ಮಕ್ಕಳು ಊಟ ಮಾಡ್ತಾರ
ಆಗ ಆರುಮಂದಿ ಮಾವಿಳಣ್ಣು ತಿಂದ್ರು
ನೀರು ಕುಡಿದ್ರು
ಹೊಟ್ಟ್ಯಾಗ ಮಜ್ಜಿಗೆ ಅನ್ನ ಕಲಿಸಿದ್ಹಂಗಾತು
ನೀರಿಗೆ ಹಣ್ಣಿಗೆ ತಿರುವಣ ಆಗಿಬಿಡ್ತು
ಆಗೋಹೊತ್ತಿಗೆ ಆ ಮಕ್ಕಳಿಗೆ
ಏನ್‌ ಕಾಣಿತೆಂದ್ರೆ ಅಂದ್ರೆ
ಬಗ್ ಬಗ್‌ ಬಗ್‌ ಅಂತೈತಪ್ಪಾ
ಹೊಟ್ಟ್ಯಾಗ ಉರಿತ್ತೈತಿ
ಹಸೇ ಮೀನು ದಡ್ಡಿಗೆ ಒಗದ್ರೆ
ಹ್ಯಾಂಗ ಒದ್ದಾಡ್ತೈತೋ
ಆ ರೀತಿದಲ್ಲಿ ಮನ್ಯಾಗ ವದ್ದಾಡ್ತಾರ
ಆ ಮಕ್ಳನಾ ನೋಡ

ಯಮ್ಮ ದಿಗ್ನೆಳ್ತಾರ ದೊಪ್ಪಂತ ಬಿಳ್ತಾರಮ್ಮಾ
ಯಮ್ಮಾ ಮಕ್ಳನೋಡ
ಯಮ್ಮಾ ಉರಿತ್ತೈತಮ್ಮೋ ನನಗೆ ಉರಿತ್ತೈತವ್ವಾ
ಯಮ್ಮಾ ಹೋತದ ಜೀವ || ತಂದಾನ ||

ಯಮ್ಮಾ ಮಕ್ಕಳೇನು
ಮೀನು ಎಗರಾಡಿದಾಂಗ ಎಗರಾಡ್ತಾರ
ನನ್ನ ಮಕ್ಕಳು ಅಂತ
ಆಗ ಏನು ಮಾಡಿಬಿಡ್ಳು
ಆ ಮಕ್ಳು ಮ್ಯಾಲೆ ಬಿದ್ದು
ಆ ತಾಯಿ ಸಿರಿದೇವಿ
ಹ್ಯಾಂಗ ದುಃಖ ಮಾಡ್ತಾಳ
ಯಮ್ಮಾ ಅಕ್ಕಲಾರೆ
ನಿಮಗೇನು ಪಾಪ ಮಾಡಿದ್ನ್ಯಾ
ನಿಮ್ಮಗೇನು ಕರ್ಮ ಮಾಡಿದ್ದೆನಾ

ಮಕ್ಕಳಿಗಿಡೋ ಬದಲು ನನ ಜಲುಮುಗಿಟ್ಟು ಕೊಲಬೆಕು ನೀವು
ಯಕ್ಕಾ ಜೀವಗ್ಹುಟ್ಟಿದ ಮಕ್ಕಳ ನೀವು ಜೀವ ಕಳೆದಿರಿ ಅಕ್ಕನಾರೇ || ತಂದಾನ ||

