ರಾಮನಿಗೆ ಹೆಣ್ಣು ತೆಗೆದು ಮದುವಿ ಮಾಡೋ ಮಾವ
ಮದುವಿ ಮಾಡಿ ಬಿಡೋಣ ನಮ್ಮಗಗೆ
ಎಪ್ಪ ಎಲ್ಲಿ ಐದಳ ರಾಮನಿಗೆ ಹೆಣ್ಣುವಾಗಿ
ಮದುವಿ ಮಾಡಪ್ಪ || ತಂದಾನ ||

ಏನ ಬಚ್ಚಣ್ಣ
ಈಗ ಹೆಣ್ಣು ತಗದು ಮಾಡಪ್ಪ
ಮಾವ ನೀನು ಬರಾದಿಲ್ಲ
ನನ್ನ ಕೈಲಾಗದಿಲ್ಲಪ್ಪ
ಈಗಿನವ್ರು ತಾವಾಗಿ ನಿಮ್ಮಕ್ಕನ ನನಗೆ ಕೊಟ್ರಿ
ಈಗ ನಿನಗೆ ಮಕ್ಳಾಗಿಲ್ಲ
ಮತ್ತೇ ಎಲ್ಲೆನ್ನ ಹೆಣ್ಣು ಹುಡುಕಿ
ನಿನ್ನ ಅಳಿಯನಿಗೆ ಮಾಡು ರಾಮನಿಗೆ
ಸರಿಬಿಡು ಭಾವ
ನನ್ನ ಅಳಿಯನ ಜೀವದ ಮುಂದೆ
ನನ್ನ ಜೀವ ಬಿಡ್ತಿನಿ ಅಂತಾ
ರಾಮನ್ನ ತಕ್ಕಡಿದಾಗ ಕುಂದ್ರಿಸಿ ತೂಕ ಮಾಡಿದ್ರು
ತೂಕ ಮಾಡಿ ಆಗಿನ್ನವ್ರ ಬಂಗಾರದ ತೂಕ ಮಾಡಿ
ನಿಂತಪೋಟ ಇಳಿಸಿಬಿಟ್ರು ರಾಮನ ಬಂಗಾರದ ಫೋಟೊ
ಫೋಟ ಬಡ್ದು
ಆಗ ಇನ್ನ ಬೆಳ್ಳಿ ಶಾಲ ಹೊದಿಸಿಬಿಟ್ರು
ಐದು ಮಂದಿ ತಳವಾರನ್ನು ಕರ್ಕಂಡು
ಸ್ವಾದರಮಾವ ಬಚ್ಚಣ್ಣ
ರಾಮನಿಗಿನ್ನ ಒಂದು ಪಾವಲಿಯಷ್ಟು
ಬಣ್ಣ ಹಚ್ಚಿರಬೇಕು ಹೆಣಮಗಳು
ಗಂಡಮಗನಿಗಿನ್ನ
ಒಂದು ಪಾವಲಿಯಷ್ಟು ಹೆಚ್ಚಿರಬೇಕು ಅಂತ
ಆಗ ಎಲೈತೋ ರಾಮನಿಗೆ ತಗ್ಗಂತ
ರಾಮಾ ನಿನ್ನ ಲೋಕ ಹುಟ್ಟಿ
ಲೋಕ ಬೆಳೆದಿವಿ
ಲೋಕದಾಗ ನಿನ್ನ ಜೀವಕ್ಕೆ
ಈಗಿನ್ನವ್ರು ದುಷ್ಟಲೋಕ ಕರ್ಮಲೋಕ
ನೋಡೋದೈತೋ ಕಳಕಂಬೋದು ಐತೋ

ರಾಮ ಹುಡುಕಲಿಕೆ ನಾನು ಹೋತಿನಿ ರಾಮ
ರಾಮನ ಫೋಟೋ ತಗಂಡು ಹೊತ್ಕಂಡು ಬರುತಾರ ರಾಮ
ಆನೆಗೊಂದಿ ಪಟ್ಣ ಬಿಟ್ಟು || ತಂದಾನ ||

