ಚಿತ್ತಗಿರಿ ಪಟ್ಣದಲ್ಲಿ ಗೊಲ್ರ ಚಿತ್ತಪ್ಪ
ನಲವತ್ತು ಮಂದೀನ ಕರೆಕಳ್ಸಿ
ಆಗ ಮಟುಗಳೆಲ್ಲ ತೋಳಿಸಿ
ಮನ್ಯೆಲ್ಲ ತೋಳ್ದು
ಆಗಿನ್ನ ಹಂದ್ರ ಹಾಕಿ
ಕಾಣಿಗಿ ತೊಪ್ಪಲ ಟೆಂಗಿನ ಗಿಡುಗುಳು ನಾಟ್ಹ್ಯಾಕಿ
ಆಗ ಅಡಿಗಿ ಮಾಡ್ಸಿ

ದೇವರಿಗೆಲ್ಲ ಕಾಯಿ ಮುಡಿಸ್ಯನಮ್ಮಾ
ದೇವರೂಟಂತ ಲೋಕವಾಕ್ಯಾನಮ್ಮಾ
ಕರೇ ಕಂಬಳ್ಹಾಸ್ಯಾರಾ ಆಗ ಒಂದು ಮಗನೀಗೆ || ತಂದಾನ ||

ಆಗ ಅರಿಷಿಣ ಕಲ್ಸಿದ
ಅಕ್ಕಿ ಸ್ಯಾಸೆ ಹೊಯ್ದು
ಆಗ ಬೆಳ್ಳಿ ತಟ್ಟ್ಯಾಗ ಏಳು ತಾಳಿ ಏಳು ಮುತ್ತು
ಆಗ ಇವರಾಗಿ
ಈಗ ಏಳು ಬಿಳೇ ಸೀರಿ
ಕುಬುಸ ಇಲ್ಲದ ಗೋಲ್ರು
ಆಗ ಹಾಲದ ಕಡಗ
ಈಗ ತಂದು ಆಗಿನ್ನ ತಟ್ಟ್ಯಾಗಿಟ್ಟಿದುದು
ತಟ್ಟ್ಯಾಗಿಟ್ಟುಕೊಂಡು ಬಂದ್ರು
ಈಗಿನ್ನು ಕಾಂಭೋಜರಾಜನ್ನ ಕರಕಂಡು ಬರಬೇಕಂದ್ರೆ
ಮದಲಿಂಗನ ಮಾಡಬೇಕಲ್ಲ
ಏನಪ್ಪಾ ನಮ್ಗ ತಿಳ್ಯಾದಿಲ್ಲ
ನಾವೇನು ಗೊಲ್ರಾ ಗೊಲ್ಲರಲ್ಲ
ಅವ್ರು ಬೆಡಗಿನಾಗ ಕುಲದಾಗ
ಗೋತ್ರದಾಗ ಏನ್‌ ಮಾಡ್ತಾರೋ
ನಮಗ್ಹೆಂಗ ಗೊತ್ತಾಗಬೇಕು
ಏನ್ರೀ ಗೊಲ್ರಚಿತ್ತಪ್ಪಾ
ನೀನೇ ಮಾವ ಬಂದು
ಮದಲಿಂಗನ್ನ ಮಾಡಬೇಕ್ರೀ
ಸರಿ ನಿಮ್ಗ ಗೊತ್ತಿಲ್ವಾ
ನಮಗೇನು ಗೊತ್ರಿ
ಅಂಬೋತ್ತಿಗೆ ಸರೆ ಬಿಡಂತ

ಆಗ ಪದುರನ ಪಂಚೆ ಉಡಿಸ್ಯರಣ್ಣಾs
ಆಗ ಇನ್ನ ಶರಟು ವಾಕೆರಣ್ಣಾ
ಶರಟು ಮ್ಯಾಲೆ ಕರೆ ಕೋಟುವಾಕಸೆನಮ್ಮಾ || ತಂದಾನ ||

