ಸಣ್ಣಗ ಮುಖ ಮಾಡಿಕ್ಯಂಡು
ಆಗ ಕಾಂಭೋಜರಾಜ ಎದ್ದುಬಿಟ್ಟ
ಈಗ ರಾಜ ಕಛೇರಿ ಬಿಟ್ಟು
ತಾಯಿ ಮನಿಗೆ ಬಂದ
ಬಾ ಅಪ್ಪ ಹಾಲು ಸಕ್ಕರಿ ಊಟ ಮಾಡುವಂತೆ
ಅಮ್ಮಾ ನನ್ನ ಯಾಕ ಹಡ್ದಿ
ಯಾಕ ಜೋಪಾನ ಮಾಡ್ದಿ
ಈ ಬೂಮಿ ಮ್ಯಾಲೆ
ಈಗ ತಂದಿ ಮಾಡಿದ ಕರ್ಮ ನನಗೆ ಬಂತಂತೆ
ಯಮ್ಮ ಏಳು ಮಂದಿ ಮದ್ವೆ ಮಾಡ್ಕೇಬೇಕಂತೆ
ದೇವ್ರಿಗೀಟು ದೇವ್ರೀಗೀಟು ಪಾಪ ಕಳಿದು ಬರಬೇಕಂತೆ
ಏಳು ಮಂದಿಗ ಇನ್ನ ಮಕ್ಕಳ ಆಗ್ತರೋ ಇಲ್ವಂತೆ
ಮಗನ ನಾನೇನು ಮಾಡ್ಲಪ್ಪ
ಆಗ ಉಗಾದಿ ಪಾಡ್ಯ ದಿವಸ
ಊರೆಲ್ಲಾ ಬಿಡಬೇಕು ಆರಂಡಿ ತಿರಗಿ ಬರಬೇಕು
ಇಲ್ದಿದ್ರೇ ಊರೇ ಬಿಡಬೇಕಂತ
ಆಗ ನಿಮ್ಮ ತಂದಿ ಐನೂರ ಮಂದಿನ ಕರುಕೊಂಡು ಹೋದ
ಹೀಗೆ ಕಲ್ಪವೃಕ್ಷನ ಕಾಮದೇವತೀನ
ಗೋಪೀನ ಕೊಲ್ಲಿ ಬಂದ
ಬಾಕಿಲಗ ಬಗ್ಗಿ ಶರಣ ಮಾಡಿ
ಮನ್ಯಾಕ ಬರುವಾ ಟೈಂಮಿನಾಗ
ಬಕ್‌ನಂತ ರಕ್ತ ತಿರುವಿ
ದೇವಿ ಅಂತ ಜೀವ್‌ ಬಿಟ್ಟು
ಯಪ್ಪಾ ಎದೆ ಒಡ್ಡು ಸಾಯೋಳು
ಆಗ ಜೀವ ಮಗ ಅಂತ ನಿನ್ನ ಮಕ ನೋಡಿ
ನಾನು ಐದೀನೋ ಮಗನೆ
ಅಮ್ಮಾ ಇದ್ರೆ ಏನು ಮಾಡ್ತಿ
ಬೆಳಸೋದು ಬೆಳಿಸಿಬಿಟ್ಟಿ
ನನ್ನ ಜೋಪಾನ ಮಾಡಿ
ಇವಾಗ ನನಗೆ ಬಂದೈತಿ ಕಷ್ಟ
ಮಗನಾ ನಾನೇನು ಮಾಡಲಪ್ಪ
ಸರೆ ಚಾಂಪುರ ಪಟ್ಣಲಿದ್ದ
ನಮ್ಮ ಕುಲ ಎತ್ತಾಗೈತಮ್ಮಾ
ಈ ಕರ್ನಾಟವಳಗೆ
ನಮ್ಮ ಗೊಲ್ರು ಕುಲ ಎಲ್ಲೆಲ್ಲಮ್ಮಾ ಅಂತ ಕೇಳ್ದ
ಊರಗೊಲ್ಲರು ಊರು ತುಂಬ ಇದಾರ
ಅಡವಿ ಗೊಲ್ಲರು ಅಡವಿ ತುಂಬಾ ಐದಾರ
ಬಲಗೈ ಕೆಳಗೈ ಎಡಗೈ ಬರೇ ಕೃಷ್ಣಗೊಲ್ಲರು
ಎಲ್ಲಿದ್ದವರೇ ತಾಯಿ ಗೋಪಿ ಗೊಲ್ಲರು
ಹಾಲುಗೊಲ್ರು ಕೃಷ್ಣಗೊಲ್ರು
ಎತ್ತಾಗೈದಾರಂದ್ರೆ
ನೋಡಪ್ಪಾ ಚೆಳ್ಳೀಕೆರೆ ಕಡೆಗೆ
ರಾಯದುರ್ಗದ ಕಡೆಗೆ

