ಕೋಟಿ ಮಟದಾಗ ಯ್ಯಾ ದೇವ್ರಿಗೆ ಕನಿಕರ್ಹುಟ್ಟಿಲ್ಲ
ಪೂಜೆ ಬಿಟ್ವೋನಿಗೆ ಕನಿಕರ್ಹುಟ್ಟೇತಿ
ಗುಂಡಡೇಲಿದ್ದ ಬಂದು ಬಿಟ್ಟ ಗುಂಡೆಬ್ಬಿಸಿಗ್ಯಂಡು
ಏನೋ
ಆಗ ಮುನಿಸ್ವರ
ನಾನು ಮೂಲಿಗಿದ್ದೋನು ಹೊರ್ಗ ಬಂದೀನಿ
ದೇವೀಶ್ವರ ನಾಗೀಶ್ವರ ಈಗ ಪರಮಾತ್ಮನೇ
ಸಾಂಬನೇ ಏನ್ರೀ
ನೀವು ಕಣ್ಣು ಇನ್ನ ತೆರೆದೀರ್ಯಾ ಕಣ್ಣು ಮುಚ್ಚೀರ್ಯಾ
ಪೂಜೆ ಮಾಡಿಕ್ಯಂಬಾಕ ಬರ್ತೈತಂತೆ
ಎದುರಾಗಿ ತಪಸ್ಸು ನಿಂತಾನ ಎಷ್ಟೊತ್ತಾತ್ರಿ
ಹೇಯ್‌ ಮೂಲಿಗಿದ್ದವನೇ
ಅವ್ನು ಪೂಜೆ ಮಾಡುಂತ ಹೇಳೀವ್ಯಾ ನಾವು
ಅವ್ನು ಬಾಪ್ಪಾಂತ ನಾವು ಹೇಳೀವ್ಯಾ
ಅವ್ನೇ ಬಂದಾನ ಪೂಜೆ ಮಾಡ್ತಿದ್ದನಾ
ತಪಸ್ಸು ನಿಂದ್ರತಾನ ಹೋತಾನ
ನಾವೇನು ಮಾಡಾನು
ಇಲ್ರೀ ಅವ್ರು ಕಷ್ಟ ಹೇಳಂಗಿಲ್ರೀ
ಆಗ ಪಾಪ ಮಾಡ್ದವ್ನಿಗೆ ಕಷ್ಟ ಹೋಗಂದ್ರೆ
ಹೆಂಗ್‌ ಹೋತೈತ್ರಿ ಕಷ್ಟ ಇರುತೈತಿ
ಅದೇನ್ರಿ
ಅದೇನು ಪಾಪ ಹೇಳ್ರಿ
ನೋಡಪಾ ಉಗುರೋಷ್ಟು ಪಾಪೈತಿ
ಆ ಪಾಪ ಕಳಕಂಡ್ರೆ
ನಾವ್ಹೋಗಿ ಮಕ್ಕಳು ಮನಿಗ್ಹೋಗೆ ಕೊಟ್ಟು ಬರ್ತೀವಿ
ಅದೇನ್ರೀ ಹೇಳ್ರೀ
ಏಳುಮಂದಿ ಹೆಂಡ್ರಿಗೆ ಕೊಡುಪಾನ ಕೊಡಬೇಕು
ಏಳು ಕೊಡುಪಾನ
ಆಗ ಪುಟ್ಟಿಕೊಡ್ಬೇಕು
ಗಡಾರಿ ಇನ್ನ ಚಲಿಕೆ ತಗಾಬೇಕು
ಊರಿಗ ಗೌಡ ಊರು ಬಿಡಬೇಕು
ಆಗ ನೆಳ್ಳಿಗೆ ಕುಂತ್ಗಂಡು ಸುಖದಲ್ಲಿ
ಆಗ ಗೋಧಿರಟ್ಟಿ ಹಾಲುಸಕ್ರೆನ್ನ ಊಟ ಮಾಡಿದವ್ನು
ಬಿಸಿಲಿಗೆ ಬೊಗ್ಗುಬೇಕು
ಬೊಗ್ಗಿದ ನಡುವು ಹಿಡ್ಕಂಡ್ಹೊಗಬೇಕು
ಆಗ ಕೈಯಾಗ ಚರ್ಮ ಸುಲೀಬೇಕು
ಮಕದ ಮ್ಯಾಲೆನ ನೀರು ಭೂಮಿ ಮ್ಯಾಲೆ ಬಿಳ್ಬೇಕು
ಭೂಮ್ಯಾಗಿದ್ದ ಮಾವಳ ಬೀಜ
