ಚಾಂಪುರದಲ್ಲಿ ಆಗ ಕೇಳಮ್ಮಾ ನಿನ ಪಾದುಗೆ ಶರಣು
ಎಷ್ಟು ಕಷ್ಟ ಪಡ್ದು ಬಂದೆ ತಾಯೀ ನಾ ಜೀವದಲ್ಲಿ
ಮಗನಾ ನಾನೇನು ಮಾಡ್ಲಿ ಮಗನಾ
ಯಮ್ಮಾ ಇಲ್ಲಿಗೆ ಮಕ್ಕಳು ಆಗಿಲ್ಲ
ಯ್ಯಾ ದೇವ್ರು ಕೊಟ್ಟಿಲ್ಲ
ಕೇಳ್ರೇ ಏಳು ಮಂದಿ ಹೆಂಡ್ರುಲಾರಾ ಬರ್ರೀ
ಏನ್ರಿ
ಏನಿಲ್ಲ ಏಳು ಕೊಡಪಾನ ತರೊರಿ
ಏಳು ಪುಟ್ಟಿತಗೋರಿ
ನನಗೆ ಗಡಾರಿ ಚಲುಕಿ ಕೊಡ್ರಿ
ಯದುಕ್ರೀ
ನೀನು ಬಿಸಿಲಿಗ್ಹೋಗಿಲ್ಲ ಭೂತಾಯಿ ಬದುಕು ಮಾಡಿಲ್ಲ
ಕೇಳ್ರೇ ಭೂಮಿ ಮ್ಯಾಲೆಹುಟ್ಟಿ ಭೂಮಿಮ್ಯಾಲೆ ಬೆಳ್ಕಂಡೋರು

ಭೂಮಿ ತಾಯಿನ್ನ ಮಾಡ್ಬೇಕೊ ನಾವಾಗಿ ಲೋಕದಾಗಲೇ
ಕಷ್ಟ ಪಡಿಬೇಕು || ತಂದಾನ ||

ಯದುಕ್ರಿ ಏನಿಲ್ಲಾ ಮಾವ್ಳಿ ಬೀಜನೆಡ್ತಿನಿ
ನೀವು ಒಂದೊಂದು ಬೀಜಕ್ಕೆ
ಒಂದೊಂದು ಕೊಡ ಹಾಕ್ಯಾಂತ ಬರಬೇಕು ನೀವು
ಅಂಬೊತ್ತಿಗೆ ಚಿಕ್ಕೆಣ್ತಿ ಸಿರಿದೇವಿ ನೋಡ್ದಳು
ಏನ್ರಿ ಮುನ್ನೂರು ನಾನ್ನೂರು ಐನ್ನೂರು ಬೀಜ ಹಾಕ್ತಿರಿ
ಮೂರು ದಾರಿಗೆ ಮೂರು ಬೀಜ ಹಾಕ್ಬೇಕಂದ್ರೆ ಸಾಮಾನ್ಯವಲ್ಲ
ನೂರು ಕೊಡೋ ಹೊರೋತ್ತಿಗೆ ಹೊತ್ತು ಮುಣುಗ್ತೈತಿ
ಏನೇ ಅಕ್ಕನವರೇ ಈಗ ಮುಂದ್ಹುಟ್ಟಿದವರು
ನಾನು ಹಿಂದ್ಹುಟ್ಟಿದವಳು ವಂದೇ ತಾಯಿಗ್ಹುಟ್ಟಿ
ವಂದೇ ಗಂಡನ್ನ ಮಾಡಿಕ್ಯಂಡಿವಿ
ಯಮ್ಮಾ ಆರು ಮಂದಿ ಅಕ್ನೋರೆ
ಇದೋ ತೆಲಿಗೆರ್ಡು ಕೋಡ ತಗಂಬೋನಾ
ಹೊತ್ತು ಮುಳುಗ್ಹೋತ್ತಿಗೆ
ಮೂರು ವನಂತ್ರ ಮುಗ್ಸಿ ಬಿಡ್ತಿವಿ
ಯಮ್ಮಾ
ತಾಯೋರ ಮನ್ಯಾಗ ವಂದು ಪುಟ್ಟಿ ಹೊರ್ಲಿಲ್ಲಾ
ವಂದು ಕೊಡ ನೀರು ತರಲಿಲ್ಲಾ
ಗಂಡನ ಮನ್ಯಾಗೂಡ ವಂದು ಪುಟ್ಟಿ ಹೊರ್ಲಿಲ್ಲಾ

