ಈಗ ರತ್ನಾಕ್ಷಿಯವರ ಮಗನಾಗಿ
ರಾಮಯ್ಯನ ನೋಡ್ದ ಮಾವ ಬಚ್ಚಣ್ಣ
ಏನಪ್ಪಾ ರಾಮಯ್ಯ
ಮಾವ ಹುಡುಗ್ರ ನೋಡು ನಿಮ್ಮೇ ಚೆಂಡಾಟ
ಬಟ್ಟೆ ಚೆಂಡಾಡ್ತಾರ ಬಲೆ ಕಟ್ಟಿ
ಆಗ ಟಡ್ಡ ಕಟ್ಟಿಗಿ ಇಟ್ಟು
ಚೆಂಡಾಡ್ತಾರ ಮಾವ

ಮಾವ ಚೆಂಡುವಾಡಂಗೈತೋ ಚೆಂಡುವಾಡ್ತಿನಿ ಮಾವಯ್ಯೋ
ರಾಮ ಚೆಂಡುವಾಡಬ್ಯಾಡಪ್ಪಾ
ನಿನ್ನ ಜೀವ ಹೋತದ ರಾಮಯ್ಯೋ || ತಂದಾನ ||

ರಾಮ ನೀನು ಚೆಂಡ ಆಡ್ದೆರೆ ಜೀವಕ್ಕೇ ಮೂಲ
ನಿನ್ನ ಜಲ್ಮ ಉಳಿಯೊದಿಲ್ಲ
ನೀನು ಆನೆಗೊಂದ್ಯಾಗೆ ನೀನು ಇರಾಂಗಿಲ್ಲ
ಯಾದಕ ಮಾವ
ಎಲ್ಲಾರು ಆಡ್ತಾರ
ಹುಡುಗ್ರು ಒಳ್ಗೆ ಕಲಿಕ್ಯಂಡು ನಾನಾಡ್ತಿನಿ
ಛೀ ಛೀ ರಾಮಯ್ಯ
ಈ ಟೇಮಿನಾಗ ನಿಮ್ಮ ತಂದಿ
ಬ್ಯಾಟಿ ಮಾರ್ಗ ಹೊಂಟಾನ
ಮುನ್ನೂರು ಮಂದಿ ಕರಕಂಡು
ಈಗ ಎಲ್ಲಿ ನೋಡಿದ್ರೂ
ಇರಕಟ್ಟು ಆನೆಗುಂದಿದು
ಇತ್ತ ನೋಡಿದ್ರೆ ಹೊಳಿದಂಡಿ
ಇತ್ತಾ ನೋಡಿದ್ರೆ ಕೊಬ್ಬಿನ ಹೊಲಗಳು
ಇತ್ತ ನೋಡಿದ್ರೆ ಬಾಳೆ ವನಂತ್ರಗಳು
ಇತ್ತ ನೋಡಿದ್ರೆ ಊರು
ಇತ್ತಾ ನೋಡಿದ್ರೆ ಗುಡ್ಡ
ಯಪ್ಪಾ ಇರಕಟ್ಟು
ಮಾವ ಮತ್ತೆ ಹ್ಯಾಂಗ ಮಾಡಬೇಕು ಮಾವ
ಆಡಬೇಕಂತ ನನಗೆ ಆತ್ಮ ಜೀವಕ್ಕೆ
ನನ್ನ ಮನಸ್ಸು ಹುಟ್ಟೈತಿ ಮಾವ
ಓಹೋ ಸರೆಪ್ಪಾ
ನಿನಗೆ ಮನಸ್ಸು ಹುಟ್ಟೈತಿ ಅಂದ್ರೆ
ಎಲ್ಲೈಲಿಲ್ಲ ನಿಮ್ಮ ತಾಯಿ ಚಿಕ್ಕಮ್ಮ
ರತ್ನಾಕ್ಷಿ ಮನಿಯ ಕೆಳಗೆ
ಹತ್ತು ಎಕ್ರೆ ಅಲ್ಲ
ಹನ್ನೆರಡು ಎಕ್ರೆ ಬೀಳು ಐತಿ
ಅಲ್ಲಿ ಚೆಂಡಾಡಿದ್ರೆ
ಈಗ ತಟ್ಟಿದವರಿಗೇ
ಅಲ್ಲೇ ಸತ್ರೇನು ಕೇಸಿಲ್ಲ
ಜೀವ ಇದ್ದೋರ ಇನ್ನ ಊರಾಕ ಬರ್ತಾರ
ಇನ್ನು ಇಲ್ಲಿ ಆಡಂಗಿಲ್ಲ ರಾಮ
ಸರಿಮಾವ
ಮತ್ತೆ ಚೆಂಡನ್ನು ಯಾರು ಹಿಡಿತಾರ ಮಾವ
ಎಲ್ಲೈತಿ ರಾಮ ಚೆಂಡು ಆಡಾಕ ನೀನು
ಮತ್ತೆ ಚೆಂಡು ಸಿಗುವಲ್ದು ನೋಡ ಮಾವ
ರಬ್ಬರ್‌ ಚೆಂಡು ಐತಿ
ನಿಂಬೆ ಚೆಂಡು ಐತಿ
ಛೀ ಛೀ ಛೀ ಅಂತದು ಆಡ್ತೀಯಾ
ನೀನು ರಾಮ ಆರಂಡಿ ರಾಮ ಅಂತ ಹೆಸರಾಗಿ
ಇಪ್ಪತ್ತಾರು ದಡೇವು
ಕಬ್ಬಿಣ ಗುಂಡು ಎಬ್ಬಿಸಿಯಂತೆ
ಚೆಂಡು ಇರಬೇಕು ರಾಮಯ್ಯ
ಇಪ್ಪತ್ತಾರು ದಡೇವು ಬಂಗಾರದ
ಮುತ್ತಿನಚೆಂಡು ಐತಿ
ಎಲ್ಲೈತಿ ಮಾವ
ಎಲ್ಲಿಲ್ಲ
ಮತ್ತ ನಿನ್ನ ತಾಯಿ ತಂದಿ ನೋಡಿದ್ರೆ
ನನ್ನ ತಲಿಕಡ್ದು ಅಗಸಿಗೆ ಕಟ್ತಾರ
ನೀನು ಜೀವದ ಅಳಿಯ
ಆಗ ಹರೇದವರು
ಮಕ್ಕಳು ಆಡಲಾರ್ದ ಯಾರು ಆಡ್ಬೇಕು ಅಂತ
ನಾನು ಹೇಳ್ತಿನಿ