ಅಂತ ಮಕ್ಕಳ ಮ್ಯಾಲೆ ಬಿದ್ದು
ಲಬ ಲಬ ಹೊಯ್ಯುಕ್ಯಂತಿದ್ರೆ
ರೂಮಿನಾಗ ಕುಂತೋರು ಬಂದ್ರು
ಆರು ಮಂದಿ ಅವರಾದ್ರು
ಒಬ್ಬಾಕಿ ಈಕಿ ಆದ್ಳು
ಆಕಿ ಬರುತಾಳ ಇನ್ನ ಸ್ವಾಟಿ ಹಿಂಡತಾಳ
ಈಕಿ ಬರತಾಳ ಕಿವಿ ಹಿಂಡತಾಳ
ಲೇ ಆಗ ಏನಂತಾರ ಆರುಮಂದಿ
ಈಗ ಗೊಡ್ಡವಳೆ ಕರ್ಮಿಷ್ಠಿ ಬಂಜೀರವ್ಳೆ
ಈಗ ಮಕ್ಳು ಇಲ್ಲದವಳೆ
ಅದಕ್ಕೆ ನಮ್ಮಗ ಕೊಟ್ಟ ಗುಣಾ ನೋಡಿ
ಈಗ ನಿನಗೇನು
ಆಗ ಮಕ್ಕಳು ಜೋಪಾನ ಮಾಡೋಳಂತ
ಬಂಜರಿ ಮಾಡಿಬಿಟ್ಟ
ಈಗ ನಮ್ಮ ಮಕ್ಕಳು ನಿನಗ ಕೈಗ ಕೊಟ್ಟರು
ಈಗ ಮಕ್ಕಳು ಬೆಳೆಯೋ ಹುಡುಗ್ರನ್ನ
ಜೀವ ಮಕ್ಳು ಕೊಟ್ಟ್ರೆ
ಜೀವ ತಗದು ಬಿಟ್ಟೆ
ಅಕ್ಕಾ ನಾನು ಮದ್ದು ಇಟ್ಟಿಲ್ಲ
ನಾನು ಈಸಿಟ್ಟಿಲ
ನಿಮ್ಮ ಪಾದಾಜ್ಞೆ
ಹತ್ತು ವರುಸ ಜೋಪಾನ ಮಾಡ್ತೀನ
ನಾನು ಮಕ್ಳಿಗೆ ವಿಷ ಇಡಾಕೆ
ತಂದಿದ್ದ ದಿವ್ಸ ಇನ್ನವ್ರ ಕೊಲ್ಲುತ್ತಿದ್ದೆ
ಅಕ್ಕಾ ಈಗ ನನ್ನ ಅನ್ಯಾಯದಲ್ಲಿ ಮಾತ ನುಡಿಬ್ಯಾಡ್ರಿ
ಕೇಳವೇ ನಿನ್ನ ಮಕಾ ಕಾಣೆ ಮಾರಿ ಕಾಣೆ
ತೊಟ್ಲ ಕಟ್ಟತಾರಂದ್ರೆ ಬರ್ಲಿಲ್ಲ
ಈಗ ನಮ್ಮ ತಂಗಿ ಅಳತಾಳಂದ್ರೆ
ನಾವು ಓಡಿ ಬಂದಿವಿ

ನಿನ್ನ ಮಾರಿಗೀಟು ಬೆಂಕಿ ಹಚ್ಚಲೇ
ಇನ್ನ ಗೊಡ್ಡವಳೆ ಕರ್ಮದವಳೆ ನೀನು
ಯಮ್ಮಾ ಹಾಳು ಮಾಡಿದ್ರು ನಮ್ಮ ಮಕ್ಕಳಾಗಿ ಯವ್ವೋ
ಯಮ್ಮಾ ಕೊಲ್ಲುಕೊಲ್ಲಿಗೆ ಶರಣು ಮಾಡ್ದಿವಮ್ಯಾ
ಕಂಡ ದೇವರಿಗೆಲ್ಲಾ ನೀರು ಹಾಕಿವಮ್ಮಾ
ಹೇಯ್ಲಬ್ಲಬ್ಲಬ್ಲಬ್ಹೊಯಿಕ್ಯಂಡು ಬಂದಾರಾ
ರಾಜ ಕಛೇರಿಗಲ್ಲಾ || ತಂದಾನ ||

