ಮದುವಿ ಮಾಡಾಕ ಬಂದೋರು
ಯಜಮಾನ್ರು ನೋಡಿದ್ರು
ಏನ್ರೀ ನಮ್ಮ ಹೆಂಡ್ರು ಮಕ್ಕಳು ಹೆಂಗಾದ್ರೋ
ನಾವು ಹೋಗಬೇಕಾ ಇಲ್ಲಾ
ಒಂದು ಕೈಗ ಎಂಟು ಕೈ ಮಾಡಿವಿ
ಇಲ್ರೀ ಮತ್ತ ನೀವು ಹೋದ್ರೆ
ನಾನು ಬರ್ತೀನ್ರಿ ನಿಮ್ಹಿಂದೆ
ಅಯ್ಯೋ ನೀನಿನ್ನ ತಿಂಗಳಿರಬೇಕರೀ
ಹೇ ಅರ್ಧಗಂಟೆ ಇರಾದಿಲ್ರಿ ನಿಮ್ಮನ್ನ ಬಿಟ್ಟು
ಏನಪಾ ಗೊಲ್ರು ಚಿತ್ತಪ್ಪಾ
ಏನ್ರಪ್ಪಾ ಮದುವೆ ಆಡ್ದೋರೆ
ಈಗ ಕಾಂಭೋಜರಾಜ ಹಾಲುಗೋಲ್ರವನಿಗೆ ಲಗ್ನಮಾಡ್ದೆ
ಏನ್ರಿ ನಮ್ದೇನು ಖರ್ಚಾಗಿಲ್ಲ ಎಲ್ಲಾ ನಿಂದೆ
ಆಗಿನ್ನವರ ಕುಲಕ್ಕೆ ಈಗ ಮಗನಿಗೇನೋ
ಇನ್ನ ಲಗ್ನ ಮಾಡಿದಿವಿ
ಈಗ ಉಡಿ ತುಂಬಿ ಕೊಡುಬೇಕರಿ
ನೀವು ಹೂ ಮುಡಿಸಿ
ಏ ಮೂರು ತಿಂಗಳಾಗ ಉಡಿ ತುಂಬಿ ಕೊಡ್ತಾರ
ಇಂದೆಲೆ ಉಡಿತುಂಬಿ ಕೊಡ್ತಾರಾ
ಇಲ್ರೀ ಎಲ್ಲಾರು ನೆರ್ತವರಲ್ಲಾ
ತಾಳಿ ಕಟ್ಟಿದಮ್ಯಾಲೆ ಆತನ ಜೀವಕ್ಕೆ ಅಲ್ಲ
ಇನ್ನು ಎಳೆ ಜೀವಕ್ಕ ಇಲ್ಲ
ಆಗ ಮಾಡೋದು ಈಗ ಮಾಡ್ರೀ
ನಾವು ಇನ್ನವರ ಮದುವೆ ಮಾಡಿವಂತೆ
ವಂದ್‌ ಕೈಗೆ ಎಂಟು ಕೈ ಕಲಿಸಿ
ಹೋಗಿ ಬಿಡ್ತೀವಿರಿ ನಾವು
ಓಹೋ ಸರೆಬಿಡಪಾ
ಹತ್ತು ಮಂದಿ ಮಾತುದಾಗ
ವಂದ್‌ ಮಾತು ನಡ್ಯಾಕ ಆಗಾದಿಲ್ಲ
ಮತ್ತೆ ಅಷ್ಟು ದೂರ ವಾಪಸು ಬರಬೇಕಂದ್ರೆ
ಮತ್ತೆ ಹ್ಯಾಗ ಬರ್ತಾರಂತ

