ಏಯ್‌ ಏಳು ಮಂದಿ ಹೆಂಡ್ರುಲಾರ
ಈಗ ಇನ್ನು ತಿಂದ ಗಿಣಿಗೆ
ಆಗಿನ್ನವರ ಕೋಗಿಲೆಗೆ ಮಕ್ಕುಳಾಗ್ಯಾವ
ನಮಗೆ ಮಕ್ಕಳಾಗಿಲ್ಲ ಇನ್ನು
ಮುದ್ಯಾರಾಗಿ ಬಿಟ್ವಿ
ಆಗ ಹನ್ನೆರಡ ವರ್ಷ ಮಿಕ್ಕಿ ಮೀರಿ ಬಿಡ್ತು
ಪಟ್ಟ ಮೀರಿದ ಮ್ಯಾಲೆ ಮಕ್ಕುಳಾಗಾಂಗಿಲ್ಲ
ಮುದ್ಯೋರು ಹಡ್ಯಂಗಿಲ್ಲ
ಇಗೋ ಈ ಭೂಮಿ ಮ್ಯಾಲ ಗೊಡ್ಡವನು
ಅನ್ನಿಸಿಗ್ಯಂಲಾರ್ದಂಗ
ಎಲ್ಲಾರು ಬಾಯಾಗ ನೆನಿಲಾರದಂಗಾ
ನಾವು ಇಷಾ ಕುಡ್ದು
ಬೆಂಕ್ಯಾಗ ಬಿದ್ದು
ಬೂದ್ಯಾಗಿ ಲೋಕ ಇಲ್ದಂಗ ಹೋಗಾನ
ಅಂತ ಆಗ ಬಕೀಟು ತಗಂಡು
ಪಾದರಸ ಇಸಾ ತಗಂಡು
ಆಗ ಬಂದು ಬಿಟ್ಟ
ಬಂದು ಮೂರು ಮಠ ಮುಂದೆ
ತ್ವಾಟದಾಗ ಇನ್ನ
ಖಣಾ ಅಡ್ಡಾಲಿ ಕುಣೀ ತೋಡಿ
ಮಾವುಳಿ ಚೆಕ್ಕಿ ಹಾಕಿ ಆಗ ಉರ್ಯಚ್ಚಿ
ಈಗ ಇಸಾ ಕಲಿಸಿ
ಕುಡ್ಯೋ ಟೇಮ್ನಾಗ
ಮೂರೋ ಮೇಘದಾಗ ಯಾರೋ
ಗೋಪಿನ ಸಲ್ವಿದೋರು
ಆಗ ಮುನೀಸ್ವರ ನಾಗೀಸ್ವರ ದೇವೀಸ್ವರ
ಆಗ ಮೂವಾರು ನೋಡಿ ಬುಟ್ರು
ಏನಪ್ಪಾ ಈಗ ಕುಲದಲ್ಲಾಗಿ
ಹಾಗಿದ್ದ ಗಿಡುಗುಳುಗೇ ಮಕ್ಕಳು
ಮರಿಗುಳಾದ್ವು
ಆತ ಏಳು ಮಂದಿ ಹೆಂಡ್ರು ಸತ್ತೋದ್ರೆ
ನಮಗೆ ಎಷ್ಟು ಕರ್ಮ
ಏನಪ್ಪಾ ಮಕ್ಕುಳು ಕೊಟ್ಟು ಜೀವ ಉಳ್ಸಿ ಬಾ
ಏನೋ ಸಾಂಬನೆ
ಅಂದ್ರೆ ಪರಮಾತ್ಮನು ಹೇಳಿದ್ದಿಗೆ
ವಿಷ್ಣ ನೋಡ್ದಾ
ಹೇ ಪರಮಾತ್ಮ
ನಮ್ಮ ಗೊಲ್ರು ಹಾಲು ಗೊಲ್ರು
ನಾ ವಿಷ್ಣು ಹೋಗಿ ನಮ್ಮ ಮುನಿಯವ್ರಿಗೆ ನಾನು ಕೊಟ್ಟು ಬರ್ತಿನಿ
ನಿಮ್ಮ ಶಿವ ಹ್ಯಂಗ್‌ ಹೋತಾನಾ
ಖಳ್ಸು ನೋಡಾನಾ ಅಂದ್ರು
ಏನಪ್ಪಾ ಶಿವಾ ನೀನು ಬ್ಯಾಡಂತಿ
ಇವ್ನು ವಿಷ್ಣುವಂತೆ
ಅವ್ರು ಗೊಲ್ರಂತೆ
ಅವ್ರು ಮನಿ ದೇವ್ರಂತೆ
ಹೋಗಿ ಅವ್ನು ಕೊಟ್ಟು ಬರ್ತಾನಂತೆ
ಆಗಲ್ಯಪ್ಪಾ
ನೀನು ಏಷಾ ಹಾಕ್ಯಂಡು ಬಾ
ಹಾಂಗಂದ್ರೆ ದೀಪ ಗರುಡ ಬಲಗೈಲ್ಹಿಡುಕಂಡ
ಜೋಳಿಗೆ ಜಾಗಟೆ ಎಡಗೈಲ್ಹಿಡ್ಕಂಡ
ಮೂರ್ನಾಮಿಟ್ಕಂಡ
ಆಗ ಇಟ್ಕಂಡು
ಏನು ಮಾಡಿಬಿಟ್ಟಾ ತಾ ಜೀವಕ್ಕಾಗಿ
ಈಗ್ತಾವ ಬರುತಾನಾ
ಈಗ ಹ್ಯಾಂಗಾಗಿ ಹೋಗಿ ಬರ್ಲಿ
ಆಗ ಫಲಕೊಡ್ರಿ ಪರುಮಾತ್ಮನೆ
ಕೋಟಿ ಲಕ್ಷ ಜೀವ ಕೊಡೋನು ಬಿಡೋನು ನೀನು
ರಾಶಿ ಬಿದ್ದಾಂಗ ಬಿದ್ದಾವ
ಈಗ ಜ್ವಾಳಾ ಇನ್ನಾ ರಾಶಿ
ಕಣಾ ಮಾಡ್ದಾಂಗ
ಆ ಫಲದಾಗ ಕೈಯಿಟ್ಟ ಪರಮಾತ್ಮೆ
ಆಗ ಹಿಡುಕಿ ಹಿಡಕಂಡ್ರೆ
ಆರು ಕಜ್ಜುರಿ ಬಂದಾವ
ಏಳು ಕಜ್ಜುರಿ ಬಂದಿಲ್ಲ
ನೋಡಪಾ ನನ ಕೈಗೆ ಎಷ್ಟು
ಬರ್ತಾವೋ ಅಷ್ಟೇ ಕೊಡಾದು
ಹೆಚ್ಚು ಕೊಡಂಗಿಲ್ಲಂತಾ

