ಆರ್ಮಂದಿ ಅಕ್ಕತಂಗೇರು

ಒಂದೇ ತಿಂಗಳು ಎರ್ಡೇ ತಿಂಗಳಾ
ಮೂರೇ ತಿಂಗಳು ನಾಕೇ ತಿಂಗಳಾ
s ಒಂಬತ್ತು ತಿಂಗಳು ಒಂಬತ್ತು ತಾಸು ಆಗ್ಯಾವಾ || ತಂದಾನ ||

ವಿಷ್ಣು ಕೊಟ್ಟಿದ ಮಕ್ಕುಳು ದಾಸಪ್ಪ ಕೊಟ್ಟಿದ
ಹಡಿತಾರಾ ಆಗ ಹತ್ತು ಗಂಟೆಯೊಳಗೆ

ಆರು ಮಂದಿ ನೋಡಣ್ಣ
ಬ್ಯಾನಿ ಎಬಿಸಿ ಬಿಟ್ಟಾವು
ಯಮ್ಮೋ ತಡಿಯಲಾರೆ ಬರ್ರೆವ್ವಾ
ಕಂಬ ಹಿಡಿದು ಬಿಟ್ಟಾರಾ
ಅಯ್ಯೋ ಇನ್ನ ನೆನಸಲೇ
ದೇವ್ರ ನೆನಸಬೇಕು ನಾವು

ಎಲ್ಲಿ ಮೈಯ್ದಿ ಪರಮಾತ್ಮಾ
ಯಪ್ಪಾ ಗಡ್ಡಿಗಹಾಕು ಹೊರುಗಾಗಿ
ಒಳಗೆ ಇದ್ದದವರಿಗಪ್ಪ
ತೋಥಡಿ ಜೀವದಾಗ ಕಾಪಾಡೋ || ತಂದಾನ ||

ಅಂತ ಬೇಡಿಕ್ಯಂತಾರ
ಕಂಬ ಹಿಡಿದು ಬ್ಯಾನಿ ತಿಂತಾರ
ಆಗ ಯಮ್ಮಾ ದೇವರ ನಮ್ಮನ್ನು
ಗಡ್ಡಿಗ ಹಾಕು ನಮ್ಮನ್ನ ಕಾಪಾಡು ಅಪ್ಪ ಎಲ್ಲೈದಿ
ಅಂಬೊತ್ತಿಗೆ

ಆಗ ಒಬ್ಬಾಕಿ ಹಡದಾಳ
ಇನ್ನೊಬ್ಬಾಕಿ ಹಡದಾಳಾ
ಇನ್ನೊಬ್ಬಾಕಿ ಹಡುದಾಳಾ
ಇನ್ನೊಬ್ಬಾಕಿ ಹಡುದಾರ

ಆರು ಮಂದಿ ಬರೀ ಗಂಡು ಮಕ್ಕಳಪ್ಪಾ
ಒಬ್ರು ಹೆಣ್ಣು ಮಕ್ಕಳಿಲ್ಲ
ಹನ್ನೆರಡು ವರ್ಷ ವಳಗೆ
ಆರು ಮಂದಿ ಮಕ್ಕಳು ಹುಟ್ಟುದ್ರು
ಹೇ ಏನ್ರಿ ಹಾಲುಗೊಲ್ರು ಕಾಂಭೋಜರಾಜ
ನಿನ್ನ ದರಿದ್ರ ಇಲ್ಲಿಗೆ ಹೋಯ್ತು
ತಂದಿ ಮಾಡಿದ್ದು
ಆಗ ಗೋಪಿನ ಕಡಿದ್ದಿದ್ದಿಗೆ
ಹಡೇ ತಾಯಿನ ಕೊಲ್ಲಿದ್ದಗೆ
ಇಷ್ಟ ಕಷ್ಟ ಪಡ್ದು
ಮಟ ಮಟಗೆ ಕರ್ಮ ಕಳಕೊಂಡು ಬಂದಿದ್ದಗೆ

