ಕಾಂಭೋಜರಾಜ ಆಲೋಚ್ನೆ ಮಾಡಿದ
ಈ ಹೆಣಮಕ್ಕಳು ಮನೀ ಹೊರಗೆ ಬಿಡಲಾರ‍್ದಂಗ
ಜೋಪಾನ ಮಾಡ್ದವನು
ಈ ಊರಿಗೇ ರಾಜ್ಯತನವಾಗಿ ಆಳವನು
ಯಾರನ್ನ ಗುದ್ದ್ಯಾಡಿ ಜಗಳಾಡಿ ಬಂದ್ರೆ
ಪಂಚಾತಿ ರೂಮಿನಾಗ ನ್ಯಾಯ ಹೇಳವನು
ನ್ಯಾಯದಲ್ಲಿ ಈಗ ಹೆಣ್ಣುಮಕ್ಕಳ್ನ ಏನನ್ನ ಹೋರಾಗ ಬಿಟ್ರೆ
ಅಲ್ಲಿ ಇಲ್ಲಿ ಇನ್ನ ಮಾತಾಡಿಕ್ಯಂತ
ನನ್ನ ಹೊರ‍್ಯಾಗೆಳಿತಾರೇನೊ
ಹೇಯ್‌ ನೀವು ಹೊರಾಗ ಬರಂಗಿಲ್ಲ
ಇದೋ ಆಗಿನವರು ಊಟ ಮಾಡೋದು
ಪಗಡಿ ಜೂಜಾಡೋದು ಇಲ್ಲದಿದ್ರೆ ನಿದ್ದಿ ಮಾಡೋದು
ಅಡಿಗಿ ಮಾಡಾಗಿ ಒಬ್ಬ್ಯಾಕಿ ನೀರು ತರಾಕಿ ಒಬ್ಬ್ಯಾಕಿ
ದಾಸಿದವರು ಮನ್ಯಾಗ ಕಾಯ್ತಾರ
ಈತ ರಾಜ ಕಛೇರಿಗೆ ಬಂದು ರಾಜ ಕುಂತ್ಕೊಂಡ
ಕಾಂಭೋಜರಾಜ ಕುಂತ್ಕೊಂಡ ಮ್ಯಾಲೆ
ಈತಿನ್ನವರ್‌ ಬಂಡೀ ಕಟ್ಟಿಗ್ಯಂಡು ಬಂದಾತ
ಹೋತಿನಪ್ಪಾ
ಹೋಗಿ ಬಾರಪ್ಪಾ ಗೋಲ್ರು ಚಿತ್ತಪ್ಪ
ಏಳು ಬಂಡಿ ಕಟ್ಟಿಕ್ಯಂಡು ಬಂದ
ತಲಿಗೋಂದು ಕಂಬ್ಹಿಡುಕೊಂಡು
ಅಳತಾರೆ ತಾಯಿ ತಂದಿ
ಆಗನ್ನವರು ಊರು ನೋಡಿಲ್ಲ ಉದ್ಮಾನ ನೋಡಿಲ್ಲ
ಆರು ಕಟ್ಟಿಗೇನ್‌ ಕೊಟ್ಟಂಗ
ದಾರ‍್ಯಾಗ ಬಂದೋನಿಗೆ ಕೊಟ್ಟು ಕಳ್ಸಿದಿವಿ
ಅಂಬೊತ್ತಿಗೆ
ಹೇಯ್‌ ಯಾಕಳ್ತೀಯಪ್ಪಾ ಗೊಲ್ರು ಚಿತ್ತಪ್ಪ
ಎಂಟು ದಿವ್ಸ ಮಳ್ಹಿಡಕಂಡ್ರೆ
ತಲೆ ಇನ್ನ ಬಾತಕ್ಯಂಡು
ಸಿಂಬಳ ಸೇದಿಕ್ಯಂಡು ಕುರಿ ಸತೋತಾವ
ಬರೇ ಮಣ್ಣುಗ್ವಾಡೆ
ಈಗ ಎಂಟು ದಿವ್ಸ ಮಳೆ ಹಿಡಕಂಡ್ರೆ