ಆಗ ಒಂದು ನೋಡಪ್ಪಾ ನೀನು ಕೊಟ್ಟುಬಾರೋ ಜಲ್ಮಾಕೆ || ತಂದಾನ ||

ಏನ್ರೀ ಕೊಟ್ಟವರೇನು ಕೈಮುಗಿತಾರ
ಕೊಡದಿದ್ರೆ ಸೆರಗೊಡ್ಡಿ
ಶರಣು ಮಾಡಿ ಬೈಯ್ಯತಾರ
ಏನ್ರಿ ಕೊಟ್ಟ ಮ್ಯಾಲ ಎಲ್ಲಾರಿಗೂ ಕೊಡಬೇಕು
ಈಗ ಅರ್ಧ ಕಣ್ಣಾಗ ಸುಣ್ಣ
ಅರ್ಧ ಕಣ್ಣಾಗ ಬೆಣ್ಣಿಟ್ರ ಆಗದಿಲ್ರಿ
ಓಹೋ ಅಪ್ಪಾ
ಮಕ್ಕುಳ್ಹುಟ್ರೆ ಏನು ಗುಣ ಹುಟ್ಟೈತೋ
ಕೊಟ್ಟು ನೋಡುಬೇಕು ಲೋಕುದಾಗ
ಆಗ ಆರು ಮಂದಿಗೇ ಕೊಡು
ಈಗ ಮುಂಚ್ಯಾಗ ಚಿಕ್ಕಾಕಿ ಸಿರಿದೇವಿನ ಕರಿ
ಎರ್ಡು ಕೊಡ ನೀರು ಹೊರ್ದಾಕಿ
ಮುತ್ತಿನ ಸೆರಗಿಲಿ ಕಸ ಬಳಿದಾಕಿ
ಎಡಗೈಲಿ ಲೋಬಾನ್ಹಾಕಿ
ಬಲಗೈಲಿ ಸೆರಗೊಡ್ಡಿದಾಕಿ
ಆಯಮ್ಮನ ಕರಿಯ ಆಯಮ್ಮ ಬರಾದಿಲ್ಲ
ಮುಂದ್ಹುಟ್ಟದೋರು ಮುಂದಿದ್ರೆ
ಹಿಂದ್ಹುಟ್ಟದೋಳು ಬರಂಗಿಲ್ಲ
ಇಗೋ ಜೀವದಲ್ಲಿ ಆರು ಮಂದಿಗೆ ಕೊಡು
ಆರು ಮಂದಿಗೆ ಕೊಟ್ಟು ಮ್ಯಾಲೆ
ಹುಟ್ಟಿದ ಮೂರು ಗಂಟೆ ಹುಡುಗ್ರುನ
ಮಕ್ಕುಳಿಲ್ದಾಕಿ ಜ್ವಾಪಾನ ಮಾಡುಬೇಕು
ಕೈಗ ಕೊಡಂತ ಗಂಡಗ್ಹೇಳು
ಮೂರು ಗಂಟೆ ಹುಡುಗ್ರು ಬೆಕ್ಕಷ್ಟಿರತಾರ
ಕೈಗ ಕೊಟ್ರೆ ಜ್ವಾಪಾನ ಮಾಡ್ತಾಳಾ
ಮಾಡಿದ ಮ್ಯಾಲೆ ಆಗಿನವರ ಕಣ್ಣೀಲಿ ನೋಡಬೇಕು
ಏನೇನು ಮಾಡ್ತಾಳಾ
ಓಹೋ ಆಂಗೇ ಆಗಿಲ್ರಿ ಅಂತ
ಹೋಗಿ ಬರ್ತೀನ್ರಿ ಸಾಂಬನೆ
ಆಗ ಪರಮಾತ್ಮನೆ ಹೋಗಿ ಬಾರಪ್ಪಾ ಮಾವಿಷ್ಣು