ಆಗ ವಂದೆ ಹೂವ ಮುಡಿಶಾರಣ್ಣಾ
ಉಡಿ ತುಂಬಿನೆ ಇನ್ನು ಕೊಟ್ಟರಣ್ಣಾ
s ಏಳು ಮಂದಿನ ಕಾಂಭೋಜ ಗೊಲ್ರುದವನಿಗೆ
ಹಾಲು ಗೊಲ್ರುದವನಿಗೆ
ಉಡಿತುಂಬಿ ಕೊಟ್ಟಿದ ಮ್ಯಾಲೆ ವಂದು ದೀನ ಎಡ್ಡೇದಿನ
ಮೂರೇ ದಿನ ನಾಕೇ ದಿನ
ಐದ್ದಿನಗೆ ಏನೇನು ನುಡಿತಾರಣ್ಣಾ ಕಾಂಭೋಜರಾಜ || ತಂದಾನ ||

ಹತ್ತು ದಿನ ಆಯ್ತು ನಾವು ಊರು ಬಿಟ್ಟು
ಐದು ದವಸ ಮದುವೆಯಾಯ್ತು ಐದು ದಿವ್ಸ ಉಡಿ ತುಂಬಿದ್ವಿ
ಇನ್ನೇನಪಾ ನಾವು ಹೋತಿವಿ
ಇನ್ನೊಂದು ತಿಂಗಳಿರು
ಇಲ್ರೀ ನನ್ಗೆ ಹೆಂಡರು ಬ್ಯಾಡ ನನ್ಗೆ ತಾಯಿ ಬೇಕು
ಸರೆ ಕೈ ಚೀಲ ತಗಂಡು
ನಿಮ್ಮ ಮಾವನ್‌ ಪಾದ ನಿಮ್ಮತ್ತೆ ಪಾದ ಮುಗಿ
ಆ ಮಾತಿಗೆ ಏನ್‌ ಮಾತು ಎದುರು ಕೊಡ್ತಾರೋ
ನಾವು ಎದುರಾಡ್ತಿವಿ ಅಂದ್ರು
ಪದರನ ಪಂಚೆ ಶರಟು ಸಲ್ಲೇವು ಹಾಕಿದ
ಮೂರು ದಡೆ ಚಂದ್ರಾಯ್ದ ಕೈಚೀಲ್ಹಿಡಕಂಡ
ಶರಣು ಮಾವ ಮಗಳು ಕೊಟ್ಟಿದ ಗೊಲ್ರುಚಿತ್ತಪ್ಪಾ
ಶರಣು ತಾಯಿ
ಏನಪಾ ಎಲ್ಲಿಗೋತಿಯಿ

ಮಾವ ನಿನ್ನ ಊರು ನಿನಗೇ ಚೆಂದ ನನ್ನ ಊರು ನನಗೇ ಚೆಂದ
ನಿನ್ನ ಆಸ್ತಿ ನನ್ಗೆ ಬೇಕಿಲ್ಲೋಮಾವಾs
ಅರ್ಧಗಂಟೆ ನಾನ್ಇರೋದಿಲ್ಲ ಕಳಿಸ್ತೀಯಿಲ್ಲ ನಿನ್ನ ಮಕ್ಕಳು
ಹೋತಿನಿ ಮಾವ ನಾನುವಿರೋದಿಲ್ಲಾ
ಇರೋದಿಲ್ಲಾ || ತಂದಾನ ||

ಗೊಲ್ರು ಚಿತ್ತಪ್ಪಾ
ಹುಳ್ಳುಗ ಹುಣಿಸೇ ಗಿಡ ಆದ್ಹಂಗ ಆದ
ಯಪ್ಪಾ ಹತ್ತು ಸಾವಿರ ಹೋಗಿಬಿಟ್ಟು
ಮೂರು ಪಲ್ಲ ಅಕ್ಕಿ ಹೋದ್ವು
ಎರ್ಡು ಪಲ್ಲ ಗೋಧಿ ಹೋದ್ವು
ನಿಂದೇನಿಲ್ಲ ನಯಾ ಪೈಸಾ ತಾಳೀ
ತಾಳಿಯೊಂದೇ ನೀನು ಕಟ್ಟಿದ್ದು
ಏಯ್‌ ಆಗ ತಾಳೆಯೊಂದೂ ಬೇಕಿದ್ರೆ ತಗೊಂಡ್ಹೋಗು
ಬೇಕಿಲ್ಲದ್ರೆ ಬಿಟ್ಹೋಗು

