ರಾಮಾ ಅಂತ ಜೀವ ಬಿಟ್ಟು ಬಿಟ್ಟಳು
ಆಗ ಇನ್ನು ಪಾತ್ರಗಿತ್ತಿಯನ್ನ ಎರಡು ತುಂಡು ಮಾಡಿ
ನಡೀಮಾವ ಹೋಗಾನ
ಆಗ ಓಲಿಕ್ಯ ರಾಮನ ಕರ್ಕಂಡು
ಆಗ ತಲಿವಡೆ ಮರದ ಕೆಳಗ
ಅಚ್ಚನ ಬಂಡೆತಲ್ಲಿ ಕರ್ಕಂಡು ಬಂದು
ಅಣ್ಣಾ ರಾಮ ಅಂತ ಪಾದ ಮುಗದ
ಶರಣಪ್ಪಾ ತಮ್ಮ ಓಲಿಕ್ಯ
ಈಗ ಆರು ಮಂದಿ ಕಟುಗ್ಯುರು ಕಡಿದ್ರೆ
ನನ್ನ ಮೈ ಕಬ್ಬಿಣ ರೀತಿ ಐತೆಪ್ಪ
ಹೂವಿನಾರ ಆಗಿ ಕೊಳ್ಳಾಗ ಬಿದ್ದಾವ
ಈಗ ಯಾರು ಕೈಯಾಗ
ನನ್ನ ಜೀವ ಹೋಗೋದಿಲ್ಲ
ಎಡಗೈ ತಮ್ಮ
ಒಂದೇ ಜೀವದಲ್ಲಿ ಹುಟ್ಟಿದವರು
ಈಗ ನೀನು ಕಡಿ ತಮ್ಮ
ನಾನು ತಲೆ ಬಗ್ಗಿಸುತೀನಿ
ಯಾಕಣ್ಣ ಚೆಂಡಾಡಿದ್ಗೆ ತಲೆಕಡಿ ಅಂತ
ಆರ್ಡರ್‌ ಕೊಟ್ಟಾಳ
ನಮ್ಮ ಚಿಕ್ಕ ತಾಯಿ ರತ್ನಾಕ್ಷಿ
ಜೀವದ ತಂದಿಗ ಜೀವ ಕಳೀ ಅಂತ
ಓಹೋ ಅಣ್ಣಾ
ನಿನ್ನ ಒಳ್ಳೆಯವನಿಗ
ಕಡಿ ಅಂತ ಆರ್ಡರ್‌ ಕೊಟ್ಟಮ್ಯಾಲೆ
ಈಗ ತಾಯಿ ತಂದಿ ಯಾಕಿರಬೇಕು
ನಾನು ಕಡ್ದು ಬರ್ತಿನಿ
ಛೀ ತಾಯಿ ತಂದಿ ಜೀವ ಕಳೀಬಾರ್ದು
ಜೀವಗ್ಹುಟ್ಟಿದವರು ನಾವೇ ಜೀವ ಕಳಕಂಬಾನ
ನನ್ನ ಕಡಿಯಪ್ಪಾ ತಮ್ಮಾ
ಅಣ್ಣಾ ನಿನ್ನ ಹ್ಯಾಂಗ ಕಡಿಬೇಕು ನಾನು
ಈಗ ನಾನು ಬಗ್ಗುತಿನಿ
ನೀನೇ ಕಡಿಯೋ ಅಣ್ಣಯ್ಯ
ಛೀ ಛೀ ಅಪ್ಪಾ ನಿನ್ನ ಕೊಟ್ಟಿಲ್ಲ ಆರ್ಡರ್‌ ತಂದಿ
ನನಗೆ ಕೊಟ್ಟಾನ
ಆರು ಮಂದಿ ಕಟ್ಟಿಗ್ಯರು ಹಿಂದೆ ಕಳಿಸ್ಯಾನ
ಕಡಿ ಅಂತ ಇಲ್ಲಣ್ಣಾ
ನನ್ನ ಕಡಿ ಇಲ್ಲಪ್ಪಾ ನನ್ನ ಕಡಿ ಅಂತ
ಆಗ ಏಳು ದಡೆವು ಚಂದ್ರಾಯ್ಧ
ಕೊಟ್ಟ ತಮ್ಮನ ಕೈಲಿ
ಕಡಿ ಅಂಬೊತ್ತಿಗೆ ಛೀ ನಮ್ಮಣ್ಣ
ಸತ್ತು ಹೋಗುವಾಗ ನಾನ್ಯಾಕ ಇರಬೇಕು
ನಮ್ಮಣ್ಣನ ಕಡಿಯೋ ಬದಲು
ನಾನೇ ಕಡಿಕ್ಯಂಡು ಸಾಯ್ತಿನಿ ಅಂತ