ಅದೃಷ್ಟವೇ ಮಾಯಾವಾಗ್ಯಾನಮ್ಮಾ
ದಾಸಪ್ಪಾಗಿ ಇನ್ನು ಬಂದಾನಮ್ಮಾ
ಭೂಮಿ ಮ್ಯಾಲೆ ಲೋಕ ಬಂದಾನಮ್ಮಾ || ತಂದಾನ ||

ಆಗ ಗೋವಿಂದಾಂತ ಜಾಗಟೆ ಬಡದ
ಏನಪ್ಪಾ
ಆಗ ತಾತನವರು ಆಡಿವ್ಯಾಗ ಸಾಯೋಕಾಲಕ್ಕೆ
ಇಷಾ ಕುಡ್ದು ಜಲ್ಮಾ ಕಳೀವಾಗ ಯಾಕ ಬಂದ್ರಿ
ಅಯ್ಯೋ ನೀವು ದಾನ ಗೊಲ್ರು
ಹಾಲು ಗೊಲ್ರು
ಹಾಲು ದಾನಾ ಮಾಡೋರು
ಏನಪ್ಪಾ ಇಲ್ಲಾ ಅಂಬೊಂಗಿಲ್ಲ
ಈಗ ಬೆಂಕ್ಯಾಗ ಬಿದ್ದಾಗ ಹಾಂಗೆ ಪೂಜೆ ಮ್ಯಾಕ ಕೊಡ್ತಿನಿ
ನಿನ್ನ ಜೀವಕ್ಕ
ನನಗೇನನ್ನಾ ದಾನಾ ಮಾಡಿ
ಜೀವ ಕಳಿಯಪ್ಪಾ
ನಿನ್ನ ಜೀವಕ್ಕೆ ಕೊಡ್ತಿನಿ
ಸ್ವಾಮೀ ಈ ಕಾಲ್ದವರಾದ್ರೆ
ಹೋಗೋ ಜೀವ ಬಿಡುವಾಗ ದಾನ ಮಾಡಬೇಕಂತಿವ್ನಿಗೆ
ಯಾವ ದಾನ ಮಾಡಾದಿಲ್ಲ ಜೀವ ಹೋಗುವಾಗ
ನಿನಗೇನು ದಾನ ಮಾಡ್ಲಿ ಹೋಗಂತಿದ್ರು
ನೋಡಿದಾ
ಹಾಲು ಗೊಲ್ರ ಹಾಲು ದಾನಾ ಮಾಡೋರು
ಧರ್ಮ ಕೇಳಾಕೆ ಬಂದಾಗ ಜೀವಕ್ಕೆ ದಾನಾ ಕೊಟ್ಟು
ಜೀವ ಬಿಟ್ರೆ ಜೀವಕ್ಕೆ ನಮಗೆ ಧರ್ಮಾಗಿ ನಡೀತೈತಿ
ಸ್ವಾಮೀ
ನನಗೇನಿಲ್ಲ ಸ್ವಾಮಿ
ಕಿರಿಬೆರಳಿಗ ಬಂಗಾರದುಂಗ್ರಾ ತಂದೀನಷ್ಟೆ
ಜೀವ ಬಿಡಬೇಕಂತ
ಇಷಾ ಕುಡ್ದು
ಬೆಂಕ್ಯಾಗ ಬಿದ್ದು ಬೂದ್ಯಾಗನಂತ
ಧರ್ಮಕ್ಕೆ ಏನ್ರೀ ಈಗಿನವ್ರತಾವಾಗಿ ಆಗಿನ ಸತ್ತೋಗೋ ಕಾಲ ಟೇಮಾಗೈತ್ರಿ
ಸರಿಯಪ್ಪ
ಅಷ್ಟೆ ಆಗಲಿ ನಿನಗೆ ತಿಳಿದುದ್ದು ಕೊಡಪ್ಪಾ