ಅವ್ರು ಕುಲ ಇರೋದು ಕರ್ನಾಟದಾಗ ನೋಡಪ್ಪ || ತಂದಾನ ||

ಆಂಧ್ರ ಕಡೆಗಿಲ್ಲ
ನೈಜಾಮ್‌ ಕಡೆಗಿಲ್ಲ ಹಂತ ಕುಲ
ಒಹೋ ಹಂಗಾದ್ರೆ ಚಳ್ಳೀಕೇರಿ
ಆಗಿನ್ನವರ ರಾಯದುರ್ಗ
ಆಗ ಕೂಡ್ಗಿಗೆ ಕಡೀಗೆ ಇರೋದು ನಮ್ಮ ಕುಲ
ಅಂತ್ಯವಿಲ್ಲದ ಗೊಲ್ಲರು
ಹಾಲುವಂತ ಕುಲ
ಓಹೋ ಸರೆ
ಆಗ ಏನ್ರಪ್ಪಾ
ರೈತರೆ ಶ್ಯಾನುಭೋಗರೆ ಹ್ಯಾಂಗ ಮಾಡಬೇಕ್ರಿ
ನೋಡಪ್ಪಾ ನಿನಗೆ ಬಂದ ಕಷ್ಟ ನಮಗೆ
ನಮ್ಮಗೆ ಬಂದ ಕಷ್ಟ ನಿನಗೆ
ಈಗ ಗ್ಯಾನಸ್ತ ಅಂತ ನಾವು ನಂಬಿಕೊಂಡೀವಿ ನಿನ್ನ
ನಡೀ ಹೋಗಾನ
ಎಂಟು ದಿವಸ ಬುತ್ತಿ ಕಟ್ಟು
ಈಗ ಒಂದೂರು ಬಿಟ್ಟು ಹತ್ತೂರು ತಿರ್ಗಿ
ನಿನಗ ಲಗ್ನ ಮಾಡ್ತೀವಿ ನಾವು
ಅಂತ ರೈತ ಶಾನುಭೋಗ್ರು
ತಲವಾರಿನ್ನವರು ಊರಾಗ ಬಿಟ್ಟು
ಅಗಿನ್ನವರು ಕುದ್ರಿಗೊಳು ತಗ್ದು
ಆಗ ತಾಯಿ ಪಾದ ಮುಗುದ್ರು
ಯಮ್ಮಾ ನಿನ್ನೆ ಜೀವದ ಮಗ ನಾವು ಕೊಲ್ಲೋದಿಲ್ಲ
ಲಗ್ನ ಮಾಡಿಕ್ಯಂಡೇ ಕರಕಂಡ ಬರ್ತಿವಂತ
ತಾಯಿ ಹೋಗಿ ಬರ್ತೀನಿ
ಹೋಗಿ ಬಾರಪ್ಪಾ ಮಗನೆ ಅಂದ್ರೆ

ಕುದ್ರೆ ಮ್ಯಾಲೆ ಕುಂತಾನ್ರಿ
ಅವ್ರು ಹೊಂಟು ಬರ್ತಾರ
ಆಗ ಕೂಡ್ಲೀಗಿ ಬಂದಾರೋ
ಇಪ್ಪತ್ತಳ್ಳಿ ತಟಾದು || ತಂದಾನ ||

ಕೂಡ್ಲಿಗಿದಾಗಿಳಿದ್ರು
ಏನ್ರಿ ನಮಗಿನ್ನವರು ಕೃಷ್ಣಗೊಲ್ಲರು
ಯಾರನ್ನ ಏಳು ಮಂದಿ ಕೊಡೋರು
ಇದಾರೇನ್ರಿ ಅಂತ ಕೇಳಿದ್ರು
ಹೇs ಯಾರಿಲ್ಲಪ್ಪಾ ನಮ್ಮೂರಾಗ
ಕೂಡ್ಲಿಗಿದಾಗಿಲ್ಲ

ಅಲ್ಲಿದ್ದ ನೋಡಣ್ಣಾ
ದಾವಣಗೇರಿಗೆ ಬಂದಾರ
ಅವ್ರು ಅಲ್ಲಿ ಇಳಿದಾರ || ತಂದಾನ ||

ಏನ್ರೀ ಯಾರನ್ನ ಹೆಣ್ಣುಮಕ್ಕಳು ಕೊಡೋರು ಇದಾರ
ಕೃಷ್ಣ ಹಾಲುಗೊಲ್ರು
ಏ ಯಾರಿಲ್ಲಪ್ಪಾ
ನಮ್ಮೂರಾಗ ದಾವಣಗೇರ್ಯಾಗ