ಆಹಾ ಓಲಿಕ್ಯಾ
ಏಳುದಡೇವು ಚಂದ್ರಾಯ್ದು
ಗಡ್ಗಡ್ಗಡ್ತಿರುಗಿಸ್ಯಾನ
ಗ್ರಗ್ನಂಗ ಕಡಿಕ್ಯಂಡ ಬಲಗೈಲಿ ನೋಡು ಓಲಿಕ್ಯ || ತಂದಾನ ||

s ತಲೆ ಹೋಗಿ ಇನ್ನಾಗಿ
ಸುಳಿದಾಗ ಜೀವೈತೋ
ಆಗ ಬಾಯಿ ಕೂಟನ್ನ
ಕೌ ಕ್ಯಾಕಿ ಹೊಡ್ದಾನ
ತಲೆ ಬಂದು ನೋಡನ್ನ ಅಗಸಿಮ್ಯಾಲೆ ಕುಂತೈತೋ || ತಂದಾನ ||

ಆಗ ಅಗಸಿಮ್ಯಾಲೆ ಬಂದು ತಲಿ ಕುಂತುಬಿಡ್ತು
ಕೆಳೇ ಸುಳ್ಳಾದ ಜೀವ
ಬಾಯಿಕೂಟ ಮಾತಾಡ್ತಾನ ಓಲಿಕ್ಯಾ

ಕ್ಯೌಕ್ಯಾಕಿ ಹೊಡೆದಾರೆ ರಾಮ ಅಂತ ಇನ್ನ ಸಾಯ್ತಾರ || ತಂದಾನ ||

ರಾಮಾ ಅಂಬೋದು ಸಾಯೋದು
ಆಗಿನವ್ರು ನೋಡಿಬಿಟ್ರು
ಸ್ವಾದರಮಾವ ಬಚ್ಚಣ್ಣ
ಯಪ್ಪಾ ಲೋಕೆಲ್ಲಾ ಎದೆ ಬಿದ್ದು ಸಾಯ್ತಾರ
ಅಗಸಿಮ್ಯಾಲೆ ತಲೆ
ಈಗ ಆಲದ ಗಿಡದ ಕೆಳಗೆ
ಅಚ್ಚದ ಬಂಡೆ ಮ್ಯಾಲೆ ಮುಂಡ
ಎಲವೋ ರಾಮ ನೀನು ಸತ್ತೀಯಪ್ಪಾ ರಾಮಯ್ಯ
ಅಂತಾ ಸೆರುಗೊಡ್ಡಿ ಹೊಳ್ಳ್ಯಾಡಿ ದುಃಖಮಾಡಿ ಅಳ್ತಾಳ
ತಾಯಿ ಸಿರಿಯಾಳದೇವಿ
ಈಗ ಸ್ವಾದರಮಾವ ಬಚ್ಚಣ್ಣ ನೋಡ್ದ
ನೋಡಪ್ಪಾ ನಿಮ್ಮ ಅಣ್ಣ ಕಡಿ ಅಂದ್ರೆ
ತಮ್ಮನೇ ಕಡಿಕ್ಯಂಡ
ಮತ್ತ ಇಬ್ರು ಸತ್ರೆ ಯಂಗಪ್ಪಾ ರಾಮಯ್ಯ
ರಾಮ ಸತ್ತನಂದ್ರೆ
ಮುಂಜಾನೆ ಬರ್ತಾನ ಡಿಲ್ಲಿಯವನ್ನು
ಏಳುಸಾವಿರ ಎಂಟು ಸಾವಿರ ಮಂದಿ ಕರ್ಕಂಡು
ಆನೆಗೊಂದಿ ಹಾಳು ಮಾಡಬ್ಯಾಡೋ
ರಾಮಾ ದೇವುರಾ
ಮತ್ತೆ ಹ್ಯಾಂಗ ಮಾವ
ನನ್ನ ಕಡಿ ಅಂತ ಕೊಟ್ಟಾರ
ತಮ್ಮ ಕಡಿಕಂಡ್ಯಾಂಗ
ನಾನು ಕಡಿಕಂತ್ತಿನಿ
ಛೀ ರಾಮ ಸಾಯಿಬೇಡ
ಮತ್ತ ಹ್ಯಾಂಗ ಮಾಡ್ಬೇಕು ಮಾವ
ಏನಿಲ್ಲ
ಇದೇ ಆಲದ ಗಿಡದ ಕೆಳಗೆ
ನೆಲಮನಿ ಗವಿ ಐತಿ
ಗವಿ ಒಳಕ ಹೊಕ್ಕಂಡು ಕುಂತ್ಕೋ ರಾಮಯ್ಯ
ಮುನೀಶ್ವರತಲ್ಲಿ
ನಾಗೀಶ್ವರ, ದೇವೀಶ್ವರ ಮುನೀಶ್ವರ
ಆಗ ಮೂವರತಲ್ಲಿ
ದೇವರ ಧ್ಯಾನ ಮಾಡಿಕ್ಯಂತ ಕುಂದ್ರಪ್ಪ
ರಾಮ ಈಗ ಅಲ್ಲಿಯೇ ಹಾಲು ಸಕ್ರೆ ತರ್ತಿನಿ ರಾಮ
ಆಗಿನ್ನ ತಲೆ ತಗಂಡು ಬಂದ್ರ
ಕೌಕ್ಯಾಕಿ ಹೊಡೀತಿದ್ರೆ
ತಾಯಿ ಸೆರಗೊಡ್ಡಿ ಬೇಡಿಕ್ಯಂತಾಳ

