ಕೈಲಾಸಿಗೆ ಬಂದ ವಿಷ್ಣು
ಏನಪ್ಪಾ ಪರುಮಾತ್ಮೆ ಸಾಂಬನೆ
ಏನೋ ವಿಷ್ಣು ಮೂರು ಲೋಕದ್ನೆ
ಹೋಗಿ ಬಂದ್ಯಪ್ಪಾ
ಏ ಹೋಗಯ್ಯಾ
ಆವಾಗ ಒಬ್ಬಾಕಿಗೇ ಕೊಟ್ಟಿದ್ರೇ ಆಗೇ ಹೋತಿತ್ತು
ಆಗ ಅವುರೆಲ್ಲ ಕೈ ಮುಗುದ್ರಪ್ಪಾ
ಏ ಪರುಮಾತ್ಮ ಇರುಬಾರ್ದಾಪ್ಪಾ ನೀನು
ನಿನ ಗುಡಿಗೆ ಬಾರಿ ಬೇಲಿ ಬಡಿತಾಳಂತೆ
ಹೇ ಸಾಂಬನೆ ನಿನಗೆ ಗುಂಡು ಅಡ್ಡಾಕ್ತಾಳಂತೆ
ಹೇ ನನಗೇನ ಬೆಂಕಿ ಇಡ್ತಾಳಂತೆ ಮಕುಕ್ಕೆ
ಅಯ್ಯಯ್ಯಪ್ಪಾ ವನವಾಸ ಬ್ಯಾಡಪ್ಪ ಹಕ್ಯಂತಾಳಾ
ಬೆಂಕ್ಯಾಗಾ ಬಿಳಾಕ ಹೋಗ್ತಾಳಾ
ಆಗ ಇನ್ನ ಜೀವದ ಗಂಡ ಹಿಡ್ಕಂಡ್ರ ಇರಾಂಗಿಲ್ಲ
ಜೀವ ಇರಬಾರ್ದು ಈ ಭೂಮಿ ಮ್ಯಾಲೆ ಅಂತಾಳ
ಏನ್ರೀ ಆಕಿಗೆ ಒಬ್ಬಾಕಿಗೆ ಕೊಟ್ಟಿದ್ರೆ ಆಗಿತ್ತು
ಇಲ್ಲಪ್ಪಾ ಮಕ್ಕುಳು ಹುಟ್ಟಿದ ಮ್ಯಾಲೆ
ಏನು ಉಣ ಹುಟ್ತೈತೋ ಗಂಡ್ಸುರಿಗೆ
ಮಕ್ಕಳ್ಹುಟ್ಟಿದ ಮುಂಚ್ಯಾಗ
ಒಂದು ಅವುತಾರದಲ್ಲಿ ಇನ್ನ ರಾಜ್ಯ ಆಳ್ತಾರ
ಮಕ್ಕಳು ಹುಟ್ಟಿದ ಮ್ಯಾಲೆ ಒಂದವುತಾರಾ ಆತದೆ ಈ ಜೀವ
ನೋಡಾಣಾ ಅವ್ನ ಗುಣಾ ಎಷ್ಟಾಗತೈತಿ
ಕೇಳವೋ ವಿಷ್ಣಾ ನಿಂದೇನು ಬಗೆಹರಿತು
ನೀನು ಆರು ಮಂದಿಗೆ ಕೊಟ್ಟು ಬಂದಿ
ಬೈಸ್ಕಂಡು ಬಂದೀಯೋ
ಏನನ್ಕಂಡು ಬಂದೀಯೋ
ಏ ಸಾಂಬನೇ ನೀನು ಬಗ್ಗಿ ನೋಡುಬೇಕು
ಮಕ್ಕಳ್ಹುಟ್ಟಿದ ಅವ್ನು ಏನೇನು ಮಾಡತಾನೋ
ಲೋಕದಾಗ ನೋಡಬೇಕು
ಅಷ್ಟ ಆಗಲ್ರೀ
ಇವ್ರು ಆರು ಮಂದಿನವರು ಏನಂತಾರ
ಏ ಯಮ್ಮಾ ತಂಗಿ ಒಂದೊಂದು ಕೊಡ
ನಮ್ಮಂಗ ಮಾಡಿದ್ರೆ
ದೇವರು ಮಕ್ಕಳು ಕೊಡ್ತಿದ್ದ
ಒಣಗಿದ ಕುಳ್ಳು ಮ್ಯಾಲೆ ಲೋಬಾನ ಹಾಕಿದ್ರೆ
ದೇವರು ಮಕ್ಕಳು ಫಲಾ ಕೊಡ್ತಿದ್ದ
ಏಯ್ಯಮ್ಮ ಮುತ್ತಿನ ಸೆರಗಿಲಿ ಬಳ್ದುಬುಟ್ಟು
ಆಗ ಎಡಗೈಯ್ಯಾಗ ಲೋಬಾನ ಹಾಕಿದ್ಳು
ಬಲಗೈಲಿ ಸೆರಗೊಡ್ಡಿ ಶರಣು ಮಾಡಿದ್ಳು
ನಾವು ಎರ್ಡು ಕೈಲಿ ಹಿಂಗೇ ಮುಗಿದ್ವಿ
ಏ ಯಮ್ಮಾ ಪಾಪಾ ಮಾಡಿದ ಕರ್ಮದವ್ಳು
ಎಷ್ಟು ಪೂಜೆ ಮಾಡಿದ್ರೇನು