ಮಕ್ಕಳಿಲ್ಲದ ಈಗಮ್ಮಾ ನಾವು ಎರ್ಡು ಕೊಡ ಹಿಡಿಬೇಕಾ || ತಂದಾನ ||

ನೋಡಮ್ಮಾ ಮಕ್ಕಳು ಆದ್ರೆ ಆಗ್ಲಿ ಹಾಳ್ಯಾಗನ್ನ ಹೋಗ್ಲಿ
ವಂದು ಕೊಡು ಆದ್ರೆ
ತೆಲೆಮ್ಯಾಲಿನ್ನವತ್ತಾ ಕೂದ್ಲು ಇನ್ನ ತಲೆ ನೈಯವಾಗ
ನಡೂವು ಮ್ಯಾಲಿಟ್ಟಗಂಬ್ತೀವಿ
ನಡುವು ನೆಯ್ದಿಮ್ಯಾಲೆ ತಲೆಮ್ಯಾಲಿಟ್ಟಂಗತೀವಿ
ಸತ್ತಿಗ್ಯಾಂತ ಬಿದ್ದಕಾಂತ ಬಂದು ಹಾಕಿಬಿಡ್ತೀವಿ

ಗಿಡುಗಳು ಬೆಳೆಯನ್ನ ಬೆಳಿಯಲಿ ಇನ್ನ ಒಣಿಗ್ಯನ್ನ ಹೋಗಾಲಿ || ತಂದಾನ ||

ನಾವು ಒಂದೊಂದು ಕೊಡ ತಗಂಬಾದು
ಒಂದೊಂದು ಪುಟ್ಟಿ ಒಂದೊಂದು ಕೊಡ ತಗಂಡ್ರು
ಆಯಮ್ಮಗ ಎರಡು ಕೊಡ ತಗಂಡ್ಳು
ಜೀವದ ಗಂಡ ಕಾಂಭೋರಾಜ ನೋಡ್ದ
ಏನವೇ ಎಲ್ಲಾರಿಗನ್ನ ನೀನು ಹೆಚ್ಚು ಬಂದಿದ್ಯಾ
ಎಲ್ಲಾರಂತೆ ನಡೀಬೇಕು ಅಂದ
ಇಲ್ರೀ ನನ್ನಿಚ್ಚೆ ನನ ಬಲಾ ಸರೆಬಿಡು ಅಂದ
ಆಗ ಎಲ್ದುಕೊಡಾ ಎಲ್ದುಪುಟ್ಟಿ ತಗಂಡ್ಳು
ಈತ ಗಡಾರಿ ಚಲಿಕೆ ತಗಂಡ
ತಾಯಿ ಪಾದ ಮುಗ್ದು

ಮಗಾ ದುಃಖ ಮಾಡ್ತಾ ಮಗಾ ಬರುತಾನಮ್ಮಾ
ಯಮ್ಮಾ ನೆಳ್ಳು ಹೋಯ್ತು ಬಿಸಿಲು ಬಂತೋ ಶಿವನೇ
ಭೂಮಿ ತಾಯಿಗೆ ಬಂತು ನನ್ಗೆ ಭೂಮಿ ಮ್ಯಾಲೆ ಹುಟ್ಟಿದವ್ನಿಗೆ || ತಂದಾನ ||

