ತಂದಾನ ತಂದಾನ ತಾನ ತಾನ ತಂದಾನ || ತಂದಾನ ||

ಉತ್ತರ ಕಡೆಗೆ ಚಾಂಪುರ ಪಟ್ನದಾಗ
ಚಾಮರಾಜೈನಂತವರ ಕುಲದಲ್ಲಾಗಿ

ಚಾಮರಾಜ ಮಗನಮ್ಮ ಲೋಕದಾಗ ನೋಡಮ್ಮ
ಹೇಣಿತಾಗಿ ನೋಡಣ್ಣ ನೀಲವೇಣಿ ತಾಯೋರು || ತಂದಾನ ||

ಆಗ ಚಾಮರಾಜನ ಹೆಣ್ತಿ
ನೀಲವೇಣಿದೇವಿ
ಆಗ ಕುಲದಲ್ಲಿ ಆಗಿ
ಕೃಷ್ಣಗೊಲ್ಲರು
ಹಾಲದಗೊಲ್ಲರ
ಕುಲವಂತದಲ್ಲಿ ಐದಾರ
ಇದೋ ರಾಜತನ ಬಂದ ರಾಜ್ಯವಾಳ್ತಾನ
ಆಗ ಏನಂತಾನ ಚಾಮರಾಜಾ
ಮಗ ಹುಟ್ಟಿದ ಮ್ಯಾಲೆ

ಈಗ ಇನ್ನು ನೋಡ ಕುಲದಲ್ಲಿ ಕಾಂಭೋರಾಜ ಐದಾನ || ತಂದಾನ ||

ಆಗ ಮಗ ಹುಟ್ಟಿದ
ಇನ್ನ ಮೂರು ತಿಂಗಳಿಗೆ
ಆಗ ಉಗಾದಿ ಪಾಡ್ಯವು
ಕುಲದಲ್ಲಾಗಿ ಇನ್ನವರ ಬಿಸಿಲು ಕಾಲದಲ್ಲಿ
ಆಗ ಐನೂರು ಮಂದಿ ಕರಕೊಂಡು
ಬೆಂಕಿ ಬಾಣ ಹೊತ್ತಿ ಬಾಣ
ಚಕ್ರ ಬಾಣ
ಮೂರ್ಚೆ ಬಾಣ ತಗೊಂಡು
ಕುದುರೆಮ್ಯಾಲೆ ಕುಂತಗಂಡು

ಆಗ ಆತ ನೋಡಣ್ಣ ಬ್ಯಾಟಿ ಮಾರ್ಗ ಹೊಂಟಾನ || ತಂದಾನ ||

ಚಾಂಪುರ ಪಟ್ಣಗೆ ಏನಂತಾನ ಇನ್ನವರ್ತಾವಾಗಿ
ಯಜಮಾನರು ನಡೆಸ್ಗಂತಾ ಬಂದಾರ
ಉಗಾದಿ ಪಾಡ್ಯದ ದಿವಸ
ಒಂದು ದಿನ ಊರು ಬಿಡಬೇಕಂತ
ಆರೆಂಡೆಲ್ಲ ತಿರುಗಿ ಬರಬೇಕಂತ
ಹುಲಿಯಾಗಲಿ ಕರಡಿಯಾಗ್ಲಿ
ಕುಂದಲ ಮೊಲ ಆಗಲಿ
ಹಿಡ್ಕಂಡು ಬಂದು
ಅದರ ಮೈತೊಳದು
ಹೂನ್ಹಾರ ಹಾಕಿ
ಡೊಳ್ಳು ಬಡಿಕ್ಯಾಂತ
ಮ್ಯಾಳ ಬಾಜಾ ಭಜಂತ್ರಿ ಕೂಟ
ಆಗ ಊರಾಗ ಮೆರವಣಿಗೆ ಮಾಡಿ ಬಿಡಬೇಕಂತೆ
ಹಂಗಾರೆ ಊರು ಉದ್ಧಾರಾಗತ್ತೈತಂತೆ
ಇಲ್ಲದ್ದಿದ್ರೆ ಇಲ್ಲಂತೆ
ಆಗ ಯಜಮಾನರು ಕೂಟ
ನಡೆಸಿಗ್ಯಾಂತಿದ್ರು
ಈಗ ಮಕ್ಕಳ ನಡಿಬೇಕಂತ
ಆಗ ಇನ್ನ ಐನೂರು ಮಂದಿ ಕರಕಂಡು

ಅಣ್ಣಾ
ಇನ್ನೂ ಹೊಂಟು ಬರ್ತಾನಾ
ಚಾಮರಾಜ ಆರಂಡಿಗೆ
s ಒಂದು ಗಾವುದವಲ್ಲಣ್ಣ
ಎರಡು ಗಾವುದವಲ್ಲಣ್ಣ
ಆರಂಡಿಗೆ ಬಂದಾನ
ಏನೇನೂ ಸಿಗಲಿಲ್ಲ || ತಂದಾನ||

ಏನೇನೊ ಸಿಗಲಿಲ್ಲಪ್ಪ
ಕೃಷ್ಣಗೊಲ್ಲ ಕೆಂಪು ಗೊಲ್ಲರಿಗೆ
ಅಪ್ಪಾ ಸ್ವಾಮ್ವಾರ ಯುಗಾದಿ
ಆಗಿನ್ನು ಉಗಾದಿ ಪಾಡ್ಯೆವು
ಏನೇನೂ ಸಿಗಲಿಲ್ಲ
ಈಗ ಜನಸಂಖ್ಯೆಲ್ಲಾ ನೀರಡಿಕ್ಯಾಗೈತಂತೆ
ನಡ್ರಿ ಇನ್ನತ್ತ ಊರಿಗೆ ಹೋಗೋನಂತ
ವಾಪಸ್ಸು ಹೊಂಟು ಬಿಟ್ರು ಹಿಂದಕ್ಕ
ಆಗ ವಾಪಸ್ಸು ಬಂದು
ಈಗ ನಾರಳ್ಳ
ಈಗ ಎಲೆಯ ವನಂತ್ರ
ಈಗ ಬಂದು ನೀರು ಕುಡಿತಾರ ಜನಲೋಕ
ಈತ ಚಾಮರಾಜ ಕುದ್ರಿ ಮ್ಯಾಲಿದ್ದ ಕೆಳಗಿಳ್ದ