ಈಗ ನಾನು ಮುದೇನಾತೀನಿ ದೇವ್ರು ಮಟವೆಲ್ಲ ನೋಡ್ಹೋತ್ತಿಗೇ
ಯಪ್ಪಾ ಇದ್ದಾ ಮಗ ಸುಖಾ ಇಲ್ಲ ಎಷ್ಟೋ ಪಾಪ ನಾನು ಮಾಡಿನೋ
ಎಷ್ಟು ಕರ್ಮನೇ ನಾನು ಮಾಡೀನೋ
ಇದ್ದಮಗಾಗೆ ಸುಖ ಇಲ್ಲದಂಗಾಯ್ತೋ
ಹೋಗಿ ಭಾರಪಾ ನನ್ನಾ ಮಗನೇ ಶರಣು ಮಗನೇ ನಿನ್ನ ಜೀವಕೆ
ಏಳು ಮಂದೀನೆ ಪಾದ ಮುಗುದರಾ
ಜೀವದವನೆ ನೀನು ಹೋಗಿ ಬಾರೋ ಬಯ್ಯಾ ನನ್ನ ಜಲ್ಮಾದವನೆ || ತಂದಾನ ||

ಹೊಗಿಬರ್ರೀ ನಿನ ಪಾದುಕ ಶರಣಂದ್ರು
ಅಂಬೊತ್ತಿಗೇ
ಆಗ ಕೈ ಚೀಲ ತಗಂಡಾ
ಈಗ ಮಗ್ಹಾಗೇ

ನಡೆಕಂಡೇ ಬರುತಾನ ಮಗ ಆರಂಡ್ಯೆ ಅಡುವ್ಯಾಗೋ || ತಂದಾನ ||

ಊರು ಬಿಟ್ಟು ಮೂರು ಗಾವ್ದು ಬಂದಾ
ಮೂರು ರೋಡು ಕಲ್ತವು
ಆಗ ಗೇಟು ಕಾಯ್ತಾನ
ಏನ್ರೀ ಈ ದಾರಿ ಯಾವೂರಿಗೋತೈತೀ
ಈ ರೋಡು ಯಾವೂರಿಗ್ಹೋತಾತ್ರಿ ಅಂತ ಕೇಳ್ದ
ಇದು ಕಾಸೀ ಪಟ್ನಕೋತೈತಿ
ಇದು ತಿರುಪತಿ ಮಟುಕೊತೈತಿ
ಇದು ಹೊಳೆದಂಡಿ ಕೋಟಿ ಮಟುಕ್ಕೋತೈತಂದ
ಓಹೋs ಎಲ್ಡು ದಾರಿ ಬಿಟ್ಟಾ
ಕಾಸಿ ಮಟು ದಾರಿ ಹಿಡ್ದುಬಿಟ್ಟ