ಮುತ್ತಿನ ಸೆರಿಗಿನಾಗ ಸೆರಗೊಡ್ಡೇರಪ್ಪಾ
ಏಳು ಮಂದಿ ಹೆಂಡ್ರು ಬಂದು
ನಿನ್ನ ಗುಣಾ ನೋಡ್ದೆ
ದೀಪ ಗರುಡದಾಗ್ಹಾಕ್ದೆ
ನೀನು ದಾನ ಕೊಟ್ಟದ್ದಿಗೆ
ಶಿವ ದಾನಾ ಕೊಟ್ಟಿದ್ದ ಮಕ್ಕಳುನ
ನಿನ್ಗ ದಾನಾಕೊಟ್ಟು ಹೋಗ್ತೀನಿ
ಏs ಆರು ಮಂದಿ ಏಳು ಮಂದಿ
ತಾತ ಇನ್ನವ್ರತಾವಾಗಿ ದಾಸಪ್ಪ
ಮಕ್ಕಳು ಕೊಟ್ಟಾರಂತ
ತಾರಾ ಕೊಡ್ತಾನಂತೆ
ದಾನಾ ಕೊಟ್ಟು ಮಕ್ಕಳು ದಾನಾ ಕೊಟ್ಟ ಹೋತಾನಂತೆ
ಈಗಿನ್ನವರು ಧರ್ಮ ಕೊಟ್ಟೋತಾನಂತೆ
ಬೇಡ್ರೇ ನೀವು ಅಂದ ಕಾಂಭೋಜರಾಜ
ಆರು ಮಂದಿ ಹೆಂಡ್ರು ಏನಂದ್ರು
ಮಂಕನ ದೇವಿ ಮಾಡಲ ದೇವಿ ಮಾಣಿಕ್ಯ ದೇವಿ
ಗಿರಿದೇವಿ ರತ್ನಾಲುದೇವಿ ಸೂರಮ್ಮದೇವಿ
ಸಿರಿದೇವಿ ಚಿಕ್ಕಾಯಮ್ಮ ಹಿಂದಕ್ಕೆ ಐದಾಳ
ಮುಂದ್ಹುಟ್ಟಿದೋರು ಮುಂದ್ಹೋಗ್ಲಿ
ಹಿಂದ್ಹುಟ್ಟಿದೋರು ಹಿಂದೆ ಹೋತೀನಿ
ಛಿ! ಮುಂದುಕ್ಹೋಗಿ ಸೆರಗೊಡ್ರೆ
ನಮ್ಮಕ್ಕುನೋರು ನನ್ನ ಬೈತಿದ್ದಾರಲ್ಲ
ಅಂತ ಅಂಬೊತ್ತಿಗೆ
ಆರು ಮಂದಿ ಅಕ್ಕುನೋರು

ತಾತಾ ತಾತಾ ನನಗೇ ಕೋಡೂ ನನಗೇ ಕೊಡು
ಮುಂಚೇ ಕೊಡು ಮುಂಚೇ ಕೊಡು
ಸೆರಗ ಮ್ಯಾಲೆ ಸೆರಗೊಡ್ಡಿ ಬಿಟ್ಟರಮ್ಮ
ಸೆರಗ್ಹಾಸಿ ಬಿಟ್ರು || ತಂದಾನ ||

ಛಿ ಒಂದು ಕೊಡಾ ನೀರು
ನೀರು ಹೋರ್ದೋರು
ಒಣಗಿದ ಕುಳ್ಳು ಮ್ಯಾಲೆ ಲೋಬಾನ ಹಾಕಿರಿ
ತಾತಾ ತಾತಾ ತಾತಾ ಬೂತಾ ಅಂತಿರಿ
ಛೀ ಭಷ್ಟ್ರಾ || ತಂದಾನ ||