ಆನೆಗೊಂದಿ ಪಟ್ಣ ಬಿಟ್ಟು
ರಾಮನ ಫೋಟೋ ಹೊತ್ಗಂಡು
ಇಪ್ಪತ್ತಳ್ಳಿ ಹುಡುಕಿದ್ರೆ
ರಾಮನಿಗೆ ತಕ್ಕಂತ ಹೆಣ್ಮಗಳು
ಲೋಕದಲ್ಲಿ ಸಿಗಲಿಲ್ಲ
ಆಗ ಚಿತ್ರಗೇರಿ ಪಟ್ಣದಾಗ
ಆಗ ಹೆಣ್ಣು ಕುಲಕ್ಕಾಗಿ ಚಾವುಲರಾಜ
ಚಾವುಲರಾಜನ ಮಗಳು ರತ್ನಾಕ್ಷಿ
ರಾಮನಿಗಿನ್ನ ಒಂದು ಪಾವಲಿ
ತೂಕ ಹೆಚ್ಚು ಇದ್ದಾಳಪ್ಪ ಬಣ್ಣ
ರತ್ನಾಕ್ಷಿ ಅಂದ್ರೆ
ಈಗ ಅವಳು ಓದಿಕ್ಯಂಡಾಳ
ಇಂಗ್ಲಿಷ್‌ ಮರಾಠಿ ಹಿಂದಿ ಓದಿಬಿಟ್ಟಾಳ
ಓದಿಕ್ಯಂಡಾಕಿಗಿ
ಅರವತ್ತಾರು ಫೋಟೊ ತಂದು ತೋರಿಸಿದ್ರೆ
ಗಂಡಸರ ಫೋಟೋ
ಆ ಯಮ್ಮಗ ಗಂಡಸರ ಮ್ಯಾಲೆ ಮನಸ್ಸಿಲ್ಲ
ಯಪ್ಪಾ ಚಾವುಲರಾಜ ನೀನ ತರಬ್ಯಾಡ
ನಾನು ಗಂಡುಮಕ್ಳ ಮಖ ನೋಡೋದಿಲ್ಲ
ನಾನೇ ಮಗ ನಾನೇ ನಿನ್ನ ಮಗಳು
ಈಗ ನಾನು ಮದುವೇ ಒಲ್ಲೆ ಅಂದ್ರೆ
ಅರವತ್ತು ಫೋಟೋ ತಂದ್ರೆ
ಯಾರ್ನೂ ಗಂಡುಮಕ್ಕಳು ನೋಡಿಲ್ಲ
ಆ ಯಮ್ಮ
ಯಾರೂ ರತ್ನಾಕ್ಷಿ
ನರ್ತ್‌ ಐದು ವರ್ಷ ಆ ಯೆಮ್ಮಗ
ಓಡಿಕ್ಯಂಡಾಳ
ಇಂಗ್ಲಿಷ್‌ ಮರಾಠಿ ಹಿಂದಿ ಢಿಗಿ ಓದ್ಯಾಳ
ಆಗ ಏನ್ಮಾಡಿ ಬಿಟ್ರು
ಬಂಗಾರದ ರಾಮನ ಫೋಟ ತಗಂಡು
ಆಗ ಊರಾಕ ಬಂದ್ರು
ಏನಪ್ಪಾ ಊರ ಮುಂದೆ ಒಬ್ಬ ಮುದ್ಯೋವ್ನ ಇದ್ದ
ಏನ್ರಪ್ಪಾ ಹೊತ್ಗಂಡು ಬರ್ತೀರಿ ಈಟೂದ್ದೈತಿ ಅಂದ
ಅಯ್ಯೋ ಆನೆಗೊಂದಿ ರಾಮನ ತಂದಿವಿ
ಇಪ್ಪತ್ತಳ್ಳಿ ತಿರುಗಿದ್ರ
ಎಲ್ಲೆಲ್ಲಿ ಹೆಣ್ಣು ಸಿಗಲಿಲ್ಲಪ್ಪ ರಾಮನಿಗೆ
ಇದೇ ರಾಮನು
ಮೊಕದ ಮ್ಯಾಲೆನ
ಬಟ್ಟೆ ತೆಗೇರಿ ನೋಡಾನ ಅಂದ

ರಾಮ ಲೋಕ ನೋಡ್ತಾರ ನೋಡೋ ರಾಮದೇವ
ರಾಮನ ಮುಖದ ಮ್ಯಾಲೆಯ ಬಟ್ಟೆ ತಗದರಮ್ಮಾ
ಬಟ್ಟೆ ತಗದು ಬಿಟ್ರು || ತಂದಾನ ||