ಮಗನಾ ನನ್ನ ಉಡಿಯಾಗ ನೀನು ಬಾರಾ ಮಗನಾs
ರಾಮ ತಾಯಿ ಉಡಿಯಾಗ ನೀನು ಬಾರಾ ಮಗನೇ
ಯಪ್ಪಾ ಮಗ || ತಂದಾನ ||

ಈಗ ಹೆತ್ತ ತಂದಿ ನಿನ್ನ ತಲಿ ಕಡಿಸಿದರಪ್ಪಾ
ಯಪ್ಪಾ ತಾಯಿ ಕಾಲಾಗ ಜಲ್ಮ ಹೋಯ್ತು ಮಗನಾ || ತಂದಾನ ||

ಆಹಾಹಾ ತಾಯಿ ಹರಿಯಾಳದೇವಿ
ಮುತ್ತಿನ ಸೆರಗೊಡ್ಡಿಕೊಂಡು
ಅಗಸಿ ಮುಂದ ದುಃಖ ಪಡಿತಾಳ
ಆಗಿನ್ನ ಅಗಸಿ ಮ್ಯಾಲಿನ್ನ
ಆಗ ರಾಮನತಲಿ ಅಂತಾದು ಓಲಿಕ್ಯರಾಮ

ಆಹಾ ರಾಮಯ್ಯ
ಕೆವ್ಕ್ಯಾಕಿ ಹೊಡದಾನ
ಗಡ್ಗಡ್ಗಡ್ತಿರುಕ್ಯಾಂತ
ತಾಯಿ ಉಡಿಯಾಗ ಬಿದ್ದಾನ ಇನ್ನ ತಲಿ ಬಂದು ನೋಡಣ್ಣ || ತಂದಾನ ||

ರಾಮನ ತಲೆ ತಾವಾಗಿ ಉಡಿವೊಳಗೆ ಬಿದ್ದಬಿಟ್ಟ
ಆಗ ತಲೆಮೇಲೆ ಬಿದ್ದು ದುಃಖ ಮಾಡ್ತಾಳಾ
ಸ್ವಾದರತ್ತಿ ಹಂಪಕ್ಕ ಸ್ವಾದರಮಾವ ಬಚ್ಚಣ್ಣ
ಆಗ ಹಡೆದ ತಾಯಿ ಹರಿಯಾಳದೇವಿ
ಈಗಿನ್ನ ತಲೆ ತಗಂಡು ಬಂದು
ರತ್ನಾಕ್ಷಿಗೆ ತೋರಿಸಬೇಕಂತ
ಆಗ ರಾಮನ ತಲೆ ಕೈಯಾಗಿಡುಕೊಂಡು
ಈಗಿನ ತಾಯಿ ಉಡಿತಲ್ಲಿ ಈಗ ಉಡಿಯಾಗಿದ್ದುದ್ದು
ಕೈಯಾಗಿಡ್ಕಂಡು ತಗಂಡು ಬಂದ್ರು
ಯಮ್ಮಾ ರತ್ನಾಕ್ಷಿ