ನನಮಕ್ಕಳ್ನ ನಾನು ಕಳಿಸೋದಿಲ್ಲಲೇ
ಮನಿತಾನ ಬಂದೀ ನಿ ಸಾಯೋತನಕ್ ಮನ್ಯಾಗಿರಬೇಕೋ || ತಂದಾನ ||

ಸಾಯೋತನಕ ಮನೀತನ ಇರಬೇಕು
ಅಂದ್ರೆ ಆ ಮಾತಿಗೆ ಏನಂದಾ
ಏನ್ರೀ ಕಳಿಸೋದಿಲ್ಲವಾ ನಿನ ಮಕ್ಕಳು
ಖಳಸೋದಿಲ್ರಿ
ಸಾಯೋತನಕ ಇರಬೇಕು
ಬೇಕಿದ್ರೆ ಇರಬೋದು
ಬೇಕಿಲದಿದ್ರೆ ನಿನ್‌ ತಾಳಿ ವಯ್‌ಬೋದು
ಏನ್ರೀ ರೈತರೇ ಮದ್ವಿ ಮಾಡ್ದೋರೆ
ಮತ್ತೆ ನಮ್ಮ ಮಾವ ಖಳಸೋದಿಲ್ಲಂತ್ರಿ
ಯಾಕ್‌ ಖಳಸೋದಿಲ್ಲಂತೆಪಾ
ಈಗ ಖಳಸೋದಿಲ್ಲಂತೆ
ಏನ್ರಿ ಗೊಲ್ರು ಚಿತ್ತಪ್ಪಾ
ತಾಳಿ ಕಟ್ಟಿದ ಮ್ಯಾಲೆ
ಕುಂಬಾರ್‌ ಗಡಗಿ ಯೇಸ್‌ ದಿನ ಇರ್ತೈತಿ
ಆಗ ಎಷ್ಟು ದಿನ ಇರ್ತೈತಿ
ಆಗ ಎರ್ಡ ದಿನ ಇರ್ತೈತಿ
ಎರ್ಡ ದಿನ ಆದ ಮ್ಯಾಲೆ
ಯ್ಯಾರಿಗನ್ನ ಕೊಟ್ಟು ಬಿಡ್ತಿ
ಕೊಟ್ಟಿದ ಗಡಿಗೆ ನನ್ನ ಮನೀಗೆ ಇರಬೇಕಂದ್ರೆ ಹೆಂಗ ಇರ್ತೈತಿ
ಇದ್ರೆ ಅವ್ರ ಮನಿ ಬಾಳ್ವಿ
ಒಡ್ಡು ಹೋದ್ರೆ ಆಗ್ಹೋಯಿತ್ತು
ಸತ್ಹೋದ್ರೇ ಅವನ ಪೀಡಾ ಆಯ್ತು
ಏನ್ರಿ ದೊಡ್ಡೋನಾಗಿ ಬುದ್ದಿಲ್ರೀ ಬಾಯಾಗ ಅಲ್ಲಿಲ್ಲ
ನೀನ್ಹೇಣ್ತಿ ಊರಾಗ ನೀನ್ಯಾಕಿಲ್ಲ
ನೀನ್ಹೇಣ್ತೀನ ಕರಕಂಡು ಬಂದು
ನೀನ್ಹೆಂಗ ರಾಜ್ಯೆವಾಳ್ತಿಯೋ

