ಆಗ ಶಾನುಭೋಗರು ಚಿರಂಜೀವ ವಿಷ್ಣು
ಈಶ್ವರಾ ಪರಮಾತ್ಮನೇ
ಅಂತ ತಾಳೆಗರೆ ಹೊತ್ತಿಗೆ ನೋಡ್ದ
ಹ್ಯಾಂಗೈತಂದ್ರೆ ಆ ಹೊತ್ತಿಗೆ ಹೇಳವ್ನು
ಏನಂತ ದುಃಖ ಮಾಡ್ತಾನ

ನಿನಗೆ ಬಾಳ ಕಷ್ಟ ಮುಂದಕೆ ಐತೆ ಶಿವನೇs
ಏನು ಬುದ್ಧಿವಂತನಾದ್ರೆ ಏನ್ಮಾಡಬೇಕಪ್ಪಾ
ಏನು ಓದ್ರೂ ಏನು ಲಾಭ ಇಲ್ಲ ಮಗನೇ
ಏನು ಓದಿಕ್ಯಂಡ್ರು ಏನು ಮಾಡಬೇಕಪ್ಪಾ || ತಂದಾನ ||

ಏನ್ರೀ ಹಾಂಗಂತ್ರಿ
ಏನು ಓದುಕಲ್ತರೆ ಏನು ಮಾಡಬೇಕು
ಈ ಭೂಮಿಮ್ಯಾಲೆ
ಯಪ್ಪಾs ಭೋಕಷ್ಟೈತಪಾ
ಅದೇನು ಕಷ್ಟರೀ
ನಿಮ್ಮ ತಂದಿ ಚಾಮರಾಜ
ಕೆಂಪು ಗೊಲ್ರು ನೀವು
ಊರುಗೌಡಿಕೆ ಆಗೋರು
ನಿಮ್ಮ ತಂದಿ ಇನ್ನವರ್ತಾವ ಕಲ್ಪವೃಕ್ಷದ ಕಾಮದೇವತೆ
ಎರ್ಡು ರೆಕ್ಕೆ ಗೋಪಿ ದೇವತೆ ಕಾಮದೇವತೆ ಕೊಲ್ಲ್ಯಾರ
ಹಡ್ಯೋ ತಾಯೀನ ಕೊಲ್ಲಿ
ನೀನು ಮೂರು ತಿಂಗಳ ಮಗ
ಮನಿಗೆ ಬಂದು ಪಾದ ಇಡುವಾಗ
ವಸ್ತಿಲ ಮ್ಯಾಲೆ ಬಕ್ಕನಂತ ರಕ್ತ ತಿರುವಿ ಜೀವ ಬಿಟ್ಟಾನ
ಗೋಪಾಪ ತಪ್ಪಂಗಿಲ್ಲಪ್ಪಾ
ನೀನು ಏಳು ಮಂದಿ ಮದ್ವೆ ಮಾಡಿಕ್ಯಂಡ್ರೇನಾ