ಯಮ್ಮಾ ಹೊಟ್ಟ್ಯಾಗ ಹುಟ್ಟಿದ ಮಕ್ಕಳ್ನ ಕೊಲ್ಲಿದೆಮ್ಮೋ
ಯಮ್ಮಾ ಜೀವ ತೆಗೆದೆ ದೇವಿ
ಯಮ್ಮಾ ಕೈಯಾಗ ಜಲ್ಮ ಕಳೆದೆಯಮ್ಮಾ
ಕೈಯಾಗ ಚೆಂಡ ಆಡಿದ ಮಗನ ಜಲ್ಮ ಕಳೆದೆ
ರಾಮೋs ಆನೆ ಗುಂದ್ಯಾಗೆ ಹೋದೀ ರಾಮದೇವ
ಯಪ್ಪಾ ಇನ್ನ ಕಂಪ್ಲಿರಾಜ ಕಡಿಸಿದೆನೆಪ್ಪೊ || ತಂದಾನ ||

ಅಂತ ದುಃಖ ಮಾಡಿ
ತಗೊಮ್ಮಾ ರತ್ನಾಕ್ಷಿ ಅಂದ್ರೆ
ಆಗ ತನ್ನ ಕುಲದಲ್ಲಿ
ಬಚ್ಚಣ್ಣನ ಕೈಯಾಗಿರೋದು
ಮಕ ನೋಡಿ ಏನಂತಾ
ಛೀ

ಈತ ರಾಮನೇ ಅಲ್ಲಯ್ಯ ಲೋಕದಾಗ ರಾಮಯ್ಯ || ತಂದಾನ ||

ಛೀ ದುಷ್ಟಗೇಡಿ
ರಾಮನ್ನ ಕಡಿಕ್ಯಂಡು ಬಂದ್ಯಾ
ಆರು ಮಂದಿ ಕಟಿಗೇರನ್ನ ಕೇಳು
ಅಂಬೊತ್ತಿಗೆ
ಆಗ ಯಮ್ಮಾ ರಾಮನ ತಲಿ ಒಡಿಯೋ
ಅಚ್ಚನ ಬಂಡಿಕೆಳಗ ಕಡಿಕ್ಯೆಂಡು ಬಂದೀವೆ
ಮೂರು ಅಗಸಿವೊರಾಗ
ಛೀ ರಾಮನ ತಲಿಯೇ ಅಲ್ಲ
ರಾಮ ಸೂರ್ಯ ಚಂದ್ರ ಕಾಣ್ದಂಗ ಕಾಣ್ತಾನ
ಈತ ಕಪ್ಪ ಕಾಣ್ತಾನ
ಒಟ್ಟು ಹುಟ್ಟಿದವ್ನು
ಈಗ ಇನ್ನ ಈತನ ಮಕಗೆ ಕಚ್ಚು ಬಿದ್ದೈತೆ
ಈಗ ನೋಡಮ್ಮ
ಹುಡುಗ್ರು ಚಿಕ್ಕವ್ರು ಇದ್ದಾಗ
ಓಡ್ಯಾಡಿಕೊಂತ ಮನ್ಯಾಗ ಬಿದ್ದು
ಆಗ ಮಾರಿಗೆ ಕಚ್ಚುಬಿದ್ದೈತೆ ರತ್ನಾಕ್ಷೀ
ಓಹೋ ರಾಮಾ ನನ್ನ ಕೈಲಿವಿಡಿಲಾರ್ದ ಜೀವಕ್ಕ
ಕಡಿಲಾರ್ದ ಜೀವ ಕಳಕೊಂಡ್ಯೊ ರಾಮ
ಅಂಬೊತ್ತಿಗೆ
ಆಗ ರಾಮ ಏನ್ಮಾಡಿದ
ಛೀ ದುಷ್ಟದವಳ ಕೈಗ ಹೋಗಬಾರದಂತ
ಯಮ್ಮಾ ನಾವ್‌ ಕೊಡಂಗಿಲ್ಲಂತ
ಆಗ ತಲೆ ತಂದು
ಬೆಳ್ಳಿ ಸೂಜಿ ತಕ್ಕಂಡು
ಬೆಳ್ಳಿ ತಂತಿ ತಗಂಡು

ಯಮ್ಮಾ ತಲಿಗೆ ಮಂಡಗ ಹೊಲಿದು ಬಿಟ್ಟಾರಮ್ಮಾ
ಯಮ್ಮಾ ಓಲಿಕ್ಯಾರಾಮ ಇನ್ನ ಜಲ್ಮದಾಗ || ತಂದಾನ ||

ಓಲಿಕ್ಯಾರಾಮನ ತಲಿಹೊಲಿಯೋ ಹೊತ್ತಿಗೆ

ಕ್ಯವು ಕ್ಯಾಕಿ ಹೊಡೆದಾನ
ಅಣ್ಣಂತಲ್ಲಿ ಬಂದಾನ
ನಾಗೇಶ್ವರ ಮುನೀಶ್ವರ ದೇವಿಶ್ವತಲ್ಲಿ ಬಂದಾನ || ತಂದಾನ ||