ಎರಡು ಕಣ್ಣಿಗ್‌ ತಳಕ್‌ ಅಂದುಬಿಡ್ತು
ರಾಮ ಅಂತ ಕಣ್ಮುಚ್ಚಿದ
ಯಾರು ನೋಡಿದಾತ
ರಾಮಾ ಬಂಗಾರದ ಫೋಟೋದಾಗ
ಇಷ್ಟು ಚೆಲುವಿ ಐದೀ
ನಿನ್ನ ಜೀವ ನೋಡಿದ್ರೆ ಎಷ್ಟು
ಮಾತಾಡಿದ್ರೆ ಎಷ್ಟು
ಸಂತೋಷ ಆಗತೈತಿ ನನಗೆ
ಆನೆಗೊಂದಿ ರಾಮ
ಏನಪ್ಪಾ ಈಗ ರಾಮನ ಫೋಟೋ ತಂದಿರಿ
ಅರವತ್ತು ಫೋಟೋ ತಂದ್ರೆ
ರತ್ನಾಕ್ಷಿ ಯಾರನ್ನು ಕಣ್ಣಿಲಿ ನೋಡಿಲ್ಲ
ಈಗ ಚಾವುಲರಾಜನ ಮಗಳು ರತ್ನಾಕ್ಷಿ ಇದಾಳ
ಈಗ ಬರ್ರಿ
ಆಗ ಮಾಳಿಗ್ಯಾಗೈದಾಳ ತೋರಿಸ್ತಿನಿ ಅಂದ
ನಾನು ಹೆಣ್ಣು ಕೇಳಿದ್ರೆ ಹೆಣ್ಣುಕೊಡೊ ಮನೆಯನ್ನ ತೋರಸ್ಬೇಕು
ಬರ್ರೆಪ್ಪಾ ಅಂತ

ರಾಮನ ಫೋಟೋ ತಗಂಡು ರತ್ನಾಕ್ಷಿ ಮನ್ಯಾಕ || ತಂದಾನ ||

ಏನ್ರಿ ಚಾವುಲರಾಜ
ಆಗ್ಲಿ ಏನ್‌ ತಂದೀರಪ್ಪ
ರಾಮನ ಫೋಟೋ
ನೋಡಯ್ಯ ಅಂತ ಬಟ್ಟೆ ತಗ್ದ
ರಾಮ ಎಷ್ಟು ಚೆಲುವೆ ಐದಿ ರಾಮ
ನನಗೇನೋ ಒಪ್ಪಿಗಿ ಆಗೈತಿ
ನನ್ನ ಮಗಳಿಗೆ ಒಪ್ಪಿಗೆ ಆಗಬೇಕಲ್ಲ
ಅವಳು ಇಂಗ್ಲಿಷ ಓದಿಕ್ಯೊಂತಾಳ
ತೊಟ್ಲದಾಗ ಕುಂತ್ಗಂಡು
ಮೂರು ಅಂತಸ್ತಿನ ಮಾಳಿಗೆ ಮ್ಯಾಲೆ ತೂಗುತಾಳ
ಆಗ ಪಾವಟಿಗೇರಿ
ಮೂರಂತಸ್ತಿನ ಮಾಳಿಗೆ ಮ್ಯಾಕ ಬಂದ್ರು
ರಾಮನ ಫೋಟೋ ಕೆಳಗಿಟ್ರು
ಯಮ್ಮಾ ತೋಟ್ಲದಾಗ ತೂಗಾಕಿ
ರತ್ನಾಕ್ಷಿ

ಯಮ್ಮಾ ರಾಮನ್ನ ನೋಡೋ ಲೋಕ ಹುಟ್ಟಿದ ಮಗ
ಲೋಕ ಹುಟ್ಟಿದಾತನ ನೋಡೋ
ಯಮ್ಮಾ ಗಣಸರ ಫೋಟೋ ಹೆಣಸ ನೋಡಮ್ಮಾ || ತಂದಾನ ||

