉದ್ಧಾರ ಆಗೋದಿಲ್ಲ
ಛೆ ಆಗ ಆನೆಗೊಂದಿಲಿದ್ದ ನಾನು ಖಳಿಸ್ತಿನಿ
ಈಗ ಓರುಗಲ್ಲಿಗೆ
ನನ್ನ ಹೆಂಡ್ರು ಮಕ್ಕಳು ಊಟ ಮಾಡ್ತಾರಂತ
ಶರಣಪ್ಪೋ ರಾಮಯ್ಯ
ಈ ಕುದುರಿ
ಯಾರಿಟ್ರೂ ನೀರು ಕುಡಿಯೋದಿಲ್ಲ
ಯಾರು ಇಟ್ರೂ ಮೇವು ಮೇಯೋದಿಲ್ಲ
ಕೊಬ್ರಿ ಬಟ್ಲ ಇಡಬೇಕು
ಆಗ ಬೇಸಿ ಕುಟ್ಟಿ ಇಡಬೇಕು ಬುಟ್ಟ್ಯಾಗ
ನಾನಿಟ್ರೇನೆ ನೀರು ಕುಡಿಯೋದು
ನಾನಿಟ್ರೇನೆ ಮೇವು ಮೇಯೋದು
ನನ್ನ ಕರ್ಕಂಡು ಹೋದ್ರೆ ಈ ಕುದುರಿ ಉಳಿತೈತಿ
ಇಲ್ಲದಿದ್ರೆ ಆನೆಗುಂದ್ಯಾಗ ಉಳಿಯೋದಿಲ್ಲ
ಮತ್ತ ಹ್ಯಾಂಗ ಮಾಡ್ಬೇಕಲೆ
ನೀನು ಕುದುರಿ ಮ್ಯಾಲೆ ಕುಂದ್ರಿತಿಯಾ
ಏ ಯ್ಯಪ್ಪ ಕಣ್ಣು ತಿರುಗ್ಯಾಡ್ತಾವ
ನಾನು ಸತ್ತೋತಿನಿ
ಮತ್ತ ಹ್ಯಾಂಗ ಮಾಡ್ಬೇಕು
ಗೋಣಿ ಚೀಲದಾಗ್ಹಾಕಿ ನನ್ನ ಕಟ್ಟಿ ಬಿಡು
ಆಗ ಸೇದು ಹಗ್ಗ ಹಾಕಿ
ಕುದುರಿ ಹೊಟ್ಟೆ ಅಡೇಲಿ ಕಟ್ಟು
ನೀನು ಕುದುರಿ ಮ್ಯಾಲೆ ಕುಂದ್ರು
ಆನೆಗುಂದ್ಯಾಗ ಇಳಿಸುವಂತಿ
ಮತ್ತ ಹಂಗಾದ್ರೆ ನೀನು ಏನು ಅನಬಾರ್ದು
ಏನು ಅಂಬೋದಿಲ್ಲ
ಆಗ ನಾನು ಗೋಣಿ ಚೀಲದಾಗ ಇರ್ತಿನಿ
ನನಗೇನು ಕಾಣತ್ತೈತಿ
ಸರಿಬಿಡು ಅಂತ ಗೋಣಿ ಚೀಲದಾಗ ಕುಂತ್ಗಂಡ
ಬಾಯಿ ಕಟ್ಟಿದ
ಆಗ ಸೇದೂ ಹಗ್ಗ ಹಾಕಿ ಹೊಟ್ಟೆ ಅಡೇಲಿ ಕಟ್ಟಿದ
ಕಟ್ಟಿ ಏನಪ್ಪಾ ಕುಂದ್ರುತಿನಿ
ಕುಂದ್ರಯ್ಯಾ ರಾಮಯ್ಯಾ
ಹೊತಿನೋ ಗಣಪತಿ
ಹೋಗಿ ಬಾರಪ್ಪಾ
ಮತ್ತೆ ನನ್ನ ಜೀವ ತೆಗಿಬ್ಯಾಡ
ಓ ನಿನ್ನ ಜೀವಕ್ಕೆ ನನ್ನ ಜೀವ ಐತಿ
ಕರ್ನಾಟವೆಲ್ಲಾ ನಂದೆ
ಆ ಆನೆಗೊಂದಿ ಸುತ್ತ ಅಂತಾ

