ಈಗ ಚಿಕ್ಕ ತಾಯಿ ರತ್ನಾಕ್ಷಿ
ಸೂರ್ಯ ಚಂದ್ರ ಇದ್ದಂಗ ಇರಾಕಿ
ಆಗ ನೋಡಿ ರಾಮನ ಕಡಿಗೆ

ರಾಮ ಸಾಯಲಿಲ್ಲ ರಾಮ ಐದಾನಮ್ಮಾ
ರಾಮ ಸತ್ತನ ಸತ್ತಾನ ಆನೆಗುಂದಿದಾಗ || ತಂದಾನ ||

ಆಹಾಹಾಹಾ
ರಾಮ ಸತ್ತನ ಸತ್ತನ ಅಂತ ಲೋಕ ಹೇಳಿಬಿಟ್ರು
ಓಲಿಕ್ಯ ರಾಮನ ತಲಿ ತಂದು ತೋರಿಸಿದ್ರು
ತಮ್ಮಂದು
ಈ ರಾಮನ್ನ ಬಚ್ಚಿಕ್ಕಿ
ಈಗ ರಾಮನ್ನ ಈಗ ನೋಡಿದೆ
ಆಂತ ಆಗ ರತ್ನಾಕ್ಷಿ

ರಾಮ ಈಗನ್ನ ಮಾತನಾಡೋ ರಾಮ
ರಾಮ ನನ್ನ ಕೈಲೆ ಹಿಡಿಯೋ ರಾಮದೇವ || ತಂದಾನ ||

ಆಗ ಸ್ವಾದರಮಾವ ಬಚ್ಚಣ್ಣ ನೋಡ್ದ
ರ್ರೀ ಬಕ್ಕು ಬಾಯೋನೆ
ಕಂಪ್ಲಿರಾಜ ಹಿರಿ ರಾಜ
ನೋಡಿದ್ಯಾ ಈಗನ್ನ ಕಣ್ಣಿಗೆ ಎದುರಾಗಿ
ನಾನು ಜೀವ ಉಳಿಸಬೇಕಂತ ರಾಮನ್ನ ಉಳಿಸಿದೆ
ಈಗಿನ್ನ ಮಠದಾಗ
ಈಗ ನೋಡಿದ್ಯ ಕಣ್ಣಿಗೆದುರಾಗಿ