ಅಂದ್ರೆ ತೋಟ್ಲದಾಗ ತೂಗಾಕಿ
ಆಗ ಇಂಗ್ಲಿಷ ಓದಾಕಿ ಏನಾಂತಳ
ಏs ನಿವ್ಯಾರು ತಂದಿದ್ದು
ಕೇಳಪ್ಪಾ ತಂದಿ
ನಾನೇ ಮಗಳು
ನಾನೇ ಮಗ
ಈಗ ನಾನು
ಗಣಸರನ್ನು ನೋಡೋದಿಲ್ಲ
ನನಗೆ ಮದುವೇ ಒಲ್ಲೆ ಅಂಬೋತ್ತಿಗೆ
ಯಮ್ಮಾ ಕುಂಬಾರ ಗಡಿಗೆಯಲ್ಲ
ಒಂದ ಮನಿಗ್ಹೋಗದೆ
ಆಗ ಹೆಣ್ಣುಮಗಳೆಲ್ಲ
ಗಂಡನ ಮನಿಗೆ ಹೋಗೊದೆ
ಲೋಕೆಲ್ಲಾ ಏನಂತಾರ
ನರ್ತು ಐದು ವರ್ಷ ಆಗೈತಿ
ಮಗ್ಳು ಮನ್ಯಾಗ ಇಟ್ಕೊಂತಿ
ಎಂಥಾ ದುಷ್ಟ ಮುದುಕ
ಹಡಿಯೊಳ ಬೆಳೆಸೋಳು ಅಂತ
ಲೋಕೆಲ್ಲಾ ಬೈತಾರಮ್ಮ
ಆಗ ಇನ್ನ ರತ್ನಾಕ್ಷಿ
ಬೈದ್ರೆ ನಾನೇನು ಮಾಡ್ಲ್ಯೋ ಯಪ್ಪಾ
ಅಯ್ಯೋ ಮಗಳಾ
ರಾಮನ ನೋಡಮ್ಮ
ಛೀ ಛೀ ನೋಡೊದಿಲ್ಲ
ಆಗ ನೋಡಂತ ನಾವು ನಾವಂತಿವಿ
ನೋಡೋದಿಲ್ಲಂತ ಆಕೆ ಅಂತಾಳ
ಬಟ್ಟೇನ್ನ ತಗ್ಯಾನ
ರಾಮ ನಿನ ದುಷ್ಟಲೋಕ ನೋಡಂಗೈತೆನೋ
ಕರ್ಮ ಲೋಕ ಕಲ್ಯಂಗೈತೇನೋ

ರಾಮ ನೋಡುವಂತ ಬಟ್ಟಿ ತಗದರಮ್ಮಾ
ಎರಡು ಕಣ್ಣಿಗಾಗಿ ತಳಕು ಮಿಂಚ್ಚುನಮ್ಮಾ
ಮಿಂಚು ಹೊಡೆದು ಬಿಟ್ಟ ರಾಮಯ್ಯ ರತ್ನಾಕ್ಷಿ ಕಣ್ಣಿಗೆ || ತಂದಾನ ||

05_80_KMKM-KUH

ತೊಟ್ಲದಾಗ ಕುಂತಾಕಿ

ಹಾಂಗೆ ಬಾರ್ಲ ಬಿದ್ದ ಬಿಟ್ಳು ತೋಟ್ಲದಾಗ
ಎರಡು ಕಣ್ಣಿಗೆ ತಳಕ್ಕನೆ ಮಿಂಚು ಹೊಡೆದು ಬಿಟ್ಟ
ರಾಮಾs ಅಂತ ಬಾರ್ಲು ಬಿದ್ದು ಬಿಟ್ಳು
ತೊಟ್ಲದಾಗಿಲ್ಲಿದ್ದ ಕೆಳಗಿಳಿದು ಬಿಟ್ಳು
ಕೆಳಗೆ ಕುಪ್ಪಳ್ಸಿ ಹಾರಿಕ್ಯಂಡು
ಆಗ ಏನಂತಳಾ
ಶರಣಪ್ಪ
ಈ ಫೋಟೋ ತಂದೋರ್ಯಾರು
ನಾನೇ ಬಚ್ಚಣ್ಣ
ಇವರು ತಳವಾರ್ರು
ಓಹೋ ಖರೆ ಬಚ್ಚಣ್ಣ
ನಿಂದು ಯಾವೂರು
ಆನೆಗುಂದಿ ಕಂಪ್ಲಿ ಪಟ್ಣ ರಾಮಂದು
ಈ ರಾಮನ ಫೋಟೋ ನೋಡಿ
ನನಗೆ ಸಂತೋಷ ಆಗೇತಿ
ಈ ರಾಮನ ಫೋಟೋ ನನಗ ಕೈಗ ಕೊಡ್ರಿ
ನನ್ನ ಫೋಟೋ ತಗೊಂಡ್ಹೋಗಿ
ರಾಮನಿಗೆ ಕೊಡ್ರಿ ಅಂದ್ಳು
ಏs ಹೆಣ್ಮಕ್ಕಳು ಕೈಗ ಕೊಡೋದಿಲ್ಲ
ರಾಮನ ಫೋಟೋ
ನಾವು ಕೋಡೋದಿಲ್ಲ
ನಿನಾಗಿ ರಾಮನ ಮಾಡಿಕ್ಯಂಬೊಷ್ಟು
ಮನಸ್ಸು ಹುಟ್ಟಿದ್ರೆ
ನೋಡಮ್ಮಾ ನಿನ್ನ ಬೆಳ್ಳಿ ಫೋಟೋ ಇಳಸ್ರಿ
ನಮ್ಮಕೈಗ ಕೊಡ್ರಿ
ಈಗ ರಾಮನ ಫೋಟೋ
ನಿನ್ನ ಫೋಟೋ
ಆನೆಗುಂದಿಗೆ ಒಯ್ತಿವಿ
ರಾಮನಿಗ ತೋರಿಸ್ತಿವಿ
ಆಗ ಬೇಕಾದ್ರೆ ನಾವು ಪತ್ರ ಹಾಕ್ತಿವಿ
ಕರ್ಯಾಕ ಖಳಿಸ್ತಿವಿ
ಲಗ್ನ ಮಾಡ್ತಿವಿ ರಾಮನಿಗೆ
ರಾಮ ಬ್ಯಾಡಂದ್ರೆ ಹಿಂದಕ ಖಳಿಸ್ತಿವಿ
ರಾಮಂದು ನಿಂದು ಫೋಟೋ ಒಯ್ದಿವಿ
ಬ್ಯಾಡಂದ
ನಾವು ಕೊಳ್ಳಾಕ ಕಟ್ಟಿಕ್ಯಾಂಬಾನ
ಒಲ್ಲೆ ಅಂದ್ರೆ
ನಾವೇನು ಮಾಡನ ರಾಮನ್ನ
ಲೋಕ ಹುಟ್ಟಿದವ್ನು
ಲೋಕ ಬ್ಯಾಡಂದ
ನಾವೇನು ಮಾಡಾನ
ಅಂಬೋತ್ತಿಗೆ
ಇಲ್ಲಪ್ಪಾ ರಾಮನ ಫೋಟೋ ಬಿಟ್ಟ ಹೋಗ್ರಿ ಅಂತ

