ಆಗ ಇನ್ನ ಕೆಳಗೆ ಬಿದ್ಳು
ಉಸಿರಾಡುವಲ್ದು ಗಾಳಿ ಬೀಸುವಲ್ದು
ಆಗ ಜೀವ ಹೋಗಿ ಬಿಡ್ತು
ಮಿಸುಕಾಡಲಾರದಂಗ ಬಿದ್ದು ಬಿಟ್ಳು
ಆಗ ಮಿಸುಕಾಡಲಾರದಂಗ ಬಿದ್ದು ಮ್ಯಾಲೆ
ಬಾಕ್ಲ ತೆರೆಕಂಡು ಹೊರಾಗ ಬಂದ
ಆಗ ಬಂಕದಾಗ ಕುರ್ಚಿಮ್ಯಾಲ ಕುಂತಾನ
ದೊಡ್ಡೋರು ಚಿಕ್ಕೋರು ನೋಡಿದ್ರು
ಏನ್ರೀ ಬುದ್ದಿ ಐತಾ ಬುದ್ದಿ ಇಲ್ಲಾ
ಊರಿಗೇ ನ್ಯಾಯ ಹೇಳವನು
ಊರಿಗೇ ರಾಜ ಇನ್ನಗೌಡಾಗಿ
ರಾಜತನ ಮಾಡೋನು
ಹೆರ ಮಕ್ಕಳನು ಮಾಡಿಕ್ಯಂಡು ಬಂದು
ಜೀವ ಕಳೆದ್ರೆ ಒಳ್ಳೇದೆನ್ರಿ
ಇವತ್ತು ನೀನು ಕೊಲ್ಲಿದ್ರೆ
ಊರಿಗೇ ಭಯಿಲ್ಲದಂಗಾಯ್ತು
ಹದ್ರಿಕಿ ಇಲ್ಲದಂಗಾತು ಗಣಸುರಿಗೆ
ಹೇ ಈಗ ಕಾಂಭೋಜ ರಾಜ ಗೊಲ್ರವನು
ಹ್ಯಾಂಗ ಒದ್ದುಬಿಟ್ಟ
ಊರಿಗೇ ನ್ಯಾಯ ಹೇಳೋನು
ಹೆಣ್ತಿನ ಕೊಲ್ಲಿದ
ಏನನ್ನ ಕೇಸು ನಡೀತಾ
ಇದೋ ನೀನು ಎದ್ರು ಆಡಿಬಿಟ್ರೆ
ಜಾಡ್ಸಿ ಎದಿಗೆ ಒದ್ದುಬಿಡ್ತೀನಿ
ಬಕ್‌ನಾ ರಕ್ತ ತಿರಿವಿಕೊಂಡು ಸತ್ತೋತಿ
ಅಂತ ಗಣಸರಿಗೆ ಭಯವಿಲ್ಲದಂಗ
ಮಾಡಿಬಿಟ್ಟೇ ನೀನು
ಆವಾಗ ಈ ಮಕ್ಕಳ ಜಲ್ಮಕ್ಕೇ
ಈ ದೊಡ್ಡ ಜೀವ ಕೊಲ್ಲಿ ಬಿಟ್ಟಿ ನೀ
ಏನ್ರಿ ಅವ್ರು ತಾಯಿ ತಂದೆ ಇದ್ರೆ
ಎಷ್ಟು ಬಾಯಿ ಬಡಿಕೋಬೇಕು
ಆಕಿ ಹಿಂದೆ ಮುಂದೆ ಹುಟ್ಟಿದ
ಅಣ್ನೋರು ತಮ್ಮನೋರು ಇದ್ರೆ
ನಿನ್‌ ಜೀವ ಉಳಿತ್ತಿತ್ತೇನ್ರಿ
ಈಗ ಸರಿ ಅಣ್ಣ ತಮ್ಮಾದ್ರೆ
ಒಂದೇಟು ಬಡಿಕಂಡ್ರೆ
ತಿರುಗ ತಿರುಗ ಬಡಿಕ್ಯಂತ್ತಾರ್ರೀ
ಹೆಣಸ್ರನು ಬಡಿಯೋದು ಒಂದೇ
ನಾಯಿನ್ನ ಬಡಿಯೋದು ಒಂದೇ
ತಿರುಗ ಬಡ್ಕೊಂತಾರೇನ್ರಿ ಗಣ್ಸರನ್ನ
ಇದೋ ನಿನ್ನ ಬರದು ಇನ್ನಾವ್ತರ ಗವರ್‌ಮೆಂಟಿಗೆ
ಇನ್ನವರ್ತಾವಾಗಿ ಹಿಡಿದುಕೊಡ್ತಿವಿ
ಅಂದ್ರೆ ಪಳಪಳ ಕಣ್ಣೀರು ಉದುರುಸ್ತಾನ
ಅಂದ್ರೆ ತಾಯಿನ್ನ ಒಬ್ರಿಗ ಪಾಪ ಮಾಡಿಲ್ಲಾ
ಒಬ್ರೀಗೆ ಕರ್ಮ ಮಾಡಿಲ್ಲ
ಗಾಳಿ ಇನ್ನಾವರ ಬಿಸೋಹೊತ್ತಿಗೆ
ಕಿವ್ಯಾಗ ಮುಗಿನ್ಯಾಗ ಗಾಳಿ ಹೋದ ಮ್ಯಾಲೆ