ಈಗ ನಿಮ್ಮ ತಾಯಿ ಮನ್ಯಾಗ ಇನ್ನ ಗರುಡಿ ಒಳಗೈತೋ || ತಂದಾನ ||

ನೋಡು ಗರುಡಿಯೊಳ್ಗೆ
ಭೂಮ್ಯಾಗೈತಿ ಹಾಗೇವುದಾಗ
ಮಾವ ಯಾರು ಮಾಡ್ಸಿದ್ದು
ದೇವಾನುದೇವತೆಗಳು ಆಡಿದ್ದು
ಆಗ ಬಂದು ಬಿದ್ದೈತಿ ಅಂತ ಮತ್ತ
ಆಗ ಕುಣಿ ಬಿದ್ದೈತಿ
ಹಗೇವು ಬಿದ್ದಂಗ
ಅದ್ರಾಗೆ ಭೂಮ್ಯಾಗ ಐತಪ್ಪ
ಓಹೋ ಅದನ್ನ ಹಿಡಿಯೋರಿಲ್ಲ ಆಡೋರಿಲ್ಲ
ಓಹೋ ಮಾವ
ಹಂಗಾರೆ ನಮ್ಮ ತಾಯಿಗ ಕೇಳಿದ್ರೆ ಕೊಡ್ತಿರಬಹುದಾ
ನೋಡಪ್ಪಾ ನಿನ್ನಿಷ್ಟ ನಿಮ್ಮ ತಾಯಿ ಇಷ್ಟ
ಇರಾದೇನು ನಿಮ್ಮ ತಾಯಿ ಮನ್ಯಾಗೈತಿ
ಮತ್ತೇ ನನ್ನ ಮ್ಯಾಲೆ ಹೇಳ್ಬೇಡ
ನಿಮ್ಮ ಮಾವ ಹೇಳ್ಯಾನಂದ್ರೆ
ನನ್ನ ತಲಿ ಕಡ್ದು ಅಗಸೀಗ ಕಟ್ತಾಳ
ಸರಿಮಾವ ಹೋಗಿಬರ್ತಿನಿ
ಎಂದು ಮಾವನ ಪಾದ ಮುಗ್ದ
ಆಗ ತಾಯಿ ಮನೀಗೆ ಬಂದ
ಆಗ ಬಾಕಿಲು ತಟಾದು
ಹೊಸ್ತಿಲು ತಟಾದು ಬಂದು
ಆಗ ಸಿಂಹಾಸನಮ್ಯಾಲೆ ಕುಂತ್ಗೋಣ ಮಗ
ಏನಪ್ಪಾ ಸಪ್ಪಾಗಾಗಿ ಬಂದು ಕುಂತಕೊಂಡೆ
ಹಾಲು ಸಕ್ರಿ ಅನ್ನ ಊಟ ಮಾಡು ಬಾ
ಛೀ ಛೀ ಅಮ್ಮಾ
ನಾನು ಹಡದ ತಾಯಿನ್ನ ಕೇಳ್ತೀನಮ್ಮ
ಈಗ ಹೊಟ್ಟ್ಯಾಗ ಒಂಬತ್ತು ತಿಂಗಳು
ಕೈಯಾಗ ಹದಿನೆಂಟು ವರುಷ
ಜೋಪಾನ ಮಾಡಿದ ತಾಯಿ ನೀನು

ಈಗ ಕೈಯಾಗ ಬೆಳೆಸೀಯೆ ನನ್ನ ಕೈಗ ಚೆಂಡು ಕೊಡಮ್ಮ
s ಮುಂದೆ ಓಡ್ಯಾಡ ಮಗಮ್ಮ ಓಡ್ಯಾಡಿ ನಾನು ಆಡೇನ ಚೆಂಡು || ತಂದಾನ ||

ಕೈಯಾಗ ಬೆಳಕೊಂಡವನು
ಕೈಗ ಚೆಂಡು ಕೊಡು
ಆಗ ಜೀವಕ್ಕಾಗಿ ಈಗಿನವ್ರು ಓಡ್ಯಾಡೋನು
ಈಗ ನಿನ್ನ ಮುಂದೆ ಓಡ್ಯಾಡಿ ಚೆಂಡು ಆಡ್ತೀನಮ್ಮ
ಓಹೋ
ಅಷ್ಟಾಗಲೆಪ್ಪ ರಾಮ
ಈಗ ಚೆಂಡು ಇದ್ರೆ ನಾನು ಕೊಡಾಕ
ಚೆಂಡು ಇಲ್ಲದೆ ಏನು ಕೊಡ್ಲಪ್ಪ ರಾಮ
ಅಮ್ಮಾಈಗ ನೀನು ಕೊಟ್ರೆ ಕೊಟ್ಟಂಗ ಇಲ್ಲದಿದ್ರೆ
ನಾನು ಅನ್ನ ನೀರು ಬಿಟ್ಟು
ಈಗ ಕಡಿಕ್ಯಂಡು ಸಾಯ್ತೀನೆ ನಿನ್ನ ಎದರಿಗೆ
ಅಯ್ಯೋ ನನ್ನ ಮಗ ಸತ್ರೆ
ನನ್ನ ಜೀವಕ್ಕ
ಇನ್ನ ಯಾರು ಈ ಆನೆಗುಂದಿ ಕಂಪ್ಲಿ ಪಟ್ಣಕ್ಕೆ
ಹೆಸರಾಗುವವರಿಲ್ಲ
ನನಗಿನ್ನೂ ಜಟೀಂಗೇಶ್ವರ ವರದಿಂದ
ಹುಟ್ಟ್ಯಾನ ಈ ಮಗ
ಅಂತಾ ಆ ತಾಯಿ ತಣ್ಣೀರು ಸ್ನಾನ ಮಾಡಿಕ್ಯಂಡು
ಈಗ ಊದಿ ಲೋಭಾನ ಹಾಕಿ
ಆಗ ಹರಿಯಾಳುದೇವಿ ಮುತ್ತಿನ ಸೆರಗಿನ ಮ್ಯಾಲೆ
ಆಗ ಎರಡು ಬೊಗಸಿ ಒಡ್ಡಿ