ಹಾಂಗ ಆವನೆಂಡ್ರುನೂ ಕರಕಂಡು ಅವನು ಊರಿಗಾಗಿ ಹೋತಾನಾ
ಏಯ್ಅವನು ರಾಜ್ಯವಾಳ್ತನಾ ನೀನೊನ್ಬ್ನೆ ರಾಜ್ಯವಾಳೋದ || ತಂದಾನ ||

ಹೇಯ್‌ ಖಳಸಬೇಕ್ರಿ
ನಿನ್ನ ಮಗಳ ಮ್ಯಾಲೆ ಜೀವಿದ್ರೆ
ಮತ್ತ ತಿಂಗಳಿಗ್ಹೋಗಿ ಕರಕಂಡು ಬಂದು
ಮೂರೇ ದಿನ ಇಟ್ಕೊಬೇಕು
ಹೆಣುಮಕ್ಕಳು ಭಾಳ ದಿವ್ಸ ಮನ್ಯಾಗಿಟ್ಟುಗೋಬಾರ್ದು

ಈಗ ಅಳಿಯವಲ್ಲವಂದ್ದಾರೆ
ನೀನು ಇನ್ನು ಹೆಂಗ ಮಾಡುತಿ || ತಂದಾನ ||

ಹೇಯ್‌ ನೀವೂ ಹಂಗೆ ಹೇಳ್ತೀರಲ್ಲಾ
ಇಲ್ಲಾ ಮನಿತನಂತಾ ನಾನು ಕೊಟ್ಟಿದ್ದಿಗೆ
ಹೂಂ ಅಂದು ಬಿಟ್ರಿ
ಇವಾಗ ಹೊಳೆದಾಟೋತನ್ಕ ಗಂಗಮ್ಮಾ
ಹೊಳೆದಾಟಿ ಪಿಂಗಮ್ಮಾ ಅಂತ್ರ್ಯಾ
ಹೇಯ್‌ ಆವಾಗ ನಾಯಾಗಿ
ಬಗ್ಗಿ ಬಗ್ಗಿ ಪಾದ ಹಿಡಕಂಡ್ರಿ
ಈಗ ಹುಲಿ ಆಗಿ ಎಗರಿ ಹೋಗ್ತಿರ್ಯಾ
ನೋಡಪಾ ನೀನ ಆವಾಗ ಹುಲಿ ಆಗಿದ್ದಿ
ನಾವು ನಾಯಿಯಾಗಿ ಬೊಗ್ಗಿ ಪಾದ ಹಿಡಕಂಡ್ವಿ
ನೀನು ಮಕಳ್ನ ಕೊಟ್ಟಿ