ಆಗ ಕರ್ಮ ಮಾಡಿದವ್ಳಿಗೆ ಯಾ ದೇವ್ರು ನೋಡಾದಿಲ್ಲ
ಯಾವ ದೇವ್ರು ನೋಡಂಗಿಲ್ಲ
ಯಮ್ಮ ನನ್ನ ಭಕ್ತಿ ಆನಂದ ನಮ್ಮ ಜೀವ ಮಕ್ಳ ಕೊಟ್ಟಮ್ಮಾ ತಾಯಿ || ತಂದಾನ ||

ಯಮ್ಮಾ ಪಾಪಾ ಮಾಡಿ ಹುಟ್ಟ್ಯಾಳಮ್ಮ ನಮ್ಮ ತಂಗಿ
ಯಮ್ಮಾ ಕರ್ಮದೊಳ ಮಕ ಹ್ಯಂಗ ನೋಡಾನಮ್ಮಾ
ಒಂದೇ ಗಂಡನ್ನ ಮಾಡಿಕ್ಯಂಡಿವಿ
ಒಂದೇ ಮನ್ಯಾಗ ಇರಬೇಕು
ಆಗ ಒಂದೇ ತಾಯಿಗೆ ಹುಟ್ಟುದೋರು
ಒಂದೇ ಗಂಗಾಳದಾಗ ಅನ್ನ ಉಣ್ಣಬೇಕು

ಯಮ್ಮಾ ಗೊಡ್ಡೊಳ ಕರ್ಕಂಡು ಹ್ಯಂಗ ಉಂಬನಮ್ಮಾ
ಬಂಜ್ರೇಳು ಕೂಡ ಹ್ಯಂಗ ಉಂಬನಮ್ಮ
ಅವ್ಳ ನಾವೂ ಕಲ್ತು ಉಂಡರೇ ಆಗ ಇನ್ನಾರ ನಮ್ಮ ಹೊಟ್ಟ್ಯಾಗ
ಮಾಯವಾಗಿ ಹೋಗಿ ಬಿಡ್ತಾರ || ತಂದಾನ ||