ಏs ಭಷ್ಟ್ರದವ್ರೆ
ಪಾಪಾ ಎರ್ಡು ಕೊಡ ನೀರು ಹೊತ್ತ್ಯಾಗ
ಒಂದೊಂದು ಕೊಡ ನೀರು ಹಾಕಿದೋರು
ಒಣಗಿದ ಕುಳ್ಳು ಮ್ಯಾಲೆ ಲೋಬಾನ ಹಾಕಿದೋರು
ತಾತಾ ತಾತಾ ಅಂತ ಸೆರಗಾಸ್ತಾರ
ಛೀ ಬ್ರಷ್ಟಾ
ಸರ್ರೀ ಅಂದ್ರು
ಉಳ್ಳುಗಾಗಿ ಒಳಾಗ ನಿಂತಕೊಂಡ್ರು
ಯಮ್ಮಾ ಮುತ್ತಿನ ಸೆರಗೀಲಿ ಕಸಾ ಬಳುದಾಕಿ
ಸೆರಗ ಕೂಟ ಕಸಾ ಬಳುದಾಕಿ
ಎರ್ಡು ಕೊಡ ನೀರು ಹೋರ್ದಾಕಿ
ಎಡಗೈಲಿ ಲೋಬಾನಾ ಹಾಕಿದಾಕಿ
ಬಲಗೈಯ್ಯಾಗ ಸೆರಗೊಡ್ಡಿದಾಕಿ
ಚಿಕ್ಕಾಯಮ್ಮ ಸಿರಿದೇವಿ

ಬಾರಮ್ಮ ನನ್ನ ಮಗಳೇ ಸೆರೆಗೊಡ್ಡೆ ನನ ಮಗಳೇ
s ದಾನ ಕೊಟ್ಟ ದಾಸಪ್ಪಾ ನಾನು ದಾನ ಕೊಟ್ಟೆ ಹೋತೀನಿ ಮಕ್ಕಳಾ || ತಂದಾನ ||

ಧರ್ಮ ಕೊಟ್ಟು ಹೋಗಿ ಬಿಡ್ತಿನಿ
ಧರ್ಮದ ಮಕ್ಕಳು
ಅಂಬ್ಹೊತ್ತಿಗೆ
ಸ್ವಾಮೀ ನಾವು ಮಾಡಿದ ಧರ್ಮಗೆ
ನೀನು ಧರ್ಮ ಕೊಟ್ಟು ಹೋತಿಯೆನ್ರಿ ಮಕ್ಕುಳ್ನಾ
ಛೀ ಛೀ ಮುಂದ್ಹುಟ್ಟಿದೋರಿಗೆ ಮುಂದೇ ಕೊಡು
ಹಿಂದ್ಹಟ್ಟಿದೋರಿಗೆ ಹಿಂದೇ ಕೊಡು
ಏನ್ರೀ ನಮ್ಮಕ್ಕನವರು ಇನ್ನ ಮುಂದುಟ್ಟಿದೋರು
ಮುಂದೆ ಬಂದು ಸೆರ್ಗಾಸಾಂಗಿಲ್ಲ
ಸೆರಗು ಒಡ್ಡಂಗಿಲ್ಲ
ಇಲ್ಲಮ್ಮಾ ಅವ್ರಿಗೆ ಕೊಡಂಗಿಲ್ಲ
ನಿನಗೇ ಕೊಡಾದು
ಇಲ್ರಿ ನನ್ಗೆ ಇಲ್ದುದ್ರೆ ಆಗ್ಯೇತು
ನಮ್ಮ ಅಕ್ಕುನೋರಿಗೆ ಜೀವಕ ಕೊಡು
ಯಮ್ಮಾ ನಿನಗೆ ಕೊಡಾಕೆ ನನ್ನ ಕೈಲಿ ಆಗದಿಲ್ಲ
ನಿನಗೆ ಕೊಡೋನು ಸಾಂಬಸಿವಾ
ನಾನು ಕೊಡೋದು ಮೂರ್ನಾಮ ಗೋಲ್ರಾನು
ಮೂರ್ನಾಮ ದಾಸಪ್ಪ ಕೊಟ್ಹೋತಿನಿ
ಯಮ್ಮಾ ಮಂಕನದೇವಿ ಮಾಡಲ ದೇವಿ
ಸೂರಮ್ಮದೇವಿ ಸುಂಕಮ್ಮದೇವಿ ಬರ್ರೀ ತಾಯಿ
ಆರು ಮಂದಿ ದೇವಿತ್ಯಾರೇ
ಸೆರಗೊಡ್ರಿ ಹಾಲು ಗೊಲ್ರೆ ಅಂದ್ರೆ
ತಾತಾ ನಮ್ಮನ್ನ ಬೈತೀ ತಾತಾ
ಮತ್ತೆ ಇನ್ನ ದೂರ ನಿತ್ಗಂಡ ಸೆರಗಾಸಬೇಕು
ತಾತಾ ತಾತಾ ಅಂತ ಮಕ್ಕರ್ಸಿದ್ರೆ
ಹೆಣ್ಣು ಮಕ್ಳು
ಹಿಂಗೇನು ಮಕ್ಕಳು ಕೇಳೋದು
ಸರ್ವ ತಪ್ಪಾಗೈತ್ರಿ
ಮೂರು ಗೇಣು ದೂರ ನಿಂತ್ಕೊಂಡು