ಸ್ವಾಮಿ ಭೂಮಿ ಒಳ್ಗೆ ಎಲ್ಲಿ ಐದಿಯಪ್ಪ
ನಿನ್ನ ಮಗ ಆಡ್ತಾನ ಬಾರೋ ಲೋಕದಾಗ
ಲೋಕ ಹುಟ್ಟಿದ ಮಗ ಲೋಕ ಆಡುತಾನ
ಲೋಕ ಹುಟ್ಟಿದ ಮಗ
ಈಗ ಲೋಕವೆಲ್ಲ ನೋಡಾಕ ಬಂದಾರ ಶಿವನೆ || ತಂದಾನ ||

ಲೋಕವೆಲ್ಲ ನೋಡಾಕ ಬಂದಾರ
ಸ್ವಾಮಿ ಪರಮಾತ್ಮನೆ
ಈಗ ಎಲ್ಲಿ ಒಯ್ದಿ ಬಂಗಾರ ಮುತ್ತಿನ ಚೆಂಡು
ಮುತ್ತ ಪೋಣಿಸಿದಂತ ಚೆಂಡು ಅಂದ್ರೆ
ಆ ತಾಯಿ ಸೆರೆಗೊಡ್ಡಿ ಬೇಡಿದ ಮ್ಯಾಲೆ

ಭೂಮ್ಯಾಗ ಇರೋದು
ಮುತ್ತಿನಂತ ಚೆಂಡನ್ನ
ಇಪ್ಪತ್ತಾರು ದಡೇದೋ
ಗಡಗಡ ಗಡಗಡ ಅಂತಮ್ಮ
ಹೊರಾಗ ಬಂದು ಬಿಟ್ಟೈತೋ ಮುತ್ತಿನ ಸೆರಗಿನಾಗ ಬಿದ್ದೈತೋ || ತಂದಾನ ||

