ತಂದಿ ಕರ್ಕಂಡು ಹುಸೇನಿಗೆ ರಾಜ ಕಛೇರಿಗೆ ಬಂದ
ಆಗ ತಂದಿ ಬಂದು ಸಿಂಹಾಸನದ ಮ್ಯಾಲೆ
ಮಗಳನ್ನು ಕುಂದುರಿಸಿದ
ಆಗ ಏನಪ್ಪಾ ಇದೇನಾ ನಿನ್ನ ರಾಜ್ಯವು
ಓಹೋ ಇದೇ ಮಗಳಾ
ಓಹೋ ಏನಪ್ಪಾ ದೇಶ ಎಲ್ಲಾ
ನಮ್ಮದೇ ಇರಬಹುದಾ
ದೇಶ ಹುಟ್ಟಿತ್ತಲ್ಲಿ ದೇಶ ಮುಣಿಗಿತ್ತಲ್ಲಿ
ಕರ್ನಾಟ ಆಂಧ್ರ ಒಂದ ಇರಬಹುದಾ
ಇಲ್ಲದ್ರೆ ಯಾರ ದೇಶ
ಅವರುದೇನಪ್ಪಾ ಅಂತ ಕೇಳಿದ್ಳು
ಅಯ್ಯೋ ಅಮ್ಮಾ ಇಲ್ಲಿಗೆ ತಾ ಕುಲಕ್ಕೆ
ಆನೆಗುಂದಿ ಈಗಿನ್ನ ಕಂಪಿಲಿ ರಾಜಾ
ನನಗೆ ಕಳಿಸುತ್ತಿದ್ದ
ಇಪ್ಪತ್ತು ಹಳ್ಳಿ ಅರವತ್ತು ಊರು ರೊಕ್ಕ
ಡಿಲ್ಲಿಗೆ ಖಳಿಸ್ತಿದ್ದ
ಓರುಗಲ್ಲು ಗಣಪತಿರಾಜ ಗಣರಾಮ ಖಳಿಸ್ತಿದ್ದ
ರಾಮಯ್ಯ ಹುಟ್ಟಿ
ಜಟೀಂಗೀಶ್ವರ ವರದಲ್ಲಿ ಹುಟ್ಟಿ
ಸಾಯಲಾರಂತ ರಾಮ
ಆರು ಮಂದಿ ಕಡ್ಯಾಕ ಹೋದ್ರೆ
ಆರು ಆಯ್ಧಗಳು ಹೂವಿನ್ಹಾರಾಗಿ
ಕೊಳ್ಳಾಗ ಬಿದ್ದಾವ
ಮೈ ಕಬ್ಬಿಣರೀತಿ ಉಕ್ಕಿನ ಶರೀರ ರಾಮ ಸಾಯೋನಲ್ಲ
ಯಮ್ಮಾ ಏಳುಸಾವಿರ ಮಂದಿ ಕರ್ಕಂಡು ಹೋದ್ರೆ
ಆಗ ಆನೆಗುಂದಿನ್ನ ಆನೆಲಿದ್ದ
ತುಳಿಸಿ ಹಾಳು ಮಾಡಾನಂದ್ರೆ
ಈಗ ನಮ್ಮೆನ್ನೆಲ್ಲ ಕಡ್ದು ಕಡ್ದು ಕುಪ್ಪಿ ಹಾಕಿದ
ಯಪ್ಪಾ ರಾಮ ಇನ್ನ ಸತ್ರೆ ಬರದಿಲ್ಲಂತ
ಕೈಮುಗಿದು ಬಂದೀನೆ ತಾಯಿ ಹುಸೇನಿ
ಅಪ್ಪಾ

ಆನೆಗುಂದಿ ಎಂಬೊತ್ತಿಗೆ ಕಿಲಕಿಲ ನಕ್ಕುಬಿಟ್ಟಾಳ
ಹುಸೇನಿ
s ಕೆಳಗೈತ ಮ್ಯಾಲೈತಾ ನನ್ನ ಆನೆಗುಂದಿ ಕೈಯಾಗ || ತಂದಾನ ||

ಯಪ್ಪಾ ಆನೆಗುಂದಿ ಕೆಳಗೈತಾ ಮ್ಯಾಲೈತಾ
ಇಗೋ ಡಿಲ್ಲಿ ಪಟ್ಣದಿಂದ
ತಾವು ಕೋಟಿ ಮಂದಿನ್ನ ಕರ್ಕಂಡು ಹೋಗಿ
ಆನೆಲಿದ್ದ ತುಳ್ಸಿ
ರಾಮನ ತಲಿ ಕಡ್ಕಂಡು ತರ್ತಿನಿ ಡಿಲ್ಲಿ ಪಟ್ಣಕ್ಕೆ
ಅಯ್ಯೋ ಮಗಳಾ

