ಇಲ್ಲಿ ಸತ್ತ ರತ್ನಾಕ್ಷಿ ಎಲ್ಲಿಗೆ ಬಂದ್ಳು
ಆನೆಗುಂದಿಲಿದ್ದ
ಡಿಲ್ಲಿ ಪಟ್ಣಕ್ಕೆ
ಆಗ ಕುದುರಿ ಸಲುವಿದಾನ
ಡಿಲ್ಲಿ ಗೋಲ್ಕಂಡ ನವಾಬದಾರು

ಯಮ್ಮಾ ಕುದುರಿ ಕಿವಿಯಾಗಲಿದ್ದ ಬಿದ್ದಾಳ ಮಗಳು
ರತ್ನಾಕ್ಷಿ ಆಗಿ ಒಂದೇ ಅಲ್ಲಿ ಜಲ್ಮದಾಗ || ತಂದಾನ ||

ಎರಡು ಅವತಾರದಾಗ
ಕುದುರಿ ಕಿವಿಯಾಗಲಿದ್ದ
ಮೂರು ತಿಂಗಳ ಕೂಸಾಗಿ ಬಿದ್ದು ಬಿಟ್ಳು
ಕ್ಯಾವ್‌ ಕ್ಯಾವ್‌ ಕ್ಯಾವ್‌ ಅರಚತಾಳ
ಬೆಳ್ಳಗ ವರಲಕ್ಷ್ಮಿ ಇದ್ದಂಗ ಇದ್ದಾಳ
ದೇವತಿ ಇದ್ದಂಗ
ಆಗ ಇನ್ನ ಕುದರಿ ಸಲುವವನು
ಡಿಲ್ಲಿಯವ್ನ ಕೈಯಾಗ ಇರುವವನು
ಕುದ್ರಿಗೆ ಆಗ ಹತ್ತಿಕಾಳು
ಹುರುಳಿ ನುಚ್ಚು ಇಡಬೇಕಂತ ಬಂದ್ರು
ಬಂದು ನೋಡದ್ರೆ
ಆಹಾ ಮಗಳ ಎಷ್ಟು ಚಲವಿ ಇದಾಳ
ಓಡಿ ಬಂದ್ರು
ಏನಯ್ಯ ಡಿಲ್ಲಿ ಗೊಲ್ಕಂಡ ನವಾಬುದಾರ
ಏನ್ರಪ್ಪ ಕುದ್ರಿ ಸಲುವವರೇ
ಏ ನಿನ್ನ ಕುದುರಿ ಇದಿತಯ್ಯ
ಮಗಳ ಎಷ್ಟ ಚಂದ ಐತಿ ಅಂಬೊತ್ತಿಗೆ
ಆಗ ನಡಿರಪ್ಪ ಅಂತ ಬಂದ್ರು
ಆ ಡಿಲ್ಲಿ ಬಾದಶಾಹ ನವಾಬುಸಾಬು ಬಂದು
ಆ ಮಗಳ್ನ ಮುದ್ದು ಕೊಟ್ಟು ಕೈಲಿ ಹಿಡ್ಕಂಡು
ಕೈಯಾಗೆತ್ತಿಕೊಂಡು ಮನೀಗೆ ಬಂದಿ
ಆಗ ಮಗಳಿಗೆ ಮೈ ತೊಳ್ದ
ಈಗ ಗಂಧದ ತೊಟ್ಲಾ ಹಾಕಿದ
ಗಂಧ ಹಚ್ಚಿದ
ಆಗ ಅರಿಷಿಣ ಹಚ್ಚಿ
ದಡಿ ಅಂತ ಮಲ್ಲಿಗಿ ಹೂ ಹಾಕಿ
ಆ ಮಗಳಿಗೆ ಏನಂತ ಹೆಸರಿಡ್ತಾನ
ಡಿಲ್ಲಿಯ ಕುದುರಿ ಕಿವಿಯಾಗ ಹುಟ್ಟಿದವಳು
ಅಲ್ಲಿ ರತ್ನಾಕ್ಷಿ ಈ ಡಿಲ್ಲಿನಾಗ

ಆಗ ಡಿಲ್ಲಿ ಹುಸೇನಿ ಹೆಸರನ್ನ ಇಟ್ಟಾರ
s ಡಿಲ್ಲಿ ಹುಸೇನಿ ಮಗಳಯ್ಯ ಹುಸೇನಿ ಅಂತಾನು || ತಂದಾನ ||

ಮಗಳ್ನ ಹುಸೇನಂತ ಹೆಸರಿಟ್ಟಿದ್ದ
ಇಟ್ಟಿದಾಗ ಹಾಲು ಕುಡಿಸೋ ದಾಸಿ
ಈಗ ನೀರು ಹಾಕುವವರು
ಹೊತ್ತಿಗೆ ಮೂರು ಸರ್ತಿ ಮೈ ತೊಳ್ದು
ಆಗ ಹುಸೇನಿಗೆ ಮೈ ತೊಳ್ದು ಹಾಲು ಕುಡಿಸುವವರು