ಹಗಲೂ ರಾತ್ರಿ ಹತ್ತು ದಿನ ನಡ್ದಾ
ಆಗ ಕಾಶಿ ಮಟಕ್ಕೆ ಬಂದನಮ್ಮಾ || ತಂದಾನ ||

ಕಾಶಿ ದೇವ್ರೀಗೆ ನಾಮುಗಳು
ಓಹೋs ಇಬ್ರು ಪೂಜೆ ಮಾಡಾದು
ಹಾಲ್ತಗಂಡ್ಹೋದ ತುಪ್ಪ ತಗಂಡ್ಹೋದ ಕಾಯ ಕರ್ಪರ
ಆಗಿನ್ನವರ್ತಾ ಆರ್ತಿ ವಳಗಿಟ್ಕಂಡ್ಹೋದ
ಏನ್ರೀ ನಮ್‌ ಕಾಶಿ ದೇವ್ರೀಗೆ ಪೂಜೆ ಮಾಡ್ರೀ
ಅಷ್ಟೇ ಆಗಲ್ರಿ
ಅಂತ ತಾತಗ ಹಾಲಿಲಿದ್ದ ತೊಳ್ದ್ರು
ಈಗ ತುಪ್ಪದ ಬೆಳ್ಳು ಮಾಡುದ್ರು
ಮಡಿವಸ್ತ್ರ ಉಡಿಸಿದ್ರು
ಆಗ ಬೆಳ್ಳಿನಾಮ ಹಿತ್ತಾಳಿ ನಾಮರಾಗಿ ನಾಮ ಇಟ್ರು
ಆಗಿನ್ನವರ ದಡಿಯ ಮಲ್ಲಿಗುವ್ವಾಕಿ ಲೋಬಾನ್ಹಾಕಿ
ಆಗ ಊದಿನ ಕಡ್ಯಚ್ಚಿ ಕಾಯಿ ವಡುದ್ರು
ಏನಪ್ಪಾ ನಡಕೋ ನಿನ ದೇವುರ್ನ
ಆಗಿನ್ನ ಕಾಂಭೋಜರಾಜ
ಎಲ್ಡು ಕೈ ಜೋಡ್ಸಿ
ಗೋಸಿ ಬಿಚ್ಚಿ ಒಂದು ಪಾದ ಮ್ಯಾಲೆ
ಆಗ ಎಷ್ಟು ಚೆಲುವಿನ್ನವರ್ತಾವ
ತಪಸ್ಸು ನಿಂದ್ರತಾನಪ ಕಾಶಿ ಮಟದಾಗಾ

ಸ್ವಾಮಿ ಗೋಸಿ ಕರ್ಮಾ ಕಾಶಿ ಮಟದಾಗೋ
ಗೋಸ್ಯಾಗಿದ್ದ ಕರ್ಮ ಕಾಶ್ಯಾಗ್ಹೋಲ್ರಿ ಮಟದಾಗ
ಸ್ವಾಮೀ ನನ್ನ ಕರ್ಮಾ ನಿನ್ನ ಮಾಟದಾಗ || ತಂದಾನ ||

ಆಂತ ಒಂದು ಗಂಟ್ಯೆಲ್ಲ ಎಲ್ಡು ಗಂಟೆ ತಪಸ್ಸು ನಿಂತ
ಮೂರು ಗಂಟೆ ತಪಸ್ಸು ನಿಂತು
ಆಗ ತಪಸ್ಸು ಬಿಡೋವೊತ್ತಿಗೆ
ಒಂದು ಬೊಳ್ಳ್ಯಳದ್ಹಾಗ
ಏಸು ಬೊಳ್ಳೊಳ್ಳಿ ಇರೋದಿಲ್ಲಾ
ವಂದೇ ಬೊಳ್ಳೊಳ್ಳಿ
ಆಗ ಕಜ್ಜೀರಣ್ಣಷ್ಟು ಇರ್ತ್ಯತಿ
ಅದರ್ಹಾಗ ಯೇಸು ಬೊಳ್ಳೊಳ್ಳಿರೋದಿಲ್ಲಾ
ನೋಡಪಾ ಒಂದು ಬೊಳ್ಳ್ಯಳಷ್ಟು ಪಾಪ ನಂತಲ್ಲಿ ಬಿಡು

ಇನು ಇದ್ದ ಪಾಪ ನೀನು ಒಯ್ಯೋ ಶಿವಾ
ಹಾಲು ಗೊಲ್ರುದವ್ನೇ ಜೀವಗಾಗ ಶಿವನೇ || ತಂದಾನ ||

ಒಯ್ಯಪ್ಪಾ ಅಂದ
ಅಂಬೋತ್ತಿಗೆ ಅಷ್ಟಾಗ್ಲಂತಾ
ಆಗ ಸ್ವಾಮಿ ಕಾಶಿ ಮಟುದಾಗ
ನನ ಗೋಸ್ಯಾಗ ಪಾಪ ಹೋಗ್ಲಂತ
ಆಗ ಪರದಚ್ಚಿಣ ಮಾಡಿಕೊಂಡು ಪಾಂಟಿಗಿಳ್ದ

