ಈ ಆರು ಮಂದಿ ಮಕ್ಳ ತಾಯೋರು
ಸಿರಿದೇವಿಯಮ್ಮನ ಅಕ್ನೋರು ಏನ್‌ ಮಾಡಿದ್ರು
ಸ್ನಾನ ಮಾಡಿಕ್ಯಂಡು
ಈಗ ಗಬಾಕ್ಷಿಲಿದ್ದ
ನಿಚ್ಚಿನಾಗಲಿದ್ದ ಮಾಳಿಗೇರಿ
ಕೂದಲ ಆರಿಸಕ್ಯಂಬ್ತಾರ ಬಿಸಿಲಿಗೆ
ಮಾಲಿಗೆ ಮ್ಯಾಲೆ ನಿಂತ್ಗಂಡೋರು
ಎಲ್ಲ ಲೋಕೆಲ್ಲ ಕಾಣ್ತೈತಿ
ಆಗ ಮಾಳಿಗೆ ಮ್ಯಾಲೆ ನಿಂತ್ಕಂಡು ನೋಡ್ರು
ಏಯಮ್ಮಾ ಊರು ಹೊರಾಗ
ಈಗ ನಮ್ಮ ಮಕ್ಕಳು
ಎಷ್ಟು ಎತ್ತರ ಬೆಳೆದು ಬಿಟ್ಟಾರ
ಯಮ್ಮಾ ಈಗಿನವರು ಎಷ್ಟು ಚೆಂದ ಐದಾರಮ್ಮ
ಕೊಬ್ಬು ಬೆಳೆದಾಂಗ ಬೆಳೆದಾರ
ಈಗ ಹತ್ತು ತಿಂಗಳಲ್ಲ
ಹತ್ತು ವರುಸಾಯ್ತು ಮಕ್ಕಳು ಕರ್ಕಂಡು ಹೋಗಿ
ಹುಟ್ಟಿದ ಮೂರು ಗಂಟೆ ಹುಡುಗರು
ಬಂಜಿರವಳ ಕೈಗಿ ಕೊಟ್ಟಿವಿ
ಹಿಂಗೆ ಹೋತಾನ ಗಂಡ
ಉಂಡಿರ್ಯಾ ಉಂಡಿಲ್ಲ ಸತ್ತೀರ್ಯಾ ಐದೀರ್ಯಾ
ಅಂತ ಮನೀಗೆ ಬಂದು ಮಾತಾಡಂಗಿಲ್ಲ
ಯಮ್ಮಾ ಆಗ ಮಕ್ಕಳು ಅವಳ ಕಡೆಗಾದುರು
ಈಗ ಗಂಡ ಅವಳ ಕಡಿದ ಆದ
ಯಮ್ಮಾ ನಮ್ಮ ಮಕ್ಕಳು
ನಾವು ಹಡೆದ್ರು ಒಂದೇ
ಹಹಡೀಲಾರ್ದು ಒಂದೇ
ಯಂಗಮ್ಮಾ ನಮ್ಮ ಮಕ್ಕಳು ಬರಾದು
ಆರು ಮಂದ್ಯಾಗ ಒಬ್ಬಾಕಿ ನೋಡಿಬಿಟ್ಟು
ತೊಂಟಿಗಿತ್ಯಾಕಿ ಕಲ್ತಿನಿ
ಯಮ್ಮಾ ಮೂರು ದಿವ್ಸ ಒದ್ದಾಡಿ
ಒಂದ ಶಾಸ್ತ್ರ ಕಲ್ತಕಂಡಿನಿ
ಒಂದು ಮಂತ್ರ
ಅದೇನ ಮಂತ್ರ ಹೇಳೆ
ಏನಿಲ್ಲ ನಮ್ಮ ಮಕ್ಕಳು
ನಮ್ಮ ಗಂಡ
ನಮ್ಮನೀಗ ಬರಂತ ಮಂತ್ರ ಕಲಿತಿನಿ
ಸರಿಬಿಡು ಹೇಳಮ್ಮಾ
ಏನಿಲ್ಲ ಇರಿಶೆಟ್ಟಿ ಅಂಗಡಿಗೆ ಹೋಗೋದು
ತೊಲ ತೂಕ ಮದ್ದು ಕೊಂಡುಕೊಳ್ಳೋದು
ತೊಲ ತೂಕ ಮದ್ದು ಕೊಂಡೊಕೊಳ್ಳೋದು