ಆಗ ಮಗ ಬಾಕ್ಲಿಗೆ ಶರಣು ಮಾಡಿ
ಏಳು ಮಂದಿ ಹೆಂಡ್ರ ಕರ್ಕಂಡು
ಏಳು ಮಂದಿ ಹಿಂದೇ
ಕಾಂಭೋಜರಾಜ ಮುಂದೇ
ಊರಾಗ ಏನಮ್ತಾರ
ಆರುಮಂದಿ ಹಡ್ದೋರು
ಎಂಟು ಮಂದಿ ಹಡ್ದೋರು
ಏನ್ರೀ ವರ್ಷಕ್ಕೊಂದು ವರ್ಷಕ್ಕೊಂದು
ವರ್ಷ ಮ್ಯಾಲೆ ಹಡದೀನ್ರಿ
ಕೋಳಿಮರಿ ಇದ್ದಂಗ ಐದಾವ
ಏನ್ರೀ ನಿನಗೆ ಅನ್ನ ಊಟ ಮಾಡೋರು ಬೇಕಾ
ಹಾಲು ಕುಡಿಯೋರು ಬೇಕಾ
ಏನ್ರೀ ಮಕ್ಕಳಿಲ್ದೋರು
ಮಕ್ಕಳು ಸಲುವಿಕೆಂಡು ಲೋಕದಾಗಿಲ್ಲೇನ್ರಿ
ಈಗ ನಮ್ಮ ಮಗನ ಕೋಡ್ತೀವಿ ಸಲುವಿಕೋರ್ರೀ
ನೋಡಮ್ಮಾ
ಯಾರು ಮಕ್ಕಳು ಅವ್ರಿಗೆ ಚೆಂದ
ಕುರ್ಡಾಗ್ಲಿ ಕುಂಟಾಗ್ಲಿ
ನನ್ನ ಹೊಟ್ಟ್ಯಾಗ ಹುಟ್ಬೇಕು
ನನ್ನ ಮನೀಗೆ ದೀಪ ಬೇಲಕಾಗ್ಬೇಕು
ಹುಟ್ಟಿದ ಮುಕ್ಕಟ್‌ ಬರಾದು
ಸಲುವೋದೆ ಹಿಂದಲೇ ಬರೋದು
ನೀನು ಹಾಲು ತುಪ್ಪದಲಿ ಜೋಪಾನ ಮಾಡು
ಏನಮ್ತಾರ
ಯಾರು ಮಗಪ್ಪಾ
ಆಗ ಕುಲದಲ್ಲಿ ನಾಯ್ಕರ ಮಗಪ್ಪಾ
ಯಾರು ಸಲುವಿಕ್ಯಂಡಾರ
ಹಾಲು ಕಿಷ್ಣಗೊಲ್ರವನು ಸಲುವಿಕ್ಯಂಡಾನ
ಸಲುವಿದ್ದು ಹಿಂದೇಲೆ ಬರೋದು
ಹುಟ್ಟಿದ್ದೆ ಮುಕ್ಕಟ್ಟ ಬರೋದು
ಆತ
ಆಗ ವಲ್ಲಿವಮ್ಮಾ ಆಮ್ತಾರ
ಆಗ ಚಾಂಪುರ ಪಟ್ಣ ಬಿಟ್ಟು

ಊರು ಬಿಟ್ಟು ಮೂರು ಗಾವುದ ಬಂದಾನ ಮಗಾ
ಮೂರೇ ದಾರೆ ಅಲ್ಲಿ ಕಲ್ತವಮ್ಮಾ
ಮಗ ಬಂದು ತಾಳಿನ ಗಿಡ ಕೆಳಗೆ ಕುಂತ
ಮೂರು ದಾಈತಲ್ಲಿ ತಾಳನಗಿಡ || ತಂದಾನ ||