ಆಗ, ಸೆರಗಿನಾಗ ಬಿದ್ದುಮ್ಯಾಲೆ ಯಪ್ಪಾ ಮಗನಾ
ಈಗನ್ನ ಹಾಲು ಸಕ್ರಿ ಊಟ ಮಾಡಪ್ಪ
ಚೆಂಡು ಕೊಡ್ತಿನಿ
ಯಮ್ಮಾ ಮುಂಚೆ ನನ್ನ ಕೈಯಾಗ ಕೊಡು
ನಾನು ಕೈ ಮುಗ್ದು
ಹಾಲುಸಕ್ರಿ ಅನ್ನ ಮೂರು ತುತ್ತು ಬಾಯಾಗಿಟ್ಟು
ಈಗ ಅರ್ಧ ಹೊಟ್ಟಿ ಇರಲಿಕ್ಕೆ ಹೋಗಬೇಕು ನಾನು
ಚೆಂಡು ಹಿಡಿಯಾಕ ಆರಾಮು ಆಗತೈತಿ
ಸರಿಬಿಡು ಮಗನೆ
ಚೆಂಡು ತಗೋ ಮಗನೆ ಅಂತ ಕೈಗೆ ಕೊಟ್ಟಳು
ಕೊಡೋ ಹೊತ್ತಿಗೆ ತಾಯಿ ಪಾದ ಮುಗುದ
ಹಾಲು ಸಕ್ರಿ ಅನ್ನ ಮೂರು ತುತ್ತು ಬಾಯಾಗಿಟ್ಟುಕೊಂಡು
ಅರ್ಧ ಹೊಟ್ಟಿರಲಿಕ್ಕೆ ಎದ್ದುಬಿಟ್ಟ ರಾಮ
ಆಗ ರಾಮಯ್ಯ ತಾಯಿ ಪಾದ ಮುಗುದ
ಹೋಗಿಬರ್ತೀನಮ್ಮಾ ಅಪ್ಪಣೆ ಕೊಡು
ಹೋಗಿಬಾರಪ್ಪ
ಭಾಳ ಹುಷಾರದಲ್ಲಿ ಹೋಗಿ ಬಾರಪ್ಪ ಮಗನೆ
ಆ ರಾಮ ಚೆಂಡು ತಗಂಡು
ಆಗ ಅತ್ತೆ ಮನಿಗೆ ಬಂದ
ಯಾರೂ ಹಂಪಕ್ಕ
ಶರಣಮ್ಮ ಸ್ವಾದರತ್ತಿ
ಶರಣು ಮಾವ ಹಂಪಯ್ಯ
ಓಹೋ ಏನಪ್ಪ ಅಳಿಯಾ
ಚೆಂಡು ಇಸ್ಗಂಡು ಬಂದೀಯಾ
ಹೂಂ ಇಸ್ಗಂಡು ಬಂದೇ ಮಾವ
ನಮ್ಮ ತಾಯಿ ಕೈ ಮುಗ್ದು ಆಗ ಕಾಲಿಗಿ ಬಿದ್ದೆ
ಆಗ ಕೈಲಿ ಕೊಟ್ಟು ಬಿಟ್ಳು
ನಮ್ಮ ತಾಯಿ ಬಂಗಾರದ ಮುತ್ತಿನ ಚೆಂಡು
ಓಹೋ ಸರಿ ರಾಮಯ್ಯ
ಮತ್ತೆ ಎಲ್ಲಿ ಆಡಾನಪ್ಪ
ಎಲ್ಲೋ ಹನ್ನೆರಡು ಎಕ್ರಿ ಬೀಳೈತಿ ಅಂದ್ಯಲ್ಲ
ಅಲ್ಲಿ ಆಡಾನ ನಡಿಮಾವ
ಅಯ್ಯೋ ಈ ಟೇಮಿನಾಗ ನಿಮ್ಮಪ್ಪನವರು
ಅಡಿವಿಗೆ ಹೋಗ್ಯಾನ ಬ್ಯಾಟಿ ಮಾರ್ಗ
ಆಗ ನಿಮ್ಮ ತಾಯಿ ಮನೇಗೂ ಹೋಗ್ಭಾರದಂತ
ಮನಿಕೆಳಾಗೆ ಏನೂ ಮಾಡಬಾರದಂತ