ಅಲ್ಲಿದ್ದ ನೋಡಣ್ಣಾ
ರಾಯದುರ್ಗಕ್ಕೆ ಬಂದಾರ
ಅವ್ರು ಅಲ್ಲಿ ಇಳಿದಾರ || ತಂದಾನ ||

ಏನ್ರೀ ಯಾರನ್ನ ಯೋಳು ಮಂದಿ
ಹೆಣ್ಮಕ್ಳನ್ನ ಕೊಡೋರು ಆದಾರೇನ್ರೀ
ಕೃಷ್ಣಗೊಲ್ಲ ಹಾಲಗೊಲ್ರದಾಗ
ಹೇ ಯಾರಿಲ್ಲಪ್ಪ ನಮ್ಮೂರಾಗ ರಾಯದುರ್ಗದಾಗ

ಅಲ್ಲಿದ್ದ ನೋಡಣ್ಣಾ
ಚಳ್ಳಿಕೇರಿಗೆ ಬಂದಾರ
ಅವ್ರು ಅಲ್ಲಿ ಇಳಿದಾರ || ತಂದಾನ ||

ಏನ್ರಪ್ಪಾ
ಆಗ ಹಾಲು ಗೊಲ್ಲರ್ದು ಕುಲದಾಗ
ಯಾರನ್ನ ಏಳು ಮಂದಿ ಮಕ್ಳು ಕೊಡೋದು ಇದಾರ
ಯಪ್ಪಾ ನಾವು ಕಾಣ್ವಿ
ಅಂದ್ರೆ ಆಗ ಚಿತ್ರಗಿರಿ ಪಟ್ಲ
ಚೆಳ್ಳಿಕೆರೆಗೆ ಮೂರು ಹರಿದಾರಿ
ಗೊಲ್ಲರ ಚಿತ್ತಪ್ಪ
ಆಗ ಮೂರು ದೊಡ್ಡಿ ಕುರಿ
ಒಂದು ದೊಡ್ಡಿ ಆಕಳ
ಒಂದು ದೊಡ್ಡಿ ಎಮ್ಮೆ
ಹತ್ತು ಕೊಡ ಹಾಲು
ಚಳ್ಳಿಕೆರಿಗೆ ತರ್ತಾನಪ್ಪಾ
ಆಗ ಮೂವರು ಸಂಬಳದಾಳು
ಈಗ ಮಾಡಿಕ್ಯಂಡ್ರೆ ಹೇಳ್ತಿನಿ
ಬರೇ ಏಳು ಮಂದಿ ಹೆಣುಮಕ್ಕಳು
ಒಬ್ಬರನ್ನಾ ದೀಪಕ್ಹುಟ್ಟಿ
ಇನ್ನವರ ಬೆಳಕು ಮಾಡೋ ಮಗ ಹುಟ್ಟಿಲ್ಲ
ಆಗ ಗೊಲ್ಲರ ಚಿತ್ತಪ್ಪ ಏನಂದ
ಕೇಳವೇ ಯಜಮಾನ್ರು
ನಮ್ಮಪ್ಪ ನಮ್ಮಮ್ಮ ಮದ್ವಿ ವಲ್ಲೆಂದ್ರೆ
ಏಯ್‌ ಲೋಕ ಉದ್ಧಾರ ಆಗ್ಬೇಕಂತ ಮಾಡಿಕ್ಯಂಡ್ರೆ
ಲೋಕ ನಾಶನ ಮಾಡೋವಂತ ಮಕ್ಕಳ ಹಡ್ದೆ
ಕುಂಬಾರ ಗಡಿಗೆ ಇನ್ನವರ ಹೋಗಿ ಬಿಡ್ತಾವ
ಈಗ ನೀನು ಹಡೆದು ಬಿಟ್ಟಿ
ಬರಿ ಹೆಣುಮಕ್ಕಳ ನಾನೇನು ಮಾಡಲಿ
ಏನ್ರೀ ನಾನು ಹೋಗಿಲ್ಲ ದೇವ್ರ ಮಠಕ್ಕೆ ನೀನು ಹೋಗಿಲ್ಲ
ಈಗ ಹುಟ್ಟಿದ ಮಕ್ಕಳ ಇಬ್ಬರ ನಡುವೆಲಿ ಜೋಪಾನ ಮಾಡಿವ್ರಿ
ನೀನ ಹಡದೇ ಬೆಳೆಸಿದೆ
ಇವಾಗ ನನಗ ಬಂದೈತೆ ಉರಿ
ಯಾವ ಲೋಕಗಂತ ಕೊಡ್ಬೇಕು ಈ ಏಳು ಮಂದೀನ
ಒಬ್ಬ ಅಳಿಯ ಒಳ್ಳೇವನಿರ್ತಾನ
ಒಬ್ಬ ಅಳಿಯ ಕೆಟ್ಟವನಿರ್ತಾನ
ಮತ್ತ ಈ ಮಗಳ ನೋಡಿ ಬರಬೇಕು