ಅಣ್ಣಾ ದೇವರಿಗೆ ಧ್ಯಾನ ಮಾಡ್ಯಂತವನೆ
ಓಹೋ ಬಂದ್ಯಾಪ್ಪಾ ತಮ್ಮ ಓಲಿಕ್ಯ
ಎಡಗೈ ಬಲದವನೆ
ಒಂದೇ ಬಾಳೆ ಹಣ್ಣಿನಾಗ
ಇಬ್ರು ಹುಟ್ಟಿದವ್ರು ನಾವು
ನಾನು ಸತ್ರೇನೆ ಇಬ್ರು ಸತ್ರೇನೆ
ಲೋಕ ಬಿಟ್ಟು ಹೋಗೋದೆ ಆನೆಗುಂದಿ?
ಈಗ ನನ್ನ ಜೀವ ಇದ್ರೆ
ನಿನ್ನ ಜೀವ ಇದ್ದಂಗಪ್ಪ ಜೀವಕ್ಕ
ಓಹೋ ಆಗ ಇಬ್ರು ಅಣ್ಣಾ ತಮ್ಮ
ಅಲ್ಲೆ ದೇವರ್ಗಿ ಧ್ಯಾನ ಮಾಡಿಕ್ಯಂತ ಕುಂತಗಂಡ್ರು
ಆಗ ಜೀವಕ್ಕಾಗಿ
ಅಣ್ಣಾ ತಮ್ಮ ಸೇರಿಬಿಟ್ರು
ಆಗ ಅಗಸಿ ಹೊರಾಗ
ಈಗ ಸ್ವಾದರಮಾವ ಬಚ್ಚಣ್ಣ
ಈಗ ಕಂಪ್ಲಿರಾಜ
ಹರಿಯಾಳದೇವಿ ಹಂಪಕ್ಕ
ದುಃಖ ಪಡಿತಾರ
ಈಗ ರಾಮ ಸತ್ತ ತಿರುಗ ದಿವ್ಸ
ದಂಡುಕೋಟಿ ತಾವಾಗಿ ಕುಲಕ್ಕೆ
ಆಗ ಕಾಣ ಬಂದುಬಿಡ್ತು
ಯಾರ್ದು ಡಿಲ್ಲಿಯವಂದು
ಆಗ ಲಾಲಿಸಾಬ್‌ ನೋಡ್ದ
ಡಿಲ್ಲಿ ಗೋಲ್ಕಂಡನವಾಬ

ಅರೆ ಮರ್ಗಯಾರೆ ರಾಮಯ್ಯ
ಮಂತ್ರಹಾಕ ಮಂತ್ರಸವನೆ
ಆಗ ನನ್ನ ಕೈಯಾಗ
ಇದ್ದ ವಂತ್ದವನಾಲೇ
s ನಿನ್ನ ಆನೆಗುಂದಿ ಉಳಿಯೋದಿಲ್ಲ
ಆನೆ ಇದ್ದವೆಲ್ಲ ತುಳಸಿಯೇನ
ಕೊಬ್ಬು ನಾಟಿ ಬಿಟ್ಟೇನ
ಇನ್ನ ಬಾಳೆ ಗಿಡಗಳು || ತಂದಾನ ||

ನಿಮ್ಮ ಆನೆಗುಂದ್ಯಾಗ ನಾಟೆನ್ಯಂತ
ಏಳು ಸಾವಿರ ಮಂದಿ ಎಬ್ಬಿಸಿ ಬಿಟ್ನಪ್ಪ
ಪಠಾನ ಬರಿ ಇನ್ನ ಸಾಯಬ್ರು
ಬೋಳುಗುಂಡು ಗುಡ್ಡದವ್ರು
ಈಗ ಡಿಲ್ಲಿ ಗೋಲ್ಕಂಡ ನವಾಬುದಾರ
ಬಂಗಾರ ಟೋಪಿ
ಆಗ ಬೆಳ್ಳಿ ಜಪ್ನ
ಆಗ ಬೆಳ್ಳಿ ಬುಡುಗಿ
ಆಗ ಟುಪಾಕ ಬಂದೂಕ ತಗಂಡು
ಏಳ ಸಾಬ್ರು ಮಂದಿ
ಬ್ಯಾರೆ ಕುಲದವರು ಯಾರಿಲ್ಲ
ಈಗ ಡೋಲು
ಹೊಡದರ ಮುಂದಕ್ಕ ನಡೀಬೇಕು
ರಣಭೇರಿ ಹೊಡದರ ಹಿಂದಕ್ಕ ನಿಂದ್ರಬೇಕು

