ರಾಮ ಸಣ್ಣ ಮಕ ಮಾಡಿಕ್ಯಂಡ ನೋಡಿದ
ತಾಯಿಯಲ್ಲಿ ಎಷ್ಟು ಗುಣಗಳಿರಬಹುದು
ಎಂಥಾ ಖರ್ಮ ತಾಯಿ ನನ್ನ ಜೀವಕ್ಕ ಇರಬಹುದು
ಹೊಟ್ಟ್ಯಾಗ ಹುಟ್ಟಿದ ಮಕ್ಳನ್ನ
ಅಷ್ಟು ಜೀವಗ್ಹುಟ್ಟಿದ ಮಕ್ಕಳುನ್ನ
ಜೀವಕ್ಕಲಿಬೇಕಾಂತಾಳಲ್ಲ
ಎಂಥಾ ಖರ್ಮ ತಾಯಮ್ಮಾ ಎಂಥಾ ಪಾಪ ತಾಯಮ್ಮಾ ನನಗೆ || ತಂದಾನ ||

ಮಾವ ಸ್ವಾದರ ಮಾವ ಬಚ್ಚಣ್ಣ
ತಮ್ಮಾ ಓಲಿಕ್ಯ
ಏನೋ ಅಣ್ಣ
ಓಹೋ ನನ್ನ ಲುಂಗಿ ಕೊಯ್ಯಕ್ಯಂಡು ಬಿಟ್ಟಾಳ
ನಾನ ಹ್ಯಾಂಗ ಮಾಡಬೇಕೆಂಬೊತ್ತಿಗೆ
ಆಗ ಜೀವಕ್ಕ
ರಾಮಾ ಈಗ ಬ್ಯಾಡಂದ್ರೆ ಹೋಗಿಬಿಟ್ಟಿ ರಾಮಯ್ಯ
ನಾನೇನು ಮಾಡ್ಲ್ಯೋ ರಾಮ
ಓಹೋ ಈಗ ನಮ್ಮ ತಂದಿ ಬಂದ್ರೆ
ಏನು ಮಾಡ್ತಾನೋ ಅಂತ
ಆಗ ಸ್ವಾದರಮಾವ ಬಚ್ಚಣ್ಣ
ಈಗ ತಮ್ಮಯ್ಯಾ ಓಲಿಕ್ಯ
ಆಗ ರಾಜ ಕಛೇರಿಗೆ ಬಂದ್ರು
ನೆಲಮನೆ ಗರಡಿಯೊಳಕ
ಆಗ ಓಲಿಕ್ಯ ರಾಮನ ಕರ್ಕಂಡು
ಕೈಗೆ ಸರಪಣ
ಕಾಲಿಗ ಸರಪಣ ಹಾಕಿ
ಮೂರು ಕಡ್ಡಿ ಬಾಕ್ಲಿಗೆ ಬೀಗ ಹಾಕಿದ್ರು
ಬೀಗಹಾಕಿ ತಾಯಿಮನಿಗೆ ಕರ್ಕಂಡು ಬಂದ
ಅಕ್ಕಾ ಹರಿಯಾಳದೇವಿ
ಏನಪ್ಪಾ ತಮ್ಮ
ಈಗ ಭಚ್ಚಣ್ಣ ಏನಿಲ್ಲಾ
ನಿನ್ನ ಮಗನ್ನ ಬಿಡ್ತೀನಿ ನಿನ್ನ ಮನ್ಯಾಗ
ನಾನ ಹೋಗ್ತಿನಿ
ಅಂತಾ ಆಗ ಹೆಂಡ್ತಿ ಮನೆಗಿ ಹೋಗಿಬಿಟ್ಟ ಬಚ್ಚಣ್ಣ
ರಾಮ ಸಪ್ಪಗಾಗಿ ಕುಂತಗಂಡ
ಏನಪ್ಪಾ ಹಾಲು ಸಕ್ರಿ ಅನ್ನ ಊಟ ಮಾಡು ಬಾ
ಯಮ್ಮಾ ನಾನು ಊಟ ಮಾಡಂಗಿಲ್ಲ
ನನಗ ಹಸಿವು ಆಗಂಗಿಲ್ಲ
ಯದಕಪ್ಪಾ
ಇಲ್ಲಮ್ಮಾ ನನಗ ಹಸಿವಾದ್ರಲ್ಲ ಜೀವಕ್ಕ
ಇತ್ತ ಕಂಪ್ಲಿರಾಜ ಬ್ಯಾಟಿ ಮಾರ್ಗ ಹೋದವ್ನು
ನೀರಡಿಕೆ ತಡೀಲಾರ್ದೆ
ನಾರಿಹಳ್ಳಿಗ ಬಂದು ಊರು ಮುಂದೆ
ನೀರು ಕುಡಿಯೋ ಟೇಮಿನಾಗ
ಹೇಣ್ತೀನ ನೆನಸಿಕ್ಯಂಡ
ಓಹೋ ಚರಿಗಿ ನೀರಿಟ್ಟು ಹೋಗಾಕಿ
ಜಲ್ಮಕ ಜೀವಕ ಹೇಣ್ತಿ ಜೀವಕ್ಕ ನೀರು ಕುಡಿಸಾಕಿ
ನನ್ನ ಚಿಕ್ಕ ಹೆಣ್ತಿ ರತ್ನಾಕ್ಷಿ
ಆಗ ಒಬ್ಬಾಕೀನ ಬಿಟ್ಟು ಬಂದೀನಂತ