ಕುಂತ್ಗಂಡ
ಏಳು ಮಂದಿ ಹೆಂಡ್ರು ಬಂದ್ರು
ಏನ್ರೀ
ತಾಳಿನ ಗಿಡ್ದ ಕೆಳಾಗ ಕುಂತೀಯಾ ಅಂದ್ರು
ಕೇಳ್ರೇ ಇಲ್ಲಿ ಮೂರು ದಾರಿ ಕಲ್ತಾವ
ತಿರುಪತಿಗ್ಹೋಗದೊಂದು
ಕಾಶಿ ದೇವರಿಗೊಂದು ದಾರಿ
ಕೋಟಿ ನಿಧಿಗ್ಹೋಗೋದು ವಂದ್‌ ದಾರಿ
ಈ ಮೂರು ದಾರಿ ಕಲಿತಲ್ಲಿ
ಏನ್‌ ಮಾಡಾನಾ ಅಂತ ಹೆಂಡ್ರು ಕೇಳಿದ್ರು
ಸಿಕ್ಕೇಣ್ತೆ ಬಾಳಾ ಮಾತೋಡೋದು
ಆರು ಮಂದಿ ಅಕ್ನೋರು
ಆಯಮ್ಮನ ಮಾತದಲ್ಲೇ ನಡ್ಯೋದು
ಏನಿಲ್ರೀ ಮುಂಚಾಗಿ ತಾಳನ ಗರಿ ಕಡ್ರೀ
ತಾಳನ ಗುಡಿಸ್ಲು ಹಾಕ್ಯಂಬೋನು ಅಂದ್ಳು
ಗಿಡ ಏರಿ ತಾಳನ ಗರಿ ಕಡ್ದ
ತಾಳನ ಗುಡಿಸಲ್ಹಾಕ್ಯಂಡ್ರು
ಇನ್ನೇನ್‌ ಮಾಡಾನ
ನೋಡ್ರೀ
ಆಗ ಇನ್ನವರ್ತಾ ಬಾಯಿ ತೋಡ್ಸಿಬೇಕು
ನೀರಿಲ್ದ ಜಲ್ಮ ಉಳ್ಯಂಗಿಲ್ರೀ
ಆಗ ಎಂಟು ಗಜ ಅಗಲಾಕಿಬಿಟ್ಟ
ಆಗಿನ್ನವರ ಒಂಬತ್ತು ಗಜ ಉದ್ದಾಕಿದ
ಕೇಳ್ರೇ
ಈ ಗಡಾರ್ಲಿದ್ದ ಮನಿಸೇನುದ್ದ ಮನಿಸೇನ್‌ದಪ್ಪ ಗಡ್ಡೆ ಎಬಿಸ್ಯಿಲಾ
ಚಲಿಕೇಲಿ ವಡೆ ಬಡ್ದು ನಿಮ್ಮ ಪುಟ್ಟಗಿ ಹಾಕಲಾ
ಅಂಬೊತ್ತಿಗೆ
ಏನ್ರಕ್ಕಾ ಆರು ಮಂದಿಲೋರೆ
ಏನಮ್ಮಾ ತಂಗಿ
ಏನಿಲ್ಲಾ ಈಗಕ್ಕ ನೀವು ಚೆಲಿಕೆ ತಗೋರ್ರಿ
ಓಬ್ರು
ಆಗ ಪುಟ್ಟಿಗ್ಯಾಕ್ರೀ ಹೊಡೇಬೊಡ್ದು ಗಡ್ಡೇನಾ
ನಾವು ಗಡ್ಡಿ ಹಾಕ್ತೀವಿ
ಏಯಮ್ಮಾ ಗಂಡುಸ್ರ ಚೆಲಿಕ್ಹಿಡುಕಂಡು
ಆರು ಪುಟ್ಟೀಗ್ಹಾಕ್ಬೇಕಂದ್ರೆ ನನ್ಗೆ ಸಾದ್ಯವಿಲ್ಲ
ಗಡ್ಡೇವಡೆ ಬಡ್ಡು
ಯಮ್ಮಾ ಪುಟ್ಟ್ಯಾದ್ರೆ ಸತ್ತಿಗ್ಯಾಂತ ಬಿದ್ದಾಡಿಕ್ಯಾಂತ ಗಡ್ಡೀಗ್ಹೋರ್ತಿವಿ
ಸರೆ ಬಿಡ ಅಕ್ಕಲಾರೇ
ಏನ್ರೀ ಎಡುಗೈ ಹೆಣ್ಸು
ಬಲಗೈ ಗಣ್ಸು