ನಿಮ್ಮ ತಂದಿ ಹೇಳಿ ಹೋಗ್ಯಾನಪ್ಪ ಕಾಯಾಕ
ಅಯ್ಯೋ ನಮ್ಮ ತಂದಿ ಬಂದ್ರ ಆಡಗೊಡಸಾದಿಲ್ಲ
ನಮ್ಮ ತಂದಿ ಬಂದ ಮುಂಚೇಗೆ ನಾವು ಆಡ್ಬೇಕು
ಸರಿಯಪ್ಪಾ ಮತ್ತ ಚೆಂಡು ಹಿಡಿಯೋರ್ಯಾರು
ನೀನು ಒಗೀತಿ
ನಿನಗೆ ಎದುರು ಎಡಗೈ ಬಲ ಯಾವನು
ನೋಡ್ರೀ
ನೀನು ಮಾವ ನಾನು ಅಳಿಯ
ನಾನ್ಹಾಕ್ತಿನಿ ನೀನ್ಹೀಡಿ
ಏಯಪ್ಪ ನನ್ಗ ಸಾಧ್ಯವಾಗೋದಿಲ್ಲ
ನನ್ನ ಕೈಲಾಗಾದಿಲ್ಲ
ಮತ್ತೆ ಹ್ಯಂಗ ಮಾವ
ನೋಡಪ್ಪಾ ಪರಾಕ್ರಮದವರು ಎಲ್ಲೈದಾರೆಂದ್ರೆ
ಹುಣೇಸೇಗಿಡ ಬಡ್ಡಿ ಎಡಗೈಲಿ ಕಿತ್ತೋರಿದಾರ
ಯಾರು ಮಾವ
ಗುಂತಕಲ್ಲ ಜಟ್ಟಿ
ಅಧೋನಿಜಟ್ಟಿ
ಬೊಂಬಾಯಿ ಜಟ್ಟಿ ಮೈಸೂರು ಜಟ್ಟಿ
ಅಂಗಾರ ಕರ್ಕಂಡು ಬಾ ಮಾವ
ಏ ಸುಮ್ನೆ ಬರೋರಲ್ಲ ಜಟ್ಟೆವ್ರು
ಒಬ್ಬೊಬ್ಬರಿಗೆ
ಇನ್ನೂರು ಮುನ್ನೂರು ಕೊಟ್ರೆ ಬರೋರು
ಅವ್ರು ರೊಕ್ಕ ತಗಂಡೇ ಬರೋದು
ಆಗ ಸುಮ್ನೆ ಬರಾದಿಲ್ಲ
ಸರಿ ಮಾವ ಮತ್ತೆ ಹ್ಯಾಂಗ ಮಾವ
ಎನ್ಮಾಡ್ಬೇಕಪ್ಪ ನಿಮ್ಮ ತಾಯಿನ ಹೋಗಿ
ಬೇಡಿಕ್ಯಂಡು ಬಂದು ನನಗ ಕೊಟ್ರೆ
ನಾನು ಕರ್ಕಂಡು ಬರ್ತಿನಿ
ಸರಿ ಬಿಡುಮಾವ
ತಾಯಿ ಮನಿಗಿ ಬಂದ
ಯಮ್ಮಾ ನಿಮ್ಮ ಪಾದಕ್ಕೆ ಶರಣು
ಏನಪ್ಪಾ ಮಗನೇ ಚೆಂಡು ಆಡ್ದಿ ಏನಪ್ಪಾ
ಆಡಿಲ್ಲಮ್ಮಾ, ಯಾರ್ದೂ ಕೈಲಾಗದಿಲ್ಲ
ಚೆಂಡು ಹಿಡಿಯೋರು
ಎಡಗೈ ಬಲದವರಿಲ್ಲ ನನಗೆ
ನಾನು ಒಗಿತೀನಿ ಹಿಡಿಯೊರ್ಯಾರು
ಆಗೋ ಗುಂತಕಲ್ಲ ಜಟ್ಟಿ ಅದೋನಿ ಜಟ್ಟಿ
ಇನ್ನ ಮೈಸೂರು ಜಟ್ಟಿ ಬರಬೇಕಂತೆ
ಅವ್ರು ರೊಕ್ಕ ಕೊಟ್ರೆ ಬರ್ತಾರಂತೆ