ಅದು ಏನು ಸಾಯೋದಲ್ಲ
ಸುಮ್ನೆ ಮಾತಾಡಲಾರದಂಗ ಕೆಳಗೆ ಬೀಳೋದು
ಆಗ ಮಾವಳೆಹಣ್ಣು ಕೊಂಡ್ಕೋಬೋದಪ್ಪ
ಒಂದೊಂದು ಚರಿಗೆ ದಪ್ಪ ಇರೋದು
ಉಗುರಗಲ ಕೊಯ್ಯೋದು
ಆದರಾಗ ಮದ್ದು ತುಂಬಿಸೋದು
ನಾವು ಒಯ್ಯಾನ ಗೋಲಿ ಆಡೋತಲ್ಲಿಗೆ
ತಗೊರಪ್ಪ ಹುಡುಗರಂಬಾನ
ನಮ್ಮನ್ನ ನೋಡಿ ಹೆದಿರಿಕ್ಯಂಡು ಓಡಿಹೋತಾರ
ಯಮ್ಮಾ ಒಂದು ತಾಯಿಗೆ ಹುಟ್ಟಿ
ಒಂದು ಗಂಡನ ಮಾಡಿಕ್ಯಂಡಿವಿ
ಯಾರನ್ನ ಸಾಯೋತನಕ ನಮಗ ಸುಖ ಆಗಾದಿಲ್ಲ
ಇಗೋ ತಂಗಿ ಮನಿಗೆ ಹೋಗಿ
ತಂಗಿ ಕೈಗ ಕೊಡಾನ
ತಂಗಿ ಕೈಯಲ್ಲಿದ್ದ
ಮಕ್ಕಳಿಗೆ ಕೊಡ್ತಾಳ
ಮಕ್ಳು ತಿಂದು ಕೆಳಾಗ ಬಿಳ್ತಾರ
ನಾವು ಆರುಮಂದಿ
ರಾಜ ಕಛೇರಿಗೆ ಬಂದು
ಈಗ ಗಂಡನ ಕರಕಂಡ್ಹೋಗಿ ತೊರ್ಸಾನ
ನಮ್ಮಕ್ಕಳ ನಮ್ಗ ಕೊಡ್ತಾನ
ಈಕಿ ಮಕ್ಕಳಿಗೆ ಇಟ್ಟಿದವಳು
ನಾಳೆ ಗಂಡಗ ಇಕ್ಕೋಳು
ಈಗ ಇಂಥಾ ಸಿರಿದೇವಿ
ಇರಬಾರದು ಊರಾಗಂತ
ಜೀವದಲ್ಲಿ ಆಗ ಈ ಹೂವಿನ ಹಾರ ಹಾಕಿ
ಮ್ಯಾಳ ತಾಳಕೂಟ
ಸುಡುಗಾಡು ರುದ್ರಭೂಮಿಗೆ
ಕರ್ಕಂಡು ಹೋತಾರ
ಜೀವ ಇದ್ದ ತಾಯಿ ನೀ