ಎಡಕ್ಕಿಲ್ಲಿದ ಬಲಕ್ಕ ಎದ್ದಾಳಮ್ಮ
ಎರಡು ಕೈಯಿನೇ ತಾಯಿ ಜೋಡಿಸ್ಯಾಳಮ್ಮಾ
ಸಿರಿದೇವಮ್ಮಾ ತಾಯೀ || ತಂದಾನ ||

ಈ ಕಾಲದವರಾದ್ರೆ ಹಂಗೆ ಅಡ್ಡ ಬೀಳ್ತಿದ್ರು
ತಾಯಿ ಗಾಳಿಲಿದ್ದ
ಜೀವ ಇನ್ನ ತಿರುವಿದ ಮ್ಯಾಲೆ
ಎಡಕ್ಕಲ್ಲಿದ್ದ ಬಲಕ್ಕೆದ್ದು
ಎರ್ಡು ಕೈ ಜೋಡ್ಸಿದ್ಳು
ಯಪ್ಪಾ ಹೆಣ್ಣು ಗಂಡು ಜೀವಕ್ಕೆ
ಈಗ ಜೀವದ ಗಂಡ ಬಡೀಲಾರ್ದು
ಯಾರ ಬಡಿಬೇಕು
ಈಗಿನ ತಾವಾಗಿ ಈ ಕಾಲಕ್ಕೆ ಒದಿತಾನ
ನಾಳೆ ಇನ್ನಾ ನನಗೆ ಶರಣು ಮಾಡ್ತಾನ
ನಮ್ಮ ಜೀವಕ್ಕೆ ನಮಗೆ ತಪ್ಪಂಗಿಲ್ಲ
ಈಗ ನೀವು ಏನು ಅನ್ನಬ್ಯಾಡ್ರಿ ಅಂಬೊತ್ತಿಗೆ
ಆ ಮಾತಿಗೇನಂತಾನ ಜೀವದ ಗಂಡ
ಏ ಬಾಯಿ ಮುಚ್ಚಿದ್ರೆ ಒಳ್ಳೇದು
ಇಲ್ಲದ್ರೆ ಬಾಯಾಗಿನ ಹಲ್ಲೆಲ್ಲ ಕಳೀತಾವ
ಗಕ್‌ನೆ ಬಾಯಿ ಮುಚ್ಚಿಬಿಟ್ಳು
ಏನ್ರಪ್ಪಾ ದೊಡ್ಡೋರು ಚಿಕ್ಕೋರು
ನೀವೆಲ್ಲ ಹೆಂಡ್ರು ಕೊಲ್ಲಿಕಂಬಾಕ ಮಾಡಿಕ್ಯಂಡ್ರ
ಉಳಿಸಿಕೊಂಬಾಕ ಮಾಡಿಕ್ಯಂಡಿರಿ
ಏನ್ರಿ ರಾಜ್ಯವಾಳಾಕ ಮಾಡಿಕ್ಯಂಡೀವಿ ನಾವು
ಕಳಕಂಬಾಕ ಅಲ್ಲ
ಅಂದ್ರೆ ಹೆಣಸರು ಗುಣ ನೀರಿನ ನೆಲಿ
ಯಾರಗನ್ನ ಕಂಡು ಹಿಡಿದಾರೇನ್ರಿ
ಗಣಸರು ಅಂದ
ಏ ನನ್ನ ಹೇಣ್ತಿ ಹತ್ತು ಮಂದಿ ಹಡ್ದಾಳ
ಆಗ ನನ್ನ ಹೆಣ್ತಿ ಗುಣ ನನಗೆ ತಿಳಿದಿಲ್ಲಪ್ಪಾ
ಅರ್ಥ ಆಗಲಿಲ್ಲ
ನೋಡ್ರೀ ಹೆಣಸರು ಏನ್ ಉಪಾಯ ಮಾಡ್ತಾರಂದ್ರೆ
ಒಂದೇಟು ಬಡದ್ರೆ
ಎಲ್ಲೆಲ್ಲಿ ಜೀವೆಲ್ಲ ನರಗಳು ಬಿಗಿಹಿಡ್ಕಂಡು
ಬೆಕ್ಕು ಮಲಗಿದಂಗ ಮಲಗ್ತಾವ
ಮಿಸುಕಾಡಲಾರದಂಗ
ಏನೂಂದ್ರೆ ಎಲ್ಲಾರು ಉಗುಳ್ತಾರ
ಗಂಡಗೆ ಗ್ಯಾನ ಬರ್ತೈತೆ
ಗಂಡ ಎದೆ ಬಿಳ್ತಾನ