ಎಡಗೈಲೆ ಬಲಗೈಲೆ ಬಾಯಿ ಬಡಿಕಂತಾವ
ಕುರ್ಚಿಮ್ಯಾಲ ಕುಂತವನು
ಹತ್ತು ಮಂದಿ ಸಭದಾಗ ನೋಡಿಬಿಟ್ಟ
ಹಾಲುಗೊಲ್ರು ಕುಂಭೋಜರಾಜ
ಏನೇ ನಿಮಗೆ ಏನ್‌ ಬಂದೈತೆ
ಹಂಗ ಹೊಯಿಕ್ಯಂತೀರಿ
ಇಲ್ರಿ
ನಿನ್ನ ಹೆಂಡ್ತಿ ನೀ ಹಾಳಾಗಿ ಸುಡುಗಾಡಿಗಿಡ
ಈಗ ಮಕ್ಕಳ ಒಯ್ದು ಕೊಟ್ಟು ಬಿಟ್ಟೆ
ಮದ್ದಿಟ್ಟು ಕೊಲ್ಲಿ ಬಿಟ್ಟಾಳ್ರೀ
ಆಯ್ತು ನಮ್ಮ ಮಕ್ಕಳು ಮರ್ತು ಹೋಗಾದೆ
ಛೀ ಅಂಥವಳಲ್ಲ ಚಿಕ್ಕಹೆಣ್ತಿ
ಸಿರಿದೇವಿ ಅಂದ್ರೆ
ಈಗಿನ್ನ ನಿವಂದ್ರೆ ಕೆಟ್ಟು ಗುಣ ಐತಿ
ಈಗ ಅವಳ ರೂಪ ನೋಡಲಾರ್ದ
ತಂಗೀನ ಕೊಲ್ಲಬೇಕಂತ ಮಾಡ್ಸೀರಿ
ಛೀ ನಾವು ತಂಗೀನ ಕೊಲ್ಲಿಸಬೇಕಂತ ಮಾಡಿಲ್ಲ
ನೋಡಿ ಬರುವಂತೆ ಬರ್ರಿ
ಅಂಬೊತ್ತಿಗೆ ನಿಮ್ಮಾತು
ನಿಜದಲ್ಲೋ ನೋಡಬೇಕು
ಈಗ ಕಣ್ಣಿಲ್ಲೆ ಇನ್ನವರ ಕಂಡುಹಿಡಿಬೇಕು
ಏ ತಳವಾರ ಬಾರೋ
ಏನ್ರೀ
ಈಗ ನನ್ನ ಚಿಕ್ಹೆಂಡ್ತಿ ಸಿರಿದೇವಿ
ಅಗಸಿ ಹೊರಾಗ ಮನಿ
ಮೂರು ಅಂಕಣದ ಮನಿಯಾಗ
ಮಕ್ಕಳು ಒದ್ದಾಡ್ತಾರೇನ್‌ ನೋಡಿ ಬರ್ರೆಪ್ಪಾ
ಕೋಲು ಹಿಡಕಂಡು ಬಂದ
ಏನಮ್ಮಾ ಸಿರಿದೇವಿ ಅಂದ
ಆ ತಾಯಿಗ ಎರಡು ಕಣ್ಣಿಗೆ ಮೊಬ್ಬು ಬಂದೈತಿ

ಯಪ್ಪಾ ತಳವಾರಂತ ಪಾದಕ್ಕ ಬಿದ್ದಾಳಮ್ಮ
ಆಯಿತಪ್ಪ ನಮ್ಮ ಮಕ್ಕಳು ಉಳಿಯದಿಲ್ಲೋ
ಯಪ್ಪಾs ನನ್ನ ಮಕ್ಳು ನನಗೆ ಉಳೇದಿಲ್ಲಪ್ಪಾ || ತಂದಾನ ||

ಏನ್ರಿ ತಳವಾರಿಕ್ಯಾ
ಇನ್ನ ನಮ್ಮ ಮಕ್ಳು ನಮ್ಗ ಉಳಿಯೋದಿಲ್ಲರಿ
ಈಗ ಹಡೆದ ಮಕ್ಕಳಿಗೆ ಮದಿ——
ಮಕ್ಕಳಿಗೆ ಇಡೋ ಬದಲು
ನನಗಿಟ್ಟು ಕೊಲ್ಲಬಾರದಾ
ನಮಕ್ಕನೋರು ಜೀವ
ಎಂಥಾ ಅನ್ಯಾಯ ಮಾಡಿಬಿಟ್ರು
ಹತ್ತು ವರುಸ ಜೋಪಾನ ಮಾಡ್ದೆ
ಏನು ಹೆಸರಾಗಿ ನಂದು ಲೋಕ ನಿಂತಗಂಡಿತು
ಈಸು ದಿನ ಜೋಪಾನ ಮಾಡಿದವಳು
ಮದ್ದು ಇಟ್ಟಾಳಂತ

ಊರಿಗೆಲ್ಲಾ ಲೋಕಗೆ ಹೆಸರು ಆಯಿತಮ್ಮಾs
ಭೂಮಿ ಮ್ಯಾಲೆ ಹೆಸರು ಪಡೆದು ಬಿಟ್ಟಿನಲ್ಲ
ಮಕ್ಕಳು ಕೊಲ್ಲುವಳಂತ
ಯಮ್ಮಾ ಯಂಗ ನಾನು ಕಿವೀಲೆ ಕೇಳಲ್ಲಮ್ಮೋ
ಯಂಗ ಕಿವಿಲೆ ಕೇಳೋದು ಲೋಕ ಮಾತ || ತಂದಾನ ||