ಆಗ ಇನ್ನ ನೋಡಣ್ಣ
ಕುದುರಿ ಓಡಿಸಿ ಬಿಟ್ಟಾಣ
ಆನೆಗುಂದಿಗೆ ಬಂದಾರ
ತೋಥಡಿ ರಾಜಕಛೇರಿ ಮುಂದೆನ್ನ
ಕುದುರಿ ಮ್ಯಾಲಿದ್ದನ್ನ
ಕೆಳಗೆ ಇಳಿದು ಬಿಟ್ಟಾನ || ತಂದಾನ ||

ಕೆಳಗೆ ಇಳ್ದ
ಇಳ್ದು ಏನ್ಮಾಡಿದ
ಕುದುರಿ ಕಟ್ಟಿಹಾಕಿದ
ಕುದುರಿ ಕಟ್ಟಿ ಹಾಕಿ
ಆಗಿನ್ನ ಕುಲಕ್ಕೆ ಈಗ ಚಿಕ್ಕಹೇಣ್ತಿ
ರತ್ನಾಕ್ಷಿ ಮನೆಗೆ ಬಂದ
ರತ್ನಾಕ್ಷಿ ಮನೆಗೆ ಬಂದ್ರೆ
ಆಕಿ ಸೀರೆಲ್ಲಾ ಹರೆ ಬಡ್ಕಂಡು
ಕೈಯಾನ ಬಳಿ ತಗಂಡು
ಮೈಯೆಲ್ಲಾ ಸೀಳಿಕ್ಯಂಡು
ಜಮ್ಖಾನ ಹೊದ್ಕಂಡು
ಹೊರ್ಸ ಮ್ಯಾಲೆ ಅಡ್ಡ ಬಿದ್ದಾಳ
ಏನೇ ಜೀವದ ಹೆಂಡ್ತಿ
ಚಿಕ್ಕ ಹೆಂಡ್ತಿ ರತ್ನಾಕ್ಷಿ
ಚರಿಗೆ ನೀರು ಕೊಡು
ಛೀ ಬುದ್ಧಿ ಇಲ್ಲದವ್ನೆ

ಇಬ್ಬರು ನಡುವೆ ಐದಿನ್ಯ ನಿನ್ನ ಮಗ ಒಂದು ರಾಮಯ್ಯ || ತಂದಾನ ||

ಏನ್ರಿ ನಾನು ಇಬ್ರು ನಡುವ್ಲೆ ಇದೀನ್ಯ
ನೀನು ಹೋದ ಮ್ಯಾಲೆ
ನಿನ್ನ ಮಗ ರಾಮಯ್ಯ ಬಂದು
ಯಪ್ಪಾ ತಾಯಿ ಆಗಬೇಕು
ಈಗ ನಿಮ್ಮ ತಂದಿ ಜೀವಕ್ಕೆ
ನನ್ನ ತಾಳಿ ಕಟ್ಟ್ಯಾನಂದ್ರೆ
ಛೀ ನನಗ ತಗದು
ನನ್ನ ತಂದಿ ಹ್ಯಾಂಗ ತಾಳಿ ಕಟ್ಟಿದ
ನೀನೇ ನನ್ನ ಜೀವದವಳು ಜೀವಕ್ಕಲಿಬೇಕಂತ
ಈಗ ಬಂದು ಕೈಯಾನ ಬಳೆಯೆಲ್ಲಾ ಒಡೆಬಡ್ದ
ಈಗ ಸೀರೆ ಎಲ್ಲಾ ಹರೇಬಡ್ದ

ನನ್ನ ಬಂದು ಮಾಡಿ ಹೋಗ್ಯಾನ ನೀನು ಜೀವದ ಮಗ ಜೀವಕ್ಕೆ
s ಆತ ಜೀವದ ಗಂಡಯ್ಯ ನೀನು ನನಗೆ ಗಂಡಲ್ಲೋ || ತಂದಾನ ||