ಆಗ ಇನ್ನು ಸೆರಗು ಒಡ್ಯ್ಡರಮ್ಮಾ
ಪರುಮಾತ್ಮಂತ ಜೋಳಿಗ್ಯಾಗ ಕೈಯಿಟ್ಟ
ಸಾಂಬುವಂತಾ ಕಜ್ಜುರಿ ಹಿಡ್ದಾನಮ್ಮಾ
ವಿಷ್ಣಾವಂತ ಉಡ್ಯಾಗ ಒಗುದಾನ
ಹಾಲು ಗೊಲ್ರಿಗೆ || ತಂದಾನ ||

ಆರು ಕಜ್ಜೀರಣ್ಣ ಆರು ಮಂದಿಗ
ಉಡ್ಯಾಗ ಒಗುದ
ಏಯ್ಯಮ್ಮ ನಮ್ಮ ದೇವ್ರು
ದಾಸಪ್ಪ
ನಮಗೆ ದೇವ್ರು ಕೊಟ್ನಮ್ಮಾ
ಯಪ್ಪಾ ದಾನ ಬೇಡೋನು
ದಾನ ಮಕ್ಕಳು ಕೊಟ್ಟೆ ಅಂತ
ಆರು ಮಂದಿ ಆರು ಕಜ್ಜುರಿ ಹಣ್ಣು ತಿಂದ್ರು
ವಾರಿಯಾಗಿ ನಿಂತ್ಕಂಡ್ರು
ಇನ್ನೊಬ್ಬಾಕ್ಯೈದಾಳ್ಳಲ್ಲ
ಸಣ್ಣಾಯಮ್ಮ
ಆಗ ಬಂದು
ಮುತ್ತಿನ ಸೆರಗ ಬಲಗೈಲಿಡ್ಕಂಡ್ಳು
ಒಂದು ಪಾದ ಮ್ಯಾಲ ಎರ್ಡ ಕೈ ಜೋಡ್ಸಿದ್ಳು

ಸ್ವಾಮೀ ನನಗೆ ಕೊಡೋ ಲೋಕಾ ನನ್ನ ತಾತಾ
ಸ್ವಾಮೀ ಲಾಸ್ಟು ಮಗುಳೋ ನಾನು ನಿನಗೆ ಸ್ವಾಮಿ
ಆಗ ಎರ್ಡು ಪಾದ ನಾನು ಹಿಡಿದೇನು ಸ್ವಾಮಿ || ತಂದಾನ ||

ಸ್ವಾಮೀ ನಿನ್ನ ಎರ್ಡು ಪಾದುಗೆ
ಹಿಡಿದು ಬಿಟ್ಟೇನು
ಈಗಾ ಆಗ ಮುತ್ತಿನ ಸೆರಗಿಲೀ ಕಾಸಾ ಬಳ್ದೇ
ನಿನ್ನ ಮಟುದಲ್ಲಿ ಈಗಿನ್ನವರತಾ
ಎಡಗೈಯಾಗ ಲೋಬಾನ್ಹಾಕೀನಿ
ಕೆಳಗ ಹಾಕುಬಾರ್ದು ಅಂತ
ಬಲಗೈಲೀ ಸೆರಗೋಡ್ಡಿನಿ