ಹ್ಯಾಂಗಂದ್ರೇ
ನನ್ಗೇಣ್ತಿ ಕಳಕೊಂಡಿದ್ನಲ್ಲ
ಒಂದೇಟಿಗೆ ಜೀವ ಹೋಗಿತ್ತಲ್ಲ
ಇನ್ನೊಂದು ಸರ್ತಿ ಹೆಣ್ಣು ಮಕ್ಕಳನ್ನ ಬಡೀಬಾರ್ದು ಅಂತ
ಗಣಮಕ್ಕಳು ಹೆದುರಿಕ್ಯಂಬುತಾರ
ಅಂತ ಹೆಣಸರು ಹಂಗ ಉಪಾಯದಲ್ಲಿ ಮಾಡ್ಯಾರ
ಕೊಲ್ಲುಕಂಬಾಕ ಹ್ಯಾಂಗ ಮಾಡಿಕ್ಯಂಬುತ್ತಿದ್ದಾರ್ರೀ
ಅಂಬೊತ್ತಿಗೆ ನಮಗೇನು ಗೊತ್ರೀ
ಇಲ್ರೀ ಅಳೋನಿಗೆ ಅತ್ತು ಮಂದಿ
ಅನ್ನ ಕಮ್ಮಿ ಆಗೇತ್ಯಾ
ಉಟ್ಟಾದು ಬಟ್ಟೆ ಇಲ್ವಾ
ಏನ್ರಿ
ಅಕ್ಕ ತಂಗ್ಯೋರು ಸೇರಿಕೆ ಬರಲಾರದ
ಇನ್ನ ಮದ್ದಿಟ್ಟು ಕೊಲ್ಲಿದ ಹೆಣ್ಣುಮಕ್ಳು
ಲೋಕದಾಗ ಈ ಕಾಲಾಗಲಿ ಆ ಕಾಲಾಗಲಿ
ಏನು ಮಾಡಬೇಕಾಗಿತ್ತು ಆ ಹೆಣುಸೂರ್ನ
ಅಂತ ಯಜಮಾನ್ರಿಗ ಕೇಳ್ತಾನ
ನೋಡಪ್ಪಾ ಅಕ್ಕತಂಗೇರ ಸೇರಿಕೆ ಬರ್ಲಾರ್ದೋರು
ಮದ್ದಿಟ್ಟು ಕೊಲ್ಲಿದೋರ್ನು ಏನ್‌ ಮಾಡಬೇಕಂದ್ರೆ
ಕೈ ಕಾಲ ಕಟ್ಟಿ ಸುಣ್ಣದ ಭಟ್ಟ್ಯಾಗ ಹಾಕ್ಬೇಕು
ಅಕ್ಕನವರ ಮ್ಯಾಲೆ ಹ್ಯಾಂಗ ಕುದಿತಾರೋ
ಹಂಗೆ ಸುಣ್ಣದ ಬಟ್ಟ್ಯಾಗ ಕುದ್ದು
ಹಾಳಾಗಿ ಹೋತಾರ
ಅದೂ ಒಂದು
ತಾಳಿಕಟ್ಟಿದ ಗಂಡನ್ನ
ಕುರುಡರಾಗಲಿ ಕುಂಟೋರಾಗಲಿ
ದೊಡ್ಡೋರು ಕಟ್ಟಿದ್ದ ಗಂಡನ್ನ
ಬೇಸಿಲ್ಲಂತ ಮದ್ದಿಟ್ಟು ಕೊಲ್ಲಿ
ಇನ್ನೊಬ್ಬನ್ಹಿಂದೆ ಹೋಗೋ ಹೆಣುಸುನ್ನ
ಏನ್ಮಾಡಬೇಕಂತ ಕೇಳಿದ
ಕುಂಟಾಗಲಿ ಕುರ್ಡಾಗಲಿ ತಲೆಮ್ಯಾಲೆ ನೆಳ್ಳು
ಈಗಿನ್ನವರ ಈ ಗಂಡ
ಬೀಸಿಲ್ಲಂತ ಮದ್ದಿಟ್ಟು ಕೊಲ್ಲಿ
ಇನ್ನೊಬ್ಬನ್ಹಿಂದೆ ಹೋಗೋ ಹೆಣಸ್ನು
ಏನ್ಮಾಡಬೇಕಂದ್ರೆ
ತಲೆಯೊಡ್ಯೊ ಗಿಡಕೆಳಗ್ಹೋಗಿ
ಆಗ ಅವಳ ತಲೆ ಕಡಿಬೇಕು
ತಲೆಮ್ಯಾಲೆ ನೆರಳಿದಂಗ
ಅವಳ ಕಡಿಬೇಕು