ಈಗ ನಾವು ಹುಲಿ ಎಗರ್ಹೊಯ್ತೆವ
ನೀನು ಪಾದ ಹಿಡಿದು ಖಳಿಸಯ್ಯಾ || ತಂದಾನ ||

ಈಗ ಪಾದ ಮುಗ್ದು ಖಳಿಸಿಬಿಡು
ಏನ್‌ ನ್ಯಾಯ ಹೇಳ್ತೀಯಯ್ಯಾ
ಇಲ್ಲಪ್ಪ ಖಳಿಸೋದಿಲ್ಲ
ನೋಡಪಾ ಹೆಣು ಮಕ್ಕಳಂದ್ರೆ
ಎಷ್ಟು ಜಾತಿ ಇರೋದು
ಹೆಂಗಸುರು ಕುಲುದಾಗ
ಚಿತ್ತಿ ಶಂಕಿನಿ ಹಸ್ತಿನಿ ಪದ್ಮಿನಿ ಜಾತಿ
ನಾಕು ಜಾತಿ ಕುಲ ಹೆಣುಮಕ್ಕಳುದು
ಗಣಮಕ್ಕಳು ಕುಲ ಅಂದ್ರೆ
ಮೂರು ಜಾತಿ
ಹುಲಿಯಂತ ಜೀವಾ
ಕರಡಿಯಂತ ಕುಲ ಮಲ್ಲಿಹೂವ್ವಂತ ಜೀವ
ಹೆಣ್ಣುಮಕ್ಕಳು ಎಷ್ಟನ್ನು ಅರಚ್ಲಿ ಕರಡಿ ಕುಂತಂಗ
ಆಗಿನ್ನವರ ಕುಲದಲ್ಲಾಗಿ ಮಲ್ಲಿ ಹೂವಿನಂತ ಜೀವದವನು
ಆಗಿನ್ನವರು ಹೆಣುಮಕ್ಕಳು ಅರಚಲಿಕ್ಕಿಲ್ಲ
ಮನಿ ಬಿಟ್ಟು ಹೋತಾನ
ಮಲ್ಲಿಹೂನಂತ ಜೀವುದೋನು ಜಾರಕಂಡು
ಆಗ ಹುಲಿಯಂತ ಜೀವುದವನು
ಆಗ ಹೆಣುಮಕ್ಕಳು ಅರಚಿದ್ರೆ ಹೇಯ್‌ ತಿವಿತಿನಿ
ಹೇs ಬಡಿತೀನಿ ಅಂತಾನ ಅಂದ
ನೋಡಪಾ ಜೀವದಲ್ಲಾಗಿ
ಹೆಣುಮಕ್ಕಳು ಅಂದ್ರೆ
ಗಂಟಿಗೆ ಒಂದು ಬುದ್ಧಿ ಗಂಟಿಗೊಂದು ಗ್ಯಾನ
ಬಾಯಾಗಿನ ನೀರಿನ ಆಳ ತಿಳ್ಯಾದಿಲ್ಲ
ಹೆಣುಮಕ್ಕಳು ಗುಣತಿಳ್ಯಾದಿಲ್ಲ
ಈಗ ನೋಡ್ರೀ ಆಳೋನಿಗೆ ಹತ್ತುಮಂದಿ
ತಿರುಗ ಹೋತಾನ
ನಿನ ಮಕ್ಕಳ್ನ ಕಳುಸಾದಿಲ್ಲಂದ್ರೆ ಲಗ್ನ ಮಾಡಿಕ್ಯಂತಾನ
ನಿನ್ನ ಮಕ್ಕಳು ಏನನ್ನ ಗರ್ಭವತಿ ಆದ್ರೆ ಊರಾಗ

ನಿನ್ನ ಮಕ್ಕಳು ಮುಂದೆ ಕುತ್ತಿಗೆ ಕೊಯ್ತನಯ್ಯಾ
ಸತ್ರೆ ಅವನು ಮನೀಗೆ ಪಿಶಾಚಿ ಇದ್ರೆ ಮನೆ ಬೆಳಕುವಾತದ
ಕಳುಸಯ್ಯಾ ಬುದ್ದಿಲ್ಲ ಮಕ್ಕಳಯ್ಯಾ || ತಂದಾನ||

ಖರೇವೆ
ನನ್ನ ಕುತ್ತೀಗೆ ಕೊಯ್ತಾರ
ಬಿಡ್ತಾರಾ

ಏಯ್ಖಳಿಸ್ತೀನಿ ನಿಂದ್ರು ಖಳಿಸ್ತೀನಿ ನಿಂದ್ರಪ್ಪಾ
ಇಲ್ಲಾ ವಲ್ಲೆ ವಲ್ಲೆ ನಾನು ಹೋತಿನ ಮಾವಾ
ಹೇಯ್ಹುಲಿಯಾದೆಷ್ಟು ಬಲ ಹೋತಿಯೇಲೆ || ತಂದಾನ ||