ಕರೇ ಕೋಟು ತೊಡಿಸಿ
ಗುಂಡು ರುಮಾಲು ಸುತ್ತಿಬಿಟ್ರು
ಆಗ ಗುಂಡು ರುಮಾಲು ಸುತ್ತಿ
ಕರೆಕಂಬಳಿ ಬಳಿ ಹೆಗಲಿಗ್ಹ್ಯಾಕಿದುರು
ಕೋಲು ಕತ್ತಿಚೂರಿ ಕೈಗ ಕೊಟ್ಟು
ನೋಡಿದ ಕಾಂಭೋಜರಾಜ
ಹುಟ್ಟಿದಾಗಲಿದ್ದ ಎಲ್ಲಿ ಹೆಗಲಿಗಾಕಿಲ್ಲ
ತಲೇಗೆ ಪುಟ್ಟಿ ಇಟ್ಟಿದ್ಹಂಗಾಯ್ತು
ಯಾವತ್ತು ತಲಿಗೆ ಬಟ್ಟೆ ಸುತ್ತಿಲ್ಲ
ಅಯ್ಯಾ ಏನಯ್ಯಾ ನನಗ ಇಂಥ ಅವತಾರ ಮಾಡಿದ್ರಿ

ನನ್ನ ಮುದ್ಯೋನು ಮಾಡಿದರ್ಯೋ ನನ್ನ ಇನ್ಲೋಕದ್ಹಾಗಣ್ಣ || ತಂದಾನ ||

ನೋಡ್ರೀ ತಾಳಿ ಕಟ್ಟೋತನಕ ಲೋಕ ನೋಡಬ್ಯಾಡ
ಭೂ ತಾಯೀನ್ನ ನೋಡು
ತಾಳಿ ಕಟ್ಟಿದ ಮ್ಯಾಲೆ
ಈಗಿನ್ನು ತಲೆರುಮಾಲು ಒಲ್ಲೆ ತೆಗ್ಯೊದಪ್ಪ
ಗೂಟಕ್ಕ ಸಿಗ್ಹಾಕಾದು
ಕಂಬಳಿ ತಗ್ಯಾದಪ್ಪ ಕಟ್ಟೆಮ್ಯಾಲೆ ಹಾಕೋದು
ಕೋಟು ತಗೇದಪ್ಪ ಗೂಟಕ ಸಿಗ್ಹಾಕದು
ಸರೆಬಿಡ್ರಿ ಅಂತ
ಕರಕಂಡು ಬಂದು ಇನ್ನ ಕುಂದ್ರಿಸಿದರು
ಕರೇ ಕಂಬಳಿಮ್ಯಾಲೇ

ಕರೆಕೊಂಡಾಗಿ ಏಳು ಮಂದಿ ಮಕ್ಳಾಗೆ ಬಂದಾರಮ್ಮಾ
ಬಲಪಾದನೆ ಅವರು ಇಟ್ಟಾರ
ಅವರು ಕಂಬಳಿ ಮ್ಯಾಲಹಾಗೆ ಕುಂತಾರಣ್ಣಾs
ಏಳು ಮಂದಿ ಮಕ್ಕಳು || ತಂದಾನ ||

ಆಗ ಅರಿಷಿಣವಂದೆ ಇನ್ನ ಹಚ್ಚ್ಯಾರ
ಈಭೂತಿವಂದೆ ಅವರು ಹಚ್ಚ್ಯಾರಾ
ಮುತ್ತಿನ ಸೆರಗಿಲಿ ಶರಣೆ ಮಾಡ್ಯಾರಾ ಜೀವದವನಿಗಿವಾಗಿ || ತಂದಾನ ||

ಏಳು ಮಂದಿ ಮಕ್ಕಳು ಕುಂತಕೊಂಡ್ರು
ಇವರು ಚಿರಂಜೀವ ವಿಷ್ಣು ಈಶ್ವರ
ಎದ್ದೇಳಪ್ಪಾ ಕೃಷ್ಣ ಗೊಲ್ರುವನೇ
ಆಗ