ಆಹಾ ರಾಮಯ್ಯಾ
ಕುದ್ರಿಗಿ ಶರಣು ಮಾಡ್ಯನs
ಕುದ್ರಿಗ ಕೈ ಮುಗುದಾನ
ಕುಪ್ಪಳ್ಸಿ ರಾಮಯ್ಯ ಕುದುರಿ ಮ್ಯಾಲೆ ಕುಂತಾನ || ತಂದಾನ ||

ಕುದುರಿಯೊಂದ ನೋಡಣ್ಣೋ
ಪಟಪಟ ಅಂತ ರೆಕ್ಕೆ ಬಡ್ದೋ
ಗಡ್ ಗಡ್ಗಡ್ಗಡ್ದೋ
ಏಳೇಳು ಹದಿನಾಕೋ ಗಜಮ್ಯಾಲೆ ಮೇಘ ಬರ್ತೈತೊ || ತಂದಾನ ||

ಏಳ ಏಳ ಹದ್ನಾಕು ಮಣ್ಸ್ಯಾರ
ಮ್ಯಾಕ ಹೋಯ್ತು
ಹೋದ ಮ್ಯಾಲೆ
ಈ ಕುದುರಿ ಅಡೇಲಿರೋನು
ಈಗ ತ್ವಾಟ್ಲ ತೂಗಿದ್ಹಾಂಗ ತೂಗುತಾನ
ಆ ರೆಕ್ಕೆ ಬಡಿಕೊಂತೈತಿ
ಈ ರೆಕ್ಕೆ ಬಡಿಕೊಂತೈತಿ

ಅಡೇಲಿ ಇರೋನು
ತೋಟ್ಲು ತೂಗದ್ಹಂಗ ತೂಗುತಾನ
ಇನ್ನು ಅವನ್ನ ನೋಡಣ್ಣೋ
ಲಬ್ಲಬ್ಹೊಯ್ಯಕಾಂತಾನ
ಇಳಿಸಪ್ಪೋ ಇಳಿಸಪ್ಪೋs
ರಾಮಯ್ಯ ಸಾಯ್ತೀನಿ
ಯಾರ ಇಟ್ರೆ ಕುಡಿತೈತೋ
ಯಾರ ಇಟ್ರೆ ತಿಂತೈತೋ
ಸಾಯ್ತೀನಿ ಸಾಯ್ತೀನಿ
ತೊಟ್ಲ ತೂಗದ್ಹಾಂಗ ತೂಗುತಾನ
ರೆಕ್ಕೆ ಬಡಿತೈತೋ
ರೆಕ್ಕೆ ಬಡಿತೈತೋ
ಅವನಿಗಾಗಿ ನೋಡಪ್ಪ
ಸಾಯ್ತಿನಿ ರಾಮಯ್ಯೋ || ತಂದಾನ ||