ಕಾಶಿಲಿದ್ದ ನೋಡಣ್ಣಾ ತಾ ತಿರುಪತಿ ಮಟಕ್ಕೆ ಬರುತಾನ
ತಿರುಪತಿ ಮಟಕ್ಕೇ ಮಗಾ ಬಂದಾನಮ್ಮಾ
ಆಗ ತಣ್ಣೀರಗ ಸ್ನಾನ ಮಾಡ್ಯನಮ್ಮಾ || ತಂದಾನ ||

ಮಡಿಕೂಟ ಹಾಲು ಕೊಡುಪಾನ ತುಪ್ಪ ತಗಂಡು
ಆಗ ಎಲ್ಲು ಕೊಡುಪಾನ ಇನ್ನವರ ಹಾಲು ತಗಂಡು
ಬೆಳ್ಳಿ ನಾಮ ಹಿತ್ತಳ ನಾಮ ರಾಗಿ ನಾಮ ತಗಂಡು
ಈಗಿನ್ನವರ್ತಾವಾಗಿ ಕಾಯಿ ಕರ್ಪೂರ ತಗಂಡು ಮಟಕ್ಕೆ ಬಂದ
ಏಳ್ಳ ಮಂದ್ಯಪ್ಪಾ ಪೂಜೆ ಮಾಡೋರು
ತಿರುಪತಿ ಸ್ವಾಮಿಗೇ
ಏನ್ರೀ ನಮ್ಮ ಕಿಷ್ಟ ಗೊಲ್ರು ದೇವ್ರು
ಮೂರು ನಾಮ ದೇವ್ರೀಗೇ
ಆಗಿನ್ನವರ ಪೂಜೆ ಮಾಡ್ರಿ ಹಾಲು ಗೊಲ್ರಿಗೆ
ಅಂದ್ರೆ ಹಾಲಿದ್ದ ತೊಳ್ದ್ರು
ಈಗ ತುಪ್ಪಲಿದ್ದ ಬೆಳ್ಳು ಮಾಡುದ್ರು
ತಾತನಿಗೆ ಇನ್ನವರ ದಡಿಯ ಮಲ್ಲಿಗ್ಹುವಾಕಿದ್ರು
ಬೇಡಿಕ್ಯಪ್ಪಾ ಅಂದ್ರೆ
ಒಂದು ಪಾದಕ ಎಲ್ಡು ಕೈ ಜೋಡ್ಸಿ

ಐದಿಯಾ ಇಲ್ಲೇನೋ ನೀನು ಬೆಳಕಾದವನೆ
ಸ್ವಾಮಿ ನನ್ನ ಮನೆ ಬೆಳಕು ಮಾಡು ಸ್ವಾಮಿ ಪರುಮಾತ್ಮ ಶಿವ
ಸ್ವಾಮಿ ಮೂರು ನಾಮವು ಐದಿಯೋ ಇಲ್ಲೋ ನೀನೆ ತಿರುಪತಿವಳಗೇ ಸ್ವಾಮಿ
ನಿನ್ನಗುಡ್ಯಾನ್ಬೇಳ್ಕು ನನ್ನ ಮನ್ಯಾಗ ಬೆಳಗ್ಲೋ ನನದೇವ್ರು ತಾತ || ತಂದಾನ ||

ನಿನ್ನ ಗುಡ್ಯಾಗಿದ್ದ ಬೆಳ್ಕು ಮನ್ಯಾಗಾಗ್ಲಂತಾ
ಆಗ ಒಂದು ಪಾದ ಎಲ್ಡು ಕೈ ಜೋಡಿಸಿದರೇ
ಆಗ ಮೂರು ಗಂಟೀಗೆ ಮೂರು ನಾಮ ದೇವ್ರು ಪ್ರತೇಚ್ಚಾದ
ಆಗ ಏನಂತ ಬೈತಾನಾ