ನನ್ನ ಸೆರಿಗಿನ್ಯಾಗ ನೀನು ಒಗಿ ಸ್ವಾಮೀ || ತಂದಾನ ||

ಆಗ ಇನ್ನ ಸೆರಗೊಡ್ಡಿದ ತಾಯೀ ಕಡೀಗೆ ನೋಡಿದಾ ದಾಸಪ್ಪ
ಅಮ್ಮಾ ನಾನೇನು ಕೇಳ್ಲಿ
ನನ್ನ ಮಟದಾಗ ನಾನೈದೀನಿ
ನಿನ್ನ ಮನಿಗುಳಾಗಾ ನೀವೈದೀರಿ
ಏಳು ಮಂದಿ ಒಬ್ಬನು ಮಾಡಿಕಂಬೋದು
ಲೋಕ ನೋಡಿಲ್ಲೇವೆ ತಾಯಿ
ಆರು ಮಂದ್ಯಂತ ಆರೇ ಹಣ್ಣು ತಂದಿದ್ನ್ಯಮ್ಮಾ
ಏಳು ಮಂದಿರೋದು ನಾನಕಾಣೇ ದೇವಿ
ನಿನಗೆ ಕೊಡೋ ಫಲ ಮರೆತು ಬಂದೀನಿ
ನಾನೇನು ಮಾಡಲೇ ಸಿರಿದೇವಿ
ಏನ್ರೀ ಕುವಾಡಾಡ್ತಿರ್ಯಾ ನಿಜವಾಡ್ತೀರ್ಯಾ
ಈಗ ಬೆಂಕ್ಯಾಜ್ಞ ನಿಜದಲ್ಲಿ ನುಡಿತಿನಿ ತಾಯಿ
ಓಹೋ ಸ್ವಾಮಿ
ಆ ತಾಯಿ ಏನಂತ ಬೈಯ್ಯತಾಳಾ
ಏನಂತ ಮಣ್ಣು ತೂರ್ತಾಳಾ
ಯಾರಿಗೆ
ಕೊಟ್ಹೋಗೋ ದೇವ್ರಿಗೆ
ಏನಂತಾಳಾ
ಓರ್ರೀ ದಾಸಪ್ಪಾ
ಈಗ ಎರ್ಡೆರ್ಡು ಕೊಡಾ ನೀರು
ನಿನ್ನ ಹೆಣುಕ್ಹಾಕಿದೆ
ಯಮ್ಮಾ ನನ್ನೊಬ್ನೆ ಬೈಯ್ಯಬ್ಯಾಡ
ಇನ್ನಿಬ್ರು ಮ್ಯಾಲೈದಾರಾ ಅವ್ರು
ನನ್ನೊಬ್ಬುನು ಕಳಿಸ್ಯಾರ್ಯಾ ನೋಡಕ್ಯಂಡು ಬರ್ಹೊಗಂತ
ಇಗೋ ಮುಂಚೆ ಕೋಟಿ ಲಕ್ಷ ಜೀವ ಕೊಟ್ಟು
ಜೀವ ಏಳಿಯೋವಂತ ಪರುಮಾತ್ಮನ ಬೈಯ್ಯಿ
ಪರುಮಾತ್ಮನ ಬೈದ ಮ್ಯಾಲೆ
ಕಲ್ಲಾಗಿ ನಿಂತ ಸಿವುನ್ನ ಬೈಯ್ಯಿ
ಲಾಸ್ಟಿಗೆ ಬೆಂಕಿಟ್ಕಂಡು ಬಂದ ನನ್ನ ಬೈಯ್ಯಿ ಅಂದ್ರೆ
ಆ ತಾಯಿ ಏನಂತಾಳಾ

ಪರಮಾತ್ಮನ ಗುಡಿಗೆ ಬೇಲಿ ಬಡೀಲಿ ಗುಡಿಗೆ
ನಿನಗೆ ಬಾರಿ ಬೇಲಿ ನಿನಗೆ ಬಡಿಯಲೋ
ಸ್ವಾಮಿ ಶಿವನೇ ನಿನ್ನ ಗುಡಿಗೆ ಗುಂಡು ಹಾಕಾ
ಸ್ವಾಮಿ ನಿನ್ನ ಮಠಕ ಗುಂಡು ಹಾಕ
ಪರುಮಾತ್ಮಾ ನಿನ್ನ ಬಾಯಿಗೆ ಬೇಲಿ ಬಡಿಯಾ
ಇಷ್ಣ ನಿನ್ನ ಗುಡಿಗೆ ಬೆಂಕಿ ಇಡಿಯಾ
ನಾನೂ ಒಬ್ಬಳು ಪಾಪಾ ಏನು ಮಾಡಿನಿ ನಿನಗೆ
ನಾನು ಒಬ್ಬಳು ಕರ್ಮಾ ಏನು ಮಾಡಿದ್ದೇನಾ || ತಂದಾನ ||