ಸುಡುಗಾಡುದಾಗ ಕಡದು ಬರುತಾರಮ್ಮಾ
ಮಕ್ಕಳಿಲ್ಲದ ತಂಗೀನ || ತಂದಾನ ||

ಜೀವದಲ್ಲಿ ಕಡದು ಬರುತಾರ
ಇನ್ನೆನಮ್ಮ ನಾವೇನಿಲ್ಲ
ಹುಣಿಸೆಹಣ್ಣು ಮಜ್ಜಿಗೆ ಕಲಸೋದು
ಕುಡಿಸೋದು
ಬಡಿ ಬಡಿ ತಿರುವಿಕ್ಯಂತಾರ
ಮ್ಯಾಕ ಎದ್ದು ಕುಂದುರುತಾರ
ಇನ್ನ ಮಜ್ಜಿಗ್ಯನ್ನ ಕಲಸೋದು ತಿನಿಸೋದು
ಹೊಟ್ಟ್ಯಾಗ ತಣ್ಣಾಗ ಆಕ್ತೈತಿ
ನಮ್ಮ ಮಕ್ಕಳು ನಮಗಾತಾರ
ಗಂಡ ನಮ್ಮ ಕಡೀಗೆ ಬರ್ತಾನ
ಮಕ್ಕಳು ನಮ್ಮ ಕಡೀಗೆ ಬರ್ತಾರ
ಏ ಯಮ್ಮಾ ಒಳ್ಳೇ ಮಂತ್ರ ಕಲ್ತಿ ಬಿಡೆ
ಅಂತಾ ಕೂದಲೂ ಬಿಟ್ಗಂಡು ಒಂದೊಂದು
ರಾಕ್ಷಸುಗುಳ ಇದ್ದಂಗ ಅದ್ಯಾವಪ್ಪ
ಇರಿಶೆಟ್ಟಿ ಅಂಗಡಿಗೆ ಬಂದ್ರು
ಏನ್ರಿ ಇರಿಶೆಟ್ಟಿ
ತೊಲ ತೂಕ ಮದ್ದು ಕೊಡ್ರಿ ಅಂದ್ರು
ಏಯಮ್ಮಾ ಮೊದ್ದಂದ್ರೆ
ತಿಪ್ಪಿ ಮ್ಯಾಲೆ ಒಗಿತಾರ ನನ್ನ ಅಂಗಡಿ ಕಿತ್ತಿ
ಏ ಊರಾಗ ಅವುಷದ್ಧ ಮಾರಿಕ್ಯಾಂತದೀಯ
ಊರ ಮಕ್ಕಳೆಲ್ಲಾ ಹಾಳು ಮಾಡಾಕ ಅಂತಾರ
ಮತ್ತೆ ಏನ ಮಾಡಬೇಕು ಶೆಟ್ಟಿ
ಏನಿಲ್ಲ ತೋಲಮದ್ದು ತಿರುವಣ ಕೊಡ್ರೀ ಅಂದ್ರೆ
ನನಗೆ ಅರ್ಥ ಆಗತೈತಿ ಅಂದ
ಅಷ್ಟೇ ಆಗಲಂತ
ತಕ್ಕಡಿ ಒಳಗ ರೂಪಾಯಿ ಹಾಕಿದ ಆಗ ಸೌಟಕೂಟ
ಗಾಜ್ನ ಬುಡ್ಡದಾಗಿರೊ ಮದ್ದು
ಆಗ ತಕ್ಕಡಿಯೊಳಾಗ ಹಾಕಿ
ಬಂಗಾರ ತೂಕ ಮಾಡಿದಂಗ ಮಾಡ್ದ
ಅವುಷದ್ದಾನ ಚೀಟಿ ಕಟ್ಟಿದ
ಆಗ ಕೋಡೋ ಹೊತ್ತಿಗೆ
ಕೈಲಿ ತಗಂಡು
ಒಂದೊಂದು ಹಣ್ಣು ಚರಿಗೆದಪ್ಪ
ದೊಡ್ಡ ಮಾವಿಳಣ್ಣು
ಒಂದು ಹಣ್ಣು ತಿಂದು ಅಗಲ ಕೊಯ್ದು
ಮದ್ದು ತುಂಬಿಸಿದ್ರು
ಆರು ಮಂದಿ
ಆರು ಹಣ್ಣು ಕೈಯಲ್ಲಿಡ್ಕಂಡು
ಗೋಲಿ ಆಡೋತಲ್ಲಿ ಬಂದ್ರು
ಯಪ್ಪಾ ಮಕ್ಳಾರ
ಒಂಭತ್ತು ತಿಂಗಳು ಹೊಟ್ಟ್ಯಾಗ್ಹಿಡುದು ಹಡ್ದೀವಿ
ಮೂರು ಗಂಟೀಗೆ ತಂಗಿ ಕೈಗ ಕೊಟ್ರು

ನಾವೇ ಇನ್ನ ತಾಯೋರು ಬಂದೀವಿ
ಯಪ್ಪಾ ತಗೋರಪ್ಪ ಹಣ್ಣಾಗಿ ನಿಮಗೆ || ತಂದಾನ ||

ತಗೋರಪ್ಪ ಮಕ್ಕಳ್ಹಾರ ಅಂಬೋತ್ತಿಗೆ
ಹುಡುಗ್ರು ಗೋಲಿ ಆಡೋರು ನಿಂತ್ಗಂಡು ನೋಡಿದ್ರು

s ಇವರೇ ನೋಡು ಲಂಬಡಿಕೇರು
ಹೇ ಅಡವಿ ಚಂಚರು ಇವರಲೇ
ಹಿಡಕಂಡು ಹೋಗಾಕ ಬಂದಾರ
ಲೇಯ್ಗೋಲಿ ಬ್ಯಾಡ ಏನು ಬ್ಯಾಡ
ಮಗನೇ ನೀನು ಓಡೋ ನಾನು ಓಡೋ
ಆಗ ಓಡೋಡಿ ಬಂದಾರ || ತಂದಾನ ||