ಆಹಾ ನೋಡಣ್ಣ
ಅವನ ಹಣೇ ಮ್ಯಾಲಣ್ಣ
ಇನ್ನ ತಾವು ಕುಂತಾನ
ಡಿಲ್ಲಿ ತುರುಕರವನೋ
ಮುಂದೆ ಬಂದಿದವರಿಗೆ
ಸೀ ನೀರು ಸಿಗುತಾವ
ಎಳೆ ಹಿಂದು ಬಂದವರು
ಹೊಂಡನೀರು ಸಿಗದಿಲ್ಲೋ
ರಾಮಯ್ಯ ಮರ್ಗಯೇರೆ
ಸತ್ತರಾಮ ಆನೆಗುಂದಿ
ಆನೇಲಿದ್ದ ತುಳಿಸೇನ
ಹಾಳು ಮಾಡುತ್ತಿದ್ದೇನೆ
ದಿಲ್ಲಿಗಾಗಿ ಒಯ್ತಾಲೆ ನಿನ್ನ ಆನೆಗುಂದಿ ನಮಗೆ || ತಂದಾನ ||

ಆಗ ಡಿಲ್ಲಿ ಗೋಲ್ಕೊಂಡ ನವಾಬದಾರ
ಡೋಲು ಹೊಡದ್ರೆ ಮಂದಕ್ಕ ನಡೀಬೇಕು
ರಣಭೇರಿ ಹೊಡದರೆ ಹಿಂದಕ್ಕ ನೋಡಬೇಕು

ಆಗ ಮಂದಿಯನ್ನ ಎಬ್ಬಿಸ್ಯಾನ
ಮರ್ಗಯೇ ರಾಮಯ್ಯನ್ನ
ತೋಥಡಿ ಹಾಳುಮಾಡಾನ ರಾಮಯ್ಯನ
ಬ್ಯಾರೆ ಪರಾಕ್ರಮದವರು ಯಾರಿಲ್ಲ
ಮುದೇವ್ನು ಕಂಪೀಲೆ
ಅವನು ಬಕಬಾಯಿ ಕಂಪೀಲೆ || ತಂದಾನ ||

ನಮಗೆ ಏನು ಮಾಡಂಗಿಲ್ಲಂತ
ಏಳು ಸಾವಿರ ಮಂದಿನ ಕರ್ಕಂಡು

ತಾವು ಹೊಂಟು ಬರ್ತಾರ ಆನೆಗುಂದಿ ಪಟ್ಣಕ್ಕೆ
s ರಣವೇನು ಶಬ್ದಾನ್ನ ಅವರು ಮಾಡುತ್ತಾ ಬರುತಾರೋ || ತಂದಾನ ||

ಆನೆಗುಂದಿಗೆ ಬಂದು
ಊರು ಸುತ್ತು ಸುತಿಕ್ಯಂಡ್ರು
ಇರುವಿ ಸುತ್ತಿದಂಗ
ಆಗ ಅವ್ರು ಬಿಳೆಗುಂಡು ಕೆಂಪುಗುಂಡು
ಆಯುಧಗುಂಡು ಮ್ಯಾಕ ಬಿಡುತಾರ
ತೋಪ್‌ ತೋಪ್‌ ಅಂತ ಮ್ಯಾಕ ಎಗರಸ್ತಾರ
ಮಾಳಿಗೆ ಮ್ಯಾಲೆ ಗುಂಡುಗಳು ಬಂದು
ಊರ ಮ್ಯಾಲೆ ಬಿದ್ದು ಬಿಡ್ತಾವ
ಆಗ ಶಬ್ದ ಗಡಗಡ ಅಂಬೋದು ಮಾಳಿಗಿ
ಈಗ ಸ್ವಾದರಮಾವ ಬಚ್ಚಣ್ಣ
ಏನ ಮಾಳಿಗೆ ಮ್ಯಾಲೆ ಬಿದ್ದಂಗಾಯ್ತಂತ
ಮಾಳಿಗೆ ಏರಿ ನೋಡಿ ಬಿಟ್ರು ಗವಾಕ್ಷಿಲಿದ್ದ
ಊರು ಸುತ್ತ ಆನೆಗುಂದಿ ಸುತ್ತ
ಸುತ್ತಿಗೆಂಡ್ಯಾರಪ್ಪ ಇರುವಿ ಸುತ್ತಿದಂಗ
ಏನು ಅಂತಾನ ಸ್ವಾದರಮಾವ ಬಚ್ಚಣ್ಣ
ಮನ್ಯಾಗಿಲಿದ್ದ ಕೆಳಗಿಳಿದು
ಕೇಳವೋ ಮಾವ ಆಗ ಕಂಪ್ಲಿರಾಜ
ಏನಪ್ಪಾ ಭಾವಮೈದ ಬಚ್ಚಣ್ಣ