ಭೂಮಿ ವಡಿಬಡ್ಕಂಡು ಬೀಜ ಹೊರ್ಗವಂಟಬೇಕು
ಮಕ್ಕಳ ಜೋಪಾನ ಮಾಡ್ತನಂದ್ಹಂಗ ಆ ಗಿಡುಗಳು ಬೆಳ್ಸಿದ್ರೆ
ಹಣ್ಣಾಗ್ಬೇಕು ಆಗ ಗಿಣೀ ಗುಬ್ಬಿ ಬರಬೇಕು ಬಾಯಿಲ್ಲುದ್ವು
ಊಟಾ ಮಾಡಿದ ಗಿಣಿಗೆ ಮಕ್ಕಳಾದ್ರೆ ಆತ್ಗ ಆತಾರ ಅಂದ್ರು
ಆಗ ಅಷ್ಟೊಂದು ಹೇಳಿದ್ರೆ ಹೇಂಗ್ರೀ
ಆತ ಸತ್ತೋದ ಮ್ಯಾಲೆ ಮಕ್ಕಳು ಕೊಟ್ರೆ ಹೆಂಗರೀ
ಮತ್ತೇನ್ ಮಾಡಪ್ಪಾ
ಮಕ್ಕಳು ಬೇಕಿದ್ದವನು ಕಷ್ಟ ಪಡನು
ಕಣ್ಣೀಲೆ ನೋಡಿ ಜೀವ ಬಿಡನು
ಈಗ ಮಕ್ಕಳಿಲ್ಲದವನು ಮೂರೊಪ್ಪತ್ತೂಟ ಮಾಡಿ
ಮೂರು ಸರ್ತಿ ಮೂರು ಗಂಟೆ ನಿದ್ದೆ ಮಾಡಿ ಎದ್ದೇಳನು
ಹೇಳಿ ಬರ್ಹೋಗಪ್ಪಾ
ಮೂಲಿಗಿದ್ದ ಮುನೀಶ್ವರಾ
ಹೊರ್ಗ ಬಂದವನೇ ಹೊರಾಗ ನಿಂತ್ಗಂಡಾನೋಡು
ಕೇಳಿ ಬರ್ಹೋಗು
ಆಗ ಸಾದರವ್ತಾರಾಗಿ
ಈಗ ಈಬ್ತಿ ಬಡ್ಕೊಂಡು ಬಂದ
ಏನಪಾ ಯಾವ ದೇವ್ರು ಐದಾನಂದ ಈ ಕೋಟ್ನ್ಯಾಗ
ಕೊಲ್ಲುದೇವ್ರು ಮಣ್ಣುದೇವ್ರು ಗಿಡದೇವ್ರು
ನಾವಿಷ್ಟು ಅರಿಶಿಣ ಭಂಡಾರ ಅಡ್ಡಚ್ಚಿದ್ರೆ ದೇವರಾತ್ತ
ಈಗ ಮೂರು ನಾಮಿಟ್ರೆ ಅದೊಂದು ಉದ್ದನ್ನ ದೇವ್ರಾತ್ತಾ
ಏನೋs ಈ ದೇವ್ರು ಯಾವ ಕೊಲ್ಲು ದೇವ್ರು ಮಾತಾಡ್ತೈತ್ಯಾ
ಗಿಡುದೇವ್ರು ಮಾತಾಡ್ತೈತ್ಯಾ ಈ ಮಣ್ಣು ದೇವ್ರು ಮಾತಾಡ್ತ್ಯತ್ಯಾ
ಏನ್ರೀ ನಿನ ಪಾದ ಬಿಡದಿಲ್ರೀ
ನಾನೆಲ್ಲಿಗ್ಯನ್ನ ಕಷ್ಟ ಪಡೀಬೇಕ್ರಿ
ನೋಡಪಾ ನಾನು ಯಜಮಾನ
ಈಗ ನನ ಮಾತು ಕೇಳ್ತಿನಂದ್ರೆ ನಾನ್ಹೇಳ್ತೀನಿ
ಹೇಳ್ದಂಗ ನಡುಕಾಬೇಕು
ಅದೇನ್ರಿ ಹೇಳ್ರಿ
ಈಗ ಹಿಂಗ ಊರು ಬಿಡಬೇಕು
ಮೂರು ಗಾವುದ ಬರಬೇಕು
ಮೂರು ಮಟ ಕಟ್ಬೇಕು ಏಳು ಪಾಂಟಿಗೆ ಬಾವಿ
ಅಂದ್ರೇ