ಪರಮಾತ್ಮಾ
ಹೆಣ್ಣುಗಂಡು ಎಲುಬಿಲ್ಲದ ಮಾತು
ಹ್ಯಾಗಂದ್ರಂಗೆ ನುಡಿತಾರ
ಯಪ್ಪಾ ಮಕ್ಕಳು ಹಲ್ಲೆಲ್ಲ
ಕಲೆ ಬಿದ್ದುಬಿಟ್ಟಾವ
ಕಣ್ಣು ಮುಚ್ಚಿ ಬಿಟ್ಟಾರ
ನೊಣ ಕುಂತಾವ
ಈಗ ಜೀವಕ್ಕೆ ಮಕ್ಕಳು ತಂದವನು
ಜೀವ ಬಿಡುವಾಗ ಕಣ್ಣಿಲ್ನೋಡಬೇಕು
ಅಯ್‌ ರೀ ನನ್ನ ಜೀವದ ಗಂಡನ್ನ ಕರ್ಕಂಡು ಬರ್ರಿ
ನೋಡಮ್ಮ ನಿನಗೇನು ಬಂದೈತಿ ತಾಯಿ
ಅವ್ರು ಮಕ್ಕಳು ಅವ್ರು ಜೋಪಾನ ಮಾಡಿಕ್ಯಂಬಲಿದ್ರೆ
ಅವ್ರ ಕೈಯಾಗ ಸತ್ರೆ ಮಾತ ನಡೀತೈತಿ
ಅವ್ರು ಮಕ್ಕಳ್ಳನ್ನ ನೀನು ತಗಂಡು
ನಿನ್ಯಾಕೆ ಬೆಳೆಸಿದಿ ಅಮ್ಮಾ
ಆ ಮಕ್ಳ ಕಾಲದಲ್ಲಿ
ನಿನ್ನ ಜೀವ ಹೋತದೆ ತಾಯಿ ಸಿರಿದೇವಿ
ಯಪ್ಪಾ ಸತ್ರೆ ಗಂಡನ ಕೈಯಾಗ
ಉಳುಕಂಡ್ರೆ ಜೀವದೋನು ಕೈಯಾಗ
ನಾನು ಸತ್ರೆ ಚಿಂತಿಲ್ಲ
ಮಕ್ಕಳು ನೋಡ್ತಾನ ಕರ್ಕಂಡು ಬಾರಪ್ಪಾ
ಹಂಗಾರೆ ಕರ್ಕಂಡು ಬರ್ಬೇಕನಮ್ಮಾ
ಕರ್ಕಂಡು ಬರ್ಬೇಕ್ರಿ ಅಂದ್ಳು
ಆಗ ಬಂದು ಬಿಟ್ರು
ಶರಣ್ರೀ ಕಾಂಭೋಜರಾಜ
ಏನ್ರಪ್ಪಾ ನನ್ನ ಕೈಯಾಗಿದ್ದವ್ರೆ
ಏನಿಲ್ರಿ
ಹಿಂಗ್ಹೋಗಿ ಬ್ಯಾಗಾರಿಗೆ ಹೇಳಿಬಿಡ್ರಿ
ಅವರು ಕುಣಿ ತೋಡ್ತಾರ ಅರು
ಹಿಂಗ ನಾವು ಹುಡುಗರ್ನು ಹೊತ್ತುಕೊಂಡ್ಹೋಗಾನ
ಏನಲೆ ಹಾಂಗ ಬೊಗಳ್ತ್ರಿ ಅಂದ
ಏನಿಲ್ರಿ ಹೊಂಟು ಹೋಗ್ಯಾರ ಆಗ್ಲೆ
ಹಲ್ಲೆಲ್ಲ ಕಲಿ ಬಿದ್ದು ಬಿಟ್ಟಾವ
ಕಣ್ಣು ಮುಚ್ಚಿ ಬಿಟ್ಟಾರ
ನೋಣ ಕುಂತು ಬಿಟ್ಟಾವ