ಅವಳ ಪೀಡೆ ಅಲ್ಲಿಗೋಯ್ತು
ಸರೆ
ಹೊಟ್ಟ್ಯಾಗ ಹುಟ್ಟಿದ ಮಕ್ಕಳ್ನು
ಮದ್ದಿಟ್ಟು ಕೊಲ್ಲಿದ
ಹೆಣ್ಣುಮಕ್ಕಳಿಗೆ ಏನ್ಮಾಡಬೇಕು
ಏನ್ರೀ
ಹೊಟ್ಟ್ಯಾಗ್ಹುಟ್ಟಿದ ಮಕ್ಕಳ್ಗಿ ಮದ್ದು
ಯಾ ಲೋಕ ಹೆಣ್ಮಗಳಿಡ್ತಾಳ್ರೀ
ಅಲ್ಲಪ್ಪ ಆಗ ಶಿವನೇಣ್ತಿಗೆ ಮಕ್ಕಳು ಹುಟ್ದ್ರು
ಹೆಣ್ತಿ ಸತ್ತುಹೋದ್ಳು
ಇನ್ನೊಬ್ಯಾಕಿನ್ನ ಮಾಡಿಕ್ಯಂಡ್ರೆ
ನನ್ನಮಕ್ಳಂತ ಮದ್ದು ಇಡಂಗಿಲ್ಲ
ನನ್ನ ಮಕ್ಕಳು ಅಲ್ಲಾಂತ ಇಡ್ತಾಳ
ಮದ್ದಿಟ್ಟು ಕೊಲ್ಲಿದ ಹೆಣ್ಣು ಮಕ್ಕಳಿಗೆ
ಏನು ಮಾಡಬೇಕಂತ ಕೇಳಿದೆ
ಅವರನ್ನು ಬಡೀಬಾರ್ದು ಬೈಯಿಬಾರ್ದು
ಕೆಬ್ಬಣ ವರುಸ
ವರುಸಕ್ಕೆ ಕತ್ರಿ ಕುಡುಗೋಲಿರಬೇಕು
ತಲೆ ಅಡೇಲಿ
ಎಡಕ್ಕ ಬಲಕ್ಕ ದಬ್ಬಣ ಸೂಜ್ನ
ಇರಬೇಕು ವರುಸಕ್ಕೆ
ಒಂದು ಪುಟ್ಟಿ ಡಬ್ಬೆಗಳ ಮುಳ್ಳು
ಒಂದು ಪುಟ್ಟಿ ನೆಗ್ಗಿನಿ ಮುಳ್ಳು
ನೆಲಮನಿ ಗರಡಿಯೊಳಗೆ
ಸುಡುಗಾಡು ರುದ್ರ ಭೂಮಿದಾಗ
ಒಡ್ಡ್ರುಕೂಟ ಭೂಂಯಾರ ತೋಡ್ಸಬೇಕು
ಕಡ್ಡಿಬಾಕ್ಲಿಗ
ವರುಸ ಹೊತ್ತುಕ್ಕೊಂಡು
ಹೋಗಿ ಹಾಕಬೇಕು
ಹತ್ತೀನ ದಿಂಡಿನಮ್ಯಾಲೆ ನೆಗ್ಗಿನಿ ಮುಳ್ಳು
ಡಬ್ಬಿಗಳ್ನು ಮುಳ್ಳು ಹಾಕಬೇಕು
ಈಗ ವರುಸಿನ ಮ್ಯಾಲೆ
ಮುಳ್ಳಿನ ಮ್ಯಾಲೆ ಮಲಗಿಸಬೇಕು
ಕತ್ರಿ ಕುಡುಗೋಲು ತಲೆ ಅಡೇಲಿಡಬೇಕು
ಎಡಕ್ಕ ಬಲಕ್ಕ ಹೊಳ್ಳಲಾರದಂಗ
ಆಗ ಇನ್ನ ಸೂಜಿ ಡಬ್ಬಣ ಚುಚ್ಚಬೇಕು
ಎದಿಮ್ಯಾಲೆ ಬಂಡಿ ಹೋರಿಸಬೇಕು
ತಲಿಗೆ ಬಾರೆಣ್ಣು ಬೇಲಿ ಬಡೀಬೇಕು
ಕೈಬೇಡಿ ಕಾಲಿಗೆ ಸರಪಣ ಹಾಕಬೇಕು
ಈ ವರುಷ ಮ್ಯಾಲೆ ಹೆಂಗಂದ್ರೆ
ಈ ಮಕ್ಕಳಿಗೆ ಮದ್ದಿಟ್ಟ್ರೆ
ಹೆಂಗ ಒದ್ದಾಡಿ ಸತ್ತರೋ