ನಿನಕೈಗಿರೋದಯ್ಯಾ ನನ ಕೈಗ್ಕೊಡು ಚೆಲುಕ್ಕಯ್ಯಾ
ಥೋಯ್ಚಲುಕ್ಕಾಗಿ ನೋಡಮ್ಮಾ ಇನ್ನ ಕೈಲಿವಿಡದಾಳ
ಹೇಯ್ಗಡ್ಹಾರಿವಿಡುದಾನೆ ಭೂದೇವ್ಯಂತ ವಾಕ್ಯಾನಾ
ಹೇಯ್ಗೆಡ್ಡೆ ಮ್ಯಾಕೆ ಎಬಿಸ್ಯಾನ ತಾ ಮುನಿಸೇನು ಉದ್ದಮ್ಮಾ
ಮಣ್ಣುಗ್ವಾಡೇ || ತಂದಾನ ||

ಆರು ಮಂದಿ ಪುಟ್ಟಿಗ್ಯಾಕಿರೆ
ತೆಲಿಮ್ಯಾಲೆ ಹೊತ್ತಿರೆ
ಆಗ ಗಡ್ಡಿಗ್ಹಾಕದು

ಒಂದು ತಿಂಗಳೂ ಇನ್ನು ಮಾಡ್ಯಾರಮ್ಮಾ
ಕೈಯಾಗಲ್ಲಾ ಶರ್ಮ ಸಲ್ದವಮ್ಮಾ
ಯಮ್ಮಾ ಬಗ್ಗಿದ ನಡುವು ಹಿಡ್ಕಂಡ್ಹೋಗ್ಯವಮ್ಮಾ
ನೆಟ್ಟಗ ಇನ್ನ ನಿಂದ್ರಕ ಬರುವಲ್ಲುದೇ
ಯಮ್ಮಾ ಆರು ಮಂದಿ ಅಕ್ನೋರಿಗ್ಯಾರಿಗೋ
ತೆಲೆ ಕೂದಲೆಲ್ಲ ಉದುರಿ ಬಿದ್ದವಮ್ಮಾ
ಜಲ್ಮಕ್ಕೆ ಅವ್ರಿಗೆ || ತಂದಾನ ||

ತಲೀ ಮ್ಯಾಲೆ ಪುಟ್ಟಿ ಇಟ್ರೆ ಭಗ್ಗಂತೈತಿ
ಯಮ್ಮಾ

ಮಕ್ಕಳಿಲ್ಲಿದಿದ್ರೆ ಹಾಳಾಗ್ಹೋಗಲಮ್ಮಾ
ಮಕ್ಕಳಿಲ್ದೆ ಇಷ್ಟು ಕಷ್ಟ ಪಡಿಬೇಕೆ
ಮಕ್ಕುಳಾದರೆ ಒಂದೂ ಕಷ್ಟ ಮಕ್ಕಳು ಇಲ್ದಿದ್ರೆ ಒಂದೇ
ಕಷ್ಟ ಜೀವಗ ಇಷ್ಟು ಕೊಟ್ಟನಮ್ಮಾ ನಮ್ಮ ಜಲ್ಮಗ ದೇವರು || ತಂದಾನ ||