ಸ್ವಾಮೀ ಪಂಗ್ತ್ಯಾಗ ಪರಪಂಗ್ತಿ
ಮಾಡಿಬಿಟ್ಟೆ
ಎಲ್ಲಾರ್ನು ಕುಂದ್ರಿಸಿ
ಒಬ್ಬರು ಪತ್ರಳ್ದಾಗ ಅನ್ನಿಟ್ಟೆ
ಒಬ್ರ ಪತ್ರಾಳ್ದಾಗ ಸುಣ್ಣಿಟ್ಟೆ
ನಾನ ಒಬ್ಬಳು ಏನು ಪಾಪ ಮಾಡಿದ್ದೇನು
ಸ್ವಾಮಿ ನಿನಗೆ
ಆಗ ನೋಡಮ್ಮಾ ಹಂಗ ಮೂವರ್ನ ಬೈ
ಮುಂಚ್ಯಾಗ ಆತನ ಗುಡಿಗೆ ಬಾರೀ ಬೇಲಿ ಬಡಿ
ಸಾಂಬಸಿವಗೆ ಗುಂಡು ಹಾಂಗೆ ದಬ್ಬಿ ಬಿಡು
ಈಗ ನನಗೆ ಬೆಂಕಿ ಇಟ್ಕೋಂಡು ಬಂದೋನಿಗೆ
ನಿನ್ನ ಬೆಂಕಿ ಹಾಂಗೇ ಇರ್ಲಿ ನನ್ಗ
ತಾಯೀ ನಮಗೆ ಮೂವರಿಗೆ ಮೂರು ಭಾಗ
ನೀನು ಬೈಯ್ದಂಗೆಲ್ಲ ನಮಗೆ ಸುಖ
ನೀನು ಬೇಸಿದ್ರೆ ನಮಗೆ ಕಷ್ಟ
ಹೇಳು ತಾಯಿ
ಕೇಳವೋ ಕಾಂಭೋಜರಾಜ ಹಾಲು ಗೊಲ್ರವ್ನೆ
ಏನ್ರಿ
ಏನಿಲ್ಲ ಮಕ್ಕುಳೇನು ಕೊಟ್ಟೀನಿ
ಆರೇ ಮಂದ್ಯಂತ್ತ ಆರು ಫಲ ತಂದೀನಿ
ಈಗ ಹಡ್ಯಾದು ಸರ್ತಿ ಅವ್ರುದು
ಈಗ ಜೋಪಾನ ಮಾಡೋದ ಈಕಿದು
ಹುಟ್ಟಿದ ಮೂರು ಗಂಟೆ ಹುಡುಗ್ರು
ಬೆಕ್ಕೋಟಿರ್ಲಿ ತಂದು ಕೊಡಬೇಕು
ಈಯಮ್ಮನ ಕೈಗೆ ಸಿರಿದೇವಿಗೆ
ಆರು ಮಂದಿ ತಂದು ಕೊಡಬೇಕು
ಈಗ ಸಲುವೋದು ಈಕಿ
ಆಗ ಹುಡುದುದ್ದು ಅವ್ರು
ಆರು ಮಂದಿ ಹೆಂಡ್ರು ಮಾತು ಕೇಳ್ಕ್ಯಂಡು
ಇವುಗಳಿಗೆ ಮಕ್ಕಳಿಲ್ಲ ಅಂತ ಒಂದೇಟು ಬಡುದ್ರೆ
ಮಕ್ಕಳಿಲ್ದಾಕಿನ
ನಿನಗೆ ಹತ್ತೇಟಿರ್ತಾವ
ಬಾಳಾ ಹುಶ್ಯಾರ ಮ್ಯಾಲಿನವರತ
ಭೂಮಿ ಮ್ಯಾಲಿನ್ನ ಆಗ ಇರಬೇಕು
ಸ್ವಾಮಿ ನಿಮ್ಮ ಪಾದಾಗ್ನಿ ಒಂದೇಟು ಬಡಿಯಾದಿಲ್ರಿ
ಅಣ್ಣ ತಂಗಿ ರೀತಿಲೈದೇವ್ರಿ
ಒಂದು ಗಂಗಾಳ್ದಾಗ ನೀರು ಕುಡಿಯೋದು
ಒಂದು ಗಂಗುಳಾಗೇ ಅನ್ನ ಊಟ ಮಾಡೋದು
ಹಾಗಿದ್ರೆ ಸಂತೋಷಪ್ಪಾ
ಆಗ ಆರು ಮಂದಿ ಹೋಗಿ ಬಾ ಸ್ವಾಮಿ
ನಿಮ್ಮ ಮಟುಗೆ ಸುಖದಲ್ಲಿ ಜೀವದಲ್ಲಿ ಹೋಗು ಸ್ವಾಮಿ
ಏನಪ್ಪಾ ಹೋಗಿ ಬರ್ತೀನಿ
ಹೋಗಿ ಬಾ ಸ್ವಾಮೀ ನಿನ್ನ ಜೀವಕ್ಕೆ ಶರಣು
ಯಮ್ಮಾ ಚಿಕ್ಕಾಯಮ್ಮ

ಉರಿ ಬೆಂಕಿ ಹಿಡಿಯಾ ಉರ್ಕೋಡ್ಹೋಗೋ ನೀನು
ನೀನು ಹಾಳಾಗ್ಹೋಗು ನಾಶನವಾಗಿ ಹೋಗೋ
ನಿನ್ನ ಮಟುಕೆ ಬೇಲಿ ಬಡಿಯಾ ಆಗ ಬೆಂಕಿ ಇಡಿಯಾ || ತಂದಾನ ||

ತಾಯೀ ಏನನ್ನಾ ಬೈಯ್ಯಮ್ಮಂತ
ಆದೃಶ್ಯ ಮಾಯವಾದ