ಯಮ್ಮಾ ಹೋಗುಬ್ಯಾಡ ನಿನ್ನ ಕೈಲಾಗದಿಲ್ಲ
ರಾಮಾ ಸಾಯೋನಲ್ಲ ನೀನೇ ಹೋಗುಬ್ಯಾಡಾ
ಯಮ್ಮಾ ಬೊಗುಸಿ ಒಡ್ಡಿ ಶರಣು ಮಾಡುತಾರಾ || ತಂದಾನ ||

ಯಪ್ಪಾs ನಾನೇ ಮಗ
ನಾನೇ ಮಗಳು
ಡಿಲ್ಲಿ ಪಟ್ಣದಾಗ
ನಿನ್ನ ಜೀವಕ್ಕ ಹುಟ್ಟಿದವ್ನು
ಅವನ ಜೀವನೇ ಕಡಿತೀನಿ ನಾನು ಉಳಿಸೋದಿಲ್ಲ
ರೊಕ್ಕ ಕಟ್ತಾನ ಕಟ್ಟಬೇಕು
ಇಪ್ಪತ್ತಳ್ಳಿ ಅರವತ್ತೂರು ರೊಕ್ಕ ಆನೆಗುಂದ್ಯಾಗ
ಇಲ್ಲದ್ರೆ ಆಗ ಇನ್ನ ಜೀವ ಕಳೀಬೇಕು ಅವಂದು
ಅಂದ್ರೆ ಬ್ಯಾಡ ಬ್ಯಾಡ ಅಂದ್ರೆ
ಡಿಲ್ಲಿ ಹುಸೇನಿ
ಆಗ ಬೆಳ್ಳಿ ಜಪ್ನಅಂಗಿ
ಬೆಳ್ಳಿ ಬುಡಿಗಿ ತೊಟ್ಗಂಡು
ಆಗ ಟೋಪಿ ಇಟ್ಗಂಡು
ಬಂಗಾರದ ಟೋಪಿ ಇಟ್ಗಂಡು
ಈಗಿನವ್ರು ತಾವು ಕುಲಕ್ಕಾಗಿ
ಮೂರು ದಡೇವು ಚಂದ್ರಾಯ್ಧ
ಭಲ್ಲೆವು ಬಾಕುಗಳು ತಗಂಡು
ಈಗ ಒಬ್ಬ ಸಾಯಬ್ರಲ್ಲಪ್ಪ
ಏಳು ಸಾವಿರ ಮಂದಿ ಕರ್ಕಂಡು ಹೊದ್ರೆ ಕಡಿದುಬಿಟ್ಟಾನ
ಯಮ್ಮಾ ಯಾರನ್ನು ಕರ್ಕಂಡು ಹೋಗ್ತಿ ಡಿಲ್ಲಿ ಪಟ್ಣದಾಗ
ಕೋಟಿ ಮಂದಿ ಎಲ್ಲಾ ಲಿಂಗಾಯತರೆ
ಕೋಟಿಲಿಂಗ
ಆಗ ಅಂಬಿಗರು
ಈಗಿನ ಲೋಕ ಐದಾರ
ಯಾರವಿದ್ಯೆ ಕಲಿಯಾಕ ಕೈಲಾಗದಿಲ್ಲ
ಊರೆಲ್ಲ ಎದ್ದೇಳಬೇಕು
ಡಿಲ್ಲಿ ಪಟ್ಣದವ್ರು ಅಂದ್ರೆ
ಅಮ್ಮಾ ಹುಸೇನಿ
ಇವತ್ತು ಸ್ವಾಮಾರ
ನಾವ ಸ್ನಾನ ಮಾಡ್ಬೇಕು
ಲಿಂಗ ಪೂಜೆ ಮಾಡ್ಬೇಕು
ಪೂಜಿ ಇಲ್ದ ಜೀವಕ್ಕೆ ಊಟ ಮಾಡಂಗಿಲ್ಲ
ಪೂಜೇ ಮಾಡೇ ಜೀವಕ್ಕೆ ಊಟ ಮಾಡಬೇಕು
ಅಯ್ಯೋ ಕೇಳ್ರಪ್ಪಾ
ನಿಮ್ಮ ಪೂಜೆ ಇಲ್ಲದಿದ್ರೇನು?
ಆತ್ಮ ಜೀವ ಇದ್ರೆ ಇಲ್ಲೆ ಜೀವದಲ್ಲೇ ಪೂಜ
ಇಗೋ ಆನೆಗೊಂದಿ ಹೊಳಿದಂಡಿ
ಹೊಳಿದಂಡಿ ಹರಿಯೋ ನೀರದಾಗ
ಸಮುದ್ರದಾಗ ಸ್ನಾನಮಾಡಿ
ಬಂಡೆಮ್ಯಾಲೆ ಲಿಂಗವಿಟ್ಟು
ಅಲ್ಲೆ ದೇವ್ರಿಗೆ ಧ್ಯಾನ ಮಾಡಿ
ಊಟ ಮಾಡ್ರೆಪ್ಪ
ತಾಯಿ ನಿನ್ನ ಮಾತಿಗೆ ಎದುರಾಡೋದಿಲ್ಲ
ಈಗ ನಡೀ ಬರ್ತೀವಿ ಅಂತ