ಮನ್ಯಾಕ ಬಂದ್ರು
ವರುಸಿನ ಮ್ಯಾಲೆ ಮಲಗಿದ ತಾಯಿ ಸಿರಿದೇವಿ

ಯಮ್ಮಾ ಎದ್ದೇಳಮ್ಮ ಎದ್ದೇಳೆ ಅಮ್ಮ
ಯಮ್ಮಾ ಬಂದ್ರು ಬಂದ್ರು ಹಿಡಕಂಡು ಹೋಗುವರು || ತಂದಾನ ||

ಎಡಕ್ಕಲ್ಲಿದ್ದ ಬಲಕ್ಕೆದ್ದು ಬಿಟ್ಳು
ಯಪ್ಪಾ ಎಲ್ಲಿ ಹಿಡ್ಕಂಡು ಹೋತಾರ
ಯಮ್ಮಾ
ಏನ್‌ ಲಂಬಡಿಕೇರು ಅಡವಿ ಚಂಚರು
ಆರಕಟ್ಟಿಗೇರು ಹಣ್ಣು ಕೊಡಾಕ ಬರ್ತಾರಮ್ಮ
ಗೋಲಿ ಬಿಸಾಕಿ ಬಂದೀವಿ
ಲೇಯ್‌ ಮನ್ಯಾಗ ಆಡಂದ್ರೆ
ಹೊರಗ ಹೋಗಂತ ಯಾರು ಹೇಳಿದ್ರು
ಯಮ್ಮಾ ನಾನಲ್ಲ
ದೇವರಾಣೆ ಅವನೇ ನೋಡು
ಕುರುಡ್ಯೇವ್ನು ಮಾಡಿದು
ಏ ಯಮ್ಮಾ ದೇವರಾಣೆ ನಾನಲ್ಲ
ಏ ನನ್ನ ಮ್ಯಾಲೆ ಹೇಳ್ತಿಯಾ

ಅವನ್ನೋಡು ಇನ್ನ ಹೇಳಿದ್ರೆ
ಹೇ ನನ್ನ ಮ್ಯಾಲೆ ಹೇಳ್ತೀಯಾ
ಅವನ್ನ ನೋಡಮ್ಮ
ಒಬ್ಬರು ಏಟು ತಿಂಬಾಗಿಲ್ಲ
ಆಗ ಸಿಟ್ಟು ಬಂದ ತಾಯಿ
ಇನ್ನ ಕಿಲಕಿಲ ನಕ್ಕಾಂಗ ಮಾಡ್ಯಾರ
ಆರು ಮಂದಿ ಮಕ್ಕಳು || ತಂದಾನ ||