ಹುಲಿಗ ಬಂದಂಗ ಇನ್ನ ಬಲಾ ಬಂದೈತೆ ನಿನಗ
ಇಲ್ಲ ಮಾವ
ನ್ಯಾಯದಲ್ಲಿ ಏನ್‌ ನ್ಯಾಯೈತೆ ಮಕ್ಕಳ್ನ ಖಳಸೋದಲ್ಲ
ನೀನು ಖಳಸಲಾರ್ದ ನಾನೇನು ಮಾಡಲಿ
ಖಳುಸ್ತೀನಪ್ಪಾ ಅಂತ
ಏಳು ಮಂದಿಗೆ ಉಡ್ಯಕ್ಕಿ ಹಾಕಿ
ತಾಯಿ ತಂದಿ ಮಕ್ಕುಳು ಪಾದವಿಡಕಂಡು
ಬರೇ ಹೆಣ್ಣುಮಕ್ಕಳು
ಯಮ್ಮಾ ಮಕ್ಕುಳಾರಾ

ನೀವು ಹೋದು ಮ್ಯಾಲೆ ನಾವು ಸಾಯ್ತಿವಮ್ಮಾ
ಮನ್ಯಾಗ ತಲಿಗೊಂದು ಕಬ್ಹಿಡುಕೊಂಡಿರ್ತೀವಮ್ಮ ನಾವು
ಮಕ್ಕಳ್ಮನ್ಯಾಗಿದ್ದಾಗ ಎಷ್ಟು ಚೆಂದ ಯಮ್ಮಾ
ಗಲಗಲಗಲಂತ ಮನಿ ತುಂಬಿಕ್ಯಂಡಿತ್ತಮ್ಮಾ || ತಂದಾನ ||

ಅಂತ ದುಃಖಮಾಡಿ
ಆಗ ಮಕ್ಕಳಿಗೆ ಉಡ್ಯಕ್ಕಿ ಹಾಕಿ
ಕೇಳವೋ ಮನ್ಯಾಗಿದ್ದವನೆ
ಈಗ ಬಂಡಿ ಕಟ್ತಿನಿ
ಬಂಡಿ ಮ್ಯಾಲೆ ಕುಂದ್ರಿಸಿಕ್ಯಂಡು
ಯಪ್ಪಾ ಊರು ನೋಡಿಲ್ಲ ಉದ್ಮಾನ ನೋಡಿಲ್ಲಾ
ಇವ್ನ ದಾರ್ಯಾಗ ಬಂದವನಿಗೇ
ಈಗ ಆರುಕಟ್ಟಿಗೇನು ಇದ್ದಂಗ
ಇವನ ಕುಲ ನೋಡಿಲ್ಲ
ಜಾತಿ ನೋಡಿಲ್ಲ
ಈಗ ಯ್ಯಾ ಕುಲನೋ
ಮಕ್ಕಳ್ನು ಕೊಟ್ಟು ಲಗ್ನ ಮಾಡಿದೆ