ಏನೇ ವಾಲಿ ಸುಗ್ರೀವ ಕುಲಾಯ್ತು
ನಮ್ಮ ಜೊತಿ ಅಂಬೊತ್ತಿಗೆ
ಛೀ ಅಂಥೋನಲ್ಲ ರಾಮಯ್ಯ
ಹೆಣ್ಮಕ್ಕಳ ಕೂಟ ಮಾತಾಡೋನಲ್ಲ
ಕಣ್ಣೆತ್ತಿ ನೋಡವನಲ್ಲ
ತಲೆ ಬಗ್ಗಿಸಿ ಭೂತಾಯಿ ನೋಡಿಕ್ಯಂಡ
ನಡಿಯಂತ ರಾಮಯ್ಯ
ಛೀ ಆಗ ಅನ್ಯಾಯದ ಮಾತ ನುಡಿಬ್ಯಾಡ
ಇಲ್ರೀ ಈ ಬಟ್ಟೆ ಯಾರು ಉಡ್ತಾರ್ರೀ
ನೀನು ತಂದು ನಿನ್ನ ಮಗನಿಗೆ ಕೊಟ್ಟಿಲ್ಲ ಏನು
ಅಂಥಾ ಬಗಿಸಿ ಬಟ್ಟೆ ಕೊಯ್ಯೀಕಂಡೀನಂತ ತೋರಿಸ್ತಾಳ
ಅಲೆಲೆ ಆಗ ಕಂಪ್ಲಿ ರಾಜ ನೋಡ್ದ
ಅಲೆಲೆ ಖರೆವೇ ನಾನ ತಂದಿದ್ದೆ
ಈಗ ಕಾವಿಬಟ್ಟಿ
ಛೀ ಈ ನನ್ನ ಮಗ ತಾಯಿಯನ್ನ
ಭಂಗ ಮಾಡಿದಮ್ಯಾಲೆ
ಜೀವಕ್ಕ ಹುಟ್ಟಿದವ್ನು
ಜೀವಕ್ಕೆ ಭಂಗ ಮಾಡಿದ ಮ್ಯಾಲೆ
ಇಂಥ ಮಗ ಜೀವದ ಮಗ ಇರಬಾರ್ದು
ರಾಜ ಕಛೇರಿಗೆ ಬಂದು ಕುಂತ್ಗಂಡ
ಸಿಂಹಾಸನದ ಮ್ಯಾಲೆ
ಏ ಆಗ ಭಚ್ಚಣ್ಣ ಬಾರೋ ಅಂದ
ಏನ್ರಿ
ಏನಿಲ್ಲಾ ರಾಮನಿಗೆ
ಈಗ ತಾಯಿಯನ್ನ ಭಂಗ ಮಾಡಿದವ್ನು
ಚೆಂಡಾಡಂತ ಯಾವ್ನ ಹೇಳ್ಧ
ನಾನು ಆರ್ಡರ್‌ ಕೊಟ್ಟಿದ್ನ ನಿಮಗೆ
ನಾನು ಏನಂತ ಹೇಳಿದ್ದೆ ನಿಮಗೆ
ನಾನು ಏನಂತ ಹೇಳಿದ್ದೆ ನಿಮಗೆ
ಇಲ್ರೀ ಬ್ಯಾಡಂದ್ರೆ
ಇತ್ತಾಗ ನೋಡಿದ್ರೆ ಹೊಳೆದಂಡಿ
ಇತ್ತಾಗ ನೋಡಿದ್ರೆ ಕಬ್ಬಿಣ ಹೊಲಗಳು
ಇತ್ತಾಗ ನೋಡಿದ್ರೆ ಬಾಳೇಗಿಡಗಳು
ಆಗಿನವು ಇರಕಟ್ಟು ಊರು ಆನೆಗುಂದಿ
ಅಂತ ಮೂರು ಅಗಸಿ ಹೊರಗ
ಆನೆ ಒಂಟೆ ಕಟ್ಟಿ ಹಾಕೋತಲ್ಲಿ
ರತ್ನಾಕ್ಷಿ ಮನಿ ಕೆಳಗ
ಆಗ ಇಪ್ಪತ್ತೇಕ್ರಿ ಭೂಮಿ
ಆಗ ಬೀಳು ಐತಿ ಅಂತ