ಐನೂರು ಕೊಡಮ್ಮ ನಿನ್ನ ಮಗನಿಗಮ್ಮಾ
ಮಗನಾ ನಾನು ಏನು ಮಾಡ್ಲಿಯಪ್ಪಾ
ನನ್ನ ಕೈಯಾಗ ನಡೆಯೋದಿಲ್ಲೋ || ತಂದಾನ ||

ನನ್ನ ಮಗಗ ರೊಕ್ಕ ಕೊಟ್ಟು ಕಳಿಸಿರ್ರೆ
ಈಗ ನನ್ನ ಜೀವ ತಗೀತನಲ್ಲ
ಕಂಪಿಲಿ ರಾಜ ನನ್ನ ಜೀವದ ಗಂಡ ಒಳ್ಳೆಯವನಲ್ಲ
ಕೇಳವೇ ಕೈಯಾಗಿದ್ದ ಮಕ್ಕಳಿಗೆ
ರೊಕ್ಕ ಕೊಡುಂತ ಹೇಳಿದ್ನ ನಾನು
ಅಂತ ಜೀವ ತೆಗೀತಾನ
ಇಲ್ಲಪ್ಪ
ಯಮ್ಮ ನಿನ್ನ ಪಾದಕ್ಕೆ ಶರಣಂತ
ಪಾದಕ್ಕೆ ಬೀಳೋ ಹೊತ್ತಿಗೆ
ಮಗಗಿನ್ನ ಹೆಚ್ಚು ಬಂದಿಲ್ಲ
ಅಂತಾ ಆಗ ಐನ್ನೂರು ಲೆಖ್ಖ ಮಾಡಿ ಕೊಟ್ಟು ಬಿಟ್ಳು
ಆಗ ಐನ್ನೂರು ತಗಂಡು ಬಂದು
ಮಾವನ ಕೈಗ ಕೊಟ್ಟ
ಮಾವ ಏನ್ಮಾಡಿದ
ಆಗ ಮುನ್ನೂರು ಇನ್ನವರುತಾವಾಗಿ ಕೇಳಿದ್ರೆ
ಇಲ್ಲಪ್ಪಾ ಚೆಂಡು ಎತ್ತಿದ ಮ್ಯಾಲೆ ಕೊಡ್ತಿವಿ ನಾವು
ಈಗ ನೂರು ನೂರು ರೂಪಾಯಿ ಸಂಚಗಾರ ತಗೋರಿ ಅಂತ
ಆಗ ಐದು ಮಂದಿ ಜಟ್ಟಿಯವರನ್ನು ಕರ್ಕಂಡು ಬಂದ
ಒಬ್ಬೊಬ್ರು ಹುಣಿಸೇ ಬೊಡ್ಡಿ ಇದ್ದಂಗೈದಾರ
ಮೀಸೆ ಒಡಿ ತಿರುಗ್ಯೋಗ್ಯಾವ
ಗುಜ್ಜಲೋನು,. ಮೀನಲೋನು, ಇಟ್ಟಿಗೆಲೋನು
ವಾಯ್ಲೋನು ಎದುರು ಮೊಡೆಯೋನು
ನಾಯ್ಕರ ಕುಲದಾದ
ದೊರೆ ನಾಯ್ಕರು ಬಂದು
ಆಗ ಶರಣ್ರಿ ರಾಮಯ್ಯ
ಶರಣಪ್ಪ ಜಟ್ಟಿಯವರೆ
ಈ ಚೆಂಡು ಯಾವನು
ಎಬ್ಬಸ್ತಾನೋ ಗೇಣಷ್ಟು
ಅವನೇ ನನ್ನ ಎಡಗೈ ಬಲ
ಚೆಂಡು ಎಬ್ಬಿಸಲಾರವ್ನು
ಸುಮ್ನೆ ನಿಂತಕಂಡ್ರೆ
ಜನಲೋಕ ಇಪ್ಪತ್ತು ಮಂದಿ ಬಂದು ಬಿಟ್ಟಾರಪ್ಪ
ಜನಲೋಕ ಇಪ್ಪತ್ತು ಊರುಗಳ ಮಂದಿ
ರಾಮ ಚೆಂಡು ಆಡ್ತಾನಂತೆ
ಇಪ್ಪತ್ತಾರು ದಡೇವು ಬಂಗಾರ
ಮುತ್ತಿನ ಚೆಂಡಂತೆ
ದೇವರು ಆಡಿದ್ದ ಚೆಂಡು
ಪರಮಾತ್ಮ ಆಡಿದ್ದು ಚೆಂಡು
ಮಗ ಆಡ್ತಾನಂತ
ನಾವೆಲ್ಲ ಲೋಕ ನೋಡಾನ.
ರಾಮನ ಚೆಂಡು ಅಂತ ನಿಂತಕಂಡ್ರೆ
ಆಗ ಏನ್ಮಾಡಿದ ಬೋಂಬಾಯಿ ಜಟ್ಟಿಯವನು ಬಂದ

ಜಟ್ಟಿ ಕೈ ಮುಗಿದಾನ
ಎನ್ನ ಶರಣು ಮಾಡ್ಯಾನ
ಏ ಎರಡು ಕೈಲಿ ಹಿಡ್ದಾಣ
ಹಿಡಿದು ಒತ್ತಿನೋಡಾಣ್ಣ
ತೋಥಡಿ ಗೇಣಷ್ಟು ಎಬ್ಬಿಸಿಲ್ಲ
ಅಂಗೇ ನೆಲಕ್ಕೆ ಕುಂತೈತೋ || ತಂದಾನ ||