ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಬೃಹತ್ ಕಥಾನಕಗಳು ಬುಡಕಟ್ಟು ಮಹಾಕಾವ್ಯಗಳು ಎನಿಸಿಕೊಳ್ಳುವವು. ಜುಂಜಪ್ಪನ ಮಹಾಕಾವ್ಯ ಕಾಡುಗೊಲ್ಲರ ಮಹಾಕಾವ್ಯವಾದರೆ, ಮೈಲಾರಲಿಂಗನ ಮಹಾಕಾವ್ಯ ಕುರುಬರ ಮಹಾಕಾವ್ಯವಾಗುವುದು. ಹಾಗೆಯೇ ಕೃಷ್ಣಗೊಲ್ಲರ ಮಹಾಕಾವ್ಯ ಕೃಷ್ಣಗೊಲ್ಲ ಸಮುದಾಯದ ಮಹಾಕಾವ್ಯವಾದರೆ, ಕುಮಾರರಾಮನ ಮಹಾಕಾವ್ಯ ಬೇಡ, ವಾಲ್ಮೀಕಿ, ನಾಯಕ, ಗಂಗಾಮತ-ಹಾಲ್ಮತ ಸಮುದಾಯಗಳಿಂದ ಪೂಜ್ಯನೀಯಗೊಂಡಿರುವುದು ವೇದ್ಯವಾಗುವುದು.

ಕುಮಾರರಾಮನ ಮಹಾಕಾವ್ಯದ ಕಥಾನಾಯಕ ಐತಿಹಾಸಿಕ ಕುಮಾರರಾಮನೇ ಆಗಿರುವನು. ಆತ ಜಟಿಂಗೇಶ್ವರನ ಬಾಳೆ ಹಣ್ಣಿನ ಪ್ರಸಾದದಿಂದ ಕಂಪಿಲರಾಜನ ಹೆಂಡತಿ ಹಿರಿಯಾದೇವಿಯ ಉದರದಲ್ಲಿ ಆನೆಗೊಂದಿಯಲ್ಲಿ ಜನಿಸುವನು. ಬಾಳೆಹಣ್ಣಿನ ಮೇಲಿನ ಸಿಪ್ಪೆಯಿಂದ ಹರಿಯಾದೇವಿಯ ಮನಿದಾಸಿ ಚಿನ್ನುಮಾಯಿ ತಾಯಮ್ಮನ ಹೊಟ್ಟೆಯಿಂದ ಓಲಿಕರಾಮ ಹುಟ್ಟುವನು. ಕುಮಾರ ದ್ವಯರಲ್ಲಿ ಜೀವನ ಪರ್ಯಂತ ಸೋದರ ಭಾವನೆ ವ್ಯಕ್ತಗೊಳ್ಳುವುದು. ಅವರ ಬಾಲ್ಯ ಹರಿಯಾಳದೇವಿ ಮತ್ತು ಸ್ವಾದರಮಾವ ಬಚ್ಚಣ್ಣನ ಛತ್ರಛಾಯೆಯಲ್ಲಿ ಕಳೆಯುವುದು. ಪಾತರಗಿತ್ತಿ (ವೇಶ್ಯೆ)ಯ ಸಂಗ ಬೆಳೆಸಿ ಕಳ್ಳತನದ ಅಪರಾಧದಲ್ಲಿ ಓಲಿಕರಾಮ ಸೆರೆವಾಸ ಅನುಭವಿಸುವನು. ಏಕಾಕಿ ಕುಮಾರರಾಮ ಓರಗಲ್ಲಿನ ಅಧಿಪತಿ ಗಣಪತಿಯ ಮಗ ಗಣರಾಮನಿಗೆ ಸಂಹರಿಸಿ, ‘ಗಣಪತಿರಾಜನಿಗೆ ಸೋಲಿಸಿ ವಜ್ರ, ವೈಡೂರ್ಯ, ಮುತ್ತು-ರತ್ನ, ಏಳು