ನಿನ್ನ ಜೀವದಾಗೆ ಮಕ್ಕಳಾಂಗಗಿಲ್ಲೋs
ಮಕ್ಕಳಿಲ್ಲ ನಿನ್ನ ಜೀವಕ್ಕಾ || ತಂದಾನ ||

ಎದೆ ತಣ್ಣಗಾಯ್ತು ಕಾಂಭೋಜರಾಜಗೆ
ಅಲೆಲೆಲೇ
ಈ ಊರಿಗೆಲ್ಲ ದೊಡ್ಡೋರು
ಚಿಕ್ಕೋರಿಗೆ ಇನ್ನ ಒಳ್ಳೆದನಿಸಿಗಂಡು
ಈಗ ಇನ್ನ ನಮ್ಮ ತಂದೆ ಮಾಡಿದ ಪಾಪ
ನನಗೇ ಬಂದೈತಂತೆ
ನೋಡಪ್ಪ ತಂದಿಗೆ ಹುಟ್ಟಿದ ಮ್ಯಾಲೆ
ತಂದಿ ಕರ್ಮ ಮಾಡಿದ್ರೆ ತೀರಿಸಬೇಕಾತೈತಿ
ಅದೇನು ಕರ್ಮರೀ
ನೋಡ್ರಿ ಆಗ ನೋಡಿಕೊಲ್ಲಿದ್ದಾನ
ನೋಡಲಾರ್ದ ಇನ್ನು ಕೊಲ್ಲಿದ್ದಾನ
ನೋಡಪ್ಪಾ ಹಾಳುಗದ್ದೆವು
ಈಗ ನವಿಲೋ ಅಂತ ಏಟು ಬಿಟ್ಟಾನ
ನೋಡ್ಲಾರ್ದೆ ಕೊಲ್ಲಿ ಬಿಟ್ಟಾನ
ಈಗ ನಿಮ್ಮನ್ನು ನಿನ್ನ ತಂದಿ ನೋಡಲಾರದಂಗೆ
ಇನ್ನ ಸತ್ತೊಗ್ಯಾನ
ಮತ್ತೆ ಅದೇನು ಪಾಪರೀ
ಎನಿಲ್ಲಪ್ಪಾ
ಏಳು ಮಂದಿ ಹೆಂಡ್ರನ್ನ ಮಾಡಿಕೋಬೇಕು ನೀನು
ದೇವ್ರಿಗೀಟು ದೇವ್ರಿಗೀಟು ಮಟಕ್ಕೆಲ್ಲ
ಎಲ್ಲೆಲ್ಲ್ಯದಾವ ನಿಧಿಗಳಿಗೆಲ್ಲ ಇನ್ನವರ್ತಾವಾಗಿ ಕರ್ಮ ಕಳಿಬೇಕು
ಗುಡಿಗೀಟು ಗುಡಿಗೀಟು ಪಾಪ ಕಳಕಂಡು ಬರಬೇಕು
ಹನ್ನೆರ್ಡು ವರ್ಷ ಪಟ್ಟಾ ಮೀರೋ ಕಾಲಕ್ಕೆ ಜೀವಕ್ಕ

ಆಗ ಆಗತ್ತಾರೊ ಇಲ್ಲೇನೋ ಇದ್ರಾಗ ಮಕ್ಳ ಫಲ ಕಾಣವಲ್ಲದು || ತಂದಾನ ||

ಅಯ್ಯೋ ಪರಮಾತ್ಮ
ಒಬ್ರ ಹೆಂಡ್ರು ಮಾಡಿಕ್ಯಂಡೆ ರಾಜ್ಯವು ಆಳೋದು
ಇನ್ನ ಬೆಳಕಂಬೋದೆ ಕಷ್ಟೈತಿ
ಈ ಹೆಣ್ತಿ ಮಾತಾಡಿದ್ರೆ
ಈ ಹೆಣ್ತೀ ಮಕ ಇತ್ತಾಗ ಹೋಗ್ತೈತಿ
ಏಳು ಮಂದ್ಯಾಗ ಒದ್ದಾಡಬೇಕಂದ್ರೆ
ಸಾಮಾನ್ಯವಾ
ಆಳೋನಿಗೆ ಹತ್ತು ಮಂದಿ ಉಂಬೋಕ ತಿಂಬಾಕ ಐತಿ
ಏನಿದ್ರೆ ಏನು ಮಾಡಬೇಕು
ಹೆಣ್ಮಕ್ಕಳು ಮರ್ಯಾದೆ ಉಳಿಸಿದ್ರೆ ಬೇಸು
ನನಗೆ ಎಲ್ಲಿ ಹೋದ್ರೆ ಬೆಲೆ ಇರ್ತೈತಿ

ಈಗ ಬಜಾರಗೆಳಿದರೆ ನಾವು ಯಾಕ ಲೋಕಕ್ಕೆ || ತಂದಾನ ||

ಮನಿ ಹೊರಗ ಬಂದು
ಆಗ ಗಬಗಬ ಅಂದರೆ
ನನ್ನ ಹುಟ್ಟಿದ ಜಲ್ಮದಲ್ಲಿ ಇದ್ರೇನು ಫಲ
ಅಂತ ಏನ್ರೀ ಶಾಸ್ತ್ರ ಹೇಳೋರೆ
ಏಳು ಮಂದೀನ ಮಾಡಿಕ್ಯಂತೀನಿ
ಅದರಾಗೆನಾನ ಮರಿಯಾದೆ ಕಳಿಯೋರೆ ಇದಾರಾ
ಮರ್ಯಾದೆ ಉಳಿಸವ್ರು ಇದಾರ
ನೋಡ್ರೀ ನನಗೆ ಮರ್ಯಾದೆ ಬೇಕಾಗೈತ್ರಿ
ಓ ಏನು ಪರವಿಲ್ಲಪಾ
ನಿನ್ನ ಜೀವಕ್ಕಲಿತಾರ ಏಳು ಮಂದಿ
ಜಲ್ಮಕ್ಕ ಕಲಿತಾರ
ಏನು ಪರವಿಲ್ಲ
ಆಗ ಮರಿಯಾದೆನೇ ಕಳಿಯೋದಿಲ್ಲ