ಕಿಲಕಿಲ ನಕ್ಕು ಬಿಟ್ಟು ತಾಯಿ
ಯಪ್ಪಾ ಎಷ್ಟು ದಡ್ಡರು ಮಕ್ಕಳು ಆದರೇನ
ಎಂಥಾ ತಿಳುವಳಿಕೆ ಇಲ್ಲದವ್ರು ಆದ್ರೇನ
ನಗಂಗ ಮಾಡಿಬಿಟ್ರಪ್ಪ ನನ್ನ ಜೀವಕ್ಕ
ಎಲ್ಲಿ ಬರ್ತಾರಪ್ಪ
ಇವಾಗ ಬರ್ತಾರ ನಿಂದ್ರಮ್ಮ
ಆರು ಮಂದಿ ನೋಡಿದ್ರು
ನಮ್ಮ ಹೊಟ್ಟ್ಯಾಗ ಹುಟ್ಟಿ
ಆಗ ನಾವು ಲಂಬಡಿಕೇರಂತೆ
ಆರು ಕಟ್ಟಿಗೇರಂತೆ
ಅಡವಿ ಚಂಚರು ಅಂತೆ
ಯಮ್ಮಾ ನಮ್ಮ ಹೊಟ್ಟ್ಯಾಗ್ಹುಟ್ಟಿ
ನಮಗೇ ಹೆಸರಿಸಿಟ್ಟೋದ್ರು
ನೋಡೆ ಮಕ್ಕಳನ ಹಡ
ಹಿಂಗ ಅದರ ಮಕ್ಕಳ ಆಗಾದಿಲ್ಲ ಮರಳಾಗಾದಿಲ್ಲ
ಆಗ ಸಲುಹಿದ್ದ ಮದವು ಹೆಚ್ಚಾಗೈತಿ
ನಾವು ಹಡದೋರು ಕಮ್ಮೇ ಆಗಿವಿ
ಹಂಗಾಂದ್ರೆ ನಮ್ಮ ಮಕ್ಕಳು ಬರಾದಿಲ್ಲ
ನಡೆಮ್ಮ ತಂಗಿ ಮನಿಗ
ಆರು ಮಂದಿ
ಇನ್ನ ತಂಗಿ ಮನೀಗ ಬರ್ತ್ತಿದ್ರೆ
ತಂಗಿ ನೋಡಿದಳು
ಛೀ ನಾನೇ ಚಿಕ್ಕೋಳು
ಅಕ್ಕನೋರು ಮನೀಗೆ
ದೊಡ್ಡವರತಲಿಗೆ ಹೋಗಬೇಕಿತ್ತು
ಚಿಕ್ಕೋರತಲ್ಲಿಗೆ ಬಂದಾಗ
ನಮ್ಮ ಅಕ್ನೋರಿಗೆ
ಎಷ್ಟು ಮರ್ಯಾದೆ ಕೊಡ್ಬೇಕು ನಾನು
ಆರು ಚರಿಗಿ ನೀರು ತಂದು
ಮುತ್ತಿನ ಸೆರಗು ಹಾಸಿ
ಅಕ್ಕನವ್ರು ಪಾದ ಮುಗಿದಳು
ಯಕ್ಕಾ ಒಂದೇ ತಾಯಿಗ್ಹುಟ್ಟಿ
ಒಂದೇ ಜೀವನ ಮಾಡಿಕ್ಯಂಡಿವಿ

ನನ್ನ ಮ್ಯಾಲೆ ನಿಮಗಿಷ ಬ್ಯಾಡಯಕ್ಕಾ
ನನ್ನ ಮ್ಯಾಲೆ ನಿಮಗ ಸಿಟ್ಟು ಬ್ಯಾಡ ಯಕ್ಕಾ
ಒಂದೇ ಇನ್ನ ಗಂಗಾಳದಾಗ ಒಂದೇ ಚರಿಗೆ ನೀರು ಕುಡ್ಯಾನಾ
ಶರಣು ಅಕ್ಕ ಇನ್ನ ನಿಮ್ಮಗಾಗಿ
ಆರುಮಂದಿ || ತಂದಾನ ||

ಯಮ್ಮಾ ನಿನಮ್ಯಾಲೆ ನಮ್ಗೆ ಸಿಟ್ಟಿಲ್ಲ ತಂಗಿ
ಆಗ ಇನ್ನ ಎಂಜಲ್ಹಾಲು ಬಿಟ್ಟಿಯಂತೆ
ನಿನ್ನಮ್ಯಾಲೆ ಯಾಕ ಸಿಟ್ಟು ಮಾಡಾನಮ್ಮ
ಏನೋ ಹುಟ್ಟಿದ ಮೂರು ಗಂಟಿಗೆ
ಹುಡುಗರನ್ನು ತಂದು ಕೊಟ್ರು
ನೀನು ಸಲುಹಿದ್ರು ಒಂದೇ
ನಾವು ಬೆಳೆಸೀದ್ರು ಒಂದೆ
ಎಲ್ಲಾ ನಿನಗೆ ಮಕ್ಕಳೆ ನಮಗೆ ಮಕ್ಕಳೇ
ಯಮ್ಮಾ ಗೋಲಿ ಅಡ್ತಿದ್ರೆ
ಮಕ್ಕಳಿಗೆ ಇನ್ನು ಹಣ್ಣು ಕೊಟ್ಟು
ಬರಾನಂತ ನಾವು ಬಂದ್ರೆ
ಲಂಬಡಿಕೇರು ಆರುಕಟ್ಟಿಗೇರು
ಅಡವಿ ಚಂಚರು ಅಂತೆ
ಗೋಲಿ ಬಿಟ್ಟು ಓಡಿ ಚಂದ್ರಮ್ಮ ತಂಗಿ
ಅಮ್ಮಾ ಅಕ್ಕನೋರೆ
ಈಗ ಲೋಕವಿದ್ದ ಹೆಣ್ಣುಮಕ್ಕಳ
ಅವತಾರ ಹ್ಯಂಗಿರಬೇಕು ಅಕ್ಕಾ
ಕೂದಲ ಬಿಟ್ಕಂಡು ರಾಕ್ಷಾಸುಗುಳು
ಬಂದಂಗ ಬಂದ್ರೆ ಬಜಾರ ಕೂಟ
ಹೆಂಗಸರಾ ನೀವು ರಾಕ್ಷಾಸಗೊಳಾ
ಅಕ್ಕಾ ಈಗ ತಲೆ ತುರುಬ ಕಟ್ಟಿಗ್ಯಂಡು
ತಲೆ ಮ್ಯಾಲೆ ಸೆರಗು ಹಾಕಿ