ದಡೆವು ಚಂದ್ರಾಯುಧ ಹಾಗೂ ಎರಡು ರೆಕ್ಕೆ ನಾಲ್ಕು ಪಾದದ ದೇವತಾ ಕುದುರೆ ಗೆದ್ದು ವಿಜಯಶಾಲಿಯಾಗಿ ಆನೆಗೊಂದಿ ಕಂಪ್ಲಿಗೆ ಮರಳುವನು. ಡಿಲ್ಲಿ ಸವಾಬು (ಸುಲ್ತಾನ)ದಾರನೊಂದಿಗೆ ಮೂರು ಸಲ ಯುದ್ಧದಲ್ಲಿ ಗೆದ್ದು ಅಪ್ರತಿಮ ವೀರ ಎನಿಸಿಕೊಳ್ಳುವನು. ಪರಾಕ್ರಮಿ ಕುಮಾರರಾಮನೊಂದಿಗೆ ಆಗಬೇಕಿದ್ದ ಚಲುವೆ ರತ್ನಾಕ್ಷಿಯ ಮದುವೆ ಕಂಪಿಲರಾಜನೊಂದಿಗೆ ಆಗುವುದು. ಕಾಮಾಂಧ ರತ್ನಾಕ್ಷಿ ಕುಮಾರರಾಮನೊಂದಿಗೆ ಕಾಮತೃಪ್ತಿ ಪಡಿಸಿಕೊಳ್ಳಲು ಹೊಂಚುಹಾಕಿ ವಿಫಲವಾಗುವಳು. ವಿಫಲಗೊಂಡ ರತ್ನಾಕ್ಷಿಯ ಭಗ್ನಪ್ರೇಮ ಮರುಜನ್ಮದಲ್ಲಿ ಕುಮಾರರಾಮನ ಅಂತ್ಯಕ್ಕೆ ಕಾರಣವಾಗುವುದರೊಂದಿಗೆ ಇಡೀ ಸಾಮ್ರಾಜ್ಯ ಅಸ್ತಂಗತವಾಗುವ ಚಿತ್ರ ಕುಮಾರರಾಮನ ಮಹಾಕಾವ್ಯದ ಕಥಾನಕದಲ್ಲಿ ಮುಖ್ಯವಾಗಿ ಒಳಗೊಂಡಿರುವುದು.

ಕುಮಾರರಾಮನ ಮಹಾಕಾವ್ಯದ ಕಥಾನಾಯಕ ಚಾರಿತ್ರಿಕ ಕುಮಾರರಾಮನಾದರೆ, ಕೃಷ್ಣಗೊಲ್ಲರ ಮಹಾಕಾವ್ಯದ ಸಾಂಸ್ಕೃತಿಕ ಕಥಾ ನಾಯಕ ಶರಬಂಧರಾಜನಾಗಿರುವನು. ಶರಬಂಧರಾಜನ ತಾತ ಚಾಮರಾಜನು ಕಾಮದೇವತಿಯನ್ನು ಕೊಂದಿದ್ದ ಪಾಪ ತಂದೆ ಕಾಂಭೋಜರಾಜನಿಗೆ ತಗಲುವುದು. ಕಾಂಭೋಜರಾಜ ಪಾಪಮುಕ್ತಿಗಾಗಿ ಏಳು ಹೆಂಡರನ್ನು ಮದುವೆ ಮಾಡಿಕೊಂಡು, ತಪಸ್ಸು ಮಾಡಿ ಮೂರು ವನ-ಮಠಗಳನ್ನು ನಿರ್ಮಿಸಿ ಆರು ಮಕ್ಕಳನ್ನು ವಿಷ್ಣುವಿನಿಂದ ಪಡೆಯುವನು. ಹಿರಿಯ ಆರು ಹೆಂಡರ ಕುಹಕಿತನದಿಂದಾಗಿ ಚಿಕ್ಕ ಹೆಂಡತಿ ಸಿರಿದೇವಿಗೆ ಕಾಂಭೋಜರಾಜ ಸುಡುಗಾಡು ರುದ್ರಭೂಮಿಯಲ್ಲಿ ಶರಶಯ್ಯೆಯಲ್ಲಿಡುವನು. ಸಿರಿದೇವಿಯ ಮಡಿಲಲ್ಲಿ ಬೆಳೆದ ಶರಂಬಂಧರಾಜ ಚಾಂಪುರದ ದನ ಕಾಯೋ ಮುದ್ಯಾತನಿಂದ ತನ್ನ ಪೂರ್ವಜರ ಇತಿಹಾಸ ಅರಿತು ತಂದೆ ಕಾಂಭೋಜರಾಜನ ಬೆನ್ಹುಣ್ನ ಬೇಷ್ ಮಾಡಲು ಏಳು ಸಮುದ್ರಾಕಡೆ ಇರುವ ಎದಿಗಂಧಿತಲ್ಲಿದ್ದ ಮೇಟೌಷಧ ತರಲು ಪ್ರಯಾಣ ಬೆಳೆಸುವನು. ಮಾರ್ಗ ಮಧ್ಯದಲ್ಲಿ ಹುಲಿ ಸಂಹಾರ ಮಾಡಿ ಮಾಣಿಕ್ಯಮ್ಮಳನ್ನು, ರಾಕ್ಷಸಿಗಳನ್ನು ಸಂಹರಿಸಿ ಚಿತ್ರಾಂಗಿ, ದೇವಸ್ತಾನಿಯರನ್ನು ಮದುವೆಯಾಗುವುದರೊಂದಿಗೆ ಶಾಮಗಂಧಿ ಎದಿನಗಂಧಿ ಪಾತರಗಿತ್ತಿಯನ್ನು ಸೋಲಿಸಿ ಪಂಥ ಗೆದ್ದು ಮದುವೆಯಾಗಿ ಗಾಜಿನ ಬುಡ್ಡಿ ಮೇಟೌಷಧಿಯೊಂದಿಗೆ ಸುಡುಗಾಡು ರುದ್ರಭೂಮಿಗೆ ಮರಳುವನು. ಚಾಂಪುರದಲ್ಲಿದ್ದ ತಂದೆ ಕಾಂಭೋಜರಾಜನ ಬೆನ್ಹುಣ್ಣಿಗೆ ಮೇಟೌಷಧಿ ಉಪಚಾರ ನೀಡಿ, ನೆನ್ಹುಣ್ಣ ಬೇಷ್ ಮಾಡಿ ತಂದೆ ತಾಯಿಗಳನ್ನು ಒಂದುಗೂಡಿಸಿ ಕೊನೆಗೆ ಪರಿವಾರ ಸಮೇತ ಶರಬಂಧರಾಜ ಸ್ವರ್ಗ ಸೇರುವನು. ಇದು ಕೃಷ್ಣಗೊಲ್ಲರ ಮಹಾಕಾವ್ಯದ ಕಥಾಸಾರ.

ಬಳ್ಳಾರಿ ಜಿಲ್ಲೆಯ ಬುಡ್ಗ ಜಂಗಮ ಸಮುದಾಯದ ಶ್ರೀಮತಿ ಈರಮ್ಮ ಮತ್ತು ಸಂಗಡಿಗರಿಂದ ರೂಪಗೊಂಡ ಕುಮಾರರಾಮ ಹಾಗೂ ಕೃಷ್ಣಗೊಲ್ಲರ ಮೌಖಿಕ ಬುಡಕಟ್ಟು ಮಹಾಕಾವ್ಯಗಳು ಓದುವುದರಕ್ಕಿಂತಲೂ ಅವರ ಹಾಡಿನ ಮೂಲಕ ಕೇಳುವುದರಿಂದ ಇನ್ನು ಸ್ಪಷ್ಟವಾಗಿ ಅರ್ಥವಾಗುವುದು. ನೀರಕ್ಷರುಕುಕ್ಷಿಗಾಳಾಗಿದ್ದ ಈ ಕಲಾವಿದರು ಕಾವ್ಯಗಳನ್ನು ನಿರರ್ಗಳವಾಗಿ ಹಾಡಿಹೇಳಬಲ್ಲ ಪಾಂಡಿತ್ಯವುಳ್ಳವರಾಗಿದ್ದಾರೆ.