ಕೋಟಿಮಂದಿ ಕರ್ಕಂಡು
ಕುದುರಿಮ್ಯಾಲೆ ಕುಂತಾಳ
ಥೋತಡಿ ಇಂಥ ರಣವೇನಣ್ಣ
ಅಣ್ಣಾ ಡೋಲು ಹೊಡೆದ್ರೆ ನಿಂದ್ರಬೇಕು
ಆಗ ರಣಭೇರಿ ಹೊಡೆದ್ರೆ ಹೋಗಬೇಕು
ಜನಸಂಖ್ಯಾ ಕರ್ಕಂಡು
ಆಗ ಡಿಲ್ಲಿಲ್ಲಿದ್ದಣ್ಣ
ಆನೆಗುಂದಿಗೆ ಬಂದಾಳ || ತಂದಾನ ||

ಮೂರು ಸುತ್ತು ಸುತ್ತಿಕ್ಯಂಡು
ಅವ್ರು ಗುಂಡುಗಳು ಬಿಡ್ತಾರ ಟೋಪ್‌ ಟೋಪ್‌ ಟೋಪ್‌ ಅಂತ
ಗುಂಡುಗಳ ಒಗೆದುಬಿಡ್ತಾರ
ಆಗ ಆನೆಗುಂದ್ಯಾಗ
ಆಗ ಯಾರೂ ನೋಡಿದ್ರೂ
ಈಗ ಸ್ವಾದರ ಮಾವ ಬಚ್ಚಣ್ಣ ನೋಡ್ದ ಮಾಳಿಗೇರಿ
ಯಪ್ಪಾ ರಾಮ
ಈಗ ಆತನ ಕೈಯಾಗ ಮಂತ್ರಿಗಳು ನಾವು
ಈಗ ಡಿಲ್ಲಿಯನ್ನ ಕೈಯಾಗ
ಬೇಡಪ್ಪ
ರೊಕ್ಕಿಗ ಬಲವಂತ ದೇಶಕ್ಕೆ ಬಲವಂತ

ಆತನ ಕೂಟ ನಾವು ಗೆದಿಯೊಂಗಿಲ್ಲ ರಾಮಾ
ದೊಡ್ಡನಪ್ಪ ಡಿಲ್ಲಿ ಅಂದ್ರೆ
ದೇಶವೆಲ್ಲಾ ಆತಂದೆ ಐತಿಯಪ್ಪಾ
ಲೋಕವೆಲ್ಲ ಆತಂದೆಯಪ್ಪಾ || ತಂದಾನ ||

ಈ ಲೋಕವೆಲ್ಲ ಡಿಲ್ಲಿಯವಂದೆ
ಕೇಳಪ್ಪಾ ಮಗನೆ
ಈಗ ಸಾಧ್ಯವಾಗದಿಲ್ಲ
ಈಗಿನವ್ರು ಸಾಯಬ್ರು ಕೂಟ
ವಾದಿಬ್ಯಾಡ ಪಾರ್ಟಿ ಬ್ಯಾಡ
ಈಗಿನ್ನವರಿಗೆ ಕೇಡೋ ರೊಕ್ಕ
ಈಗ ನೀನು ಕೊಡುಬ್ಯಾಡ
ನಾವು ಕೊಡ್ತೀವಿ ರಾಮಾ
ಕೊಟ್ಟು ಕೈ ಮುಗ್ದು ಖಳಿಸ್ತೀವೋ ರಾಮ ಡಿಲ್ಲಿಗೆ
ಯಪ್ಪಾ ಈಗ ಕೋಟಿಯಲ್ಲ
ಎರಡು ಕೋಟಿ ಲಕ್ಷ ಬರಲಿ
ನೀವು ಟೋಪಿ ನೋಡಿ
ನೀವು ಸಾಯಬ್ರು ನೋಡಿ ಹೆದ್ರಿಕ್ಯಂಡಿರ್ಯಾ
ಇಗೋ ಈಗ ಡಿಲ್ಲಿಗೆ ಹೋಗಿ
ಅವನ ತಲೆ ಕಡಿಕ್ಯಂಡು ತರ್ತಿನಂತ