ಏಳ್ಹೇಳು ಹದ್ನಾಲ್ಕುಗಜ
ವಳಾಕ ತೋಡಬೇಕು ನೀವು
ಏಳೇ ಪಾಂಟಿಗಿಡುಬೇಕು
ದೊಡ್ಡ ಮಾವಳಿ ಚಿಕ್ಕಮಾವಳಿ ಹಾಕಬೇಕು
ಹಣ್ಣಿನ್ನವರ ತಿಂದ ಗಿಣೀಗೆ ಗುಬ್ಬೀಗೆ ಮಕ್ಕಳಾದ್ರೆ
ಆತ್ಗ ಕೊಡ್ತಾರಂತೆ
ನಿನ್ಗೆ ಮಕ್ಕಳ್ನ ನಾನೇ ಕೊಟ್ಟು ಬರ್ತಾನಪ್ಪಾ ನಿನ್ನ ಜೀವಕ್ಕ
ಸ್ವಾಮಿ ಅಷ್ಟೊತ್ತಿಗೆಲ್ಲ ನಾನು ಸತ್ರೆ ಹೆಂಗ್‌ ಸ್ವಾಮೀ
ನಾವೇನು ಮಾಡಾನಪಾ ಬ್ಯಾಡಬಿಡು ಮಕ್ಕಳು
ಮೂರೊಪ್ಪತ್ತು ಊಟ ಮಾಡಿ ನಿದ್ದಿ ಮಾಡು ಜೀವ ಬಿಡು
ಈಗಿನ್ನವರ ಮಕ್ಕಳ ಇನ್ನ ನೋಡೀ
ನಿನ್ನ ಜೀವದಲ್ಲಿ ಮಕ್ಕಳ್ನ ನೋಡಂಗಿದ್ರೆ
ಮಕ್ಕಳ್ನೋಡು ಜೀವ ಬಿಡು
ಸ್ವಾಮೀ
ಈ ಭೂಮಿ ಮ್ಯಾಲೆ ಹುಟ್ಟಿ
ಈಗ ಮನೀ ಬಗಲಾಗಿದ್ದೋರು ಏನಂತಾರಾ
ಛೀ ಆಗ ಬಂಜೆರವ್ನ ಮಕ ನೋಡ್ಬೇಕು
ಮುಂಜ್ಯಾಲಿನ್ನ ಚಂಬುತಗಂಡ್ಹೋತಾನ

ಯಮ್ಮಾ ಗೊಡ್ಡೋನಾಗೇ ಇವ್ನೂ ವೈದನಮ್ಮಾ
ಎಷ್ಟು ಕರ್ಮ ಮಾಡಿ ಇವ್ನ ಹುಟ್ಟೈನಮ್ಮಾ
ಎಷ್ಟು ಪಾಪ ಮಾಡಿ ಭೂಮಿಗೆ ಬೆಳೆದನಮ್ಮಾ
ಏಳು ಮಂದಿ ಹೆಂಡ್ರವನೂ ಇವ್ನ ಮಕ್ಕಳಿಲ್ದ ಕರ್ಮದವನು || ತಂದಾನ ||

ಯಾಮ್ಮಾ ಮುಂಜಾನೆದ್ದು ಹಾಳು ಮಕ ನೋಡ್ದೈಂಗ
ಇವ್ನ ಬಂಜೆರವ್ನ ಮಕ ನೋಡ್ದ್ಯಂಗ
ಆಂತ ಲೋಕ ಜನಲೋಕ ಕಿವಿಲೆ ಕೇಳಲಾರೆ
ತಾತಾ ಮಾಡ್ತಿನಿ
ಅಂಬೊತ್ತಿಗೆ
ನೋಡಪಾ ಚಾಂಪುರ್ದ ಯಾರೊ ಬರ್ತಾರ್ನೋಡು
ಅಂದ್ರೆ
ಚಾಂಪುರು ಕಡೀಗೆ ನೋಡೋತ್ತಿಗೆ
ಆದೃಶ್ಯ ಮಾಯವಾಗಿ ಹೋದ
ಓಹೋs ಈತ ಮನಿಸೇನಲ್ಲ
ಈ ಕೋಟ್ನ್ಯಾಗ ದೇವ್ರು ಯಾರೋ ತಾತ
ಯಜಮಾನ್ರೇಳಿದ ಮಾತು ಮರಿಬಾರ್ದು
ನಾನು ಮಾಡಬೇಕಾತೈತೆ ಅಂತ
ಚಾಂಪುರು ಪಟ್ನಕ್ಕ ಬಂದ