ಆಗ ನಿನ್ನ ತಾಯಿ ಮನಿ ಕೆಳಗ
ಆಡಿದ್ರೆನು ತಪ್ಪಿಲ್ಲಂತ ಆಡಿಬಿಟ್ಟ ಮಗ
ಆದ್ರೆ ಈ ಚೆಂಡು ಹೋಗಿ
ಗಾಳಿಮಳಿ ಬಂದಾಂಗಾತು
ಕೆಂಪುಗಾಳಿ ಎದ್ದು ಬಿಡ್ತು
ಆಗ ಮನಿ ಕಡಿಗೆ ಹೋಯ್ತು
ಮನ್ಯಾಗ ಬಿದ್ದೈತಂತೆ
ಕಬ್ಬಿಣ ಬುಟ್ಟಿ ಮುಚ್ಚಿದ್ರೆ
ತಾಯಿಗ ಕೈಯೊಡ್ಡಿ ಬೇಡಿಕ್ಯಂಡ್ರೆ ನಾ
ಏ ದುಷ್ಠ ಬಕ್‌ ಬಾಯೋನೆ
ರಾಮಗ ಮಾಡಿದ್ರೆ ಜಲ್ಮ ಹೋಗ್ತಿದ್ದಿಲ್ಲ
ಈಗ ರಾಮನ ತಗದು ಬಚ್ಚಿಕ್ಕಿ
ನೀನು ಲಗ್ನ ಮಾಡಿಕ್ಯಂಡಿ ಕಂಬ್ಳಿ ಮುಚ್ಚಿಕ್ಯಂಡು
ಈಗಿನವ್ರು ತಾವು ಕುಲಕ್ಕೆ
ನನ್ನ ಜೀವಕ್ಕ ಕಲೀಬೇಕು
ನನ್ನ ಜೀವಕ್ಕ ಚೆಂಡಾಡಬೇಕು ಅಂತ
ರತ್ನಾಕ್ಷಿ ಅಂಥಾ ಮಾತುಗಳು ನುಡೀತಿದ್ರೆ
ಆಗ ಗಗನಕ್ಕ ಹಾರಿತಂತೆ
ಆಗ ಇವ ಚೆಂಡು ಹಿಡಿಕೋಬೇಕಂತ
ಆ ಚೆಂಡಿಂದೆ ಹೋಗುವಾಗ
ಮೂರು ದಡೇವು ಚಂದ್ರಾಯ್ಧ ಕೆಳಗಿಟ್ಟಿದ್ರೆ
ಆಗ ಕುರ್ಚಿಮ್ಯಾಲೆ ಕುಂತಾಕಿ
ವರಸಿನ ಮ್ಯಾಲೆನ ಕೆಳಗಿಳ್ದು
ಅಂಗೈಲಿ ಲುಂಗಿ ಕೊಯ್ಯಿಕಂಡ್ಳಂತೆ
ಈ ಬಟ್ಟೇನ
ಏನಯ್ಯ ನಿನ್ನ ಚಿಕ್ಕ ಹೆಂಡ್ತಿ ಮಾತು ಕೇಳಿ
ರಾಮನಿಗೆ ಏನು ಮಾಡ್ಬೇಕು ಅಂತಾ ಇದ್ದಿ
ಕೈಗೆ ಬಂದ ರಾಮನ
ಇನ್ನ ಲಗ್ನ ಇಲ್ಲ ಏನು ಇಲ್ಲ ರಾಮನಿಗೆ
ಓಹೋ ಕೇಳಲೆ ಅಲ್ಲ ಈಗ ಮಗ
ದುಷ್ಠ ಅವನು ಮಗ ಅಲ್ಲ ಖರ್ಮದವ್ನು
ಈ ಲೋಕ ಹುಟ್ಟಿದವ್ನು ಇರಬಾರ್ದು ಲೋಕದಾಗ
ಇಗೋ ರಾಮನ ಆರು ಮಂದಿ ಕಟ್ಟಿಗೇರು ಕರಕಂಡು ಹೋಗಿ
ಈಗಿನ ಅಚ್ಚನಬಂಡೆ
ಆಗ ತೆಲೆಯೊಡ್ಯೊ ಮರಗಿಡ ಕೆಳಗೆ