ದಬ ದಬ ದಬದಬ ಎದೇ ಗುದ್ದ್ಯಾನ
ಲಬ್ಲಬ್ಲಬ್ಲಬ್ಬಾಯಿ ಬಡ್ದಾನಾ
ಮಕ್ಳ ಕಾಲಲೋ ಕಷ್ಟ ಕಷ್ಟಪಡದೇ
ಭೂಮಿ ಮ್ಯಾಲೇ
ಯಮ್ಮೋ ಎದೆ ಬಡಿಕ್ಯಂಡು ಇನ್ನುವಾದರೆ
ತೊಗಲು ಬಾರಕೋಲು ಹೆಗಲಿಗ್ಹಾಕ್ಯಾನೇ
ಹೇಯ್ಕುದುರ್ಗಿ ಹೊಡಿಯೋ ಬಾರಕೋಲು ಹಾಕ್ಯಾ ನಮ್ಮ
ಕಾಂಭೋಜನ ಗೌಡ || ತಂದಾನ ||

ಊರಾಗಳ ಮಂದಿಗೇನು ಗೋತ್ತು ಪಾಪ!
ಅಯ್ಯೋಯ್ಯಮ್ಮಾ ಗೋಡ್ಡೋಳು ಕರ್ಮಿಷ್ಠಿ
ಮದ್ದಿಟ್ಟಾಳಂತೆ ಬಿಡೇ ಪಾಪ ರ್ವಾಗಿಲ್ಲ ಜಡ್ಡಿಲ್ಲ
ಏಯಮ್ಮ ಕೊಬ್ಬು ಬೆಳ್ದಂಗ ಬೆಳ್ದಿದ್ರು ನೋಡ ಹುಡುಗ್ರು
ಏ ಎಂಥ ಕರ್ಮಿಷ್ಠಗೇಡಿ ಅಂಬೋರು ಅರ್ಧಮಂದಿ
ಏ ಯೆಮ್ಮಾ ನಮ್ಮ ಬೆನ್ನೆ ನಮ್ಮ ತಲೈತಿ
ಕಾಣಲಾರದ ನೋಡಲಾರ್ದ
ಹಂಗ್ಯಾಕ ಮಾತಾಡ್ತೀರಿ
ಮದ್ದು ಇಡಾಕಿ ಆದ್ರೆ ಆವತ್ತೇ ಕೊಲ್ಲಾಕಿ
ಹತ್ತೊರುಷ ಜೋಪಾನ ಮಾಡ್ತಾಳೇನು
ಅಯ್ಯೋ ಇವ್ರು ಮಾವಿಳಣ್ಣು ಒಯ್ದು
ಕೊಯ್ದಿದ್ದರಂತೆ ಬಿಡ್ಹಂಗೇ
ಅದರಾಗ ಮದ್ದಿಟ್ಟು ಕೊಟ್ಟಾರ
ಹಣ್ಣು ತಿಂದಾರಂತೆ
ನೀರು ಕುಡಿದಾರಂತೆ
ಕೆಳಗೆ ಬಿದ್ದಾರಂತೆ
ಏಯಮ್ಮಾ ಇವರು ಹೋಗಿಲ್ಲಂತೆ
ಅಳ್ತೀದ್ರೆ ಆಗ ಯಾರೋ ಬಂದು ಹೇಳಿದ್ರೆ
ಹೋಗ್ಯಾರಂತೆ
ತೊಟ್ಲ ಕಟ್ಟುವಾಗ
ಕರೆಕಳ್ಸಿದ್ರೆ ಹೋಗಲಾರವರು
ಇವತ್ತು ಹೋಗಿ ಮದ್ದು ಕೊಡ್ತಿದ್ದಾರಾ
ಅಂಬೋರು ಅರ್ಧಮಂದಿ
ಎಲುಬಿಲ್ಲದ ಮಾತು ಹೆಣ್ಣುಗಂಡು

ಯಮ್ಮಾ ನೋಡಾಣಮ್ಮ ಯಂಗ ಐದಾರಮ್ಮ ಮಕ್ಕಳು
ಊರೆಲ್ಲನೆ ಬಾಕ್ಲ ಮುಚ್ಚಿಕೊಂಡು
ಯಮ್ಮ ಮನೆಗುಳು ಬಿಟ್ಟು ಹೆಣ್ಣು ಗಂಡಮ್ಮಾ
ಯಮ್ಮಾ ಓಡಿ ಓಡಿ ನೋಡಕ ಬರುತಾರ
ಜನಲೋಕಾ ಮಂದಿ || ತಂದಾನ ||