ಆಗ ರಾಮ ನೋಡಣ್ಣ
ಕುದುರಿ ಒಂದು ತಗದಾನ
ರಾಮನ ಕುದುರಿ ಯಗದಾನಮ್ಮೋ
ಥೋಯಡಿ ಕುದುರಿ ಮ್ಯಾಲೆ ಕುಂತಾನ
ಪಟಪಟ ರೆಕ್ಕೆ ಬಡಿದೈತೋ
ಇನ್ನವಾಗಿ ಬರತೈತೋ
ಕುದುರಿನೋಡ
ಮೂರು ಮೇಘ ತಿರುಗತೈತೊ || ತಂದಾನ ||

ಮೂರೊ ಮೇಘದಾಗ ತಿರುಗುತೈತಪ್ಪ ಕುದುರಿ
ಕೆಳಗ ಏಳು ಸಾವಿರ ಮಂದಿ
ಆ ಕುದುರಿ ನೆಳ್ಳು ನೋಡಿ
ಒಬ್ರು ಮ್ಯಾಲೆ ಒಬ್ರು
ಹ್ಯಾಂಗ ತಿವಿಯಾಕ ಬರ್ತಾರ

ಅರೆ ಮರ್ಗಯಿರೆ ರಾಮಯ್ಯ
s ಬಂದ ಬಂದ ರಾಮಯ್ಯ
ಆಗ ತಿವಿಯಾಕ ಬಂದ್ರಮ್ಮಾ
ಆಗ ಬಲ್ಲೆವು ತಗಂಡು ತಿವಿತಾರ
ನೆಳ್ಳು ನೋಡಿ ತಿವಿತಾರ
ಕುದುರಿ ನೆಳ್ಳು
ಕುದುರಿ ಮ್ಯಾಲೆ ತಿರುಗುತೈತೋ
ಮೂರುಮ್ಯಾಗದಾಗಣ್ಣ
s ಎರಡು ರೆಕ್ಕೆ ಹೊಟ್ಟಿಗಾನ್ಸಿದ
ಅದು ಗಡ್ಗಡ್ಗಡ್ಅಂತ ತಿರುಗ್ಯಂತ
ಆಗ ಲೋಕ ಇನ್ನ ಇಳಿದೈತೋ
s ಲೋಕ ಇಳಿದ ಹೋತ್ತಿಗೆಲ್ಲೋ
ಥತ್ತರಿ ಎಡಕ್ಕೆ ಬಂದರೆ ಎಡಗೈಲೆ
ಬಲಕ್ಕೆ ಬಂದರೆ ಬಲಗೈಲೆ
ಇನ್ನ ಕಡೀತಾನ ರಾಮಯ್ಯ
ರಾಮಯ್ಯ ಸಲಾಂ ಮಾಡ್ತೀವಿ ರಾಮಯ್ಯ
ಕಡಿಬ್ಯಾಡ ರಾಮಯ್ಯ
s ಸಲಾಂ ಇಲ್ಲ ಗಿಲಾಮಿಲ್ಲಾ || ತಂದಾನ ||

ರಾಮ ಕಡಿಕ್ಯಂತ ಬರ್ತಿದ್ರೆ
ಓಡೋಡಿ ಹೋಗ್ತಾರ
ಅರ್ಧ ಮಂದಿ
ರಾಮ ಆಲೋಚನೆ ಮಾಡ್ದ
ಅಲೆಲೇ
ಅವರಾಗಿ ಕರ್ಕಂಡು ಬಂದಿದ್ರೆ
ಇವ್ರಾಗಿ ಬಂದಿರ್ತಾರ
ಈ ಬಡವರನ್ನೆಲ್ಲ ಯಾಕ ಕಡಿಬೇಕು
ಕಡಿಯಾಕ ಬಂದವನ್ನ ಕಡೀಬೇಕು ನಾನಂತ
ಆ ರಾಮಯ್ಯ