ಯಮ್ಮ ಚಂಪೆ ಚಂಪೆ ಮುದ್ದು ಕೊಡಲಿಕೆ
ರಾಮನ ಮುದ್ದು ಕೊಡ್ತಿನಿ ಅಪ್ಪ
ಕೈಗೆ ಕೊಡ್ರಿ ರಾಮನ ಫೋಟೋ || ತಂದಾನ ||

ರಾಮೋs ಯಾಗ ನಿನ್ನಕೂಟ ನಾನು ಮಾತಾಡೋಬೇಕೋ
ಯಾವಾಗ ಮಾತಾಡಬೇಕು ಐಯ್ಯ ನಿನ್ನ ಕೂಟ ನಾನು
ರಾಮ ಯಾಗ ಜೀವಗ ನಾವು ಕಲಿಯಬೇಕ
ರಾಮ ನನ್ನ ಜೀವ ನಿಂದ್ರಾದಿಲ್ಲ ರಾಮ || ತಂದಾನ ||

ದುಷ್ಠಲೋಕ ಇನ್ನವಾಗಿ ಹುಟ್ಟಿದಾಕೆ
ಕರ್ಮಲೋಕ ದುಷ್ಠ ಮಾತಾಡ್ತಾಳಪ್ಪ
ರಾಮ ಜೀವಕ್ಕೆ ಯಾವಾಗ ಕಲಿಯಬೇಕು
ನಿನ್ನ ಕೂಟ ಯಾಗ ಮಾತಾಡ್ಬೇಕು
ಮಾತಾಡಂಗಿಲ್ಲೇs
ಸುಮ್ನೆs ಮಕ ತೋರಿಸ್ತೀ ಅಂತಾಳ
ಆಗ ನೋಡಪ್ಪ ಈಕೀಗಿನ್ನ
ಮೀಟ್ರುವಾಯ್‌ ಎದ್ದು ಬಿಡ್ತು
ಇಲ್ಲಿಗ ನರ್ತು ಐದು ವರ್ಷ ಆಯ್ತು
ಅರವತ್ತು ಫೋಟೋ ತಂದ್ರು
ಒಬ್ರೂ ಮಕ ನೋಡಿಲ್ಲ
ಒಲ್ಲೇ ಅಂತ ಕುಂತಿದ್ಳು
ಈಗ ರಾಮನ ಮ್ಯಾಲೆ ಮನಸ್ಸು ಹುಟ್ಟೈತಿ
ರಾಮನಿಗೆ ಮನಸ್ಸು ಹುಟ್ಟಬೇಕಲ್ಲ
ಈಗ ಈ ಯಮ್ಮನ ಫೋಟೋ ಇಳ್ಸಿ ಕೊಡ್ರಿ ಅಂದ್ರು
ಆಕಿನ ತಕ್ಕಡಿದಾಗಿಟ್ಟು ತೂಕ ಮಾಡಿದ್ರು ರತ್ನಾಕ್ಷಿಯನ್ನ
ತೂಕ ಮಾಡಿ ಬೆಳ್ಳಿ ಫೋಟೋ
ನಿಂತು ಫೋಟೋ ಇಳಿಸಿದ್ರ ಆಯ್ತು
ನಿಂತ ಫೋಟೋ ಇಳ್ಸಿ
ರಾಮನ ಫೋಟೋ
ಆಗ ರತ್ನಾಕ್ಷಿ ಫೋಟೋ ತಗಂಡು