ಅಂದ್ರೆ ಎರ್ಡು ರೆಕ್ಕೆ ಹೊಟ್ಟಿಗೆ ಆನ್ಸಿ

ಆಹಾ ರಾಮಯ್ಯ
ಗಡ್ಗಡ್ಗಡ್ತಿರುಕ್ಯಂತ
ಊರಿಗೆ ಮೂರು ಗಾವುದ ಅಡಿವ್ಯಾಗ ಇಳಿಸ್ಯಾನ ರಾಮ || ತಂದಾನ ||

ಓರುಗಲ್ಲಿಗೆ ಮೂರು ಗಾವುದ
ಆರಂಡ್ಯಾಗ ಇಳ್ಸಿಬಿಟ್ಟ
ಗೋಣಿ ಚೀಲದಾಗ
ಗಡ ಗಡ ಗಡ ಗಡ ಗಡ ಗಡ
ನಡುಗುತಾನಪ್ಪ ಅಂವ
ಕುದುರಿ ಸಲುವವನು
ಬ್ಯಾಗರ ಸುಂಕ
ಬಿಚ್ಚಿ ಬಿಟ್ಟ
ಯಪ್ಪರಾಮ
ನನ್ನ ಜೀವ ಉಳ್ಸಿದ್ಯಪ್ಪಾ
ನಿನಗೆ ಕಾಲಿಗೆಯಪ್ಪಾ
ಯಪ್ಪಾ ಇದು ನೀರು ಯಾರು ಕುಡಿಸಿದ್ರು ಕುಡಿತೈತಿ
ನೀನ ಕುಡ್ಸಿದ್ರು ಕುಡಿತೈತಿ
ನಾನ ಕುಡ್ಸಿದ್ರು ಕುಡಿತೈತಿ
ಈಗ ನೀನಿಟ್ರೆ ಕೊಬ್ರಿ ಬಟ್ಲ ತಿಂತೈತಿ
ನಾನಿಟ್ರೆ ಇಲ್ಲ
ಮತ್ತೆ ಯದಕ್ಕಾಗಿ ಮಾಡಿದ್ದಲೇ
ನಾನಿಟ್ರೇನೆ ಕುಡಿಯೋದು
ಇಲ್ಲ ಹೋದ್ರೆ ನಿನ್ನ ಕುದುರಿ ಸತ್ತು ಹೋಗ್ತೈತಿ
ಆನೆಗುಂದ್ಯಾಗ ಅಂದಿ
ಇಲ್ರಿ
ತಿಂಗ್ಳೀಗ ಮುನ್ನೂರು ರೂಪಾಯಿ
ಸಂಬಳ ಕೊಡ್ತಿದ್ದ
ಯಾರು ಗಣಪತಿರಾಜ
ಇನ್ನ ಕುದರಿ ಹೋದ ಮ್ಯಾಲೆ
ನನಗೆ ಹ್ಯಾಂಗ ಬರ್ತೈತಿ
ಹತ್ತು ರೂಪಾಯಿ ದುಡಿಯೋದೇನು
ಆರು ಮಂದಿ ಮಕ್ಳು
ನಾನು ಊಟ ಮಾಡೋದೇನು
ಅದಕ್ಕೆ ಆನೆಗೊಂದಿಲಿದ್ದ
ನಾನು ಮನೆ ಆರ್ಡರ್‌ ಮಾಡ್ದರೆ
ನನ್ಹೆಣ್ತಿ ಮನ್ಯಾಗಿರಾಕೆ ಊಟ ಮಾಡ್ತಾಳ
ಮಕ್ಳಿಗ ನಡೀತೈತಂತ ನಾನೂ ಮಾಡಿದ್ರಿ
ಅಯ್ಯೋ ಇಷ್ಟೇನಾ ಒದ್ದ್ಯಾಟ ನಿನ್ನ ಜೀವಕ್ಕ
ಇದೇ ಮಾತ ಅಲ್ಲೇ ಹೇಳಿದ್ರ
ಗಣಪತಿ ರಾಜನ ಕೂಟ
ನಿನ್ನ ಸಂಬಳ ಬರಸ್ತಿದ್ದಿಲ್ಲ
ಎಂಥಾ ದಡ್ಡನವನಾಗಿಯಿ
ಏನ್ರೀ ನನಗೇನೂ ತಿಳಿಯೊದಿಲ್ರಿ
ಕುದುರಿಗೆ ಆಗ ಕೊಬ್ರಿ ಬಟ್ಲ ಇಡೋದು
ನೀರ ಕುಡ್ಸೋದು
ಮೈ ತೊಳ್ಯೋದು
ಕಟ್ಟಿಹಾಕೋದು
ನಿದ್ದಿ ಮಾಡೋದು
ಊಟ ಮಾಡೋದು
ಇಷ್ಟೇರಿ ಇನ್ನ ಹೆಚ್ಚು ತಲಿಹೊದ್ಕಿ
ನನ್ನ ಜೀವಕ್ಕಿಲ್ರಿ
ಆ ರಾಮ ಬಿಳಿ ಪತ್ರ ಮ್ಯಾಲೆ
ಕರಣಗಿ ಇಟ್ಟು ಬರ್ದ ಬಿಟ್ಟ
ಕೇಳಪ್ಪ ಗಣಪತಿರಾಜ
ಕುದುರಿ ಇರ್ಲಿ ಇರ್ಲಿಕ್ಕಿ
ಈ ಬ್ಯಾಗರ ಸುಂಕಗೆ
ಈಗ ತಿಂಗ್ಳಿಗ ಮುನ್ನೂರು ರೂಪಾಯಿ
ಸಂಬ್ಳ ನಡ್ಸಬೇಕು
ಏನನ್ನ ಬದುಕು ಮಾಡಿಸ್ಕೋ
ಈಗ ಪತ್ರ ಮತ್ತೆ
ನನ್ನ ಆನೆಗೊಂದಿಗೆ ಹಾಕ್ತಾನ
ಆನೆಗೊಂದಿಗೆ ನಾನು ಬಂದ್ರೆ ರಾಮಯ್ಯನ
ಕುಳ ಕುಲದಲ್ಲಾಗಿ