ಮತ್ತೆ ಈ ಮಗಳತಲ್ಲಿಗೆ ಹೋಗಂದ್ರೆ ಹೋಗಬೇಕು
ಮತ್ತ ಈ ಮಗಳ್ನ ನೋಡಿ ಬರಬೇಕು
ಏಳು ಮಂದೀ ಆಗ ನೋಡಿ ಬರಾವಳಗೆ
ನಾವು ಸತ್ತೋಗಿ ಬಿಡ್ತಿವಿ
ಮತ್ತೆ ಹೆಂಗ್ರೀ
ಹಾಂಗಲ್ಲ
ನೀನ ಏಸ ಮಂದ್ಯನ್ನ ಹಡಿ
ಏಳು ಮಂದಿ ಮಾಡಿಕೆಂಬೋನುವ
ದೇಶದ ಮ್ಯಾಲೆ ಹುಡುಕ್ಯಾಡಿ ಹಿಡಕಂಡು ಬರ್ತಿನಿ
ಹಂಗಾರ ಹೋಗ್ರಿ ಅಂಬೊತ್ತಿಗೆ
ಆಗ ಕರಿ ಕಂಬಳಿ ಎದಿಗ್ಹಾಕಿದ
ಕುದ್ರಿ ಹೊರಗ ತೆಗದ
ಆಗ ಯಂಕಪ್ಪ ಕೋಟು ಹಾಕ್ಯಂಡ
ಆಗ ಏನು ಮಾಡಿದ್ನಂದ್ರೆ
ಎರ್ಡು ರಾಗಿ ಮುದ್ದೆ
ಒಂದೊಂದು ಒಲೆ ಗುಂಡು ದಪ್ಪ ಇದಾವ
ರಾಗಿ ಮುದ್ದೆ ಕುಣೀಮಾಡಿ
ಮೆಣಸಿನ ಕಾಯಿ ಬದ್ನೆಕಾಯಿ ಸುಟ್ಟಿ
ಬೊಳ್ಳೊಳ್ಳಿ ಹಾಕಿ ಕೈ ಚಟ್ನಿ ಮಾಡಿ
ಅದರಾಗಿಟ್ಟುಕೊಂಡ ಕುಣ್ಯಾಗ
ದೊಡ್ಡ ಸಾವುಕಾರ್ರೀ ಗೊಲ್ರ ಚಿತ್ತಪ್ಪ ಅಂದ್ರೆ
ಆಗಿನ್ನವರ್ತಾವಾಗಿ ಇಟ್ಟು ಕಂಡು
ಬುತ್ತಿ ಕಟ್ಟಿಕೊಂಡು ಕಂಬಳಿ ಹೆಗಲ ಮ್ಯಾಲೆ ಹಾಕ್ಯಂಡ
ಆಗ ಇನ್ನ ಅಳಿಯನ್ನ ಹುಡುಕ್ಯಾಡಾಕ ಬಂದ
ಚಳ್ಳಿಕೆರೆಗೆ ಬಂದು ಇಳಿದುಬಿಟ್ಟ
ಕುದ್ರಿ ಹಿಡಕಂಡು ಬರ್ತಿದ್ದ
ಏನ್ರೀ ಯಜಮಾನ್ರೇ
ನಿಂದು ಯಾವೂರ್ರೀ ಅಂದ
ನಂದು ಚಿತ್ರಗಿರಿ ಪಟ್ಣದಾಗ
ನನ್ನ ಹೆಸರೇ ಗೊಲ್ಲ ಚಿತ್ತಪ್ಪ ಅಂದ
ಈತ ಗೊಲ್ರ ಅಂತೆ
ನಮ್ಮ ಕುಲಗೊಲ್ರೆ
ಏನ್ರೀ ನಮ್ಮದು ಚಾಂಪುರ ಪಟ್ಣ
ಕರ್ನಾಟ ಒಳಿಗಿರೋದು
ಈಗಿನ್ನ ಚಾಮರಾಜೇನ ಮಗ ಕಾಂಭೋಜರಾಜ
ಗೊಲ್ರು ನಾವು ಹಾಲು ಗೊಲ್ರು
ಮತ್ತೆ ಎದಕಾಗಿ ಬಂದ್ರೀ
ಏನ್ರೀ ನಿಮ್ಮ ಚಿತ್ರಗಿರಿ ಪಟ್ಣದಾಗ
ಏಳು ಮಂದಿ ಕೊಡೋರು ಇದಾರೇನ್ರಿ
ಹೆಣು ಮಕ್ಳನ
ಅಲೆಲೆ
ಇಲ್ಲೇ ಕರ್ಸಿ ಬಿಟ್ಟ ದೇವ್ರು
ನಾನಿನ್ನು ಹೆಣು ಮಕ್ಕಳ್ರನ ಕೊಡಬೇಕಂತೆ ಹೋತಿದ್ದೆ
ನಾನ್‌ ಪುಣ್ಯ ಮಾಡೀನಿ ನಟ್ಟ ನಡುವೇಲಿ