ಹಂಗೆ ಕುಸ್ದೆ ಬೀಳ್ತೈತಿ
ಇದೋ ಕೋಳಿ ತತ್ತಿ ಸೀಮೆಂಟು
ಇನ್ನವರ ಗಾಜ ಇನ್ನವರ ಬೆಲ್ಲದ ಕೂಟ
ಇನ್ನವರ ಗುಂಡುಕ್ಕಾಗಿ ರುಬ್ಬಿಸಿ

ಆಗ ಇನ್ನ ಮನಿಕಟ್ಟಿಸ್ಯಾನ ಉಕ್ಕೀನ ಕಡ್ಡಿ ಕೂಟಯ್ಯಾ || ತಂದಾನ ||

ಉಕ್ಕಿ ಕಂಬದ ಕೂಟ ಮನಿ ಕಟ್ಸ್ಯಾನ
ನೆಳ್ಳಾಗೆ ಆಗ ಕುರ್ಚಿ ಮ್ಯಾಲೆ ಕುಂತು
ಬೆಳೇ ಪತ್ರದ ಮ್ಯಾಲೆ
ಕರಣಗಿ ಇಟ್ಟು ಬರದು
ತುಪ್ಪದಲ್ಲಿ ಊಟ ಮಾಡ್ತಾನಪ್ಪಾ
ಏನು ಪರಿವಿಲ್ರೀ
ಹಂಗಾಗಲಪ್ಪಾಂದ
ನಿನಗ್ಯಾಗ ಸಂತೋಷಾಗೈತೋ ನನಗೆ ಸಂತೋಷ
ನೋಡ್ರಿ ಹೆಣಮಕ್ಕಳು ನೋಡಿ
ಒಳ್ಳೇ ಮನಿತನ ನೋಡಿ
ನಾವ ಕೊಟ್ರೆ
ಅದು ಮನಿತನ ಆಗಾದಿಲ್ಲ
ಯಂತಾವನ್ನಾಗಲಿ ಗೊಜ್ಜಿನ ಪಲ್ಯ
ಸಿರಿಸೇಲಿ ಪಲ್ಯ ತಿಂಬೋನ್ನಾಗಲಿ
ಗುಣನೋಡಿ ಮಕ್ಕಳು ಕೊಟ್ರೆ ಆಗ್ಹ್ಯೊಯ್ತು

ಈಗ ಮಕ್ಕಳ್ಹೋದ ಮ್ಯಾಲಪ್ಪಾ ಅವರು ಮನಿ ಏರಿ ಬೆಳಿತೈತೋ
ಗುಣಾ ಬೇಕು ನೋಡಪ್ಪಾ ನಾವು ಹಣ ಏನು ಮಾಡಾನಾ
ಹೆಣಗಕ್ಯಂಬಾನಾ || ತಂದಾನ ||

ಅಷ್ಟಾಗಲಪ್ಪ ಅಂದ
ಆಗ ಊಟ ಮಾಡ್ರಿ
ಯಾಕ್‌ ಕುಂತೀರಿ
ತಲಿಗೊಂದು ಕಂಬ ಹಿಡಕಂಡು ದುಃಖ ಮಾಡ್ತೀರಿ ಅಂದ
ಆವತ್ತು ಊಟ ಮಾಡಿದರವರು
ಈತ ಕಾಂಭೋರಾಜ

ಒಂದೇ ವರುಷ ಇನ್ನು ಆಳ್ಯನಮ್ಮಾ
ಎರ್ಡ ವರುಷ ಇನ್ನು ಆಳ್ಯನಮ್ಮಾ
ಎಂಟೋರ್ಷವಾಗೈತೋ ಒಬ್ಬಾಕೆನ್ನ ಹಡದಿಲ್ಲ
ಯಮ್ಮೋ ಒಬ್ಬಾಬ್ಯಾಕ್ಯಮ್ಮೋ ಇನ್ನು ಖರಸೆದಪ್ಪ ವಾಗ್ಯಾರ