ಆರು ಮಂದಿ ಮಾತಾಡ್ಕಂತ ಹೋದ್ರೆ
ಕಿವಿ ಇಟ್ಟು ಕೇಳಿ ಬಿಟ್ಲಪ್ಪಾ ಸಿರಿದೇವಿ
ಯಾರು ಚಿಕ್ಕಾಯಮ್ಮ
ಏನ್ರೀ ಜೀವದವರೆ
ನಾನೇನು ಪಾಪ ಮಾಡಿದ್ದೇನು
ನಾನೇನು ಕರ್ಮ ಮಾಡಿದ್ದೇನು
ನೋಡ್ರಿ ನಮ್ಮ ಅಕ್ಕನೋರು
ಆಡಿದ ಮಾತು ನೀನು ಕೇಳಿದ್ರೇನ್ರಿ
ಛೀ ಅವರ ಕಡಿಗೆ ಕಿವಿ ಕಟ್ಟಿಲ್ಲವೇ
ನಿನ್ನ ಕಡೀಗಿಟ್ಟೀನಿ
ಕೊಳವೇ ಜೀವದ ಗಂಡ ಬಡುದ್ರ ಬಡಿವಲ್ಲ್ಯಾಕ
ನಾನು ಬಡಿಲಾರ್ದ ಯಾರು ಬಡೀತಾರ
ಈಗ ಇನ್ನ ಧರ್ಮಕ್ಕೆ ತಾಯಿ
ಕರ್ಮಕ್ಕೆ ಹೇಣ್ತಿ ಆಗಿ
ಜೀವಕ್ಕೆ ಇನ್ನೇನು ಪರವಿಲ್ಲ
ನಿಜ್ಜ ಜೀವಕ್ಕೆ ನಾನಿದೀನಿ ನಡಿ ಅಂತ
ನಾನು ಹೇಳಿಕ್ಯಂತ ಬರುತಿದ್ರೆ
ನಿನ್ನ ಜೀವಕ್ಕ ಕೈ ಹಿಡ್ಕಳ್ರಿ ಅಂಬೊತ್ತಿಗೆ
ನೋಡ್ರೀ ನಾನು ಬಂಜಿರೋಳಂತೆ
ಒಂದು ಗಂಗೆಳುದಾಗ ಕಲ್ತು ಊಟ ಮಾಡಿದ್ರೆ
ಹೊಟ್ಟ್ಯಾಗಿರಾ ಮಕ್ಕಳು ಗೂಡಾ ಮಾಯವಾಗಿ ಹೋಗ್ತಾರಂತ
ನೋಡ್ರೀ ನಾನು ಪಾಪಾ ಮಾಡಿ ಹುಟ್ಟೀನಿ
ಅವ್ರು ಪುಣ್ಯಾ ಮಾಡಿ ಹುಟ್ಟ್ಯಾರಾ
ಇಲ್ರಿ ನಾನು ಇರಾದಿಲ್ಲ
ಈಗ ನನ್ನ ಎಲ್ಲಿ ಬಿಟ್ಟು ಬರುಬೇಕಂದ್ರೆ
ನಮ್ಮ ತಾಯಿಯವರ ಮನಿ ಸೇರ್ಸಿ ಬರುವಂತ್ರೆ ಬರ್ರಿ
ಕೇಳವೇ ಹತ್ತಲ್ಲ ಇಪ್ಪತ್ತು ಮಂದಿಗೆ
ಕೊಲ್ಹಾಕಿ ಜ್ವಾಪಾನಾ ಮಾಡವ್ನು
ಈಗ ನಿನ್ನ ಕರುಕೊಂಡು ಹೋಗಿ
ತಾಯಿ ತಂದೀ ಮನಿಯಾಗ ಬಿಟ್ಟು ಬಂದ್ರೆ
ನಿಮ್ಮ ತಾಯೀ ತಂದೀ ಏನಂತಾ ನುಡಿತಾರ
ಹೆಂಡ್ರು ಸಲುವುಲಾರದ ಕೂಳ್ಹಾಕಲಾರ್ದ
ಬಿಟ್ಟು ಹೋದ ಅಂತಾರ
ನಿಮ್ಮ ತಾಯಿ ತಂದಿ ಬಂದು ಕೈ
ಮೂಗೀತೀವಪ್ಪಾ ಕಳುಸಂದ್ರೆ
ಆಗ ಮರ್ಯಾದೆ ಸೀಟು ಇರ್ತೈತಿ
ಈಗ ಮತ್ತೆ ಕರ್ಕೊಂಡು ಬರಾಕ
ಮುಂದೆ ದಾರಿ ನಡೀತೈತಿ
ಕೊಳವೇ ಈಗ ನಿನಗೆ ಅಕ್ಕನವರ
ಮನ್ಯಾಗಿರಾಕ ಆಗೊದಿಲ್ಲಲಾ
ನಿನಗೊಂದು ಮೂರಂಕಣದ ಮನಿ ಕಟ್ಟುಸ್ತೀನಿ
ಊರು ಹೊರಗ ಅಗಸಿ ಹೊರಗ
ಈಗ ಒಂದ ಎಂಟು ದಿಸಿರು ಮನ್ಯಾಗ
ಎಂಟು ದಿಸಲ್ರಿ
ಒಂದು ಅರ್ಧ ಗಂಟೆ ತಾಸಿರದಿಲ್ರಿ ಆ ಮನ್ಯಾಗ
ಮತ್ತೆ ಹ್ಯಾಂಗನೇ ಸಿರಿದೇವಿ

