ನೀಲವೇಣಿ ದೇವಿ ಒಂದು ಕೂಸಿನ ತಾಯಿ ಹರೇದಾಕೆ

ಮಗನ ಹ್ಯಾಂಗ ಜೋಪಾನ ಮಾಡಾಕಿ
ಮೂರು ಸರ್ತಿ ಮೈ ತೊಳೀತಾಳಣ್ಣ
ಮುಂಜಾಲಿ ಮಧ್ಯಾಹ್ನ ಮೂರು ಗಂಟೆ ಒಳಗಣ್ಣಾ
s ತೊಟ್ಲದಾಗ ಕೈಯಾಗ ಕೆಳಗ ಮಲಗಸಂಗಿಲ್ಲಮ್ಮಾ ಮಗನ
ಅಣ್ಣಾ ಒಂದು ವರ್ಷವಾಗಿತ್ತು ಮಗ ಎರ್ಡು ವರ್ಷವಾಯಿತು
ಥೋತಡಿ ಮೂರು ವರ್ಷಗೈತೋ ಐದೋರ್ಸ ಬೆಳಿಸ್ಯಾರೊ ಮಗ್ನ || ತಂದಾನ ||

ಮಗನ್ನ ಮೂರು ವರ್ಷಲ್ಲ
ಐದೊರ್ಸ ಜೋಪಾನ ಮಾಡಿದ್ರೆ
ತೆಳ್ಳಗ ರವ್‌ದಿ ಗಾಳಿ ಪಟ ಬೆಳ್ಳಗ
ಬೆಳದಂಗ ಬೆಳ್ದಾನ
ಕೆತ್ತಿದ ಗೊಂಬಿ ಇದ್ದಾಂಗ ಇದಾನಪ್ಪ
ಇನ್ನ ಚಾಮರಾಜನ ಮಗ
ಕಾಂಭೋರಾಜ
ಆ ತಳವಾರಿ ರೈತು ನೋಡಿಬಿಟ್ರು
ಊರು ಗೌಡಿಕಿ ಮಗ
ಈ ಮಗನಿಗೆ ನಾವೇ ಇನ್ನ
ದೊಡ್ಡೋರ ಮಾಡಬೇಕಾಗತೈತಿ
ತಾಯಿ ಬೆಳಸಿ ಬಿಟ್ಟಾಳ
ಈ ಮಗನಿಗೆ ಇದ್ಯಾಬುದ್ಧಿ ಗ್ಯಾನ
ಹೆಂಗೋ ಕೆಲಸಬೇಕು
ನಾವೇ ಕಲಿಸಬೇಕು
ಏನಮ್ಮಾ ನೀಲವೇಣಿ ದೇವಿಯಮ್ಮಾ
ಏನ್ರಿ ರೈತರೇ ಶ್ಯಾನಬಾಗರೇ
ಈಗ ತಲವಾರಿಕೆಯರ್ರೇ
ನೋಡಮ್ಮ ನಾವು ನಾಲೋರು ನೆಟ್ಟಗಿದ್ರೆ
ಊರು ನೆಟ್ಟಗಿದ್ದಂಗ
ನಾಲೋರ್ದಾಗ ಒಬ್ರು ಕೆಟ್ರೆ
ಊರೇ ಕೆಟ್ಟಿದಂಗ
ಈಗ ನಿನ್ನ ಮಗ ಅಲ್ಲ
ನಮಗ ಮಗ ಇದ್ದಂಗಮ್ಮ
ನೀನೇನು ಎದಿ ಬೀಳಬೇಡ
ಈಗ ರಾಜ್ಯ ಕಛೇರಿ ರಾಜ್ಯತನ ಮಾಡೋದು
ನಿನ್ನ ಮಗೇ ಅಮ್ಮಾ
ಈ ಊರಿಗೇ ಗೌಡಿಕೆ ಆಗೋದು
ಇದೋ

ನಿಮ್ಮ ಮಗನಿಗೆ ವಿದ್ಯೆ ಕಲಿಸಬೇಕಮ್ಮ ನಾವು ಓದು ಕಲಿಸಬೇಕಮ್ಮ ನಾವು
ಈಗ ಸುಮ್ನೆ ಮನ್ಯಾಗಿದ್ದರೆ ಇವ್ನು ದನ ಕಾಯೋನಂತಾರ
ದನಕಾಯೋ ಗೊಲ್ರ ಅಂತಾರ || ತಂದಾನ ||