ತಿಂದೂ ತಿಂದೂ ಊದಿಕ್ಯಂಡಾರ || ತಂದಾನ ||

ಒಂದು ಬಿಸಿಲು ಬಡ್ಯಂಗಿಲ್ಲ ಜೀವಕ್ಕ
ವಂದು ಬಗ್ಗಿ ಇನ್ನವರ್ತಾ ಬದುಕು ಮಾಡಂಗಿಲ್ಲ
ಒಬ್ಬೊಬಾಕಿ ಬಾಕಿಲು ಹಿಡಿಲಾರದ್ಹಂಗ ಆದ್ರು
ತಾಯೋರು ಊರಾಗ ಥೆಳಗ ಕೆತ್ತಿದ ಗೊಂಬಿ ಇದ್ದಂಗ
ಕಟ್ಟಿಗಿ ಇದ್ದಂಗಿದ್ರು
ಆಗ ಮದುವಿ ಮಾಡಿದವರು ನೋಡಿದ್ರು
ನಾನು ಮದುವಿ ಮಾಡೇನು ಮಾಡಿ ಬಿಟ್ಟಿವಿ
ನಮ್ಮೆಸುರು ಏನು ನಿಂತು ಬಿಡ್ತು
ಇಂತವ್ರು ಪಾಪ ನಾಲೋರು ಕೂಡಿ ನನ್ಗೆ ನಾಕ್ಯೆ ಮಾಡಿಬಿಟ್ರು
ಎಂಟು ಕೈ ಮಾಡಿಬಿಟ್ರು ನನ್ಗೆ ಮಕ್ಕಳು ಉದ್ಧಾರಾದ್ರಂಬಂಗಿಲ್ಲ
ಈತಗ ಮಕ್ಕಳಾಗಲಿಲ್ಲ
ಎರ‍್ಡು ಆತನ ಹಿಂದೆ ವರುಷಕ್ಕೆ ಲಗ್ನ ಮಾಡಿಕ್ಯಂಡಾರ
ಒಂದು ಹೆಣ್ತೀಗೆ ಇಬ್ರು ಹಡುದಾರ
ಒಂದು ನಡೀತೈತಿ ಒಂದು ಬಗಲಾಗೈತಿ
ಇಲಾ ಏಳು ಮಂದಿ ಎಮ್ಮೆಗೊಡ್ಡುಗುಳು ಇದ್ದಂಗ ಅದಾವ
ಅರೇ ಕಡೀಗೆ ಒಂದ್ಹೇಣ್ತಿನ ಹಡಿಬಾರ‍್ದಾ
ಒಂದು ಕುರ‍್ಡಿ ಕುಂಟಿನ್ನ ಹುಟ್ಟುಬಾರ‍್ದಾ
ಇದೇನು ಕರ್ಮ ಇರಬೋದು
ಅಂತ ಆಗ ಬಂದ್ರು
ಏನ್ರೀ ರಾಜ ಕಛೇರಿಗೆ ಬಂದು
ಯೇಸು ಮಂದಿ ಮಕ್ಕಳ್ರಿ ನಿನಗೆ ಏಳು ಮಂದಿ ಹೆಂಡ್ರಗೇ
ನೋಡ್ರೀ ನೋಡಿ ನೋಡಿ ಇನ್ನವರತ್ತ ಕೇಳುತಿದ್ರಲ್ರೀ
ನೀವೇ ಮಾಡಿದ್ರಿ ನನ್ ಜೀವಕ್ಕ
ಒಂದ್ಹೇಣ್ತಿ ಹಡದಲ್ರೀ ಅಂದ
ಯೆಯ್ಯಪ್ಪಾ ಇದೇನು ಕರ್ಮ
ನೋಡೋನಂತ ಶಾನಭೋಗರಿಂದ