ಹೆಣ್ಣು ಗಂಡು ನೋಡಾಕ ಬರುತಾರ ಜನಲೋಕ
ಈಗ ಮನಿ ಸುತ್ತ ಸುತ್ತಕ್ಯಂಡ್ರಪ್ಪ
ಈ ಜೀವದ ಗಂಡ ಆ ತಾಯಿ
ಮಕ್ಕಳ ಪಾದಕ್ಕ ಬಾರ್ಲು ಬಿದ್ದು ಬಿಟ್ಟಾರ
ಈಗ ಮನ್ಯಾಗ ಬಂದು

ಮಕ್ಕಳ ಮ್ಯಾಲೆಲ್ಲಾ ಬೊರಲು ಬಿದ್ದನಮ್ಮೋ
ತಂದೆ ನೋಡ ಜೀವಕ್ಕ
ಯಪ್ಪಾs ಹೋದ್ರೆ ನೀವ್ದೇವಲೋಕದಾಗ ಯಪ್ಪಾs
ಯಪ್ಪಾs ಮಕ್ಕಳರಾ ಹೋದ್ರ್ಯಾ || ತಂದಾನ ||

ಅಂತಾ ಮಕ್ಕಳ ಮ್ಯಾಲೆ ಬಿದ್ದು ದುಃಖ ಮಾಡಿ
ಲೇ ಆರು ಮಂದಿ ಹೆಂಡ್ರುಗಳಿರಾ
ಪಾಪ ಒಂಭತ್ತು ತಿಂಗಳ ಹೊಟ್ಟ್ಯಾಗಿಟ್ಟುಕೊಂಡು ಹಡಿದಿರಿ
ಹಡ್ದು ಮೂರು ಗಂಟೀಗೆ
ಈ ಬಂಜೀರವಳಿಗೆ ತಂದು ಕೊಟ್ಟಿನಿ
ಕುಣಿ ತೋಡೋ ತನಕ
ನೀವು ಹೊತ್ತುಕೊಂಡು ಹೋಗಿ
ಬಂಕುದಾಗ್ಹಾಕ್ಯಂಡು ದುಃಖ ಮಾಡಿಕೊಳ್ರಿ
ಯಪ್ಪಾ ನಿನ್ನ ಹೆಂಡ್ತೀನ್ನ ಹಾಳಾಗು
ನೀನನ್ನ ಹಾಳಾಗು
ನಮ್ಮ ಮಕ್ಕಳು ನಮಗೆ ಕೊಟ್ರೆ ಸಾಕಂತ
ಯಾರು ಮಕ್ಕಳವರು ಹೆಗಲಿಗೆ ಹಕ್ಯಂಡು
ಏನಂತ ಬಂಗಳ ದುಃಖ ಮಾಡ್ತಾರ

ಊರಿಗೆ ಮಾರೆವ್ವ ತಾಯಿ
ಬ್ಯಾಟಿ ಕಡೀತನಮ್ಮಾ ತಾಯಿ
ಊರಿಗ ಸುಂಕಲವ್ವಾ ತಾಯಿ
ಕರೆಯ ಸುಂಕುಲವ್ವಾ ತಾಯಿ
ನಿನ್ನ ಮಕ್ಕಳು ತಾಯೇ ತಾಯಿ
ಕುಂಭ ಹೋರ್ತೀನಿ ನಾನು ತಾಯಿ
ಕಾಪಾಡೆ ದೇವಿ ತಾಯಿ
ಎದುರಿಗೆ ಹಾಕ್ಯಾರ ತಾಯಿ
ಮನಿಗೆ ಹೊತ್ತಕಂಡೆ ಬರ್ತಾರ
ಆರಮಂದಿ || ತಂದಾನ ||