ದುಷ್ಟ ದುರ್ಮಾರ್ಗ ನನ ಮಟುಕ್ಯಾಕ ಬಂದೀಯೇ
ನಮ್ಮ ಗೋಪಿ ಗೊಲ್ರುದವನ್ಯಾಲೆ ನಮ ಗೋಪಿನ ಕೊಲ್ಲಿದ ದುರ್ಮಾರ್ಗ || ತಂದಾನ ||

ತಾತಾ
ನೋಡಿ ಕೊಲ್ಲ್ಯಾನಾ ನೋಡಲಾರ್ದ ಕೊಲ್ಲ್ಯಾನ
ಆಗ ನೆವಿಲೋ ಹಾಳುಗದ್ಯಂತ ಏಟು ಬಿಟ್ಟಾನ
ಕೊಲ್ಲಿದವನು ಏನನ್ನ ಉಳಕಂಡಾನ
ಹಿಂದೇಲೆ ಸತ್ತಾನ ಸ್ವಾಮೀ
ಈಗಿಒನ್ನ ಗೋಸ್ಯಾಗ ಕರ್ಮ ಕಾಸ್ಯಾಗಿಬಿಟ್ಟು
ತಿರುಪತೇ ನನ್ಗೆ ಬೇಳಕ್ಕಾಗಲಿ ಮನೀ
ನಾನು ಮಕ್ಕಳು ಕೊಡೋ ದೇವ್ರಲ್ಲ

ಬೋಳಿ ಮಾಡೊ ದೇವರು ನಾನು ಲೋಕದಾಗವೈದೀನಿ
ಹೇಯ್ವಾರಿಬಡ್ಡಿ ತಿಂಬೋನು ನಾನು ವಾರಿಗಿನ್ನ ತಿರುಪೋತಿ ಸ್ವಾಮಿ || ತಂದಾನ ||

ಏನಪಾ ಇನ್ನ ತಿಂಬಾಕಿಲ್ಲದ್ರೆ
ಒಯ್ಯಿ ಎಷ್ಟು ಹೊಯ್ಯಿತೀಯೋ ರೊಕ್ಕ
ಈಗ ಬ್ಯಾನಿ ಬಂದ್ರೆ ಹೇಳು
ಬೋಳು ಮಾಡಿ ಕಳುಸ್ತೀನಿ
ನಿನ್ಗೆ ಜಳಜಳ ರ್ವಾಗ ಜಡ್ಡಿಲ್ದಂಗ ಮಡ್ತಿನಿ
ಇಲ್ಲದ್ರೆ ಆಗ ರೊಕ್ಕಿಲ್ಲದವಾ
ವಾರಿ ಬಡ್ಡಿ ಕಟ್ಟುವಂತಿ ಒಯ್ಯಿ ವಾರಿ ವೆಂಕಟೇಶ್ವರನ