ಆಗ ಆನೆಗುಂದಿಗೆ ವಾಪಾಸು ತರ್ತಾರಮ್ಮಾ || ತಂದಾನ ||

ವಾಪಾಸು ತಂದ್ರು
ಆಗ ರಾಜ ಕಛೇರಿಗೆ ತಂದ್ರು
ಏನಯ್ಯ ಭಾಗ
ಈಗ ಹರಿಯಾಳದೇವಿ
ಆಗ ಕಂಪ್ಲಿರಾಜ
ಏನಪ್ಪ
ಏನಿಲ್ಲ
ಇಪ್ಪತ್ತಳ್ಳಿ ಅರವತ್ತೂರು ತಟಾದು
ಚಾವುಲರಾಜನ ಮಗಳು ರತ್ನಾಕ್ಷಿನ
ಈಗ ನಿಮ್ಮ ಮಗನಿಗೆ
ರಾಮನಿಗೆ ತಗದು ಬಂದಿವಿ
ರಾಮನಿಗಿನ್ನ ಒಂದು ಪಾವುಲಿ ಬಣ್ಣ ಹೆಚ್ಚೈತಿ
ಈತ ನಿನ್ಗ ಒಪ್ಪಿದಲ್ಲಾದ್ರೆ
ನಿನ್ನ ಮಗ ಒಪ್ಪಿದಂಗೆ ಜೀವಕ್ಕ
ನಿನ್ನ ಜೀವ ಒಪ್ಪಿದ್ರೆ
ನಿನ್ನ ಜೀವದಲ್ಲಿ ಹುಟ್ಟಿದ ರಾಮ ಒಪ್ಪಿದಂಗೆ
ಈಗ ನೋಡ್ರಿ
ನಿನ್ನ ಸೊಸಿ ಬೇಸಾದಳಂತ ಅಂದ
ತಗಿ ಬಟ್ಟಿ ಅಂದ
ಬಟ್ಟೆ ತೆಗದ್ರೆ

ಯಮ್ಮಾ ಬಕಬಾಯವ್ನು ಕಣ್ಣಿಂದ ನೋಡ್ಯಾನಮ್ಮಾ
ಕಂಪ್ಲಿರಾಜ ಇನ್ನ ನೋಡಿದ್ನಮ್ಮ || ತಂದಾನ ||

ಚಿಕ್ಹೇಣ್ತಿ ಅಂತ ಬಾರ್ಲಬಿದ್ದ ಬಿಟ್ಟ
ಫೋಟೋ ಮ್ಯಾಲೆ
ಚಂಪೆ ಚಂಪೆ ಮುದ್ದು ಕೊಡ್ತಾನ
ಯಪ್ಪಾ ಭಾವಮೈದ
ಆ ಕಾಲಕ್ಕೆ ನಿಮ್ಮ ಅಕ್ಕನ ಕೊಟ್ಟಿ
ಈ ಕಾಲಕ್ಕೆ ರತ್ನಾಕ್ಷಿಯ ನನಗೇ ಮಾಡ್ಬೇಕು
ನನ್ನ ಜೀವ ನಿಂದ್ರದಿಲ್ಲಂತ
ಚಂಪಿ ಚಂಪಿ ಮುದ್ದು ಕೊಡ್ತಾನ
ಆಗ ಏನಂತಾನ
ಬಾಯಾಗ ಒಂದು ಹಲ್ಲಿಲ
ಆಗ ಏನಂತಾನ