ತಾಳೆಗರಿ ಹೊತ್ತಿಗೆ ತೆರದು ನೋಡಿದ್ರು
ನೋಡ್ರೀ ಉಗುರೋಷ್ಟು ಪಾಪೈತಿ
ಬಳ್ಳೆಳ್ಳೋಟು ಕರ್ಮ ಐತಿ
ಈಗ ದೇವರು ನಿಧಿಗಳೆಲ್ಲ ತಿರಿಗಿ
ಗುಡಿಗೀಟು ಗುಡಿಗೀಟು ಕರ್ಮ ಕಳಕಂಡು ಬಂದ್ರೆ
ಆಗ ಏಳು ಮಂದೀಗೆ ಮಕ್ಕಳಾಗ್ತಾವ್ರೀ ಅಂತ ಹೇಳ್ದ
ಹುಟ್ಟಿದಾಗಲಿದ್ದ ವಂದ್‌ ಹರ‍್ದಾರಿ ದಾರಿ ನಡದಿಲ್ಲ
ಕಾಲ್ಮರಿ ಬಿಟ್ಟು ದಾರಿ ನಡದಿಲ್ಲ
ಕುದುರಿ ಬಿಟ್ಟು ನಡಿಲಿಲ್ಲ
ನೋಡಪ್ಪಾ ಬಿಳೇಪತ್ರ ಮ್ಯಾಲೆ ಕರಣಗೀಟು ಬರ‍್ದು
ಬಿಳೀ ಇನ್ನವರ ಅನ್ನ ಊಟ ಮಾಡಬೇಕಂದ್ರೆ ಆಗಂಗಿಲ್ಲ
ಊರು ಗೌಡಕೆ ಊರೇ ಬಿಡಬೇಕು ನೀನು
ಊರು ಬಿಟ್ಟು ಮೂರು ಗಾವುದ ಹೋಗಬೇಕು
ಮೂರು ದಾರಿ ಕಲೇತಲ್ಲಿ ಮೂರು ಮಟಾ ಕಟ್ಬೇಕು
ಹಿತ್ತಾಳಿಮಟ ರಾಗಿ ಮಟ ಬೆಳ್ಳಿ ಮಟ
ಇನ್ನ ದೇವರಿಲ್ಲ
ಸುಮ್ನೆ ಮಟಗಳು ಕಟ್ಟಬೇಕು
ಎದುರು ಬಸವಣ್ಣಾ ಅಂತ
ಬೆಳ್ಳಿ ಬಸವಣ್ಣನ ನಿಂದ್ರಸಬೇಕು
ನಿಮ್ಮ ತಂದಿ ಬಸವಣ್ಣನ ಕಡದಾನ
ಹೊಟ್ಟ್ಯಾಗಿರೋ ಮಗ ಬಸುವೇಶ್ವರ
ಅಮ್ಮಾ ಅಂತ ಸತ್ತೋಗ್ಯಾನ
ಎದುರು ಬಸವಣ್ಣ ಮಾಡಬೇಕು
ಈಗ ಏಳು ಪಾಂಟಿಗೆ ಬಾಯಿ ಕಟ್ಟಬೇಕು
ಒಬ್ರು ಕೂಲ್ಯಾಳು ಕರಕಂಡು ಹೋಗಬಾರ‍್ದು
ಏಳು ಮಂದಿ ಹೆಂಡ್ರು ನೀನೇ
ನೀನು ಗಡಾರು ಚಲುಕಿ ಹಿಡಿಬೇಕು
ಏಳು ಮಂದೀಗೇ ಏಳು ಬುಟ್ಟಿ
ಏಳು ಕೊಡಾ ಕುಡಬೇಕು
ಆಗ ಕುಲದಲ್ಲಾಗಿ ದೊಡ್ಡ ಮಾವಳಿ
ಚಿಕ್ಕಮಾವಳಿ ಚರಿಗಿ ಮಾವಳಿ
ಮೂರು ಊರು ದಾರೀಗೆ