ಅಯ್ಯೋ ಸ್ವಾಮಿ ತಿಂಬೋರಿಲ್ಲ ಉಂಬೋರಿಲ್ಲಾ
ನಾನು ಮಕ್ಕಳು ದೇವ್ರಲ್ಲ
ಇದ್ದೋರ್ನ ಇನ್ನವರ್ತಾವಾಗಿ ಬೋಳಿ ಮಾಡವನು ನಾನು
ಏನಪ್ಪಾ ನಾನೊಬ್ನು ಕೊಡಾಕಾಗದಲ್ಲ
ನಂತಲ್ಲಿ ಬೊಳ್ಳಷ್ಟು ಪಾಪ ಬಿಟ್ಟು ಬಿಡು
ನಾವು ಹುಟ್ಟಿದಲ್ಲ ಕೋಟ್ನ್ಯಾಗೆ ಹೊಳಿದಂಡ್ಯಾಗೆ
ಈಗಿನ್ನವರ್ತಾವಾಗಿ ನಾವು ಬಂದುಬಿಟ್ಟಿ ಎಲ್ಲ್ಯಂತಲ್ಲಿ ಸೇರಿಬಿಟ್ಟೀವಿ
ಇದೋ ಎಲ್ಲಾರು ಮಾತಾಡಿಕ್ಯಂಡು
ಈಗ ನಿನ್ಗೆ ಯಾವುದನ್ನು ದಾರಿ ತೋರಿಸ್ತೀವಿ ನಡೀ ಅಲ್ಲಗಂದ
ಸರೆಸ್ವಾಮಿ ಅಲ್ಲಿಗೆ ನಡೀಬೇಕಾ
ಅಲ್ಲಿಗೆ ನಡೆಪಾ ಎಲ್ಲಾರು ಮಾತಾಡಿಕ್ಯಂತೀವಿ
ಒಬ್ನು ಕೊಡಾಂಗಿಲ್ಲ ಅಂಬೋತ್ತಿಗೆ
ಎಲ್ಲಾರ ನಡುವಿದ್ದ ಗೋಪಿನ ಕೊಲ್ಲಿರಿ
ಜಟಿಂಗೀಸ್ವರ ಗೋರ್ಕ ಮುನಿಸ್ವರ ನಾಗೀಸ್ವರ ದೇವೇಸ್ವರ
ಇಷ್ಟು ಮಂದಿ ವಳುಗಿರ್ವು ಕಾಮದೇವ್ತಿನ ಕೊಲ್ಲಿ ಬಿಟ್ಟಿರಿ ಗೊಪ್ಯಮನ್ನ
ಮತ್ತೆ ಇಷ್ಟು ಮಂದಿ ಕಲೀಬೇಕಂತೀಯಾ ಬ್ಯಾಡ
ಎಲ್ಲಾರು ಕಲ್ತು ಕೋಟ್ನ್ಯಾಗ ಕೋಟಿ ಮಕ್ಕಳು ಕೊಡ್ತೀವಿ ನಡೆಪ್ಪಾ
ಅಂದ್ರೆ