ತಂದಿವಿಲ್ಲದ ಮಗನಮ್ಮಾ ನೀಲದೇವಿ ಮಗನಮ್ಮಾ
ಮಗನವಂದು ಇನ್ನು ಎದ್ದನಾ ಎಲ್ಲಿ ವೈದಿಯೋ ಪರಮಾತ್ಮನೇ
ಭೂಮಿ ಮ್ಯಾಲೆ ಹುಟ್ಟಿ ನಾನು ಬೆಳಿದಿನೀ
ಲೋಕ ಜೀವನೆ ಲಗ್ನ ಆತಿನಯ್ಯಾ ಪರಮಾತ್ಮ ಶಿವ || ತಂದಾನ ||

ಆಗ ಏಳು ಮಂದಿಗೆ ಅರಿಷಿಣ ಹಚ್ಚೀದಾ
ಈಭೂತಿ ಹಚ್ಚಿದಾ
ಮೂಗು ಮುತ್ತು ಹಾಲು ಕಡಗ
ಸೂಸುಗ ಹಾಕಿದಾ
ಏಳು ತಾಳಿಗೆ ಅರಿಷಿಣ ಗಂಧವಚ್ಚಿ

ಏಳು ತಾಳಿ ಕೈಲಿವಿಡದಾನ ಮಗಾ
ವಿಷ್ಣ ಪರಮಾತ್ಮಾಗಿ ಶರಣಯಪ್ಪಾ
ಮೂರು ಮೇಘದಾಗ ಯಾರು ನೋಡ್ತರಣ್ಣಾ
ಬೋಗ್ಯಾದಿ ಲೋಕಗೆ || ತಂದಾನ ||

ಗೋರ್ಕ ಮುನೀಶ್ವರ ನಾಗೀಶ್ವರ ದೇವಿಶ್ವರ ಇದಾರ
ಏ ನಮ್ಮ ತಲ್ಲಿವಿದ್ದ ಗೋಪಿನ ಕೊಲ್ಲಿದ ದುಷ್ಠನ ಮಗ
ದುಷ್ಟಲೋಕ ಲಗ್ನಾಗ್ತಾನ
ಛೀ ಅವನ ಮಕ ನೋಡಬಾರ್ದಂತಾರ
ಆಗ ಮಗನಾಗಿ

ಪರಮಾತ್ಮ ಅಂದಾನಾ ಏಳು ಮಂದಿ ತಾಳಿ ಕಟ್ಟ್ಯಾನ
ಅನ್ನಾ ಹಾಲು ತುಪ್ಪನೆ ಕಲ್ಸಿ ಕುಡಿಸ್ಯರಾ ಆಗ ಕೈವಿಡಿದಾಗಿ ಎಬಿಸ್ಯಾರಾಣ್ಣಾ
ಆಗ ಕೈವಿಡಿದನೇ ತಾವು ಎಬಿಸರ್ಯಾ ಊರು ವಳಗೆ ಕೈವಿಡಿದು ಮೆರಣಿವಣ್ಣಾ
ಕೈಯಿಡಿದು ಮೆರವಣಿಗೆ ಮಾಡಿಸ್ಯಾರಾ || ತಂದಾನ ||

ಆಗ ಮೆರಣಿಗೆ ಮಾಡಿದ ಮ್ಯಾಲೆ
ಈಗ ಮನಿಗಿ ಬಂದ್ರು
ಲೋಕೆಲ್ಲ ಊಟಾ ಮಾಡಿದ್ರು
ಮಾಡಿದ ಮ್ಯಾಲೆ
ಐದೇ ದಿನದಲ್ಲಿ ಹಂದ್ರಕಿತ್ತಿ
ತಿರುವಿ ನೀರು ಹಾಕಿದ್ರು
ಆಗ ಮುಂಜಾಳಿ ಹಂದ್ರ ಕಿತ್ತಿ ತಿರುವಿ ನೀರ ಹಾಕಿದ್ರ