ಕಾವ್ಯಗಳಲ್ಲಿ ಎಲ್ಲ ರಸ ಹಾಗೂ ಪಾತ್ರಗಳನ್ನು ಸಮರ್ಪಕವಾಗಿ ಏಕಾಭಿನಯವಾಗಿ ಹೊರ ಹೊಮ್ಮಿಸುವ ಜಾಣ್ಮೆ ಕಲಾವಿದರಲ್ಲಿದೆ. ಅದರಲ್ಲಿ ತಲೆತಲಾಂತರದಿಂದ ಈ ಕಾವ್ಯಗಳನ್ನು ಹಾಡುವ ಸಂಪ್ರದಾಯವಿದ್ದು ಅವರ ತಂದೆ ತಾತರು ತೆಲುಗಿನಲ್ಲಿ ಹಾಡಿರುವುದನ್ನ ತಿಳಿದುಕೊಂಡ ಈರಮ್ಮ ಪ್ರಪ್ರಥಮವಾಗಿ ಕನ್ನಡದಲ್ಲಿ ಕನ್ನಡಿಗರಿಗೆ ಸಮರ್ಪಿಸಿರುವುದು ನಮ್ಮ ಪುಣ್ಯ. ಈ ಕಾವ್ಯಗಳಲ್ಲಿಯೂ ಅಲ್ಲಲ್ಲಿ ಬಾಯಿತಪ್ಪಿ ತೆಲುಗು ಪದಗಳು ನುಸುಳಿರುವವು ಕಂಡು ಬರುವವು. ಅವರು ಕಾವ್ಯದ ಆರಂಭದಲ್ಲಿ ಪ್ರಾರ್ಥನೆ ಹಾಡಿ ಆನಂತರ ನೇರ ಕಾವ್ಯದ ಹಾಡಿಗೆ ಪಾದಾರ್ಪಣೆ ಮಾಡುವುದುಂಟು. ಕಾವ್ಯದ ಆರಂಭ್ಯ “ತಂದಾನ ತಂದಾನ ತಾನ ತಾನ ತಂದಾನ” ಎಂಬ ಪಲ್ಲವಿಯಿಂದ ಆರಂಭಗೊಂಡು ಮುಂದುವರಿಯುವುದು. ಕಾವ್ಯದ ಪದ್ಯದ ಮುಂದಿನ ನುಡಿಗಳ ಕೊನೆಯಲ್ಲೆಲ್ಲ ಪಲ್ಲವಿಯನ್ನು ಹಿನ್ನಲೆ ಗಾಯಕರಿಂದ ಮುಂದುವರಿದಿರುತ್ತದೆ. ಕಾವ್ಯದ ಲಯಬದ್ಧತೆಗೆ ತಕ್ಕಂತೆ ಹಿನ್ನಲೆ ಗಾಯಕರು ಪ್ರತಿ ಪದ್ಯದ ಕೊನೆಯಲ್ಲಿ ಸಂದರ್ಭೋಚಿತ “ತಂದಾನ ತಂದಾನ ತಾನ” “ತಂದನ” “ತಂದನ” “ಕೇಳೋ ತಾಯಿ” ಎಂಬೀ ಪದಗಳು ಕೂಡ ಪಲ್ಲವಿ ಭಾಗದಲ್ಲಿ ಹೇಳುವುದುಂಟು. ಪದ್ಯದ ಮಧ್ಯದಲ್ಲಿ ಇಟ್ಯಾಲಿಕ ಅಕ್ಷರಗಳಿಂದ ಗುರುತಿಸಿದ ನುಡಿಗಳನ್ನು ಮುಖ್ಯ ಗಾಯಕಿ ಹಾಡುತ್ತಲೇ ಮಾತಿನ ಮೂಲಕ ಹೇಳುವುದುಂಟು. ಓದುಗರು ||ತಂದಾನ|| ಎಂಬುದು ಪಲ್ಲವಿ ಎಂದು ಅರ್ಥೈಸಿಕೊಳ್ಳಬೇಕು. ಅದನ್ನು ಪ್ರತಿ ಪದ್ಯದ ಕೊನೆಯ ಸಾಲಿನ ಕೊನೆಯಲ್ಲಿ ಹಿನ್ನೆಲೆಗಾಯಕರು ಹಾಡುವುದುಂಟು. ಗದ್ಯದ ಪ್ರತಿಸಾಲಿನ ಕೊನೆಯಲ್ಲಿ ಹಿನ್ನೆಲೆಗಾಯಕರು (ಸಂಗಡಿಗರು) ಆಹಾ ಅಥವಾ ಹೂಂ ಎನ್ನುತ್ತ ಕಾವ್ಯದ ಕಥೆ ಮುಂದುವರಿಸುವುದುಂಟು.