ಕುದುರಿಮ್ಯಾಕ ಎಬ್ಬಿಸ್ಯಾನ
ಆಗ ಡಿಲ್ಲಿದವ್ನು ಓಡುತಾನ
ಹುಸೇನಿ ಓಡಿ ಹೋತಾಳ
s ಕುದುರಿಮ್ಯಾಕ ಎಬ್ಬಾಸ್ಯಾನ || ತಂದಾನ ||

ಮುಂದಿಳಿಸಿ ಬಿಟ್ಟ
ಏ ನಿನ್ನ ಬಿಡದಿಲ್ಲ ನಾನು ತಿವಿದುಬಿಡ್ತಿನಿ
ಈಗ ಕಡ್ಡು ತುಂಡು ಮಾಡ್ತಿನಿ
ಇನ್ನ ಕಡ್ಡೇ ಕಡೀತಾನಂತ

ಟೋಪಿ ತಗದು ಬಿಟ್ಟಳ ಎದಿಮ್ಯಾಲಿನಿ ಅಂಗಿ ಹರಿದ್ಳು || ತಂದಾನ ||

ಕಡ್ಡೇ ಕಡೀತಾನಂತ ರಾಮ
ರಾಮs ನಾನು ಜೀವದಲ್ಲಿ

ಡಿಲ್ಲಿ ಹುಸೇನೈದೀನಿ ಹೆಣ್ಮಗಳು ನಾನಯ್ಯೋ  || ತಂದಾನ||

ರಾಮಾ ಇನ್ನ ಹೆಣ್ಣು ಮಗಳು ಐದೀನಿ ಎಂಬೊತ್ತಿಗೆ

ಕೈಯಾಗ್ಹಿಡದ ಯೋಳಕಂಡ ಚಂದ್ರ ಕೆಳಗ್ಹಾಕಿದ
ಕೆಳಗ ಬಿಸ್ಹಾಕಿದ ರಾಮ || ತಂದಾನ ||

ಆಗ ಹೆಣ್ಣು ಮಗಳು
ಕೈಯತ್ತಿ ಹ್ಯಾಂಗ ಕಡಿಬೇಕು ನಾನು
ಹೆಣ್ಣು ಮಗಳ್ನು ಕಡೀಬಾರದಂತ
ಆಗ ಕೈಯಾಗಿದ್ದುದು ಕೆಳಗ್ಹಾಕಿ
ಕುದುರಿ ಮ್ಯಾಗಿದ್ದು ಕೆಳಗಿಳಿದು
ಒಂದು ಪಾದ ಎರಡು ಕೈ ಜೋಡಿಸಿ

ಯಮ್ಮ ತಾಯಾಗಿ ನೀನಮ್ಮ ಮಗನಾಗಿ ನಾನಮ್ಮ
ಯಮ್ಮ ಮಗನ್ನ ನೋಡಾಕ ಬಂದೇನೇ ಆನೆಗುಂದಿ ಲೋಕಕ್ಕೆ
s ನಿನ್ನ ಮಗ ನೋಡಮ್ಮ
ಅರ್ಧರಾಜ್ಯ ಮಗನದಮ್ಮ ಅರ್ಧರಾಜ್ಯ ತಾಯದಮ್ಮ || ತಂದಾನ ||