ಬಾಮ್ಮಾ ಎಲ್ಲೈದಿ ರತ್ನಾಕ್ಷಿ ನಿನಗ ಯಾಗ ಕಲಿಬೇಕಲೆ ನಾವು || ತಂದಾನ ||

ಈಗ ತಳವಾರರು
ಸ್ವಾದರಮಾವ ಬಚ್ಚಣ್ಣ
ಇವರಿಗೇನು ಬಂದೈತೆಲೆ
ಬಕ್ಕಬಾಯಿ
ಒಂದು ಬಾಯಾಗ ಹಲ್ಲಿಲ್ಲ
ಬಕಂ ಬಕಂ ಬಕ್‌ ಅಂತಾನ
ಆಗ ಗುಡ್ಡಿದ್ದಂಗ ಇದಾಳ ನಮ್ಮಕ್ಕ
ಹರಿಯಾಳದೇವಿ
ಆರೆ ಸೊಸಿನ್ನ ತಗ್ದು
ಏನಪ್ಪ ಬೇಸಾದಳ
ನಿನಗೆ ಒಪ್ಪಿಗೆ ಆದ್ರೆ
ನಿನ್ನ ಮಗಗೆ ಒಪ್ಪಿಗೆಯಲ್ಲ ರಾಮನಿಗೆ
ನೋಡಂದ್ರೆ
ಆಗ ರತ್ನಾಕ್ಷೀ ಅಂತ
ಬಾರ್ಲು ಬಿಳ್ತಾನ
ನನಗ ಮಾಡಂತ ಪಾದ ಹಿಡಕಂಡಾನ
ನೋಡಪ್ಪ ನಿನಗ ಮಾಡಂಗಿಲ್ಲ
ನನಗ ಮಾಡ್ತಾರ
ಲೇs ಫೋಟೋ ತಂದವ್ನೆ
ಹೆಣ್ಣು ತಗಂಡು ಬಂದು
ರಾಮ ಮಾಡಿಕ್ಯಂತಾನ ಅಂತ
ರಾಮನ ಬಚ್ಚಿಕ್ಕಿ
ಆಗ ಕಂಬಳಿ ಮುಚ್ಚಿ
ಮಾವನಿಗೆ ಮಾಡಿಯಿ ಅಂತ
ಮುದೇನಿಗೆ ಮಾಡಿಯಿ ಅಂತ
ನನಗ ಕುತ್ಗಿ ಕೊಯ್ತಾರ
ನನ್ನ ಮದುವೆ ಮುಂಚೆ ಆಗ್ತೈತಿ
ಇಲ್ಲ ಪೋ ನನಗೆ ಸಾಧ್ಯ ಆಗದಿಲ್ಲ
ಆಯ್ಯೋ ಹ್ಯಾಂಗಾರ ಮಾಡು
ಭಾವಮೈದ ಭಚ್ಚಣ್ಣ
ಈಗೀಗ ಆನೆಗುಂದ್ಯಾಗ
ನಿಂದೆ ಅಪ್ಪ ಮುಂದೆ ಪೂಜಾ
ನಿಮ್ಮ ಗಂಡ ಹೆಂಡ್ತಿದೆ ಪೂಜ
ಹಂಪಕ್ಕ ಹಂಪಯ್ಯ ಅಂಬೋತ್ತಿಗೆ
ಏನೀವ ಹ್ಯಾಂಗ ಮಾಡ್ಬೇಕಪ್ಪ
ಪಾದ ಹಿಡ್ಕಂಡ ಅಂತ
ನೋಡಪ್ಪ ರಾಮನಿಗೆ ತೋರ್ಸಾಂಗಿಲ್ಲ
ಈ ಫೋಟೋ ಇಲ್ಲೇ ಇರ್ಲಿ ರತ್ನಾಕ್ಷಿ ಫೋಟೋ
ಈಗ ರಾಮನ ಫೋಟೋ ಒಂದು ಒಯ್ತಿನಿ
ಅಂತ ರಾಮನ ಫೋಟೋ ತಗೊಂಡ
ಆತ ಕೊಡಲಿಲ್ಲಪ್ಪ
ಯಾರು
ಕಂಪ್ಲಿ ರಾಜ ಬಕಬಾಯೋನು
ಮಾತಾಡು ಮಾತಾಡು ಅಂತಾನ
ಆಗಿನ್ನ ಫೋಟೋ ಕೂಟ
ಮೀಟ್ರವಾಯು ಎದ್ದೈತಿ
ಮುದೇರಿಗಿದ್ದ ಸೊಕ್ಕ ಹರೇದವರಿಗಿಲ್ಲ
ಆಗ ಮುದ್ದು ಕೊಟ್ಟಗೊಂತಿದ್ದಾನ
ಈಗಿನ್ನ ರಾಮನ ಫೋಟೋ ತಗಂಡು
ಹರಿಯಾಳದೇವಿ ಮನಿಗಿ ಬಂದ
ರಾಮ ಕುರ್ಚಿ ಮ್ಯಾಲೆ ಕುಂತಾನ
ಶರಣಪ್ಪ ರಾಮಯ್ಯ
ಏನೋ ಮಾವ
ಏನ್ಮಾಡ್ತೀಯಪ್ಪ
ಇಪ್ಪತ್ತಳ್ಳಿ ಅರವತ್ತೂರು ತಿರುಗಿದೆ
ಚಾವುಲರಾಜನ ಪಟ್ಣಕ್ಕೋಗಿ
ಈಗಿನ್ನು ತಾವು ರತ್ನಾಕ್ಷಿಯನ್ನ ತಗದು ಬಿಟ್ಟೆ
ಏನ್ಮಾಡ್ತಿ ನಿನಗೋಸ್ಕರ ತಗದೆ
ಈಗ ನಿಮ್ಮ ತಾಯಿನಂಗ ಇದಾಳ
ನಿಮ್ಮ ತಂದಿ ಪ್ರೇಮಿಸಿ ಬಿಟ್ನಪ್ಪ
ಮನಸ್ಸು ಹುಟ್ಟೈತಂತೆ
ನಿನ್ನ ತಂದಿ ಮಾಡಂತ ಪಾದ ಹಿಡಕಂಡಾನ
ನೋಡಿದ್ರೆ ಸೇಮ ನಿನ್ನ ತಾಯಿ ಇದ್ದಂಗಗೈದಾ
ಛೀ ಮಾವ