ಮೂರು ವನಂತ್ರ ಹಾಕಬೇಕು
ಮೊಣಕಾಲಷ್ಟು ಕುಣಿತೋಡಿ
ಬೀಜನಾಟಗ್ಯಾಂತ ಹೋಗಬೇಕು
ವಂದ್‌ ವಂದ್‌ ಬೀಜಕ್ಕ
ವಂದ್‌ ವಂದ್‌ ಕೊಡ ನೀರು ಹೋರಬೇಕು ಹೆಂಡ್ರು
ಇದೋ ಬೊಗ್ಗಿದ ನಡುವು ಹಿಡಕೊಂಡ ಹೋಗಬೇಕು
ಗಡಾರ‍್ಹಿಡಿದಿದ್ದು ಕೈಯಾಗ ಬೊಬ್ಬೆ ಹೊಂಟಬೇಕು
ಮಕದ ಮ್ಯಾಲೆನ ನೀರು ನೆಲಕ್ಕ ಬೀಳಬೇಕು
ಆಗ ಭೂಮಿಗಿ ಬೀಳಬೇಕು
ಭೂಮ್ಯಾಗಿದ್ದ ಬೀಜ ಹೊರಗೊಂಡಬೇಕು
ಹೊರಗ ಹೊಂಟೂ ಆಗ ಇನ್ನ ಗಿಡಕ ದೊಡ್ಡದು ಮಾಡಬೇಕು
ಅದ್ರಾಗ ಹೂವ್ವ ಆಗ್ಬೇಕು
ಶಿವರಾತ್ರಿ ಶಿವಲಿಂಗದಷ್ಟು ಆಗಬೇಕು
ಲಿಂಗದೋಟು ಹೋಗಿ
ಊಗಾದಿಗೆ ಊದಿಕ್ಯಂಡು ಹಣ್ಣು ಆಗಬೇಕು
ಹಣ್ಣು ಮಾರಬಾರ‍್ದು
ಹಣ್ಣು ಹರೀ ಬಾರ‍್ದು
ಗಿಡಮ್ಯಾಲೆ ಒಣಗಬೇಕು
ಗಿಡಮ್ಯಾಲೆ ಉದುರ‍್ಹೋಗುಬೇಕು
ಈ ಹಣ್ಣು ನಾತ ಎಲ್ಲೀಗ್ಹೂಡಿಬೇಕಂದ್ರೆ
ಏಳು ಸಮುದ್ರದ ಆ ಕಡಿಗೆ
ಜೀವ ಗಡ್ಡಿ ಒಳಾಗಿರೋವು
ಗಿಣಿ ಕೋಗಿಲ ಬರಬೇಕು
ಏಳು ಸಮುದ್ರದ ಆಕಡೇಗಿರೋವು
ಆಗೆ ಆವು ಬರಬೇಕು
ನೀನ್ಹಾಕಿದ ಗಿಡುಗುಳು ಹಣ್ಣು ತಿನಬೇಕು
ತಿಂದ ಗಿಣಿಗೆ ಗುಬ್ಬಿಗೆ ಮಕ್ಕಳು ಆದ್ರೆ
ಆಗ ಪಾಪ ಮಿಂದ್ಹೊತೈತಿ
ಆಗ ನಿನ್ಹೆಂಡ್ರಿಗೆ ಮಕ್ಕಳಾಕ್ತಾರ
ಇಲ್ಲದಿದ್ರೆ ಇಲ್ಲಪಾ
ಓಹೋ
ಯಾವ ಮಠಗುಳಿಗ್ಹೋಗಿ ಕರ್ಮ ಕಳೀಬೇಕು
ಹುಟ್ಟಿದಾಗಲಿದ್ದ ಮನಿಬಿಟ್ಟು ಹೊರಾಗ ಹೊಂಟಿದವನಲ್ಲ
ಯತ್ತಾಗೈತೋ ಮಟುಗಳೆಲ್ಲಾ
ನೋಡಪಾ