ತಿರುಪತಿ ಸ್ವಾಮಿ ಮಟಾ ಇಳ್ದನಮ್ಮಾ
ಗೋಯಿಂದಾ ನಾರಾಯಣ ಅಂತ ಯಮ್ಮಾ
ಕೋಟಿ ನಿಧಿದಾರ್ಯಣ್ಣಾ ಕೋಟಿಗ್ಯಾಗಿ ಬರುತಾನ
ಕೋಟಿನಿಧಿ ಹಂಪಿ || ತಂದಾನ ||

ಹಗಲೂ ರಾತ್ರಿ ನಡ್ದು ಬಂದಾ
ಹೊಳೆದಂಡ್ಯಾಗ ಸ್ನಾನ ಮಾಡಿಕ್ಯಂಡ
ಗುಂಡುಗ ದೇವ್ರು ಕೊಲ್ಲುಗು ದೇವ್ರು ಮಣ್ಣಿಗೆ ದೇವ್ರು
ಗೇಣು ಗೇಣಿಗೆ ದೇವ್ರು
ಆಬಾಬ ಇಷ್ಟು ದೇವ್ರಿಗೆ ಯಾವಾಗ ಮಾಡ್ಬೇಕು
ಕೋಟಿ ಕೋಟಿ ನಿಧಿಗಳಿಗೆ ಪೂಜ ಮಾಡಬೇಕಂದ್ರಾ ಸಾಮನ್ಯವಾ
ನೋಡು ಸ್ವಾಮಿ
ಹತ್ತು ಗಂಟೆಗೆ ಊಟ ಮಾಡೋನು ನಾನು
ಈ ಕೊಟ್ನ್ಯಾಗ
ನನ್ನ ಜೀವ ಹೊಟ್ಟಿಸುಲಾಲಾರ್ದಂಗ ಜೀವ ಕಾಪಾಡಿಕ್ಯಂಡು ಬಂದ್ರೆ
ನಿಮ ಜೀವಗೆಲ್ಲ ಪೂಜೆ ಮಾಡಿಕ್ಯಾಂತ ಬರ್ತೀನಿ
ನನ್ನ ಜೀವ್ಗ ಹಸುವು ಕೊಟ್ರೆ
ನಿಮ್ಮ ಜೀವ ಪೂಜೆ ಬಿಟ್ಟು ನನ್ನ ಜೀವಕ್ಕ ಊಟ ಮಾಡ್ತಿನಿ
ಅಂತ ಸ್ನಾನಮಾಡಿಕ್ಯಂಡು
ಯಾರು ತಲ್ಲಿಗೆ ಬಂದಾ
ಆಗ ದೇವೀಸ್ವರ ತಲ್ಲಿಗೆ ಬಂದ
ಹೆಂಗ್ಯಂಗ ಮಾಡಿರ್ತಾರೋ ಹಾಲಿದ್ದತೊಳ್ದು
ಆಗ ಮೂರು ಬೊಳ್ಳು ಈಬ್ತಿ ಹಚ್ಚಿದ
ನಾಗೀಸ್ವರ ಇದ್ಯಾನ ನಾಗೀಸ್ವರಗ ಪೂಜೆ ಮಾಡ್ದ
ಈಗಿನ್ನ ಬಗಲಾಗ ಶಿವ್ನು ಐದಾನ ಶಿವ್ನೂಗೆ ಪೂಜೆ ಮಾಡಿ
ಪರಮಾತ್ಮನಿಗೆ ಮಾಡಿವ
ವಿಷ್ಣುವಿಗೆ ಮಾಡಿ
ಆಗ ಕಾಶಿ ದೇವ್ರಿಗೆ ಮಾಡಿ
ಈಗ ಬಗಲಾಗಾಗಿ ತಿರುಪತಿ ಸ್ವಾಮೀಗ್ಮಾಡಿ
ಈಗ ದೇವ್ತೀಗೆ
ಈಗ ಸರಸ್ವತಿ ಶಾರದಾಂಬೆ ದೇವ್ತೀಗೆ ಮಾಡಿ
ಆದಿಶಕ್ತಿಗೆ ಮಾಡಿ
ಎಲ್ಲಾ ದೇವ್ರಿಗೆ ಮಾಡ್ಯಾನ ಕೋಟಿನ್ಯಾಗ
ವಂದೇ ದೇವ್ರು ಮರ್ತು ಬುಟ್ಟಾನ
ಹನ್ನೆರಡ ಗಂಟಾಯ್ತು
ಮುನೀಸ್ವರಗ ಮರ್ತು ಬಿಟ್ಟಾನ
ಗುಂಡು ಅಡೇಲಿ ಐದಾನ ಗವ್ಯಾಗ
ಕಂಡಿಲ್ಲ ಕಣ್ಣಿಗೆ
ಕಾಯಿಕರ್ಪೂರ ವಡ್ದು ಒಂದು ಪಾದ ಎಲ್ಡು ಕೈ ಜೋಡ್ಸಿ
ತಾತ ಕೋಟ್ನ್ಯಾಗ
ನೀವು ಯಾರನ್ನ ಪತೇಚ್ಚಾಗಿ ಬರಬೇಕು
ನಾನು ತಪಸ್ಸು ಬಿಡಬೇಕಂತ
ವಂದು ಪಾದ ಎಲ್ಡು ಕೈ ಜೋಡ್ಸಿ

ಯಮ್ಮಾ ಕಣ್ಣು ಮುಚ್ಚ್ಯನ ತಪಸ್ಸು ನಿಂತಿದಾನಾ
ವಂದೂ ಎರ್ಡು ಮೂರು ಗಂಟೆ ನಿಂತನಮ್ಮೋ
ಕೋಟಿನ್ಯಾಗ ಎಲ್ಲೈದಿರಪ್ಪೋ ಕೋಟಿ || ತಂದಾನ ||