ಆರು ಮಂದಿ ಮಕ್ಕಳು ಹುಟ್ಟ್ಯಾರಯ್ಯಾ
ಆಗ ಲೋಕ ನಿಂದು ಆಯಿತಯ್ಯಾ || ತಂದಾನ||

ಈ ಚಾಂಪುರ ಪಟ್ಣದಾಗ
ಆರು ಮನಿಗಳು ನಿಂದೇ
ಒಂದು ಊರಾತ್ಯಪ್ಪಾ ಅರ್ಧ
ಏ ಯಾರ ಸೊಸೆ
ಚಾಮರಾಜನ ಸೊಸೆ
ಯಾರ ಮಗ ಕಾಂಭೋಜರಾಜನ ಮಗ
ಇದು ಗೊಲ್ರು ಮನಿ ಅದು ಗೊಲ್ರು ಮನಿ
ಅದು ಗೊಲ್ರು ಮನಿ
ಇವೆಲ್ಲ ಆತನ ಮಕ್ಕಳೇ
ಅಂದ್ರೆ ಎಷ್ಟು ಉದ್ದಾ ಆತು
ಅಂತ ಅಂಬೊತ್ತಿಗೆ
ಆಯ್ತುವಾರ ಹುಟ್ಟಿದ ಮಕ್ಳು
ಈ ಚಿಕ್ಕ ತಾಯಿ ಜೀವ ಕಳಿಯಾಕ ಹುಟ್ಟ್ಯಾರ ಅವ್ರ
ಆಗ ನೋಡ್ದ್ಯಾ
ಈಗ ದಾಸಿಯವ್ರು ಮನೀಗೆ ನೀರು ಹಾಕಿದ್ರು
ಆಗ ಬಾಣಂತ್ರಿಗೆ ನೀರ್ಹಾಕಿ ವರಸ್ಹಾಕಿ ಕುಂದ್ರಿಸಿದ್ರು
ಓಡಿ ಬಂದ್ರು ಶರಣ್ರೀ
ಆಗ ಏನಮ್ಮಾ ಮನಿಸುದ್ದೀ ಹೇಳಾಕಿ
ಗೋಪಿಗೊಲಲರದವ್ನು ಕಾಂಭೋಜರಾಜ
ಆಗಿನವ್ರು ಮನಿಗೆ ಬಂದ
ಏನ್ರಮ್ಮಾ ದಾಸಿದವರೆ
ಎಷ್ಟು ಗಂಟಿ ಆಗೈತಿ ಆರುಮಂದಿ ಹುಟ್ಟಿ
ಏನ್ರಿ ಎರ್ಡು ಗಂಟಿ ಆಗೈತಿ
ಬೆಕ್ಕೋಟೆ ಇದ್ದಾರ
ಹುಡುಗ್ರುನೋಡ
ಆಗ ಹನ್ನೆರಡು ವರ್ಷಕ್ಕ
ಮಕ್ಕುಳ ಹುಟ್ಟ್ಯಾರ
ಕಂಡ ದೇವರ ಬೇಡಿಕಂಡಂಗ
ಯಮ್ಮಾ
ದಾಸಪ್ಪ ದಾನಾವ ಕೊಟ್ಟಿದವ್ನು
ಹೇಳಿದ ಮಾತ ನಾವ್‌ ಮೀರಬಾರದು
ಎತ್ತಿಗೆಂಡ್ರೆ ಬೆಕ್ಕೋಷ್ಟು ಇದ್ದ ಹುಡುಗ್ರು
ಅತ್ತಾಗ ಎದೆಮ್ಯಾಲೆ ಒಬ್ರು ಹಾಕ್ಯಂಡ್ರು
ಆರು ಮಂದಿನ್ನ ಎತ್ತಿಗ್ಯಂಡಿದ ಮ್ಯಾಲೆ
ಹಡೆದ ತಾಯೋರು ನೋಡಿದ್ರು