ಗಂಡಿರುವಿಗೇ ಆಗ ಬೆಲ್ಲಂಚ್‌ಬೇಕು
ಕೆಂಪಿರುವಿಗೇ ಸೆಂಕ್ರಂಚ್‌ಬೇಕು
ಆಗ ದಾರಿಹಾದಿವಳಗೇ
ಆಗ ನಿಲುವು ಕೊಲ್ಲಿಗೆ ಕೈ ಮುಗಿಬೇಕು
ಮಟುಗಳುಗೆಲ್ಲ ಬಗ್ಗಿ ಶರಣು ಮಾಡ್ಬೇಕು
ಈಗ ಇನ್ನ ಕಾಲ್ಮರಿ ಕೂಟ ನಡೀಬಾರ್ದು
ದೇವನಿಧಿಗ್ಹೋದ್ರೆ
ಏನಪ್ಪಾ ನಿನ್ಗೇನು ಕಾಲ್‌ ಸವುದೋಗ್ತೈತಾ
ಈಗ ಕಾಲ್ಮರಿಕೂಟ ಬಂದು
ನನಮುಂದೆ ಬಿಟ್ಟು ಕೈಮುಗಿತಿಯಾ
ಕಾಲ್ಮರಿರ್ಲೋಗು ಅಂತಾನ
ಛೆತ್ರಿ ನೆಳ್ಳಮ್ಯಾಲ್ಹೋದ್ರೆ
ನಿನ್ಗೇನಪ್ಪಾ ಬಿಸಿಲ್ಹೊಡದೈತಾ
ಮಕ ಬಾಡೈತಾ
ನಿನ್ಗೇನು ಕಷ್ಟ ಬಂದೈತೆ
ಬೇಸು ನೆಳ್ಳಿಟ್ಟಿಗಂಡು ಬಂದೀ
ಹೋಗೊs ನಿನ್ಗೆ ಯಾರು ವರುವು ಕೊಡ್ತಾನಮ್ತ
ಕುದ್ರಿಮ್ಯಾಲೆ ಕುಂತ್ಹೋದ್ರೆ
ನಿನ್ಗೇನಪಾ ನಡ್ದು ಬಂದೀಯಾ
ಕೈಕಾಲ್ಹಿಡಕಂಡಾವ
ಬೇಸು ಕುದ್ರಿ ಮ್ಯಾಲೆ ಎಗುರ್ಕಂತಾ ಬಂದೀಯ
ನಿನಗೆ ವರವು ಕೊಡದಿಲ್ಲಂತಾರ
ನೋಡುಪಾ ದೇವ್ರು
ನಿಧಿ ನೋಡಕ್ಹೋಗಬಾಕಂದ್ರೆ
ಹಗಲೋರಾತ್ರಿ ನಡೀಬೇಕು
ಕಾಲ್ಮರಿ ಇಲ್ದಂಗ
ಛತ್ರಿನೆಳ್ಳು ಇಲ್ಲದ್ಹಂಗ
ಕುದ್ರಿಲ್ದಂಗ

ನೆಡಕಂಡೆ ಹೋಗ್ಬೇಕೂ ದೇವ್ರೂ ಮಟುಗುಳೀಗಿಯೋ || ತಂದಾನ ||

ಗೋಸಿ ಕರ್ಮ ಕಾಸ್ಯಾಗ ಬಿಡ್ಬೇಕು
ಕಾಸಿಲಿದ್ದ ತಿರುಪತಿಗೆ ಬರ್ಬಕು
ಗೊಲ್ರು ಮುರ್ನಾಮ ನಿನ್ನ ಮನಿದೇವ್ರು
ಅಲ್ಲಿದ್ದ ಎಲ್ಲಿ ಬರಬೇಕು ತಾ ಜೀವಕ್ಕಾಗಿ
ಕೋಟಿ ನಿಧಿಗೆ ಬರ್ಬೇಕು
ಕೋಟಿ ಕೊಟ್ಯೆಂದ್ರೆ ಎಲ್ಲಿ
ಹಂಪಿ ಮಠ