ಏನಪ್ಪಾ ನಾವು ಗೊಲ್ರೇ ಕುಲದಲ್ಲಿ
ಸರೆ ಬಿಡು
ಶ್ರೇಷ್ಠವಾದ ಗೊಲ್ರ ಏನನ್ನ ಕಂತ್ರಿ ಗೊಲ್ರ ಅಂತ ಕೇಳಿದ
ಇಲ್ರೀ ಹಾಲುಕೃಷ್ಣ ಗೊಲ್ರು
ಈಗ ನೀರಮ್ಯಾಲೆ ವಾಸ ಮಾಡಂದ್ರೆ ಮಾಡ್ತಿವ್ರಿ
ಸರಿಬಿಡಪ್ಪಾ
ಮತ್ತ ಈತಗ ತಾಯಿ ತಂದಿ ಇದಾರ
ಅಯ್ಯೋ ತಾಯಿ ನೀಲವೇಣಿ ದೇವಿ ಇದಾಳ
ಈ ಮಗ ಹುಟ್ಟಿದ ಮೂರು ತಿಂಗಳಿಗೆ
ಆಗವರು ತಂದಿ ಜೀವಬಿಟ್ಟಿದಾರ
ಈ ಹುಡುಗ್ನ ತಾಯಿ ಜೋಪಾನ ಮಾಡ್ಯಾಳ
ಊರುಗೌಡಕಿ ಮಾಡ್ತಾನ್ರೀ
ಬಿಳೇ ಪತ್ರದ ಮ್ಯಾಲೆ ಕರಣಗಿ ಇಟ್ಟು ಬರ್ದು
ತುಪ್ಪದಲ್ಲಿ ಊಟಮಾಡ್ತಾನ್ರೀ ಈತ
ಬುದ್ಧಿವಂತನಾಗಿ ನಾವು ಮದುವೆ ಮಾಡಬೇಕಂತ
ರೈತ ಶಾನುಭೋಗರು ತಳವಾರು ನಾವು ಬಂದೀವ್ರೀ ಇಂದಿಲ್ಲಿ
ಸರಿ ಯಪ್ಪಾ
ಹುಡುಗೇನು ಚೆಲುವಿ ಇದಾನ
ನನ ಮಕ್ಳ ಅಂದ್ರೆ
ಇಲ್ಲೇ ಪಾದ ಹಿಡಕಂತೀರೆನೋ
ನಾವು ಇಬ್ರು ಅಣ್ಣ ತಮ್ರು
ನನ್ನ ತಮ್ನ ಬ್ಯಾಡಬ್ಯಾಡ ಅಂದ್ರೆ
ಮದ್ವೆ ಮಾಡಿಬಿಟ್ಟೆ
ಬರೇ ಹೆಣು ಮಕ್ಕಳು ಅವ್ರೇ
ಅಣ್ಣಾ ಬ್ಯಾಡಂದ್ರೆ ನೀನು ಮದುವಿ ಮಾಡಿಬಿಟ್ಟೆ
ಏಳು ಮಂದಿ ಅಳಿನೋರು
ಸಿಗಬೇಕಂದ್ರೆ ಎಲ್ಲಿ ಹುಡುಕ್ಯಾಡ್ಲಿ
ಆ ಜೀವಕ್ಕ ಮದ್ವಿ ಮಾಡಿದವ್ನು ನೀನೆ
ಇವಾಗ ನನ್ನ ಮಕ್ಕಳ ಜೀವಕ್ಕ ಮದ್ವೆ ಮಾಡೋನು ನೀನೆ
ಅಂದ್ರೆ ಏಳು ಮಂದಿ ಮಾಡಿಕ್ಯಂಬೋನ್ನ
ಹುಡುಕ್ಯಾಡಿ ಹಿಡಕಂಡು ಬಾ
ಮನೆತನ ಇಟ್ಟುಗೊಂಡು
ಆಗ ಮಕ್ಕಳ್ನ ಕೊಟ್ಟು ಮಾಡೋನು ಅಂದ
ನೋಡಪ್ಪಾ ನಮ್ಮ ತಮ್ಮ ಮನೆತನ ಆದ್ರೆ ಕೊಡತಾನ
ಇಲ್ದಿದ್ರ ಇಲ್ಲ
ಅಷ್ಟೆ ಆಗ್ಲಿ ಬಿಡಪ್ಪ
ನಾವು ಕೇಳ್ತಿವಿ
ಒಪ್ಪಿದಲ್ಲಿ ಆದ್ರೆ ಕೊಡ್ಲಿ
ಇಲ್ದಿದ್ರ ಇಲ್ಲ ಅಂತ
ಹಂಗಾದ್ರೆ ಬರ್ರೆಪ್ಪಾ ಹೋಗಾನ
ನಮ್ಮ ಚಿತ್ರಗಿರಿ ಪಟ್ಣ ಒಂದ ಹರವಾರಿ ಐತೆ ಚಳ್ಳಿಕೆರಿಗೆ