ಇಲ್ರಿ ಇಲ್ಲೇ ಅಗಸ್ಯಾಗ ನೆರಿಕೆ ಕಟ್ಟಿಕೊಂಡ ಇರ್ತಿನಿ
ಎಂಟು ದಿವ್ಸ ಆಗ ಮನಿ ಕಟ್ರೀ
ಏನ್ರಿ ಆಗಿನ್ನ ನೆರಿಕೆ ಕಟ್ಟಿ ಆಗ ನೀನು ಇರ್ತೀಯಾ
ನಾನು ನೆರಿಕೆ ಕಟ್ಟಬೇಕು ನೀನು ಇರ್ತೀಯಾ ಆಗಸ್ಯಾಗ
ಊರಿಗೆ ಇನ್ನ ನ್ಯಾಯಾ ಹೇಳೋನು
ರಾಜ್ಯ ಆಳೋನು ಏನಂತಾರಾ
ಈತೇನು ನ್ಯಾಯಾ ಹೇಳ್ತಾನಪ್ಪಾ
ಆರು ಮಂದಿ ಹೆಂಡ್ರುನ್ನ ಮನ್ಯಾಗಿಟ್ಕಂಡಾನ
ಪಾಪ ಮಕ್ಕಳಿಲ್ದಾಕಿನಾ ಅಗಸ್ಯಾಗಿಟ್ಟಾನ ನೆರಿಕ ಕಟ್ಟಿ
ಈತೇನು ನ್ಯಾಯ ಹೇಳ್ತಾನಂದ್ರೆ
ಗುದ್ದ್ಯಾಡಿದವ್ರ ಜಗಳಾಡಿದವ್ರ
ರಾಜೀ ಮಾಡೋನು ನಾನು
ಊರಿಗೆ ಗೌಡ್ಕಿ ಮಾಡೋನು ನಾನು ಅಂತ
ಆಗ ಕೇಳ್ವೇ ನ್ನನ ಮರ್ಯಾದಿ ಕಳೀಬ್ಯಾಡ
ಇಲ್ರಿ
ಆಗ ಒಂದೇ ಮಾತು ಹೆಣ್ಮಗಳು ಆಯಮ್ಮ
ಎಷ್ಟು ಮಂದಿ ಹೇಳಿದ್ರು ಕೇಳಾಕಿಲ್ಲ
ನನ್ನ ಮರ್ಯಾದಿ ಹೋತಂತ
ಉಪ್ಪಾರನ್ನ ಕರ್ಕೊಂಡು ಬಂದ
ಅಗಸೀ ಹೊರಗ ಮೂರು ಗಜ
ಅಡ್ದಾಕಿ ಬಿಟ್ಟ
ಆಗ ಐದು ಗಜ ಇನ್ನ ಅಗಲ್ಹಾಕಿ ಬಿಟ್ಟ ಹಾಕಿ

ಆಗ ಇನ್ನ ಒಂದು ತೋಡ್ಯಾನಮ್ಮ
ಮೂರಂಕಣ ಮನೀ ಕಟ್ಟ್ಯಾನಮ್ಮಾ
ಮೂರಂಕಣದ ಮನ್ಯಾಮ್ಮ ಸಿರಿದೇವಿಗೆ ಕಟ್ಟ್ಯಾನಾ
ಚಿಕ್ಕ ಹೇಣ್ತಿಗೆ || ತಂದಾನ ||

ಮನಿ ಕಟ್ಟಿ ಬಣ್ಣ ಇಡ್ಸಿ
ವಡ್ರಿಗೆ ಊಟಾ ಮಾಡ್ಸಿ
ಕೇಳವೇ ಸಿರಿದೇವಿ
ಈಗ ಅಗಸೀ ಹೊರಗ ಮನಿ ಕಟ್ಟೀನಿ ಬಾರೆ
ನಡ್ರೀ ಅಂತ ಮನೀಗೆ ಬಂದ್ಳು
ಮನ್ಯಾಗ ಕುಂದ್ರಿಸಿ ಅಡಿಗೆ ಮಾಡಾಕ
ಕಸಾ ಬೊಳಿಯಾಕಾ ಒಂದು ದಾಸಿ ಮಾಡಿದ
ಸಿರಿದೇವಿ ಒಬ್ಬಾಕಿ ಇರ್ತಾಳಂತ