ರಾಮನಿಗಿ ನಿಂದ್ರಿಸಿರಿ ರಾಮನಿಗೆ ಕಡಿಯಿರಿ
s ರಾಮನ ತಲಿ ತರಬೇಕು, ರತ್ನಾಕ್ಷಿ ಕೈಗೆ ಕೊಡಬೇಕು
ಚಿಕ್ಕ ಹೆಂಡ್ತಿ ಕೈಗೆ || ತಂದಾನ ||

ಹಂಗಾರೆ ನನ್ನ ಜೀವಕ್ಕೆ ಇರ್ತಾಳಂತೆ
ಇಲ್ಲದಿದ್ರೆ ನನ್ನ ಜೀವಕ್ಕರದಿಲ್ಲವಂತೆ
ಅಂಬೋತ್ತಿಗೆ
ಅಯ್ಯಾ ಕಂಪ್ಲಿರಾಜ

ರಾಮನ ಜಲ್ಮ ಕಳಿಯ ಬ್ಯಾಡ ಲೋಕದಾಗ
ನಿನ್ನ ಮಾತಿಗೆ ಯಾರು ಎದುರು ಮಾತು ಕೋಡೊದಿಲ
ರಾಮೋs ಇನ್ನ ಸತ್ತಮ್ಯಾಲೆ ಊರಾಗ
ಆನೆಗುಂದಿ ಪಟ್ಣದಾಗ
ಡಿಲ್ಲಿದವ್ನು ಬರ್ತಾನ ಲೋಕದವ್ನು ಕೋಳೊಮಾವ || ತಂದಾನ ||

ಡಿಲ್ಲಿಯವ್ನು ಬರ್ತಾನ
ಬಂದು ಆಗ ಆನೆಲಿದ್ದ ತುಳಿಸ್ತಾನ
ಮೂರಂತಸ್ತಿನ ಮಾಳಿಗೆಯ ಮನೆಗಳೆಲ್ಲ
ಆಗ ತುಳಿದ ಬಿಡ್ತಾನ
ಈಗ ಬಾಳೆ ಗಿಡಗಳು ನಾಟಿ ಹೋಗ್ತಾನ
ಈಬ ಕೊಬ್ಬು ನಾಟಿ ಹೋಗ್ತಾನ
ಅಯ್ಯಾ ನಿನ್ನ ಕುತ್ತಿಗೆ ಕೊಯ್ತಾನ
ಈಗ ನಿನ್ನ ಹೆಂಡ್ತಿ ರತ್ನಾಕ್ಷಿಯನ್ನು
ಎಳಕಂಡು ಹೋಗುತಾನ ಡಿಲ್ಲಿಪಟ್ಣಕ್ಕೆ
ಅಂಬೋತ್ತಿಗೆ
ಕೇಳವೋ ನನ್ನ ಜೀವದ ಕುತ್ಗಿ ಹೋದ್ರು ಚಿಂತಿಲ್ಲ
ನನ್ನ ಹೆಂಡ್ತಿ ರತ್ನಾಕ್ಷಿಯನ್ನ
ಡಿಲ್ಲಿದವನಿಗೆ ಕೊಟ್ಟು
ಡಿಲ್ಲಿ ಗೋಲ್ಕಂಡಗೆ ಕೊಟ್ಟು
ನವಾಬ ಸಾಯಬ್ರಿಗ ಕೊಟ್ಟು
ಆಗ ಶರಣು ಮಾಡ್ತಿನಿ
ನನ್ನ ಮಗ ಇರಬಾರದು ಅಂತಾ
ಕಡಿರಿ ಅಂತ ಆರ್ಡರ್‌ ಕೊಟ್ರು
ಆಗ ಆರ್ಡರ್‌ ಕೊಟ್ಟ ಮ್ಯಾಲೆ
ಯಾರು ಎದುರು ಮಾತಾಡಂಗಿಲ್ಲ
ಆಗ ಬಂದು ಬಿಟ್ಟ ಸ್ವಾದರಮಾವ ಬಚ್ಚಣ್ಣ

ಯಮ್ಮಾ ರಾಮನ ಪಾದಕ್ಕೆ ಬಾರ್ಲ ಬಿದ್ದಿದ್ದಾರೆ
ಇನ್ನ ಆಯಿತಪ್ಪ ರಾಮ ಹೋಗುತ್ತಿಯೋ
ರಾಮಾ ಚೆಂಡಾಡಿ ನಿನ್ನ ಜೀವ ಹೋಗುತ್ತದೋ ರಾಮಯ್ಯ
ಮಗನೆ ಪಾದಬಿದ್ದು ತಾಯಿ ಅಳುತಾಳಮ್ಮಾ
ಯಪ್ಪಾ ಕೈಯಾಗ ಬೆಳಿಸಿದೆ ನಿನ್ನ || ತಂದಾನ ||