ಅಂತ ದುಃಖ ಮಾಡಿಕ್ಯಾಂತ ಗಡ್ಡೀಗ್ಯಾಕ್ತಾರ
ಐದ್‌ ತಿಂಗಳಿಗೆ
ಆಗ ಏಳೇಳು ಹದ್ನಾಲ್ಕು ಮನಿಸೇರು ವಳುಕ್ಕ ತೋಡಿಬಿಟ್ರು
ಆಗ ತೋಡೋ ಹೊತ್ತಿಗೆ ಭೂಮಿ ಒಳಗೇ
ನೀರು ಭಗ್ಗನ ಉಕ್ಕೇರಿಬುಟ್ಟು
ಆಗ ಬಾಯಿಗಡ್ಡೆ ತುಂಬಿಕ್ಯಂತು
ಏಳೇ ಪಾಂಟಿಗಿಟ್ರು
ಏಳು ಪಾಂಟಿಗಿಟ್ಟ ಮ್ಯಾಲೆ
ಹಿತ್ತಾಳಿಮಟಾ ರಾಗಿಮಟಾ ಬೆಳ್ಳಿಮಟ
ಆಗ ಇನ್ನ ಬೆಳ್ಳಿ ಬಸವಣ್ಣನ್ನ ಮಾಡಿ
ಮೂರುಮಟಾ ಮುಂದೆ ನಿಂದ್ರಿಸಿದ
ಆಗ ಮೊಣಕಾಲಷ್ಟು ಕುಣಿ ತೋಡಿ
ದೊಡ್ಡ ಮಾವಳಿ ಚಿಕ್ಕ ಮಾವಳಿ ಚೆರ್ಗಿ ಮಾವಳಿ
ಮೂರುಬೀಜ ಕೈಮುಗಿದು ಭೂಮಿ ಮ್ಯಾಲೆ ನಾಟಿದ
ಕೇಳ್ರೇ ನೀರು ತಂದ್ಹಾಕ್ರಿ
ಈಗ ಮೊಣಕಾಲಷ್ಟು ಕುಣಿ ಬಡಿಕ್ಯಾಂತ
ನಾನು ಬೀಜ ನಾಟಿಕ್ಯಾಂತ ಹೋಗ್ತಿನಿ
ವಂದೊಂದು ಬೀಜ್ಕ ವಂದೊಂದು ಕೊಡ ನೀರ್ಹಾಕ್ಬೇಕು ನೀವು
ವಂದೊಂದು ಬೀಜ
ಐನೂರು ಮುನ್ನೂರು ಬೀಜ ತಂದೀನಿ
ನನ್ನೂರು ಬೀಜ
ಅಷ್ಟಾಗಲ್ರೀ
ಆರುಮಂದಿ ಆರು ಕೊಡಾ ತಗಂಡ್ರು
ಚಿಕ್ಕಾಯಮ್ಮಾ ಕೈಮುಗಿದು ಎರ್ಡು ಕೊಡಾ ತಗಂಡ್ಳು

ಯಮ್ಮಾ ಅಕ್ಕಾನೋರು ತಂಗಿವಿನ್ನೋರ ಬಿಟ್ಟುವಾಗಿ ಇನ್ನು ಬರ್ತಾರ
ಬಡಬಡಬಡ ಬಾಯಿಗ ಬಂದಳಮ್ಮಾ
ಸಿರಿದೇವಿ ಚಿಕ್ಕಮ್ಮಾ || ತಂದಾನ ||

ಬಾಯ್ಯಾಗ ಇಳದ್ಳು
ಶರಣೇ ತಾಯಿ ಗಂಗದೇವಿ
ಈಗಿನ್ನವರ ನೀರು ಹೋರೋ ಕಾಲ ಬಂದೈತೆ
ಹೋರ್ತಿವಮ್ಮಾ ದೇವಿ
ಅಂತ ಎರ್ಡು ಕೊಡ ತುಂಬಿಕ್ಯಂಡ್ಳು
ತೆಲೆಮ್ಯಾಲೊಂದ ಬಗಲಾಗೊಂದು ಪಾಂಟಿಗೇರಿದ್ಮೇಲೆ

