ಬಂಗಾರದ ಸಿಂಹಾಸದ ಮ್ಯಾಲೆ
ರಾಮನ ತಲೆ ಕುಂತುಬಿಡ್ತು ಡಿಲ್ಲಿ ಪಟ್ಣದಲ್ಲಿ
ಏನಂತ ಬಾಯಿ ಕೂಟ ಜೀವದಲ್ಲಿ ಹೇಳ್ತಾನಪ್ಪ
ತಲ್ಯಾಗೈತಿ ಸುಳ್ಳಾನಾಗ ರಾಮನ ಜೀವ
ಕೇಳವೋ ಡಿಲ್ಲಿದವನೆ
ಹಡೆದ ತಾಯಿ ಜೀವ ಬೆಳೆಸಿದ ತಾಯಿ
ಬಂದು ಸೆರಗು ಒಡ್ಡಿದ್ರೆ
ನಾನು ಜೀವ ಹೋತಿನಿ
ಅಷ್ಟತನಕ ನಾನು ಹೋಗಂಗಿಲ್ಲ
ಡಿಲ್ಲಿ ಪಟ್ಣಬಿಟ್ಟು
ಓಹೋ ಅಷ್ಟೆ ಆಗಲಂತ
ಆಳಿಟ್ಟು ಕಳಿಸಿಬಿಟ್ಟ
ಯಮ್ಮಾ ಹರಿಯಾಳದೇವಿ
ಈಗ ಭಚ್ಚಣ್ಣ ಕಂಪ್ಲಿರಾಜ
ಈಗ ಹಂಪಕ್ಕ

ರಾಮ ಇನ್ನ ಸುತ್ತುಹೋದ ರಾಮದೇವ
ರಾಮ ಇನ್ನ ಮುಂಡ ಊರಾಗೈತಿ ರಾಮ
ಆನೆಗುಂದ್ಯಾಗ ಮುಂಡ ತಲೆ ಡಿಲ್ಲ್ಯಾಗ || ತಂದಾನ ||

ಅಂತ ಆಗ ತಳವಾರರು ಬಂದು ಹೇಳಿದ್ರೆ
ತಾಯಿ ತಂದೆ ದುಃಖ ಮಾಡಿಕ್ಯಂತ
ಮಗನೆ ಈಗ ಡಿಲ್ಲಿದವನು ರೊಕ್ಕಕ್ಕೆ ಬಲವಂತ
ದೇಶಕ್ಕೆ ಬಲವಂತ
ಆತನ ತ್ರಿಗಳು ನಾವು ಇನ್ನ
ಮಡೀತೀವೇನಪ್ಪಾ ಮಗನೆ
ನೀನು ಯುದ್ಧ ಮಾಡಿ
ಜೀವ ಕಳಿದೇನಪ್ಪ ಮಗನೆ ಅಂತಾ

ತಾಯಿ ದುಃಖ ಮಾಡ್ತಾ ದೇವಿ ಬರ್ತಾಳಮ್ಮ
ತಾಯಿ ವನವಾಸ ನೋಡ ಒಳ್ಯಾಡಕಂತ ಬರುತಾಳಪ್ಪ || ತಂದಾನ ||

ಆಗ ಡಿಲ್ಲಿ ಪಟ್ಣಕ್ಕ ಬಂದು
ಮುತ್ತಿನ ಸೆರಗೊಡ್ಡಿ ಮಗನ

ಸತ್ತು ಮ್ಯಾಲ ನನ ಮಗನೆ ಏನು ಯುದ್ಧ ಮಾಡ್ತಿ ಬಾರಪ್ಪಾ
ಮಗನೆ ಇನ್ನ ಲೋಕ ಬ್ಯಾಡಂದ್ರೆ ಆರಂಡೆ ರಾಮವಾದ್ಯಪ್ಪ
ಯಪ್ಪಾ ಹೋಗಿಬಿಟ್ಟೆ ರಾಮಯ್ಯ ಇನ ಲೋಕಬಿಟ್ಟೆ ರಾಮಯ್ಯ || ತಂದಾನ |

ತಾಯಿ ದುಃಖ ಮಾಡಿ ಸೆರಗು ಒಡ್ಡಿದ್ರೆ
ಸಿಂಹಾಸನದ ಮ್ಯಾಲೆ ಕುಂತ ತಲಿನೋಡ

ಕಿಲಕಿಲ ನಗುತಾನೋ ರಾಮ ಮಗ ನೋಡಮ್ಮ || ತಂದಾನ ||

ಆ ತಲೆನೋಡ

ಗರ್ಗರ್ತಿರುಕ್ಯಂತ
ಇನ್ನ ತಲೆ ಬಂದೈತೋ
ಸಿಂಹಾಸನ ಬಿಟ್ಟೋs
ತಾಯಿ ಉಡ್ಯಾಗ ಬಿಡೈತೋ ರಾಮುನ ತಲೆ ನೋಡನ್ನ || ತಂದಾನ ||

ರಾಮನ ತಲೆ ಹಿಡಕಂಡು ದುಃಖ ಮಾಡಿಕ್ಯಂತ
ತಾಯಿ ಉಡಿಯೊಳಗೆ ಕಟ್ಟಿಕ್ಯಂಡು
ರಾಮನ ತಲೆಯನ್ನ
ಆಗ ಡಿಲ್ಲಿಲ್ಲಿದ್ದ ಆನೆಗುಂದಿಗೆ ತರತಾಳ