ಕೇಳಪ್ಪಾ ಅರ್ಧರಾಜ್ಯ ನಂದು
ಅರ್ಧರಾಜ್ಯ ನಿನ್ನ ಮಗನ

ಛೀ ಮಗ ಅಂದ್ರೆ ರಾಮಯ್ಯ ಬಾಳೆಹಣ್ಣು ಬಾಯಾಗ ಕೊಟ್ಟೇನ || ತಂದಾನ ||

ರಾಮಾ ಬಾಳೆಹಣ್ಣು ವರವುಲ್ಲಿದ್ದ ಹುಟ್ಟಿ
ನೀನು ತಾಯಿ ಅಂದ್ರೆ
ಬಾಳೆಹಣ್ಣು ಬಾಯಿಗೆ ಕೊಡ್ತೀನಿ
ಹಿಂದಿನ ಕಾಲದಲ್ಲಿ ಹುಟ್ಟಿದ್ರೆ
ಅರವತ್ತು ಫೋಟ ತಂದ್ರೆ
ಯಾವನ್ನು ನನ್ನ ಕಣ್ಣಿಗೆ ಒಪ್ಪಿಗೆಯಾಲ್ಲಾಗಲಿಲ್ಲ
ರಾಮ ನಿನ್ನ ನೋಡೋವೊತ್ತಿಗೆ
ಜೀವದ ಲಗ್ನ ಆಗಬೇಕು
ಜೀವ ಕಲೀಬೇಕಂತ ಬಂದ್ರೆ
ನಿನ್ನ ಹಗೇದಾಗ ಬಚ್ಚಿಕ್ಕಿ
ನಿಮ್ಮ ತಂದಿ ಕಂಬಳಿ ಮುಚ್ಚಿ ಲಗ್ನ ಮಾಡಿಕ್ಯಂಡ
ಆ ಅವತಾರದಲ್ಲಿ ಜೀವ ಕಲೀಲಿಲ್ಲೋ ರಾಮಯ್ಯ
ಈಗಿನ್ನ ಡಿಲ್ಲಿಯವನ ಕುದುರಿ ಕಿವಿಯಾಗಲಿದ್ದ ಹುಟ್ಟಿ
ಹುಸೇನಾನಿ ಬಂದಿನಿ

ಈಗನ್ನ ಕಲೀಯಯ್ಯ ಕೈಯಾನ್ನ ಹಿಡಿಯಯ್ಯ
s ಲಗ್ನ ಆಗು ರಾಮಯ್ಯ ರಾಜ್ಯವೆಲ್ಲ ಕೊಡುತೀನಿ ನಿನಗೆ || ತಂದಾನ ||

ಲಗ್ನ ಆಗಬೇಕು ರಾಮಯ್ಯ
ನನ್ನ ಅರ್ಧ ರಾಜ್ಯನೇ ಕೋಡ್ತಿನಿ
ಛೀ ಅಮ್ಮಾ

ನೀನು ತಾಯಿ ಆಗ್ತೀಯೋ ನಾನು ಮಗವಾಗ್ತಿನಿ
ನನಗೆ ರಾಜ್ಯವೇ ಬೇಕಿಲ್ಲ ದೇಶವೇ ಬೇಕಿಲ್ಲ || ತಂದಾನ ||

ಈ ಲೋಕವೇ ಬೇಕಿಲ್ಲ
ನಿನ್ನ ರಾಜ್ಯವೇ ಬೇಕಿಲ್ಲ ತಾಯಿ

ನಾನು ಜೀವ ಕಲಿಯಂಗಿಲ್ಲಮ್ಮಾ
ನಾನು ಜೀವದ ಮಗನಿನಗಮ್ಮಾ || ತಂದಾನ ||

ಸರಿ ರಾಮ
ಜೀವ ಕಲೀಲಿಲ್ಲದ್ರೆ ಆಗೇತು
ನಮ್ಮ ರೊಖ್ಖ ನನಗೆ ಕಟ್ಟು
ಯಮ್ಮಾ

ಜೀವ ಮಗ ನೋಡಮ್ಮಾ
ನೈಯಾಪೈಸೆ ಕಳಿಸೋದಿಲ್ಲ
ಡಿಲ್ಲಿಗೆ ಕಳಿಸೋದಿಲ್ಲ || ತಂದಾನ ||

ಡಿಲ್ಲಿಗೆ ಆನೆಗುಂದಿ ಕರ್ನಾಟ ರೊಕ್ಕ
ನಾನು ಕಳಿಸುದಿಲ್ಲ
ಈಗ ನಿಮ್ಮ ತಂದಿ ಕೆಳಗ ನಾನು ಮಂತ್ರಿ
ಮಂತ್ರಿ ಇದ್ರೆ
ಈಗ ಇಪ್ಪತ್ತಳ್ಳಿ ಇನಾಮು
ಅರವತ್ತೂರು ನನ್ನ ಸಂಬಳ

ನಾನು ಕೊಡಾದಿಲ್ಲಮ್ಮ ಡಿಲ್ಲಿ ಪಟ್ಣಕ್ಕ ನೋಡಮ್ಮ || ತಂದಾನ ||

ಕೊಡದಿಲ್ಲಂತಿ ರಾಮಯ್ಯ
ಜೀವಕ್ಕಲೀಬೇಕು ಒಂದು
ನನ್ನ ರಾಜ್ಯವನ್ನು ತಗೋ
ಇಲ್ಲದ್ರೆ ನಿನ್ನ ರೊಕ್ಕ ನನಗೆ ಕಟ್ಟು
ಇಲ್ಲದ್ರೆ ತಲೆ ಬಗಿಸು ತಲೆ ಕಡಿತಿನಿ
ಅಮ್ಮಾ ಆ ರಾಮ ಏನಂತಾನ
ಎರಡು ಕೈ ಜೋಡಿಸಿ
ಒಂದು ಪಾದ ಮ್ಯಾಲೆ ನಿಂತು