ಆರು ಮಂದಿ ಅಕ್ಕನೋರು ಬರುತರಾ ತಾವೇ ಬಾಯಿ ಗಡ್ಡಿಗೆವಾಗೀ
ತಾಯಿ ವಂದು ಬಡ ಬಡ ತಂದುಶರಣುಸ್ವಾಮಿ ಭೂದೇವಿತಿ ನಿನಗೆ
ಮ್ಯಾಲೆ ಇರೊ ಪರಮಾತ್ಮ ಶರಣಪ್ಪಾ
ನಮ್ಕಷ್ಟಾ ನೋಡಪ್ಪಾ || ತಂದಾನ ||

ಆಗ ಗಿಡುಗೆ ಎರ್ಡುಕೊಡ ಹಾಕಿದುರು
ಮತ್ತೆ ಎರ್ಡು ಕೊಡಾ ತಂಗಡು
ಬಾಯಿತಲ್ಲಿ ಬರ್ಹೋತ್ತಿಗೆ ಬಾಯಿಗಡ್ಡೆ ಏರ್ತಾರ
ಆಗ ಅವ್ರು ವಂದೊಂದು ಕೊಡ ವಂದೊಂದು ಗಿಡಗ್ಹಾಕಿದ್ರೆ
ಒಬ್ಬಾಕೆ ನಾಕ್‌ಗಿಡ್ಕ ಹಾಕ್ತಾಳೆ
ಒಂದ್ಹೊತ್ತಾಕಿ ತಿರುಗಿನವರತಾ ಅಕ್ಕನೋರು ಕೂಡ ಬರ್ತಾಳಪ್ಪ
ಆಗ ತೆಲ್ಯಾಗ ಕೂದುಲೆಲ್ಲ ಉದುರ್ಹೋದುವು
ತೆಲೆಮ್ಯಾಲೆನ್ನವರ್ತಾವಾಗಿ ಕೊಡ ಇಟ್ರೆ ಭಗ್ ಅಂತೈತೆ
ಈಗಿನ್ನ ಕಾಂಭೋಜರಾಜ ಗಂಡ ಜೀವದವನ
ಮಕದ ಮ್ಯಾಲೆನ ನೀರು ಭೂ ತಾಯಿಗೆ ಬಿದ್ದುಬಿಟ್ಟು
ಭೂಮಿ ಒಳಗೆ ಬೀಜಣ್ಣಾ ಹೊರ್ಗ ಹೊಂಟು ಬಂದೈತೋ || ತಂದಾನ ||

ವಂದೆಲೆ ಎಲ್ಡೆಲೆ ಕಾಣ್ತೈತಿ
ವಂದೆಲೆ ಎಲ್ಡೆಲೆ ಕಾಣ್ತಿದ್ರೆ

ಒಂದೇ ತಿಂಗಳು ಇನ್ನು ಆಯಿತಮ್ಮ
ಮೊಣಕಾಲಷ್ಟು ಗಿಡಾವಾಗೆವಮ್ಮ
ಆಗ ಎರ್ಡು ತಿಂಗಳ್ಗೆ ನೋಡಮ್ಮಾ
ಮಣಿಸೇರೆತ್ತರ ಇನ್ನು ಬೆಳೆದವಲ್ಲೆ
s ಐದೇ ತಿಂಗಳದ್ದು ಇನ್ನುವಾದೆವಮ್ಮಾ
ಐದು ಮಣಿಸೆರೆತ್ರಾಗಿ ಬೆಳೆದವಮ್ಮಾ
ಗಿಡುಗಳು || ತಂದಾನ ||