ಹಾಂಗ ಒದ್ದಾಡಿ ಒದ್ದ್ಯಾಡಿ ಜಲ್ಮ ಕಳೀತಾರಮ್ಮಾ
ಅವ್ರು ಒದ್ದ್ಯಾಡಿ ಒದ್ದ್ಯಾಡಿ ಜೀವ ಬಿಡ್ತಾರಮ್ಮಾ || ತಂದಾನ ||

ಒದ್ದ್ಯಾಡಿ ಒದ್ದ್ಯಾಡಿ ಜೀವ ಬಿಡ್ತಾರ
ಅವಳ ಪೀಡ ಅಲ್ಲಿಗೋತೈತಿ
ಒಡಿಬಾರ್ದ ಬೈಬಾರದು
ಅಷ್ಟೇ ಅಲ್ರೀ
ಏ ಒಡ್ರ ಬರ್ರಿ ಅಂದ
ಏನ್ರಿ ಈಗ ಸುಡುಗಾಡು ರುದ್ರಭೂಮಿದಾಗ
ಕಡ್ಡಿಬಕ್ಲ ಮನಿ
ಈಗ ಭೂಮ್ಯಾಗ ಭೂಂಯಾನ ಮಾಡ್ಬೇಕ ಅಂದ
ಸರೆಬಿಡ್ರಿ
ಕಂಬಾರ ಮನಿಗ ಬಂದಾ
ಹೇ ಕಂಬಾರ ನೀ ಇನ್ನ ಕೆಬ್ಬಿಣ್ದ ವರುಸ ಮಾಡ್ಬೇಕು
ಕತ್ರಿ ಕುಡುಗೋಲು
ಎಡಕ್ಕ ಬಲಕ್ಕ ದಬ್ಬಣ ಸೂಜ್ನಿಂತವೋ ಇರಬೇಕು
ಏದಕ್ರಿ ಬೇಕಾಗೈತಿ ಅಂದ
ಮಾಡ್ತೀವಿ ಬಿಡ್ರಿ ಅಂದ

ಅವರು ಹೋಗಿ ಇನ್ನ ಮಾಡುತಾರ
ಆಗ ಒಂದೆ ಜಲ್ಮದಾಗ ತಾಯಿ
ಜೀವಕ್ಕಾಗಿ ಇನ್ನ ತಾಯಿಗೆ ಸಿರಿದೇವಿಗೆ || ತಂದಾನ ||

ಸಿರಿದೇವಮ್ಮಗ ಮಾಡಿಬಿಟ್ರು
ಆಗ ತುಂಬಿದ ಕೊಡಪಾನ ನೀರ್ಹಾಕಿದ್ರು
ವರುಸ ಹೊತ್ತುಕ್ಕೊಂಡು ಹೋಗಿ
ನೆಲಮನಿ ಗರಡಿಯೊಳಗಿಟ್ರು
ಹತ್ತಿನ ದಿಂಡ್‌ಮ್ಯಾಲೆ
ನೆಗ್ಗಿನ ಮುಳ್ಳು ಡಬ್‌ಗುಳ್ಳು ಮುಳ್ಳಾಕಿದ್ರು
ಆಗ ಇನ್ನ ಸೂಸ್ಕ ಹಾಕಿ
ಆ ತಾಯಿಗಿ ಉಡ್ಯಕ್ಕಿ ಹಾಕಿ
ಈಗ ಏನಂತಾರ

ಯಮ್ಮಾ ಇನ್ನ ಮದ್ದಿಟ್ಟವಳು ಹೋಗುತಾಳ
ಯಪ್ಪಾ ಕೊಲ್ಲಿದವಳುನ ಸುಡುಗಾಡಿಗೆ ಒಯಿತಾರ
ಸಿರಿದೇವಿ ಇನ್ನ ಜೀವದಲ್ಲಿ ಹೋಗುತಾಳ || ತಂದಾನ ||

ಆಹಾ ಸಿರಿದೇವಿ ಎರಡು ಕೈ ಜೋಡ್ಸಿ
ಎಡಗಣ್ಣೀರು ಎಡಕ್ಕೆ ಬಲಗಣ್ಣೀರು ಬಲಕ್ಕೆ
ಯಮ್ಮಾ ಹೆಣ್ಣು ಗಂಡುದವರೇ
ಚಾಂಪುರ ಪಟ್ಣದಾಗಿರೋರೆ
ನೀವು ಪುಣ್ಯ ಮಾಡಿದವರು
ಲೋಕ ನೋಡ್ತಿರಿ
ನಾನು ಪಾಪ ಮಾಡಿದವಳು
ಜೀವದಲ್ಲಿ ಸುಡುಗಾಡು ಸೇರ್ತಿನಿ