ಯಮ್ಮಾ ನಿನ್ನ ಮಗನ ಯಾಕ ಕಡಿತೀಯಮ್ಮ
ಅಮ್ಮಾ ಕಡೀಬ್ಯಾಡೇ ತಾಯಿ
ಯಮ್ಮಾ ಹಾಲು ಕೊಟ್ಟು ಕೈಯಾಗ ಬೆಳೆಸಿದೆಮ್ಮಾ
ಯಮ್ಮಾ ತಾಯಿ ಎರಡು ಅವತಾರದಲ್ಲಿ ಬಂದೀಯೇ ದೇವಿ || ತಂದಾನ ||

ಅಮ್ಮಾ ಎರಡು ಅವತಾರದಲ್ಲಿ ಬಂದು
ಮಗನ ಜೀವ ಕಳಿಬೇಡೇ
ನಿನ್ನ ಪಾದಕ್ಕೆ ಶರಣಮ್ಮ ದೇವಿ
ಈಗ ನನ್ನ ಮುಟ್ಟಂಗಿಲ್ಲ
ಹೆಣಮಕ್ಕಳ ಜೀವಕ್ಕೆ
ತಾಯಿ ಈಗ ಕೈಮುಗಿತಿನಿ
ಒಂದು ಪಾದ ಎರಡು ಕೈ ಜೋಡಿಸಿನಿ

ನನ್ನ ದಯಪಟ್ಟು ಬಿಟ್ಟುಹೋಗು ತಾಯೆ
ಡಿಲ್ಲಿಪಟ್ಣಕ್ಕೆ || ತಂದಾನ ||

ಕೈಯೆತ್ತಿ ಶರಣು ಮಾಡ್ತಿದ್ದೆ
ಈಗ ನನ್ನಗಾಗಿ ಬಿಟ್ಟುಹೋಗೇ ತಾಯಿ
ಛೀ ನಿನ್ನ ಬಿಡದಿಲ್ಲ ರಾಮ
ನಿನ್ನ ತಲೆಯನ್ನು ಕಡಿಕ್ಯಂಡು ಹೋತಿನಿ
ಸುಮ್ಮನೆ ಬಂದಿಲ್ಲ
ಕುದುರಿ ಕಿವಿಯಾಗಿದ್ದ ಹುಟ್ಟಿ
ಹುಸೇನ ಅಣತ ಹೆಸರಾಗಿ ಆಗಿ
ಇಲ್ಲದ್ರೆ ನನ್ನ ರಾಜ್ಯವನ್ನ ಕೊಡಬೇಕು
ಇಲ್ಲದ್ರೆ ನನಗೆ ರೊಕ್ಕ ಇನ್ನ ತಾವಾಗಿ ಕಟ್ಟಬೇಕು
ಇಲ್ಲದ್ರೆ ನಿನ್ನ ತಲಿಯನ್ನ ಕೊಡಬೇಕು
ಅಮ್ಮಾ ಈ ಲೋಕನೇ ಬೇಕಿಲ್ಲ
ಈಗ ತಾಯಿ ಕಾಲದಲ್ಲಿ ನನ್ನ ಜಲ್ಮ ಕಳೀತಿ
ಈಗ ಹೆಣುಮಕ್ಕಳ ಕೈಯಾಗ ಸಾಯೋನಲ್ಲ
ಈ ಲೋಕೆಲ್ಲ ಕಡಿದ್ರೆ ಸಾಯೋದಿಲ್ಲೇ ತಾಯಿ
ಇಲ್ಲ ನನ್ನ ಮುಂದೆ ಸಾಯಬೇಕು ರಾಮಾ
ಅಮ್ಮಾ ಸಾಯಬೇಕು ಅಂತಿಯಾ ಜೀವದಲ್ಲಿ

ಸಾಯಿತೀನಿ ನೋಡಮ್ಮ
ನಾನು ರಾಜ್ಯ ಕೋಡೋದಿಲ್ಲ
ಆನೆಗುಂದಿ ಕೊಡೋದಿಲ್ಲೇ
ಜೀವಕಡೆದಿಲ್ಲಮ್ಮ ಜೀವ ನಾನೇ ಕಡಿಕ್ಯಂತೀನಿ
ಥೋತಡಿ ಏಳು ದಡೇವು ಚಂದ್ರಾಯ್ಧ
ಬಲಿಗೈಲಿ ಹಿಡ್ಕಂಡು
ಗಡ್ಗಡ್ಅಂತ ಕಡಿಕ್ಯಂಡು
ಗಡ್ಅಂಗೆ ಕಡಿಕ್ಯೆಂಡ ರಾಮ ಆಗ ತಲೆ ನೋಡಮ್ಮ
ಥೋತಡಿ ಇನ್ನ ತಲಿ ಮ್ಯಾಕಣ್ಣ
ದಿಲ್ಲಿ ಪಟ್ಟಗಾಗಿ ಬಂದೈತಿ ರಾಮಂದು || ತಂದಾನ ||