ಗೋಪಿನ ಕಾಯೋ ಗೊಲ್ಲ್ರ ಅಂತಾರ
ಈ ಮಗಗ ಓದು ಕಲಿಸಬೇಕ
ಅಷ್ಟೆ ಆಗಲಪ್ಪಾ
ಯಾರು ಕರಕಂಡು ಹೋಗೋದು
ನಾನು ಹೊರಗ ಬರಂಗಿಲ್ಲ
ಹೌದು ಬಿಡು ತಾಯಿ
ಯಾವ ಲೋಕ ಏನಂತಾರೋ
ಗಂಡ ಇಲ್ಲದಾಕಿ
ಈಗ ಜೀವದಲ್ಲಿ ಮಗನ ಮಕ ನೋಡಿಕಂಡು
ಮನ್ಯಾಗಿರಾಕಿ
ಸರೆ ಬಿಡು ಅಂತಾ
ತಳವಾರರು ಕರಕಂಡು ಬಂದ್ರು
ವಿದ್ಯಾ ಕಲಿಸೋಮೇಷ್ಟ್ರುತಲ್ಲಿಗೆ
ಗುರುವಿನಂತಲ್ಲಿಗೆ ಬಂದ್ರೆ
ಶರಣರ್ರೀ ಗುರುವುರೇ
ಓಹೋ ಶರಣಪ್ಪಾ
ಯಾರ ಮಗ ಈ ಹುಡುಗ
ಓ ಚಾಮರಾಜ ಕೆಂಪು ಗೊಲ್ಲ್ರು
ಊರಗೌಡ್ನ ಮಗ
ಊಂ ಸರಿ
ಯಾರು ಖಳಿಸಿದ್ರು
ಆಗ ನೀಲವೇಣಿ ದೇವಿಯಮ್ಮನ ಕೇಳಿ ಕರಕಂಡು ಬಂದೀನಪ್ಪ
ಬಾರಪ್ಪಾ
ನಲವತ್ತು ಮಂದೀನ ಹಿಂದೆ ಕುಂದ್ರಿಸಿದ
ಆ ಹುಡುಗನ್ನ ಮುಂದೆ ಕುಂದ್ರಿಸಿಕ್ಯಾಂಡ
ನಾಕ ಬುಟ್ಟಿ ಮಣ್ಣು ಹಾಕಿದ
ನೋಡಪ್ಪಾ ಭೂಮಿ ಮ್ಯಾಲೆ ಹುಟ್ಟಿ
ಭೂಮಿಮ್ಯಾಲೆ ಬೆಳಕಂಡು
ಭೂಮ್ಯಾಕ ಹೋಗೋರು
ಭೂತಾಯಿ ಬೆನ್ನ ಮ್ಯಾಲೆ ಬರೀಬೇಕು
ಅಂತಾ ಆಗ ಭೂದೇವತಿಗೆ ಕೈ ಮುಗಿದು

ಬಲಗೈಯ ಬೊಳ್ಳಿಟ್ಟು ಸರಸ್ವತಿ ಬರದಾನೆ
ಏಯ್ ನಾಮ ಬರದಾನ ಕಾಗುಣಿತ ಬರದಾನೆ || ತಂದಾನ ||

ಒಂದು ಸರ್ತಿ ಬರದು ಕೊಟ್ರೆ
ತಿರುಗ ಮಗ ಕಣ್ಣೀಲಿ ನೋಡಿ

ಬೊಳ್ಳು ತೋರಿಸ್ರೆ ಬೊಳ್ಳು ಇಂಗುತಾನ
ಕಣ್ಣು ಬಿಟ್ರೆ ಕಂಠಪಾಠ ತಗೀತಾನಮ್ಮ
ಏಯ್ಫಳ ಫಳ ಫಳ ಫಳ ಮಗ ಓದತಾನಮ್ಮ || ತಂದಾನ ||