ಐದು ತಿಂಗಳಿಗ ಐದು ಮಣಿಸೆರೆತ್ತರ
ಗಿಡುಗಳು ಬೆಳೆದು ಬಿಟ್ಟು

ಉತ್ತರಗಾಳಿ ದಕ್ಷಿಣ ಮಳಿ ಏಕ ಕಲೀತು
ಸುರಿತೋ ಸುರಿತು ಮಳಿರಾಜ
ಗಿಡದಾಗಲಿದ್ದ ಇನ್ನ ಸುಳ್ಳಲಿದ್ದ ಗಿಡ ಬೊಡ್ಡಿಗೆ ನೀರಿಳಿದ್ವು

ಮಾವಳಿಗಿಡ ದೊಡ್ಡ ಅಗಲವಾಯ್ತೋ
ಆಗ ಗಿಡ ಮ್ಯಾಲೆ ಮಗ್ಗಿ ಹುಟ್ಟಿತಮ್ಮಾ || ತಂದಾನ ||

ಆಗಿನವರತಾ ಮಗ್ಗಿ ಹುಟ್ಟಿತು
ಮಗ್ಗಿ ಹುಟ್ಟಿದ ಮ್ಯಾಲೆ
ಮೂರು ಮಠ ಕಟ್ಟಿದ ಮ್ಯಾಲೆ
ಕೇಳ್ರೇ ಮುದ್ಯೋರಾಗಿ ಬಿಟ್ವಿ
ಬಟ್ಟೆಗೊಳೆಲ್ಲ ಹದ್ರದ್ದೋಗಿ ಬಿಟ್ಟು
ಈಗ ಬ್ಯಾಸಾಯ ನೀನು ಸಾಯಾ ಅಂತ
ಈಗ ಊರಾಗ ಏನಾಯ್ತು
ಹೋಗೋನ್ನಡ್ರೇ
ಪೂಜ್ಯಾ ಮಾಡ್ರಿ ಅಂದ್ರ
ಅಕ್ಕಿ ಬ್ಯಾಳಿ ತೆಪ್ಪಾದ್ದಾಗ ಅಡ್ಗಿ ಮಾಡಿ
ಎಡಿ ಹಾಕಾಕ
ಆರು ಮಂದಿ ಅಕ್ಕನೋರು
ಹೆಂಡೆ ತಂದು ಇನ್ನ ಗುಡಿ ಸಾರ್ಸಿದ್ರು
ಮೂರು ಮಠ
ಕುಳ್ಳು ಮ್ಯಾಲೆ ಲೋಬಾನ ಹಾಕಿದ್ರು
ಎರ್ಡು ಕೈ ಜೋಡ್ಸಿ ಶರಣ ಮಾಡಿದ್ರು
ಈ ತಾಯಿ ಸಿರಿದೇವ್ಯಂಬಾಕಿ
ಆಗ ಮುತ್ತಿನ ಸೆರಿಗಿಲಿ ಆಗಿನ್ನ ಕಸ ಬಳಿದು
ಇದೋ ಎಡಗೈಯ್ಯಲ್ಲಿ ಲೋಬಾನ ಹಾಕಿ
ಈಗ ಬಲಗೈಲ್ಲಿ ಸೆರಗೊಡ್ಡಿದ್ಳು
ಶರಣು ಸ್ವಾಮಿ ಅಂತ ಕೈ ಮುಗಿದು
ಆಗ ಊಟ ಮಾಡಿಕೊಂಡು
ಏಳು ಮಂದಿ ಹೆಂಡ್ರುನು ಕರಕಂಡು
ಮೂರು ಮಟ ಮೂರು ವನಂತ್ರ ಬಿಡುವನು

ಆಗ ಚಾಂಪೂರಿಗೇ ಇನ್ನು ಬರುತನಮ್ಮಾ
ಆಗ ಬಂದ ಕಾಂಭೋಜಗೌಡ ಯಮ್ಮಾ
ಊರು ಮಾಡೋ ಗೌಡ || ತಂದಾನ ||