ಈಗ ಜಲ್ಮದಲ್ಲಿ ರಾಮ ಹೋಗುತಾನ || ತಂದಾನ ||

ರಾಮ ಇದ್ದದ್ದಕ್ಕೆ ಡೆಲ್ಲಿದವ್ನು ಓಡಿದ
ಇಲ್ಲದ್ರೆ ಆನೆಗುಂದಿ ಆನೆಲಿದ್ದ ತುಳಿಸ್ತಿದ್ದ
ಈಗ ಪಟ್ಣ ಹಾಳಾಗ ಹೋಗುತ್ತಿತ್ತು
ಈ ರತ್ನಾಕ್ಷಿ ಮೂರು ಕಾಸಿ ಹೆಣಸಿಗೆ
ಜೀವದ ಮಗ ಕಳಕೊಂತಿದ್ದಿ
ಕೇಳವೋ ಕಂಪ್ಲಿ ರಾಜ
ಈಗನ್ನ ಎದುರು ನೋಡಿದ್ಯಾ
ಯಪ್ಪಾ ನೋಡಿದೆ
ಏ ಭಾವಮೈದುನ ಬಚ್ಚಣ್ಣ
ಏನಿಲ್ಲ ಆರು ಮಂದಿ ಕಟ್ಟಿಗೇರನ್ನ
ಕರೆಕಳ್ಸಿ ಆರು ಕಟ್ಟಿಗೇರನ್ನ
ಇಗೋ ರತ್ನಾಕ್ಷಿಯ ಕೈ ಕಾಲ ಕಟ್ಟಿ
ಸುಣ್ಣದ ಭಟ್ಟ್ಯಾಗ ಹಾಕ್ರಿ
ಮ್ಯಾಲೆ ತಣ್ಣೀರು ಹಾಕ್ರಿ
ಹೀಗ ಹೊಟ್ಟ್ಯಾಗ ಹುಟ್ಟಿದ ಮಕ್ಕಳನ್ನ
ಜೀವ ಕಡಿಸೋಳು ಇರಬಾರ್ದು
ಆನೆಗುಂದಿಲಿ
ಓಹೋ ಅಷ್ಟೇ ಆಗಲಯ್ಯ
ನಿನ್ನ ಆರ್ಡರ್‌ಗೆ ಎದುರು ಆಡಂಗಿಲ್ಲ ನಾನು
ಅಂತಾ ರತ್ನಾಕ್ಷಿ ಮನೆ ಒಳಕ್ಕ ಬಂದು
ಕೈಕಾಲು ಕಟ್ಟಿಗ್ಯಂಡು ಬಂಡಿಮ್ಯಾಲೆ ಹಕ್ಯಂಡು
ಸುಣ್ಣದ ಭಟ್ಟ್ಯಾಗ ಹಾಕಿದ್ರು
ಈಗ ಕುತ ಕುತ ಕುದಿವಾಗ ಏನಂತಂತಾಳ
ನೋಡ್ರಪ್ಪಾ ಜೀವದ ರಾಮ ಬರಬೇಕು
ಒಂದು ಮಾತು ಜೀವಕ್ಕೆ ಕೊಟ್ಟ ಜೀವ ಬಿಡ್ತಿನಿ
ಅಷ್ಟತಕ ನಾ ಜೀವ ಬಿಡಾಕಿಲ್ಲ ಆನೆಗುಂದ್ಯಾಗ
ಓಹೊ ಅಷ್ಟಾಗಲಮ್ಮ
ಏನಪ್ಪಾ ರಾಮಯ್ಯ
ಹಡೆದತಾಯಿ ಹರಿಯಾಳದೇವಿ ಮನ್ಯಾಗ ಕುಂತ ರಾಮ
ನಿಮ್ಮ ಚಿಕ್ಕ ತಾಯಿ ರಕ್ಷಿತಾನ
ನಿಮ್ಮ ತಂದಿ ಕೈ ಕಾಲು ಕಟ್ಟಿ
ಸುಣ್ಣದ ಭಟ್ಟ್ಯಾಗ ಹಾಕಿಸ್ಯಾನ
ಈಗ ನಿನ್ನ ಕೂಟ ಒಂದ ಮಾತ
ಜೀವಕ ಕೊಟ್ಟು ಜೀವ ಬಿಡ್ತಾಳಂತೆ
ನೀನು ಬರಬೇಕೋ ರಾಮಯ್ಯಾ
ಓಹೋ ಆ ರಾಮ ಏನಂತಾನ
ಸರೆಪ್ಪಾ ನಡ್ರಿ ಅಂತ
ಆಗ ಎರಡು ಕೈ ಜೋಡ್ಸಿ ಆ ತಾಯಿನ್ನ ಏನಂತ ಮಾತಾಡ್ತಾನ

ಯಮ್ಮಾ ಕಣ್ಣಿಲಿ ನೋಡಿದ್ರೆ ನಾನು ಯಂಗತಾಯಿ
ಯಮ್ಮಾ ಹೇಳಲಾರದಾ ನನಗೆ ಮಾಡ್ಯಾರಮ್ಮ
ಮೋಸ ಮಾಡ್ಯಾರ ನಿನ್ನ || ತಂದಾನ ||

