ಊರಿಗೆ ಕಾಂಭೋಜರಾಜ ಬರ್ತಿದ್ರೆ ಗೊಲ್ರುದವ್ನು
ಈಗ ಊರಾಗಿದ್ದ ರೈತ ಶಾನಭೋಗ್ರು ಏನಂತಾನ
ಏನಪಾ ಗೌಡ ಸತ್ತೋಗ್ಯಾನೊ ಐದಾನೋ
ಬಾಳಾ ದಿವ್ಸಾತು
ಏಳು ಮಂದಿ ಹೆಂಡ್ರು
ಮಕ್ಕಳಿಲ್ದೆ ಭೂಮಿ ಮ್ಯಾಲಿರಬಾರ್ದು ಅಂತ
ಹೊಳಿದಂಡ್ಯಾಗೆಲ್ಲಿ ಬಿದ್ದು ಹೊಡ್ಕಂಡು ಹೋಗಿ ಬಿಟ್ರೋ
ನನಗೆ ಮಾಡ್ರಿ ನಾನು ಊರು ಗೌಡ್ಕಿ ಮಾಡ್ತೀನಿ
ಅರೆ ನಿನಗೆ ಮಾಡ್ದೆ ನಾಳೆ ಬಂದ
ಈಗ ನಿನ್ನ ಬದ್ಕು ನನ್ನ ಬದ್ಕು ತಗ್ದಾಕ್ತನಾ
ಊರಿಗೆ ಇನ್ನಾ ರಾಜತನ ಮಡೋ ವ್ನು
ಅಂತ ಅಗಿಸ್ಯಾಗ ಕುಂತು ಎಲ್ಲಾ ದೊಡ್ಡ ದೊಡ್ಡ
ಯಜಮಾನ್ರು ಮಾತಾಡ್ತಾರೆ
ಈತ ಹರಕು ದ್ವಾತ್ರಾ ಹರಕು ಅಂಗಿ
ಎರ್ರಿತಾತ ಇದ್ದಂಗಾ

ಹುಚ್ಚನು ಬಂದಂಗ ಮಗಾ ಬರುತನಮ್ಮಾ
ಶರಣಪ್ಪಾ ನಿನಗಾಗಿ ಲೋಕಕ್ಕೆ
ಶರಣು ಅಂತ ಲೋಕೆಲ್ಲ ಕೈ ಮುಗಿತಾರೆ || ತಂದಾನ ||

ಏನ್ರೀ ಹಾಲುಗೋಲ್ರೆ
ಕಾಂಭೊಜರಾಜ ಈಗಲೇ
ನೆನೆಸ್ಗೆಂಡಿವ್ರಿ ನಿಮ್ಮನ್ನ
ನಿನ್ನ ಆವಿಷ್ಯ ಹಿಂದ್ಕಾತು
ಜೀವ ಮುಂದಕ್‌ ಬೆಳೀತೀರಿ ಇನ್ನ ನೀವು
ಎದಕಾಗೆಪ್ಪಾ
ಬರ್ರೀ ನಿಮ್ಮ ತಾಯಿ ನೀರಿಲ್ದ ಅನ್ನಿಲ್ದ
ಮಗಾ ಮಗಾ ಮಗಾ ಅಂತ ನೀಲವೇಣಿಯಮ್ಮ
ಆಗ ಒದ್ಯಾಡ್ತಾಳ್ರಿ ಅಂದ್ರೆ
ಮಗ ಕಾಂಭೋಜರಾಜ ಬಂದ
ಕೂಳು ನೀರು ಬಿಟ್ಟು
ಮಗ ಸೊಸಿನೋರು ಏಳು ಮಂದಿ ಎಲ್ಲಿ ಸತ್ತೋ
ಹೇಳಿದಂಡ್ಯಾಗ ಎಲ್ಲಿ ಬಿದ್ದು ಹೊಡ್ಕಂಡ್ಹೋದ್ರೋ
ಇರುಬಾರ್ದು ಈ ಭೂಮಿ ಮ್ಯಾಲೆ ಗೊಡ್ಡವನಾಗಿ ಅಂತ
ಆಗ ಮಗಾ ಮಗಾ ಅಂತಾಳಪ್ಪ
ಆಗ ಇನ್ನು ಏಳು ಮಂದಿ ಸೊಸೀನೋರು ಪಾದುಕ್ಕುಂತ್ಕಂಡ್ರು
ಮಗ ಬಂದು ತೆಲೆಗೆ ಕುತ್ಕಂಡ
ಯಮ್ಮಾ ನೀಲವೇಣಿಯಮ್ಮ