ಶ್ರೀಮತಿ ಈರಮ್ಮ ಹಾಡಿ ಹೇಳುವ ಕಾವ್ಯಗಳು ಗದ್ಯ ಪದ್ಯಗಳ ಮಿಶ್ರಣವಾಗಿದ್ದು ಜನಪದ ಚಂಪುಕಾವ್ಯವಾಗಿರುವುದು . ಹಾಡುಗಳು ಪದ್ಯಗಳಾಗಿ ಮಾತುಗಳು ಕಾವ್ಯದ ಗದ್ಯಭಾಗವಾಗಿ ಮೈದಾಳುತ್ತದೆ. ಕಾವ್ಯದ ಮುಂದಿನ ಸಾಲಿನ ಆಲೋಚನೆಗಾಗಿ ಇಡೀ ಕಾವ್ಯದಲ್ಲಿ “ಆಗಿನ್ನವ್ರತ್ತ, ಆಗಿನ್ನವ್ರುತಾವಾಗಿ” ಎಂಬ ಪದಗಳು ಮೇಲಿಂಗ ಮೇಲೆ ಪುನರಾವರ್ತನೆಗೊಳ್ಳುತ್ತವೆ. ಅವುಗಳ ಅರ್ಥ, ‘ಆ ಸಂದರ್ಭದಲ್ಲಿ’, ‘ಆಗ’, ‘ಅವರ’ ಎಂದಾಗುತ್ತದೆಂದು ಹಾಡುಗಾರ್ತಿ ಹೇಳುವರು. ಫೆಬ್ರುವರಿ ೧೯೯೬ ರಲ್ಲಿ ಧ್ವನಿಮುದ್ರಿತಗೊಂಡ ಈ ಕಾವ್ಯಗಳ ಮೂಲಕ್ಕೆ ಧಕ್ಕೆ ಬರದಂತೆ ಹಾಗೆಯೆ ಉಳಿಸಿಕೊಳ್ಳಲಾಗಿದ್ದು ಕೇವಲ ಕಾಲ, ಲಿಂಗಗಳಲ್ಲಿ ಬಾಯಿತಪ್ಪಿ ವ್ಯತ್ಯಾಸವಾಗಿರುವುದನ್ನು ಹಾಡುಗಾರ್ತಿಯ ಅನುಮತಿಯ ಮೇಲೆಗೆ ಸರಿಪಡಿಸಿಕೊಳ್ಳಲಾಗಿದೆ ಹಾಗೂ ಮರೆತಿರುವ ಹಲಕೆಲವು ಭಾಗಗಳನ್ನು ಸೇರಿಸಿಕೊಳ್ಳಲಾಗಿದೆ. ಭಾಷಾಶಾಸ್ತ್ರಜ್ಞರಿಗೆ, ಸಂಸ್ಕೃತಿ, ಮತ್ತು ಚರಿತ್ರೆ ಅಧ್ಯಯನಕಾರರಿಗೆ, ಈ ಕಾವ್ಯಗಳು ಹೊಸ ಜ್ಞಾನರಾಶಿಯನ್ನು ನೀಡುತ್ತವೆಂಬ ಭಾವನೆ ನನ್ನದಾಗಿದೆ. ಅಷ್ಟಾದರೆ ನನ್ನ ಕಾರ್ಯ ಸಾರ್ಥಕವೆಂದು ಭಾವಿಸುವೆ.

ಡಾ. ಕೆ.ಎಂ. ಮೈತ್ರಿ
ವಿದ್ಯಾರಣ್ಯ
೧೦-೧೨-೧೯೯೭