ಆಗ ಕುದ್ರಿ ಮ್ಯಾಲೆ ಕುಂತಾರ
ಚಳ್ಳಿಕೇರಿ ತಟಾದು
ಚಿತ್ರಗಿರಿಗೆ ಬಂದಾರ || ತಂದಾನ ||

ಗೊಲ್ರ ಚಿತ್ತಪ್ಪ
ಮೂರು ಅಂಕಣದ ಮನಿ ಬೀಗ ತೆರೆದುಕೊಟ್ಟ
ಇದು ನಮ್ಮದೇ ಅಪ್ಪ ಮನಿ
ಕುದ್ರಿ ಕಟ್ಟಿಹಾಕಿಕೊಂಡು ಮನ್ಯಾಗ ಇರ್ರಿ ಅಂದ
ನಮ್ಮ ತಮ್ಮ ಮೂವರು ಸಂಬಳದಾಳನ್ನ ಕರಕಂಡು
ಕುರಿ ಕಾಯೋಕ ಹೋಗ್ಯಾನ
ಆಳ್ಹಿಂದೆ ಹೋಗ್ಯಾನ ಸುಮ್ನೆ
ನೋಡಪ್ಪಾ ಕರೆ ಕಳಿಸ್ತಿನಿ
ಅಂತ ಹೇಣ್ತಿತಲ್ಲಿ ಬಂದ
ಲೇಯ್‌ ಕರ್ನಾಟಕದವ್ರು
ಚಾಂಪುರ ಪಟ್ಣದವ್ರು ಬಂದಾರ
ಒಳ್ಳೇ ನೀಟ ಮ್ಯಾಲೆ ಬಂದಾರ
ಈಗ ನೀನು ಹಂಗ ಹಿಂಗ ಮಾಡಬ್ಯಾಡ
ಬೇಸ್‌ ತೀಡಿ ಗೋದಿ ರೊಟ್ಟಿ
ಈಗ ಒಂದು ರೊಟ್ಟಿ ಮಡಿಸಿದ್ರೆ ಹಿಡಕಿ ಆಗಬೇಕು
ಆ ಕಡೆ ಮಣ್ಸ್ಯಾ ನಿಂತಕಂಡ್ರೆ
ಈ ಕಡೆ ನೆಳ್ಳು ಕಾಣಬೇಕು
ಕನ್ನಡಿ ಮಾಡಿದಂಗ ಮಾಡು ತೊಗೆ
ಈಗ ಮೂರ ಸರ್ತಿ ಅಕ್ಕಿ ತೊಳಿಬೇಕು
ಬೆಳ್ಳಗೆ ಅನ್ನ ಮಾಡಬೇಕು
ಪಾವು ಬ್ಯಾಳೆ ಹಾಕಿ ಗೆಟ್ಟಿಗೆ ಮಾಡು
ತಗೆ ನನ್ನಪ್ಪನ ಗಂಟೇನು ಹೋಗ್ತಾದ
ಜಗ್ಗಿ ಬೆಳದಾವ
ಸೇರು ಬ್ಯಾಳಿ ಹಾಕ್ತಿನಿ
ಅವ್ರೇನು ದಿನಾಲು ಬಂದು ಊಟ ಮಾಡಿ ಹೋಗಂಗಿಲ್ಲ
ಏನು ಒಂದು ದಿನ
ಅಂತ ಆಕೆ ಸೇರು ಬ್ಯಾಳೆ ಹಾಕಿದ್ಳು
ಆಗ ನಾಕ ಸರ್ತಿ ಅಕ್ಕಿ ತೋಳ್ದುಳು