ಯಮ್ಮಾ ಕಣ್ಣು ತೆರೆದು ಇನ್ನು ನೋಡ್ಯಾಳಮ್ಮಾ
ನೀಲಮ್ಮ ನೋಡ
ಅನ್ನ ನೀರು ಬಿಟ್ಟು ಜೀವಕ್ಕೊಲ್ಲಿ ಬಿಟ್ಟು
ಮಗಾ ಬಂದೆನಂತ ಜಲ್ಮ ಬಿಟ್ಟಳಮ್ಮಾ
ಮಗಾಂತ ಜೀವ ಬಿಟ್ಟು ಬಿಟ್ಳಾಪ್ಪ ಆಕಿ || ತಂದಾನ ||

ಮಗಾಂತ ಜೀವ ಬಿಟ್ಟು ಬಿಟ್ಳು
ಜೀವ ಬಿಟ್ಟಿದ ಮ್ಯಾಲೆ
ಆಗ ಏಳು ಮಂದಿ ಸೊಸೀನೋರು ದುಃಖ ಮಾಡ್ತಾರಾ

ಅತ್ತೇ ಗುಡ್ಡಾ ಇದ್ದಂಗಿದ್ಯಮ್ಮಾ
ಈಗಲಿದ್ದ ನಮಗ್ಯಾರು ಹೇಳ್ತರಮ್ಮ
ಯಜಮಾನ್ರು ನಮಗೆಷ್ಟು ಚೆಂದಯಮ್ಮ
ಆಯಿತಮ್ಮ ಮನಗ್ಹೇಳೋರಿಲ್ಲಮ್ಮ
ಮನೀದಾಗ || ತಂದಾನ ||

ಅಂತ ದುಃಖ ಮಾಡುದ್ರು
ಎಷ್ಟು ದುಃಖ ಮಾಡಿದ್ರು ಬರಾದಿಲ್ರಿ
ಕೂಳು ನೀರು ಬಿಟ್ಟ
ಜೀವಗಿನ್ನ ಕೊಲ್ಲಿ ಬಿಟ್ಟು ಮಗ ಮಗಾಂತ
ಅಂತ ದಡಿಯಮಲ್ಲಿಗಿ ಹೂವ ತಂದು
ಆಗ ನಿವಾಳಿ ಕಟ್ಟಿ
ನಿವಾಳಿದಾಗ ಕುಂದಿರ್ಸಿ
ಬಾಜ ಭಜಂತ್ರಿ ಕೂಟ
ಸುಡುಗಾಡು ರುದ್ರಭೂಮಿಗೆ ತಂದು
ಆಗ ಎದೆ ಮಟ್ಟ ಕುಣಿ ತಗದು
ಮಣ್ಣು ಮಾಡಿ
ಆಗ ಒಂಬತ್ತು ದಿನದಾಗ
ತಾಯಿಗೆ ದಿನ ಮಾಡಿದ್ರು
ಮನೆ ಆದ್ರು ಒಂದೇ ಮಠಾ ಆದ್ರು ಒಂದೇ
ಕಸ ಬಳುಕಂತ್ರಿದ್ರೆ ಛೆಂದ ಇರ್ತೈತಿ
ಕಸ ಬಳೀಲಿದ್ರೆ ಹಗಲೇ ದೆವ್ಗುಳು ಒದ್ದ್ಯಾಡ್ತಾವ
ಆಗ ಇನ್ನು ವಡ್ರು ಕರೆ ಕಳ್ಸಿ
ಕಸಾ ಬಳ್ಸಿ
ಆಗ ಇನ್ನು ಕುರ್ಜಿ ಮ್ಯಾಲೆ ಕುತ್ಗಂಡ
ಆಗ ಮಗ ಬಂದು ಊರ್ಸೇರಿ ಬಿಟ್ಟ