ಯಮ್ಮಾ ಹೋತೀನಮ್ಮಾ ನಾನು ಲೋಕ ಶರಣು
ಯಮ್ಮಾ ಹೋಗಿ ಬಾರೇ ತಾಯಿ ಶರಣು ನಿನಗೆ || ತಂದಾನ ||

ಅಗಸಿ ತಟಾದು
ಊರಿಗೆ ಇನ್ನವರ್ತಾವಾಗಿ ಮೂರುಹೊಲಪೆಟ್ಟು
ಸುಡುಗಾಡು ರುದ್ರಭೂಮಿಗೆ ತಂದ್ರು
ತಂದು ನೆಲಮನಿ ಗರಡಿಯೊಳಗೆ
ಕರಕಂಡು ಬಂದ್ರು
ವರುಸಕಡಿಗೆ ನೋಡಿ

ಎದೆಂಬೋದು ತಣ್ಣಗಾಗೈತೋ
ಜಲ್ಮದಲ್ಲೇ ಸತ್ತು ಹೋತಿನಿ ಜೀವದಲ್ಲಿ ನಾನು ಉಳಿಯೋದಿಲ್ಲನೆ
ಇಲ್ಲಿಗ ಜಲ್ಮಗ ವದ್ದಾಡಾಕಿಡುತಾನಾ
ನನ್ನ ಜೀವದ ಗಂಡ || ತಂದಾನ ||

ಜೀವದವನು ನನ್ನ ವದ್ದಾಟಕ್ಕಿಡುತಾನ
ಅಂತ ಎರ್ಡ ಪಾದ ಹಿಡಕಂಡ್ಳು
ಏನ್ರಿ ಈಗ ನಿನ್ನ ಪಾದಜ್ಞ
ನಾನು ವಿಷವಿಟ್ಟಿಲ್ಲ
ವಿಷ ಇಡಂಗಿದ್ರೆ
ನಾನ ಜೀವ ಕೊಲ್ಲಂಗಿದ್ರೆ
ಗಡಗ್ನಂಥ ನನ್ನ ತಲೆ ಕತ್ತರ್ಸಿ ಬಿಡು
ನನ್ನ ಜೀವದಲ್ಲಿ ಕಷ್ಟ ಕೊಡಬ್ಯಾಡ್ರಿ
ಅಂತ ಪಾದವಿಡಕಂಡ್ರೆ
ಈಗ ಕೊಲ್ಲಗನ್ನ ಕನಕರ ಹುಟ್ಟುತ್ತೈತೆ
ಗಂಡಗ ಕನಕರ ಕಠಿಣ ಜೀವ
ಆ ಪಾದ ವಿಡಕಂಡಿದ್ದ ತಾಯಿನ್ನ
ಕೈಹಿಡಿದು ಮ್ಯಾಕೆಬ್ಬಿಸಿದ

ಎರಡು ಕೈವಿಡ್ಕಂಡು ಕೈಗ ಸರಪಣಿ ಹಾಕ್ಯಾನ
ಹೇ ಕಾಲು ಸರಪಣಿ ಹಾಕ್ಯಾನ
ವರುಸ ಮ್ಯಾಲೆ ಮಲಗಿಸಿ ಬಿಟ್ಟಾನ || ತಂದಾನ ||

ಪರಮಾತ್ಮ ಬಾಯಿ ಬಡಕಾಂಬಾಕಿಲ್ಲ
ನೆಗ್ಗಿನ ಮುಳ್ಳು
ಡಬ್ಬಿಗಳ ಮುಳ್‌ಗಳಮ್ಯಾಲೆ ಮಲಗ್ಸಿ ಬಿಟ್ಟ
ಮಲಗ್ಸಿ
ಆ ತಾಯಿ ಇನ್ನ
ಯಪ್ಪಾ ಸತ್ತೋತ್ತಿನಿ ಅಂತಾಳ
ಇಗೋ ಆ ತಾಯಿಗೆ
ತಲೆ ಅಡೇಲಿ ಕತ್ರಿ ಕುಡುಗೋಲಿಟ್ಟ
ಬಾರೆ ಹಣ್ಣ ಬೇಲಿಟ್ಟ
ಎಡಕ್ಕ ಬಲಕ್ಕ ದಬ್ಬಣ ಸೂಜಿ
ಎಡಕ್ಕ ಬಲಕ್ಕ ದಬ್ಬಣ ಸೂಜಿ
ಎಡಕ್ಕ ಬಲಕ್ಕ ಹೊಳ್ಳಲಾರದಂಗ
ಎದೆಮ್ಯಾಲೆ ಎರ್ಡು ಬೊಗಸೆ ಅಡ್ಡಾಲ ಬಂಡೆ
ಮ್ಯಾಕ ಎದ್ದೇಳಲಾರದಾಂಗ ನೆಟ್ಟಗ
ಮಿಸ್‌ಕಾಡಿದ್ರೆ ಕತ್ತರ್ಸಿಕೊಂಡು ಹೋತೈತಿ
ಈಗ ಆ ತಾಯಿಗೆ ಏನ್ಮಾಡಿದ
ಈಗನ್ನ ಅಚ್ಚೇರು ಬಂಗಾರ
ಮೈ ಮ್ಯಾಲಿರೋದು
ಎಲ್ಲಾ ಕೊಳ್ಳುಪದಕಗಳೆಲ್ಲಾ ತಗಂಡು
ತಾಳಿ ಹಿಡ್ಕಂಡು ಏನಂತ ಕಣ್ಣೀರುದುಸ್ತಾನ