ಬಂಕದಾಗ ಹಾಕ್ಯಂಡ್ರು
ಕಣ್ಣು ಮುಚ್ತಾರ ಕಣ್ಣು ತೆರಿತಾರ
ಕಣ್ಣು ಮುಚ್ತಾರ ಕಣ್ಣು ತೆರಿತಾರ
ಈಗ್ಲೇ ನಾವು ಹುಡುಗ್ರಿಗ ಎಬ್ಬಿಸಬಾರದು
ತಂಗಿ ಊರು ಬಿಟ್ಟು ಹೋಗ್ಬೇಕು
ಅಂದ್ರೆ ಮಲ್ಲಿ ಹೂವಂತ ಜನ್ಮ ಅಪ್ಪ
ಇನ್ನ ಅವರ ಸಿರಿದೇವಿ ಚಿಕ್ಹೆಂಡ್ತಿ ಅಂದ್ರೆ
ಸೀಟಿಕ್ಕಿದ್ರೆ ರಕ್ತ ಹಿಂದೇಲೆ ಬರ್ತೈತಿ
ಆಗಿನ್ನ ಪಾದಕ್ಕ ಬಿದ್ದು ಬಿಟ್ಳು
ಗಂಡನ ಪಾದ ಹಿಡ್ಕಂಬೊತ್ತಿಗೆ
ಯಂಥಾ ಕಠಿಣ ಜೀವ ಇರಬಹುದು
ಒಂದೇ ಗಂಗಾಳದಾಗ ಊಟಮಾಡಿದೋರು
ಆತ್ಗೆ ತಲೆ ಹೊಯ್ಯಿದರೆ
ಈ ತಾಯಿಗೆ ತಲೆ ನೆಯ್ಯಿದಂಗ
ಈ ಯಮ್ಮಗ ಹೊಟ್ಟೆ ನೊಯಿದ್ರೆ
ಆತಗ ಹೊಟ್ಟೆ ನೆಯ್ಯಿದಾಂಗ
ಅಷ್ಟು ಜೀವದಲ್ಲಿ ಇರೋರನ್ನ
ಈ ಮಕ್ಳ ಕಡೆಗೆ ನೋಡಿ
ಈಗ ಬಾಕ್ಲ ಮುಚ್ಚಿ
ಅಡ್ಡ ಗಡಿಮಾನ ಹಾಕಿ
ಈಗಿನ್ನ ಎಡಗೈಲಿ ತಾಯಿನ ಹಿಡ್ಕಂಡು
ಬಲಗೈಲಿ ಬಾರಕೋಲು ಕೂಟ

ಯಮ್ಮಾ ಚೊಳ್ಳು ಚೊಳ್ಳುನಂತ ಬಡೀತಾನಮ್ಮ
ಯಮ್ಮಾ ತೊಗಲು ವಡಿತದೆ ಚರ್ಮ ಸುಲಿತದಮ್ಮಾs
ಪಟ್ಪಟ್ಪಟ್ಅಂತ || ತಂದಾನ ||

ಮೂರೇಟಿಗೆ ಮೂರು ತುಂಡಾಯ್ತು ಬಾರಕೋಲು
ಪಾದಕ ಬಿದ್ದ ತಾಯಿನ

ಎಡಗಾಲಲ್ಲಿ ಒದ್ದವನೂ
ಬಲಗೈಲಿ ಗುದ್ದೌನು
s ಮಕ್ಳ ಜಲ್ಮ ಕಳೆದವಳೆ ನಿನ್ನ ಜೀವ ಕಳೇತಿನಿ ಉಳಿಸದಿಲ್ಲಾ
ಕಳಿತಿನಿ ನಿನ್ನ || ತಂದಾನ ||

ಹೊರಾಗಿದ್ದೋರು ಹೆಣ್ಣು ಗಂಡು
ಬಾಕ್ಲ ಮುಂದ್ಕ ದಬ್ಬುತಾರ ಹೋಗುವಲ್ದು
ಈಗ ಮುಂದಕ ಎಳಕಂಬತಾರ ಬರುವಲ್ದು

ಯಪ್ಪಾ ನಾವು ಹ್ಯಾಂಗ ಮಾಡಾನಮ್ಮ
ಆಯಿತಮ್ಮಾ ನಿನ ಜೀವಾ ಹೋಯಿತಮ್ಮಾ
ತಾಯೋರು ಬಂದು ಇನ್ನು ನೋಡ್ದರಮ್ಮಾ
ಉಸಿರಾಡವಲ್ದು ಜಲ್ಮಗಾಗಿ ನೀ
ಕೆಳಗ ಬಿದ್ವಳೆ ಜಲ್ಮ ಹೋಯಿತಮ್ಮಾ
ಸಿರಿದೇವಮ್ಮ ತಾಯಿ || ತಂದಾನ ||