ಆಗ ತಾಯಿ ಮಗನ ಪಾದಕ್ಕ ಬಿದ್ದು ಅಳ್ತಾ ಇದ್ರೆ
ಆಗ ಮಗ ಏನಂತಾನ
ಅಮ್ಮಾ ಸಾವು ಅಂದ್ರೆ
ನನಗ ಸಂತೋಷ ಆಗೇತಿ ಜೀವಕ್ಕ
ಆನಂದ ಸುಖ ಪಡ್ತೀನಮ್ಮ
ಈ ಲೋಕನೇ ಬ್ಯಾಡ
ಈ ರಾಜ್ಯನೇ ಬ್ಯಾಡ
ನಮ್ಮಪ್ಪ ಪುಣ್ಯಾತ್ಮನಮ್ಮ
ಕಡಿಸಾಕ ಆರ್ಡರ್‌ ಕೊಟ್ಟಾನ ನನಗೆ
ಈಗ ನಾನು ಹೋಗ್ತೀನಿ ತಾಯಿ
ಅಲ್ಲ ನಿನ್ನ ಮಗ
ಜಟೀಂಗೀಶ್ವರ ಮಗ ನಾನು
ಅಂತಾ ಈ ಆರಂಡಿ ಲೋಕರಾಮ ಹುಟ್ಟೀನಿ
ಆರಂಡೆ ಇರಬೇಕಮ್ಮಾ
ನಾನು ಊರಾಗಿರಾಂಗಿಲಲ ತಾಯಿ
ಪಟ್ಣದಾಗ ಅಂತಾ
ಆ ರಾಮ ಏನಂತಾನ

ಈಗ ಹೊಯ್ತಿನಮ್ಮ ಶರಣು ಪಾದಕಮ್ಮಾ
ತಾಯಿ ಒಳ್ಯಾಡಿ ಒಳ್ಯಾಡಿ ತಾಯಿ ಅಳ್ತಾಳಮ್ಮೋ
ಎಂಥಾ ಪಾಪಿ ಕರ್ಮ ನಿನ್ನ ತಂದಿ ಐದಾನಲ್ಲೋ
ಎಂಥಾ ದುಷ್ಠದವನು ನಿನ್ನ ತಂದಿ ಐದಾನಪ್ಪ ಯಪ್ಪಾ ಮಗನ || ತಂದಾನ ||

ಆಹಾ ತಾಯಿ ದುಃಖ ಮಾಡ್ತಾಳ
ಸ್ವಾದರ ಮಾವ ಬಚ್ಚಣ್ಣ
ಸ್ವಾದರತ್ತಿ ಹಂಪಕ್ಕ
ರಾಮನಿಗೆ ದಡೆವಂತೆ ಮಲ್ಲಿಗಿ ಹೂವಾ ಹಾಕಿ
ಜೀವದಲ್ಲಾಗಿ

ರಾಮನ್ನ ಬಜಾರಾದಾಗ ಕರ್ಕಂಡು ಬರ್ತಾರಮ್ಮೋ
ರಾಮ ಹೋಗ್ತಿಯಪ್ಪಾ
ಮೂರ ಅಗಸಿ ಹೊರಗೆ
ರಾಮನ್ನ ಕರ್ಕಂಡು ಬಂದ್ರು || ತಂದಾನ ||

ಆಹಾ ಮೂರು ಅಗಸಿ ಹೊರಗ
ಕರ್ಕಂಡು ಬಂದು
ತಲೆಯೊಡ್ಯೊ ಮರಗಿಡ ಅಚ್ಚನ ಬಂಡೆ
ಕೆಳಗೆ ರಾಮನ ನಿಂದ್ರಿಸಿದ್ರು
ರಾಮನ್ನ ನಿಂದ್ರಿಸಿ
ಆರು ಮಂದಿ ಕಟಿಗೇರು
ಈಗ ದಡೇವು ಮಲ್ಲಿಗೆ ಹೂ
ರಾಮನ ಕೊಳ್ಳಿಗೆ ಹಾಕ್ಯಾರ
ರಾಮ ತಲೆಬಗಿಸೋ
ಕಡಿತಿವೋ ರಾಮಯ್ಯ

ರಾಮ ಅಂದು ಬಿಟ್ಟಾನ ಇನ್ನ ಮಗ ಬಗ್ಗಿಸ್ಯಾನ ತೆಲಿ
ಯಮ್ಮಾ ಶಿವ ಶಿವ ಅಂದಾನ ತಲಿ ಬಗ್ಗಿಸಿ ಬಿಟ್ಟಾನ || ತಂದಾನ ||

s ಆರು ಮಂದಿ ನೋಡಣ್ಣಾ
ಆರು ಕಟಿಗೇರ ಒಯ್ದಾರ
ಅವರು ಇನ್ನ ಚಂದ್ರಾಯ್ದು ಹಿಡಿದೋ
ಕಡ್ಯಾಕ ಹೋದಾರೆ ಕೈಯಾಗಿದ್ದ ಖಡ್ಗ ಹೂವಿನಾರ ಆತದ
s ಮೈಕಣ ಅಂಥದೈತೋ ಕಬ್ಬಿಣ ರೀತಿ ರಾಮನ್ದು || ತಂದಾನ ||