ತಾಯಿ ಇದ್ದಂಗಿದ್ದಾರೆ ನನಗೆ ತಾಯೇ ನೋಡಪ್ಪಾ
s ನನಗೆ ಬ್ಯಾಡೋಲೋ ಮಾವ ನನಗೆ ಲೋಕನೇ ಬ್ಯಾಡಯ್ಯ
ಲೋಕನೇ ಬ್ಯಾಡ
s ದುಷ್ಠಲೋಕ ಹುಟ್ಟೀನಿ ನಾನು ಕರ್ಮ ಲೋಕ ಬೇಳದಿನಿ
ತೋs ದುಷ್ಠಗುಣ ಇಲ್ಲಯ್ಯ ನನ ಕರ್ಮ ಗುಣ ಇಲ್ಲಯ್ಯ
ನನ್ನ ಆತ್ಮದಲ್ಲಿ || ತಂದಾನ ||

ಮಾವ
ದುಷ್ಠಲೋಕ ಕರ್ಮಲೋಕ ಹುಟ್ಟಿ ಬೆಳಕಂಡ್ರೆ ಏನು
ಆಗ ದುಷ್ಠತನ ಇಲ್ಲ ನನಗ
ನನಗೆ ಕರ್ಮಲೋಕಾನೇ ಇಲ್ಲ
ಈಗ ನಮ್ಮ ತಂದಿಗಿ ಮಾಡು
ರಾಮ ನಿಮ್ಮ ತಂದಿಗೆ ಮಾಡಿದ್ರೆ
ಆಗ ನಿನಗೆ ತಗದಿದ್ದ
ನಿಮ್ಮ ತಂದಿ ದುಷ್ಠದವನು
ನಿನ್ನ ಎಲ್ಲಿ ಬಚ್ಚಿಕ್ಕಬೇಕು
ಮಾವ
ನಾನು ಲೋಕ ಹುಟ್ಟಿಲೋಕ ಬೆಳೆದಿನಿ
ನನ್ನ ಜೀವ ಮದುವಿ ಇಲ್ಲದ್ರು ಆಗೈತ್ತು
ಲೋಕ ಹ್ಯಾಂಗ ನಡೀತೈತೋ
ಹ್ಯಾಂಗಾಗಿ ದುಷ್ಠರಿಗೆ ಕರ್ಮರಿಗೆ
ಹ್ಯಾಂಗ ಲಗ್ನ ಮಾಡ್ತಾರ
ಹೆಣ್ಣು ಗಂಡು ಜತಿ ಅಂತಾರ

ಮಾವ ಕಣ್ಣಿಲ್ಲಿನ್ನ ನಾನು ನೋಡ್ತೀನಿ ಮಾವ
ನಮ್ಮ ಜೀವ ತಂದಿ ಮದುವೆ ನೋಡಿನಿ ನಾನು
ಜೀವಗ್ಹುಟ್ಟಿದ ಮಗ || ತಂದಾನ ||