ಓರುಗಲ್ಲು ನೋಡಾಲೆ ನಿನ್ನ ನಾನು ಬಿಡಿಸೇನ
ಇನ್ನ ಲೋಕ ಕೊಟ್ಟೇನ ಆವ್ನಿಗೆ || ತಂದಾನ ||

ಊರು ಬಿಡ್ಸಿ ಅವನಿಗೆ ಕೊಡ್ಸೀನಂತ
ಆಗ ಭಾಳ ಹುಷಾರದಲ್ಲಿ ಗಣಪತಿ
ಆಗ ಓರಗಲ್ಲಾಗ ಇರಬೇಕಂತ
ಆಗ ಪತ್ರ ಬರ್ದ
ಒಯಿಯ್ಯಪ್ಪಾ ಬ್ಯಾಗರಸುಂಕ
ಅಷ್ಟೇ ಆಗಲ್ರಿ ರಾಮಯ್ಯ
ನೀವು ತಣ್ಣಗ ರಾಜ್ಯವಾಳ್ರಿ
ಆನೆಗೊಂದಿ ರಾಮ
ಆಗ ರಾಮ ಕುದುರಿ ಪಾದ ಮುಗ್ದು

ಆಹಾ ರಾಮಯ್ಯ
ಕುದುರಿ ಮ್ಯಾಲೆ ಕುಂತಾನೋ
ಕುಪ್ಪಳ್ಸಿ ಎಗರ್ಯಾನ
ಕುದುರಿ ಒಂದ ನೋಡಣ್ಣ
ಪಟ ಪಟ ಪಟ ರೆಕ್ಕೆ ಬಡ್ದೊ
ಮೂರು ಮೇಗ ಎದ್ದೈತೋ ಇನ್ನ ಮೇಘದಾಗ ಬರತೈತೋ
ಮೂರು ಗಂಟಿಗೆಲ್ಲಾಣ್ಣ ಆರು ಗಾವುದ ನಡಿದದಣ್ಣ
ಆರು ತಿಂಗಳ ನಡಿದಿದ್ದು
s ರಾಜ ಕಛೇರಿ ಮುಂದಣ್ಣ ಕುದುರ್ಯಾಗ ಇಳಿಸ್ಯಾನ || ತಂದಾನ ||

ತಂದೆ ರಾಜ ಕಛೇರಿ ಮುಂದೆ
ಕುದುರಿ ಇಳ್ಸಿ ಬಿಟ್ಟ
ಇಳ್ಸಿ
ಒಂದು ಪಾದ ಎರಡು ಕೈ ಜೋಡ್ಸಿ
ಶರಣಪ್ಪ ತಂದಿ ಕಂಪ್ಲಿ ರಾಜ
ಸ್ವಾದರಮಾವ ಬಚಣ್ಣ
ಆಗ ಮಾವ ನೋಡ್ದ
ಅಯ್ಯೋ ಬಂದೇನಪ್ಪಾ ರಾಮ
ಆರಂಡಿ ರಾಮ
ಎಲ್ಲಿಗೆ ಹೋಗಿದ್ದಿ ರಾಮ
ಓರುಗಲ್ಲಿಗೆ ಹೋಗಿ
ಕುದುರಿ ಗೆದ್ದುಕೊಂಡೆ
ಮೀನು ಅಗಸ್ಯಾಗಿರೋದು
ಏಳು ಕಂಡದ ಚಂದ್ರಾಯ್ಧ
ಈಗಿನ್ನವ್ರು ತಾ ಕುಲದಲ್ಲಾಗಿ
ವಜ್ರ ಮಾಣಿಕ್ಯ
ಮೀನು ಹೊಟ್ಟ್ಯಾಗಿರೋದು
ಅಗಸಿಗ ಕಟ್ಟಿದ್ದು ಎಡಗಾಲಲ್ಲಿ
ಒದ್ದು ಬಲಗೈಲಿ ಹಿಡ್ಕಂಡೆ
ತಂದಿ
ಡಿಲ್ಲಿ ಕಳ್ಸೋ ಕರ್ನಾಟ ರೊಕ್ಕ
ನಾನೇ ಆನೆಗೊಂದಿ ರಾಮಯ್ಯ
ತಿರುವುನ ಮಾಡ್ಕೊಂಡು ಬಂದಿನಿ
ಓಹೋ ಸರಿ ರಾಮ