ರಾಮನ ಮೈ ಕಬ್ಬಿಣ ಇದ್ದಂಗೈತಿ
ಕಬ್ಬಿಣ ಆರಂಡಿದಾಗ ಸೇರೋನು
ರಾಮಾ ನಾನು ಕಡ್ಯಾಕ ಹೋದ್ರೆ
ಆಯುಧಗಳು ಕೈಯಾಗಿರವು ಹೂವಿನಾರ ಆಕ್ತಾವ
ಯಪ್ಪಾ ಕೆಬ್ಬಣ ರೀತಿ ಐತಿ ನಿನ್ನ ಮೈ
ಹ್ಯಾಂಗ ಮಾಡಾನಪ್ಪ ರಾಮಯ್ಯ
ಓಹೋ ಮಾವ ಈಗ ಇನ್ನ ಆರುಮಂದಿ ಕಟಿಗೆರೇ
ಯಾರು ಕಡಿದರೂ ನಾನು ಸಾಯೋನಲ್ಲ
ಲೋಕ ಹುಟ್ಟಿಲ್ಲ
ನಾನು ಜಟೀಂಗೇಶ್ವರ ವರದಲ್ಲಿ ಹುಟ್ಟಿನಿ
ಆರಂಡಿ ರಾಮಯ್ಯ ನಾನು
ಈ ದುಷ್ಠಲೋಕ ರಾಮನಲ್ಲ
ಮತ್ತ ಹ್ಯಾಂಗಪ್ಪಾ ನಿಮ್ಮ ತಂದಿ ಕಡಿಕ್ಯಂಡು
ನಿನ್ನ ತಲಿ ತಗಂಡು ಬಾ ಅಂತ ಹೇಳ್ಯಾನ
ಯಾರು ಕಡಿದರೂ ಸಾಯೋದಿಲ್ಲ
ಎಡಗೈ ಬಲ ತಮ್ಮ

ತಮ್ಮ ಬಂದು ಕಡದಾರೆ ನನ್ನ ಜಲ್ಮ ಹೋತೈತೋ
s ಇಲ್ಲದಿದ್ರೆ ಲೋಕಯ್ಯಾ ಏಸುಮಂದಿ ಕಡ್ದ್ರು ಸಾಯೋನಲ್ಲಾ || ತಂದಾನ ||

ಆರು ಮಂದಿ ಕಟ್ಟಿಗೇರು ಕೈಯಾಗಿರೊ ಆಯುಧಗಳು
ಆರು ಸರ ಹೂವಾಗಿ ಬಿಟ್ಟಾವಪ್ಪ
ಹ್ಯಾಂಗ ಮಾಡಬೇಕಪ ರಾಮಯ್ಯ
ಆ ಓಲಿಕ್ಯ ರಾಮನಿಗೆ ನೆಲಮನಿ ಗರಡಿ ಒಳಗ ಕೈ ಸರಪಣಿ
ಕಾಲು ಸರಪಣಿ ಐದವ
ಈಗ ಕೇಳಪ್ಪ ಬಚ್ಚಣ್ಣ
ನೀನು ಹೋದ್ರೆ ಬರೋದು

ಯಾರು ಹೋದ್ರೆ ಬರಾಂಗಿಲ್ಲ ಓಲಿಕ್ಯರಾಮ
ಸರಿಬಿಡು ಅಂತ ಸ್ವಾದರಮಾವ ಬಚ್ಚಣ್ಣ ಬಂದ
ಆಗ ಏನಂತ ಎರಡು ಕೈ ಜೋಡ್ಸಿ ಅಂತಾನ
ಮೂರು ಕಡ್ಡಿ ಬಾಕ್ಲು ಹೊರಗ ನಿಂತ್ಗಂಡು

ಇನ್ನಾ ಎಲ್ಲಿ ಅಳಿಯ ನಿಮ್ಮಣ್ಣಾ ಉಳಿಯೋದಿಲ್ಲ
ರಾಮ ಹೋತನಪ್ಪಾ
ರಾಮನ ಕಡಿಯಲಿ ಅಂತ ಆರ್ಡರ್ ಕೊಟ್ಟಾನಪ್ಪ
ಅಯ್ಯೋ ಪರಮಾತ್ಮ ಜೀವದಲ್ಲಿ ಹೋತಾನಪ್ಪ ರಾಮ
ಇನ್ನ ರಾಮನ ತಲೆ ಹೋತದಪ್ಪಾ
ಆರು ಮಂದಿ ಕಡಿಯೋರು ಬಂದಾರs ಓಲಿಕ್ಯ ಅಳಿಯಾ || ತಂದಾನ ||