ಗುಂಡುಗೆ ದೇವ್ರೆ ಕೊಲ್ಲಿಗೆ ದೇವ್ರೇ
ಗಿಡುಕ್ಕೆ ದೇವ್ರೇ ಗೇಣುಗೇಣಿಗೆ ದೇವ್ರೇ
ಹೊಳಿದಂಡ್ಯಾಗ ಸ್ನಾನ ಮಾಡಿ
ಆಗಿನ್ನವರ್ತಾ ಕೋಟಿ ದೇವ್ರಿಗೆ ಪೂಜೆ ಮಾಡ್ದುರೆ
ಕೋಟಿಮಕ್ಕಳು ನಿನ್ನೆಂಡ್ರು ಏಳುಮಂದಿ ಮಕ್ಕಳು
ಅಲ್ಲಿ ಪರ್ಹಾರ ಮಾಡಿ ಎಲ್ಲಾರೂ ಕಲ್ತು ನಿನ್ನ ಜೀವ್ಗೆ ಮಕ್ಕಳು ಕೊಡ್ತಾರ
ಹುಟ್ಟಿದಲ್ಲೆ ಅವ್ರು
ಈಗಿನ್ನವರು ಇಲ್ಲಿ ಇರ್ಲಾರ್ದಂಗ
ಈಗ ಯತ್ತಾಗ್ಳೋರು ಅತ್ತಾಗ ಹೋಗಿ
ಜೀವ ನಿಧಾನಾದಲ್ಲಿ ಜೀವಕ್ಕೆ
ಶಾಂತ್ಯಾಗಿತ್ತಲ್ಲಿ ನಿಂತಗಂಡ್ಹಾರ
ಓಹೋ ಮೂರು ದಾರಿ ಕಲ್ಯೋತಲ್ಲಿ
ನೀನು ಮೂರು ಮಟ ಕಟ್ಟಬೇಕು
ಅಬಾಬಾ
ಉಳ್ಳೇಗಡ್ಡೆಲ್ಲ ಇನ್ನವರ್ತಾ ಬೊಳ್ಳೊಳ್ಳಷ್ಟು ಪಾಪಂದ್ರು
ಅಬಾ ಬಳ್ಳಾರುದ್ದ ಬಳ್ಳಾರಗಲಾಗೈತಿದು
ಇದೆಲ್ಲಾ ತೀರಿಸಿಗ್ಯಂಬೋತ್ತಿಗೇ

ಮುದೇನುವಾತೀನಿ ನಾನು ಜಲ್ಮ ಕಳೆದು ಬುಡತೀನಿ || ತಂದಾನ ||

ಸಾಯೋಕಾಲಕ್ಕೆ ಮಕಳಾದ್ರೆ
ಮಕ್ಕಳ ಸುಖ ಏನ್‌ ಪಡ್ಹಂಗ ನಾನು
ಮಕ್ಕಳ ಕೈಲಿ ಏನ್‌ ಊಟ ಮಾಡ್ಹಂಗ ಅಂತಾರಲ್ಲ
ಈಗ ಜೀವಕ್ಕೆ ನಾವೇನು ಮಾಡಾನಪ್ಪಾ ಅಮ್ತಾನ
ಛೀ ಅದೆಲ್ಲ ಕಳ್ಕಂಡ್ರೆ ಮಕ್ಕಳಾತಾರ ಇಲ್ಲದಿದ್ರೆ ಇಲ್ಲಂದ
ಆಗ ಇನ್ನ ಮಗ ಏನ್‌ ಮಾಡ್ದ ಕಾಂಭೋಜರಾಜು
ತಾಯಿ ಪಾದ ಮುಗ್ದ
ಇದೋ ಅಮ್ಮಾ ನಾನ್ಹೋತಿನಿ
ಎಲೈತೋ ಎಲ್ಲಿಲೋ ಮಟುಗುಳು ಏಸ್‌ ದಿನಾತೈತೋ
ನಾನು ನಡ್ದೋಗ್ಬೇಕಂದ್ರೆ