ಆಗ ಅಡಗಿಯೊಂದು ನೋಡಣ್ಣಾ ಜಟಪಟ ಅಡಿಗೆ ಮಾಡ್ಯಾಳ || ತಂದಾನ ||

ಜೋರು ಅಡಿಗೆ ಮಾಡಿ ಬಿಟ್ಲಪ್ಪ ದಡಾದುಡಿ
ಏನ್ರೀ ಆಗ ಅಡುಗೇನ್‌ ಮಾಡಿನಿ
ಅವರನ್ನ ಕರಕಣ ಬಂದು
ನೀನೆ ಉಂಬಾಕ ಇಡ್ಬೇಕ್ರೀ ನಾನು ಇಡೋದಿಲ್ಲಿ
ಅಷ್ಟೇ ಆಗಲಂದ
ಆಗ ರೂಮಿನ್ಯಾಗ ಹೋಗಿ ಕುಂತ್ಕಂಡ್ಳು
ಏನ್ರಪ್ಪ ನಮ್ಮ ತಮ್ಮನ ಆಳಿಟ್ಟು ಕಳ್ಸೀನಿ ಕರಕಣ ಬರಾಕ
ಅಷ್ಟೋತ್ತನಕ ಉಪಾಸ ಇರಬ್ಯಾಡ್ರಿ ಜೀವ ಕೊಲ್ಲ ಬ್ಯಾಡ್ರಿ
ಊಟ ಮಾಡುವಂತ್ರಿ ಬರ್ರೀ
ಆಗಿ ಇನ್ನ ಊಟಕ್ಕ ಕರಕಣ ಬಂದ
ಚರಗಿ ನೀರು ಕೊಟ್ಟು
ಆಗಿನ್ನವರ ಬಿಳೆ ಅನ್ನದ ಮ್ಯಾಲೆ
ಈಗಿನ್ನವರ ಹಚ್ಚನ ತೊಗೆ ಹಾಕಿದ್ರೆ
ಗ್ವಾಡಿಗೆ ಒಗದ್ರೆ ಹಿಂದಕ್ಕ ಬರ್ತಪ್ಪ ತೊಗೆ
ಹೂರಣ ಇದ್ದಂಗೈತಿ
ಹಿಂಡಿದ್ರೆ ಅಂಗೈನವರತ್ತ ಎಣ್ಣೆ ಇಳೀತೈತಿ
ಆಗ ಹಾಲು ತುಪ್ಪ ಇಟ್ರು
ಊಟ ಮಾಡದ್ರು
ಏನ್ರೀ ಜಲ್ದಿ ಕರೆ ಕಳಿಸ್ರೀ
ನಾವು ಯಾವುದೊಂದು
ನಿಮ್ಮ ತಮ್ಮನ ಬಾಯಿಲಿ ಕೇಳಿಕೊಂಡು
ನಾವು ಹೋಗಿ ಬಿಡ್ತಿವಿ
ಕರೆ ಕಳಿಸ್ತೀವಪ್ಪಾ
ಅಡವ್ಯಾಗ ಇದ್ದವರು ಎಲ್ಲಿ ಇದಾರೋ
ಬರಬೇಕಲ್ಲಾ ಅಂದ
ಆಗ ಇನ್ನ ಏನಂದ
ಎಲೆ ಅಡಿಕೆ ತಟ್ಟ್ಯಾಗ ತಂದಿಟ್ಟಿದ್ದ .
ಕೇಳವೋ ಹುಡುಗ ಕಾಂಭೋಜರಾಜ
ಗೊಲ್ರುದವನು ಹಾಲು ಕೃಷ್ಣಗೊಲ್ರವನ್ನೇ

ಯಾರ ಮಕ್ಕಳಿಲ್ಲಪ್ಪಾ ನನ್ನ ಮಕ್ಳ ಐದಾರ
ಏಯ್ಏಳು ಮಂದಿ ನೋಡಪ್ಪಾ
ಹೊರ ಬಿಡಾಲ್ಹಾಂಗ ಸಲವಿನಿ ಮಕ್ಕಳ || ತಂದಾನ ||

ಮನಿ ಹೊರಾಗ ಬಿಡಲಾರದಾಂಗ ಜೋಪಾನ ಮಾಡಿವಿ
ಹುಡುಗಿರಿಗೆ ಮಕಕ ಬಿಸಿಲು ಹೊಡಿದಿಲ್ಲ
ಏನಪ್ಪಾ ಹಾಂಗ ಜೋಪಾನ ಮಾಡೇನಿ
ಈಗ ಮಂಕನ್ನದೇವಿ, ಮಾಡಲ್‌ ದೇವಿ
ಗಿರಿದೇವಿ ರತ್ನಾಲದೇವಿ
ಸೂರಮ್ಮದೇವಿ, ಸುಂಕಮ್ಮ ದೇವಿ
ಆರು ಮಂದಿ ಚಿಕ್ಕಾಕಿ ಸಿರಿದೇವಿ
ಆಗ ಏಳು ಮಂದಿ ಮಕ್ಕಳು ನೋಡಪ್ಪಾ ಮನಿತಾನ ಇದ್ರೆ
ಮನಿ ಮುಂದೆ ನಾನು ಲಗ್ನ ಮಾಡ್ತಿನಿ
ಮನಿ ಮಗ ಇದ್ದಂಗ
ಸಾಯೋತನಕ ನನ್ನ ಆಜ್ಞೆದಲ್ಲಿ
ನನ್ನ ಕೈಯಾಗ ನಡಿಬೇಕು