ಆಹಾಹಾಹಾಹ
ನಮ್ಮ ಅಣ್ಣ ಕಡಿ ಅಂತ ಆರ್ಡರ್‌ ಕೊಟ್ಟಾರಂತ
ಆರು ಕಟ್ಟಿಗ್ಯಾರು ಕಡಿತಾರಂತೆ
ನಮ್ಮಣ್ಣ ಸಾಯೋಲ್ಲವಂತೆ
ನಮ್ಮ ತಂದಿ ಆರ್ಡರ್‌ ಕೊಟ್ಟಮ್ಯಾಲೆ
ಹೊಟ್ಟ್ಯಾಗ್ಹುಟ್ಟಿದ ಮಕ್ಕಳನ್ನ ಕಡಿಸಿದ ಮ್ಯಾಲೆ
ಅವನೆಲ್ಲಿ ತಂದಿ ಅವಳೆಲ್ಲಿ ತಾಯಿ ಅಂತ
ಈಗ ನಮ್ಮಣ್ಣೆ ಹೋದಾಗ ಒಳ್ಳೆಯವನು
ಹೆಣ್ಮುಕ್ಕಳು ಕಣ್ಣೆತ್ತಿ ನೋಡವನಲ್ಲ
ಹೆಂಗಸರ ಕೂಟ ಮಾತಾಡಲಾರ
ಅಂತವನು
ಸತ್ತಮ್ಯಾಲೆ ನಾನಿದ್ದು ಯಾತಕ್ಕೆ
ಅಂತಾ ಆಗ ಓಲಿಕ್ಯಾಗಿ

ಕೈ ಸರಪಣಿ ನೋಡಣ್ಣ
ಫಳಫಳಫಳ ಮುರ್ದಾನ
ಕಾಲ ಸರಪಳಿ ಮುರ್ದಾನ
ಝಾಡ್ಸಿ ಬಾಕಿಲ ಒದ್ದಾನ
ಏನು ಒಂದು ಮಾವಯ್ಯ ನಿನ್ನ ಪಾದಗಾಗಿ ಶರಣಯ್ಯ || ತಂದಾನ ||

ಕಡಿಯಂತ ಆರ್ಡರ್‌ ಕೊಟ್ಟಾನಪ್ಪ ರಾಮಯ್ಯಗ
ಓಹೋ ಕಡಿಯಂತ ಆರ್ಡರ್‌ ಕೊಟ್ಟಾನಲ್ಲ
ಇದೋ ಆಗ ಜೀವಕ್ಕ
ನಮ್ಮ ತಾಯಿ ತಂದಿನ ಕಡಿಕ್ಯೆಂಡು ಬರ್ತಿನಿ
ಛೀ ರಾಮ

ಹಡಿದ ತಾಯಿ ಹರಿಯಾಳನ ನೀನು ರಂಡಿ ಮಾಡಬ್ಯಾಡಪ್ಪಾ ಲೋಕ
s ತಾಯಿ ಜಲ್ಮಗ್ಹುಟ್ಟೀದಿ ತಾಯಿ ರಂಡೆ ಮಾಡಬಾರ್ದೊ
ತಂದಿ ಜೀವಗ್ಹುಟ್ಟೀದಿ ತಂದಿಗ ಕೈಯಿ ಮಾಡಬಾರ್ದೋ || ತಂದಾನ ||

ತಂದಿ ಜೀವಕ್ಕ ಹುಟ್ಟೀದಿ
ತಂದಿ ಜೀವ ಕಳಿಬಾರ್ದು
ತಾಯಿನ ರಂಡೇ ಮಾಡಬಾರ್ದು
ಹಂಗಾರೆ ನಡೀ ಮಾವ ಅಂತಾ
ಈ ರತ್ನಾಕ್ಷಿ ಕಾಲಾಗ
ನಮ್ಮಣ್ಣನ ಜಲ್ಮ ಹೋಗುತದಂತ
ಈಗ ನನ್ನ ಜೀವ ಕಳ್ಕೋವಾಗ
ಈ ಪಾತರಗಿತ್ತಿಯನ್ನ
ಯಾಕ ಉಳಿಸಿ ಹೋಗ್ಲೆಂತ
ಎದಕ್ಕಾಗಿ ಆಕಿನ್ನ ಬಿಟ್ಟೋಗಲ್ಲವಂತ

ಓಲಿಕ್ಯ ರಾಮ ನೋಡಣ್ಣ
ಚಂದ್ರಾಯ್ದು ಹಿಡಿದಾನೋ
ಗಡ್‌ ಗಡ್‌ ಗಡ್‌ ಅಂತ ತಿರಿಗಿಸ್ಯಾನ
ಗ್ರಗ್‌ ಅಂತ ಕಡಿದಾನ ಎರಡು ತುಂಡುವಾಗಿ
ಕತ್ತರಿಸಿಕ್ಯಂಡು ಬಿದ್ದಾಳ || ತಂದಾನ ||