ಬಗ್ಗಿನಡಿಬೇಕಾಕ್ಕ ದಾರಿಲೇ ನಡೀಬೇಕು
ಯಕ್ಕಾ ಅದು ಹೆಣುಸುರುದ ಮರ್ಯಾದಾ
ಇಲ್ಲದೆ ಹ್ಯಂಗ ನೋಡಕ್ಕ ಮಾನ ಮರಿಯ್ಯಾದ || ತಂದಾನ ||

ಇಲ್ಲಮ್ಮಾ ಸ್ನಾ ಮಾಡಿಕ್ಯಂಡು
ಕೂದಲ ಆರಿಲ್ಲ
ಅಂಗೇ ಕೂದ್ಲ ಬಿಟ್ಗಂಡು ಬಂದಿವಿ
ಓಹೋ ಸರೆಬಿಡಕ್ಕಾ
ಯಪ್ಪಾ ಮಕ್ಕಾಳರೆ
ಇವರು ತಾಯೋರಪ್ಪ ನಿಮಗೆ ಹುಟ್ಟಿದ ಮೂರು ಗಂಟೆಗೆ
ನಿಮ್ಮಪ್ಪ ತಂದು ನನಗೆ ಕೈಗೆ ಕೊಟ್ಟಿದ್ದಕ್ಕ
ಹಾಲ್ಹಾಕಿ ಕೈಯಾಗ ಬೆಳೆಸೀನಪ್ಪ ನಿಮ್ಮನ್ನ
ಯಮ್ಮಾ ಅವರ ಹೊಟ್ಟ್ಯಾಗ ನಾವು ಹುಟ್ಟೀವ್ಯ

ಅವು ಹೆಂಗೈದಾವಾ ರಾಕ್ಷಸುಗಳಮ್ಮಾ
ಅವರು ನಮ್ಮಗೆ ತಾಯೋರು ಆಗ್ತಾರ
ಛೀ ಅವರಿಗಾಗಿ ನಾವು ಹುಟ್ಟಲಿಲ್ಲಮ್ಮಾ || ತಂದಾನ ||