ಆಗ ಮಗನೆ ಇನ್ನು ಓದ್ತಾನಾ
ಒಂದೇ ವರ್ಷ ಎರ್ಡೆ ವರ್ಷ
ಆಗ ಹದ್ನೆಂಟು ವರ್ಷ ಓದ್ಯಾನಮ್ಮ
ಏಯ್ಓಳ್ಳೆ ವಯಸ್ಸು ಮಗನಿಗೆ ಬಂದಿತು
ಹಗಲು ರಾತ್ರಿ ಮಗನ್ನ ಓದಸ್ತಾರಾ
ಆಗ ಒಂದು ಮೇಷ್ಟ್ರು ಏನು ಹೇಳ್ತಾನಮ್ಮ
ಲೋಕಗೆವಾಗಿ || ತಂದಾನ ||

ಏನಪ್ಪಾ ತಳವಾರಿಗ್ಯಾ ರೈತರೆ ಶ್ಯಾನಬಾಗರೆ
ಏನ್ರಿ ಗುರುವರೆ
ಈ ಮಗ ಹೆಚ್ಚು ಓದ್ರೆ
ಹುಚ್ಚು ಬಂದು ಬಿಡ್ತುತೈತಿ
ಓದಿ ಓದಿ ತಲೆ ಮೈಂಡು ಕೆಡ್ತೈತಿ

ಇಲ್ಲಿಗ್ಯಾಗಿ ಸಾಕಯ್ಯ
ಇನ್ನು ಗೌಡಿಕೆ ಆಗಿ ಮಾಡ್ಸಿರಿ ಮಗನಿಗೆ || ತಂದಾನ ||

ಅಷ್ಟೆ ಆಗ್ಲಿರಿ
ನೀವು ಹೇಳಿದಂಗೆ ಆಗ್ಲಿರೀ
ಅಂತ ಅಕ್ಕಿ ಬ್ಯಾಳೆಕೊಟ್ಟು
ಆಗ ಕಿರು ಬೆರಳಿಗೆ ಬಂಗಾರದ ಉಂಗುರ ಕೊಟ್ಟು
ಗುರುವಿನ ಪಾದ ಮುಗುದ
ಹೋಗಿ ಭಾರಪ್ಪ
ತಣ್ಣಗ ಗೌಡಿಕೆ ಆಗಿ ರಾಜ್ಯತನ ಆಳಪ್ಪಾ
ಅಂದ್ರೆ ಆ ಮಗನ ಕರಕಂಡು ಬಂದ್ರು
ಏನಮ್ಮಾ ನೀಲವೇಣಮ್ಮ
ಏನ್ರಿ
ಏನಿಲ್ಲಾ ಈ ಮಗ ಹದ್ನೆಂಟು ವರ್ಷ ತನಕ ಓದ್ಯನಾ
ಹೆಚ್ಚು ಓದಿದ್ರೆ ಹುಚ್ಚು ಬರ್ತೈತಂತೆ
ಮಗನಿಗೆ ತಲೆ ಮೈಂಡು ಕೆಡ್ತೈತಂತೆ
ಈ ಮಗನಿಗೆ ಗೌಡಿಕೆ ಮಾಡ್ಸಿ ಬಿಟ್ಟಾರ
ಯಪ್ಪಾ ನೀವ್ಯಾಲ್ಯರೀದೀರಿ
ನಿಮ್ಮನ್ನ ಬಿಟ್ಟು ನಾನು ಎದುರಾಡಂಗಿಲ್ಲ
ಹೆಂಗನ್ನ ಮಾಡ್ರಪ್ಪಾ
ಮಗನಿಗೆ ಹೂವಿನ್ಹಾರ ಹಾಕಿ
ಮ್ಯಾಳ ತರಿಸಿ
‌ಊರ್ಯಾಗೆಲ್ಲ ಮೆರವಣಿಗೆ ಮಾಡಿ
ತಂದಿನ್ನ ರಾಜ್ಯತನ ಮಾಡೋರು
ಗುದ್ಯಾಡಿ ಜಗಳಾಡಿ ಬಂದವ್ರಿಗೆ
ರಾಜಮಾಡಂತವನಿಗೆ ಆಗ ರಾಜ ಕಛೇರಿಗೆ ಬಂದ
ಬಂದು ತಂದೆ ಇನ್ನ ಕುಂದರೊವಂತಾದು
ಆಗ ಇನ್ನ ಕುರ್ಚಿ ಪಾಲಿಕೆಗೆ ಶರಣು ಮಾಡಿ
ಆಗ ಕಾಯಿ ಒಡ್ದು ಕೈಮುಗಿದು
ಬಲಪಾದವಿಟ್ಟು ಕುಂದ್ರುವನು