ಆಯಿತಲೇ ಇಲ್ಲಿಗೆ ಜಲ್ಮಕ್ಕೆ
ನಿನಗೆ ನನಗೆ ಕಡೆವಾಯ್ತು ಲೋಕ
ನಿನ್ನ ನಾನು ನೋಡಂಗಿಲ್ಲ ನನ್ನ ನೀನು ನೋಡಂಗಿಲ್ಲ
ಇಲ್ಲಿಗಾಗಿ ಜಲ್ಮಕ್ಕೆ ಕಡೇಲೆ ಜೀವಕ್ಕೆ ನಮಗೆ || ತಂದಾನ ||

ಅಂದ್ರೆ ಪಳಪಳ ಅಂತ ಕಣ್ಣೀರು ಉದುರಿಸಿ
ಈಗ ನೀನು ಮದ್ದಿಟ್ಟಿಲ್ಲ ಅಂತ ಲೋಕ ನುಡಿತಿ
ಈಗ ಮದ್ದಿಟ್ಟಾಳಂತ ನಾನು ಲೋಕ ಅಂತೀನಿ
ಆರು ಮಂದಿ ನಿಮ್ಮ ಅಕ್ಕನೋರು ಮಾತ ಕೇಳ್ಕೊಂಡು
ಅನ್ಯಾಯದಲ್ಲಿ ನಿನ್ನ ವರುಸಮ್ಯಾಲೆ ಕಷ್ಟ ಕೊಟ್ಟಿದ್ರೆ
ನಿನ್ಗ ಒಂದು ಭಾಗ ಕಷ್ಟ ಇದ್ರೆ
ನಿನ್ನ ಕಷ್ಟೆಲ್ಲಾ ನನಗೆ ಬರ್ಲಿ
ಈಗ ಎರ್ಡು ಭಾಗ ನನ್ಗೆ ದುಃಖ ಹುಟ್ಲಿ
ಕೇಳವೇ ಅನ್ಯಾಯದಲ್ಲಿ ನಿನ್ನ ಮಾಡಿದ್ರೆ
ಈಗ ಕೆಳಗಿರೋ ಭೂದೇವತಿ
ಮ್ಯಾಲಿರೋ ಪರಮಾತ್ಮ
ಕಣ್ಣಿಲಿ ನೋಡ್ಲಿ ನಮ್ಮನ್ನ
ಅಂತ ಆಗ ಕೊಳ್ಳಾಗ ತಾಳಿ ಬಿಟ್ಟು
ಈಗ ಅಡ್ಡ ಗಡಿಮಾನ ಹಾಕಿ
ಇನ್ನ ಹೊರಾಗ ಬಂದು
ಕಡ್ಡಿಬೀಗ ಹಾಕಿ
ಆಗ ಬಾಕ್ಲಿಗೆ ಶರಣು ಮಾಡಿ