ರಾಮನ್ನ ಕೊಲ್ಲಿದವ್ರು ಎಂಥಾ ಕರ್ಮದವರು
ಮಾವ ಡಿಲ್ಲಿದವ್ನೆ ಬಂದಾನ ನನ್ನ ಮಾವ
ಭಾಳೇ ರಾಮ ಊರು ಹಾಳಾಗಿ ಹೋತೋದ ರಾಮ
ಆನೇ ಒಂಟಿಲಿದ್ದ ಇನ್ನ ತುಳುಸ್ತಾನ ರಾಮೋ || ತಂದಾನ ||

ಏನಯ್ಯಾ ಕಂಪ್ಲಿರಾಜ
ನಿನ್ನೆ ರಾಮ ಸತ್ತ
ನಿನ್ನೆ ಕಡಿಸಿಬಿಟ್ಟಿವಿ
ಇವತ್ತೂ ಬಂದಬಿಟ್ಟ ಡಿಲ್ಲಿಯವನು
ಯಪ್ಪಾ ಡಿಲ್ಲಿಯವ್ನು ಬಂದ್ರೆ ಹ್ಯಾಂಗ ಮಾಡ್ಲ್ಯೋ
ಭಾವಮೈದ ಬಚ್ಚಣ್ಣ
ಚಿಕ್ಕೆಂಡ್ತಿ ರತ್ನಾಕ್ಷಿ ಮಾಡಿಕ್ಯೆಂಡು
ರಾಮನ್ನ ತಗದಿದ್ದು
ಈಗ ಕೈಗೆ ಬಂದ ಮಕ್ಕಳು ಕೈಲಿ ಕಡಿಸಿಬಿಟ್ಟೆ

ಈಗ ನಾನೇನು ಮಾಡ್ಲಯ್ಯ ನಿನ್ನಿಷ್ಟಲೋಕ ನೋಡಯ್ಯ
s ತುರುಕುರಿಗೆಲ್ಲಯ್ಯ ನೀನು ಕೈಯೆತ್ತಿ ಶರಣು ಮಾಡು || ತಂದಾನ ||