ಯಪ್ಪಾ ನೋಡ್ಯನ್ನ ಬಾರಪ್ಪಾ ಬಂಡಿಮ್ಯಾಲೆ ಹೋಗ್ಯಾತೋ || ತಂದಾನ ||

ಅಷ್ಟಾಗಲ್ರಿ ಅಂತ
ಆ ಮಕ್ಕಳು ಪಾದ ಮುಗುದ್ರೆ
ಮಕ್ಕಳು ಏನಂತಾರ
ಯಪ್ಪಾ ಆರುಕಟ್ಟಿಗೇವ್ನಾಗಲಿ
ಅವನ ಕುಲ
ಎಂಥಾದನ್ನಾಗಲಿ
ನಮಗ ಹಣಿಮ್ಯಾಲೆ ಬರ್ದಿದ್ದು ತಪ್ಪಂಗಿಲ್ಲ ತಂದೇ
ನೀವೇನು ಎದೆಬಿದ್ದು ಸಾಯಬ್ಯಾಡ್ರಿ
ತಲಿಗೊಂದು ಕಂಬ್ಹಿಡುಕೊಂಡು ಜಲ್ಮ ಕಳಿಬ್ಯಾಡ್ರಿ
ನಮ್ಮನ್ನ ಮರ್ತು ಊಟ ಮಾಡ್ರ್ಯಪ್ಪಾ ಅಂದರೆ
ಯಮ್ಮಾ ಆರುಮಂದೀ ಅಕ್ಕತಂಗೇರು
ಸಿರಿದೇವಿ ಮಾತೇಳಿದ್ದಂಗ ನಡದು
ಒಬ್ರು ಮಾತು ಮ್ಯಾಲೆ ನಡಿರೇ ತಾಯಿ
ಅಂದ್ರೆ ಆರು ಮಂದಿದ್ದು ಒಂದು ಮಾತ
ಚಿಕ್ಕ ಯಮ್ಮಂದೊಬ್ಬಾಕೀದು ಒಂದು ಮಾತು
ಸರಿ ಬಿಡಮ್ಮಾ ತಾಯಿ ಸಿರಿದೇವಿ
ಅಂದ್ರೆ ಆಗಿನ್ನವರ ಬಂಡೀಮ್ಯಾಲೆ ಕುಂತ್ಕೊಂಡ್ರು
ಈ ರೈತು ಶ್ಯಾನುಭಾಗರು ತಲವಾರು
ಈ ಗೌಡ ಇನ್ನವರ್ತಾ ಕಾಂಭೋಜರಾಜ

ಅಣ್ಣಾ ಇನ್ನ ಕುದ್ರಿ ಮ್ಯಾಲ ಕುಂತಾರ್ರಿ
ಹಿಂದ ಮುಂದೆ ಕುದ್ರೆಮ್ಮ
ಹೇs ಆಗಾ ಹಿಂದೆ ಬಂಡಿ ಬರುತೈತೊ
ತಾವು ಚೆಳ್ಳಕೇರಿಗೆ ಬಂದ್ಯಾರೋ
ಚೆಳ್ಳಿಕೇರಿ ತಟಾದು
ದಾವಣಗೇರಿಗೆ ಬಂದಾರ
ದಾವಣಗೇರಿ ತಟಾದು
ಥೋತ್ತಡಿ ಕೂಡ್ಲಿಗ್ಯಾಗಿ ಬಂದಾರ
ಕೂಡ್ಲೀಗಿ ತಟಾದು
ಆಗ ಕರ್ಣಾಟೇ ಚಾಂಪೂರ
ತಾವು ಊರಿಗೆ ಬಂದಾರಾ || ತಂದಾನ ||

ಆಗ ಊರು ಮುಂದೆ ಇಳಿದ್ರು
ಇಳಿದು ಆಗ ಅಗಸ್ಯಾಗಲಿದ್ದ ಮನೀಗಿ ಬಂದ್ರು
ಆಗಿನ್ನವರ ಮನೀಗೆ
ಈಗ ಚರಿಗೆ ನೀರು ಉಗ್ಗಿ
ಕಾಯಿ ಒಡೆದು ಬಲುಪಾದಿಟ್ಟು ಬಂದ್ರು

ಶರಣಮ್ಮಾ ಅತ್ತೆಮ್ಮಾ ನೀಲವೇಣಮ್ಮಾ ನಿನಗಾಗಿ
ಯಮ್ಮಾ ಒಬ್ಬೆ ಮಗನಿಗ ನೋಡಮ್ಮಾ
ಏಳು ಮಂದಿ ನಾವು ಬಂದೀವಿ || ತಂದಾನ ||

ಹಾಲು ಕೃಷ್ಣಗೊಲ್ರು
ಗೊಲ್ರು ಬಾಂಧವರಿದ್ದಂಗ
ಏಳು ಮಂದಿ ಬಂದಿವಿ ನಾವು ಈಗ
ಶರಣೇ ಅತ್ತಿ ನೀಲವೇಣಮ್ಮ
ಶರಣಮ್ಮಾ ಏಳು ಮಂದಿ ಸೊಸಿಲಾರೆ ಅಂದ್ಳು