ಅವರು ಹೊಟ್ಟ್ಯಾಗ ನಾವು ಹುಟ್ಟೀವ್ಯ
ನೋಡಮ್ಮ ತಂಗಿ ಯಂಗ ಅಂತಾರ
ಇನ್ನೇನಮ್ಮ ನಾವು ಏನ್‌ ಮಾಡಾನ
ಎದೆ ಬಿಡ್ದುಬಿಟ್ಟಾರ ಹುಡುಗರು
ನಿಮ್ಮನ್ನ ನೋಡಿ
ಗಾಬರ್ಯಾರಿ ಬಿಟ್ಯಾರ
ತಂಗೀ ನಮ್ಮ ಕೈಲಿ ತಗಂಬಾದಿಲ್ಲ
ಈಗ ನೀನು ಉಡಿ ವಡ್ಡು
ಉಡ್ಯಾಗ ಹಾಕ್ತೀವಿ
ನಿನ್ನ ಕೈಲನ್ನ ಕೊಡಮ್ಮ
ಊಟ ಮಾಡ್ತಾರ
ಸರೆಬಿಡಕ್ಕ
ಆಗ ಉಡಿ ವಡ್ಡಿಬಿಟ್ಳು
ಆರು ಮಾವಳಹಣ್ಣು ಉಡ್ಯಾಗ ಹಾಕಿದ್ರು
ಆಗ ಇನ್ನ ನೋಡಿಬಿಟ್ಟು ಸಿರಿದೇವಿ
ಏನಕ್ಕಾ ಎಲ್ಲಾ ಕೊಯ್ದು ಬಿಟ್ಟಿರಿ
ಇಲ್ಲಮ್ಮಾ ತಂಗಿ
ಹಣ್ಣು ಕೊಡೋರು ಏನಂತ ಹೇಳಿದ್ರು
ಉಳ್ಳಗ ಇದ್ರೆ ತಗೋಬ್ಯಾಡ್ರಿ
ಸಪ್ಪಗಿದ್ರೆ ತಗೋ ಬ್ಯಾಡ್ರಿ
ಸೀ ನೋಡಿ ತಗೋರ್ರಿ
ಕೋಡೋರೊಕ್ಕ ಕೊಟ್ಟು
ಇನ್ನ ಯಂಥಾವು ಯಾಕ ಕೊಂಡಕುಂತೀ
ಅಂತಾ ಅವರೇ ಕೊಯ್ದು ಕೊಟ್ರೆ
ಬಾಯಾಗಿಟ್ಟು ನೋಡಿಕ್ಯಂಡು ತಕ್ಕಂಡೀವೇ ತಂಗಿ
ಕೊಂಡುಕೊಂಡೀವೆ ತಂಗಿ
ಅಷ್ಟಾಗಲಕ್ಕ ಅಂತಾ
ನಿಮ್ಮ ಎದುರಾಗ ಕೊಟ್ರೆ ಊಟ ಮಾಡಾದಿಲ್ಲ
ರೂಮಿನಾಗ ಕುಂತಕೊರಿ
ಈಗ ಮಕ್ಕಳಿಗ ಕೊಟ್ಟು
ಊಟಾ ಮಾಡಿದ ಮ್ಯಾಲೆ
ನಾವು ಯೋಳ ಮಂದಿ ಅಕ್ಕತಂಗೇರು
ಒಂದೇ ಗಂಗಾಳದಾಗ
ಊಟಾ ಮಾಡಾಣಾ
ಅಕ್ಕನೋರೆ
ನಿಮ್ಮ ಜೀವಕ್ಕ ಶರಣು ಅಂದ್ಳು
ಅಷ್ಟಾಗಲೆಂತ ರೂಮಿನಾಗ
ಕುಂತಕಂಡ್ರಪ್ಪ ಬಂದು
ಬಾಕ್ಲ ಮುಚ್ಚಿಕ್ಯಂಡ್ರು
ಯಪ್ಪಾ ಮಕ್ಳಾರ
ಅವರು ಹೋಗಿಬಿಟ್ರು
ಜತೆಗಾರರು ಸ್ನೇಹಿತ್ರು
ಈಗಿನ್ನ ಹಣ್ಣು ತಂದುಕೊಟ್ಟಾರ ತಗೋರ್ಯಪ್ಪ
ಯಮ್ಮಾ ಈ ಹಣ್ಣು ತಿಂದು ಮ್ಯಾಲೆ
ಏನಂತಾರ ಅವರು ಬತ್ತಾರ ಮತ್ತೆ
ಏ ನಮ್ಮ ಹಣ್ಣು ಕೊಡ್ತೀರ್ಯ
ನಮ್ಹಿಂದೆ ಬರ್ತೀರ್ಯಾ ಅಂತಾರ
ಈಗ ನೀನೆನಂತಿ
ಆಗ ಹಿಡ್ಕೊಂಡು ಹೋಗಂತಿ
ಯಮ್ಮಾ ಅವರ ಹಣ್ಣು ತಿಂಬೋದು ಬ್ಯಾಡ
ಅವರು ಹಿಡ್ಕೊಂಡು ಹೋಗೋದು ಬ್ಯಾಡ
ಅದೇನು ಉಳ್ಳಗ ಇರ್ತೈತಿ
ತಾಯಿ ನಿನ್ನ ಮಾತಿಗೆ ಎದುರಾಡೋದಿಲ್ಲ
ತಾಯಿ ಜೀವ ಸಲುಹಿದಾಕಿ
ಜೀವಕ್ಕ ಊಟ ಮಾಡ್ತಿವಿ ಅಂತ

ಆಗ ಇನ್ನ ತಲೆಗೊಂದು ಹಣ್ಣ ತಗಂಡಾರ
ಯಮ್ಮಾ ಮಕ್ಕಳ ಆಗ ಊಟ ಮಾಡುತಾರ || ತಂದಾನ ||