ಸಾಬ್ರುಗೆಲ್ಲ ಡಿಲ್ಲಿಯವ್ರಿಗೆಲ್ಲ
ಶರಣು ಮಾಡ
ಕೈಯೆತ್ತಿ ಶರಣು ಮಾಡಿ
ನಿನ್ನ ಚಿಕ್ಕಹೆಂಡ್ತಿ ರತ್ನಾಕ್ಷಿಯನ್ನ
ಅವರಿಗೆ ಹಿಡಿದುಕೊಡು
ಈಗ ನೀನು ಪಾದಕ್ಕ ಬಿಟ್ಟು ಬಿಡ್ತಾರ
ಇಲ್ಲದ್ರೆ ಕುತ್ತಿಗೆ ಕೊಯ್ತಾರ
ಅಯ್ಯೋ ಪರಮಾತ್ಮ
ನೋಡಲಾಕ ಚೆಂದವೈದಾಳ
ಈಗ ಬೆಳ್ಳಿದವಳು ಬೆಳ್ಳಿ ಬಂಗಾರಿದ್ದಂಗ
ನನ್ನ ಚಿಕ್ಹೆಣ್ತಿ ರತ್ನಾಕ್ಷಿ
ಅಂತವಳಿಗೆ ಹ್ಯಾಂಗ ಕೊಡಬೇಕು
ಡಿಲ್ಲಿ ಸಾಯೆಬ್ರಿಗೆ
ಹ್ಯಾಂಗ ಕೈ ಮುಗಿಬೇಕು ನಾನು
ನಿನ್ನಿಷ್ಟಪ ನಾನ್ಹೇಳ್ದೆ ಅವಾಗ ಕೇಳಲಿಲ್ಲ
ಈಗ ನಾನೇನು ಎಲ್ಲೆನ್ನ ಮೂಲಿಗೆ ಕೆರಿಸಿನ್ಯಾಗೋ
ಆಗ ಪೊಡುಗನಾಗೋ ಕುಂತ ಬಿಡ್ತಿನಿ ನಾನು
ಅಯ್ಯೋ ಭಾವಮೈದ ಬಚ್ಚಣ್ಣ
ಹ್ಯಾಂಗ ಮಾಡಬೇಕು
ಹ್ಯಾಂಗನ್ನ ಮಾಡಿಕ್ಯ ಅಪ್ಪ
ನಾನು ಏನು ಮಾಡ್ಲಿ
ನನ್ನ ಮಾತು ಕೇಳಲಾರ್ದೆ
ಇನ್ನ ಆ ಮಾತಿಗೆ ಆರ್ಡರ್‌ ಆಗಿಲ್ಲ
ಕಡೆಂಬ ಮಾತ ಕೊಟ್ಟು ಬಿಟ್ಟಿ
ಕಡೆಸಿ ಬಿಟ್ಟೀವಿ
ನಾವು ಏನು ಮಾಡಾನ
ಓಹೋ ಸಡಿಬಿಡಪ್ಪಾ
ಅಂತ ತಾಯಿತಂದಿ ದುಃಖಪಡಿತಾರ
ಆನೆಗುಂದಿ ಹಾಳಾಗಿ ಹೋಯ್ತದಂತ
ಸ್ವಾದರಮಾವ ಬಚ್ಚಣ್ಣ ನೋಡ್ದ
ರಾಮ ಮೂರು ಅಗಸಿ ಹೊರಾಗ ಐದಾನ
ಮೂರು ಅಗಸಿ ಸುತ್ತು ಡಿಲ್ಲಿಯವ್ರು ಬಂದು
ಜನಸಂಖ್ಯೆ ಏಳು ಸಾವಿರ ಸುತ್ತುವರಿಕ್ಯಂಡಾರ
ಇರುವಿ ಮುತ್ತಿದಂಗ
ಇವರು ಇನ್ನ ಯಾರು ಹೋಗಿ ಹೇಳ್ಬೇಕು ರಾಮನಿಗೆ
ನಾನೇ ಹೋಗಬೇಕಂತ
ಬೋಳು ಗುಂಡು ಮಾಡಿಕ್ಯಂಡು
ಮೂರೇ ಕೂದಲು ತೆಲಿಮ್ಯಾಲೆ
ಟೆಂಗಿನ ಜುಟ್ಟು ಬಿಟ್ಟಂಗ ಬಿಟ್ಟು
ಮೂರು ನಾವು ಇಟ್ಕಂಡು
ಆಗ ಗಂಧವನಾಮ ಹಚ್ಚಿಕ್ಯಂಡು
ಆಗ ಮಡಿವಸ್ತ್ರ ಹಾಕ್ಯಂಡು
ಐದುದಾರ ಸುತ್ತವರಿಕ್ಯಂಡು
ಜನಿವಾರ ಕೊಳ್ಳಾಗ ಹಾಕ್ಯಂಡು
ಬಾಲಗ್ರಹ ಪುಸ್ತಕ ಹಿಡ್ಕಂಡು
ತಾಳನು ಹೊತ್ತಿಗೆ ತಗಂಡು
ಕೈ ಚೀಲದಾಗ ಇಟ್ಕಂಡು
ಆಗ ಮಡಿವಸ್ತ್ರ ಉಟ್ಕಡು
ಕೈಯಾಗ ನಾಗರ ಕೋಲು ಹಿಡ್ಕುಂಡು

ಆಗ ಒಂದು ಬರುತಾನ ಶಾಸ್ತ್ರ ಹೇಳೋನು ಬರುತಾನೋ
s ಮಂತ್ರ ಓದೊನು ಬರುತಾನ ಎದ್ರು ಮಂತ್ರವಾಗಿ ಜಲುಮಕ್ಕೆ || ತಂದಾನ ||

ಚಿರಂಜೀವ ವಿಷ್ಣು ಈಶ್ವರ ಪರಮಾತ್ಮ
ದೇವೇಂದ್ರ ಅಂತ ಬಂದ

s ಚೂರಿ ಪಕಡಲಾಕಾರೆ
ಮಾದರಚೋದ ಅಂದಾರೆ || ತಂದಾನ ||