ಹಂಗಾದ್ರೆ ನಾನು ಮಕ್ಳನ ಕೊಡ್ತೀನಯ್ಯೋ
ಇಲ್ಲಿದ್ರೆ ನಾನು ಕೊಡೋದಿಲ್ಲ ಯಪ್ಪಾ || ತಂದಾನ ||

ಅಂಬೊತ್ತಿಗೆ
ಕಾಂಭೋಜರಾಜ ನೋಡ್ಬಿಟ್ಟ
ನೋಡ್ರಿ ಆಗ ಹಡೆದ ತಾಯೀನ ಬಿಟ್ಟು
ಈಗ ಮಗಳ ಕೊಟ್ಟವನ ಮನ್ಯಾಗ ಇರಬೇಕಂತ ಏನೈತ್ರಿ
ಅವನೂರು ಅವನೀಗೆ ಚೆಂದ
ನನ್ನ ಊರು ನನಗೆ ಚೆಂದ
ನೋಡ್ರೀ ನಾನಿರಂಗಿಲ್ಲ
ಎಲ್ಲ ಟೋಪಿಗುಳು ಯಂಕಪ್ಪ ಕೋಟುಗುಳು
ಕರೇಕಂಬ್ಳಿಗುಳು
ಆಗ ಮಂಡು ನಿಕ್ಕರದವರು

ನನಗ ಸಾದ್ಯವಲ್ಲಯ್ಯಾ ರಾಗಿ ಮುದ್ದೆ ದೇಶಾನ
ರಾಗಿ ಮುದ್ದೆ ತಿಂತಾರ || ತಂದಾನ ||

ನೋಡಪ್ಪಾ ಹೊಳೆ ದೊಟೋತನ್ಕ ಗಂಗಮ್ಮ
ಹೊಳೆ ದಾಟಿದ ಮ್ಯಾಲ ಪಿಂಗಮ್ಮಾ
ಈಗ ಕೊಡೋ ತನಕ ಪಾದವಿಡಕೋ
ಇರ್ತೀನಂದು ಬಿಡು
ನಿನ್ನೇನು ಬಿಟ್ಟು ಹೋಗೋದಿಲ್ಲ
ಎಲ್ಲಾರು ಓಯಿತೀವಿ ತೊಕೋಣ ನಮ್ಮೂರುಗೆ
ತಾಳಿ ಬಿಳೋತನಕಪ
ಮಾವ ನಿನ್ನ ಅಳಿಯಲ್ಲ ನಿನ್ನ ಮಗ
ಸಾಯೋತನಕ ನಿನ್ನ ಮನ್ಯಾರಿರ್ತಿನಿ
ನಿನ್ನ ಕೈಯಾಗ ನಡಿತೀನಿ
ನಿನ್ನ ಮಾತದಾಗ ಇರತಿನಿ ಮಾವ ಅನು
ಲಗ್ನ ಆದ ಮ್ಯಾಲೆ
ಏನ್ರೀ ನಿನ್ನೂರು ನಿನ್ಗ ಚೆಂದ
ನನ್ನೂರು ನನ್ಗೇ ಚೆಂದ
ಕಳಿಸ್ತೀಯ ಇಲ್ಲ
ನಾನು ಹೋತೀನಿ ಅಂದು ಬಿಡು
ಎಲ್ಲಾರು ಬೈದು ನಿನ್ ಹೆಂಡ್ರನ್ನ ನಾವು ಕಳಿಸ್ತಿವಪ್ಪ
ಸರಿಬಿಡು ಇದೊಂದು ಮಾತು ಕೇಳೋಣ ಯಜಮಾನ್ರುದು ಅಂತ
ಆಗ ಏನ ಮಾಡಿದ ಕಾಂಭೋಜರಾಜ

ಶರಣೇ ಮಾವ ಲೋಕದ್ಜಲ್ಮಕ್ಕೇ
ಜೀವಳಿಯ ಮಾವ ನಿನ ಕೈಯಾಗ ಇರುತೀನಿ ನಾನು || ತಂದಾನ ||

ಮಾವಾ ನಿನ್ನ ಕೈಯಾಗೆ ನಡಿತಿನಿ
ನಿನ್‌ ಆಜ್ಞೆದಲ್ಲಿರ್ತಿನಿ
ಆಹಾ ನನ್ನ ಅಳಿಯ ನನ್‌ ಕೈಯಾಗಿರ್ತಾನಂತೆ
ನನ್ನಾಜ್ಞೆದಲ್ಲಿರ್ತಾನ
ನಿಂದು ನಯಾ ಪೈಸಾ ಬ್ಯಾಡ
ತಾಳ್ಯೊಂದು ಮುತ್ತೋಂದು
ಹಾಲದು ಕಡಗೊಂದು
ಹಾಲುಗೊಲ್ರು ನಾವು ಹಾಲು ಕಡಗಾ
ಏನಪ್ಪಾ ತಂದುಕೋ
ಎಷ್ಟಾಗಲಿ ಇನ್ನ ಊರಿಗೆ ಊಟಹಾಕಿ
ನಾನು ಲಗ್ನ ಮಾಡ್ತಿನಿ
ಅಷ್ಟಾಗಲ್ರಿ ಅಂದ ಕಾಂಭೋಜರಾಜ