ನಮ್ಮ ಜೀವ ತಂದಿ ಜೀವಕ್ಕ ಹೇಳಿದ್ರೆ
ಜೀವ ತಾಯಿ ಜೀವ ಕುಳೀತಿದ್ದಿಲ್ಲ
ಈಗ ಮೈಯೆಲ್ಲ ತೊಗಲೆಲ್ಲ ಸುಟ್ಟುಹೋಗೈತಿ
ಯಮ್ಮಾ ನನಗ ಕಾಣಲಾರದಂಗ ನಿನ್ನ ಹಾಕಿಬಿಟ್ಟಾರ
ಏನೇ ತಾಯಿ ನನ್ನ ಕೂಟ ಮಾತಾನಾಡ್ತಿ
ಓಹೋ ಕೇಳಪ್ಪ ರಾಮಯ್ಯ
ಈಗ ಅವತಾರದಲ್ಲಿ ಬಂದ್ರೆ
ಮೂರು ಕಂಬ್ಳಿ ಮುಚ್ಚಿ
ನಿನ್ನ ಬಚ್ಚಿಕ್ಕಿ ಜೀವ ನಿಮ ತಂದಿ ತಾಳಿ ಕಟ್ಟಿದ
ಈ ಜೀವದಲ್ಲಿ ನಿನ್ನ ಜೀವ ಕಲೀಲಿಲ್ಲ
ನಿಮ್ಮ ತಂದಿ ತಾಳಿ ಕಟ್ಟಿದ್ದಕ್ಕೆ
ಆಗ ತಾಯಿ ಅಂತಿದ್ದಿ
ಇಲ್ಲಿ ಸತ್ತಿದವಳು ನಾನು ಇಲ್ಲಿ ಹುಟ್ಟುತ್ತೀನಂದ್ರೆ
ಡಿಲ್ಲಿಯವ್ನು ಹೊಟ್ಟ್ಯಾಗ
ಈಗ ಕುದುರಿ ಕಿವಿಯಾಗ ಹುಟ್ಟುಬಿಡ್ತಿನಿ
ಆಗ ಸಾಯಬ್ರು ಕುಲ್ದಾಗ ಹುಟ್ಟಿ
ಆಗ ನಿಮ್ಮ ಆನೆಗುಂದಿಗೆ ಬರ್ತಿನಿ

ಆಗನ್ನ ರಾಮಯ್ಯ ನನ್ನ ಜೀವ ಕಲೀಬೇಕಯ್ಯೋ || ತಂದಾನ ||

ಈ ಅವತಾರದಲ್ಲಿ ಕಲೀಲಿಲ್ಲದಿದ್ರೆ
ಸಾಯಬ್ರು ಅವತಾರ ಹುಟ್ಟಿ ಬರ್ತಿನಿ
ಆಗ್ನ ಕಲೀಬೇಕೋ ರಾಮಯ್ಯ
ಛೀ ಅಮ್ಮಾ ನೀನು ಮೂರು ಅವತಾರಲ್ಲ
ಈ ಲೋಕದಾಗ ಎಷ್ಟು ಅವತಾರ ತಾಳಿದ್ರೂ

ನೀನೊಂದು ತಾಯಮ್ಮಾ ನಾನೊಂದೆ ಮಗಮ್ಮೋ
s ಜೀವ ತಾಯಿ ನೋಡಮ್ಮ ನಾ ಜೀವ ಕಲೇದಿಲ್ಲಮ್ಮಾ
ಕಲೇದಿಲ್ಲ ಜಲ್ಮಕ್ಕ
ನನ್ನ ಜೀವನ್ನ ಬಿಟ್ಟೇನು ನಾನು ಜೀವದಲ್ಲಿ ಕಲಿಯೋದಿಲ್ಲ || ತಂದಾನ ||

ರಾಮಾ ಜೀವ ಕಲಿಯೋದಿಲ್ಲ ಜೀವ ಕಳಕೊಂತೀಯಾ

ಅಂಗಾಗ್ಲಿ ರಾಮಯ್ಯ ಲೋಕ ಇರಗೋಡ್ಸದಿಲ್ಲ
ಆನೆಗುಂದ್ಯಾಗ || ತಂದಾನ ||

ರಾಮಾs ಅಂತ ಜೀವ ಬಿಟ್ಟು ಬಿಟ್ಳಪ್ಪ ರತ್ನಾಕ್ಷಿ