ಚಾಂಪುರಿ ಪಟ್ಟಣಕ್ಕೆ ಆಗ ಹೊಂಟು ಬರುತಾನ || ತಂದಾನ ||

ಚಾಂಪುರ ಪಟ್ಟಣಕ್ಕೆ ಬರುತಾನಪ್ಪ
ಇವರು ಆರು ಮಂದಿ ನೋಡ್ರು
ಯಮ್ಮಾ ತಂಗಿ
ಇನ್ನ ಊರು ಅಗಸಿ ಹೊರಗ ಹೋಗಿಬಿಟ್ಳು
ಸುಡುಗಾಡಿಗೆ ಕರಕಂಡು ಹೋದ್ರು
ಯಮ್ಮಾ ನಮ್ಮ ಮಕ್ಕಳನ್ನ
ನಾವು ಉಳಿಸಿಕೊಬೇಕು
ಅಂತ ಏನ್ಮಾಡಿದ್ರು
ಹಳೇ ಹುಣಚಿ ಹರ್ಣಣು ಮಜ್ಜಿಗೆ ಕಲಿಸಿ
ಸೌಟೀಲೆ ಕುಡಿಸಿಬಿಟ್ರು
ಹೊಟ್ಟಾಗೆಲ್ಲಾ ಕಲಿಸಿಬಿಡ್ತು ಅಉಷುದ್ಧ
ಬಡಿ ಬಡಿ ಅಂತಾ ಇನ್ನವರ್ತಾ ತಿರುವಿಕ್ಯಂಡ್ರು
ಆಗ ಮಜ್ಜಿಗೆ ಅನ್ನ ಕಲ್ಸಿ ಕುಡುಸೋ ಹೊತ್ತಿಗೆ

ಹೊಟ್ಟಿ ತಣ್ಣಗಾಗೈತೋ ಹುಡುಗ್ರ ಎದ್ದಾಗಿ ಕುಂತಾರ || ತಂದಾನ ||

ಯಮ್ಮಾ ತಂಗಿ
ಒಳ್ಳೆ ಮಂತ್ರ ಕಲಿತಿದ್ದೀಯಮ್ಮಾ ನೀನು
ನಮ್ಮ ಮಕ್ಕಳು ನಮಗ ಉಳುಕಂಡ್ರಮ್ಮಾ
ಅಂದ್ರೆ ಆಗ ಇನ್ನವರ್ತ ಜೀವದವನು ಬಂದ
ಯಪ್ಪಾ ಸತ್ತೋದೆ
ಇಲ್ರೀ ನಿನ್ನ ಪಾದಕ್ಕೆ ಶರಣ್ರಿ
ನಾವು ಊರಾಗಿದ್ದ ತಾಯಿ
ಹುಟ್ಟಿದ ಮಾರ್ಯಮ್ಮ ನಿನಗ ಬ್ಯಾಟಿ ಕಡೀತಿವಿ
ಯಮ್ಮಾ ಊರಿಗ ಸುಂಕಲಮ್ಮ ನಿನಗ ಕುಂಭ ಹೋರ್ತೀವಿ
ಊರಿಗೆ ಮಕ್ಕಳು ಉಳಿಕಂಬಲಂತ ಕೇಳಿದ್ವಿ
ಏರೀ ನಾವು ಒಬ್ರಿಗಿ ಪಾಪ ಮಾಡಿಲ್ಲ ಕರ್ಮ ಮಾಡಿಲ್ಲ
ನಮ್ಮ ಮಕ್ಕಳು ನಾವು ಉಳುಕೊಂಡರೀ
ಈಗ ಹುಣಿಸೆಣ್ಣು ಮಜ್ಜಿಗೆ ಕಲ್ಸಿ ಕುಡಿಸಿದ್ರೆ
ಬಡಿ ಬಡಿ ಕಣ್ಣಿ ಕಣ್ಣಿ ರಕ್ತ ರಕ್ತ ತಿರುವಿಕ್ಯೇಂಡ್ರೀ
ಯಪ್ಪಾ ನೀವು ಹೋಗಿದ್ರೆ ನಾನು ಉಳಿತಿದ್ದಿಲ್ಲಾ
ಈಗ ಎದಿಗುದ್ದಿಕ್ಯಂಡು ಜಲ್ಮ ಕಳೀತಿದ್ದೆ
ನಿಮ್ಮ ಕಾಲ್ಗಾ ಎಷ್ಟು ಕಷ್ಟ ಪಡ್ದೆ ನಾನು
ಭೂಮಿಮ್ಯಾಲೆ
ಉರುಲು ಹಾಕ್ಯಂಡ ಜೀವ ಕೊಲ್ಲುತ್ತಿದೆ
ಅಂತಾ ಮಕ್ಕಳೆಲ್ಲಾರ್ನೂ ಮುದುಕೊಟ್ಟು
ಸ್ನಾನ ಮಾಡಿಕ್ಯಂಡು ಮಕ್ಕಳು ತಾವು
ಆಗ ಆರು ಮಂದಿ ಮಕ್ಕಳ್ನ ಕರ್ಕಂಡು ಊಟ ಮಾಡಿದ
ರಾಜ ಕಛೇರಿಗೆ ಹೋದ ಮಕ್ಕಳ್ನ ಬಿಟ್ಟು
ಇವ್ರು ಕಥೆ ಊರಾಗ ತಣ್ಣ ಗೈದಾರಪ್ಪ
ಗಂಡ ಬಂದ ಮಕ್ಕಳು ಬಂದ್ರು
ಕೊಲ್ಲೋ ಮಂತ್ರ ಕುತಂತ್ರ ಸಾಧಸ್ತು