ಆನೆಗುಂದ್ಯಾಗ
ರಾಮ ಗಡಗ್‌ ಅಂತ ಕಡಿಕ್ಯಂಡ
ತಲಿ ಕ್ಯವು ಕ್ಯಾಕಿ ಹೊಡುಕಂತ
ಡಿಲ್ಲಿ ಪಟ್ಣಕ್ಕೆ ಬಂತು
ಡಿಲ್ಲಿ ಆಗಸಿ ಮ್ಯಾಗ ಕುಂತುಬಿಡ್ತು
ತೆಲ್ಯಾಗ ಸುಳ್ಯಾಗ ಜೀವ
ಬಾಯಾಗ ಕ್ಯಾಕಿ ಹೊಡೀತಾನಪ್ಪ ರಾಮಯ್ಯ

ಕ್ಯವು ಅಂದ್ರೆ ನೋಡಪ್ಪ ರಾಮ ಹಬ್ಬಂತ ಸಾಯ್ತಾರ || ತಂದಾನ ||

ಆಗ ಕ್ಯವೂ ಅಂತ ಕ್ಯಾಕಿ ಹೊಡದ್ರೆ
ಅಬ್ಬಾ ರಾಮಾ ಅಂತ ಜೀವ ಬಿಡೋದು
ಡಿಲ್ಲಿದವನು ನೋಡಿದ
ಯಮ್ಮಾ ಮಗಳೆ
ಆನೆಗೊಂದಿಗೆ ಬ್ಯಾಡಂದ್ರೆ ಹೋಗಿಬಿಟ್ಟೆ
ರಾಮನ್ನ ಕಡ್ದುಬಿಟ್ಟಿ ತಲೆ ಬಂದು ಕುಂತೈತೇ
ರಾಮ ಕ್ಯಾಕಿ ಹೊಡೆದಂಗೆಲ್ಲ
ಎಗರಿ ಎಗರಿ ಎಗರಿ ಬಿಳ್ತಾರ
ಅಂತ ಆಗ ಬೊಗಸೆ ಒಡ್ಡಿ ಏನಂತಾನ
ಒಂದು ಪಾದ ಮ್ಯಾಲೆ ನಿಂತು ಡಿಲ್ಲಿದವನು

ಯಪ್ಪಾ ಆನೆಗೊಂದಿ ರಾಮ ಶರಣು ರಾಮ
ರಾಮದೇವ
ರಾಮಾ ಬ್ಯಾಡ ಬ್ಯಾಡ ಅಂದ್ರೆ ಮಗಳು ಬಂದಳು ರಾಮ
ನಿನ್ನ ಜೀವ ಕಳಕ್ಯಂಡೆಪ ರಾಮಯ್ಯ
ರಾಮೋ ಇನ್ನ ಬಾರೋ ಮನ್ಯಾಕ ರಾಮದೇವ
ರಾಮಾ ಬಂಗಾರ ಸಿಂಹಾಸನದ ಮ್ಯಾಲೆ ರಾಮದೇವ || ತಂದಾನ ||

ಬಂಗಾರದು
ಸಿಂಹಾಸನದ ಮ್ಯಾಲೆ ಬಂದು ತಲೆ ಕುಂದ್ರೋ ರಾಮ
ಶರಣೋ ರಾಮ ಅಂಬೊತ್ತಿಗೆ

ಕಿಲಕಿಲ ನಗುತಾನ ಅಗಸಿಮ್ಯಾಲೆ ರಾಮಯ್ಯ
s ರಾಮ ತಲೆ ನೋಡಣ್ಣ ಎಂಗಾಗಿ ಬರುತಾನ
s ಮ್ಯಾಕ ಎದ್ದು ಬಿಟ್ಟೈತೋ ಗರ್ಗರಾ ತಿರುಕ್ಯಂತ
ಡಿಲ್ಲಿದವನು ಮನ್ಯಾಕ ಸಿಂಹಾಸನದ ಮ್ಯಾಲೆ ಕುಂತಾನ ತಲೆ || ತಂದಾನ ||