ಹಟ್ಟಿದ್ರೆನ ಸಾಕಯ್ಯ ಬೆಳೆದ್ರೇನಪ್ಪ ಸಾಕಪ್ಪ ರಾಮ
ರಾಮ ಇನ್ನ ನಮ್ಮ ಊರಿಗೆ ನಮ್ಮ ಪರಮಾತ್ಮ ಮೇಲು
ಪರಮಾತ್ಮ ಕಾಪಾಡ್ಯಾನ || ತಂದಾನ ||

ಅಂತ ರಾಮನ್ನ ಕರ್ಕಂಡು
ತಂದೆ ಕಂಪಿಲಿ ರಾಜ
ಸ್ವಾದರಮಾವ ಬಚ್ಚಣ್ಣ
ಕರ್ಕಂಡು ಹರಿಯಾಳದೇವಿಯ ಮನಿಗೆ ಬಂದ್ರು
ಹರಿಯಾಳದೇವಿ ನೆಲವ್ಹಿಡ್ದು ಬಿಟ್ಟಾಳ
ನನ್ನ ಮಗ ಹೋದ
ಆರಂಡಿಗೆ ಎಲ್ಲಿ ಸತ್ತೋದನಂತ

ರಾಮ ಆರಂಡಿಗೆ ಹೋದೆ ರಾಮದೇವ
ಯಪ್ಪಾ ಯಾವಾಗ ಬರ್ತಿ ಮಗನಾ
ನಿನ್ನ ಹದಿನೆಂಟು ವರುಷ ನಿನ್ನ ನಾ ಬೆಳೆಸಿನೆಪ್ಪಾ
ಆನೆಗೊಂದ್ಯಾಗ ಕೊಬ್ಬು ಬೆಳಿಸಿದಂಗೆ ಬೆಳ್ಸಿಬಿಟ್ಟೆ
ನಿನಗೆ ಕೈ ಯೊಟ್ಲದಾಗೆ ಸಲುಹಿದೆ ಮಗನೆ
ಕೈಯಾಗ ತೊಟ್ಲದಾಗ ಬೆಳಿಸಿಬಿಟ್ಟೆ ನಿನ್ನ || ತಂದಾನ ||

ತಾಯಿ ಒಣಗಿದ ಕಟ್ಟಿಗಿ ರೀತಿ ಆಗ್ಯಾಳ
ಬರೀ ತೊಗಲು ಎಲುಬು ಐತಿ
ಹಿಡುಕಿ ಮಾಂಸ ಇಲ್ಲ
ಆಗ ಒಂಭತ್ತು ತಿಂಗಳು
ಹೊಟ್ಟ್ಯಾಗಿಟ್ಕಂಡು ಹಡದಾಕಿ
ಹದಿನೆಂಟು ವರುಷ ಕೈಯಾಗ ಬೆಳ್ಸಿದಾಕಿ
ಮಗ ಹೋದ
ಇನ್ನೆಲ್ಲಿ ಆರಂಡಿ ಆನೆಗೊಂದಿ ರಾಮ
ಅಂತ ಕೂಳು ನೀರು ಬಿಟ್ಟು ಬಿಟ್ಟಾಳ
ರಾಮ ಬಂದು ಅಮ್ಮಾ ಅಂದು ಬಿಟ್ಟ
ಮಗನ

ಬಂದೆನೋ ನನ್ನ ಮಗ ಶರಣಪ್ಪ ನನ್ನ ಮಗ
s ಸ್ವಾದರತ್ತಿ ಹಂಪಕ್ಕ ಸ್ವಾದರತ್ತಿ ಶರಣತ್ತಿ || ತಂದಾನ ||

ಶರಣಪ್ಪ ಅಳಿಯ ರಾಮ
ಶರಣು ತಾಯಿ ಅಂತ
ತಾಯಿ ಪಾದ ಮುಗ್ದ
ಶರಣತ್ತೇ ಹಂಪಕ್ಕ ಅಂತ
ಶರಣು ಮಾಡ್ದ
ಶರಣಪ್ಪ ಅಳಿಯಾ ರಾಮ ಅಂದ್ಳು
ಆಗ ರಾಮ ಬಂದೊಷ್ಟಿಗೆ
ತಣ್ಣೀರು ಸ್ನಾನ ಮಾಡಿ
ಜಟಿಂಗೀಶ್ವರ ಪೂಜೆ ಮಾಡಿ
ಹಾಲು ಸಕ್ರಿ ಅನ್ನ ಊಟ ಮಾಡಿ
ರೂಮನಾಗ ಕುಂತ್ಕೊಂಡಾನಪ್ಪ ರಾಮಯ್ಯ