ಒಂದು ವರುಸವಲ್ಲಣ್ಣ ಎರಡು ವರುಸವಲ್ಲಣ್ಣ
ಐದು ವರುಸ ನೋಡಣ್ಣ ಡಿಲ್ಲಿನಾಗ ಬೇಕಂಡಾಗ || ತಂದಾನ ||

ಬೆಳ್ಳಿ ಬುಡುಗಿ ಬೆಳ್ಳಿಯ ಅಂಗಿ
ಆಗ ಬಂಗಾರದ ಶಲ್ಲೇವು ಎದಿಮ್ಯಾಲೆ ಹೆಗಲಮ್ಯಾಲೆ
ಬಂಗಾರದ ಎಡಗೈ ಬಳೆ
ಬಲಗೈಗೆ ಬಂಗಾರದ ವಾಚು
ಆಗ ಜೀವಕ್ಕಾಗಿ ಈಗ ಕೈಲಿ ಹಿಡ್ಕಂಡು
ಮಗಳಾಗಿ ತಂದಿ ಬಂದು ಬಿಟ್ಟ ಡಿಲ್ಲಿದವ್ನು
ಏನ್ರಿ ಈ ಮಗಳಿಗೆ ಓದು ಕಲಿಸಬೇಕು ಅಂತಾ
ತಮ್ಮ ಕುಲದ ದಸ್ತಗಿರಿತಲ್ಲಿ
ಕರ್ಕಂಡು ಬಂದ್ರು ಸಾಹೇಬ್ರಿಗೆ
ಈಗಿನ್ನ ಸಾಹೆಬ್ರಿ ಹುಡುಗರಿಗೆಲ್ಲ
ಸಾಯೆಬ್ರೆ ಓದು ಕಲಿಸೋದು
ನಾಲ್ಕು ಬುಟ್ಟಿ ಮಣ್ಹಾಕಿ
ಆಗ ಏನಂತ ಬರ್ದ
ಗೀಗೀ ಬಾಬಾ ಅಂತ ಓನಾಮ
ಕಾಗುಣಿತ ಬರ್ದು ಬಿಟ್ಟ ಅದ್ರಾಗ
ಆಹಾ ಈಗಿನವ್ರು ಮಗಳಾಗಿ

ಬೊಳ್ಳು ತೋರಿಸಿದ್ರೆ ನೋಡಣ್ಣ ಬೊಳ್ಳ ಹಿಂಗಿಬಿಡುತಾಳ
ಹುಸೇನಿ
ಕಣ್ಣು ಬಿಟ್ರು ನೋಡನ್ನ ಕಂಠಪಾಠ ತೆಗಿತಾಳ ಮಗಳು || ತಂದಾನ ||

ಆಗ ಇನ್ನ ಹತ್ತು ಗಂಟೇ ತನಕ ಓದಿಕ್ಯಂಡು
ಹತ್ತೂ ಗಂಟೀಗೆಲ್ಲ ಒಬ್ಬ ದಾಸಿಯನ್ನ
ಮಾಡಿಬಿಟ್ಟಾರಪ್ಪ ಕರ್ಕಂಡು ಬರಾಕ
ತುಂಬ ಬಟ್ಟಿ ಹೊದಿಸಿ

ಮಗಳ ಕರ್ಕಂಡು ಬರುತಾರ ಬಜಾರ ಕೂಟಣ್ಣ
ಡಿಲ್ಲಿ ಪಟ್ಣದಾಗ
ಆಗ ಡಿಲ್ಲಿ ಮಹಬೂಬಸಾಬನ ಮಗಳಾಗಿ ಇನ್ನು ಹುಸೇನಿ || ತಂದಾನ ||

ದಿನಾ ಹನ್ನೆರಡು ಗಂಟೇ ತನಕ
ಓದೋದು ಬರಿಯೋದು ಇನ್ನವರ ಮಗಳು ಆ ರೀತಿದಲ್ಲಾಗಿ

ಇಂಗ್ಲಿಷು, ಮರಾಠಿ, ಹಿಂದಿ ಗಿಂದಿ ಓದ್ಯಾಳ ಮಗಳು || ತಂದಾನ |

ಬೆಳ್ಳಗ ಸೂರ್ಯ ಚಂದ್ರ ಕಾಣ್ದಂಗ
ಕಾಣ್ತಾಳಪ್ಪ ಮಗಳ ನೋಡ
ಆಗ ಮಗಳು ಓದೋ ವೇಳೆಗ

ಹದಿನೆಂಟು ವರುಸಣ್ಣ ಒಳ್ಳೆ ವಯಸ್ಸು ಬಂದಾಳ ಮಗಳು || ತಂದಾನ ||

ವಿದ್ಯೆ ಕಲಿಸಿದವನು
ದಸ್ತಗಿರಿಗೆ ಶರಣುಮಾಡಿ ಗುರುವಿಗೆ
ಆತಗೆ ಅಕ್ಕಿ ಬ್ಯಾಳಿ ಇನಾಮು ಕೊಟ್ಟು
ಕೈ ಮುಗ್ದು ಮಗಳ ಹುಸೇನಿನ್ನ
ಇನ್ನ ಸಾಲಿ ಬಿಡಿಸಿ ಬಿಟ್ರು